ಪ್ರೀತಿಗಿಲ್ಲ ಪರಿಮಿತಿ

ProfileImg
21 Feb '24
4 min read


image

 

"ಈ ತರಾ ಮಳೆ ಬರ್ತಾ ಉಂಟು , ಅಲ್ಲಾ  ಇವನೆಂತ ಮಾಡ್ತಿದಾನೆ ತೋಟದಲ್ಲಿ?"

  ಶಂಕ್ರಪ್ಪನವರು ಮೇಲಿನ ಕೋಗಿನ ಕಡೆ ನೋಡುತ್ತಾ , ಸುರಿವ ಮಳೆಗೆ‌ಶಪಿಸುತ್ತಾ ವರಾಂಡದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು . ಈ ಮುಂಗಾರಿನ ದಿನಗಳು ಹಾಗೆಯೇ ಬಿಟ್ಟೂ  ಬಿಡದೆ ಕಾಡುತ್ತೆ.‌ ಈ ನಡುವೆ ತೋಟ ಗದ್ದೆಗೆ ಹೋದರಂತೂ ಒದ್ದೆಯಾಗೋದು ಖಚಿತ. ಹಿಂಗಾರ ತರಲೆಂದು ಹೋಗಿದ್ದ ಮಾದ , ಮಳೆ ಬರುವ ಮುನ್ಸೂಚನೆ ಇಲ್ಲವಾದ್ದರಿಂದ ಅವನು ಹೊದಿಯಲು  ಕಂಬಳಿ ಕೂಡ ತೆಗೆದುಕೊಂಡು ಹೋಗಿಲ್ಲ. ಅದಾಗಲೇ ಬೇಡದ ನೆನಪುಗಳಲ್ಲಿ ನೆನೆದ ಮಾದನಿಗೆ ತೊಯ್ದ ಮಳೆಯ ಪರಿವೆಯಿರಲಿಲ್ಲ. ಮಾದ ಚಿಕ್ಕಂದಿನಿಂದಲೂ ಒಂಟಿಯಾಗಿ ಬೆಳೆದವನು.

 ಕಿಟ್ಟ ಮಾಲೂರಿನಾಚೆಗಿನ ಕಮಲಳನ್ನು  ಮದುವೆಯಾಗಿ ಒಬ್ಬ ಸಂಸಾರಿಯಾಗಿದ್ದ . ಅವರದೆಂದು ಸೂರು ಇಲ್ಲವಾದ್ದರಿಂದ 

ಬೈರಪ್ಪನವರ ಮನೆಯ ಕೊಟ್ಟಿಗೆಯಲ್ಲಿ ವಾಸವಿದ್ದರು . ಅವರ ದಾಂಪತ್ಯದ ಕುರುಹಾಗಿ ಪುಟ್ಟ ಮಗುವೊಂದು ಜನಿಸಿತು.

ಅವನಂತೂ ಬಣ್ಣದಲ್ಲಿ ಕಪ್ಪಾಗಿದ್ದರೂ , ಗುಂಡು ಗುಂಡಾಗಿ ಬಹಳ ಚೆಂದವಾಗಿದ್ದ . ಬಾಲ್ಯದಿಂದಲೇ ಸುತ್ತ ಮುತ್ತಲಿನವರ

ಮನ ಸೆಳೆದಿದ್ದ. ಅವನಿಗೆ ಮಾದ ಎಂದು ನಾಮಕರಣ ಮಾಡಿದರು.  ಹೆತ್ತವರ ಜೊತೆಯಲ್ಲಿ ತೋಟ ಗದ್ದೆಯ ದಡದಲ್ಲಿ 

ಮಲಗಿ  ಆಡಿ ಬೆಳೆದ. 4 ವರ್ಷದವನಿರುವಾಗಲೇ ಅಡಕೆಯ ಮರದಿಂದ ಕೆಳಗೆ ಬಿದ್ದ ಕಿಟ್ಟ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಅಲ್ಲಿಂದ ತಂದೆಯಿಲ್ಲದ ತಬ್ಬಲಿಯಾಗಿ ಬೆಳೆದ . ಆದರೆ ಕಮಲ ತಂದೆ ತಾಯಿಯರಿಬ್ಬರ  ಜವಬ್ದಾರಿಯನ್ನು ಹೊತ್ತು ಮಾದನನ್ನು

ಬೆಳೆಸಿದಳು . ಅವನನ್ನು ಹತ್ತಿರದ ಶಾಲೆಗೂ ಸೇರಿಸಿದಳು . ಆದರೆ ಅದು ಯಾಕೋ ಆ  4 ಅನ್ನುವ ಸಂಖ್ಯೆ ಮಾದನಿಗೆ ಸರಿಬರಲಿಲ್ಲ. ಅವನು ನಾಲ್ಕನೇ ತರಗತಿಗೆ ಹೋಗುವಾಗ ವಿಪರೀತ ಜ್ವರ ಬಂದು ಕಮಲ ಕೂಡ ಅಸು ನೀಗಿದಳು .  ಅನಂತರ ಮಾದ ಪೂರ್ತಿ ಒಂಟಿಯಾದ . ಅವನ ಕಷ್ಟ ಸುಖ ಕೇಳಲು ಅಲ್ಲಿ ಪಕ್ಕದಲ್ಲಿ ತಮ್ಮೊಂದಿಗೆ ಕೊಟ್ಟಿಗೆಯಲ್ಲಿ ವಾಸವಿದ್ದ ಪುಷ್ಪಳ  ಹೊರತೂ ಮತ್ಯಾರು ಇರಲಿಲ್ಲ , ಇನ್ನು ಶಾಲೆಯ ಮಾತೆಲ್ಲಿ .

 *****************************************************

ಆ ದಿನ ಮುಂಜಾನೆಯ ರವಿಯಲ್ಲಿದ್ದ ಹೊಳಪು ಅವಳಲ್ಲಿರಲಿಲ್ಲ, ಅವರಿಬ್ಬರ ಪ್ರೀತಿಗೆ ಭೇದವಿಲ್ಲವಾದರೂ , ಮಂಜನ ಅಳಿಯನಾಗಲು ಮಾದನಿಗೆ ಕೆಲವು ಷರತ್ತುಗಳು ಇತ್ತು. ಒಂದೇ ಜಾತಿಯವರಾದರೂ , ಅವರ ಪ್ರೀತಿಗೆ ಅಂತಸ್ತಿನ ಅಂತರವಿತ್ತು , ಹಾಗೆಂದು  ಮಂಜನೇನು ಅಗರ್ಭ ಶ್ರೀಮಂತನೂ ಅಲ್ಲ.  ಅವನ ಮಗಳು ಕಾವೇರಿ ಅಂತಹ ಸೌಂದರ್ಯವತಿಯೂ ಏನಲ್ಲ.  ಆದರೆ ಅವರದೊಂದು ಸೂರು ಕಟ್ಟಿಕೊಂಡು ಅವರಿವರ ಮನೆಯ ಕೆಲಸ ಮಾಡಿಕೊಂಡಿದ್ದರು . ಮನೆಯ ಮುಂದೆ ನಾಕು ಅಡಕೆಯ ಮರ ಹಾಗೂ ತೆಂಗಿನ ಮರ ನೆಟ್ಟಿದ್ದರು . ಹಾಗೆಯೇ ಆ ಕೇರಿಯವರಲ್ಲಿ ಸ್ವಲ್ಪ ಉತ್ತಮವಾಗಿ ಕಾಣುತ್ತಿದ್ದ ಮಂಜನಿಗೆ ಸ್ವಲ್ಪ ಅಹಂಕಾರವು ಇತ್ತು . ಆದರೆ ಅವನು ತನ್ನ ಮಗಳ ವಿಷಯದಲ್ಲಿ,  ಸುಂದರ ಭವಿಷ್ಯದ ಕನಸು ಕಂಡಿದ್ದ.  ತಾನಂತೂ ಹೀಗೇ ಕೊಂಪೆಯಲ್ಲಿ ಬೆಳೆದೆ  ಆದರೆ ಮಗಳಾದರೂ ಪಟ್ಟಣ ಸೇರಿ ಸುಖವಾಗಿ ಬಾಳಿ ಅನ್ನುವ ಆಶಯ.

 

 ಕಾವೇರಿ ಅದಾಗಲೇ ಮಾದನ ಪ್ರೀತಿಯಲ್ಲಿ ಸಿಲುಕಿದ್ದಳು . ಈ ವಿಷಯ ಊರಿಗೆಲ್ಲಾ ಗೊತ್ತೆ ಇತ್ತು ಆದರೆ ಮಂಜನ ಬಾಯಿಗೆ ಬಾಯಿ ಕೊಡುವ ಧೈರ್ಯ  ಅಲ್ಲಿ ಯಾರಿಗೂ ಇರಲಿಲ್ಲ.  ಹಾಗಾಗಿ ಎಲ್ಲರೂ ಗುಸು ಗುಸು ಮಾತನಾಡಿ ಸುಮ್ಮನಾಗುತ್ತಿದ್ದರು ..

" ಅಪ್ಪ ನೀವೆಷ್ಟೇ ಬಲವಂತ ಮಾಡಿದ್ರೂ ನಾ ಮಾತ್ರ ಮಾದನನ್ನೇ ಮದ್ವೇ ಆಗೋದು , ಅದೇನಾರ ಆಗ್ಲಿ ನಾನಂತೂ 

ಬೇರೆ ಮದ್ವೆ ಆಗಲ್ಲ "  ಕಾವೇರಿ ತಂದೆಯ ಮುಂದೆ ಸೋತರೂ ಮತ್ತದೇ ವಿಷಯ ಪ್ರಸ್ತಾಪಿಸಿದಳು . ಆದರೆ ಮಂಜ ಕರಗಬೇಕಲ್ಲ

 

“ಹಾಗೇನರ ಆದ್ರೆ ಅದು ನನ್ನ ಸತ್  ಮೇಲೆ ನೆನಪಿಟ್ಕೋ, ನಾ ಇರತನಕ ಅವ್ನ್ ಜೊತೆ ನಿನ್ ಮದ್ವೆ ಮಾಡಲ್ಲ”

" ಯಾಕಪ್ಪಾ ಅವ್ನಂದ್ರೆ ನಿಂಗೆ ಇಷ್ಟುಸಿಟ್ಟು , ಅವ್ನು ಕಷ್ಟ ಪಟ್ಟು ದುಡಿತಿದ್ದ , ಯಾರ್ ಯಾರ್ ಮಂಡೆ ಹೊಡ್ದು ಮಾಡ್ತಿಲ್ಲ .

ನೆನಪಿಟ್ಕೊ"

" ಹಾ ಹೌದೌದು , ಅವ್ರಿವ್ರ ಮನೆ ಕೊಟ್ಟಿಗೆಯಲ್ಲಿ ಜೀವನ ಕಳಿತಿದ್ದಾನೆ , ನೀನು ಅವ್ರ ಮನೆ ಕೆಲಸಕ್ಕೆ ದೂಡ್ತಾನೆ ಆಗ ಗೊತ್ತಾಗುತ್ತೆ , ನಾ ಯಾಕ್ ಹೇಳ್ದೆ ಅಂತ " 

ಮಂಜನ ಮಾತಿನಲ್ಲೂ ಸತ್ಯವಿತ್ತು .  ಆದರೆ ಅಳಿಯನಿಗೆ ಸಹಾಯ ಮಾಡುವ ಬದಲು ಅವನನ್ನು ದೂರವಿಡೋದು ಸರಿನಾ?  ಅದರಲ್ಲೂ ಮಾದ ಮತ್ತಾರೋ ಆಗಿರಲಿಲ್ಲ ತನ್ನ ಸ್ವಂತ ಸಹೋದರಿಯ ಮಗ.

ಹೆತ್ತವರಿಲ್ಲದ ಕಂದನಿಗೆ ಕನಿಕರ ತೋರುವ , ಅವರಿಗೆ ಸಹಾಯಹಸ್ತ ಚಾಚುವ  ಕೈಗಳು ಸಿಗುವುದು ಅಪರೂಪ. ಪೀಡಿಸುತ್ತಿದ್ದ ಮಾದನನ್ನು ಸಂತೈಸಲು ಮಂಜನೊಂದು

ಸುಳ್ಳು ಭರವಸೆ ನೀಡಿದ್ದ

**ಒಂದು ಮನೆ ಕಟ್ಟಿ ಬಿಡು ಚಿಕ್ಕದಾದರೂ ಸರಿ,  ಆಗ ಖಂಡಿತಾ ಮಗಳನ್ನು ನಿನಗೇ ಕೊಡುತ್ತೇನೆಂದು**

ಆ ಮಾತನ್ನು ನಂಬಿ ಹಗಲಿರುಳು ಶಂಕರಪ್ಪನವರ ಮನೆಯಲ್ಲಿ ದುಡಿಯುತ್ತಿದ್ದ . ಬೈರಪ್ಪನವರ ನಿಧನದ ನಂತರ ಅವರ ಮಗ ಶಂಕರಪ್ಪನವರು ಮಾದನನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಮೊದಲಿನಂತೆ ದನದ ಕೊಟ್ಟಿಗೆಯ ಪಕ್ಕದಲ್ಲಿರದೆ ಮಾದನಿಗಾಗಿ ಒಂದು ಪುಟ್ಟ ಕೊಠಡಿ ಮಾಡಿಸಿದ್ದರು. ಅವನ

ಮದುವೆಯ ನಂತರವೂ ಅವನನ್ನು ಇಲ್ಲೇ ಇರಿಸಿಕೊಳ್ಳುವ ಆಸೆ ಅವರದ್ದು . ಆದರೆ ಕಾವೇರಿಗಾಗಿ  ಮಾದ ಊರು ತೊರೆದು ಹೋಗಲು ತಯಾರಾಗಿದ್ದ ವಿಷಯ ಅವರಿಗಾದರೂ ಹೇಗೆ ತಿಳಿಯಬೇಕು.

 

*****************************************************

ಆ ದಿವಸ ಬೆಳಗ್ಗೆ ಎದ್ದು ಹಿಂಗಾರ ತರಲೆಂದು ತೋಟದತ್ತ ಹೋದವನಿಗೆ ತಿಳಿದಿತ್ತು ,ಮಂಜ ಅದಾಗಲೇ ಕಾವೇರಿಗಾಗಿ ಗಂಡು ನೋಡಿ ಅವರನ್ನು ,ಮನೆಗೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಕರೆದಿದ್ದಾರೆ . ಅವನೆಂದೂ  ಹೀಗಾಗಬಹುದೆಂದು ಎಣಿಸಿರಲಿಲ್ಲ . ಅತ್ತ ಕಾವೇರಿ ಕೂಡ ಗಾಬರಿಗೊಂಡಳು, ಅದೇ ಕಾರಣಕ್ಕೆ ಮಾದ

ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ತೋಟದಲ್ಲಿ ಕುಳಿತಿದ್ದು. . ಮಳೆ ಒಂಚೂರು ಕಡಿಮೆಯಾಗುತ್ತಲೇ  ಶಂಕರಪ್ಪನವರು ಕೊಡೆ ಹಿಡಿದು ತೋಟದತ್ತ ಬಂದವರು

“ ಹೇ ಮಾದ ಇಲ್ಲೇನೋ ಮಾಡ್ತಿದಿಯಾ ಅಲ್ಲಾ ನಿಂಗೆಂತಾ ಮೆಟ್ಕೊಂಡಿತ್ ಮಾರಾಯ , ಬೇಗ ಬರದಲ್ಲನಾ?”

ಅವರ ಮಾತು ಕೇಳಿ ಗಡಿಬಿಡಿಯಲ್ಲಿ ವಾಸ್ತವಕ್ಕೆ ಬಂದ, ತಾನು ತೊಯ್ದ ಸಂಗತಿಯೂ ಅವನ ಅರಿವಿಗೆ ಬಾರದಾಗಿತ್ತು. ಅವರೇನೋ ಛತ್ರಿ ಹಿಡಿದು ನಡೆದರು , ಆದರೆ ಮನೆಗೆಲಸದ ಮಾದ ನೆನೆಯುತ್ತಲೆ ಮನೆಗೆ ಸೇರಿದ . ಸಂಜೆಯ ಹೊತ್ತಿಗೆ

ಎಲ್ಲಾ ಕೆಲಸ ಮುಗಿಸಿ ಓಣಿಯತ್ತ ಹೋದ , ಅವನಿಗೂ ಗೊತ್ತು ಕಾವೇರಿ ಸಂಜೆ ಅಲ್ಲಿಗೆ ಬಂದೆ ಬರುವಳೆಂದು , ಅವಳಲ್ಲಿ ಮೊದಲೆ ಹಾಜರಾಗಿದ್ದಳು. ಮಾದನನ್ನು ಕಂಡೊಡನೆ ಅವಳ ಕಣ್ಣಲ್ಲಿ ನೀರು ಗಳಗಳನೆ ಇಳಿಯುತ್ತಿತ್ತು .

 

“ಮಾದ ಈಗೇನು ಮಾಡದೋ,ಅಪ್ಪಯ್ಯ ಹಿಂಗೆ ಮಾಡ್ತಾರೆ ಅಂತ ಗೊತ್ತೇ ಇರ್ಲಿಲ್ಲ ನಂಗೆ”

“ನಾ ಹೇಳ್ದಂಗೆ ಮಾಡ್ತಿಯಾ”

" ಹಾ ಹೇಳು ಎಂತ ಮನೆ ಬಿಟ್ ಬರ್ಬೇಕಾ ?" ಅವನಿಗಿಂತ ಮೊದಲೇ ತಯಾರಿದ್ದಳು ಅವಳು. ತನ್ನ ಬಗೆಗಿನ ಅವಳ ಪ್ರೀತಿಗೆ ಅವನು ಮನಸೋತಿದ್ದ , ಇವಳಿಗೆ ಕಷ್ಟ ಬರದಂತೆ ನೋಡಿಕೊಳ್ಳುವೆನೆಂಬ ಪ್ರತಿಜ್ಞೆ ಮಾಡಿ ಅವನು ಕಾವೇರಿಯೊಂದಿಗೆ  ಸಪ್ತಪದಿ ತುಳಿಯಲು ಮುಂದಾದ .

ರಾತ್ರೋರಾತ್ರಿ ಮನೆಯಿಂದ ಕಾವೇರಿಯ ಜೊತೆಗೆ ಪಟ್ಟಣದ ಹಾದಿ ಹಿಡಿದ . ಊರಿನಂತೆ ಜನರಿಂದ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಅವರಿಗಿಲ್ಲ , ಯಾಕೆಂದರೆ ಪಟ್ಟಣದಲ್ಲಿ ಯಾರ ಹಂಗಿಲ್ಲದೆ ಎಲ್ಲರಂತೆ ಅವರು ಬದುಕಬಹುದು . ಜೊತೆಗೆ ಅವರಿಬ್ಬರೂ ಪತಿಪತ್ನಿಯರೆಂದು ಅಲ್ಲಿದ್ದವರು ನಂಬಿದ್ದರು .

ಬೃಹತ್ ಪಟ್ಟಣದಲ್ಲಿ ಚಿಕ್ಕದೊಂದು ಸೂರಿನಡಿ ಅವರಿಬ್ಬರ ಪುಟ್ಟ ಸಂಸಾರ ಶುರುವಾಗಿತ್ತು , ಅತ್ತ ಮಂಜ ಕೊತಕೊತನೆ ಕುದಿಯುತ್ತಿದ್ದ.   ಅಲ್ಲೊಂದು ಚಿಕ್ಕ ಕಾರ್ಖಾನೆಯಲ್ಲಿ ಅವರಿಬ್ಬರೂ  ಕೆಲಸಕ್ಕೆ ಸೇರಿಕೊಂಡರು , ಈಗಂತೂ ಅವರಿಗೆ ಹಣದ ತೊಂದರೆ ಬಾಧಿಸಲಿಲ್ಲ . ದಿನ ಕಳೆದಂತೆ ಚಿಕ್ಕ ಸೂರಿನಿಂದ

ದೊಡ್ಡದಾದ ಮನೆಯ ಬಾಡಿಗೆದಾರರಾದರು. ವರುಷ ಕಳೆಯುತ್ತಲೆ ಕಾವೇರಿ ಗರ್ಭಿಣಿಯಾದಳು . 

ಅವಳೆಲ್ಲ ಆಸೆಗಳನ್ನು ಮಾದ ಪೂರೈಸಿದ್ದ ಆದರೆ ಅವಳ ತಾಯಿಯ ಪ್ರೀತಿಯೊಂಧನ್ನು  ಹೊರತು ಪಡಿಸಿ. ತಾಯಿಯಾಗುತ್ತಿರುವ ಕಾವೇರಿಗೆ ತಾಯಿಯನ್ನು ಕಾಣುವ ಆಸೆಯಾಗಿತ್ತು , ಅದು ಹೇಗೊ ಗೆಳೆಯನನ್ನು ಸಂಪರ್ಕಿಸಿ ಅವಳ ತಾಯಿಯನ್ನು ಬರ ಹೇಳಿದ್ದ ಮಂಜ ಮಡದಿಯ ಜೊತೆಗೆ ಕಾವೇರಿಯನ್ನು ನೋಡಲು ಬಂದಿದ್ದ .  ಮೊದಲಿನಂತೆ ಸಿಟ್ಟು

ತೋರದೆ , ಮಾದನನ್ನು ಪ್ರೀತಿಯಿಂದ ಮಾತನಾಡಿದ. ಅವನಿಗೆ ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆಯಿತ್ತು. 

ಅದೇ ಕಾರಣಕ್ಕೆ ಶ್ರೀಮಂತ ವರನ ಹುಡುಗಾಟದಲ್ಲಿ ಅವನಿದ್ದ ,  ಆದರೆ ಮಾದ ಪಟ್ಟಣದಲ್ಲಿ ಮನೆ ಮಾಡಿ ರಾಣಿಯಂತೆ

ನೋಡಿಕೊಳ್ಳುತ್ತಿದ್ದಾನೆ, , ಜೊತೆಗೆ ಊರಿನಂತೆ ಅಂಜಿಕೆಯ ಬದುಕು ಇಲ್ಲದೇ,  ಇಲ್ಲಿ ಯಾವ ಬೇಧವಿರದೆ ಬದುಕುವಾಗ ಅವನಿಗೂ ತಕರಾರು ಇರಲಿಲ್ಲ. ಮಾದನನ್ನು ಮಂಜ ಅಳಿಯನಾಗಿ ಒಪ್ಪಿಗೆಯಾಗಿದ್ದ .  ಕಡಿದು ಹೋಗಿದ್ದ ತವರ ಸಂಬಂಧ ಮತ್ತೆ ಸಿಕ್ಕ ಖುಷಿ ಕಾವೇರಿಗೆ,  ಅನಾಥನಾದ ತನಗೂ ಆಸರೆಯಾದ ಮಡದಿ,  ಮತ್ತವಳ ಕುಟುಂಬದ ಬಗೆಗೆ ಗೌರವ ಮಾದನಿಗೆ.

✍️ ಅಮ್ಮು ರತನ್ ಶೆಟ್ಟಿ 

 

 




ProfileImg

Written by Ammu Rathan shetty

Writer