ಶಬ್ದ, ಜಗತ್ತು ಮತ್ತು ಬದುಕು.

ProfileImg
25 Mar '24
5 min read


image

ಶಬ್ದ, ಜಗತ್ತು ಮತ್ತು ಬದುಕು.

ಶಬ್ದ ಜೀವಂತಿಕೆಯ ಸಂಕೇತ. ಯಾವುದೇ ಚರಾಚರಗಳ ಅಸ್ತಿತ್ವದ ಅನುಭೂತಿಯು  ಶಬ್ದದಿಂದ ಆಗುತ್ತದೆ. ನಿಶ್ಯಬ್ದ ಜಗತ್ತು ನಮ್ಮ ಊಹೆಗೂ ನಿಲುಕದು.

ಭೌತಶಾಸ್ತ್ರದ ಪ್ರಕಾರ ಶಬ್ದ ಎಂದರೆ ಕಂಪನ.  ಕಂಪನಗಳು ಗಾಳಿ, ನೀರು ಅಥವಾ ದ್ರವ ಮತ್ತು ಘನವಸ್ತುಗಳ ಮಾಧ್ಯಮದ ಮೂಲಕ ಒಂದರಮೇಲೊಂದು ಅಪ್ಪಳಿಸಿದಾಗ ಸದ್ದು ಕೇಳುವಂತಾಗುತ್ತದೆ.

ಶಬ್ದ ಅನಂತ ಬ್ರಹ್ಮಾಂಡದ ಸೃಷ್ಟಿ.  ಶಬ್ದವು ಎಲ್ಲರನ್ನು ಮತ್ತು ಎಲ್ಲವನ್ನು ಭಗವಂತನೊಂದಿಗೆ ಸಂಪರ್ಕಿಸುವ ತಂತಿಯಾಗಿದೆ ಎನ್ನುತ್ತಾರೆ ಆಧ್ಯಾತ್ಮಿಕ ಗುರು ಮಹಾರಾಜ್ ಸಾವನ್ ಸಿಂಗ್.

"ಶಬ್ದ ಅವರನ್ನು ಕೊಂದು, ಅವರು ಸತ್ತರು. ಶಬ್ದದಿಂದಾಗಿ ರಾಜರು ರಾಜ್ಯಗಳನ್ನು ಕಳೆದುಕೊಂಡರು. ಸದಾ ಶಬ್ದವನ್ನು ಸ್ಮರಿಸುವವರು ತಮ್ಮ ಧ್ಯೇಯದಲ್ಲಿ ಯಶಸ್ವಿಯಾದರು." (ಸಂತ ಕಬೀರ.)

ಮನುಷ್ಯನಿಗೆ ಕೇಳಿಸುವುದು ಶ್ರಾವ್ಯ ಶಬ್ದಗಳಾದರೆ ಅಶ್ರಾವ್ಯ ಶಬ್ದಗಳು ಮನುಷ್ಯನಿಗೆ ಕೇಳಿಸದು. ಆದರೆ ಪ್ರಾಣಿಗಳು, ಸರೀಸೃಪಗಳು ಭೂಮಿಯಲ್ಲಿ ಅಥವಾ ಗಾಳಿಯಲ್ಲಿ ಉಂಟಾಗುವ ಕಂಪನಗಳನ್ನು ಅತಿವೇಗವಾಗಿ ಗ್ರಹಿಸುತ್ತವೆ. ಇವೆರಡಲ್ಲದೇ ಶ್ರವಣಾತೀತ ಶಬ್ದಗಳೂ ಇರುತ್ತವೆ. ಇವುಗಳ ಕಂಪನದ ಸಂವೇದನೆ ಮನುಷ್ಯರಿಗೆ ಆಗದು. ಆದರೆ ನಾಯಿ, ಬೆಕ್ಕು, ಬಾವಲಿಗಳಂತಹ ಪ್ರಾಣಿಗಳಿಗೆ ಇವುಗಳ ಅರಿವು ಆಗುತ್ತದೆ.

ಪೃಕೃತಿಯ ಚಲನೆಯಲ್ಲಿರುವ ಶಬ್ದ ಅದರ ಜೀವಂತಿಕೆಯನ್ನು ಶತಶತಮಾನಗಳಿಂದಲೂ ನಿರೂಪಿಸುತ್ತಲೇ ಇದೆ. ಬೀಸುವ ಗಾಳಿ, ಎಲೆಗಳ ಮರ್ಮರ, ನದಿಯ ಜುಳು ಜುಳುನಾದ, ಧುಮ್ಮಿಕ್ಕುವ ಜಲಪಾತದ ಸಪ್ಪಳ, ಕಡಲ ಅಲೆಗಳ ಭೋರ್ಗರೆತದ ಸದ್ದು, ಎದೆ ನಡುಗಿಸುವ ಗುಡುಗಿನ ಸದ್ದು, ಟಪಟಪನೇ ಬೀಳುವ ಮಳೆಹನಿಗಳ ಸದ್ದು.... ಎಲ್ಲವೂ ಪೃಕೃತಿಯ ಜೀವಂತಿಕೆಯ ಶಬ್ದಗಳು. ದಟ್ಟ ಕಾನನದೊಳಗೆ ಪ್ರವೇಶಿಸಿದಾಗ...ಪಕ್ಷಿ, ಪ್ರಾಣಿ, ಕೀಟಗಳ ಸದ್ದಿನ ಹೊರತಾದ ನೀರವತೆಯಲ್ಲೂ ಒಂದು ಬಗೆಯ ಶಬ್ದವಿರುವುದು ನಮ್ಮ ಅರಿವಿಗೆ ಬರುತ್ತದೆ.  ಅದು ಪೃಕೃತಿಯನ್ನು ಆರಾಧಿಸುವ ಧ್ಯಾನಸ್ಥ ಸ್ಥಿತಿಗೆ ತಲುಪಿದಾಗ ನಮ್ಮ ಮಿದುಳಿಗೆ ದಕ್ಕುವ ಶಬ್ದ ತರಂಗಗಳು.

ಮರವನ್ನು ಜೀವವೆಂದೇ ಪರಿಗಣಿಸುತ್ತೇವೆ. ಅದನ್ನು ಆಶ್ರಯಿಸಿರುವ ಅಳಿಲು, ಪಕ್ಷಿ, ಕೀಟಗಳು, ಉರಗ ಹಾವುರಾಣಿ ಓತಿಕ್ಯಾತದಂತಹ ಸರೀಸೃಪಗಳು ಹೊರಡಿಸುವ ಶಬ್ದಗಳ ಮುಖಾಂತರ ಆ ಮರವು  ತನ್ನ ಜೀವಂತಿಕೆಯನ್ನು ಮತ್ತು ಅಸ್ತಿತ್ವವನ್ನು ದಾಖಲು ಮಾಡುತ್ತದೆ.

ಉಷೆಯ ಹೊಂಗಿರಣದ ರಂಗವಲ್ಲಿಯ ಜೊತೆಗೆ ಕರ್ಣಾನಂದಕರವಾದ ಹಕ್ಕಿಗಳ ಚಿಲಿಪಿಲಿ, ದುಂಬಿಗಳ ಝೇಂಕಾರದಿಂದ ಪ್ರಾತಃಕಾಲ ಚೇತೋಹಾರಿಯಾಗಿರುತ್ತದೆ. ಇವೆಲ್ಲಕ್ಕೂ ಕಿವಿಯಾಗಿ, ಉಷೆಯ ಸೊಬಗನ್ನು ನೋಡುವ ಕಣ್ಣು ಇರುವವರಿಗೆ ಪ್ರತಿ ಮುಂಜಾನೆಯೂ ನಾವಿನ್ಯತೆಯಿಂದ ಕೂಡಿ ನವಚೈತನ್ಯವನ್ನು ಕೊಡುತ್ತದೆ.  

ಸಂಜೆಯ ಬಾನಿಗೆ ಓಕುಳಿಯ ರಂಗು ಬಳಿಯುವ ಸೂರ್ಯ, ಪಡುವಣ ದಿಗಂತದಲ್ಲಿ ಮೆಲ್ಲ ಮೆಲ್ಲನೇ ಜಾರುತ್ತಿದ್ದರೆ ಹಕ್ಕಿಗಳು ಮಧುರ ಸ್ವರದ ಗಾಯನದೊಂದಿಗೆ ವಿದಾಯ ಹೇಳುತ್ತವೆ. ಭೂಮಿಗೆ ಮತ್ತೆ ಬರುವೆನೆಂದು ಆಶ್ವಾಸನೆ ಕೊಡುವ ಸೂರ್ಯನೂ ಇಂತಹ ಮಧುರಗಾನ ಕೇಳಲು ಪ್ರತಿದಿನವೂ ಮತ್ತೆ ಮತ್ತೆ  ಬಂದು, ಭೂರಮೆಯನ್ನು ರಮಿಸಿ ನಿರ್ಗಮಿಸುತ್ತಾನೆ. ಬಾನಾಡಿಗಳ ಗಾನಮಾಧುರ್ಯವನ್ನು ಸವಿಯಲೆಂದೇ ರವಿ ತನ್ನ  ದಿನಚರಿಯನ್ನು ಹೀಗೆ ಇಟ್ಟುಕೊಂಡಿರಬಹುದು ಎಂದು ನನಗೆ ಗುಮಾನಿಯಿದೆ. ಕೆಲವೊಮ್ಮೆ ಸೂರ್ಯ ಅಂತರ್ಮುಖಿಯಾಗಿ  ಭುವಿಯ ಜೊತೆ ತಾನು ಕಳೆಯುವ ಶೃಂಗಾರದ ರಸನಿಮಿಷಗಳಿಗೆ ಸಾಥ್ ನೀಡುವ ಇಂತಹ ಮಧುರ ಗಾನದ ಶ್ರೋತೃನೂ ಆಗುತ್ತಾನೆ.  ಅವನ ಜೊತೆಯಲ್ಲಿ ಕಳೆಯುವ ಪ್ರತಿಘಳಿಗೆಯನ್ನು ದಾಖಲಿಸುವ ಇಂತಹ ಗಾನಮಾಧುರ್ಯಕ್ಕೆ  ಆನಂದದ ಉತ್ತುಂಗಕ್ಕೇರಿದ ಭೂಮಿಯೂ ಋತುಗಾನವನ್ನು ಸವಿಯುತ್ತ ಮೈಮರೆಯುತ್ತಾಳೆ.

ಆದರೆ ವರುಣ ನಮ್ಮ ಹಿಂದೂಸ್ತಾನಿ ಸಂಗೀತದ ಆಲಾಪದಲ್ಲಿ ಹೇಗೆ ಪರಿಣಿತನೋ, ಹಾಗೆಯೇ ಕೆಲವೊಮ್ಮೆ ವಾದ್ಯ ಪರಿಕರಗಳ ಮೂಲಕ ಅಬ್ಬರದ ಪಾಶ್ಚಾತ್ಯ ಸಂಗೀತ ನುಡಿಸಿ   ಬೊಬ್ಬಿರಿಯತ್ತಾನೆ. ಸಂಗೀತ ಕಚೇರಿಯ ಶೃತಿಬದ್ಧ ತಂಬೂರಿ ಮೀಟುವಂತೆ ಸೋನೆ ಮಳೆ ಸುರಿಸುವ ಅವನು  ಒಮ್ಮೊಮ್ಮೆ ಕುಂಭದ್ರೋಣನ ಮುಸಲಧಾರೆಯನ್ನು ಭುವಿಗಪ್ಪಳಿಸಿ ಶಿವ ತಾಂಡವನೃತ್ಯವನ್ನು ಪ್ರದರ್ಶಿಸಿಯೇಬಿಡುತ್ತಾನೆ.‌ ರೊಂಯ್ಯನೇ ಬೀಸುವ ಗಾಳಿಗೆ ಸಲಾಕೆಯಂಥ ಮಳೆಹನಿಗಳು ನಿರಂತರವಾಗಿ ಅಪ್ಪಳಿಸಿದಾಗ.....ಜಲಮೂಲಗಳಾದ ಹೊಳೆ, ಹಳ್ಳ, ಝರಿ,ನದಿಗಳೆಲ್ಲ ಉಕ್ಕುಕ್ಕಿ ಹರಿದು, ಸಮುದ್ರರಾಜನ ಭೋರ್ಗರೆತದ ಆರ್ಭಟಕ್ಕೆ ನಮ್ಮೆದೆಯ ತಿದಿಯೂ ಏರಿ...'ಢವ ಢವ' ಎನ್ನದಿದ್ದೀತೆ? ಸೂರ್ಯನ ಪ್ರಖರ ಕಿರಣಗಳಿಂದ ಬಳಲಿ, ಬಾಯಾರಿಕೆಯಿಂದ‌ ಹನಿಗಳ ನಿರೀಕ್ಷೆಯಲ್ಲಿರುವ ಭೂಮಿಯ ತನುವಿಗೆ ತಂಪೆರೆಯಲು ಬರುವ ಅವನದು ಮೌನ ಆಗಮನವಂತೂ ಅಲ್ಲ. ಹನಿಗಳು ಭುವಿಯನ್ನು  ತಣಿಸುವ ಮೊದಲೇ ತನ್ನ ಆಗಮನದ ಸುದ್ದಿಯನ್ನು ಗುಡುಗು ಸಿಡಿಲಿನಂತಹ ಕಿವಿಗಡಗಿಚ್ಚುವ ಮೇಳಸಹಿತ ರಾಯಸವನ್ನು ಭೂಮಿಗೆ ವರುಣ ಕಳಿಸುತ್ತಾನೆ. ನಂತರ...ಇದ್ದೇ ಇದೆಯಲ್ಲ..ಬಾನು ಹರಿದು ಹೋಗಿರುವಂತೆ ನೆಲಕ್ಕಪ್ಪಳಿಸುವ ಧೋ ಎನ್ನುವ ಮಳೆಯ ಸದ್ದು.

ವರ್ಷ ಋತುವಿನ ನಿರ್ಗಮನದ ಹಿಂದೆಯೇ ಬರುವ ಭೂಮಿಯ ಇನ್ನೊಬ್ಬ ಸಖ ಹಿಮವಂತ. ಅಂತರ್ಮುಖಿಯಾದ ಇವನು ಮಹಾಮೌನಿ, ಅಷ್ಟೇ ಭಾವಜೀವಿ. ಹೇಮಂತ, ಗ್ರೀಷ್ಮ, ಶಿಶಿರರು ಇವನ ಸಹಚರರು. ಆ ಸಮಯದಲ್ಲಿ ವಸುಂಧರೆಯ ಕೆಲವು ಭಾಗ ಯಾವ ಚಟುವಟಿಕೆಯೂ ಇಲ್ಲದೇ ಸಂಪೂರ್ಣ ತಟಸ್ಥವಾಗಿ.....ಧ್ಯಾನದಲ್ಲಿ ಮುಳುಗಿದಂತೆ ತೋರುತ್ತದೆ. ಕಿವಿಗೊಟ್ಟು ಕೇಳಿದರೆ...ಹಿಮವಂತನ ಉಛ್ವಾಸ - ನಿಃಶ್ವಾಸದ ಸುಂಯ್‌ಗುಡುವ ಸದ್ದು ಕೇಳಿಸೀತು. ಅದುಬಿಟ್ಟರೆ ಮರಗಳು ಉದುರಿಸುವ ಹಣ್ಣೆಲೆಗಳ ಪರಪರ ಸದ್ದು, ಹೊಸ ಮನೆ ಕಟ್ಟುವ ಉಮೇದಿನಲ್ಲಿ ಮರವನ್ನು ಕೊರೆದು ಮನೆ ಮಾಡುವ ಮರಕುಟುಕದ ಕುಟುರ್ ಕುಟುರ್ ಸದ್ದು ಕೇಳುತ್ತದೆ. ಹಿಮಾವೃತವಾದ ನಾಡಿನಿಂದ ದಕ್ಷಿಣ ಧ್ರುವದೆಡೆಗೆ ವಲಸೆ ಬರುವ ಹಕ್ಕಿಗಳ ಪ್ರಣಯಕೇಳಿಯ ಸದ್ದು ಕೇಳುತ್ತದೆ.

ಋತುಮಾನಗಳಿಗೆ ಅನುಗುಣವಾಗಿ ಪೃಕೃತಿಯಲ್ಲಿ ಅನುರಣಿಸುವ ಇಂತಹ ಸದ್ದುಗಳು ಭೂಮಿಯ ಮೇಲಣ ಸಕಲ ಜೀವಿಗಳಲ್ಲಿ ಜೀವಸೆಲೆ ಉಕ್ಕಿಸುತ್ತ ಬದುಕಿನ ಸ್ಪೂರ್ತಿಯಾಗುತ್ತವೆ.

ಶಬ್ದಗಳು ನಮ್ಮ ಬದುಕಿನ ಆರಂಭದ ಮೊದಲ ಕ್ಷಣದಲ್ಲೇ ಸ್ಥಾನ ಪಡೆದುಕೊಳ್ಳುತ್ತದೆ. ತಾಯ ಗರ್ಭದಿಂದ ಭೂಮಿಗಿಳಿದ ಕೂಸು ಗಾಳಿಯನ್ನು ಎಳೆದುಕೊಳ್ಳಲು ಅಳಲೇಬೇಕು. ನವಜಾತ ಶಿಶುವಿನ ಮೊದಲ ಅಳುವೇ ಅದರ ಬದುಕಿನ ಮೊದಲ ಹೆಜ್ಜೆ.

ಅಲ್ಲಿಂದ ಆರಂಭವಾಗುವ ಸದ್ದು ಬದುಕನ್ನು ಸಂಪೂರ್ಣವಾಗಿ ತಾನೇ ಆಕ್ರಮಿಸಿಕೊಳ್ಳುತ್ತದೆ. ಮಗುವಿನ ವಿವಿಧ ಶೈಲಿಯ ಅಳುವಿನಲ್ಲಿ ವಿವಿಧ ಭಾವಗಳಿರುತ್ತವೆ. ಹಸಿವಿಗೆ, ಉದರಬೇನೆಗೆ, ಹಟಕ್ಕೆ, ಸಿಟ್ಟಿಗೆ, ನಿದ್ದೆಗೆ....ಹೀಗೆ ತನ್ನ ಅಗತ್ಯಗಳಿಗೆ ತಕ್ಕಂತೆ ವಿವಿಧ ರಾಗಗಳಲ್ಲಿ ಅಳುವ ಮಗುವಿನ ಅಳುವಿನ ಭಾಷೆಯನ್ನು ತಾಯಿ ಬಹಳ ಚೆನ್ನಾಗಿ ಅರಿಯುತ್ತಾಳೆ. ಅದಕ್ಕಾಗಿ ಅವಳಿಗೆ ಯಾವ ತರಬೇತಿಯ ಅಗತ್ಯವೂ ಇರುವುದಿಲ್ಲ ಎನ್ನುವುದು ವಿಶೇಷ.

ನಾವು ದಿನನಿತ್ಯದ ಬದುಕಿನಲ್ಲಿ ಒಂದೇ ಒಂದು ಶಬ್ದವಿಲ್ಲದೆಯೇ ಒಂದಿಡೀ ದಿನವನ್ನು ಕಳೆಯಬಹುದೇ ಎಂದು ಯೋಚಿಸಿದರೆ ಬಹುಶಃ ಇಲ್ಲ.  ಒಂದುವೇಳೆ ನಾವು ಸಂಪೂರ್ಣ ಮೌನವಹಿಸಿದರೂ ಸುತ್ತಲಿನ ಪರಿಸರದಲ್ಲಿ ಏನಾದರೂ ಸದ್ದು ಕೇಳಿಬರದೇ ಇರುವುದಿಲ್ಲ.

ಮನೆಯಲ್ಲಿ ಹೆಚ್ಚು ಶಬ್ದವನ್ನು ಹೊರಡಿಸುವ ಸ್ಥಳವೆಂದರೆ ಅಡುಗೆಮನೆ.(ಮನೆಯಾಕೆಗೆ ಸಿಟ್ಟುಬಂದಾಗಲೂ ಹೆಚ್ಚು ಸದ್ದಾಗುವುದೂ ಅಲ್ಲಿಯೇ).  ಆಧುನಿಕ ಜೀವನಶೈಲಿಯ ಭಾಗವಾಗಿರುವ ಕುಕ್ಕರ್, ಮಿಕ್ಸಿ, ಗ್ರೈಂಡರ್, ವಾಶಿಂಗ್ ಮಶಿನ್, ಫ್ರಿಡ್ಜ್....ಇಂತಹ  ಪರಿಕರಗಳು ಕರ್ಕಶವೆನಿಸಿದರೂ ಸದ್ದುಮಾಡುವ ಅನಿವಾರ್ಯತೆ ಇದೆ. ಶುಚಿರ್ಭೂತರಾಗಿ ಪೂಜೆ ಮಾಡುವಾಗಿನ ಗಂಟೆ, ಜಾಗಟೆ, ಶಂಖ ಊದುವ, ಮಂತ್ರ ಸ್ತೋತ್ರಗಳ ಕಂಪನಗಳು ಮನಸ್ಸನ್ನು ಶಾಂತವಾಗಿಸಿ ಮನೆಯ ಸದಸ್ಯರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಹೆಚ್ಚಿಸುತ್ತದೆ. ಇಂತಹ ಸದ್ದುಗಳು ಅಲೌಕಿಕ ವಾತಾವರಣವನ್ನು ಸೃಷ್ಟಿಸುವುದಲ್ಲದೇ...ನಿರ್ಜೀವವಾದ ಇಟ್ಟಿಗೆ, ಗಾರೆಯೊಳಗೂ ಜೀವ ತುಂಬಿ ಮನೆಯನ್ನು ಜೀವಂತವಾಗಿಡುತ್ತವೆ. ಮನೆಯಲ್ಲಿ ವಾಸಿಸುವವರಲ್ಲಿ ಧನಾತ್ಮಕ ಶಕ್ತಿಯ ಆವಾಹನೆಯಾಗಿ, ಇಂತಹ ಶಬ್ದ ತರಂಗಗಳಿಂದ ಮೈ ಮನಗಳಲ್ಲಿ ಹೊಸ ಹುರುಪು, ಉತ್ಸಾಹ ಮೂಡುತ್ತದೆ.

ಹಿಂದೆ.. ಮಣ್ಣಿನ ಮಡಿಕೆಗಳಲ್ಲಿ ಅಡುಗೆ ಮಾಡುವ ಪದ್ಧತಿ ನಮ್ಮಲ್ಲಿತ್ತು. ಹೊಸ ಮಡಿಕೆಯನ್ನು ಕೊಳ್ಳುವಾಗ ಅದು ಒಲೆಯಮೇಲಿಡಲು ಯೋಗ್ಯವಾಗಿದೆಯೇ ಎಂದು ತಿಳಿದುಕೊಳ್ಳಲು ತುದಿಬೆರಳಿನಲ್ಲಿ  ಗಟ್ಟಿಯಾಗಿ ಹೊಡೆದು ಪರೀಕ್ಷಿಸಲಾಗುತ್ತಿತ್ತು. ಹಾಗೆ ಬಾರಿಸಿದಾಗ 'ಠಣ್' ಎನ್ನುವ ಶಬ್ದ ಬಂದರೆ ಮಡಿಕೆಯನ್ನು ಚೆನ್ನಾಗಿ ಸುಡಲಾಗಿದೆ ಎಂದೂ, ಇಲ್ಲವಾದಲ್ಲಿ ಅದು ಬಾಳಿಕೆ ಬರುವುದಿಲ್ಲವೆಂದು ನಿರ್ಧರಿಸಲಾಗುತ್ತಿತ್ತು.

ಹಲಸಿನ ಹಣ್ಣು, ಪರಂಗಿಹಣ್ಣು ಇಂತಹ ದೊಡ್ಡ ಹಣ್ಣುಗಳನ್ನು ಕೊಯ್ಯುವ ಮೊದಲು ಅದು ಚೆನ್ನಾಗಿ ಬಲಿತು ಹಣ್ಣಾಗಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ತೆಂಗಿನಕಾಯಿಯನ್ನು ಬೆರಳಿನಿಂದ ಬಡಿದಾಗ 'ಟಣ್' ಸದ್ದು ಬಂದರೆ ಅದು ಚೆನ್ನಾಗಿದೆ ಎಂದೇ ಅರ್ಥ.  

ಗಾಯಕರ ಸೊಗಸಾದ ಕಂಠಸಿರಿಯಿಂದ ಸಂಗೀತಕಚೇರಿ ಯಶಸ್ವಿಯಾಗಿ ನಡೆಯಬೇಕೆಂದರೆ ಕೈಗಳಿಂದ ನುಡಿಸಿ ಶಬ್ದದ ತರಂಗವನ್ನೇರ್ಪಡಿಸುವ ವಾದ್ಯಗಳೂ ಇರಲೇಬೇಕು. ಕರ್ಣನಂದಕರವಾದ ಸಂಗೀತದ ಬಂಡವಾಳ ಶಬ್ದವೇ ತಾನೇ. ಮನಸ್ಸನ್ನು ಮುದಗೊಳಿಸುವ, ವಿಕ್ಷಿಪ್ತ ಮನವನ್ನು ಶಾಂತಗೊಳಿಸುವ, ನೋವನ್ನು ಉಪಶಮನಗೊಳಿಸುವ, ನಿದ್ರೆಗೆ ಜಾರಿಸುವ ಶಕ್ತಿ,  ಶಬ್ದಮೂಲವಾದ ಸಂಗೀತಕ್ಕಿದೆ.  ಸ್ವರಗಳ ಮೂಲಸ್ವರೂಪ ಶಬ್ದವಲ್ಲವೇ?

ನಾವು ಕೇಳುವ ಶಬ್ದದಲ್ಲಿ ಭಾವನೆಯ ನವರಸಗಳಿವೆ. ಆನಂದ, ಆಹ್ಲಾದ, ದೀರ್ಘಚಿಂತನೆ, ನೋವು, ದುಃಖ, ಸಿಟ್ಟು, ಹತಾಶೆ, ತಲ್ಲಣ, ಭಯ.....ಎಲ್ಲವನ್ನು ವ್ಯಕ್ತಪಡಿಸುವ ಶಬ್ದಗಳು ಯಾವುದೇ ಮೂಲದಿಂದಲೂ ಉಂಟಾಗಬಹುದು. ನೀರವ ರಾತ್ರಿಯ ಜೀರುಂಡೆಗಳ ಸದ್ದು ಸಂದರ್ಭಗಳಿಗನುಸಾರವಾಗಿ ಮನಸ್ಸಿನಮೇಲೆ ವಿವಿಧ ಪರಿಣಾಮ ಬೀರುತ್ತದೆ.

ಬೋರವೆಲ್ ಕೊರೆಯುವ , ಬಂಡೆಯೊಡೆಯುವ , ಸಾರಿಗೆಯ ನಿರಂತರ ಸದ್ದು  ಕಿರಿಕಿರಿಯನ್ನುಂಟುಮಾಡಿ ಮನಸ್ಸಿನ ಸ್ವಾಸ್ಥ್ಯ ಕೆಡಿಸುತ್ತವೆ. ಇಂತಹ ಕರ್ಕಶ ಶಬ್ದದಿಂದ ಉದ್ವೇಗ, ಅಸಹನೆ ಉಂಟಾಗಿ ಮನುಷ್ಯ ಅಸ್ವಸ್ಥನಾಗುತ್ತಾನೆ.

ಆದರೆ ನಿರ್ದಿಷ್ಟ ಕಂಪನದ ನಿರಂತರ ಸದ್ದು ಕೇಳುತ್ತಾ ಅದಕ್ಕೆ ನಮ್ಮ ಮನಸ್ಸು ಒಗ್ಗಿಕೊಂಡುಬಿಡುತ್ತದೆ.  ಅಂತಹ ಸದ್ದು ನಿಂತಾಗ ಜಗತ್ತೇ ಸ್ತಬ್ದವಾದ ಭಾವನೆ ಮೂಡುತ್ತದೆ.  ಕೈಮಗ್ಗದಲ್ಲಿ ಕೆಲಸ ಮಾಡುವ ನೇಕಾರರಾಗಲಿ, ಕೆಲವು ಯಂತ್ರಗಳನ್ನು ನಡೆಸುವವರಾಗಲಿ ಆ ಶಬ್ದಕ್ಕೆ ಅದೆಷ್ಟು ಒಗ್ಗಿಕೊಂಡಿರುತ್ತಾರೆ ಎಂದರೆ...ಆ ಸದ್ದಿನ ಆವರಣದಿಂದ ದೂರವಾದರೆ ಏನನ್ನೋ ಕಳೆದುಕೊಂಡವರಂತೆ, ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡುತ್ತಾರೆ. ಅವರಿಗೆ ಆ ಸದ್ದು ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿರುತ್ತದೆ.  ಇದು ಸಹ ಮಾನಸಿಕ ಅಸ್ವಸ್ಥತೆ ಎಂದು ಪರಿಗಣಿಸಲಾಗುತ್ತದೆ.

ಆದರೂ ನಮ್ಮ ಬದುಕಿನ ಕೆಲವು ವಿಶೇಷ ಸಂದರ್ಭಗಳಲ್ಲಿ ಕರ್ಣಕಠೋರವಾದ ಶಬ್ದಗಳನ್ನು ನಾವೇ ಸೃಷ್ಟಿಸುತ್ತೇವೆ.  ದುಷ್ಟ ಶಕ್ತಿಯನ್ನು ನಿಗ್ರಹಿಸಿ ಸಂತೋಷವನ್ನುಂಟುಮಾಡುವ ಪಟಾಕಿಯ ಸದ್ದು ಸಂಬಂಧಗಳನ್ನು ಬೆಸೆಯುವ  ಹಬ್ಬದ ಸಂಭ್ರಮವನ್ನು ತಂದರೆ, ದೇಶದ ಗಡಿಯಲ್ಲಿ ಆಗಾಗ ಮೊರೆಯುವ ಗುಂಡಿನ ಸದ್ದು ಯುದ್ಧಕ್ಕೆ ನಾಂದಿಯಾಗಿ ಹಲವಾರು ಜೀವಗಳ ಸಾವು ನೋವಿಗೆ ಕಾರಣವಾಗಿ ಲೆಕ್ಖಕ್ಕೆ ಸಿಗದಷ್ಟು ಕುಟುಂಬಗಳನ್ನು ಅತಂತ್ರವಾಗಿಸುತ್ತದೆ.  

ಮನುಷ್ಯರಾಡುವ ಮಾತಿನಲ್ಲಷ್ಟೇ ಅಲ್ಲದೇ ಉಸಿರಿನ ಸದ್ದಿನಲ್ಲೂ ಭಾವನೆಗಳು ವ್ಯಕ್ತವಾಗುತ್ತವೆ ಎಂದರೆ ನಮ್ಮ ಬದುಕಿನಲ್ಲಿ ಶಬ್ದ ಸ್ಥಾಯಿಯಾಗಿದೆ ಎಂದೇ ಅರ್ಥ. ನಿಟ್ಟುಸಿರು, ಬಿಸಿಯುಸಿರು, ಏದುಸಿರುಗಳು ಮೌನದಲ್ಲಿಯೂ ಮಾತನಾಡುತ್ತವೆ.  ಉಸಿರಿರುವತನಕ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಶಬ್ದ, ಉಸಿರು ನಿಂತಾಕ್ಷಣ ನಿಶ್ಯಬ್ದದ ಜಗತ್ತಿಗೆ ಕರೆದೊಯ್ದು ಶರೀರವನ್ನು ಕುಗ್ಗಿಸಿ, ಆತ್ಮವನ್ನು ವಿಕಸಿತಗೊಳಿಸಿ ಅದನ್ನು ಮೌನಸಾಮ್ರಾಜ್ಯದ ಸದಸ್ಯನನ್ನಾಗಿಸುತ್ತದೆ.

ಶೋಭಾ.  

 

 

Category:World



ProfileImg

Written by shobha murthy

Writer

0 Followers

0 Following