Do you have a passion for writing?Join Ayra as a Writertoday and start earning.

ಓ ನನ್ನ ಕಣ್ಣೇ ಓ ನನ್ನ ಕಣ್ಣೇ...

ಕಣ್ಣುಗಳ ಕಣ್ಣೋಟಕ್ಕೊಂದು ಕನ್ನಡಿ!

ProfileImg
23 Mar '24
8 min read


image

      ಕಣ್ಣುಗಳು ನಮ್ಮ ದೇಹದ ಪ್ರಧಾನ ಅಂಗಗಳು. ನಮ್ಮ ಸುತ್ತಮುತ್ತಲಿನ ಪರಿಸರದ ಬಗೆಗೆ ನಮಗೆ ಮೊದಲ ಅರಿವು ಉಂಟಾಗುವುದೇ ಕಣ್ಣುಗಳಿಂದ ಎಂದರೆ ತಪ್ಪಾಗಲಾರದು. ಮುಖಕ್ಕೆ ಕಣ್ಣುಗಳೇ ಅಂದ ಎನ್ನುತ್ತಾರೆ. ಆದರೆ ಅಂದಕ್ಕಿಂತಲೂ ಕಣ್ಣುಗಳ ಬಹುಮುಖ್ಯ ಕೆಲಸವೆಂದರೆ ಸುತ್ತಲಿನ ಜಗತ್ತನ್ನು ನಮಗೆ ತೋರಿಸುವುದು. ನಮ್ಮ ಕಣ್ಣುಗಳು ನಮಗೆ ಎಷ್ಟೆಲ್ಲ ತೋರಿಸುತ್ತವೆ! ನೀಲಿ ಆಕಾಶ, ಇಡೀ ಆಗಸವನ್ನು ಕಿತ್ತಳೆ ಬಣ್ಣಕ್ಕೆ ತಿರುಗಿಸುವ ಸೂರ್ಯೋದಯ ಹಾಗೂ ಸೂರ್ಯಾಸ್ತ, ಏಳು ಬಣ್ಣಗಳ ಸಂಯೋಜನೆಯ ಕಾಮನಬಿಲ್ಲು, ಬಣ್ಣಬಣ್ಣದ ಚಿಟ್ಟೆ, ಕಾಮನಬಿಲ್ಲು, ಹಚ್ಚಹಸುರಿನ ಕಾಡುಗಳು ಹೀಗೆ ನಮ್ಮ ಕಣ್ಣುಗಳು ನಮಗೆ ಏನೆಲ್ಲ ತೋರಿಸುತ್ತವೆ ಎಂಬುದನ್ನು ನೆನಪಿಸಿಕೊಂಡರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಹಾಗಾದರೆ ನಾವು ಜಗತ್ತಿನ ಅತ್ಯಂತ ಪರಿಪೂರ್ಣವಾದ ದೃಷ್ಟಿಯನ್ನು ಹೊಂದಿದ್ದೇವೆಯೇ? ಈ ಪ್ರಶ್ನೆಗೆ ಉತ್ತರ ಹೌದು ಮತ್ತು ಅಲ್ಲ! ಹಾಗಾದರೆ ಕಣ್ಣುಗಳ ಬಗ್ಗೆ ನಿಮಗೆಷ್ಟು ಗೊತ್ತು? ಜೀವಜಗತ್ತಿನಲ್ಲಿ ಕಣ್ಣುಗಳ ಪ್ರಾಮುಖ್ಯತೆ ಏನು? 

       ಕಣ್ಣುಗಳು ಬಹುತೇಕ ಜೀವಿಗಳ ಪ್ರಮುಖ ಜ್ಞಾನೇಂದ್ರಿಯವಾಗಿದ್ದರೂ ಕಣ್ಣುಗಳ ಹಂಗೇ ಇಲ್ಲದೆ ಕಿವಿ, ಮೂಗು ಅಥವಾ ಬೇರೆ ಇಂದ್ರಿಯಗಳ ನೆರವಿನಿಂದಲೇ ನಮಗಿಂತ ಸಮರ್ಥವಾಗಿ ಬದುಕುತ್ತಿರುವ ಜೀವಿಗಳ ಪಟ್ಟಿ ದೊಡ್ಡದಿದೆ. ಆದರೆ ಸದ್ಯಕ್ಕೆ ನಾವು ಕಣ್ಣುಗಳ ಬಗೆಗೆ ಮಾತ್ರ ನಮ್ಮ ಗಮನವನ್ನು ಕೇಂದ್ರೀಕರಿಸೋಣ. ಕಣ್ಣಿನ ಕಾರ್ಯವೈಖರಿಯನ್ನು ನಾವು ಕ್ಯಾಮರಾದ ಕಾರ್ಯವೈಖರಿಗೆ ಹೋಲಿಸಬಹುದು. ಎದುರಿನಲ್ಲಿರುವ ವಸ್ತುವಿನ ಚಿತ್ರವನ್ನು ಸೆರೆಹಿಡಿದು ನಮಗೆ ತೋರಿಸುವುದು ಕಣ್ಣುಗಳ ಕೆಲಸ. ಜೀವಜಗತ್ತಿನಲ್ಲಿ ನಮಗಿಂತಲೂ ತೀಕ್ಷ್ಣವಾದ ದೃಷ್ಟಿಶಕ್ತಿ ಹೊಂದಿರುವ ಜೀವಿಗಳು ಸಾಕಷ್ಟಿವೆ. ಆದರೆ ಕಣ್ಣುಗಳೇ ಇಲ್ಲದ ಜೀವಿಗಳು, ಬರೇ ಬೆಳಕು ಮತ್ತು ಕತ್ತಲಿನ ವ್ಯತ್ಯಾಸವನ್ನಷ್ಟೇ ತಿಳಿಯಬಲ್ಲ ಜೀವಿಗಳು, ಅತ್ಯಂತ ಮಸುಕಾಗಿ, ಕೆಲವೇ ಮೀಟರ್‌ಗಳಷ್ಟು ದೂರ ಮಾತ್ರ ನೋಡಬಲ್ಲ ಜೀವಿಗಳು, ನಮ್ಮಷ್ಟೇ ಸ್ಪಷ್ಟವಾಗಿ ನೋಡಬಲ್ಲವಾದರೂ ಕೇವಲ ಕಪ್ಪು ಬಿಳುಪನ್ನಷ್ಟೇ ನೋಡಬಲ್ಲ ಜೀವಿಗಳು ಹಾಗೂ ನಮ್ಮ ಕಣ್ಣಿಗೂ ಕಾಣದ ಬಣ್ಣಗಳನ್ನು ನೋಡಬಲ್ಲ ಸಾಮರ್ಥ್ಯ ಇರುವ ಜೀವಿಗಳು ಸಹ ಜಗತ್ತಿನಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ?

       ಕೆಲವು ಕೀಟಗಳು ಸಂಪೂರ್ಣ ಕುರುಡಾಗಿರುತ್ತವೆ. ಉದಾಹರಣೆಗೆ ಗೆದ್ದಲುಗಳು. ಅವುಗಳಿಗೆ ದೃಷ್ಟಿಶಕ್ತಿ ಕಿಂಚಿತ್ತೂ ಇಲ್ಲ. ಅವು ಜಗತ್ತನ್ನು ತಿಳಿಯುವ ರೀತಿಯೇ ಬೇರೆ. ಸದಾಕಾಲ ಹುತ್ತದ ಒಳಗೆ ಕತ್ತಲ ಲೋಕದಲ್ಲೇ ಬದುಕುವುದರಿಂದ ಅವಕ್ಕೆ ಕಣ್ಣುಗಳ ಅಗತ್ಯವೂ ಇಲ್ಲ. ಆದರೆ ಬೇರೆ ಕೆಲವು ಕೀಟಗಳಿಗೆ ಕಣ್ಣುಗಳು ಅತ್ಯಂತ ಅಗತ್ಯ. ಆದರೆ ಕೀಟಗಳ ವಿಷಯದಲ್ಲಿ ಒಂದು ಸಮಸ್ಯೆ ಇದೆ. ಅದೇನೆಂದರೆ ಯಾವುದೇ ಕೀಟವಾದರೂ ಅದರ ಗಾತ್ರ ಸಸ್ತನಿಗಳಿಗೆ ಹೋಲಿಸಿದರೆ ತುಂಬ ಚಿಕ್ಕದು. ಕಣ್ಣುಗಳ ವಿಷಯಕ್ಕೆ ಬಂದರೆ ಹೊರಪ್ರಪಂಚದ ಸ್ಪಷ್ಟಬಿಂಬ ಮೂಡಬೇಕಾದರೆ ಕಣ್ಣುಗಳ ಗಾತ್ರ ಒಂದು ನಿಗದಿತ ಅಳತೆಯಲ್ಲಿರಲೇಬೇಕು. ಏಕೆಂದರೆ ಬಿಂಬಗಳು ಮೂಡಲು ಜಾಗ ಬೇಕಲ್ಲ? ಆದರೆ ಕೀಟಗಳು ಎಷ್ಟೇ ದೊಡ್ಡದಿದ್ದರೂ ನಮ್ಮ ಕಣ್ಣುಗಳಿಗಿಂತ ಇಡೀ ಕೀಟವೇ ಚಿಕ್ಕದು, ಹಾಗಿರುವಾಗ ಅವುಗಳ ಕಣ್ಣುಗಳು ಇನ್ನೂ ಚಿಕ್ಕದಾಗಿರುವುದು ಸಹಜ ಅಲ್ಲವೇ? ತೀರಾ ಚಿಕ್ಕ ಕಣ್ಣಿನಲ್ಲಿ ಸ್ಪಷ್ಟವಾದ ಬಿಂಬ ಮೂಡಲು ಹೇಗೆ ಸಾಧ್ಯ? ಹಾಗಾಗಿ ಕೀಟಗಳ ದೃಷ್ಟಿಶಕ್ತಿ ಎಷ್ಟೇ ಅತ್ಯುತ್ತಮವಾಗಿದ್ದರೂ ನಮ್ಮ ಕಣ್ಣುಗಳಲ್ಲಿ ಮೂಡುವಂಥ ಬಿಂಬ ಅವುಗಳ ಕಣ್ಣಲ್ಲಿ ಮೂಡಲು ಸಾಧ್ಯವಿಲ್ಲ ಎಂಬುದು ಸತ್ಯ. ಕೀಟಗಳ ಕಣ್ಣುಗಳು ನಮ್ಮ ಕಣ್ಣುಗಳಂತೆ ಒಂದೇ ಮಸೂರದಿಂದ ಆಗಿರುವಂಥದ್ದಲ್ಲ. ಸಾವಿರಾರು ಮಸೂರಗಳಿಂದಾದ ಈ ಕಣ್ಣುಗಳನ್ನು ಸಂಕೀರ್ಣ ಕಣ್ಣು (ಕಾಂಪೌಂಡ್‌ ಐ) ಎನ್ನುತ್ತಾರೆ. ಅದರಲ್ಲಿ ಮೂಡುವ ಬಿಂಬಗಳು ನಮ್ಮ ಕಣ್ಣುಗಳಲ್ಲಿ ಮೂಡುವ ಬಿಂಬಗಳಂತೆ ಇರುವುದಿಲ್ಲ. ಎಲ್ಲ ಮಸೂರಗಳಲ್ಲಿ ಮೂಡುವ ಬಿಂಬಗಳ ಕೊಲಾಜ್‌ನಂತೆ ಕಾಣುತ್ತದೆ. ಅಂದರೆ ನಾವು ತಂತಿಯ ಜಾಲರಿಯೊಂದರ ಮೂಲಕ ನೋಡಿದರೆ ಅದರ ಹಿಂದಿನ ವಸ್ತುಗಳು ಹೇಗೆ ಕಾಣಬಹುದೋ ಹಾಗೆ ಕಾಣಬಹುದು ಎಂಬುದು ಒಂದು ಊಹೆ. ನೊಣ, ಸೂರ್ಯನ ಕುದುರೆ ಮತ್ತು ಏರೋಪ್ಲೇನ್‌ಚಿಟ್ಟೆಗಳು ಕೀಟಲೋಕದಲ್ಲಿ ಅತ್ಯಂತ ಚುರುಕಾದ ದೃಷ್ಟಿಶಕ್ತಿ ಹೊಂದಿರುವ ಕೀಟಗಳೆಂದು ಪ್ರಸಿದ್ಧವಾಗಿವೆ. ಮನೆಯ ನೊಣಗಳನ್ನು ನೀವು ಯಾವತ್ತಾದರೂ ಹಿಡಿಯಲು ಪ್ರಯತ್ನಿಸಿದ್ದರೆ ಇದು ನಿಮ್ಮ ಅನುಭವಕ್ಕೆ ಬಂದಿರುತ್ತದೆ. ನೀವೆಷ್ಟೇ ಎಚ್ಚರಿಕೆಯಿಂದ ಅವುಗಳನ್ನು ಸಮೀಪಿಸಿದ್ದರೂ ಅದು ನೀವು ಕೈಬೀಸುವಷ್ಟರಲ್ಲಿ ಹಾರಿರುತ್ತದೆ. ಇನ್ನು ಸೂರ್ಯನ ಕುದುರೆ ಮತ್ತು ಏರೋಪ್ಲೇನ್‌ಚಿಟ್ಟೆಗಳು ಬೇಟೆಗಾರರಾದ್ದರಿಂದ ಅವಕ್ಕೆ ತೀಕ್ಷ್ಣ ದೃಷ್ಟಿಶಕ್ತಿ ಅಗತ್ಯ. ಆದರೆ ಇರುವೆಗಳಿಗೆ ಅಷ್ಟೊಂದು ಉತ್ತಮ ದೃಷ್ಟಿಶಕ್ತಿ ಇಲ್ಲ. ಅವಕ್ಕೆ ಮಸುಕಾದ ಪ್ರಪಂಚವಷ್ಟೇ ಕಾಣುತ್ತದೆ. ಅಲ್ಲದೆ ಅವುಗಳಿಗೆ ವರ್ಣದೃಷ್ಟಿ ಕೂಡ ಇಲ್ಲ. ಹಾಗಾಗಿ ಅವು ಜಗತ್ತಿನ ಬಗ್ಗೆ ತಿಳಿಯಲು ರಾಸಾಯನಿಕಗಳ ಮೊರೆ ಹೋಗುತ್ತವೆ. ಆದರೆ ಸೂರ್ಯನ ಕುದುರೆ ಮತ್ತು ಜೇನುಹುಳಗಳು ನಾವು ಕಾಣಲಾರದ ಅತಿನೇರಳೆ ಕಿರಣಗಳನ್ನು ಸಹ ನೋಡಬಲ್ಲವು. ಹಾಗಾಗಿ ಅವಕ್ಕೆ ಜಗತ್ತು ನಮಗಿಂತ ರಂಗುರಂಗಾಗಿ ಕಾಣಬಹುದು. ಆದರೆ ಚಿಕ್ಕಗಾತ್ರದ ಕಣ್ಣುಗಳ ಕಾರಣ ಬಿಂಬಗಳು ನಮಗೆ ಕಂಡಷ್ಟು ಸ್ಪಷ್ಟವಾಗಿಯಂತೂ ಇರುವುದಿಲ್ಲ ಎಂಬುದು ಅಷ್ಟೇ ನಿಜ. 

       ಅಕಶೇರುಕಗಳಲ್ಲಿ ಕಣ್ಣುಗಳ ರಚನೆ ವಿಭಿನ್ನವಾಗಿರುತ್ತದೆ. ಕೀಟಗಳ ಪ್ರಮುಖ ಶತ್ರುಗಳಾದ ಜೇಡಗಳ ವಿಷಯಕ್ಕೆ ಬಂದರೆ ಅವಕ್ಕೆ ಎಂಟು ಕಣ್ಣುಗಳಿವೆಯಾದರೂ ಜಂಪಿಂಗ್‌ ಸ್ಪೈಡರ್‌ ಎಂಬ ರೀತಿಯ ಕೆಲವು ಜೇಡಗಳ ಹೊರತು ಬೇರೆಲ್ಲ ಜೇಡಗಳ ದೃಷ್ಟಿಶಕ್ತಿ ಎಷ್ಟು ಮಂದವೆಂದರೆ ಅವು ಕೇವಲ ನೆರಳು-ಬೆಳಕಿನ ವ್ಯತ್ಯಾಸವನ್ನಷ್ಟೇ ತಿಳಿಯಬಲ್ಲವೇ ಹೊರತು ಯಾವುದೇ ಬೇಟೆಯನ್ನೂ ನೋಡಲು ಸಾಧ್ಯವಿಲ್ಲ. ಅವು ತಮ್ಮ ಬಲೆಯನ್ನು ಮುಟ್ಟಿ ಕೀಟಗಳು ಉಂಟುಮಾಡುವ ಅತಿಕ್ಷೀಣವಾದ ಕಂಪನಗಳನ್ನೂ ಗುರುತಿಸಿ ಬೇಟೆಯ ಮೇಲೆರಗಿ ಹಿಡಿಯುತ್ತವೆ. ಆದರೆ ಜಂಪಿಂಗ್‌ ಸ್ಪೈಡರ್‌ಗಳು ಮಾತ್ರ ಬಲಿಯನ್ನು ನೋಡಿ ಅವುಗಳ ಮೇಲೆರಗಿ ಹಿಡಿಯಬೇಕಾಗಿರುವುದರಿಂದ ಅವುಗಳ ದೃಷ್ಟಿ ಬೇರೆ ಜೇಡಗಳಿಗಿಂತ ಚುರುಕಾಗಿರುತ್ತದೆ.

       ಕಶೇರುಕಗಳ ಕಣ್ಣಿನ ವಿಷಯಕ್ಕೆ ಬಂದರೆ ಅವು ಕೀಟ, ಜೇಡಗಳ ಕಣ್ಣುಗಳಿಗಿಂತ ಬಹಳ ವಿಭಿನ್ನ. ಮಾನವನ ಕಣ್ಣುಗಳು ಪ್ರಕೃತಿಯಲ್ಲಿರುವ ಅತ್ಯಂತ ಸಮರ್ಥವಾದ ಕಣ್ಣುಗಳ ಸಾಲಿನಲ್ಲಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ನಮ್ಮ ಮುಖದಲ್ಲಿ ಎರಡೂ ಕಣ್ಣುಗಳು ಎದುರಿನಲ್ಲಿವೆ. ನಮಗೆ ಮಾತ್ರವಲ್ಲ, ಎಲ್ಲ ಪ್ರೈಮೇಟ್‌ಗಳಿಗೂ ಇದೇ ರೀತಿ ಇದೆ. ಅಂದರೆ ಮಂಗಗಳು, ವಾನರಗಳು, ಲೀಮರ್‌ಗಳು ಇತ್ಯಾದಿಗಳಿಗೆಲ್ಲ ಕಣ್ಣುಗಳೆರಡೂ ಮುಖದ ಮುಂಭಾಗದಲ್ಲೇ ಇವೆ. ಇದಕ್ಕೆ ಕಾರಣ ಅವುಗಳ ಜೀವನಶೈಲಿ. ಬಹುತೇಕ ಎಲ್ಲ ಪ್ರೈಮೇಟುಗಳೂ ಮರಗಳ ಮೇಲೆ ವಾಸಿಸುತ್ತವೆ. ಕೊಂಬೆಯಿಂದ ಕೊಂಬೆಗೆ ಜಿಗಿಯುವುದು ಬಹುತೇಕ ಮಂಗಗಳ ಜೀವನಶೈಲಿ. ಆದರೆ ಇದು ಸಾಧ್ಯವಾಗಬೇಕಾದರೆ ದೂರವನ್ನು ಅತ್ಯಂತ ನಿಖರವಾಗಿ ಅಂದಾಜಿಸುವ ಚಾಕಚಕ್ಯತೆ ಬೇಕು. ಎರಡೂ ಕಣ್ಣುಗಳು ಎದುರಿನಲ್ಲಿದ್ದಾಗ ಮಾತ್ರ ಇದು ಸಾಧ್ಯವಿದೆ. ಎರಡೂ ಕಣ್ಣುಗಳಲ್ಲಿ ಮೂಡುವ ಬಿಂಬಗಳನ್ನು ಸಂಯೋಜಿಸಿ ನಮ್ಮ ಮೆದುಳು ಗ್ರಹಿಸುತ್ತದೆ. ಇದನ್ನೇ ದ್ವಿನೇತ್ರ ದೃಷ್ಟಿ (ಬೈನಾಕ್ಯುಲರ್‌ ವಿಷನ್‌) ಎನ್ನುತ್ತಾರೆ. ಆದರೆ ಸಸ್ಯಾಹಾರಿ ಪ್ರಾಣಿಗಳಾದ ದನ, ಜಿಂಕೆ, ಕುದುರೆ ಇತ್ಯಾದಿಗಳಿಗೆ ಕಣ್ಣುಗಳೆರಡೂ ಮುಖದ ಎರಡೂ ಬದಿಗಳಲ್ಲಿವೆ. ಇದೇಕೆ ಹೀಗೆ ಎಂದು ಯೋಚಿಸಿದ್ದೀರಾ? ಈ ಜೀವಿಗಳು ಕಾಡಿನಲ್ಲಿ ವಾಸಿಸುವಾಗ (ದನ ಮತ್ತು ಕುದುರೆಗಳು ಇಂದು ಸಾಕುಪ್ರಾಣಿಗಳಾಗಿರಬಹುದು, ಆದರೆ ಮನುಷ್ಯ ಅವುಗಳನ್ನು ಸಾಕಲು ಆರಂಭಿಸುವ ಮೊದಲು ಅವೂ ಕಾಡುಪ್ರಾಣಿಗಳೇ ಆಗಿದ್ದವಷ್ಟೆ) ತಲೆಬಗ್ಗಿಸಿ ಮೇಯುವಾಗ ಕಣ್ಣುಗಳು ಎದುರಿನಲ್ಲಿರುವುದಕ್ಕಿಂತ ಮುಖದ ಎರಡೂ ಬದಿಗಳಲ್ಲಿರುವುದೇ ಕ್ಷೇಮ, ಏಕೆಂದರೆ ಹಿಂದಿನಿಂದ ಬರುತ್ತಿರುವ ಹುಲಿ, ಚಿರತೆ ಇತ್ಯಾದಿ ಶತ್ರುಗಳ ಚಲನೆಯನ್ನು ಕರಾರುವಾಕ್ಕಾಗಿ ಗುರುತಿಸಲು ಇದರಿಂದ ಸಾಧ್ಯವಿದೆ. ಆದರೆ ಎರಡೂ ಕಣ್ಣುಗಳು ಎದುರಿನಲ್ಲಿದ್ದರೆ ಹಿಂದಿನಿಂದ ಬರುವ ಶತ್ರುಗಳನ್ನು ನೋಡಲಾಗುವುದಿಲ್ಲ. 

       ಕಣ್ಣುಗಳಲ್ಲಿ ಎರಡು ಬಗೆಯ ಕೋಶಗಳಿವೆ. ಶಂಕುಕೋಶಗಳು (ಕೋನ್‌ ಸೆಲ್ಸ್)‌ಹಾಗೂ ದಂಡಕೋಶಗಳು (ರಾಡ್‌ ಸೆಲ್ಸ್)‌ಎನ್ನುತ್ತಾರೆ. ಇವನ್ನು ಸಂಕ್ಷಿಪ್ತವಾಗಿ ಕೋನ್ಸ್‌ ಅಂಡ್‌ ರಾಡ್ಸ್‌ ಎಂದೂ ಕರೆಯುತ್ತಾರೆ. ಕೋನ್‌ಗಳು ಬಣ್ಣಗಳನ್ನು ಗುರುತಿಸುತ್ತವೆ ಹಾಗೂ ರಾಡ್‌ಗಳು ಬೆಳಕನ್ನು ಗುರುತಿಸುತ್ತವೆ. ಕೋನ್‌ಗಳಲ್ಲಿ ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳನ್ನು ಗುರುತಿಸುವ ಮೂರು ವಿಧದ ಫೋಟೋರಿಸೆಪ್ಟರ್‌ಗಳು (ವರ್ಣಗ್ರಾಹಿ ಕೋಶಗಳು) ಇವೆ. ಈ ಕೋಶಗಳ ನೆರವಿನಿಂದ ನಾವು ಅನೇಕ ಬಣ್ಣಗಳನ್ನು ಗುರುತಿಸಬಲ್ಲೆವು. ಆದರೆ ಎಲ್ಲ ಪ್ರಾಣಿಗಳಿಗೂ ಇಷ್ಟೆಲ್ಲ ಬಣ್ಣಗಳನ್ನು ನೋಡುವ ಭಾಗ್ಯ ಇಲ್ಲ. ಏಕೆಂದರೆ ಅವಕ್ಕೆ ಕೇವಲ ಎರಡು ಬಗೆಯ ವರ್ಣಗ್ರಾಹಿ ಕೋಶಗಳು ಮಾತ್ರ ಇವೆ. ಹಾಗಾಗಿ ಅವು ನಾವು ನೋಡಬಲ್ಲ ಎಲ್ಲ ಬಣ್ಣಗಳನ್ನೂ ನೋಡಲಾರವು. ಅವುಗಳ ಪ್ರಪಂಚ ಬಹುತೇಕ ಕಪ್ಪುಬಿಳುಪು ಆಗಿರುತ್ತದೆ. ನಾವು ನೋಡುವ ಗಾಢವಾದ ಕೆಂಪು ಮತ್ತು ಕಣ್ಣುಕುಕ್ಕುವ ಕಿತ್ತಳೆ ಬಣ್ಣಗಳು ಅವುಗಳ ಕಣ್ಣಿಗೆ ಬಹುತೇಕ ಕಪ್ಪು ಅಥವಾ ಬೂದುಬಣ್ಣಗಳಾಗಿ ಕಾಣುತ್ತವೆ. ಹುಲಿಗಳ ಮೈಮೇಲಿರುವ ಪಟ್ಟೆಗಳ ಉದ್ದೇಶ ಇದೇ. ಕಪ್ಪುಬಿಳುಪು ದೃಷ್ಟಿಯನ್ನಷ್ಟೇ ಹೊಂದಿರುವ ಜಿಂಕೆಗಳು ಹುಲಿಗಳು ಕಾಡಿನ ಹಿನ್ನೆಲೆಯಲ್ಲಿದ್ದಾಗ ಅವುಗಳ ಪಟ್ಟೆ ಮತ್ತು ಕೇಸರಿ ಬಣ್ಣದ ಮೈ ಪರಿಸರದಲ್ಲಿ ಲೀನವಾದಂತೆ ತೋರುತ್ತದೆ. ನಮ್ಮ ಕಣ್ಣುಗಳಿಗೆ ಹಸಿರಿನ ಮಧ್ಯೆ ಇರುವ ಕೇಸರಿ ಬಣ್ಣದ, ಕಪ್ಪುಪಟ್ಟೆಯ ಹುಲಿ ಎದ್ದುಕಂಡಂತೆ ಜಿಂಕೆಗಳ ಕಣ್ಣಿಗೆ ಕಾಣುವುದಿಲ್ಲ. 

       ಜಿಂಕೆಗಳಿಗೆ ಹೇಗೆ ವರ್ಣದೃಷ್ಟಿ ಇಲ್ಲವೋ ಅದೇರೀತಿ ಅವುಗಳನ್ನು ಬೇಟೆಯಾಡುವ ದೊಡ್ಡ ಬೆಕ್ಕುಗಳಿಗೂ ವರ್ಣದೃಷ್ಟಿ ಇಲ್ಲ. ಆದರೆ ಅವುಗಳ ದೃಷ್ಟಿಗೂ ಜಿಂಕೆಗಳ ದೃಷ್ಟಿಗೂ ಬಹಳ ವ್ಯತ್ಯಾಸಗಳಿವೆ. ಹಗಲಿನಲ್ಲಿ ಕಪ್ಪುಬಿಳುಪು ಪ್ರಪಂಚವನ್ನು ನೋಡುವ ಜಿಂಕೆಗಳು ರಾತ್ರಿಯ ಕತ್ತಲಿನಲ್ಲಿ ನಮ್ಮಷ್ಟೇ ಅಸಹಾಯಕ ಜೀವಿಗಳು. ಆದರೆ ಹುಲಿ, ಚಿರತೆಗಳ ಕಣ್ಣುಗಳಲ್ಲಿ ಬೆಳಕನ್ನು ಗ್ರಹಿಸುವ ರಾಡ್‌ಗಳ ಸಾಂದ್ರತೆ ತುಂಬಾ ಅಧಿಕ. ಅಲ್ಲದೇ ಅವುಗಳ ಕಣ್ಣುಗಳೂ ಸಾಕಷ್ಟು ದೊಡ್ಡದಿರುತ್ತದೆ. ಹಾಗಾಗಿ ನಮ್ಮ ಕಣ್ಣಿಗೆ ಏನೂ ಕಾಣದ, ಕೇವಲ ನಕ್ಷತ್ರಗಳ ಬೆಳಕಷ್ಟೇ ಇರುವ ರಾತ್ರಿಗಳಲ್ಲೂ ಹುಲಿ, ಚಿರತೆಗಳು ನೋಡಬಲ್ಲವು. ಬಣ್ಣಗಳ ಕೊರತೆಯಿಂದ ರಾತ್ರಿಯಲ್ಲಿ ನೋಡುವ ದೃಶ್ಯಗಳು ಹಗಲಿನಷ್ಟು ಸ್ಪಷ್ಟವಾಗಿರುವುದಿಲ್ಲ ನಿಜ, ಆದರೆ ತಮ್ಮ ಬೇಟೆಯನ್ನು ಅವು ಬೇಟೆಗಳು ತಮ್ಮನ್ನು ನೋಡುವುದಕ್ಕಿಂತ ಚೆನ್ನಾಗಿ ನೋಡಬಲ್ಲವು. ಹಾಗಾಗಿ ಅವು ರಾತ್ರಿಯ ವೇಳೆಯಲ್ಲೂ ಬೇಟೆಯಾಡಬಲ್ಲವು. 

       ಆಫ್ರಿಕಾದ ಸವನ್ನಾ ಹುಲ್ಲುಗಾವಲಿನಲ್ಲಿ ಅಪಾರ ಸಂಖ್ಯೆಯ ಜೀಬ್ರಾಗಳು ಮೇಯುತ್ತಿರುವ ದೃಶ್ಯಗಳನ್ನು ಕಂಡಿದ್ದೀರಲ್ಲವೇ? ಬಿಳಿಯ ಮೈಬಣ್ಣದ ಮೇಲೆ ಕಪ್ಪುಪಟ್ಟೆಗಳಿರುವ ಜೀವಿ ಜೀಬ್ರಾ. ಈ ಪಟ್ಟೆಗಳ ಕೆಲಸ ಶತ್ರುಗಳ ಕಣ್ಣಿನಿಂದ ಜೀಬ್ರಾಗಳನ್ನು ಮರೆಮಾಡುವುದು ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ನಮ್ಮ ಕಣ್ಣಿಗೇನೋ ಹಸುರಿನ ಹಿನ್ನೆಲೆಯಲ್ಲಿ ಈ ಕಪ್ಪು ಬಿಳುಪು ಪಟ್ಟೆಗಳು ಎದ್ದುಕಾಣುವ ದೃಶ್ಯಗಳು. ಆದರೆ ಜೀಬ್ರಾಗಳ ಮುಖ್ಯ ಶತ್ರುಗಳಾದ ಸಿಂಹಗಳು ವರ್ಣದೃಷ್ಟಿ ಹೊಂದಿಲ್ಲ. ಅವುಗಳ ಕಣ್ಣಿಗೆ ಜೀಬ್ರಾಗಳ ಪಟ್ಟೆಗಳು ಹೇಗೆ ಕಪ್ಪೋ ಹುಲ್ಲಿನ ಎಸಳುಗಳೂ ಕಪ್ಪೇ. ಹುಲ್ಲುಗಾವಲಿನ ಹಿನ್ನೆಲೆಯಲ್ಲಿ ಹಿಂಡುಹಿಂಡಾಗಿ ಜೀಬ್ರಾಗಳು ಓಡುತ್ತಿರುವಾಗ ಅವುಗಳಲ್ಲಿ ಒಂದು ಜೀಬ್ರಾವನ್ನು ಪ್ರತ್ಯೇಕಿಸಿ ಹಿಡಿಯುವುದು ಸಿಂಹಗಳಿಗೆ ಕಷ್ಟವಾಗುತ್ತದೆ. 

       ಗೂಬೆಗಳ ಪೈಕಿ ಅನೇಕ ಪ್ರಭೇದಗಳು ನಿಶಾಚರ ಬದುಕಿಗೆ ಹೊಂದಿಕೊಂಡಿವೆ. ಇವುಗಳ ಕಣ್ಣುಗಳು ಕೂಡ ನಮ್ಮ ಕಣ್ಣುಗಳಿಗೆ ಹೋಲಿಸಿದರೆ ಬಹಳ ದೊಡ್ಡವು. ಇಷ್ಟು ದೊಡ್ಡ ಕಣ್ಣುಗಳಿರುವುದರಿಂದ ರಾತ್ರಿಯ ಕ್ಷೀಣವಾದ ಬೆಳಕನ್ನು ಹೆಚ್ಚುಪ್ರಮಾಣದಲ್ಲಿ ಕಣ್ಣಿನೊಳಕ್ಕೆ ಬಿಟ್ಟುಕೊಳ್ಳಲು ಅವಕ್ಕೆ ಸಾಧ್ಯವಾಗುತ್ತದೆ. ಆ ಕಣ್ಣುಗಳು ಎಷ್ಟು ದೊಡ್ಡವೆಂದರೆ ಅವುಗಳ ಕಣ್ಣುಗುಡ್ಡೆಗಳು ಕಣ್ಣಿನ ಒಳಗೆ ಚಲಿಸಲಾರವು. ಆದರೆ ತಮ್ಮ ಇಡೀ ತಲೆಯನ್ನೇ 270 ಡಿಗ್ರಿಗಳಷ್ಟು ತಿರುಗಿಸಬಲ್ಲ ಸಾಮರ್ಥ್ಯವನ್ನು ಅವು ಹೊಂದಿರುವುದರಿಂದ ಈ ಅನಾನುಕೂಲ ಗಣನೆಗೆ ಬರುವುದಿಲ್ಲ. ಆದರೆ ಅವುಗಳ ಕಣ್ಣುಗಳಲ್ಲೂ ಬಣ್ಣಗಳನ್ನು ಗುರುತಿಸುವ ಕೋನ್‌ಗಳ ಸಂಖ್ಯೆ ಬಹಳ ಕಡಿಮೆ. ರಾಡ್‌ಗಳ ಸಂಖ್ಯೆಯೇ ಜಾಸ್ತಿ. ಅಲ್ಲದೆ ರಾತ್ರಿಯ ಕತ್ತಲಿನಲ್ಲಿ ವರ್ಣದೃಷ್ಟಿಯಿಂದ ಯಾವ ಪ್ರಯೋಜನವೂ ಇಲ್ಲ. (ನೀವೆಂದಾದರೂ ಚಂದ್ರನ ಬೆಳಕಿನಲ್ಲಿ ಹೊರಗಡೆ ಹೋಗಿದ್ದರೆ, ಎಲ್ಲ ಮರಗಿಡಗಳೂ ಕಪ್ಪಾಗಿಯೇ ಕಾಣಿಸುತ್ತವೆಯೇ ಹೊರತು ಹಗಲಿನಲ್ಲಿ ಕಾಣುವ ಕಣ್ಮನ ತಣಿಸುವ ಹಸಿರನ್ನು ನೋಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನಿಸಿರಬಹುದು). ಆದರೆ ಎಲ್ಲವನ್ನೂ ಕಪ್ಪುಬಿಳುಪಿನಲ್ಲಿ ನೋಡಬಲ್ಲ ಅವು ಅತ್ಯಂತ ಕ್ಷೀಣವಾದ ಚಲನೆಯನ್ನೂ ಕೂಡಲೇ ಗುರುತಿಸಬಲ್ಲವು. ನೆಲದಮೇಲೆ ಓಡಾಡುತ್ತಿರುವ ಚಿಕ್ಕಪುಟ್ಟ ಇಲಿಗಳನ್ನೋ ಕೀಟಗಳನ್ನೋ ಜೇಡಗಳನ್ನೋ ಎತ್ತರದ ಮರದ ಮೇಲಿನಿಂದಲೇ ಗುರುತಿಸಿ ಹಿಡಿಯುತ್ತವೆ. ನಮ್ಮ ಕಣ್ಣುಗಳಿಗೆ ಏನೊಂದೂ ಕಾಣಿಸದ ನಕ್ಷತ್ರಗಳ ಬೆಳಕಿನಷ್ಟೇ ಕ್ಷೀಣವಾದ ಬೆಳಕಿನಲ್ಲಿ ಸಹ ಗೂಬೆಗಳು ಅವುಗಳ ಬಲಿಪ್ರಾಣಿಗಳ ಓಡಾಟವನ್ನು ಸಮರ್ಥವಾಗಿ ಗುರುತಿಸುತ್ತವೆ.

       ಹಗಲಿನಲ್ಲಿ ಬೇಟೆಯಾಡುವ ಜೀವಿಗಳ ದೃಷ್ಟಿಶಕ್ತಿ ಇನ್ನೊಂದು ರೀತಿ ಇರುತ್ತದೆ. ಗಿಡುಗ, ಹದ್ದು ಇತ್ಯಾದಿ ಬೇಟೆಗಾರ ಹಕ್ಕಿಗಳ ಕಣ್ಣುಗಳು ನಮ್ಮಂತೆಯೇ ಎಲ್ಲ ಬಣ್ಣಗಳನ್ನೂ ನೋಡಬಲ್ಲವು. ಜೊತೆಗೆ ಈ ಕುಟುಂಬದ ಕೆಲವು ಹಕ್ಕಿಗಳಂತೂ ನಾವು ನೋಡಲಾರದ ಅತಿನೇರಳೆ ಕಿರಣಗಳನ್ನೂ ನೋಡಬಲ್ಲವು. ಸಾಕಷ್ಟು ಬೆಳಕಿರುವ ಹಗಲಿನಲ್ಲಿ ಹದ್ದಿನ ಕಣ್ಣುಗಳು ದೂರದರ್ಶಕದಂತೆ ಕೆಲಸಮಾಡುತ್ತವೆ. ಅವುಗಳ ಪೃಥಕ್ಕರಣ ಸಾಮರ್ಥ್ಯ (ರೆಸೊಲ್ಯೂಶನ್‌ ಪವರ್. ಅಂದರೆ ದೂರದಲ್ಲಿರುವ ಎರಡು ವಸ್ತುಗಳನ್ನು ಪ್ರತ್ಯೇಕಿಸಿ ನೋಡುವ ಸಾಮರ್ಥ್ಯ) ನಮ್ಮ ಕಣ್ಣುಗಳ ಸಾಮರ್ಥ್ಯಕ್ಕಿಂತ ಬಹಳ ಹೆಚ್ಚು. ಮೂರು ಕಿಲೋಮೀಟರ್‌ ಎತ್ತರದಿಂದಲೇ ನೆಲದ ಮೇಲೆ ಓಡಾಡುತ್ತಿರುವ ಚಿಕ್ಕ ಇಲಿಯನ್ನೂ ಸ್ಪಷ್ಟವಾಗಿ ನೋಡಬಲ್ಲ ಸಾಮರ್ಥ್ಯ ಹದ್ದುಗಳಿಗಿದೆ. ಇದೇ ವರ್ಗದ ಕೆಸ್ಟ್ರೆಲ್‌ (ಡೇಗೆ) ಎಂಬ ಹಕ್ಕಿಗಳು ಅತಿನೇರಳೆ ಕಿರಣಗಳನ್ನು ನೋಡಬಲ್ಲವು. ಈ ವಿಶೇಷದೃಷ್ಟಿ ಅವಕ್ಕೆ ಹೇಗೆ ನೆರವಾಗುತ್ತದೆ ಎಂಬ ಬಗ್ಗೆ ವಿಜ್ಞಾನಿಗಳಿಗೆ ಸಂದೇಹಗಳಿದ್ದವು. ಇತ್ತೀಚೆಗಷ್ಟೇ ಎಲ್ಲವೂ ತಿಳಿಯಲಾರಂಭಿಸಿದೆ. ಎತ್ತರದಿಂದ ಇವು ವೋಲ್‌ ಎಂಬ (ಇಲಿಯಂಥ ಒಂದು ಬಗೆಯ ಪ್ರಾಣಿ) ಪ್ರಾಣಿಗಳ ಜಾಡು ಹಿಡಿಯುತ್ತವೆ. ವೋಲ್‌ಗಳಿಗೆ ಅವು ಹೋಗುವ ದಾರಿಯಲ್ಲೆಲ್ಲ ತಮ್ಮ ದಾರಿಯನ್ನು ಗುರುತಿಸಲು ಮೂತ್ರ ವಿಸರ್ಜಿಸುವ ಅಭ್ಯಾಸವಿದೆ. ವೋಲ್‌ಗಳಿಗೆ ಈ ಮೂತ್ರದ ಜಾಡು ಕೇವಲ ವಾಸನೆಯಿಂದಷ್ಟೇ ತಿಳಿಯುತ್ತದೆ. ಆದರೆ ಕೆಸ್ಟ್ರೆಲ್‌ಗಳ ಅತಿನೇರಳೆ ದೃಷ್ಟಿ ಈ ಮೂತ್ರವನ್ನು ಹಳದಿಬಣ್ಣದಲ್ಲಿ ತೋರಿಸುತ್ತದೆ. ಹಾಗಾಗಿ ಎತ್ತರದಲ್ಲಿ ಹಾರುತ್ತಲೇ ನೆಲದಲ್ಲಿ ಓಡಾಡುವ ವೋಲ್‌ಗಳ ಜಾಡನ್ನು ಅವು ಹಿಡಿಯಬಲ್ಲವು. “ಹದ್ದಿನ ಕಣ್ಣು” ಎಂಬ ನುಡಿಗಟ್ಟು ಬಂದಿದ್ದು ಇದರಿಂದಲೇ.

       ಹದ್ದುಗಳಿಗೆ ಅಷ್ಟೊಂದು ತೀಕ್ಷ್ಣವಾದ ದೃಷ್ಟಿ ಇರುವುದು ಹೇಗೆ? ಅದಕ್ಕೆಲ್ಲ ಅವುಗಳ ಕಣ್ಣಿನಲ್ಲಿರುವ ಶಂಕುಕೋಶಗಳ ಸಂಖ್ಯೆಯೇ ಕಾರಣ. ನಮ್ಮ ಕಣ್ಣುಗಳಲ್ಲಿ ಪ್ರತಿ ಚದರ ಮಿಲಿಮೀಟರ್‌ಗೆ 200,000 ಶಂಕಕೋಶಗಳಿದ್ದರೆ ಹದ್ದಿನ ಕಣ್ಣಿನಲ್ಲಿ ಪ್ರತಿ ಚದರ ಮಿಲಿಮೀಟರ್‌ಗೆ 1,000,000 ಶಂಕುಕೋಶಗಳಿವೆ. ಅವುಗಳ ಕಣ್ಣಿನ ಮಸೂರಕ್ಕೆ (ಲೆನ್ಸ್)‌ಸಮೀಪದ ವಸ್ತುವಿನಿಂದ ದೂರದ ವಸ್ತುವಿಗೆ ಕ್ಷಣಾರ್ಧದಲ್ಲಿ ತನ್ನ ನೋಟವನ್ನು ಬದಲಿಸಬಲ್ಲ ಶಕ್ತಿ ಇದೆ. ಇದರಿಂದಾಗಿಯೇ ಅದರ ಕಣ್ಣುಗಳು ದೂರದರ್ಶಕದಂತೆ ಕೆಲಸ ಮಾಡುತ್ತವೆ.

       ಪಕ್ಷಿಗಳ ದೃಷ್ಟಿ ಬೇರೆ ಜೀವಿಗಳ ದೃಷ್ಟಿಗೆ ಹೋಲಿಸಿದರೆ ಅತ್ಯಂತ ತೀಕ್ಷ್ಣವಾಗಿದೆ. ನಮ್ಮ ಕಣ್ಣಿಗೆ ಕಾಣದ ಎಷ್ಟೋ ಬಣ್ಣಗಳು ಅವುಗಳ ಕಣ್ಣಿಗೆ ಕಾಣುತ್ತವೆ. ನಮ್ಮ ಕಣ್ಣಿಗೆ ಸಾಮಾನ್ಯ ಮಸುಕಾದ ಕಂದುಬಣ್ಣದ್ದಾಗಿ ಕಾಣುವ ಹಿಲ್‌ಮೈನಾ ಹಕ್ಕಿ ಇನ್ನೊಂದು ಮೈನಾದ ಕಣ್ಣಿನಲ್ಲಿ ಹೇಗೆ ಕಾಣುತ್ತದೆ ಎಂಬುದನ್ನು ನೋಡಿದರೆ ನಮ್ಮ ಕಣ್ಣುಗಳು ಏನೇನೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಕಣ್ಣಿಗೆ ಸಾದಾ ಬೂದುಬಣ್ಣದಲ್ಲಿ ಕಾಣುವ ಬಜ್ರಿಗರ್‌ ಎಂಬ ಗಿಳಿಗಳು ಅವುಗಳ ಕಣ್ಣುಗಳಲ್ಲಿ ಕಣ್ಣುಕುಕ್ಕುವ ಜ್ವಲಂತ ಬಣ್ಣಗಳಲ್ಲಿ ಹೊಳೆಯುತ್ತವೆ. ಪಕ್ಷಿಗಳ ಮೈಬಣ್ಣಗಳು ಸಸ್ತನಿಗಳ ಮೈಬಣ್ಣಗಳಂತಲ್ಲ. ಸಸ್ತನಿಗಳ ಬಣ್ಣಗಳಾದರೋ ಚರ್ಮದ ಮೇಲೆ ಇರುವ ವರ್ಣದ್ರವ್ಯಗಳ ಪ್ರಭಾವ, ಆದರೆ ಪಕ್ಷಿಗಳ ಮೈಬಣ್ಣ ಗರಿಗಳ ಮೇಲೆ ಬೀಳುವ ಸೂರ್ಯನ ಬೆಳಕು ಬೇರೆಬೇರೆ ಕೋನಗಳಲ್ಲಿ ಪ್ರತಿಫಲಿಸುವ ಪರಿಣಾಮ. ಆಯಾ ಪ್ರಭೇದದ ಹಕ್ಕಿಗಳ ವಿಶೇಷ ಮೈಬಣ್ಣಗಳನ್ನು ಆ ಪ್ರಭೇದದ ಬೇರೆ ಹಕ್ಕಿಗಳು ಗುರುತಿಸಲೆಂದು ಬಳಸುತ್ತವೆ. 

       ಕೆಲವೊಂದು ಜೀವಿಗಳಿಗೆ ಕಣ್ಣುಗಳೇ ಇಲ್ಲದಿರುವುದನ್ನು ನಾವು ನೋಡಿದ್ದೇವೆ. ಗುಹೆಗಳ ಆಳದಲ್ಲಿ ವಾಸಿಸುವ ಎಷ್ಟೋ ಜೀವಿಗಳು, ನೆಲದಲ್ಲಿ ಆಳದ ಬಿಲಗಳಲ್ಲಿ ವಾಸಿಸುವ ಅನೇಕ ದಂಶಕಗಳು, ಸಾಗರದ ಆಳದಲ್ಲಿ ವಾಸಿಸುವ ಜೀವಿಗಳು ಹಾಗೂ ನದಿಗಳಲ್ಲಿ ರಾಡಿಯಾದ ನೀರಿನಲ್ಲಿ ವಾಸಿಸುವ ಜೀವಿಗಳು ಕಣ್ಣುಗಳನ್ನೇ ಹೊಂದಿರುವುದಿಲ್ಲ ಅಥವಾ ಹೊಂದಿದ್ದರೂ ದೃಷ್ಟಿಶಕ್ತಿಯನ್ನು ಕಳೆದುಕೊಂಡಿರುತ್ತವೆ. ಇದಕ್ಕೆ ಅತ್ಯುತ್ತಮ ಉದಾಹರಣೆಗಳೆಂದರೆ ಅಮೆಜಾನ್‌ ನದಿಯ ಡಾಲ್ಫಿನ್‌ಗಳು, ಗಂಗಾನದಿಯ ಡಾಲ್ಫಿನ್‌ಗಳು, ಗುಹಾಂತರಾಳದಲ್ಲಿ ವಾಸಿಸುವ ಕೆಲವು ಬಗೆಯ ಸಲಮ್ಯಾಂಡರ್‌ಗಳ ಸಂಬಂಧಿಗಳಾದ ನ್ಯೂಟ್‌ ಎಂಬ ಜೀವಿಗಳು, ಬಿಲಗಳಲ್ಲಿ ವಾಸಿಸುವ ಮೋಲ್‌ ಎಂಬ ಹೆಗ್ಗಣದಂಥ ಪ್ರಾಣಿಗಳು, ಬ್ಲೈಂಡ್‌ವರ್ಮ್‌ ಎಂಬ ಅನ್ವರ್ಥನಾಮವನ್ನೇ ಪಡೆದಿರುವ ಇಮ್ಮಂಡೆಹಾವು ಎಂದು ಕರೆಯಲ್ಪಡುವ ಉಭಯವಾಸಿಗಳು ಇವೆಲ್ಲ ಶಾಶ್ವತವಾಗಿ ದೃಷ್ಟಿಯನ್ನು ಕಳೆದುಕೊಂಡಿವೆ. ಇವುಗಳ ಕಣ್ಣುಗಳ ಮೇಲೆ ಚರ್ಮದ ಪದರ ಬೆಳೆದಿದೆ. ಇವು ವಾಸಿಸುವ ಪರಿಸರದಲ್ಲಿ ಕಣ್ಣುಗಳಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಸದಾಕಾಲ ಕತ್ತಲ ಪ್ರಪಂಚದಲ್ಲೇ ಇರುವಾಗ ಕಣ್ಣುಗಳಿಗೆ ಕೆಲಸವಾದರೂ ಎಲ್ಲಿಯದು?

       ನ್ಯೂಜಿಲೆಂಡಿನ ಕಿವಿ ಎಂಬ ಹಾರಲಾರದ ಹಕ್ಕಿಯೊಂದು ರಾತ್ರಿಯಲ್ಲಿ ಮಾತ್ರ ಹೊರಬರುತ್ತದೆ. ಇದರ ಮೂಗಿನ ಹೊಳ್ಳೆಗಳು ಕೊಕ್ಕಿನ ತುದಿಯಲ್ಲಿವೆ. ಈ ಹೊಳ್ಳೆಗಳ ಸಹಾಯದಿಂದ ಇವು ತಮ್ಮ ಆಹಾರದ ವಾಸನೆ ಹಿಡಿದು ತಿನ್ನುತ್ತವೆ. ಆದರೆ ಇವುಗಳ ಕಣ್ಣಿನ ದೃಷ್ಟಿ ಎಷ್ಟು ಮಂದವೆಂದರೆ ಒಮ್ಮೆ ಕೊಕ್ಕಿನಿಂದ ಆಹಾರ ಜಾರಿ ಕೆಳಕ್ಕೆ ಬಿದ್ದರೆ ಮತ್ತೆ ಎತ್ತಿಕೊಳ್ಳಲು ಕಾಣುವುದಿಲ್ಲ. ಮತ್ತೆ ಮೂಗಿನ ಸಹಾಯದಿಂದಲೇ ಆಹಾರವನ್ನು ಹುಡುಕಬೇಕಾಗುತ್ತದೆ.

       ಹೀಗೆ ದೃಷ್ಟಿ ಎಂಬುದು ಜೀವಿಗಳಿಗೆಲ್ಲ ಎಷ್ಟೊಂದು ಮುಖ್ಯವೋ ಹಾಗೆ ದೃಷ್ಟಿಯಿಲ್ಲದೇ ನೆಮ್ಮದಿಯಾಗಿ ಬದುಕಿರುವ ಲಕ್ಷಾಂತರ ಜೀವಿಪ್ರಭೇದಗಳು ಭೂಮಿಯ ಮೇಲೆ ಅಸ್ತಿತ್ವದಲ್ಲಿವೆ. ಅಂದರೆ ನಾವು ಕಣ್ಣುಗಳನ್ನು ಬಳಸಿಕೊಂಡು ವಿಶ್ವವನ್ನು ಹೇಗೆ ನೋಡುತ್ತಿದ್ದೇವೆಯೋ, ಹೇಗೆ ಅವುಗಳ ನೆರವಿನಿಂದ ಅಸಾಧ್ಯಗಳನ್ನು ಸಾಧ್ಯವಾಗಿಸಿದ್ದೇವೋ ಅದಕ್ಕಿಂತ ಸಮರ್ಥವಾಗಿ ಕಣ್ಣುಗಳಿಲ್ಲದೇ ಬೇರೆ ಜ್ಞಾನೇಂದ್ರಿಯಗಳ ನೆರವಿನಿಂದ ಬದುಕುತ್ತಿರುವ ಜೀವಿಗಳಿವೆ ಎಂದರೆ ಆಶ್ಚರ್ಯವಲ್ಲವೇ?

Category : Education


ProfileImg

Written by Srinivasa Murthy