ನನ್ನವನು ಎಲ್ಲರ ಹಾಗಲ್ಲ. ಯಾವತ್ತೂ ಗುಲಾಬಿ ತಂದುಕೊಟ್ಟವನಲ್ಲ. ದುಬಾರಿ ಉಡುಗೊರೆ ಕೊಟ್ಟವನಲ್ಲ. ಮದುವೆಯಾಗುವ ಭರವಸೆಯನ್ನು ಕೊಟ್ಟಿದ್ದ .ಅವನಿಗೆ ಈಗಿನ ಯುವ ಪೀಳಿಗೆಯ ಯವರ ಹಾಗೆ ಮೋಜು ಮಸ್ತಿಯಲ್ಲಿ ಆಸಕ್ತಿಯಿರಲಿಲ್ಲ.ಹಿಂದಿ ಹಾಡುಗಳನ್ನು ಗುನುಗುತ್ತಾ ಇರುತ್ತಿದ್ದ. ನನಗೆ ಹಾಡು ಹೇಳುವವರೆಂದರೆ ತುಂಬಾ ಇಷ್ಟ. ಬೇಕಾದಾಗ ಅವನಿಂದ ಹಾಡು ಕೇಳುತ್ತಿದ್ದೆ .ಒಂದು ದಿನ ನಿನ್ನ ಇಷ್ಟವೇನು ಎಂದು ಕೇಳಿದ್ದ. ನನಗೆ ಎಲ್ಲರ ಹಾಗೆ ಆಸ್ತಿ-ಮನೆ ,ಒಡವೆ ಇದ್ಯಾವುದರ ಆಸಕ್ತಿ ಇರಲಿಲ್ಲ. ಪ್ರೀತಿಗೆ ಜಾಸ್ತಿ ಬೆಲೆ ಕೊಡುವ ಹುಡುಗಿ ನಾನು. ಎಲ್ಲವೂ ಇದ್ದು ಪ್ರೀತಿ ಇಲ್ಲವೆಂದರೆ ಬದುಕಿಗೆ ಯಾವ ಅರ್ಥವೂ ಇರುವುದಿಲ್ಲ. ಆ ಥಿಯರಿಯಲ್ಲಿ ನಂಬಿಕೆ ಇಟ್ಟವಳು ನಾನು. ಪ್ರೀತಿ ಎಲ್ಲರಿಗೂ ದೊರಕುವುದಿಲ್ಲ. ದೊರಕಿದರೂ ಅದು ತೋರಿಕೆಯದೂ ಆಗಿರಬಹುದು. ನಿಜವಾದ ಪ್ರೀತಿ ದೊರೆತಾಗ ಅದು ಕಳೆದುಕೊಳ್ಳುವುದಿದೆಯಲ್ಲಾ ಬಹಷಃ ಅದಕ್ಕಿಂತಾ ಜೀವನದಲ್ಲಿ ಮಾಡುವ ತಪ್ಪು ಬೇರೆ ಯಾವುದೂ ಇಲ್ಲ. ನಾನು ಪ್ರಕೃತಿ ಪ್ರೇಮಿ. ಬೆಳದಿಂಗಳ ಊಟ..ಹಸಿರ ಮೇಲಿನ ಇಬ್ಬನಿಯ ಮೇಲೆ ನಡೆದಾಟ. ಸಮುದ್ರ ತೀರದ ಮರಳಿನಲ್ಲಿ ನಡೆದಾಡೋದು ಬಿಸಿ ಬಿಸಿ ಕಾಫಿ ನಿಧಾನವಾಗಿ ಹೀರೋದು ಎಂದಿದ್ದೆ. ಅದಕ್ಕವನು ಗೊಳ್ಳೆಂದು ನಕ್ಕಿದ್ದ. ಹಣದಿಂದಲೇ ಜೀವನ ಹೌದು. ಪ್ರೀತಿಯು ತೂಕದ ಅಥವಾ ಪರೀಕ್ಷೆಯ ವಸ್ತುವಲ್ಲ. ಅದರ ವ್ಯಾಪ್ತಿ ವಿಸ್ತಾರ. ಪ್ರೀತಿಯಲ್ಲಿ ಮೊದಲು ಗೆಳೆತನವಿರಬೇಕು.ಆಗ ಸಹಾಜವಾಗಿಯೇ ಅರ್ಥವಾಗುತ್ತಾರೆ. ನಂತರ ಗೌರವವಿರಬೇಕು .ಆಗ ಹತ್ತಿರವಾಗುತ್ತಾರೆ. ನಂತರ ನಂಬಿಕೆಯಿರಬೇಕು..ಆಗ ನಮ್ಮವರಾಗುತ್ತಾರೆ. ಇದಿಷ್ಟು ಪ್ರಿತಿಯ ಬಗ್ಗೆ ನಾ ತಿಳಿದ ವ್ಯಾಖ್ಯೆಗಳು. ಹಿಡಿತದಲ್ಲಿಡುವ, ಅಪನಂಬಿಕೆ, ಅಗೌರವ ಎಂದೂ ಪ್ರೀತಿಯಾಗುವುದಿಲ್ಲ.
ನಾವು ಯಾವುತ್ತೂ ಪ್ರೇಮಿಗಳ ಹಾಗೆ ಇರಲೇ ಇಲ್ಲ. ಮೊದಲಿನಿಂದಲೂ ಒಟ್ಟಿಗೆ ಬೆಳೆದವರು ನಾವು. ಇಬ್ಬರ ಗುಣಗಳಾಗಲೀ, ಆಸಕ್ತಇಯಾಗಲೀ, ಬೇಕು-ಬೇಡವಾಗಲೀ ಚೆನ್ನಾಗಿ ಗೊತ್ತು.. ಅಂದ ಮೇಲೆ ಮದುವೆಯಾಗುವುದರಲ್ಲಿ ತಪ್ಪೇನು ಇಲ್ಲ. ಗೊತ್ತಿಲ್ಲದ ಯಾವುದೋ ಹುಡುಗನಿಗೆ ಕೊರಳೊಡ್ಡುವುದಕ್ಕಿಂತ ಗೊತ್ತಿರುವವನ ಹೆಂಡತಿಯಾಗುವುದರಲ್ಲಿ ಯಾವ ತಪ್ಪೂ ಇಲ್ಲ. ಮದರಂಗಿ ಕೈ ಮೊದಲು ನಿನಗೆ ತೋರಿಸುತ್ತಿದ್ದೆ. ಗಣಿತ ಅರ್ಥವಾಗದಿದ್ದಾಗ ನಿನ್ನ ಹತ್ತಿರ ಹೇಳಿಸಿಕೊಳ್ಳುತ್ತಿದ್ದೆ. ಎಲ್ಲಾ ಗೆಳೆಯರ ಹಾಗೆ ನೀನೂ ಇದ್ದೆ. ಆದ್ದರಿಂದ ಜನ ನಮ್ಮ ಬಗ್ಗೆ ಕೆಟ್ಟದಾಗಿ ಯಾವ ಮಾತೂ ಆಡುತ್ತಿರಲಿಲ್ಲ.
ಸಂಜೆ ಸಮಯದಲ್ಲಿ ಗದ್ದೆ ಬದುವುನಲ್ಲಿ ಕುಳಿತು ನೀನು ಸುಂದರ ಹಾಡ ಹಾಡುತ್ತಿದ್ದೆ. ದನ ಕಾಯುವವರು, ಕಳೆ ಕೀಳುವವರು . ಹುಲ್ಲು ಹೊರುವವರು ಒಂದು ಕ್ಷಣ ನಿನ್ನ ದನಿ ಆಲಿಸಿ ನಂತರ ಮನೆಯ ದಾರಿ ಹಿಡಿಯುತ್ತಿದ್ದರು. ನಮ್ಮಿಬ್ಬರ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಿರಲಿಲ್ಲ. ನಮ್ಮ ಬಗ್ಗೆ ನಮಗೇ ಹೆಮ್ಮೆಯಿತ್ತು.
ಒಂದು ದಿನ ನಿನಗೆ ವಿದೇಶದಿಂದ ಕೆಲಸಕ್ಕಾಗಿ ಕರೆ ಬಂತು.ನೀನೂ ಹೊರಟು ನಿಂತೆ. ನಿನ್ನ ಇಷ್ಟಕ್ಕೆ ನಾನು ಅಡ್ಡಿ ಬರಲಿಲ್ಲ. ವಿದೇಶಕ್ಕೆ ನೀನು ಹೊರಡಲನುವಾದೆ. ನನ್ನ ನೆನಪಿಗಾಗಿ ನೀಲಿ ಬಣ್ಣದ ಬಿಳಿ ಅಂಚಿನ ಒಂದು ದುಪ್ಪಟ್ಟ ಕೇಳಿದ್ದೆ ನೀನು. ನಿನ್ನಾಸೆಗೆ ಬೇಡವೆನ್ನಲಿಲ್ಲ.
ನೀಲಿ ಬಣ್ಣ ದೂರದ ಸಂಕೇತ ಎಂದು ಹೊಳೆಯಲೇ ಇಲ್ಲ. ನೀನಿಲ್ಲದ ಗಳಿಗೆ ಕಷ್ಟವಾಗಿತ್ತು. ಹೊಲದಲ್ಲಿ ದುಡಿಯುತ್ತಿದ್ದೆ. ಬಿಡುವಾದಾಗ ಓದುತ್ತಿದ್ದೆ. ಖುಷಿಯಾದಾಗ ಹಾಡು ಹೇಳುತ್ತಿದ್ದೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದೆ. ಒಟ್ಟಿನಲಿ ಎಲ್ಲರಿಗೂ ಇಷ್ಟವಾದ ಹುಡುಗನಾಗಿದ್ದೆ. ನಿನ್ನ ಈ ಗುಣಕ್ಕೆ ನಾನು ಸೋತು ಹೋಗಿದ್ದೆ. ನನಗೆ ಆಡಂಬರದ ಮಾತುಗಳಾಗಲೀ , ಉದ್ಧಟತನದ ಉತ್ತರವಾಗಲೀ ಇಷ್ಟವಾಗದು. ನೀನು ಕೆಲವೇ ದಿನಗಳಲ್ಲಿ ವಿದೇಶದ ಭಾಗವಾಗಿದ್ದೆ. ನಿನ್ನ ಹೆಸರಲ್ಲೇ ಊಟ,ನಿದ್ದೆ,ದಿನ ಕಳೆದಿತ್ತು.
ಒಂದು ವರುಷದ ನಂತರ ನೀನು ಬಂದೆ. ಆದರೆ ನೀನು ನೀನಾಗಿರಲಿಲ್ಲ. ಮಾತು,ಬಟ್ಟೆ ಎಲ್ಲವೂ ಬದಲಾಗಿತ್ತು. ಪ್ರಯಾಣದ ಆಯಾಸವಿರಬೇಕೆಂದುಕೊಂಡೆ. ನಿನ್ನ ಮಾತಾಡಿಸಿ ಬರುವಾಗ ಕೆಲವು ಹೆಂಗಸರು ನಿನಗೆ ವಿದೇಶದ ಹುಡುಗಿಯೊಂದಿಗೆ ಮದುವೆಯಾಗಿದೆ ಎಂದು ಮಾತನಾಡಿಕೊಂಡು ಹೋಗುತ್ತಿದ್ದರು. ಅಲ್ಲೇ ಕುಸಿದು ಕುಳಿತೆ. ನೆನಪುಗಳ ಬುತ್ತಿ ಕೆಸರ ಪಾಲಾಗಿತ್ತು. ಹಾಗಂತ ನಾನು ರಂಪ ಮಾಡಿಲ್ಲ,ರಚ್ಚೆ ಹಿಡಿದಿಲ್ಲ. ಹಣೆಬರಹ, ಋಣಬಂಧ ಎಂದು ಸುಮ್ಮನಾಗಿದ್ದೇನೆ. ದಿನಪೂರ್ತಿ ಕೆಲಸ ಮಾಡುತ್ತೇನೆ. ಹೊಲದಲ್ಲಿ ಬೀಜ ಬಿತ್ತುತ್ತೇನೆ. ಮಕ್ಕಳಂತೆ ಅವುಗಳನ್ನು ಕಾಪಾಡುತ್ತೇನೆ. ಬಂದ ಬೆಳೆಯನ್ನು ಕಣ್ತುಂಬಿಕೊಳ್ಳುತ್ತೇನೆ. ಗಂಡು ಮಕ್ಕಳಿಲ್ಲದ ಮನೆಗೆ ನಾನೇ ದಿಕ್ಕಾಗಿದ್ದೇನೆ. ಬೀಸೋ ಗಾಳಿಯಲ್ಲಿ ನಿನ್ನ ಹಾಡು ಕೇಳಿ ಬರುತ್ತದೆ. ನಿನ್ನ ನೆನಪು ತೂರಿ ಬರುತ್ತದೆ. ಕಣ್ಣಂಚಿನಲಿ ನೀರು ಸುರಿಯುತ್ತದೆ. ವಾಸ್ತವದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಹಟ್ಟಿಗೆ ಹೋಗುತ್ತೇನೆ.ಸಗಣಿ ಬಾಚುತ್ತೇನೆ. ಗೋಮಾತೆಯ ಕಣ್ಣಲ್ಲಿರುವ ಕರುಣೆ ನನಗೂ ಬರಲಿ ಎಂದು ಬೇಡುತ್ತೇನೆ. ಈಗಲೂ ದೀಪ ಹಚ್ಚುತ್ತೇನೆ ಅದೂ ನಿನ್ನ ಹೆಸರಲ್ಲಿ.
ಸೌಮ್ಯ ಜಂಬೆ.
ಮೈಸೂರು
0 Followers
0 Following