ಪ್ರೀತಿ ಎಂದರೇನು ಎಂದು ಈಗ ಅರಿತೆನು….

ProfileImg
17 Apr '24
2 min read


image

ಭಾವನೆಗಳು ನಮ್ಮ ವೀಕ್ನೆಸ್ಸು ಅನ್ನೋದೆಲ್ಲಾ ಬರೀ ಬಾಯ್ಮಾತು. ಪ್ರೀತಿ, ದ್ವೇಷ, ಹೊಟ್ಟೆಕಿಚ್ಚು… ಭಾವನೆ ಯಾವುದೇ ಇರಲಿ ಅವೇ ನಮ್ಮನ್ನು ಮನುಷ್ಯರನ್ನಾಗಿಸುತ್ತವೆ. ಒಗ್ಗೂಡಿಸುತ್ತವೆ ಅಥವಾ ಕೆಲವೊಮ್ಮೆ ಬೇರ್ಪಡಿಸುತ್ತವೆ ಕೂಡ. 

ಈ ಭಾವನೆಗಳ ವಿಷಯಕ್ಕೆ ಬಂದಾಗ ನಾವ್ಯಾರು ಒಬ್ಬರಂತೆ ಮತ್ತೊಬ್ಬರಲ್ಲ. ಕೆಲವರು ತೀರಾ ಭಾವಜೀವಿಗಳಾದರೆ, ಇನ್ನೂ ಕೆಲವರು ಯಾವ ಭಾವನೆಯನ್ನೂ ತೋರ್ಪಡಿಸದ ನಿರ್ಲಿಪ್ತರು! ಹಾಗೆಂದು ಅವರಿಗೆ ಭಾವನೆಗಳೇ ಇಲ್ಲ ಎಂದಲ್ಲ. ಇನ್ನು ಕೆಲವರು ಕರುಣಾಮಯಿಗಳಾದರೆ, ಕೆಲವರು ಕಲ್ಲು ಹೃದಯದವರು. ಶಾಂತಿಯೇ ಮೂರ್ತಿವೆತ್ತಂತಿರುವವರು ಕೆಲವರಾದರೆ, ಮತ್ತೊಂದಷ್ಟು ಜನ ರೌದ್ರಾವತಾರಿಗಳು! ಇನ್ನೂ ಹಲವರು ವೈರುಧ್ಯಗಳ ಸಂಗಮ! ಈ ಭಾವನೆಗಳೇ ಹಾಗೆ…

ಮನುಷ್ಯ ಜೀವಿ ತುಂಬಾ ಇಷ್ಟಪಡುವ, ಆದರೆ ಅಷ್ಟೇ ಅರ್ಥವಾಗದ ಸುಂದರ ಭಾವನೆಯೆಂದರೆ ಅದು ʼಪ್ರೀತಿʼ. ಸಿಟ್ಟಿನಂತೆ ಪ್ರೀತಿ ಅರೆ ಕ್ಷಣ ಬಂದು ಹೋಗಬಹುದು. ಮಾಯಾಜಿಂಕೆಯಂತೆ ಕೈಗೆಟುಕದೇ ಇರಬಹುದು. ಈ ಪ್ರೀತಿ ಎಷ್ಟು ಸುಂದರ ಭಾವನೆಯೋ ಕೆಲವೊಮ್ಮೆ ಅಷ್ಟೇ ದುಃಖವನ್ನೂ ತರಬಹುದು. ಸಿಟ್ಟನ್ನು ಗೆಲ್ಲುವವರು ಹೇಗೆ ಅಪರೂಪವೋ ಹಾಗೇ ಪ್ರೀತಿಯಲ್ಲಿ ಗೆಲ್ಲುವವರೂ ಕಡಿಮೆಯೇ. 

ಹೆತ್ತವರು, ಕುಟುಂಬ ಸದಸ್ಯರ ನಡುವಿನ ಪ್ರೀತಿ ಸಹಜ, ಆದರೆ ಯಾರೋ ಅಪರಿಚಿತರನ್ನು ಕಂಡಾಗ ಹುಟ್ಟುವ ಪ್ರೀತಿ ಒಂದು ವಿಸ್ಮಯ. ಅದು ಕ್ಷಣಿಕ ಆಕರ್ಷಣೆಯಲ್ಲದ, ಮನಸ್ಸಲ್ಲಿ ಬಿರುಗಾಳಿಯೆಬ್ಬಿಸಿ ಶಾಂತತೆಗೆ ಹಿಂದಿರುಗುವ ಅನುಭವ. ಅದರಲ್ಲಿ ಗೊಂದಲಗಳಿಲ್ಲ, ಅದು ದೃಢನಿಶ್ಚಯ. ಜೊತೆಯಾಗುವ, ಎಂದಿಗೂ ಜೊತೆಗಿರುವ ನಿರ್ಧಾರ. ಎಲ್ಲಾ ಮೆಟ್ಟಿಲುಗಳನ್ನು ಯಶಸ್ವಿಯಾಗಿ ಏರಿ ಈ ಹಂತಕ್ಕೆ ಬರಬೇಕಾದರೆ ಅದಕ್ಕೆ  ಅದೃಷ್ಟವೂ ಬೇಕು. 

ಹಾಗಾದರೆ ಈ ಪ್ರೀತಿ ಎಂದರೇನು? ಪ್ರತಿಯೊಬ್ಬನ ವ್ಯಾಖ್ಯಾನವೂ ವಿಭಿನ್ನವಾಗಿರಬಹುದು. ಅದು ಅವರವರ ಕಲ್ಪನೆ, ಅನುಭವಗಳನ್ನು ಆಧರಿಸಿರುತ್ತದೆ. ಅನಿರೀಕ್ಷಿತವಾಗಿ ಇಬ್ಬರು ವ್ಯಕ್ತಿಗಳ ನಡುವೆ ಹುಟ್ಟುವ, ಎಂದೂ ಬಿಟ್ಟುಹೋಗದ, ಯಾವುದೇ ತ್ಯಾಗಕ್ಕೂ ಸಿದ್ಧವಿರುವ, ಸ್ವಾರ್ಥರಹಿತ ಭಾವನೆಯೇ ಪ್ರೀತಿ. ಇದಕ್ಕೆ ಪರಿಶುದ್ಧ ಮನಸ್ಸಷ್ಟೇ ಅರ್ಹತೆ. ಇಂತಹ ಭದ್ರ ಬುನಾದಿಯ ಮೇಲೆ ನಿರ್ಮಾಣವಾಗುವ ಸೌಧಕ್ಕೆ ಯಾವುದನ್ನೂ ತಡೆದುಕೊಳ್ಳುವ ಶಕ್ತಿಯಿರುತ್ತದೆ.

ಈ ಹಂತದಲ್ಲಿ ಇದು ಭಾವನೆಯಷ್ಟೇ ಆಗಿರುವುದಿಲ್ಲ, ಅದಕ್ಕೆ ಮಿಗಿಲಾದ ಬಂಧವಾಗಿ ಬೆಳೆದಿರುತ್ತದೆ. ಇಲ್ಲಿ ಸರ್ಪ್ರೈಸ್‌ ಗಳು, ಸಿಹಿಮಾತುಗಳು ಊಟದ ನಡುವಿನ ಉಪ್ಪಿನಕಾಯಿಯಷ್ಟೇ… ಅನಿವಾರ್ಯವೇನಲ್ಲ. ಏಕೆಂದರೆ ಕಾಲ ನಿಂತ ನೀರಲ್ಲವೇ ಅಲ್ಲ. ಅದು ನಮ್ಮ ಮನಸ್ಸು, ಪ್ರೀತಿಯನ್ನು ಪಕ್ವವಾಗಿಸುತ್ತದೆ. ಸುಂದರ ಕಲ್ಪನೆಯಾಗಿ, ಆಶಾವಾದವಾಗಿ  ಆರಂಭವಾಗುವ ಪ್ರೀತಿ ಬರುಬರುತ್ತಾ ನಮ್ಮ ಶಕ್ತಿಯಾಗುತ್ತದೆ. “ನಿನಗೆ ನಾನು- ನನಗೆ ನೀನು” ಎಂಬ ಭಾವನೆ ಬಂದುಬಿಡುತ್ತದೆ. ಏನೇ ಆದರೂ ಆಕೆಯಿದ್ದಾಳಲ್ಲ/ಆತನಿದ್ದಾನಲ್ಲ ಎಂಬ ಧೈರ್ಯ. ಕೊನೆವರೆಗೂ ಅಷ್ಟಿದ್ದರೆ ಸಾಕು ಎಂಬ ಸಣ್ಣ ಸ್ವಾರ್ಥ!

ನಾನು ಕವಿಯಲ್ಲ. ಆದರೆ ಈ ಪ್ರೀತಿಯಿಂದಾಗಿ ನಾನು ಕವಿತೆಗಳನ್ನು ಬರೆದಿದ್ದೇನೆ, ಕನಸುಗಳನ್ನು ಕಂಡಿದ್ದೇನೆ. ಕಾಣುತ್ತಲೇ ಇದ್ದೇನೆ. ಹಾಗೆಂದು ಅವೆಲ್ಲಾ ನಿಜವಾಗುತ್ತವೆ ಎಂಬ ಭ್ರಮೆಯಿಲ್ಲ. ಈ ಜೀವನ ಬಲು ಸುಂದರ. ಈ ಪ್ರೀತಿ ಅದನ್ನು ಮತ್ತಷ್ಟು ಸುಂದರವಾಗಿಸಿದೆ. 

Category:Relationships



ProfileImg

Written by Guruprasad T N

0 Followers

0 Following