ಮಧ್ಯಾಹ್ನ ಸೆಖೆ ಜೋರಿತ್ತು ಖಾಲಿಯಾದ ಮನೆಯಲ್ಲಿ ಒಬ್ಬನೇ ತಲೆಯ ಮೇಲೆ ತಿರುಗುತ್ತಿದ್ದ ಫ್ಯಾನ್ ದಿಟ್ಟಿಸುತ್ತಿದ್ದೆ, ನಿಶ್ಯಬ್ದದಿಂದ ಕೂಡಿದ ಮನೆಯಲ್ಲಿ ಫ್ಯಾನ್ ತಿರುಗುವ ಸದ್ದು ಮಾತ್ರವೇ ಜೊತೆಯಾಗಿ ಹಿತ ಎನಿಸಿತು ಅಷ್ಟರಲ್ಲಿ ಗಂಟೆ 12.30 ಬಾರಿಸಿತು ನಿಧಾನವಾಗಿ ಎದ್ದು ಅಡುಗೆ ಕೋಣೆಗೆ ಬಂದೆ ಅನ್ನ ಇತ್ತು,ನಿನ್ನೆ ರಾತ್ರಿ ತಂದಿದ್ದ ಹುಳಿ ಮತ್ತೆ ಬಿಸಿ ಮಾಡಿಕೊಳ್ಳಬೇಕು. ಮೊಸರಿನ ಪಾತ್ರೆ ಮುಚ್ಚಳ ತೆರೆದೆ ಮೊಸರು ಹುಳಿ ಬಂದು ವಾಸನೆ ಮೂಗಿಗೆ ಬಡಿಯಿತು.. ಯಾಕೋ ಒಮ್ಮೆ ಊಟ ಬೇಡ ಎನಿಸಿತು ಮತ್ತೆ ಕೋಣೆಗೆ ತೆರಳಿದೆ ಮಂಚದ ಕಾಲಿನ ಮೂಲೆಯಲ್ಲಿ ಒಗೆಯದ ಬಟ್ಟೆ ರಾಶಿ ಬಿದ್ದಿತ್ತು ಕಿಟಕಿಯ ಬಳಿ ಸರಿದೆ ಪರದೆಯಲ್ಲಿ ದೂಳು ಮುಚ್ಚಿತ್ತು. ಹೊರಗೆ ಪಾತಿಯಲ್ಲಿ ನಟ್ಟಿದ್ದ ಗುಲಾಬಿ,ದಾಸವಾಳ ಇನ್ನೇನೋ ಗಿಡಗಳು ಒಣಗಿ ಹೋಗಿದ್ದವು. ಮತ್ತೆ ಒಳ ನೋಟ ಸರಿಸಿದೆ ನನ್ನ ಗುಳಿಗೆಗಳ ಡಬ್ಬಿ ಕಾಣಿಸಿತು ಇದು ಬಿಪಿ, ಇನ್ನೊಂದು ಶುಗರ್ ದು ಮಧ್ಯಾಹ್ನ ಊಟದ ನಂತರ ತೆಗೆದು ಕೊಳ್ಳಬೇಕಿದೆ. ನಿಧಾನಕ್ಕೆ ಮೊಬೈಲ್ ಎತ್ತಿಕೊಂಡೆ ಎರಡು ಬೀದಿ ಕಳೆದು ಇದ್ದ ಉತ್ತರ ಕರ್ನಾಟಕದ ಖಾನಾವಳಿಗೆ ಕರೆ ಮಾಡಿದೆ, "ಶರಣ್ರಿ ಸಾರ" ಅತ್ತ ಕಡೆಯಿಂದ ಉತ್ತರ ಬಂತು 2 ಚಪಾತಿ ಪಲ್ಯ ಕಳುಹಿಸಿ ಅಂದೆ. "ಒಂದ್ ಹತ್ ನಿಮಿಷದಾಗ ನಮ್ ಹುಡುಗ ಬರ್ತನ್ರಿ" ಎಂದು ಕರೆ ಕಡಿತವಾಯಿತು. ಇತ್ತೀಚಿಗೆ ನನ್ನ ಮನೆಗೆ ಹೋಟೆಲ್ ಊಟ ಹೊಸದಲ್ಲ. 20ನಿಮಿಷ ಕಳೆದು ಹೋಟೆಲ್ ಮಾಣಿ ಊಟ ತಂದಿಟ್ಟು ಹೋದ. ಚಾಪತಿ, ಬದನೆ ಎಣ್ಣೆಗಾಯಿ ಪಲ್ಯ. ತಟ್ಟೆ ತಂದುಕೊಂಡು ಬಡಿಸಿಕೊಂಡು ತುತ್ತು ಬಾಯಿಗೆ ಇಟ್ಟೆ ಇನ್ನೊಂದು ತುತ್ತಿಗೆ ಮುಂಚೆ ಕಣ್ಣ ನೀರ ಹನಿಯೊಂದು ಕಣ್ಣಿಂದ ಇಳಿಯಿತು ಇದು ಆಕೆಯ ನೆನಪಲ್ಲಿ ಇತ್ತೀಚಿಗೆ ಪ್ರತಿ ಅನ್ನದ ತುತ್ತಿನಲ್ಲೂ ನೆನಪಾಗಿ ಕಣ್ಣೀರು ತರಿಸುವಳು.
35 ವರ್ಷದ ಹಿಂದೆ 29 ವರ್ಷದ ನನ್ನ ಕೈ ಹಿಡಿದು ಬಂದವಳು ಅವಳು ವಸುಧಾ ಆಗ ಅವಳಿಗೆ ಬರೆ 20 ವಯಸ್ಸು. ಬೆಂಗಳೂರಿನ ಒಂದು ಸಣ್ಣ ಖಾಸಗೀ ಸಂಸ್ಥೆಯಲ್ಲಿ ಗುಮಾಸ್ತನಾಗಿದ್ದ ನನ್ನ ಮಡದಿಯಾಗಿ. ಸಾದ ಬಣ್ಣದ ಹೆಣ್ಣು. ಶರೀರ, ಶಾರೀರ ಎರಡೂ ದುರ್ಬಲ ಎನಿಸಿತು ಎನಗೆ. ಮೆಟ್ರಿಕ್ಯುಲೇಷನ್ ಮುಗಿಸಿ ದೊಡ್ಡ ಶಹರದಲ್ಲಿ ಸಣ್ಣ ಹುದ್ದೆಯಲ್ಲಿದ್ದ ನನಗೆ ಮಲೆನಾಡ ಯಾವುದೋ ಸಣ್ಣ ಹಳ್ಳಿಯ ಬರೇ 4ನೇ ಕ್ಲಾಸ್ ನ ಮುಖ ನೋಡಿದ ಮಡದಿ. ನನ್ನ ಸೋದರಮಾವನ ಬಣ್ಣ ಬಣ್ಣದ ಮಾತಿಗೆ ಮರುಳಾದ ನನ್ನ ಹೆಂಡತಿಯ ತಂದೆ ಶಹರದ ಸಾಹುಕಾರನಿಗೆ 40 ಸಾವಿರ ವರದಕ್ಷಿಣೆ, ಹೆಣ್ಣಿಗೆ 5 ತೊಲ ಬಂಗಾರ, ನನ್ನ ಕೈಗೆ ಬಂಗಾರ ಬಣ್ಣದ ವಾಚು, ಕುತ್ತಿಗೆಗೆ ನಿಜವಾದ ಬಂಗಾರದ ಚೈನು, ರೇಷ್ಮೆ ಜರಿಯ ಶರಟು ಪಂಚೆ, ನನ್ನಮ್ಮನಿಗೆ ರೇಷ್ಮೆ ಸೀರೆಯ ಮರ್ಯಾದೆ ಮಾಡಿ ಮಗಳನ್ನು ದಾರೆ ಎರೆದು ಕೊಟ್ಟಿದ್ದ. ಇಷ್ಟೆಲ್ಲ ಮಾಡಿಸಿಕೊಂಡು ಅವನ ಕುತ್ತಿಗೆಗೆ ನಾನು ಎಷ್ಟು ಸಾಲ ಹಾಕಿದೇನೋ? ನಾನು ಅದನ್ನ ಎಂದೂ ಚಿಂತಿಸಲಿಲ್ಲ. ನನ್ನವಳು ಎಂದು ಬಂದವಳ ಹಿಂದೆ ಮತ್ತಿಬ್ಬರು ತಂಗಿಯರು ಮದುವೆಗೆ ತಯಾರಾಗಿದ್ದರು.
ಮದುವೆ, ವರೋಪಚಾರ, ಬೀಗರೂಟ ಎಲ್ಲ ಮುಗಿಸಿ ನಾನು ಬೆಂಗಳೂರಿಗೆ ಹೊರಟು ನಿಂತೆ ಹೆಂಡತಿಯ ಜೊತೆಯಲ್ಲಿ. ದಾರಿಯುದ್ದಕ್ಕೂ ಕಣ್ಣೀರು ಸುರಿಸುತ್ತಿದಳು ಆಕೆ.
ತಾಯಿ, ಮಡದಿಯ ಜೊತೆ ಬೆಂಗಳೂರು ತಲುಪಿದ ನನ್ನ ಹೊಸ ಜೀವನ ಶುರುವಾಗಿತ್ತು. ಅವಳು ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಎದ್ದು ಮನೆ ಶುಚಿಗೊಳಿಸಿ ನನ್ನ ಸ್ನಾನಕ್ಕೆ ಬಿಸಿನೀರಿಟ್ಟು ಬೆಳಗ್ಗಿನ ತಿಂಡಿ ತಯಾರಿಸಿ ತಂದು ಕೊಡುತ್ತಿದ್ದಳು ನಂತರ ನನ್ನ ಮುಖ ನೋಡುತ್ತಿದ್ದಳು ಯಾವುದೋ ಪ್ರಶ್ನೆಗೆ ಉತ್ತರಕ್ಕೆ ಕಾಯುವಂತೆ. ಶುಚಿಯಾಗಿ ಒಗೆದು ಗರಿ ಗರಿಯಾಗಿ ಇಸ್ತ್ರಿ ಮಾಡಿದ ಬಟ್ಟೆ ತೊಟ್ಟು ಕಚೇರಿಗೆ ಹೊರಡುವಾಗಳು ಅವಳ ಕಣ್ಣು ಏನನ್ನೋ ಕಾತರಿಸುತ್ತಿತು. ಹೀಗೆ ದಿನ ತಿಂಗಳು ಉರುಳಿದವು ಅಂದು ಕಚೇರಿಯಿಂದ ಬೇಗ ಬಂದೆ ಸಿನಿಮಾಗೆ ಹೋಗೋಣ ಹೊರಡು ಎಂದೆ ಅವಳ ಮುಖದಲ್ಲಿ ಸಂತಸದ ಹೊಮ್ಮಿದ್ದು ಕಾಣಿಸಿತು. ಅಮ್ಮನಿಗೆ ಸಿನಿಮಾ ವಿಷಯ ತಿಳಿಸಿದೆ ಹ್ಞೂ ಎಂದರಷ್ಟೆ,ಸಿನಿಮಾ ಮುಗಿಸಿ ದೋಸೆ ತಿಂದು ಮನೆಗೆ ಮರಳಿದೆವು. ಅಮ್ಮನ ಮುಖ ಊದಿಕೊಂಡಿತ್ತು ಊಟ ಆಗಿಲ್ವೆನಮ್ಮ ಎಂದೆ, ಹೌದಪ್ಪ ಈ ಮುದಿ ಜೀವ ಉಂಡಿದ್ಯೋ ಇಲ್ವೋ ಯಾರಿಗೇನು ಅವರಿಗೆ ಅವರವರಹೆಂಡತಿಯ ಹೊಟ್ಟೆ ತುಂಬಿದರೆ ಸಾಕು ಎಂದರು. ಅವಮಾನವಾಯಿತು ಅದೇ ಮೊದಲು ಅದೇ ಕೊನೆ ನಾನು ಅವಳನ್ನು ಹೊರ ಕರೆದುಕೊಂಡು ಹೋದದ್ದು ಅಮ್ಮನಿಗೆ ಖುಷಿಯಾಯಿತು ಅಂದುಕೊಳ್ಳುತ್ತೇನೆ. ಅದರೆ ನನಗೆ ಅವಮಾನ. ಯಾಕಾಯಿತು? ತಿಳಿಯಲಿಲ್ಲ.
ಎಲ್ಲರ ಮನೆಯಲ್ಲೂ ಇರುವಂತೆ ನನ್ನ ಮನೆಯಲ್ಲೂ ಶುರುವಾಯಿತು ಅತ್ತೆ ಸೊಸೆ ವೈಮನಸ್ಸು ನನ್ನ ತಾಯಿ ದಿನಾ ಚಾಡಿ ಹೇಳುವಳು ನಾನೂ ಹ್ಞೂ ಅಂದೆ ಅಷ್ಟೇ.ಅವಳ ಎಲ್ಲ ಕೆಲಸದಲ್ಲೂ ದೋಷಹುಡುಕಿ ಹಣಕಿ ಆಡಿಸಿದಳು ಇವಳು ಅಳುವಳು, ರಾತ್ರಿಯಿಡೀ ಕಣ್ಣೀರು ಸುರಿಸಲು ನಾನು ನಿರುತ್ತರ ಏನೆಂದು ಉತ್ತರಿಸಲಿ. ಅದೊಂದು ದಿನ ಅಮ್ಮ ಬಹಳಷ್ಟು ವ್ಯಗ್ರಳಾಗಿದ್ದಳು. ಸ್ನಾನದ ಮನೆಯಲ್ಲಿ ನೀರು ತುಂಬಿಸಿಲ್ಲ ಎಂದು ಇಡೀ ಮನೆಯನ್ನೇ ತಲೆ ಮೇಲೆ ಹೊತ್ತು ಕೊಂಡಳು ನಾನು ಕಛೇರಿಯಿಂದ ಮನೆಗೆ ಹೊಕ್ಕ ತಕ್ಷಣ ಚುಚ್ಚು ಮಾತು ಶುರುವಾಗಿತ್ತು ಇವಳೂ ಏನೋ ಹೇಳಲು ಬಂದಳು, ಎಲ್ಲಿಂದನೋ ಸಿಟ್ಟು ಬಂದಿತ್ತು ಅವಳ ಕೆನ್ನೆಗೊಂದು ಬಾರಿಸಿದೆ ತಕ್ಷಣ ಬಾಸುಂಡೆ ಬಂದಿತ್ತು. ಕೆನ್ನೆ ಕೆಂಪೇರಿತ್ತು,ಕಣ್ಣಲ್ಲಿ ನೀರು, ಆಗ ಅವಳು ಐದು ತಿಂಗಳ ಗರ್ಭಿಣಿ. ಗರ್ಭಿಣಿ ಮೇಲೆ ಕೈ ಮಾಡಿದೆ ಎಂದು ರಾತ್ರಿ ಇಡೀ ನಿದ್ದೆ ಮಾಡಲಿಲ್ಲ ನಾನು. ಅವಳೂ ಸಹ ಅವಳ ಬಿಕ್ಕಳಿಕೆ ರಾತ್ರಿಯಿಡೀ ಕೇಳುತ್ತಿತ್ತು.
ಇನ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಮತ್ತೆ ಕೆನ್ನೆಗೆ ಬಾರಿಸಿದೆ ಮತ್ತೆ ಪಶ್ಚಾತಾಪ ನನಗೆ. ಅವಳದು ಅದೇ ಅಳು.
ಕೊನೆ ಕೊನೆಗೆ ಪಶ್ಚಾತಾಪ ಮಾಯವಾಗಿ ಅವಳ ಮೇಲೆ ಕೈ ಮಾಡುವುದು ಅಧಿಕಾರವೆಂಬಂತೆ ವರ್ತಿಸಿದೆ. ಅವಳು ಪಡುವ ವೇದನೆಯಿಂದ ಸುಖಪಡತೊಡಗಿದೆ.ಪ್ರೀತಿಯಿಂದ ಅವಳ ಮೈದಡವ ದ ನಾನು ಅವಳ ಪ್ರೀತಿಯ ಕಸಿಯುವತೆ ಬಾಸುಂಡೆ ಬರಿಸಿದೆ. ಅವಳೊಂದಿಗೆ ಒಂದೊಳ್ಳೆ ಮಾತನಾಡದ ನಾನು ಅವಳ ಪ್ರತಿ ಕೆಲಸಕ್ಕೂ ಹಂಗಿಸಿದೆ.
ಪ್ರತಿ ದಿನ, ವರ್ಷಗಳು ಉರುಳಿದಂತೆ. ನನ್ನ ಎರಡು ಹೆಣ್ಣು ಮಕ್ಕಳ ತಾಯಿ ನನಗೂ ತಾಯಿದಳು ಬೆಳ್ಳಗೆ ಎದ್ದ ತಕ್ಷಣದಿಂದ ನನ್ನ ಎಲ್ಲ ಅಗತ್ಯ ಗಳನ್ನು ಸೇವಕಿಯಂತೆ ಪೂರೈಸಿದಳು ನನ್ನ ದಿನ ಮುಗಿಯುವ ತನಕ.
ಅದೊಂದು ದಿನ ಬೆಳಗ್ಗೆ ಬೇಗ ಎಚ್ಚರವಾಯಿತು ಕಿಬ್ಬೊಟ್ಟೆಯಲ್ಲಿ ಸಣ್ಣಗೆ ನೋವು ಕಾಣಿಸಿತು ಇದು ಮೊದಲಲ್ಲ ಈ ಮೊದಲೂ ಸಣ್ಣಗೆ ನೋವು ಬಂದು ಹೋಗುತ್ತಿತ್ತು. ಆದರೆ ಇಂದು ಸಣ್ಣಗೆ ಕಾಣಿಸಿದ ನೋವು ಹೆಚ್ಚುತ್ತಲೇ ಹೋಯಿತು ಆಸ್ಪತ್ರೆಗೆ ಸೇರಿ ಅಪೆಂಡಿಕ್ಸ್ ಎಂದು ತಿಳಿದು ಅದಕ್ಕೆ ಬೇಕಾದ ಚಿಕಿತ್ಸೆ ಮಾಡಲಾಯಿತು ಮೂರು ದಿನದ ಆಸ್ಪತ್ರೆ ವಾಸ ಐದು ಸಾವಿರ ಬಿಲ್ಲು. ಮುನ್ಸೂಚನೆ ನೀಡದೆ ಬಂದ ಬೇಡದ ಅತಿಥಿಗೆ ಕಾಸು ಕೂಡಿಟ್ಟವರಾರು? ಅವಳು ಅವಳ ತಂದೆ ಅವಳಿಗಾಗಿ ಮಾಡಿಕೊಟ್ಟ ಒಡವೆ ತೆಗೆದು ಕೊಟ್ಟಳು. ಅವಳ ಒಡವೆ ಪಡೆಯಲು ಅಹಂ ಅಡ್ಡ ಬರಲಿಲ್ಲ ಯಾಕೆಂದರೆ ಆ ಎಲ್ಲ ಒಡವೆಗಳು ನನ್ನದೇ ಎಂಬ ಭಾವನೆ ನನ್ನಲ್ಲಿ. ನನ್ನ ಅಕ್ಕನೂ ಹಾಗೆ ಅಂದಳು ಗಂಡನಿಗೆ ಅಲ್ಲದೇ ಮತ್ಯಾರಿಗೆ ಈ ಒಡವೆಗಳು ಎಂದು.
ಇಬ್ಬರೂ ಹೆಣ್ಣು ಮಕ್ಕಳು ಎಂದು ನನ್ನ ತಾಯಿ ನನ್ನ ಅಕ್ಕ ಇವಳನ್ನು ಹಂಗಿಸದೆ ಬಿಡುತ್ತಿರಲಿಲ್ಲ ಹಾಗೆಂದು ನಾನೇನು ಕಮ್ಮಿ ಇಲ್ಲ ನಾನು ಮಾತು ಮಾತಿಗೂ ಅವಳ ಹಂಗಿಸುತ್ತಿದ್ದೆ. ನನ್ನದೇ ಮಕ್ಕಳಾದರು ಹೆಣ್ಣು ಮಕ್ಕಳು ಎಂಬ ಕಾರಣಕ್ಕೆ ಅವುಗಳನ್ನು ಒಂದು ದಿನವೂ ಮುದ್ದಾಡಲಿಲ್ಲ.ಹುಟ್ಟಿಸಿದ್ದೇನೆ ಎಂಬ ಕರ್ಮಕ್ಕೆ ಹೊಟ್ಟೆಗೆ ಅನ್ನ, ಉಡಲು ಬಟ್ಟೆ ಅಷ್ಟೆ. ಪ್ರತಿ ಏಟು ಹೆಂಡತಿಗೆ ಬಿದ್ದಾಗ ನನ್ನ ತಡೆಯಲು ಬಂದ ಆ ಕಂದಮ್ಮಗಳಿಗೂ ಒಂದೊಂದು ಏಟು ಆವಾಗ ಅವಕ್ಕೆ ವಯಸ್ಸೆಷ್ಟು ಬರಿ ಆರು ಮತ್ತೊಂದಕ್ಕೆ ನಾಲ್ಕು.
ಒಂದು ದಿನ ನನ್ನವಳಿಗೆ ನನ್ನ ಜೇಬಲ್ಲಿ ಏನೋ ಸಿಕ್ಕಿತು. ಯಾವತ್ತೂ ಆ ರೀತಿ ಮಾಡದವಳು ಆ ದಿನ ನನ್ನ ಕಚೇರಿಗೆ ಹಿಂಬಾಲಿಸಿದಳು ಸಂಜೆ ತನಕ ಕಚೇರಿಯ ಹೊರಗೆ ನಿಂತು ಮತ್ತೆ ಹಿಂಬಾಲಿಸಿದಳು ಅಂದು ನಾನು ಅವಳಿಗೆ ಇನ್ನೊಂದು ಹೆಣ್ಣಿನ ಜೊತೆ ಕಾಣಿಸಿದೆ ಕಾಣಬಾರದ ರೀತಿಯಲ್ಲಿ ದೊಡ್ಡ ರದ್ಧಾಂತವಾಯಿತು ಎಂದು ನಿಮಗೆ ಅನ್ನಿಸಿರಬಹುದು ಇಲ್ಲ ಅವಳ ಪ್ರಶ್ನೆ ಒಂದೇ ಇದ್ದಿತ್ತು" ಯಾಕೆ"? ಉತ್ತರ ನೀಡುವ ಬದಲು ನಿನಗೇನು ಕಮ್ಮಿ ಮಾಡಿದ್ದೇನೆ ನಾನು ?ಎಂಬ ಮರು ಪ್ರಶ್ನೆ ನನ್ನದು ಹುಂಬತನದಿಂದ,ಜೊತೆಗೆ ನಾಲ್ಕು ಏಟು ಚೆನ್ನಾಗಿ ತದುಕಿದೆ ನನ್ನ ಅನುಮತಿ ಇಲ್ಲದೆ ಮನೆ ಬಿಟ್ಟು ಹೊರ ಬಂದದಕ್ಕೆ ಮತ್ತು ನನ್ನ ಮೇಲೆ ಗೂಢಚರ್ಯೆ ಮಾಡಿದಕ್ಕೆ. ಅವತ್ತು ಅವಳ ಅಳು ವಿಚಿತ್ರವಾಗಿತ್ತು ನನ್ನ ಏಟು ಸೇಡಿನದಾಗಿತ್ತು ನಿಜ ಆದರೆ ಇನ್ನೇನೋ ಆ ಅಳುವಲಿತ್ತು. ಈಗಷ್ಟೇ ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳ್ಳಿಬ್ಬರೂ ದೂರದಿಂದ ಬೆದರು ಕಣ್ಣುಗಳಿಂದ ನೋಡುತ್ತಿದ್ದರು.ಮೊದಲೇ ಮೌನಿಯಾಗಿದ್ದ ಆಕೆ ನಂತರ ಮಹಾ ಮೌನಿಯಾದಳು.ಅವಳ ಜೊತೆ ಅವಳ ಹೆಣ್ಣು ಮಕ್ಕಳೂ ಸಹ. ಅವಳ ಮಾತಿನಿಂದ ನನಗೇನು ದಿನ ಸಾಗಬೇಕಾಗಿರಲಿಲ್ಲ ಎನ್ನುವುದು ಸತ್ಯ.
ದೊಡ್ಡ ಮಗಳು ಡಿಗ್ರೀ ಓದುತ್ತಿದ್ದಳು. ಡಿಗ್ರೀ ತನಕ ನಾನು ಓದಿಸಬೇಕು ಎಂದು ಇದ್ದವನು ನಾನಲ್ಲ ,ಬೇಡ ಎಂದೂ ಹೇಳಿದವನು ಅಲ್ಲ ದುಡ್ಡು ಕೊಡದ್ದಿದರೆ ಕಾಲೇಜು ಬಿಟ್ಟು ಸುಮ್ಮನಾಗುತ್ತಾರೆ ಎಂದು ನನ್ನ ಅನಿಸಿಕೆ. ಆದರೆ ನನ್ನಾಕೆಯ, ಅವಳಪ್ಪ ಕೊಟ್ಟ ಬಂಗಾರದ ಸಣ್ಣ ಇಡುಗಂಟು ಮಕ್ಕಳ ಕಾಲೇಜು ಫೀಸಿಗೆ ಕರಗುತ್ತಿತು. ದೊಡ್ಡ ಮಗಳ ಕಾಲೇಜು ಪುಸ್ತಕದಲ್ಲಿ ಒಂದು ಪತ್ರ ಸಿಕ್ಕಿತ್ತು ನನ್ನ ಕೈಗೆ,ಪ್ರೇಮ ಪತ್ರ. ಯಾವುದೋ ಒಂದು ಸಿಟ್ಟು ಮೈಯನ್ನು ಆವರಿಸಿತು ಕೋಲು ತೆಗೆದುಕೊಂಡು ಮಗಳ ಅಟ್ಟಾಡಿಸಿ ಹೊಡೆದೆ ಅವಳ ಅಳು ಮನೆ ತುಂಬೆಲ್ಲ ತುಂಬಲು ಅವಳ ತಾಯಿ ಅಡ್ಡ ಬಂದಳು ಸಿಟ್ಟು ಮಗಳಿಂದ ತಾಯಿಯ ಕಡೆ ತಿರುಗಿತು ಕೋಲು ಬಿಸಾಕಿ ಅವಳ ಜುಟ್ಟು ಹಿಡಿದು ಎಳೆದಾಡಿದೆ ಕೈ ಮುಷ್ಟಿ ಹಿಡಿದು ಮನಸೋ ಇಚ್ಚೆ ಥಳಿಸಿದೆ ಯಾವುದೋ ದುಷ್ಟ ಆತ್ಮ ಜೀವ ಹೊಕ್ಕಂತೆ. ಇಬ್ಬರೂ ಹೆಣ್ಣು ಮಕ್ಕಳು ನನ್ನ ಕಾಲು ಹಿಡಿದು ಅತ್ತು ಕರೆದು ಬಿಡಿಸದಿದ್ದರೆ ಅಂದು ಒಂದು ಹೆಣ ನನ್ನ ಕೈಯಲ್ಲಿ ಇರುತ್ತಿತ್ತು. ಅಂದಿನಿಂದ ನಾನು ಮನೆಯಲ್ಲೇ ಮಧ್ಯಪಾನ ಶುರು ಹಚ್ಚಿಕೊಂಡೆ. ನನ್ನ ಅಕ್ಕ ಅಯ್ಯೊ ನನ್ನ ತಮ್ಮ ಅವನ ಹೆಣ್ಣು ಮಕ್ಕಳ ಚಿಂತೆಯಲ್ಲೇ ಕುಡಿಯುವುದು ಶುರು ಹಚ್ಚಿಕೊಂಡ ಎಂದು ಸಂಬಂಧಿಕರಲ್ಲಿ ಪ್ರಲಾಪಿಸಿದಳು.
ಹೆಣ್ಣು ಮಕ್ಕಳು ತಂದೆಯ ಭಯಕ್ಕಿಂತಲೂ ತಂದೆ ತಾಯಿಗೆ ಹೊಡೆಯುವರು ಎಂಬ ಭಯದಿಂದಲೇ ದಿನ ದೂಡಿದರು.ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿಕೊಂಡರು ಯಾವ ಕೆಲಸ? ಏನೂ ಕೆಲಸ ? ಯಾವುದನ್ನೂ ನಾನು ಕೇಳಲಿಲ್ಲ ತಿಂಗಳ ಮೊದಲೂ ಮನೆ ಖರ್ಚಿಗೆ ದುಡ್ಡು ಇಡಬೇಕು ಎಂದಷ್ಟೇ ತಾಕೀತು ಮಾಡಿದೆ.
ತಿಂಗಳು ತಿಂಗಳು ಸಂಬಳ ಬಂದಾಗ ಇಂತಿಷ್ಟು ಎಂದು ಕೈಗೆ ತಂದು ಕೊಡುತ್ತಿದ್ದ ಮಕ್ಕಳ ಮದುವೆಯ ಬಗ್ಗೆ ನಾನು ಜಾಸ್ತಿ ಯೊಚನೆ ಮಾಡಲಿಲ್ಲ ತಾನಾಗಿಯೇ ಸಂಬಂಧ ಹುಡುಕಿ ಕೊಂಡು ಬಂದರೆ ಮದುವೆ ಮಾಡಿಕೊಡುವ ಎಂಬ ಭಾವದಿಂದ. ಆದರೆ ಇವಳು ಅವಳ ತಮ್ಮನನ್ನು ಹಿಡಿದು ಏನೇನೋ ಕಸರತ್ತು ಮಾಡಿ ಇಬ್ಬರಿಗೂ ಮದುವೆ ಮಾಡಿಸಿದಳು ಇವಳ ಕೈಲಿ ದುಡ್ಡು ಎಲ್ಲಿಂದ ಎಂಬ ಪ್ರಶ್ನೆ ಕಾಡಿತು ಯಾಕೆಂದರೆ ನಾನು ಅವರ ಮದುವೆಗೆ ಚಿಕ್ಕಾಸು ಬಿಚ್ಚಲಿಲ್ಲ. ಇಬ್ಬರ ಮದುವೆಯ ಸ್ವಲ್ಪ ಸಮಯಕ್ಕೆ ನಾನು ನಿವೃತ್ತಿ ಹೊಂದಿದೆ.
ನಿವೃತ್ತಿಯ ಜೊತೆ ಜೊತೆಗೆ ಬಿಪಿ,ಶುಗರ್, ಕೀಳು ನೋವುಗಳು ಎಲ್ಲ ಮುಂಬಡ್ತಿ ಪಡೆದು ನನ್ನ ಸೇರಿಕೊಂಡವು ಡಾಕ್ಟರ್ ಪಥ್ಯ ಹೇಳುವರು ಇವಳು ಮಾಡಿಕೊಡುವಳು.ನಾನು ಅದನ್ನು ತಿರಸ್ಕರಿಸಿ ಹೋಟೆಲ್ ಅಲ್ಲಿ ತಿಂದು ಮನೆಯಲ್ಲಿ ಕುಡಿದು ಊರೆಲ್ಲ ತಿರುಗಾಡುತ್ತಿದ್ದೆ. ನನ್ನ ನಿವೃತ್ತಿಯಿಂದ ಇವಳಿಗೂ ನನ್ನ ಥಳಿತದಿಂದ ನಿವೃತ್ತಿ ಸಿಕ್ಕಿತ್ತು ಜೀವದಲ್ಲಿ ತ್ರಾಣ ಗಟ್ಟಿಯಿದ್ದರಲ್ಲವೇ ಏಟು ಗಟ್ಟಿಯಾಗಿ ಬೀಳುವುದು ಆದರೂ ನನಗೆ ಅವಳ ಮೇಲಿದ್ದ ಅಸಡ್ಡೆ ಕಮ್ಮಿಯಾಗಿರಲಿಲ್ಲ ಮಾತು ಮಾತಿಗೂ ಪ್ರತಿ ಕೆಲಸಕ್ಕೂ ಹಂಗಿಸುವುದು ನಿಂತಿರಲಿಲ್ಲ.
ಅದೊಂದು ಸಣ್ಣ ಗಾಯ ನಿಧಾನಕ್ಕೆ ಬೆಳೆಯುತ್ತಾ ಹೋಗಿತ್ತು ನಡೆಯಲು ಅಸಾಧ್ಯವಾಗುವಂತೆ, ಡಾಕ್ಟರ್ ಬಳಿ ತೆರಳಿದೆವು ಹುಣ್ಣು ಗ್ಯಾಂಗ್ರಿನ್ ಆಗುವ ಸಾಧ್ಯತೆ ಇದೆ ಸಣ್ಣ ಆಪರೇಷನ್ ಮಾಡಿಬಿಡೋಣ ಆದರೆ ಇದು ಸಂಪೂರ್ಣ ಪರಿಹಾರವಲ್ಲ ಎಂದು, ಇನ್ನಷ್ಟು ಕಠಿಣ ಆಹಾರ ಕ್ರಮಕ್ಕೇ ನನ್ನ ಒಳಪಡಿಸಿದರು. ಅಲ್ಲೂ ಹೆಂಡತಿಯಾದವಳ ಸೇವೆ.
ಆಸ್ಪತ್ರೆಯಿಂದ ಮನೆಗೆ ಬಂದು ಸ್ವಲ್ಪ ದಿನಗಳು ಆಗಿತ್ತಷ್ಟೇ ಊಟ ಮುಗಿಸಿ ಕೋಣೆಯಲ್ಲಿ ಒಬ್ಬನೆ ಮಲಗಿದ್ದೆ ಬಾಣಂತನಕ್ಕೆ ಬಂದಿದ್ದ ಸಣ್ಣ ಮಗಳು ತಾಯಿಯೊಂದಿಗೆ ಮಾತನಾಡುವುದು ಕೇಳಿಸಿತು "ಅಮ್ಮಾ ಹೆರಿಗೆ ರಜೆ ಮುಗಿಯುತ್ತಾ ಬಂತು ಮತ್ತೆ ಕಚೇರಿಗೆ ಹಾಜರಾಗಬೇಕು ಮನೆಯಲ್ಲಿ ಮಗೂನ ನೋಡಿಕೊಳ್ಳಿಕೆ ಯಾರು ಇಲ್ಲ ನಾನು ಕೆಲಸ ಬಿಟ್ಟು ಮನೆಯಲ್ಲಿ ಇರೋ ಹಾಗಿಲ್ಲ ನಿನಗೆ ಗೊತ್ತಲ್ಲ ನನ್ನ ಮದುವೆಯ ಸಾಲ ಇನ್ನೂ ಬಾಕಿ ಇದೆ ಕೆಲಸದವರನ್ನು ಇಟ್ಟುಕೊಳ್ಳಬಹುದು ಆದರೆ ಮನೆಯಲ್ಲಿ ಹಿರಿಯರು ಅಂತಾ ಯಾರಾದ್ರೂ ಇದ್ರೆ ಚೆನ್ನ. ನಾನು ನಿನ್ನ ಅಳಿಯನನ್ನು ಕೇಳಿದೆ ನಿನ್ನ ಅಮ್ಮನನ್ನೆ ಬರಲಿಕ್ಕೆ ಹೇಳು ಹೇಗಿದ್ರೂ ಮಗು ಅವರಿಗೆ ಹೊಂದಿಕೊಂಡಿದೆ. ಮಗು ನೊಡಿಕೊಳ್ಳಿಕೆ ಜನ ಮಾಡುವ ಮೇಲ್ವಿಚಾರಣೆ ನಿಮ್ಮಮ್ಮ ನೋಡಿಕೊಳ್ಳಲಿ ಅಂದರು. ಏನಮ್ಮ ನನ್ನ ಜೊತೆ ಬರ್ತೀಯ ಕೇಳಿದಳು".
ನನ್ನ ಅನುಮತಿ ಇಲ್ಲದೆ ಮನೆಯಿಂದ ಹೊರಗೇ ಕಾಲಿಡದ ಹೆಂಡತಿ ನನ್ನ ಕೇಳದೆ ದೂರದ ಬೊಂಬಾಯಿಗೆ ತೆರಳುವಳೆ? ನನಗೆ ಉತ್ತರ ತಿಳಿಯಲು ಕುತೂಹಲವಾಯಿತು ಕಿವಿ ಚುರುಕು ಮಾಡಿದೆ. ಇಲ್ಲ ಉತ್ತರ ಬರಲಿಲ್ಲ ಅವಳಿಂದ, ಸ್ವಲ್ಪ ಹೊತ್ತು ಕಾದೆ ನನ್ನಂತೆ ಮಗಳು ಕಾದಿರಬೇಕು ಉತ್ತರಕ್ಕೆ ಇಲ್ಲ ಉತ್ತರ ಹೇಳಲಿಲ್ಲ. ಮುಖಭಾವ? ಮಲಗಿದಲ್ಲಿಂದ ನನಗೆ ಹೇಗೆ ಕಾಣಬೇಕು?
ನನ್ನೊಳಗೆ ಹೊಸ ಭಯಕಾಡಲು ಶುರುವಾಯಿತು ಇವಳು ಮಗಳ ಜೊತೆ ಹೊರಟು ಹೋದರೆ? ಇಲ್ಲಿ ನನ್ನ ನೋಡಿಕೊಳ್ಳುವವರು ಯಾರು? ಅದೂ ಈ ಸ್ಥಿತಿಯಲ್ಲಿ ಎದ್ದು ನಿಧಾನಕ್ಕೆ ಓಡಾಡುವೆನಾದರು ಊಟ ತಿಂಡಿಗೆ ಏನೂ ಮಾಡಲಿ ಜೀವನದಲ್ಲಿ ಒಂದು ಬಾರಿಯೂ ಟೀ ಮಾಡಿಕೊಂಡು ಕುಡಿದವನಲ್ಲ. ಅವಳು ಹೋಗುವಳೆ? ಒಂದು ವೇಳೆ ಹೊರಟೆ ಬಿಟ್ಟರೇ? ಅನುಮತಿ ಕೇಳಿಕೊಂಡು ಬರಲಿ ಕೆನ್ನೆಗೆ ಬಾರಿಸುವೆ ಎಂದುಕೊಂಡೆ.
ವಾರ ಕಳೆಯಿತು ಹೊರಡುವ ಅನುಮತಿ ಕೇಳುವ ವಿಚಾರವಿಲ್ಲ. ನೆಮ್ಮದಿಯಾಯಿತು ಭಯ ಇದೆ ಅಂದುಕೊಂಡೆ. ದಿನ ಕಳೆದ ನಂತರ ಮನೆಯಲ್ಲಿ ಏನೇನೋ ಓಡಾಟ ಏನೋ ತುರ್ತು ನನಗೆ ಒಬ್ಬರು ಏನನ್ನೂ ತಿಳಿಸಲಿಲ್ಲ. ಆದರೆ ಏನೋ ಧಾವಂತ. ಸಣ್ಣ ಮಗಳು ಎರಡು ದಿನದಲ್ಲಿ ಹೊರಡುವಳು ಕಳಿಸಿ ಕೊಡಲು ದೊಡ್ಡವಳು ಬಂದಿದ್ದಾಳೆ ನಂತರ ಅವಳ ಹಿಂದೆ ಅವಳೂ ಹೊರಡುವಳು ನನ್ನವಳು ಹೊರಡುವ ಲಕ್ಷಣಗಳಿಲ್ಲ.
ಅಂದು ಸಂಜೆ ಟೀ ತೆಗೆದುಕೊಂಡು ಬಂದಳು ಮಡದಿ ಟೀ ಕೊಡುತ್ತ ಮಗಳು ನಾಡಿದ್ದು ಬೆಳಗ್ಗೆ ಟ್ರೈನ್ ಗೆ ಹೊರಡುವಳು ನಾನು ಅವಳ ಜೊತೆ ತೆರಳುತ್ತಿದ್ದೇನೆ ಎನ್ನಲು ನನಗೆ ಆಶ್ಚರ್ಯವಾಯಿತು. ಅವಳು ನಿರ್ಧಾರವನ್ನು ಮೊದಲೇ ತೆಗೆದುಕೊಂಡಿದ್ದರಿಂದ ಆಶ್ಚರ್ಯ. ನಾನು ಏನೂ ಹೇಳದಾದೆ ಅನುಮತಿ ಕೇಳಿದರೆ ನಿರಾಕರಿಸಬಹುದು ನಿರ್ಧಾರ ತಿಳಿಸಿದರೆ? ಸಿಟ್ಟು ಒತ್ತಿಬಂತು ಜೊತೆಗೆ ನನ್ನ ದೈಹಿಕ ಅಸಹಾಯಕತೆ ನೆನಪಾಗಿ ಸುಮ್ಮನಾದೆ. ಅವಳು ತೆರಳಿದಳು. ಅವಳು ಹೋಗುವುದನ್ನು ಪ್ರತಿಭಟಿಸಲು ಊಟ ಮಾತ್ರೆ ತ್ಯಜಿಸಿದೆ. ದಪ್ಪ ಮೋರೆ ಹಾಕಿ ಸಾಧ್ಯವಾದಷ್ಟು ಕುಂಟುತ್ತಾ ಓಡಾಡಿದರೂ, ನೋವಾದಂತೆ ಮುಖಚರ್ಯೆ ಮಾಡಿದರೂ ಅವಳ ಮುಖದಲ್ಲಿ ಬದಲಾವಣೆಗಳಿಲ್ಲ, ಹೊರಡಲೇ ಬೇಕು ಎಂದು ನಿರ್ಧಾರ ಮಾಡಿದಂತಿತ್ತು. ಹಿಂತಿರುಗಿ ನೋಡದೆ ಮಗಳ ಜೊತೆ ಹೊರಟು ಹೋದಳು ಸಹ.
ಅವಳು ಹೋಗಿ ಇಪ್ಪತ್ತು ದಿನಗಳು ಕೂಡ ಆಗಲಿಲ್ಲ.ನಾನು ಸೊರಗಿ ಹೋಗಿದ್ದೇನೆ ದಿನಾ ಹೋಟೆಲ್ ಊಟ ತಿಂದು ಹೊಟ್ಟೆ ಕೆಡಿಸಿಕೊಂಡಿದ್ದೇನೆ, ನಾನೇ ಅಡುಗೆ ಮಾಡಲು ಹೋಗಿ ಪಾತ್ರೆ ತಳ ಹಿಡಿಸಿದ್ದೇನೆ, ಕೈ ಸುಟ್ಟು ಕೊಂಡಿದ್ದೇನೆ, ಹಾಕಿ ಕೊಳ್ಳಲು ಒಗೆದ ಬಟ್ಟೆ ಇಲ್ಲದೆ ಒದ್ದಾಡಿದ್ದೇನೆ ಎಲ್ಲಕ್ಕಿಂತಲೂ ಮಿಗಿಲಾಗಿ ಒಂಟಿತನದಿಂದ ನರಳಾಡಿದ್ದೇನೆ.
ಮಲೆನಾಡ ತಪ್ಪಲಿನಲ್ಲಿ ತಂದೆ ತಾಯಿಯ ಪ್ರೀತಿಯಲ್ಲಿ, ತಮ್ಮ ತಂಗಿಯಂದಿರ ಒಡನಾಟದಲ್ಲಿ ಬೆಳೆದವಳು ಹಿಂದೆಂದೂ ಕಾಣದ ಹೊಸ ವ್ಯಕ್ತಿ ನನ್ನನು ತನ್ನ ಪ್ರೀತಿಯೆಂದು ತಿಳಿದು ತನ್ನವರನೆಲ್ಲ ಬಿಟ್ಟು ನನ್ನೊಡನೆ ಬಂದಳು. ಅವಳ ತನು,ಮನ, ಕನಕ ಎಲ್ಲವನ್ನೂ ನನಗಾಗಿ ನೀಡಿದಳು ನನ್ನ ಮಕ್ಕಳ ತಾಯಿಯಾದಳು, ಕೊನೆಗಾಲದಲ್ಲಿ ನನ್ನ ತಾಯಿಯ ದಾದಿಯಾದಳು, ಅಕ್ಕ ಭಾವ ನೆಂಟರು ಬಂದಾಗ ಸತ್ಕಾರಿಣಿಯಾದಳು, ನನ್ನ ಸೇವಕಿಯಾದಳು. ನನ್ನ ಕೋಪತಾಪ ಅನೈತಿಕಥೆ ಎಲ್ಲದಕ್ಕೂ ಮೂಕ ಸಾಕ್ಷಿಯಾದಳು. ನನ್ನ ಕೆಟ್ಟ ಚಟಗಳಿಗೆ ಬಲಿಯಾದಳು.
ಅವಳ ಮೇಲೆ ಕೈ ಮಾಡಲು ನನಗೆ ಹಕ್ಕನ್ನು ಕೊಟ್ಟವರು ಯಾರು? ಗಂಡ ಎಂದ ಮಾತ್ರಕ್ಕೆ ಆಕೆ ನನ್ನ ಗುಲಾಮಳೇ? ಈಗ ನಿಜವಾದ ಗುಲಾಮ ಯಾರು ಆಕೆ ನನ್ನ ಬಳಿ ಇರುವುದಿಲ್ಲ ಎಂಬ ಯೋಚನೆಯಿಂದಲೇ ದಿಗಿಲುಗೊಂಡವನು ನಾನು. ಭಯ ನೈಜವಾದಗ ಅಸಹಾಯಕನಾಗಿದ್ದೇನೆ ಕೇವಲ 20ದಿನದ ಒಂಟಿತನಕ್ಕೆ ಪತರುಗುಟ್ಟಿದ ನಾನು ಮದುವೆಯ ಇಷ್ಟೂ ವರ್ಷದಲ್ಲಿ ಆಕೆಯನ್ನು ಒಂಟಿಯಾಗಿಸಿದೆ. ಮದುವೆಯ ಹೊಸತರಲ್ಲಿ ಆಕೆಯ ಕಣ್ಣುಗಳಲ್ಲಿ ಮೆಚ್ಚುಗೆಯ ಮಾತುಗಳಿಗೆ ಕಾತರವಿತ್ತು, ಪ್ರೀತಿಯ ಮಾತುಗಳಿಗೆ ಬಯಕೆ ಇತ್ತು. ಆದರೆ ನಾನು ನನ್ನ ದೈಹಿಕ ಬಯಕೆಗಳನ್ನು ಮಾತ್ರ ಪೂರೈಸಿ ಇಬ್ಬರೂ ಮಕ್ಕಳನ್ನು ಕರುಣಿಸಿದೆ, ಇವಳ ಜೊತೆ ಅವುಗಳನ್ನೂ ಹಿಂಸಿಸಿದೆ.
ಜೀವನ ಪೂರ್ತಿ ನನಗೇ ತಿಳಿಯದ ಅಹಂಕಾರ, ಕೋಪ, ಹುಂಬತನ, ಗರ್ವಕ್ಕೆ ಒಳಗಾಗಿ ಬರಿ ನಾಲ್ಕನೇ ತರಗತಿಯ ಮುಖ ನೋಡಿದ್ದ ಪೇಟೆಯ ಜೀವನವೇ ತಿಳಿಯದ ಒಂದು ಮುಗ್ಧ ಜೀವವ ಬಂಧಿಯಾಗಿಸಿ ಹಿಂಸಿಸಿ ಈಗ ಅದೇ ಜೀವದ ಸಾಮೀಪ್ಯಕ್ಕಾಗಿ ಅಳುತ್ತಿರುವೆ.
Gva
KANNADA KANASU MANASU
0 Followers
0 Following