16. ಮೂಲದ ದಾರಿಯಲ್ಲಿ...

ಪೆದಂಬು ನರಮಾನಿ (ಕಾದಂಬರಿ ಭಾಗ - 16)

ProfileImg
22 Feb '25
5 min read


image

'ಇನ್ನು ಸುಜ್ಜಾ ಶನಿವಾರ, ಆದಿತ್ಯವಾರ ಮಾತ್ರವಲ್ಲ ಎಲ್ಲಾ ದಿನ ರಾತ್ರಿ ಇಲ್ಲಿಗೇ ಬರಬೇಕು’


ದೋಗಣ್ಣ ಪೊಡಿಯನಿಗೆ ಆಜ್ಞಾಪಿಸಿದ.

‘ಹೆಂಡತಿ ಸತ್ತ ನಂತರ ಅವಳೇ ಎಲ್ಲಾ ಮಾಡುತ್ತಿದ್ದಳು... ಅಲ್ಲಿ ಚಾಕಣ... ಪಾತ್ರೆ....’ ಪೊಡಿಯ ನುಡಿದ.

‘ಬೆಳಗ್ಗಿನಿಂದ ಸಂಜೆಯವರೆಗೆ ಅದೆಲ್ಲಾ ಮಾಡಲಿ. ರಾತ್ರಿ ಮಾತ್ರ ಅವಳು ಇಲ್ಲಿರಬೇಕು. ಪುಂಡು ಪೋಕರಿಗಳಿಗೆ ಅವಳು ಬಲಿಯಾಗುವುದು ಬೇಡ’ ದೋಗಣ್ಣ ಹೇಳಿದ.

‘ಹೌದು. ಸಂಜೆ ನಿಮಗೆ ಸ್ವಯ ಇರುವುದಿಲ್ಲ. ಅವಳು ಏನು ಮಾಡುವುದು ಪಾಪ...’ ಮೊಗಂಟೆಯ ಹಲಗೆಯ ಮೇಲೆ ಕುಳಿತ ಪದ್ದು ನುಡಿದ.

ವಾರದ ಕೊನೆಯ ದಿನಗಳಲ್ಲಿ ಗಡಂಗಿನ ಬಳಿ ನಡೆಯುವ ಕೋಳಿಕಟ್ಟದಲ್ಲಿ ಪಡ್ಡೆ ಹುಡುಗರು ಗಡಂಗಿನ ಸುತ್ತ ಸುತ್ತುತ್ತಾ ಸುಜ್ಜಾಳ ಕಡೆ ಇಲ್ಲ ಸಲ್ಲದ ಎರಡು ಅರ್ಥದ ಅಡ್ಡ ಹೆಸರಿನ ‘ಮುಕ್ಕಾಲು’ ಎಸೆಯುತ್ತಿದ್ದನ್ನು ಕಂಡಿದ್ದ ಪದ್ದು ‘ಮಾವ ಮೊಡಿಯಾಮನಿಗೆ ಹೇಳಿ ಸುಜ್ಜಾ ಶನಿವಾರ ಮಧ್ಯಾಹ್ನ ಇಲ್ಲಿಗೆ ಬರಲಿ ಸೋಮವಾರ ಬೆಳಿಗ್ಗೆ ಎದ್ದು ಹೋದರಾಯಿತು. ಅಲ್ಲಿ ಕೆಲವು ಬೀದಿನಾಯಿಗಳ ಕಾಟ ಇದೆ’ ಎಂದಿದ್ದ.

ದೋಗಣ್ಣ ಅದರಂತೆ ಶನಿವಾರ, ಆದಿತ್ಯವಾರ ರಾತ್ರಿ ಸುಜ್ಜಾ ಮಂಜೊಟ್ಟಿ ಗುತ್ತಿನಲ್ಲೇ ಉಳಿವಂತೆ ಮಾಡಿದ್ದರು. ಮಧ್ಯಾಹ್ನ ಎಲ್ಲಾ ತಿಂಡಿ ತಯಾರು ಮಾಡಿ ಮುಗಿಸಿ ಗುತ್ತಿಗೆ ಹೋಗಿಬಿಡುತ್ತಿದ್ದಳು.

ಸುಜ್ಜಾ ಬೆಳಿಗ್ಗೆ ಬೇಗ ಎದ್ದು ಅದಾಗಲೇ ಭತ್ತ ಬೇಯಿಸಲು ಭತ್ತದ ಒಲೆಯ ಮುಂದೆ ಕುಳಿತ ಪದ್ದುವಿನ ಜತೆ ಗೂಡಿ ದೋಗಣ್ಣ ಕಾಡು ಗುಡ್ಡೆಯಿಂದ ಕಬೆಕೋಲಲ್ಲಿ ಎತ್ತಿ ಕೊಂಡು ತಂದು ರಾಶಿ ಹಾಕಿದ್ದ ಒಣಗಿದ ಕಾಟುಮುಳ್ಳುಗಳನ್ನು ಹಾಗೆಯೇ ಭತ್ತ ಬೇಯಿಸುವ ಒಲೆಗೆ ಸರಿಸಲು ಸಹಾಯ ಮಾಡುತ್ತಿದ್ದಳು.

ಸೊಂಟ ನೋವು, ಕೈನೋವು ಎಂದು ಬಾಧೆ ಪಡುತ್ತಿದ್ದ ದೋಗಣ್ಣನ ಹೆಂಡತಿ, ದೇವಕಿಯನ್ನು ಬದಿಗೆ ನಿಲ್ಲಲು ಹೇಳಿ  ಮಣ್ಣಿನ ಗುಡಾಣದಲ್ಲಿ ನೆನೆಸಲು ಹಾಕಿದ ಭತ್ತವನ್ನು ಬುಟ್ಟಿಯಲ್ಲಿ ಎತ್ತಿ ಭತ್ತದ ಹಂಡೆ ತುಂಬಿಸುತ್ತಿದ್ದಳು. ಬೇಯಿಸಿದ ಬತ್ತವನ್ನು ತೋಡಿ ಪುಡಾಯಿಗೆ ಹಾಕುತ್ತಿದ್ದಳು. ಪದ್ದು ಅದನ್ನು ತಂದು ಅಂಗಳದಲ್ಲಿ ಹರಡುತ್ತಿದ್ದ.

ಮನೆಯ ಹೆಣ್ಣುಮಕ್ಕಳಲ್ಲಿ ಇಲ್ಲದ ಸುಜ್ಜಾಳ ಚಾಲಾಕಿತನ ನೋಡಿದ ದೇವಕಿ, ದೋಗಣ್ಣನ ಹೆಂಡತಿ ಅವಳನ್ನು ಮೆಚ್ಚಿಕೊಳ್ಳುತ್ತಿದ್ದರು. ಒಂದು ಕ್ಷಣವೂ ಸುಮ್ಮನಿರದೆ ಕೆಲಸದಲ್ಲಿ ಕೈಜೋಡಿಸುತ್ತಿದ್ದಳು. ಹೊತ್ತು ಏರಿದಂತೆ ಅಂಗಳದಲ್ಲಿ ಹರಡಿದ, ಒಣಗಿದ ಭತ್ತವನ್ನು ಗೋಣಿಯಲ್ಲಿ ತುಂಬಿಸಿ ಪದ್ದುವಿನ ಜತೆ ಅಕ್ಕಿ ಮಿಲ್ಲಿಗೆ ಹೊತ್ತುಕೊಂಡು ಹೋಗಿ ಅಕ್ಕಿ ಮಾಡಿಸಿ ತರಲು ಸಹಕರಿಸುತ್ತಿದ್ದಳು. ದನ, ಕೋಣಗಳಿಗೆ ಅಕ್ಕಚ್ಚು ಇಡಲು, ತೌಡು ಹಾಕಿದ ಹುರುಳಿ ಕುಟ್ಟಲು ಪದ್ದುವಿನ ಜತೆಗೂಡುತ್ತಿದ್ದಳು. ಮಂಜೊಟ್ಟಿ ಗುತ್ತಿನ ಕೋಣ, ದನ, ನಾಯಿ, ಬೆಕ್ಕು, ಕೋಳಿಗಳು ಸುಜ್ಜಾ ಹೇಳಿದಂತೆ ಕೇಳುತ್ತಿದ್ದವು.

ಪದ್ದು ಆಕೆಗೆ ಕೀಟಲೆ ಮಾಡುತ್ತಾ, ರೇಗಿಸುತ್ತಾ ಕೆಲಸದ ಆಯಾಸ, ಏಕತಾನತೆ ನೀಗಿಸುತ್ತಿದ್ದ ಇರುತ್ತಿದ್ದ. ಆಕೆಯೂ ಜಗಳ ಕಾಯುತ್ತಿದ್ದಳು.

ಮಾತು ಬಾರದ ಸಣ್ಣ ಹುಡುಗಿಯಾಗಿದ್ದಾಗ ಮಂಜೊಟ್ಟಿ ಗುತ್ತಿಗೆ ಬಂದಿದ ಸುಜ್ಜಾ ದೋಗಣ್ಣ ದಂಪತಿಯನ್ನು ದೊಡ್ಡಪ್ಪಾ, ದೊಡ್ಡಮ್ಮ ಎಂದರೆ ದೇವಕಿಯನ್ನು ಮಾಮಿ ಎನ್ನುತ್ತಿದ್ದಳು. ಶ್ರೀಧರನನ್ನು ಅಣ್ಣಾ ಎಂದರೆ ದೋಗಣ್ಣನ ಹೆಣ್ಣುಮಕ್ಕಳನ್ನು ಅಕ್ಕಾ ಎನ್ನುತ್ತಿದ್ದಳು. ಪದ್ದು, ಉಳಿದಿಬ್ಬರು ಗಂಡುಮಕ್ಕಳನ್ನು ಎಲ್ಲರೂ ಏಕವಚನದಲ್ಲಿ ಕರೆಯುತ್ತಿದ್ದರು ಹಾಗೆ ಶಂಭು, ಶಂಕರ, ಪದ್ದು ವನ್ನು ಸುಜ್ಜಾ ಹೆಸರಿಡಿದು ಏಕವಚನದಿಂದ ಕರೆಯುತ್ತಿದ್ದಳು. ಯಾರ ಆಕ್ಷೇಪವೂ ಇರಲಿಲ್ಲ.
ಸುಜ್ಜಾ ಅನ್ನದ ಋಣವನ್ನು ಅಗುಳು ಅಗುಳಿಗೆ ಸಲ್ಲಿಸುವಂತೆ ಕೆಲಸ ಮಾಡುತ್ತಿದ್ದಳು.

ದೋಗಣ್ಣನ ಎರಡು ಹೆಣ್ಣು ಮಕ್ಕಳಿಗೂ ಶೇಖರ, ಶ್ರೀಧರ ಸೇರಿ ಮುಂಬೈಗೆ ಮದುವೆ ಮಾಡಿಕೊಟ್ಟಿದ್ದರು.

ದೋಗಣ್ಣನ ಹೆಂಡತಿ ವರ್ಷಕ್ಕೆ ಎರಡು ಮೂರು ಬಾರಿ ಮುಂಬೈ ದಾರಿ ಹಿಡಿದು ಗಂಡು, ಹೆಣ್ಣು ಮಕ್ಕಳ ಸಂಸಾರದ ಜತೆ ಸಂತಸ ಪಡುವುದನ್ನು ಕಂಡ ದೇವಕಿ ತನ್ನ ಮಗ ಕೂಡಾ ಮುಂಬೈ ದಾರಿ ಹಿಡಿದಿದ್ದರೆ ತಾನೂ ಅಲ್ಲಿ ಹೋಗಿ ಇರುತ್ತಿದ್ದೆ ಎಂದು ಕರುಬುತ್ತಿದ್ದಳು. ಅಸಹಾಯಕಳಂತೆ ತಾನು ಕಾಯಿ ಹರಕೆ ನೀಡಿದ ದೈವದ ಕಲ್ಲಿನ ಕಡೆಗೆ ನೋಡುತ್ತಿದ್ದಳು.

‘ಅವಳಿಗೆ ಮದುವೆ ಪ್ರಾಯ ಆಯ್ತಲ್ಲಾ.. ನನ್ನ ಮಕ್ಕಳಿಗೆ ಅವಳಂತೆ ಮುಖ, ಕಣ್ಣು, ಹುಬ್ಬು, ಮೂಗು ಮೈಕಟ್ಟು ಇಲ್ಲ. ಅಷ್ಟು ಚೆಂದದ ಹುಡುಗಿಯನ್ನು ಯಾರಾದರೂ ಕೊಂಡು ಹೋಗುತ್ತಾರೆ...’ ದೋಗಣ್ಣನ ಹೆಂಡತಿ ನುಡಿದರು.

‘ಮನೆಯ ಹುಡುಗಿಯರೆಲ್ಲಾ ಮದುವೆಯಾಗಿ ಹೋದರು. ಮನೆ ಖಾಲಿಯಾಗಿದೆ. ಸುಜ್ಜಾ ಇರುವುದರಿಂದ ಯಾವುದೂ ಏನೂ ಗೊತ್ತಾಗುವುದಿಲ್ಲ. ಅವಳೂ ಹೋದರೆ....’
ದೋಗಣ್ಣ ಕ್ಷಣಕಾಲ ಯೋಚಿಸಿ...

‘ಹುಡುಗಿಯರನ್ನು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕಾಗುತ್ತಾ... ಪೊಡಿಯಾ ಯಾರಾದರೂ ಹುಡುಗ ಇದ್ದರೆ ತಿಳಿಸು. ಮದುವೆ ಮಾಡುವ. ನೀನೇನು ಖರ್ಚು ಮಾಡುವುದು ಬೇಡ. ನಾವಿದ್ದೇವೆ’ ಎಂದ.

‘ನಾನು ಮನೆ ಬಿಟ್ಟು ಓಡಿ ಬಂದವನು. ಸಂಬಂಧಿಕರ ಮನೆಗೆ ಹೋಗುವಂತಿಲ್ಲ. ಮತ್ತೆ ನಾನೆಲ್ಲಿ ಹುಡುಕಲಿ. ಶೇಖರಣ್ಣ, ಶ್ರೀಧರ ಮನಸ್ಸು ಮಾಡಿದರೆ ಎಲ್ಲಾ ಆಗುತ್ತದೆ. ಒಂದು ಹೇಳಿ ನೋಡಿ... ಮುಂಬೈಯಲ್ಲಿ ದುಡಿದು ತಿನ್ನುವ ಪಾಪದ ಹುಡುಗ ಸಿಕ್ಕಿದರೆ ಸಾಕು. ನಾನು ಇನ್ನು ಹೆಚ್ಚು ದಿನ ಇಲ್ಲ ದೋಗಣ್ಣ. ಹೊಟ್ಟೆ ನೋವು ಜಾಸ್ತಿ ಆಗುತ್ತಾ ಉಂಟು ಸಾಯುವ ಮೊದಲು ಸುಜ್ಜಾಳ ಮದುವೆ ಒಂದು ಆದರೆ ಸಾಕು’ ಎಂದು ಪೊಡಿಯ ಅಸಹಾಯಕತೆ ವ್ಯಕ್ತಪಡಿಸಿದ.

‘ಹಾಗೆಲ್ಲಾ ಎಲ್ಲರನ್ನು ನಂಬುದಕ್ಕೆ ಆಗುವುದಿಲ್ಲ. ಒಳ್ಳೆ ಮನೆಯವ ಆಗಬೇಕು. ಮೋಸ ಮಾಡುವವರು ಹಿಂದೆಯೂ ಇದ್ದರು ಈಗಲೂ ಇದ್ದಾರೆ...

ನಮ್ಮ ದೇವಕಿಗೂ ಮೋಸ ಆಗಿತ್ತು. ದೊಡ್ಡ ಮನೆಯವ, ಮುಂಡಾಸಿನವ ಅಂತ ಕೊಟ್ಟರೆ ಅವಳಿಗೆ ಅಲ್ಲಿ ಜೀವನ ಮಾಡುದಕ್ಕೆ ಆಗಲಿಲ್ಲ. ಹುಡುಗನ ಮನೆ ನೋಡಲು ಹೋಗುವಾಗ ಕಣ್ಣುಕಟ್ಟು ಮಾಡಿ ಮೋಸ ಮಾಡಿದರು...’ ಎಂದ ದೋಗಣ್ಣ.

‘ನನ್ನದೂ ಹಾಗೇ ದೋಗಣ್ಣ. ನನಗಿದ್ದದ್ದು ಎರಡು ಕಳಸೆ ಗದ್ದೆ. ಸುಜ್ಜಾಳ ತಾಯಿ ಕಡೆಯುವರು ಬರುವಾಗ. ಅಂಗಳ ಇಡೀ ಬೈಹುಲ್ಲ ಮುಟ್ಟೆ, ಭತ್ತದ ರಾಶಿ. ಎರಡೆರಡು ಪಡಿಮಂಚ, ಹಟ್ಟಿಯಲ್ಲಿ ಎರಡು ಜತೆ ಕೋಣ. ಅಲ್ಲಲ್ಲಿ ಕಟ್ಟಿ ಹಾಕಿದ ದನ, ಕರು ದೊಡ್ಡ ಭೂಮಿಯವ ಎಂದು ನಾಟಕ ಮಾಡಿದೆ.

ಪಾಪ ದೊಡ್ಡ ಅಧಿಕಾರದ ಮನೆಯವರು. ಅವರು ನಂಬಿದರು, ಹುಡುಗಿ ಕೊಟ್ಟರು. ಅವಳು ಆರು ತಿಂಗಳು ಕೂಡಾ ಮನೆಯಲ್ಲಿ ನಿಲ್ಲುವಂತೆ ಆಗಲಿಲ್ಲ... ಈಗ ಅನುಭವಿಸುತ್ತಿದ್ದೇನೆ’ ಪೊಡಿಯ ದುಃಖ ತೋಡಿಕೊಂಡ.

ಪದ್ದುವಿಗೆ ಕುತೂಹಲ ಕೆರಳಿತು. ‘ಅಲ್ಲ ಪೊಡಿಯಾಮಾ ಎರಡು ಕಳಸೆ ಗದ್ದೆಯಲ್ಲಿ ಅಷ್ಟೆಲ್ಲಾ, ಭತ್ತ, ಬೈಹುಲ್ಲು ಹೇಗೆ ಬಂತು?’ ಎಂದ.

‘ಅದೇನಿಲ್ಲ ಪದ್ದು. ಎಣೆಲು ಬೆಳೆ ಕೊಯ್ಯುವಾಗ ಅವರು ಗಂಡಿನ ಮನೆ‌ ನೋಡಲು ಬಂದರು. ಪಕ್ಕದ ಎರಡು ಮೂರು ಮನೆಯವರ ಎಲ್ಲಾ ಭತ್ತದ ಕಟ್ಟ ನನ್ನ ಅಂಗಳಕ್ಕೆ. ಅಲ್ಲೇ ಭತ್ತದ ರಾಶಿ, ಬೈಹುಲ್ಲ ಮುಟ್ಟೆ. ಅವರ ಕೋಣ, ದನಕರು ತಂದು ಕಟ್ಟಿದ್ದು... ನಮ್ಮ ಹುಡುಗಿಯನ್ನು ಬಾಳಿಸಿಯಾನು ಎಂದು ಬಂದವರಿಗೆ ಕುಶಿಯೋ ಕುಶಿ. ಹುಡುಗಿ ಕಡೆಯುವರು ಹೋದ ನಂತರ ಅವರವರದ್ದು ಎಲ್ಲಾ ಕೊಂಡು ಹೋದರು ಅಷ್ಟೆ...’ ಪೊಡಿಯ ನೋವಿನ ಕ್ಷಣದಲ್ಲೂ ನಕ್ಕ.

ಪದ್ದು, ದೋಗಣ್ಣ ಗಹಗಹಿಸಿ ನಕ್ಕರು.

‘ಹಿಂದೆ ಎಲ್ಲಾ ಹಾಗೆಯೇ ಬಿಡು. ಈಗ ಮೋಸ ಹೊಸದಾರಿ ಹಿಡಿದಿದೆ’ ಎಂದ ದೋಗಣ್ಣ.

ಸುಜ್ಜಾಳಿಗೆ ಪ್ರತಿದಿನ ರಾತ್ರಿ ಮಂಜೊಟ್ಟಿ ಗುತ್ತೇ ಖಾಯಂ ಆಯಿತು.

‘ಒಂದು ಬಾರಿ ಮಂಜೇಶ್ವರಕ್ಕೆ ಹೋಗುವ ಪೊಡಿಯಾಮ... ಪರಿಸ್ಥಿತಿ ಹೇಗೆ ಇದೆ ಎಂದು ನೋಡುವ. ಸರಿ ಇದ್ದರೆ ಅಲ್ಲೇ ಎಲ್ಲಿಯಾದರೂ ಗಂಡು ಹುಡುಕುವ. ಸುಜ್ಜಾಳ ತಾಯಿ ಮನೆ ಎಲ್ಲಿ?. ಅವರ ಸಂಬಂಧಿಕರಲ್ಲಿ ಯಾರಾದರೂ ಇರಬಹುದು’ ಪದ್ದು ಪೊಡಿಯನನ್ನು ಒತ್ತಾಯಿಸಿದ.

‘ಇಲ್ಲ ಪದ್ದು ಮಂಜೇಶ್ವರದಲ್ಲಿ ಸಂಬಂಧಿಕರು ಸರಿ ಇಲ್ಲ. ನಾನು ಹೋದರೆ ನೇರ ಜೈಲು ಸೇರಬೇಕು ಅಷ್ಟೆ. ಸುಜ್ಜಾಳ ತಾಯಿ ಮನೆ ಇಲ್ಲೇ ಹತ್ತಿರ ಕಾರ್ಲ. ಅಲ್ಲಿಗೆ ಹೋದರೂ ಮಂಜೇಶ್ವರಕ್ಕೆ ಸುದ್ದಿ ಮುಟ್ಟುತ್ತದೆ’ ಎಂದ ಪೊಡಿಯ.

‘ಇಪ್ಪತ್ತು ವರ್ಷ ಕಳೆಯಿತಲ್ಲ. ಒಂದು ಬಾರಿ ಹೋಗುವ ಸುರತ್ಕಲ್‌ನಿಂದ ಬಂದದ್ದು ಎಂದು ಹೇಳುವುದು ಬೇಡ. ಮುಂಬೈಯಿಂದಲೇ ಬಂದದ್ದು ಅಂತ ಹೇಳುವ. ನಾನೂ ಬರ‍್ತೇನೆ. ಅಲ್ಲಿ ಹೆಚ್ಚು ಹೊತ್ತು ಇರುವುದು ಬೇಡ. ಒಂದು ಅರ್ಧ, ಒಂದು ಗಂಟೆ ಇದ್ದು ಕೂಡಲೇ ಹಿಂದೆ ಬರುವ. ಪೊಲೀಸರಿಗೆ ಸುದ್ದಿ ಹೋದರೂ ಅವರು ಬರುವಾಗ ನಾವು ಅಲ್ಲಿ ಇರಬಾರದು. ಬೇಕಾದರೆ ಅಲ್ಲಿವರೆಗೆ ನನ್ನ ಗಾಡಿಯಲ್ಲೇ ಹೋಗುವ’ ಎಂದ ಪದ್ದು.

ಸುತಾರಂ ಒಪ್ಪದ ಪೊಡಿಯ ಪದ್ದು, ದೋಗಣ್ಣನ ಒತ್ತಾಯಕ್ಕೆ ‘ಆಗಬಹುದು’ ಎಂದ.

ಪದ್ದುವಿನ ರಾಜದೂತ್ ಮಂಜೇಶ್ವರದ ದಾರಿ ಹಿಡಿಯಿತು. ಹಿಂಭಾಗದಲ್ಲಿ ಪೊಡಿಯ ಕುಳಿತಿದ್ದ. ಆವರೆಗೆ ಜೀವಮಾನದಲ್ಲಿ ಧರಿಸದ ಪ್ಯಾಂಟು ಧರಿಸಿ, ತಲೆ, ಮೀಸೆಗೆ ಕಪ್ಪು ಜಡಿದು, ನುಣ್ಣಗೆ ಶೇವ್ ಮಾಡಿದ್ದ. ಸುಜ್ಜಾ ತಮಾಶೆ ಮಾಡಿದ್ದೇ ಮಾಡಿದ್ದು, ಬೊಂಬಾಯಿಂದ ಬರುದಲ್ವಾ?

ದಿನಾ ಕಂಟ್ರಿ ಉಚಿತವಾಗಿ ಪಡೆಯುತ್ತಿದ್ದ ಊರಿನ ಉಗ್ರಾಣಿ ಪೊಡಿಯನ ನಂಬಿಕಸ್ತನಾಗಿದ್ದ. ಪೊಡಿಯ ಅಕ್ರಮವಾಗಿ ಬೇಯಿಸುತ್ತಿದ್ದ ಗಂಗಸರದ ಅಡ್ಡೆಗೆ ಅಬಕಾರಿ ಪೊಲೀಸರು ಉಗ್ರಾಣಿಯ ಸಹಾಯದಿಂದಲೇ ರೈಡ್ ಮಾಡುತ್ತಿದ್ದರು. ಆದರೆ ಪೊಡಿಯ ಪೊಲೀಸರ ಕೈಗೆ ಸಿಕ್ಕಿ ಬೀಳದಂತೆ ಉಗ್ರಾಣಿ ಸಹಾಯ ಮಾಡುತ್ತಿದ್ದ.

ಎಲ್ಲಿಯಾದರೂ ಉಗ್ರಾಣಿ ಹೆಗಲಲ್ಲಿದ್ದ ಶಾಲನ್ನು ತನ್ನ ತಲೆಗೆ ಮುಂಡಾಸು ಕಟ್ಟಿಕೊಂಡು ಪೊಡಿಯನ ಎದುರಿಗೆ ಬಂದರೆ ಅಪಾಯ ಎಂದು ಅರ್ಥ. ಪೊಡಿಯ ಕ್ಷಣಮಾತ್ರದಲ್ಲಿ ಜಾಗ ಖಾಲಿ ಮಾಡುತ್ತಿದ್ದ.

ಪೊಲೀಸರನ್ನು ಮನೆಗೆ ಹತ್ತಿರದ ದಾರಿಯಿಂದ ಕರೆದುಕೊಂಡು ಬಾರದೆ ಮನೆಗೆ ಸ್ಪಷ್ಟವಾಗಿ ಕಾಣುವ ಎದುರಿನ ಉದ್ದದ ಕಟ್ಟ ಪುಣಿಯಲ್ಲಿ ಕರೆದುಕೊಂಡು ಬರುತ್ತಿದ್ದ.

ಅಲ್ಲಿಂದಲೇ ಉಗ್ರಾಣಿ ತಲೆಯ ಮುಂಡಾಸು ಕಂಡು ಪೊಡಿಯ ಮನೆಯ ಹಿಂಬಾಗಲಿನಿಂದ ಕಾಡು, ಗುಡ್ಡೆ ದಾರಿ ಹಿಡಿಯುತ್ತಿದ್ದ.

ಪೊಡಿಯ ಅಡಗಿಸಿಟ್ಟ ಹುಳಿರಸ, ಗಂಗಸರದ ಗುಡಾಣವನ್ನು ಪೊಲೀಸರ ಕಣ್ಣಿಗೆ ಬೀಳದಂತೆ ತಪ್ಪಿಸುವ ಸರ್ವ ಪ್ರಯತ್ನವನ್ನೂ ಪೊಲೀಸರ ಅರಿವಿಗೆ ಬಾರದಂತೆ ಉಗ್ರಾಣಿ ಮಾಡುತ್ತಿದ್ದ.

ಸಂಜೆ ಹೊತ್ತಿಗೆ ನಿಗದಿತ ಜಾಗದಲ್ಲಿ ಪೊಡಿಯ ಇಟ್ಟ ಗಂಗಸರದ ಕುಪ್ಪಿಯನ್ನು ತಪ್ಪದೆ ತೆಗೆದುಕೊಳ್ಳುತ್ತಿದ್ದ.

ಪೊಡಿಯ ಪೊಲೀಸನಿಗೆ ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡಿದ ಸಂದರ್ಭದಲ್ಲಿಯೂ ಉಗ್ರಾಣಿ ಸರಿಯಾದ ಸಲಹೆ ನೀಡಿ ಜೈಲುಪಾಲಾಗುವುದರಿಂದ ರಕ್ಷಿಸಿದ್ದ.

ಅಂತಹ ಉಗ್ರಾಣಿಯ ಮನೆಯ ಕಡೆಗೇ ಪೊಡಿಯ ದಾರಿ ತೋರಿಸಿದ್ದ. ಇಪ್ಪತ್ತು ವರ್ಷದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಕಂಡ ಪೊಡಿಯನ ಊರು ಹೆಚ್ಚು ಕಮ್ಮಿ ಹಾಗೆಯೇ ಇತ್ತು. ಉಗ್ರಾಣಿಯ ಮನೆಯವರೆಗೆ ಇದ್ದ ಕಾಲು ದಾರಿಯ ಪಕ್ಕ ಮಣ್ಣಿನ ರಸ್ತೆ ಆಗಿತ್ತು. ಯಾರೋ ಆ ದಾರಿ ತೋರಿಸಿದರು. ರಾಜದೂತ್ ಉಗ್ರಾಣಿ ಮನೆಯ ಹಿಂಭಾಗದಲ್ಲಿ ನಿಂತಿತು. ಎರಡು ನಾಯಿಗಳು ಆರ್ಭಟಿಸುತ್ತಾ ಮೇಲೆ ಬೀಳುವಂತೆ ಓಡಿ ಬರತೊಡಗಿತ್ತು.

ಬೈಕ್ ನಿಂದ ಇಳಿಯುತ್ತಿದ್ದಂತೆ ನಾಯಿಗಳನ್ನು ನಿಯಂತ್ರಿಸುತ್ತಾ ಬಂದ ಪೊಲೀಸ್ ಸಮವಸ್ತ್ರ ಧಾರಿ ಕಂಡ.

ಪದ್ದು, ಪೊಡಿಯರ ಎದೆ ಧಸಕ್ಕೆಂದಿತು.

'ಬೆ...ಬೇಡ ಅಂತ ನಾನು ಹೇಳಿದ್ದಲ್ವಾ'

ಪೊಡಿಯನ ಧ್ವನಿ ನಡುಗುತ್ತಿತ್ತು.

'ಯಾರು... ಏನಾಗಬೇಕಿತ್ತು?' ಪೊಲೀಸ ಪ್ರಶ್ನಿಸಿದ.

'ಪೆ...ಪ್ಪೆ... ಪ್ಪೆ.... ' ಎಂದು ಪೊಡಿಯ ತೊದಲಿದ.

'ಪೆತ್ತ... ಪೆತ್ತ... ದನ... ಮಾರುವ ದನ ಉಂಟು ಅಂತ ಹೇಳಿದ್ರು... ಹಾಗೆ...' ಪದ್ದು ಸಮಯ ಪ್ರಜ್ಞೆ ಮೆರೆದ.

'ಪೆತ್ತ...!... ದನವಾ...?' ಪೊಲೀಸ ಇಬ್ಬರನ್ನೂ ಅಪಾದಮಸ್ತಕ ತೀಕ್ಷ್ಣ ವಾಗಿ ದಿಟ್ಟಿಸಿದ.

ಅವಲಕ್ಕಿ ಕುಟ್ಟುವಂತೆ ಪದ್ದು, ಪೊಡಿಯರಿಗೆ ಅವರದೇ ಎದೆ ಬಡಿತ ಕಿವಿಗಳಿಗೆ ಕೇಳಿಸತೊಡಗಿತು....


ಮುಂದಿನ ಭಾಗ : ಅರೆಮಡಲು ಬಡಿದು ಹುಲಿ ಓಡಿಸಿದರು

Category:Stories



ProfileImg

Written by Ravindra Shetty

0 Followers

0 Following