ಜಗದ್ರಕ್ಷಕ,ನಾದಪ್ರಿಯ ಬಿಲ್ವಪ್ರಿಯ ಭಕ್ತಪ್ರಿಯ ,ಓಂಕಾರ ಪ್ರಿಯ ಹೀಗೆ ನೂರಾರು ಹೆಸರಿನಿಂದ ಕರೆಸಿಕೊಳ್ಳುವ ಭಕ್ತರ ಆರಾದ್ಯದೈವ ಶಿವನನ್ನು ಆರಾಧಿಸುವ ಹಬ್ಬ ಮಹಾಶಿರಾತ್ರಿ ಯನ್ನು ಇಂದು ದೇಶದಾದ್ಯಂತ ಪ್ರತಿ ಮನೆಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಓಂಕಾರ ನಾದದೊಂದಿಗೆ ಶ್ರದ್ದಾಭಕ್ತಿಗಳಿಂದ ಆಚರಿಸಲಾಗುತ್ತದೆ. ಓಂಕಾರ ಎಂಬುದು ಶಿವನನ್ನು ಕರೆಯಲ್ಪಡುವ ಒಂದು ಬಹು ಉನ್ನತ ಹಾಗೂ ಉತ್ಕೃಷ್ಟ ಶಕ್ತಿ ಹೊಂದಿರುವ ಮಹತ್ವದ ಶಬ್ದವಾಗಿದೆ. ಓಂ ಎಂಬುದು ಒಂದು ಸುಮಧುರ ಸ್ತೋತ್ರ ಮತ್ತು ಇದು ಬ್ರಹ್ಮಾಂಡದ ಶಬ್ದವೂ ಆಗಿರುವುದರಿಂದ ಶಿವನನ್ನು ಓಂಕಾರೇಶ್ವರ ಅಥವಾ "ಓಂ"ಎಂದೇ ಕರೆಯಲಾಗುತ್ತದೆ. ಹಾಗಾಗಿ ಪುರಾಣಗಳು ಶಿವನನ್ನೇ ಓಂ ಎಂದು ಮತ್ತು ಓಂ ನಿಂದಲೇ ಶಿವ ಎಂದು ಹೇಳುತ್ತವೆ.
"ಓಂಕಾರದ ಮಹತ್ವ"
ಮಂತ್ರಗಳ ತಾಯಿ ಎಂದೇ ಕರೆಯಲಾಗುವ "ಓಂಕಾರ" ಮಂತ್ರವನ್ನು ಸಂಸ್ಕೃತದಲ್ಲಿ ಪ್ರಣವ ಮಂತ್ರ ಎಂದೂ ಸಾರ್ವಭೌಮ ಮಂತ್ರ ಎಂದು ಕರೆಯಲಾಗುತ್ತದೆ.ಪ್ರಣವ ಎಂದರೆ ಎಲ್ಲಕ್ಕಿಂತ ಪ್ರಧಾನವಾದದ್ದು. ಓಂಕಾರವು ಸಾರ್ವತ್ರಿಕ ಅಂದರೆ ಭೂಮಂಡಲವನ್ನು ಪ್ರತಿನಿಧಿಸುತ್ತದೆ ಅಲ್ಲದೆ ಓಂಕಾರವು ವಾಸ್ತವದ ಪ್ರತಿಬಿಂಬವೂ ಹೌದು. ಇದಕ್ಕೆ ಆರಂಭ ಮತ್ತು ಅಂತ್ಯ ಎರಡೂ ಇಲ್ಲ, ಇದು ನಮ್ಮೊಳಗಿನ ಧನಾತ್ಮಕ ಕಂಪನಗಳನ್ನು ಧ್ವನಿಸುವುದಲ್ಲದೆ ಸುಪ್ತ ಅಂತರಾತ್ಮವನ್ನು ಎಚ್ಚರಿಸುತ್ತದೆ ಹಾಗು ಭಾವಕ್ಕೆ ಸಂಬಂಧಪಟ್ಟಿದ್ದಾಗಿದೆ,ಸಂಸ್ಕೃತದಲ್ಲಿ ಓಂ ಅನ್ನು ಅಂ ಎಂದು ಉಚ್ಚರಿಸಲಾಗುತ್ತದೆ ಇದು ಎಚ್ಚರ,ಕನಸು ಮತ್ತು ಧೀಘ ನಿದ್ರೆ ಎಂಬ ನಮ್ಮ ಮೂರು ಸ್ಥಿತಿಗಳನ್ನು ಪ್ರತಿನಿಧಿಸುತ್ತದೆ. ದೇವರನ್ನು ಶಿವನೆಂಬ ಒಂದು ಆಕಾರವಾಗಿ ಪ್ರತಿನಿಧಿಸುವ ಓಂಕಾರವು ಸೃಷ್ಟಿಯ ಶಬ್ದ ಎಂಬ ನಂಬಿಕೆಯಿದೆ, ಓಂ ಉಚ್ಛಾರಣೆಯಿಂದಾಗಿ ನಮ್ಮೊಳಗೆ ಧನಾತ್ಮಕ ಕಂಪನಗಳು ಉದಿಸುತ್ತವೆ. ಈ ಶಬ್ದವು ನಮ್ಮ ಅಂತರ್ ಜ್ಞಾನಕ್ಕೆ ನೇರವಾಗಿ ಸಂಪರ್ಕಿಸುವುದರಿಂದ ಹಾಗು ಜ್ಞಾನದ ಕಣ್ಣುತೆರೆಸುವ ಶಕ್ತಿಯನ್ನು ಹೊಂದಿರುವುದರಿಂದ ಶಿವಪುರಾಣದಲ್ಲಿ ಈ ಓಂಕಾರವನ್ನು "ಜ್ಞಾನದ ಕಣ್ಣು" ಕರೆಯಲಾಗಿದೆ ಓಂ ಎಂಬುದು ಕೇವಲ ಅಕ್ಷರಗಳಲ್ಲ ಅದು ಅ,ಉ,ಮ ಎಂಬ ಮೂರು ಅಕ್ಷರಗಳ ಸಂಗಮವಾಗಿದೆ"ಅ' ಅಂದರೆ ಅಗತ್ಯ, “ಉ' ಅಂದರೆ ಉದ್ದೇಶ ಹಾಗೂ"ಮ ಎಂದರೆ ಮಹತ್ವ ಎಂಬ ಅರ್ಥವುಳ್ಳ ಬಹಳ ಮಹತ್ವವಾದ ಶಕ್ತಿಯನ್ನು ಹೊಂದಿದೆ, ಓಂಕಾರವನ್ನು ಜಪಿಸುವುದರಿಂದ ಏಕಾಗ್ರತೆ ಸಾಧಿಸಲು ಅನುಕೂಲ ಎಂಬುದು ಬಹಳ ಹಿಂದಿನಿಂದಲೂ ಬಂದಿರುವ ನಂಬಿಕೆ. ಅದು ನಿಜವೂ ಕೂಡ ಹೌದು. ಭಾರತೀಯ ಸಂಸ್ಕೃತಿಯಲ್ಲಿ ಓಂಕಾರಕ್ಕೆ ಬಹಳ ದೊಡ್ಡ ಮಹತ್ವವಿದೆ. ಅಲ್ಲದೆ ಪ್ರತಿಯೊಂದು ವೇದಮಂತ್ರವೂ ಓಂಕಾರದಿಂದಲೇ ಆರಂಭವಾಗುತ್ತದೆ. ದೇವರ ನಾಮಸ್ಮರಣೆ ಮಾಡುವಾಗಲೂ ಓಂ ಶಬ್ದ ದಿಂದಲೇ ಆರಂಭ ಮಾಡಲಾಗುತ್ತದೆ. ಓಂ ಕಾರದ ಮೂಲಕ ಆರಂಭವಾದ ದೇವನಾಮಾರ್ಚನೆಯು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂಬುದನ್ನು ವೇದದಲ್ಲಿ ಹೇಳಲಾಗಿದೆ.ಓಂ ಎಂಬ ಪದಕ್ಕೆ ವಿಶೇಷವಾದ ಗ್ರಹಿಕೆಯ ಶಕ್ತಿಯಿದ್ದು ಇದು ಧ್ಯಾನದ ಸಾಧನವೂ ಹೌದು. ಹಿಂದೆ ತಪಸ್ಸನ್ನು ಮಾಡುತ್ತಿರುವವರು ಓಂಕಾರವನ್ನು ಪಠಿಸುತ್ತಾ ಆ ಮೂಲಕ ಸಿದ್ದಿಯನ್ನು ಪಡೆಯುತ್ತಿದ್ದರು ಎಂಬುದನ್ನು ಸಾಕ್ಷಿ ಸಮೇತ ನಮ್ಮ ಸನಾತನ ಹಿಂದೂ ಧರ್ಮ ಹೇಳುತ್ತದೆ,
"ವೈಜ್ಞಾನಿಕವಾಗಿ ಓಂಕಾರದ ಮಹತ್ವ"
ಓಂಕಾರವನ್ನು ಪಠಿಸಿದಾಗ, ಮೆದುಳಿನೊಳಗೆ ಆಲ್ಫಾ ತರಂಗವು ಉತ್ಪತ್ತಿಯಾಗುತ್ತದೆ ಎಂದು ವೈಜ್ಞಾನಿಕ ಅಧ್ಯಯನಗಳು ತೋರಿಸಿವೆ.ಈ ತರಂಗವು ಅಪಾರ ಶಕ್ತಿಯನ್ನು ಹೊಂದಿದ್ದು ಓಂಕಾರ ಪಠಣೆಯು ಶಾಂತ ಸ್ಥಿತಿಯನ್ನು ಉಂಟುಮಾಡುತ್ತವೆ ಎಂದು ವಿಜ್ಞಾನ ಹೇಳುತ್ತದೆ,ಆದರೆ ಇದನ್ನು ನಮ್ಮ ಭಾರತೀಯ ಋಷಿ ಮುನಿಗಳು ಶತ ಶತಮಾನಗಳ ಹಿಂದೆಯೇ ಗ್ರಹಿಸಿದ್ದ ವಿದ್ಯಮಾನವಾಗಿತ್ತು ಎಂಬುದು ಇಲ್ಲಿ ಬಹಳ ಗಮನಾರ್ಹ ವಾದ ವಿಷಯ. ಈ ಮಂತ್ರವು ಆಂತರಿಕ ವ್ಯವಸ್ಥೆಯಲ್ಲಿನ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ, ಇದು ಒತ್ತಡ ಮತ್ತು ಭಾವನೆಗಳಿಗೆ ಸಂಬಂಧಿಸಿದ ನಮ್ಮ ಸಮಸ್ಯೆಗಳನ್ನು ನಿವಾರಿಸುತ್ತದೆ.ಹಾಗಾಗಿ ಖಿನ್ನತೆಗೆ ಚಿಕಿತ್ಸೆ ನೀಡಲು ಓಂಕಾರವನ್ನು ಬಳಸಲಾಗುತ್ತದೆ.ಓಂಕಾರ ಪಠನೆಯು ಮಿದುಳಿನಲ್ಲಿ ಖುಷಿಯನ್ನು ಉಂಟುಮಾಡುವ ರಾಸಾಯನಿಕವನ್ನು ಬಿಡುಗಡೆ ಮಾಡಲು ನೆರವಾಗುತ್ತದೆ. ಈ ರಾಸಾಯನಿಕವು ಒತ್ತಡವನ್ನು ಹೆಚ್ಚಿಸುವ ಅಡ್ರಿನಾಲಿನ್ ಮಟ್ಟನ್ನು ಕಡಿಮೆ ಮಾಡಿ ನಮ್ಮ ಮಿದುಳನ್ನು ಸಮಚಿತ್ತಸ್ಥಿತಿಗೆ ತರುತ್ತದೆ. ಹಾಗಾಗಿ ಧ್ಯಾನ,ಯೋಗದಲ್ಲಿ ಓಂಕಾರಕ್ಕೆ ಅತ್ಯಂತ ಮಹತ್ವ ನೀಡಲಾಗಿದೆ.ಓಂಕಾರವನ್ನು ಹೇಳುವಾಗ ಮೂಗಿನ ಮೂಲಕ ಒಳ ಸೇರಿದ ಗಾಳಿ ಅದೇ ಲಯದಲ್ಲಿ ಗಂಟಲು ಎದೆ ನಾಬಿಯ ಸುತ್ತಲೂ ವ್ಯಾಪಿಸಿ ದೇಹದ ತುಂಬೆಲ್ಲಾ ಹರಡಿ ನಿಧಾನಕ್ಕೆ ಉಸಿರು ಬಿಟ್ಟಾಗ ದೇಹದಲ್ಲಿ ಒಂದು ಕಂಪನ ಏರ್ಪಡುತ್ತದೆ, ಆ ಕಂಪನವೇ ದೇಹಕ್ಕೆ ಒಂದು ಶಕ್ತಿ ಹಾಗೂ ಪುಷ್ಠಿಯನ್ನು ಕೊಡುತ್ತದೆ,ಹಾರ್ವರ್ಡ್ ವಿವಿ ಅಧ್ಯಯನದ ಪ್ರಕಾರ ಓಂಕಾರವನ್ನು ಜಪಿಸುವುದರಿಂದ ಕಿರಿಕಿರಿಯುಂಟು ಮಾಡುವ ಕರುಳಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಕರುಳು ಮತ್ತು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯಕ್ಕೆ ಓಂಕಾರ ಮಂತ್ರವು ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ. ಓಂಕಾರವು ವಿಶ್ರಾಂತ ಸ್ಥಿತಿಯನ್ನು ಪ್ರೇರೇಪಿಸುತ್ತದೆ ಹಾಗಾಗಿ ವೈಜ್ಞಾನಿಕವಾ ಗಿಯೂ ತುಂಬಾ ಮಹತ್ವ ಪಡೆದುಕೊಂಡಿದೆ, ಓಂಕಾರವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆಯನ್ನು ಹೆಚ್ಚಿಸಿ ಮನಸ್ಸಿಗೆ ಹಿತ ಅನುಭವ ಉಂಟುಮಾಡುವು ದರಿಂದ ಬೆನ್ನು ಮೂಳೆಗಳು ಬಲವಾಗುವವು,ದೇಹದಲ್ಲಿ ರುವ ಕಲ್ಮಶವನ್ನು ಹೊರ ಹಾಕಲು ಸಹಾಯ ಮಾಡುತ್ತದೆ, ಹೃದಯದ ಆರೋಗ್ಯಕ್ಕೆ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ ಅಲ್ಲದೆ ನಮ್ಮಲ್ಲಿರುವ ನಕಾರತ್ಮಕ ಭಾವನೆಗಳನ್ನು ಹೊರ ಹಾಕುವಲ್ಲಿ ತುಂಬಾ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಜೊತೆಗೆ ನಿದ್ರೆಗೆ ಕೂಡ ಸಹಕಾರಿಯಾಗಿರುವುದು ವೈಜ್ಞಾನಿಕ ವಾಗಿಯೂ ಕೂಡ ಸಾಬೀತಾಗಿದೆ.ಹೀಗೆ ಹಲವಾರು ಪ್ರಯೋಜನಗಳನ್ನು ಹೊಂದಿರುವ ಓಂಕಾರ ಹೇಳುವುದರಿಂದ ಸಿಗುವ ಲಾಭಗಳು ಅತ್ಯದ್ಭುತ. ಹಾಗಾಗಿ ಇದನ್ನು ಉಚ್ಚಾರಣೆ ಮಾಡಿದವರಿಗಷ್ಟೇ ಇದರ ಮಹತ್ವ ಗೊತ್ತಿರುತ್ತದೆ. ಶಾರೀರಿಕ ಮಹತ್ವದ ದೃಷ್ಟಿಯಿಂದ ನೋಡುವುದಾದರೆ ಇದು ಏಕಾಗ್ರತೆಗೆ ಸಹಾಯ ಮಾಡುತ್ತದೆ. ಥೈರಾಯಿಡ್ ರಕ್ತದೊತ್ತಡ,ಜೀರ್ಣಕ್ರಿಯೆ ಬೆನ್ನುನೋವು ಹಾಗೂ ಹೃದಯದ ತೊಂದರೆಗಳಂತಹ ದೇಹದ ವಿವಿಧ ಕಾಯಿಲೆಗಳ ನಿಯಂತ್ರಣಕ್ಕೆ ಸಹಾಯ ಮಾಡಿ ದೇಹದೊಳಗೆ ಸೇರಿಕೊಂಡಿರುವ ವಿಷಯುಕ್ತ ಕಲ್ಮಶವನ್ನು ಹಾಗೂ ನಕಾರಾತ್ಮಕತೆ ಯನ್ನು ಹೊರಹಾಕುತ್ತದೆ. ಅಲ್ಲದೆ ಓಂ ಉಚ್ಛಾರಣೆಯು ಶರೀರಕ್ಕೆ ಹೊಸ ಚೈತನ್ಯ ತುಂಬಿ ಸ್ಫೂರ್ತಿ ಸುಸ್ತು ಆಯಾಸವನ್ನು ದೂರ ಮಾಡುತ್ತದೆ,ನಿದ್ರೆ ಸರಿಯಾಗಿ ಬಾರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾದುವುದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ ಎಂಬುದು ಕೂಡ ವೈಜ್ಞಾನಿಕವಾಗಿ ಸಾಭಿತಾಗಿದೆ.ಅಲ್ಲದೆ ಓಂ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗಿ ಥೈರಾಯ್ಡ್ ಗ್ರಂಥಿಗಳು ಪುನಶ್ಚೇತನ ಗೊಳ್ಳುತ್ತವೆ,ಮತ್ತು ಶ್ವಾಸಕೋಶದ ತೊಂದರೆಗಳು ಕಡಿಮೆಯಾಗುತ್ತದೆ.ಸೂರ್ಯ ಮತ್ತು ಚಂದ್ರರ ಬೆಳಕು ಕೂಡ ಮೂಲತಃ ಬ್ರಹ್ಮಜ್ಯೋತಿಯಿಂದ ಹೊರ ಹೊಮ್ಮುವಾಗ ಓಂಕಾರ ಅಲೌಕಿಕ ಶಬ್ದವು ಅಲ್ಲಿಂದಲೇಹೊರಹೊಮ್ಮುತ್ತದೆ ಎಂಬ ನಂಬಿಕೆಯು ಇದೆ.ಒಟ್ಟಿನಲ್ಲಿ ಶಿವನ ದ್ವನಿ ಎಂದೇ ಕರೆಯುವ ಈ ಓಂಕಾರ ಉಚ್ಚಾರಣೆಯು ಧಾರ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ ಮಹೋನ್ನತ ಶಕ್ತಿಯನ್ನು ಹೊಂದಿದೆ.
ಗೀತಾಂಜಲಿ ಎನ್, ಎಮ್
Author ✍️
0 Followers
0 Following