Netravathi Peak.. ಚಾರಣ ಪ್ರಿಯರ ಹೊಸ ತಾಣ; ಹೋಗುವ ಮುನ್ನ ಈ ಅಂಶಗಳು ನೆನಪಿರಲಿ

ನೀವು ಹೋಗಲೇ ಬೇಕಾದ ಚರಣ ಸ್ಥಳ

ProfileImg
08 Jun '24
3 min read


image


ಪಶ್ಚಿಮ ಘಟ್ಟದ ಜೀವ ವೈವಿದ್ಯತೆ, ಪ್ರಾಕೃತಿಕ ಸೌಂದರ್ಯ ಸವಿಯುವುದು ಒಂದು ಅಸಾಧಾರಣ ಅನುಭೂತಿ. ಸುತ್ತಲೂ ತಣ್ಣನೆ ಹಿತ ನೀಡುವ ಶುದ್ದ ಗಾಳಿ, ಕಣ್ಣ ಮುಂದೆ ಕಾಣುವಷ್ಟೂ ಹಾಸಿರುವ ಹಸಿರು, ಮುತ್ತನ್ನಿಟ್ಟು ನಾಚಿದಂತೆ ಹತ್ತಿರ ಬಂದು ದೂರ ಓಡುವ ಮಂಜಿನ ಸಾಲುಗಳ ನಡುವೆ ನಡೆಯುವ ಅಪೂರ್ವ ಅನುಭವ ಸಿಗಬೇಕಾದರೆ ನೀವೊಮ್ಮೆ ಚಾರಣಕ್ಕೆ ಹೋಗಬೇಕು.

ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಸಿದ್ದಿ ಪಡೆಯುತ್ತಿರುವ ಚಾರಣ ಸ್ಥಳವೆಂದರೆ ಅದು ನೇತ್ರಾವತಿ ಶಿಖರ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ಹುಟ್ಟುವ ಸ್ಥಳವದು. ದಟ್ಟ ಕಾಡಿನಿಂದ ತೊರೆಯ ರೂಪದಲ್ಲಿ ಹರಿದು ಬರುವ ನೇತ್ರಾವತಿಯ ನೀರು ಇಲ್ಲಿ ಅತ್ಯಂತ ಪರಿಶುದ್ದ.

ನೇತ್ರಾವತಿ ಶಿಖರವು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿ ಬರುತ್ತದೆ. ಪೀಕ್ ಪಾಯಿಂಟ್ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿಗೆ ಸೇರುವುದಾದರೂ ಚಾರಣ ಆರಂಭವಾಗುವುದು ಚಿಕ್ಕಮಗಳೂರು ಜಿಲ್ಲೆಯ ಕಳಸದ ಸಂಸೆಯಿಂದ. ಜೀವವೈವಿಧ್ಯತೆಯಿಂದಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿರುವ ನೇತ್ರಾವತಿ ಶಿಖರವು 1520 ಮೀಟರ್ ಎತ್ತರದಲ್ಲಿದೆ.

ಬೇಸ್ ಪಾಯಿಂಟ್ ವರೆಗೂ ಜೀಪು ಹೋಗುವುದಿಲ್ಲ. ಸ್ಥಳೀಯರೊಂದಿಗೆ ಅರಣ್ಯ ಇಲಾಖೆಯ ಕಿರಿಕ್ ಕಾರಣದಿಂದ ಅಲ್ಲಿ ಪ್ರವಾಸಿಗರ ವಾಹನಕ್ಕೆ ಸ್ಥಳೀಯರು ನಿರ್ಬಂಧ ಹೇರಿದ್ದಾರೆ. ಹೀಗಾಗಿ ಸುಮಾರು ಅರ್ಧ ಕಿ.ಮೀ ನಡೆದುಕೊಂಡೇ ಹೋಗಬೇಕು. ನಿಮ್ಮ ಟ್ರೆಕ್ಕಿಂಗ್ ಇಲ್ಲಿಂದಲೇ ಆರಂಭ ಎಂದುಕೊಳ್ಳಿ.

8 + 8 ಕಿ.ಮೀ ಚಾರಣ
ಕೆಲವು ರೀಲ್ಸ್ ವಿಡಿಯೋಗಳನ್ನು ನೋಡಿ ಹೋಗಿದ್ದ ನಾವು 4 ಕಿ,ಮೀ ಟ್ರೆಕ್ ಅಂದುಕೊಂಡಿದ್ದೆವು. ಆದರೆ ಹೋದ ಮೇಲೆಯೇ ಗೊತ್ತಾಗಿದ್ದು ಇದು 8+8 ಕಿ.ಮೀ ಟ್ರೆಕ್ ಎಂದು. ಬೇಸ್ ಪಾಯಿಂಟ್ ನಿಂದ ಹೊರಟವರಿಗೆ ಆರಂಭದಲ್ಲಿ ಒಂದು ಗುಡ್ಡ ಹತ್ತಿದರೆ ಬಳಿಕ ಸುಮಾರು ಹೊತ್ತು ಹೆಚ್ಚು ಕಷ್ಟವೇನಿಲ್ಲ. ಮೊದಲ ಬಾರಿಗೆ ಚಾರಣ ಮಾಡುವವರಿಗೂ ಕಷ್ಟ ಎನಿಸದು. ಗುಡ್ಡದ ಹಾದಿಯಲ್ಲಿ ಮೇಲೆರಿಕೊಂಡು ಸುಲಭವಾಗಿ ಬರಬಹುದು. ತಣ್ಣನೆ ಬೀಸುವ ಗಾಳಿಯ ಕಾರಣದಿಂದ ಹೆಚ್ಚು ಆಯಾಸ ಅನುಭವಕ್ಕೆ ಬಾರದು.

ಬೇಸ್ ಪಾಯಿಂಟ್ ನಿಂದ ಸುಮಾರು 2.5 ಕಿ.ಮೀ ನಡೆದು ಬಂದಾಗ ಒಂದು ಸಣ್ಣ ಜಲಪಾತ ಸಿಗುತ್ತದೆ. ಇಲ್ಲಿ ಮುಖ ತೊಳೆದುಕೊಂಡು ಆಯಾಸ ದೂರ ಮಾಡಿಕೊಂಡು ಸಾಗಬಹುದು.  ಇಲ್ಲಿಂದ ನೇತ್ರಾವತಿ ತೊರೆಯವರೆಗೆ ಒಂದೇ ದಾರಿ ಸರ್, ನೇರ ನಡೆದುಕೊಂಡು ಹೋಗಿ ಎಂದರು ನಮ್ಮ ಗೈಡ್ ನಿತಿನ್. ಇದು 3.5-4 ಕಿ.ಮೀ ದಾರಿ. ಇಲ್ಲಿ ನೀವು ಬೆಟ್ಟಗಳನ್ನು ಹತ್ತಿ ಸಾಗುತ್ತೀರಿ.
ಮಂಜಿನ ಸಾಲುಗಳು, ಎದರುಲ್ಲಿ ಕಾಣುವ ಹಸಿರನ್ನು ಹೊದ್ದ ದೊಡ್ಡ ಬೆಟ್ಟಗಳನ್ನು ಕಣ್ತುಂಬಿಕೊಂಡು ಸಾಗುವ ಚಾರಣ ಚಂದ. ಕೆಲವು ಕಡೆ ಸಣ್ಣ ಸಣ್ಣ ಕಲ್ಲುಗಳನ್ನು ಹತ್ತಿ ಇಳಿದು, ಸಣ್ಣ ತೋಡಿನಲ್ಲಿ ಬರುವ ನೀರಿನಲ್ಲಿ ಕಾಲಿರಿಸಿ ದಣಿವಾರಿಸಿಕೊಂಡು ಹೋಗಬಹುದು.

ಇದು ಕಠಿಣ ದಾರಿ
ಇಡೀ ನೇತ್ರಾವತಿ ಚಾರಣ ಪ್ರಮುಖ ಘಟ್ಟವಿದು. ಇಲ್ಲಿರುವುದು ಸುಮಾರು 1ರಿಂದ 1.5 ಕಿ.ಮೀ ದೂರ. ಆದರೆ ಇಷ್ಟು ಸಾಗಲು ನಿಮಗೆ ಕನಿಷ್ಠ ಒಂದು ಗಂಟೆ ಬೇಕು. ಇಲ್ಲಿಯೇ ಅಂದಾಜು ಮಾಡಿಕೊಳ್ಳಿ ಇದರ ಕಾಠಿಣ್ಯತೆ. ನೇತ್ರಾವತಿ ತೊರೆ ದಾಟಿದ ಕೂಡಲೇ ನಿಮಗೆ ಸಣ್ಣ ಬೆಟ್ಟವೊಂದು ಸಿಗುತ್ತದೆ. ಇದನ್ನು ಹತ್ತುವಾಗಲೇ ನಿಮಗೆ ಈ ಚಾರಣದ ಕಷ್ಟ ಅರ್ಥವಾಗುತ್ತದೆ! ನೇರ ಬೆಟ್ಟದ ಬೆನ್ನಮೇಲೆ ಸಾಗುವ ನಿಮಗೆ ಅಲ್ಲಿಂದ ಸುಂದರ ದೃಶ್ಯಗಳು ಕಾಣ ಸಿಗುತ್ತದೆ. 360 ಡಿಗ್ರಿಯೂ ಹಚ್ಚ ಹಸುರಿನ ಸುಂದರತೆಯನ್ನು ಇಲ್ಲಿ ಕಣ್ತುಂಬಬಹುದು. ಇದಕ್ಕೆ ಸರಿಯಾಗಿ ಮಂಜಿನ ಸಾಲು.
ಇಲ್ಲಿ ನಿಧಾನವಾಗಿ ಹೆಜ್ಜೆ ಇಡುತ್ತಾ ಸಾಗಬೇಕು. ಪ್ರತಿ ಹತ್ತಿಪ್ಪತ್ತು ಹೆಜ್ಜೆಗೆ ಅರೆ ನಿಮಿಷದ ವಿರಾಮ ಪಡೆದು ಸಾಗಬೇಕು. ಎದುರಿಗೆ ಸಿಗುವ ಶಿಖರ ತಲುಪಿದರೆ ಆಯಿತು ಎಂದು ಸಾಗಿದರೆ ನಿಮಗೆ ಹತ್ತಿ ಬಂದಕ್ಕಿಂತ ಮತ್ತೊಂದು ದೊಡ್ಡ ಶಿಖರ ಕರೆಯುತ್ತದೆ. ಒಂಥರಾ ಬೇಸರ ಸುಸ್ತಿನಿಂದ ನಿಮ್ಮ ನಡಿಗೆ ಮತ್ತೆ ಆರಂಭ. ಕೊನೆಗೂ ಶಿಖರದ ತುತ್ತ ತುದಿ ತಲುಪಿದರೆ ಸಿಗುವ ನಿರಾಳತೆ, ಆನಂದ ಅದು ವಿವರಿಸಲು ಕಷ್ಟ. ಅನುಭವವೇ ಆಗಬೇಕು.
ನೇತ್ರಾವತಿ ಪೀಕ್ ನಿಂದ ನಿಮಗೆ ಪಶ್ಚಿಮ ಘಟ್ಟಗಳ ಕೆಲವು ಪ್ರಮುಖ ಶಿಖರಗಳನ್ನು ನೋಡುತ್ತೀರಿ. ಹೆಚ್ಚಿನ ಮೋಡಗಳು ಇರದ್ದರೆ, ಬಲಭಾಗದಲ್ಲಿ ಕುದುರೆಮುಖ ಶಿಖರ ಮತ್ತು ಎಡಭಾಗದಲ್ಲಿ ರಾಣಿ ಝರಿಯನ್ನು ನೋಡಬಹುದು. ದೂರದ ದಿಗಂತದಲ್ಲಿ ಕೆಲವು ಪರ್ವತಗಳು ಕಾಣುತ್ತವೆ. ಕೆಳಗೆ ಬೆಳ್ತಂಗಡಿಯ ಊರುಗಳು, ಗಾಂಭೀರ್ಯದಿಂದ ನಿಂತ ಗಡಾಯಿಕಲ್ಲು ಕಾಣುತ್ತದೆ.
ಚಾರಣ ಹತ್ತುವುದಾದರೆ ಒಂದು ಬಗೆಯ ಉತ್ಸಾಹವಾದರೆ, ಇಳಿಯುವುದು ಮತ್ತೊಂದು ಸಾಹಸ. ಮೊದಲ ಒಂದು ಕಿ.ಮೀ ದೂರ ಇಳಿಜಾರು ಪ್ರದೇಶವಾದ ಕಾರಣ ಜಾಗರೂಕತೆಯಿಂದ ಇಳಿಯಬೇಕು.
 

ಚಾರಣಕ್ಕೆ ಮುನ್ನ ಇದು ನೆನಪಿರಲಿ
 

ಆನ್ ಲೈನ್ ಬುಕ್ಕಿಂಗ್: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ನೇತ್ರಾವತಿ ಚಾರಣಕ್ಕೆ ಬರುತ್ತಿರುವ ಕಾರಣ ಆನ್ ಲೈನ್ ಬುಕ್ಕಿಂಗ್ ಅಗತ್ಯ. ದಿನಕ್ಕೆ 300 ಜನರಿಗೆ ಮಾತ್ರ ಅವಕಾಶವಿದೆ. ವೀಕೆಂಡ್ ಗಳಲ್ಲಿ ಬೆಂಗಳೂರು ಸೇರಿ ಹಲವೆಡೆಯಿಂದ ತುಂಬಾ ಜನರು ಬರುವ ಕಾರಣ ಆನ್ ಲೈನ್ ಬುಕ್ಕಿಂಗ್ ಮಾಡಬೇಕಾಗುತ್ತದೆ. ವಾರದ ದಿನಗಳಲ್ಲಿ ಅಷ್ಟು ಚಾರಣಿಗರು ಇರುವುದಿಲ್ಲ.
ಬೆಳಗ್ಗೆ ಹೋಗಬೇಕು: ಬೆಳಗ್ಗೆ 6 ಗಂಟೆಗೆ ಚಾರಣ ಆರಂಭವಾಗುತ್ತದೆ. 11 ಗಂಟೆಯವರೆಗೆ ಮಾತ್ರ ಇಲ್ಲಿ ಅನುಮತಿ ನೀಡಲಾಗುತ್ತದೆ. ಹೀಗಾಗಿ ಬೇಗನೇ ಬೇಸ್ ಪಾಯಿಂಟ್ ತಲುಪಿ.
ಆಧಾರ್ ಕಾರ್ಡ್: ವಾರದ ದಿನಗಳಲ್ಲಿ ಇಲ್ಲಿಯೇ ಬಂದು ಬುಕಿಂಗ್ ಮಾಡುವುದಾದರೆ ಆಧಾರ್ ಕಾರ್ಡ್ ಬೇಕಾಗುತ್ತದೆ.
ಆಹಾರ ತನ್ನಿ: ಎಳನೀರು ಕ್ರಾಸ್ ಬಳಿಕ ನಿಮಗೆ ಯಾವುದೇ ಅಂಗಡಿಯೂ ಸಿಗುವುದಿಲ್ಲ. ಹೀಗಾಗಿ ಚಾರಣದ ಸಮಯದಲ್ಲಿ ತಿನ್ನಲು ಬೇಕಾಗುವ ತಿಂಡಿ ತನ್ನಿ. ನೀವು ಹೋಂ ಸ್ಟೇಗಳಲ್ಲಿ ಉಳಿದು ಇಲ್ಲಿ ಚಾರಣಕ್ಕೆ ಬರುವುದಾದರೆ ಅಲ್ಲಿದಂಲೇ ತಿಂಡಿ ಕಟ್ಟಿಕೊಂಡು ಬನ್ನಿ. ನೀರಿನ ಬಾಟಲಿಯೂ ನಿಮ್ಮೊಂದಿಗೆ ಇರಲಿ.
ಪ್ಲಾಸ್ಟಿಕ್ ಎಸೆಯಬೇಡಿ: ನೀರಿನ ಬಾಟಲಿ, ತಿಂಡಿ ಕಟ್ಟಿಕೊಂಡು ಬಂದ ಪ್ಲಾಸ್ಟಿಕ್ ಚೀಲಗಳನ್ನು ದಯವಿಟ್ಟು ಎಲ್ಲೆಂದರಲ್ಲಿ ಎಸೆಯಬೇಡಿ. ಸದ್ಯಕ್ಕೆ ನೇತ್ರಾವತಿ ಬೆಟ್ಟ ಸಾಲು ಸ್ವಚ್ಛವಾಗಿದೆ. ಹೀಗೆಯೇ ಮುಂದೆಯೂ ಇರಲಿ.
ಜೋರು ಮಳೆಯಲ್ಲಿ ಚಾರಣ ಕಷ್ಟ: ಜೋರು ಮಳೆ ಬರುವ ಸಮಯದಲ್ಲಿ ಇಲ್ಲಿ ಚಾರಣ ಮಾಡುವುದು ಕಷ್ಟ. ಅದರಲ್ಲೂ ಕೊನೆಯ ಒಂದು ಕಿ.ಮೀ ಹಾದಿ ಜಾರುವ ಕಾರಣ ಮಳೆಯಲ್ಲಿ ನಡೆಯುವುದು ಕಷ್ಟ. ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಇಲ್ಲಿ ಚಾರಣಕ್ಕೆ ಬರುವುದು ಸೂಕ್ತ ಎನ್ನುತ್ತಾರೆ ಸ್ಥಳೀಯರು.

Category:Travel



ProfileImg

Written by Balu Kukke8277

0 Followers

0 Following