ಬೆಳಗಿನ ಜಾವ ಐದು ಮೂವತ್ತು ಗಂಟೆಯಾಗಿದ್ದು ಮಂಜರಿಗೆ ಎಚ್ಚರವಿದ್ದರೂ ಹಾಸಿಗೆ ಬಿಟ್ಟೇಳಲು ಅದೇಕೂ ಬೇಸರ ಎನಿಸುತ್ತಿತ್ತು. ಆದರೂ ದಿನದಂತೆ ಏಳುವ ಸಮಯವಾಗಿದ್ದರಿಂದ ಮತ್ತೆ ನಿದ್ದೆ ಬಾರದೆಂದು ತಿಳಿದು ಎದ್ದು ಮುಖ ತೊಳೆದು ಬಾಗಿಲಿಗೆ ನೀರು ಹಾಕಲು ಬಂದವಳು. ಇನ್ನು ಪೂರ್ಣ ಬೆಳಕಾಗದ ವಾತಾವರಣವನ್ನು ಸವಿಯುತ್ತಾ ನಿಂತಳು. ಅರೆ ಇದೇನಿದು ಇಷ್ಟು ದಿನ ಇಲ್ಲದ್ದು ಇವತ್ತು ಯಾವುದೋ ಡೇರೆ ಹಾಕಿದ್ದಾರಲ್ಲ ಎಂದುಕೊಂಡು ರಂಗೋಲಿ ಹಾಕುವುದನ್ನು ಮರೆತು ನಿಂತು ನೋಡುತ್ತಿದ್ದಳು. ಒಂದೆರಡು ನಿಮಿಷದ ನಂತರ ಎಚ್ಚೆತ್ತವಳು ಡೇರೆಯೊಳ ಗಿಂದ ಮಗುವಿನ ಆಳುವ ಶಬ್ದ ಕೇಳಿ ಓ, ಸಂಸಾರ ಇರಬೇಕು ಎಂದುಕೊಂಡು ಒಳಗೆ ಬಂದಳು .ತಿಂಡಿ ಮುಗಿಸಿ ರೂಮಿಗೆ ಬಂದವಳಿಗೆ ಎದುರಿನ ಡೇರೆ ಕಾಣಿಸುತ್ತಿತ್ತು .
ಮಂಜರಿ ಮನೋಜ್ ರದ್ದು ಅನ್ನೋನ್ಯ ದಾಪತ್ಯ. ಮದುವೆಯಾಗಿ ಐದು ವರ್ಷಗಳಾಗಿತ್ತು,ಮಕ್ಕಳಾಗಿರಲಿಲ್ಲ. ಇದರಿಂದ ಅವರ ಪ್ರೀತಿಗೇನು ತೊಂದರೆಯಾಗಿರಲಿಲ್ಲ. ತವರು ಮನೆಯನ್ನು ಮರೆಸುವಷ್ಟು ಪ್ರೀತಿ ಮನೋಜ್ ಮಂಜರಿಗೆ ನೀಡುತ್ತಿದ್ದನು. ಕಂಪನಿಯ ಕೆಲಸದ ನಿಮಿತ್ತ ದೂರದೂರಿಗೆ ಹೋಗಿದ್ದ ಮನೋಜ್ ಮಾರನೇ ದಿನ ಬರುವವನಿದ್ದ ಹಾಗಾಗಿ ಇವತ್ತಿನ ದಿನ ಯಾವುದೇ ಧಾವಂತ ಗಡಿಬಿಡಿ ಇರಲಿಲ್ಲ. ಕಿಟಕಿಯ ಬಳಿಯಿಂದ ಅಲ್ಲಾಡದೆ ಕುಳಿತಿದ್ದಳು ಅವಳಿಗೆ ಅರಿಯದ ಕುತೂಹಲ ಅವಳಿಂದ ಹತ್ತಿಕ್ಕಲಾಗಲಿಲ್ಲ .11:00 ಸುಮಾರಿಗೆ 3 ವರ್ಷದ ಮಗುವಿನೊಂದಿಗೆ ಗಂಡ ಹೆಂಡತಿಯರಿಬ್ಬರು ಎಲ್ಲಿಗೋ ಹೊರಟರು .ಆಟೋ ಕರೆದು ಅದರಲ್ಲಿ ಕುಳಿತುಕೊಳ್ಳುವಾಗ ಮೂವರನ್ನು ಗಮನಿಸಿದವಳಿಗೆ ಆಘಾತವಾಯಿತು. ಆ ಮಗು ಗಂಡ ಹೆಂಡತಿಯರಿಬ್ಬರಲ್ಲಿ ಯಾರನ್ನು ಹೋಲುತ್ತಿರಲಿಲ್ಲ ,ಅಲ್ಲದೆ ಮುಖದಲ್ಲಿ ಗೆಲುವೇ ಇರಲಿಲ್ಲ. ಅಷ್ಟರಲ್ಲಿ ಆ ಆಟೋ ಹೊರಟು ಹೋಗಿತ್ತು .ನಂಗ್ಯಾಕೆ ಇಲ್ಲದ ಉಸಾಬರಿ ಎಂದುಕೊಂಡರೂ ಮನಸ್ಸು ಅಲ್ಲಿಂದೇಳಲು ಅವಳನ್ನು ಬಿಡಲಿಲ್ಲ .
ಲೇಖಕಿ, ಗೃಹಿಣಿ ಹವ್ಯಾಸ : ಕಥೆ, ಕವನ ಓದುವುದು