ಲೇಖನ ಸ್ಪರ್ಧೆ ಜೂನ್ 2024
ಓ ಸೋಲೆ ಥ್ಯಾಂಕ್ಯೂ…
ಬದುಕಿರುವ ಉಸಿರಿನ ಕೊನೆತನಕ ಸದಾಕಾಲ ಗೆಲುವಿನೊಂದಿಗೆ ಬದುಕಬೇಕು,ಗೆಲುವೇ ನನ್ನ ಸಂಗಾತಿಯಾಗಬೇಕು,
ಗೆಲುವನ್ನು ತನ್ನದಾಗಿಸಿಕೊಳ್ಳಲು ಸೆಕೆಂಡ್ ಗಿಂತ ಹೆಚ್ಚು ವೇಗವಾಗಿ ಧಾವಿಸುತ್ತಿರುವ ಕೋಟ್ಯಾಂತರ ಜನರು ಈ ಜಗತ್ತಿನಲ್ಲಿ,ಅದರೊಳಗೆ ನನ್ನನ್ನೂ ಸೇರಿಸಿ.
ಸೋತಾಗ ಸಾಯುವವರೇ ಅತೀ ಹೆಚ್ಚಾಗಿ ಕಂಡುಬರುವ ಈ ಸಮಾಜದಲ್ಲಿ ಸೋಲನ್ನು ಸಮಾಧಾನದಿಂದ ಸ್ವೀಕರಿಸಿ ಎಲ್ಲವನ್ನೂ ತಾಳ್ಮೆಯಿಂದ ಸರಿ ಮಾಡಿಕೊಂಡರಾಯಿತಲ್ಲವೇ..
ಸರಿ ಮಾಡಿಕೊಳ್ಳುವವರೆಗೆ ಈ ಸಮಾಜ/ಜನರು,ಸಂಬಂಧಿಕರು, ಉಳಿಯಲು ಬಿಡುತ್ತದೆಯೋ, ಬಿಡುತ್ತಾರೆಯೋ, ಇಲ್ಲ ಮಾನಸಿಕವಾಗಿ ಹಿಂಸಿಸಿ ಬಿಡುತ್ತಾರೆ.
ಇವುಗಳನ್ನೆಲ್ಲ ಸಹಿಸಿಕೊಂಡು,ಎದುರಿಸಿಕೊಂಡು ಹೋಗಲಾದಿತೇ, ಅಂತಹ ಗಟ್ಟಿ ಮನಸ್ಸುಳ್ಳವರಿಂದ ಮಾತ್ರ ಸಾಧ್ಯ…
ಸೋತಾಗ ಹೇಗೆ,ಎಲ್ಲಿ ಸೋತಿದ್ದು ಎಂಬುದನ್ನು ಅರಿತು ಸೋಲನ್ನು ಸಮಾಧಾನವಾಗಿ ಸ್ವೀಕರಿಸಿ ಅದನ್ನು ಮತ್ತೆ ಸರಿ ಮಾಡಿಕೊಂಡು ಮುನ್ನಡೆಯುವುದು ಅಷ್ಟೇ ನಮ್ಮ ಯೋಚನೆಯಲ್ಲಿರಬೇಕು…
ಯಾರೋ ಏನೋ ಹೇಳುತ್ತಾರೆಂದು ಜೀವ ಕಳೆದುಕೊಳ್ಳಲಾದಿತೇ, ಇಲ್ಲ ಬದುಕಲೇ ಬೇಕು..
ಗೆಲುವಿನ ಸ್ಟಾರ್ ಪಟ್ಟ ಕಟ್ಟಿ ಕೊಳ್ಳಬೇಕೆಂದುಕೊಂಡು ಬಂದ ಕೋಟ್ಯಾಂತರ ಕನಸುಗಳನ್ನು ಅಪ್ಪಿಕೊಂಡಿದ್ದು ಮಾತ್ರ ಸೋಲು,
ಯಾರೂ ಸಹ ಇಷ್ಟಪಡದ ಈ ಸೋಲು ಬಹುತೇಕ ಎಲ್ಲರ ಜೊತೆ ಸುಲಭವಾಗಿ ಬೆರೆತು ಅವರನ್ನೂ ಎಂದಿಗೂ ಬಿಡದೇ ಜೀವನ ಸಂಗಾತಿಯಾಗಿಬಿಡುತ್ತದೆ.
ಇರಲಿ ಬಿಡಿ, ತಲೆ ಕೆಡಿಸಿಕೊಳ್ಳದಿರಿ ಎಷ್ಟು ದಿನ ಇರುತ್ತೆ ಅಲ್ಲವೇ,ನೋಡಿಯೇ ಬಿಡೋಣ…
ಈ ಸೋಲು ಜೀವನದ ಪ್ರತೀ ಮಜಲುಗಳ ಏರಿಳಿತಗಳನ್ನು ಇಂಚು-ಇಂಚಾಗಿ ತೋರಿಸಿಕೊಡುತ್ತದೆ …
ಆದರೆ ಈ ಸೋಲಿಗೆ ಹೆದರಿ ಓಡುವವರೇ ಹೆಚ್ಚು…
ನಾನೂ ಸಹ ಸೋಲೆಂದರೆ ಭಯಪಡುತ್ತಿದ್ದವನು.
ಈಗೀಗ ಸೋಲಿನಲ್ಲೇ ಅದೇನೋ ಹೇಳಲಾಗದ ಸು:ಖ ಅನುಭವಿಸುತ್ತಿದ್ದೇನೆ…
ಸೋತಾಗ ಹೆದರುವವರುಂಟು,ಭಯಪಡುವವರುಂಟು,ಮರುಗುವವರುಂಟು,
ಅಳುವವರುಂಟು,
ಸಂಕಟ,ಯಾತನೆ ಪಡುವವರುಂಟು,
ಕೊನೆಗೆ ಸಾಯುವವರೂ ಉಂಟು,
ಆದರೆ ಸೋತಾಗ ನನ್ನಷ್ಟು ಖುಷಿಪಡುವವರ್ಯಾರುಂಟು…
ಓ ಸೋಲೇ ನನ್ನ ಜೊತೆಯಾಗಿದ್ದಕ್ಕೆ ಥ್ಯಾಂಕ್ಯೂ,
ಓ ಸೋಲೇ ಆಯ್ ಹಗ್ ಯೂ,
ಓ ಸೋಲೇ ನೀನು ನನ್ನ ಕ್ಲೋಸ್ ಫ್ರೆಂಡ್,
ನನ್ನ ಬೆಸ್ಟ್ ಫ್ರೆಂಡ್,
ಅಲ್ಲಾ,ಅಲ್ಲಾ ಅದಕ್ಕಿಂತಲೂ ಹೆಚ್ಚಾಗಿ ,ಓ ಸೋಲೇ ನೀನೇ ನನ್ನ ಪ್ರಪಂಚ,ನೀನೇ ನನ್ನ ಪ್ರೀತಿ,
ನೀನಿರುವುದೇ ನನಗಾಗಿ,
ನೀನೇ ನನ್ನ ಪ್ರಪಂಚವಾಗಿ,
ನಿನ್ನ ಜೊತೆಗೇ ಬದುಕುವ ಆಸೆಯಾಗಿ ಯಾವಾಗಲೂ ನಿನ್ನ ಕೈ ಹಿಡಿದೇ ನಡೆಯುತ್ತಿದ್ದೇನೆ.
ನೀನೂ ಸಹ ಯಾಕಿಷ್ಟು ನನ್ನನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದೀಯಾ,
ನಾನೆಂದರೆ ಅಷ್ಟು ಇಷ್ಟಾನಾ.
ನಾನು ಅದೆಷ್ಟೇ ಬಾರಿ ನಿನ್ನನ್ನು ದೂರ ಮಾಡಿದರೂ ಮತ್ತೆ ಬಂದು ಕಡಲಲೆಗಳು ದಡವ ಅಪ್ಪಿಕೊಳ್ಳುವಂತೆ ಆಗಾಗ ಬಂದು ಬಿಗಿದಪ್ಪುವೆ.
ನನ್ನನ್ನು ಹೆಚ್ಚಾಗಿ ಹಚ್ಚಿಕೊಂಡ ನಿನಗೆ ಬಿಟ್ಟು ಹೋಗಲು ಸಾಧ್ಯವೇ ಇಲ್ಲವೇನು, ಇಷ್ಟು ವಿಶಾಲ ಭುವಿಯಲ್ಲಿ ಕೋಟ್ಯಾಂತರ ಜನರಲ್ಲಿ ಪ್ರೀತಿಸಲು ನಾನೇ ಬೇಕಿತ್ತಾ.
ನನ್ನಲ್ಲಿ ಅಂತದ್ದೇನಿದೆ ಎಂದು ನನ್ನ ಕೈ ಹಿಡಿದು ಜೊತೆಯಾಗಿರುವೆ ಒಮ್ಮೆ ಹೇಳು.
ಯಾರಾದರೂ ಹೀಗೆ ಹೇಳಿದವರುಂಟೆ,
ಏನೂ ಸಹ ಇಲ್ಲದಿದ್ದಾಗ
ನನ್ನ ಜೊತೆಗೆ ನಿಂತ ಸೋಲನ್ನು ನಾನು ಆಗಾಗ ಪ್ರಶ್ನಿಸುತ್ತಲೇ ಇರುತ್ತೇನೆ.
ನಮ್ಮಿಬ್ಬರ ನಡುವಿನ ಮಾತುಕತೆ ಯಾವಾಗಲೂ ಅಂತ್ಯ ಕಾಣದ್ದು..
ಆಗ ಸೋಲು ಸಮಾಧಾನದಿಂದ ನನಗೆ ಉತ್ತರಿಸಲು ಶುರುಮಾಡಿತು.
ನಾನು ನಿನಗೆ ಅಷ್ಟೊಂದು ಭಾರವಾದನಾ, ನನ್ನ ಜೊತೆಗಿರಲು ನಿನಗೆ ಇಷ್ಟವಿಲ್ಲವಾ,ನಾನು ಅಷ್ಟು ನತದೃಷ್ಟಳಾ/ನಾ, ಯಾರೂ ಸಹ ನನ್ನನ್ನು ಇಷ್ಟಪಡುವುದಿಲ್ಲ.
ಯಾಕೆ ನಾನು ಏನು ತಪ್ಪು ಮಾಡಿದ್ದೇನೆ, ಯಾರ ಜೊತೆಯೂ ನಾನು ಇರಬಾರದೇ, ಯಾರ ಜೊತೆಯೂ,ಗೆಳೆತನ,ಪ್ರೀತಿಯಿಂದ ಇರಬಾರದೇ, ಎಲ್ಲರೂ ಏಕೆ ನನ್ನನ್ನು ದ್ವೇಷಿಸುವರು ಹೇಳಿಬಿಡು ಒಮ್ಮೆ.
ನೀನು ಸಹ ಎಲ್ಲರಂತೆ ನನ್ನನ್ನು ದೂರ ಮಾಡುವೆಯಾ?
ನಾನು ನಿನಗೆ ನಿನ್ನ ಇರುವಿಕೆಯ ಗುರುತು ತೋರಿಸಿಕೊಟ್ಟೆ,
ಈ ಸಮಾಜದಲ್ಲಿ ನಿನ್ನವರು ಯಾರು,
ನಿನ್ನನ್ನು ಯಾರು ಹೇಗೆ ನೋಡುತ್ತಾರೆ,
ನಿನ್ನ ಜೊತೆ ಗೆಲುವಿದ್ದಾಗ ಎಲ್ಲರು ನಿನ್ನನ್ನೇ ಬಯಸುತ್ತಿದ್ದರಲ್ಲವೇ,
ಎಲ್ಲರೂ ನಿನ್ನ ಆಗಮನಕ್ಕಾಗಿ ಕಾಯುತ್ತಿದ್ದರಲ್ಲವೇ,
ಎಲ್ಲರೂ ನಿನ್ನ ಪ್ರೀತಿಯಿಂದ ಮಾತನಾಡಿಸುತ್ತಿದ್ದರಲ್ಲವೇ,
ಎಲ್ಲರೂ ನಿನ್ನ ಬಗ್ಗೆ ಹೊಗಳುವುದೇನು ಅದನ್ನು ನನ್ನಿಂದ ಹೇಳಲು ಸಾಧ್ಯವಿಲ್ಲ ನೀನೇ ನೋಡಿದ್ದಿಯಲ್ಲವೇ.…
ಈಗ ನಾನು ಬಂದಿದ್ದೇನೆ ನಿನ್ನ ಬದುಕಲ್ಲಿ ಮೊದಲಿನಂತೆ ನಿನ್ನವರ್ಯಾರೂ ಈಗ ನಿನ್ನ ನೆನೆಯುವುದೂ ಇಲ್ಲ,
ಯಾವ ಜನರು ನಿನ್ನನ್ನು ಹೊಗಳುತ್ತಿದ್ದರೋ ಅದೇ ಜನರು ನಿನ್ನ ಬಗ್ಗೆ ಅದೆಷ್ಟು ಕೇವಲವಾಗಿ ,ಕೀಳಾಗಿ ಮಾತಾಡಿದ್ದು ನಿನ್ನ ಕಿವಿಯಾರೇ ಕೇಳಿದ್ದಿಯಲ್ಲವೇ…
ಈಗ ನಿನ್ನ ಪ್ರೀತಿಯನ್ನು ಬಯಸುವುದೂ ಇಲ್ಲ,ನಿನ್ನನ್ನು ಯಾರೂ ಕಾಯುವವರೂ ಇಲ್ಲ,
ನೀನು ಇದ್ದೀಯಾ, ಸತ್ತೀದ್ದೀಯಾ ಅಂತಾ ಸಹ ಒಂದು ಮಾತು ಯಾರಾದರು ಕೇಳಿದರೆ ನನ್ನನ್ನು ನಾನೇ ಸಾಯಿಸಿಕೊಳ್ಳುವೆ.
ಈಗ ಮಾತಾಡು ನಾನು ನಿನಗೆ ಜೀವನ ಪಾಠ,ಅನುಭವ ನೀಡಲು ನಿನ್ನ ಜೊತೆಗಿದ್ದೇನೆ, ಈ ಸಮಾಜದ ಮುಖವಾಡಗಳು ಹೇಗಿವೆ ಎಂದು ನಿನಗೆ ಅರಿವು ನೀಡಲು ನಿನ್ನ ಬಂಧ ಬೆಳಿಸಿರುವೆ..
ಬಹುತೇಕ ,ಬಹುಪಾಲು ಜನರು ಸೋತಾಗ ಎಲ್ಲವೂ ಮುಗಿದು ಹೋಯಿತು,ಪ್ರಪಂಚವೇ ಮುಳುಗಿ ಹೋಯಿತು,ನನ್ನ ಜೀವನ ಇಲ್ಲಿಗೇ ಅಂತ್ಯವಾಯಿತು ಎಂದು ತಮ್ಮ ಜೀವವನ್ನೇ ತೆಗೆದುಕೊಳ್ಳುತ್ತಾರೆ.
ಆತ್ಮಹತ್ಯೆಗೂ ಕಾರಣಗಳು ಕಠೋರವಾಗಿಯೇ ಇರುತ್ತವೆ.
ಒಬ್ಬ ವ್ಯಕ್ತಿ ಸೋತಾಗ ಅವನ ಜೊತೆ ಯಾರೂ ಇರುವುದಿಲ್ಲ,
ಆತನನ್ನು ಮಾತನಾಡಿಸುವುದೂ ಇಲ್ಲ,ಮನೆಯವರನ್ನೂ ಸೇರಿಸಿ,
ಆತನಿಗೆ ನಿಂದಿಸಿ,ಅವಮಾನಿಸಿ,
ಯಾವುದಕ್ಕೂ ಪ್ರಯೋಜನವಿಲ್ಲದವನು/ಳು ಮತ್ತೆ ನಿನ್ನಿಂದ ಅಥವಾ ನಿನ್ನ ಕೈಯ್ಯಿಂದ ಏನೂ ಆಗುವುದಿಲ್ಲ, ಇದ್ದರೂ ಅಷ್ಟೇ ಭೂಮಿಗೆ ಭಾರ ಕೂಳಿಗೆ ದಂಡ, ಎಲ್ಲಾದರೂ ದನ ಮೇಯಿಸುವುದಕ್ಕೆ ಹೋಗು ಎಂಬಿತ್ಯಾದಿ ಮನೆಯವರ,ಊರಿನವರ,ಗೆಳೆಯ/ಗೆಳತಿಯರ, ನೆಂಟರಿಷ್ಟರ ಕಠೋರ ಮಾತುಗಳು ಚುಚ್ಚಿ ಕೊಲ್ಲುವಂತೆ ಮಾಡುತ್ತವೆ.
ಇದರಿಂದ ಸೋತ ಮನಸ್ಸು ಇನಷ್ಟು ದು:ಖಕ್ಕೆ ಒಳಗಾಗುವುದು ಸಹಜ,
ಹೀಗಾಗಿಯೇ ಹಿಡಿತಕ್ಕೆ ಅಥವಾ ತನ್ನ ನಿಯಂತ್ರಣದಲ್ಲಿರಿಸಲಾಗದ ಮನಸ್ಸು ಕೊನೆಯ ನಿರ್ಧಾರಕ್ಕೆ ಅಣಿಯಾಗುತ್ತದೆ.
ಅದುವೆ ಸೋಲು ಸಾವಿನಲ್ಲಿ ಅಂತ್ಯ ಕಾಣುವುದು ಸಹಜವಾಗಿ ಕಂಡುಬರುತ್ತದೆ.
ಇದು ನಿತ್ಯ ಬದುಕಿನಲ್ಲಿ ಸೋತವರ ಕೊನೆಯ ಅಸ್ತ್ರ.
ಇಲ್ಲಿ ಕೆಲಸಕ್ಕೆ ಬಂದ ಮೇಲೆ ಕೆಲಸ ಕಲಿಯುವವರೆಗೆ ಅದು ನಮ್ಮ ಕೈಗೆ ಹಿಡಿಯುವವರೆಗೆ ಅದೆಷ್ಟು ತಪ್ಪು ಮಾಡಿದ್ದೇವೆ. ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಕೆಲಸಗಳನ್ನು ಸರಿಯಾಗಿ ಕಲಿಯಲಿಲ್ಲವೇ ಆ ಕೆಲಸವನ್ನು ಸಲೀಸಾಗಿ ಮಾಡುತ್ತಿಲ್ಲವೇ ,ನೀವೇ ಹೇಳಿ…
ಗೆಲ್ಲುವುದಕ್ಕೆ ಬಂದಮೇಲೆ ಸೋಲನ್ನು ಸ್ವೀಕರಿಸಿ ಅದರ ಜೊತೆಯಲ್ಲಿಯೇ ಕುಳಿತು ಊಟ ಮಾಡಿ ಅರಗಿಸಿಕೊಂಡು ಗಟ್ಟಿಯಾಗಿ ಮತ್ತೆ ಗುಡುಗಿನಂತೆ ಆರ್ಭಟಿಸುತ್ತಾ ಎದ್ದು ನಿಂತರೆ ಮಿಂಚಿನ ವೇಗದ ಓಟ ನಿಮ್ಮದಾಗಿರುತ್ತದೆ.
ಅದೂ ಸಹ ಸ್ವಲ್ಪ ಸಮಯ ಮತ್ತದೇ ತಿಳಿಯಾಯಿತಲ್ಲವೇ ನಿಮ್ಮ ಗುಡುಗುಡಿಸುವ ಗೆಲುವಿನ ಧ್ವನಿ.
ಅಲ್ಲಿಯೂ ಸೋಲು ಬಂದು ಆಲಂಗಿಸಿತೇ…
ಒಮ್ಮೆ ಅಪ್ಪಿಕೊಂಡುಬಿಡಿ ಆದಷ್ಟು ಸಮಾಧಾನವಾಗುವವರೆಗೂ ಅತ್ತು ಬಿಡಿ, ಸೋಲಿನ ಮೇಲೆ ತಲೆಯೊರಗಿಸಿ ಹಾಯಾಗಿ ಮಾತನಾಡಿ ಮತ್ತೆ ಆ ಸೋಲು ನಿಮ್ಮನ್ನು ಬಿರುಗಾಳಿಯಂತೆ ಎಬ್ಬಿಸಿ ಬಿಡುತ್ತದೆ. ನೋಡಿ ನಿಮ್ಮದೇ ಹಾವಳಿ,ನಿಮ್ಮದೇ ದೀಪಾವಳಿ ಗೆಲುವಿನ ದೀಪ ಬೆಳಗಿಸಿ.
ಆ ದೀಪ ಬೆಳಗಿಸಲು ಅದೆಷ್ಟು ದಿನ ಕತ್ತಲೆಯಲ್ಲಿ ಬದುಕಿದ್ದೀರಿ ಎಂದು ಗೆಲುವಿಗೆ ಪ್ರಶ್ನಿಸಿ…
ಗೆಲುವು ಪಡೆದಿದ್ದು ಆಯಿತು ಎಲ್ಲವೂ ಮೊದಲಿನಂತೆ, ದೂರವಾದವರೆಲ್ಲ ಹತ್ತಿರಕ್ಕೆ ಬರಲಾರಂಭಿಸಿದರು.
ಬೇಡವೆಂದರೂ ಮತ್ತೇ ಬಯಕೆಗಳು,ಆಸೆಗಳು ಚಿಗುರೊಡೆಯಲು ಪ್ರಾರಂಭಿಸಿತು,
ಸೋಲಿನಲ್ಲಿ ಪಡೆದ ಸು:ಖ ಗೆಲುವಿನಲ್ಲಿ ಪಡೆಯಲಾಗಲಿಲ್ಲ.
ಸೋಲಿನಲ್ಲಿ ಯಾವಾಗಲೂ ನನ್ನ ಜೊತೆಗಿದ್ದು ಸಮಾಧಾನ ಪಡಿಸುತ್ತಿದ್ದ ನನ್ನ ಅಳು ಎಂಬ ಆಪ್ತಮಿತ್ರನನ್ನು ಕಳೆದುಕೊಂಡೆ, ಸೋಲಿನಲ್ಲಿ ನಾನು
ನನ್ನಂತೆ ಇರುತ್ತಿದ್ದೆ, ಯಾರ ಜೊತೆ ಹೇಗೆ, ಎಷ್ಟು ಬೇರೆಯ ಬೇಕೆಂದು ಚೆನ್ನಾಗಿ ಹೇಳಿಕೊಟ್ಟಿತ್ತು ಆ ನನ್ನ ಸೋಲು. ಗೆಲುವಿನಲ್ಲಿ ನನ್ನಿಷ್ಟದಂತೆ ಏನೂ ಇಲ್ಲ…
ಗೆಲುವು ನನ್ನನ್ನು ಇತರರ ಸೇವಕನನ್ನಾಗಿಸಿದೆ,
ಸೋಲು ನನ್ನನ್ನು ರಾಜನಂತೆ ನೋಡಿಕೊಂಡಿತು…
ಸತತ ಸೋಲುಗಳೇ ನನ್ನನ್ನು ಅಪ್ಪಿಕೊಂಡಾಗ ಸಿಕ್ಕ ಪ್ರೀತಿ,ಸು:ಖ, ಗೆಲುವಿನ ಮುತ್ತು ಸಿಕ್ಕಾಗಲೂ ಹುಡುಕಿ ತಡಕಾಡಿದರೂ ಸು:ಖ ಸಿಗಲಿಲ್ಲ.…
ಓ ನನ್ನ ಆತ್ಮೀಯ ಸೋಲೇ,
ಬದುಕಲು ಅನುಭವ ಕಲಿಸಿದ ಓ ನನ್ನ ಸೋಲೇ,
ಯಾವುದರಲ್ಲಿ, ಯಾರಲ್ಲಿ ಪ್ರೀತಿ, ವಿಶ್ವಾಸ,ನಂಬಿಕೆ ಇಡಬೇಕೆಂದು ಹೇಳಿ ಕೊಟ್ಟ ಓ ಸೋಲೇ ನಿನಗೆ ನನ್ನದೊಂದು ಸಲಾಂ…
ಸೋಲು ಹೇಳುತ್ತೆ ನನ್ನನ್ನು ಸಾವಿನಲ್ಲಿ ಕೊನೆಯಾಗಿಸಬೇಡ,
ನಾನು ನಿನ್ನ ಜೊತೆಗಿರುವತನಕ ಧೈರ್ಯದಿಂದ ಹೋರಾಡು ನಾನು ಶ್ರೀಕೃಷ್ಣನಂತೆ ಎಂದಿಗೂ ನಿನ್ನ ಪರವಾಗಿಯೇ ಇರುತ್ತೇನೆ, ಗುರಿಯೆಂಬ ಗೆಲುವನ್ನು ಗೆದ್ದು ಜಯಶಾಲಿಯಾಗೋಣ, ಎಲ್ಲರೂ ಸೋಲನ್ನು ಪ್ರೀತಿಸುವಂತೆ ಮಾಡಿ ಅನುಭವ ನೀಡಿ ಸೋಲಿನ ಪತಾಕೆಯನ್ನು ಎತ್ತರಕ್ಕೆ ಏರಿಸೋಣ…
ನನಗಂತು ಸೋಲುಗಳೇ ಸವಾಲು,
ಸೋತಾಗ ಅನುಭವಗಳದ್ದೇ ಸರತಿ ಸಾಲು,
ಸೋತಾಗ ಕಂಗಾಲು ಆಗದೇ ಮನಸ್ಸನ್ನು ಹಿಡಿತದಲ್ಲಿರಿಸಲು,
ಭಯವ ಬಿಟ್ಟು ಹಿಂಜರಿಯದೇ ಮತ್ತೆ ಧೈರ್ಯದಿಂದ ಪ್ರಯತ್ನಿಸಿ ಸತ್ಯ, ಒಳ್ಳೆಯತನ,ಪ್ರಾಮಾಣಿಕತೆಯಿಂದ ಮುಂದುವರೆದರೆ ಗೆದ್ದೇ ಗೆಲ್ಲುವೆ,
ನಿನ್ನ ತನ ತೋರುವೆ…
ಸೋತಾಗಲೇ ಅನುಭವವು,
ಸೋತು-ಸೋತು ಸುತ್ತು ಮತ್ತೆ ಹುಟ್ಟಿ ಬದುಕುವೆವು,
ಸೋತಾಗಲೇ ಆತ್ಮಸಾಕ್ಷಿಗೆ ದು:ಖವು,
ಸೋತಾಗಲೇ ಬರುವುದು ಗೆಲ್ಲಬೇಕೆಂಬ ಉತ್ಸಾಹವು…
ಒಮ್ಮೆಲೆ ಗೆದ್ದರೆ ಇವ ನಮ್ಮವ,
ಸೋತಾಗಲೇ ಯಾರಿವ,
ಸೋತು-ಸೋತು ಗೆದ್ದವನೇ ಇತಿಹಾಸ ಸೃಷ್ಪಿಸುವವ,
ಗೆದ್ದವರಿಗೆ ಹಾರ-ತುರಾಯಿ ಸನ್ಮಾನ,
ಸೋತವನಿಗೆ ಅವಮಾನ-ಅಪಮಾನ,
ಇದೇ ಸೋತವನು ಮತ್ತೆ ಗೆದ್ದಾಗ ಪುಸ್ತಕದ ಪುಟಗಳಲಿ ಅಚ್ಚಾಗಿ ಉಳಿಯುವಂತೆ ಅಕ್ಷರಗಳಿಂದ ಗುಣಗಾನ,
ಇಂತಹ ಸೋತು ಗೆದ್ದವರೇ ನಮ್ಮಂತವರಲ್ಲಿ ಹುಟ್ಟಿಸುವರು ಅಸಾಧ್ಯವಾದುದ್ದನ್ನು ಸಾಧ್ಯವಾಗಿಸುವ ಕನಸುಗಳನ್ನ…
“ಸೋತು ಗೆದ್ದವರು ಇತಿಹಾಸದ ಪುಟಗಳಲ್ಲಿ ಎಂದಿಗೂ ಅಮರರು”…
ಶಾಂತಾರಾಮ ಹೊಸ್ಕೆರೆ,
ತಾ-ಶಿರಸಿ, ಉತ್ತರ ಕನ್ನಡ…
7676106237
ಬರಹಗಾರ...