ನಾವ್ ಗುಬ್ಬಿಗಳು.

(ನಮ್ಮನ್ನುಬದುಕಲು ಬಿಡಿ)

ProfileImg
20 Mar '24
4 min read


image

 

ಚಳಿಗಾಲ ಹಿಂದೆ ಸರಿದು, ಬೇಸಿಗೆ ಇನ್ನೇನು ಅಡಿಯಿಡುವ ಸಮಯ. ಮನೆಯಲ್ಲಿ ತೆರೆದ ಕಿಟಕಿಗೆ ತಲೆಯಾನಿಸಿ ಪುಸ್ತಕ ಹಿಡಿದು ಕುಳಿತವಳಿಗೆ ಹೊರಗೆ "ಚೀಂವ್, ಚೀಂವ್....."ಶಬ್ದ ಕೇಳಿ ನೆನಪಿನ ಕೊಳದ ತಳದಲ್ಲಿ ನಿಂತಿದ್ದ ನೆನಪು ಥಟ್ಟನೇ  ಮೇಲೆದ್ದು....'ಅರೆ, ಈ ಶಬ್ದ ನನಗೆ ಬಹಳ ಪರಿಚಿತವಾಗಿದೆಯಲ್ಲ' ಎಂದುಕೊಂಡು... ಏಕಾಏಕಿ ಮರೆತ ಬಂಧುವಿನ ಆಗಮನವಾದಂತೆ.... ಓಟದ ನಡಿಗೆಯಲ್ಲಿ ಹೊರಗೆ ಬಂದು ನೋಡಿದೆ.

ನಿಜ, ನನ್ನನ್ನು ಹಳೆಯ ದಿನಗಳಿಗೆ ಕೊಂಡೊಯ್ದ ಆ ಸುಮಧುರ ಗಾನ ನನ್ನ ಬಂಧುಗಳದ್ದೇ ಆಗಿತ್ತು. ಹಿಡಿಯಷ್ಟು ಗಾತ್ರದ ಈ ಬಂಧುಗಳು ಬೇರಾರೂ ಅಲ್ಲ, ಎರಡೇ ಕಾಲು ಮತ್ತು ಪುಟ್ಟ ಪುಟ್ಟ ರೆಕ್ಕೆಗಳಿರುವ ಗುಬ್ಬಿಗಳು. 'ಬಹಳ ವರ್ಷಗಳಾದಮೇಲೆ....ಗೆಳತಿಯನ್ನು ಕಾಣಲೆಂದು ಬಂದಿರಾ?' ನನಗೋ ಎತ್ತಿಕೊಂಡು ಮುದ್ದಾಡುವ ಆಸೆ. ಆದರೆ ಹಳೆಯ ನಂಟು ಅವಕ್ಕೆ ಮರೆತುಹೋಗಿತ್ತೋ ಅಥವಾ ನನ್ನ ನಂಟಿನ ಗುಬ್ಬಿಗಳ ನಂತರದ ಎಷ್ಟನೇ ಪೀಳಿಗೆಯವರೋ. ಧೂಳಿನ ಸ್ನಾನ ಮಾಡುತ್ತಿದ್ದ ಗುಬ್ಬಿಗಳು ನಾನು ಹತ್ತಿರ ಹೋದಾಕ್ಷಣ ಪುರ್ರನೇ ಹಾರಿಹೋಗಿ ನನ್ನನ್ನು ಅಗಾಧ ನಿರಾಸೆಯ ಮಡುವಿಗೆ ದೂಡಿದವು.

ಭಾರತದಲ್ಲಿ ಕಾಣಸಿಗುವ ೧೪೦೦ ಪಕ್ಷಿ ಪ್ರಬೇಧಗಳಲ್ಲಿ ಮನುಷ್ಯನಿಗೆ ಅತಿ ಹತ್ತಿರವಾದವೆಂದರೆ ಗುಬ್ಬಚ್ಚಿಗಳು. ಹೆಚ್ಚೆಂದರೆ ೨೦ರಿಂದ ೨೫ಗ್ರಾಂ ತೂಗುವ ಗುಬ್ಬಿಗಳು ೫ ಅಂಗುಲ ಉದ್ದವಿರುತ್ತವೆ.  ಗಂಡು ಗುಬ್ಬಿಯು ಗಾಢವಾದ ಕಂದು ಬಣ್ಣವನ್ನು ಹೊಂದಿರುತ್ತದೆ. ಇದರ ಕೊರಳಿನ ಕೆಳಭಾಗದಲ್ಲಿ ಕಪ್ಪು ಗರಿಗಳಿರುತ್ತವೆ. ಹೆಣ್ಣು ಗುಬ್ಬಿಯು ತೆಳುವಾದ ಕಂದು ಬಣ್ಣ ಹೊಂದಿದ್ದು ಕೊರಳ ಕೆಳಭಾಗದಲ್ಲಿ ಬಿಳಿಯ ಗರಿಗಳಿರುತ್ತವೆ.

ಮನೆಗುಬ್ಬಿಗಳು ಏಪ್ರಿಲ್‌ನಿಂದ ಅಗಸ್ಟ್ ತಿಂಗಳ ಒಳಗೆ ಹುಲ್ಲು, ಸೆಣಬಿನ ಹಗ್ಗ, ನಾರು ಮುಂತಾದ ನಿರುಪಯುಕ್ತ ವಸ್ತುಗಳಿಂದ ಗೂಡನ್ನು ಕಟ್ಟುತ್ತವೆ. ಇವು ಸಾಮಾನ್ಯವಾಗಿ ಒಮ್ಮೆ ನಾಲ್ಕರಿಂದ ಆರು ಮೊಟ್ಟೆಗಳನ್ನಿಟ್ಟು ಸರದಿಯಂತೆ ಹೆಣ್ಣು ಮತ್ತು ಗಂಡು ಹಕ್ಕಿಗಳೆರಡೂ ಅವುಗಳಿಗೆ ಕಾವು ಕೊಡುತ್ತವೆ.  

ಹತ್ತರಿಂದ ಹದಿನಾಲ್ಕು ದಿನಗಳಲ್ಲಿ ಮೊಟ್ಟೆಯೊಡೆದು ಹೊರಬಂದ ಮರಿಗಳಿಗೆ ಸಣ್ಣ ಸಣ್ಣ ಹುಳಹುಪ್ಪಟೆಗಳೇ ಆಹಾರ. ಕ್ರಮೇಣವಾಗಿ ಅವುಗಳಿಗೆ ಸಣ್ಣ ಧಾನ್ಯಗಳನ್ನು ತಂದು ಗುಟುಕು ಕೊಟ್ಟು ಪೋಷಿಸುತ್ತವೆ. ೧೫ ರಿಂದ ೨೦ ದಿನಗಳಲ್ಲಿ ರೆಕ್ಕೆ ಬಲಿತ ಮರಿಗಳು ಸ್ವತಂತ್ರವಾಗಿ ಆಹಾರವನ್ನು ಅರಸಲು ಗೂಡಿನಿಂದ ಹೊರಗೆ ಹಾರುತ್ತವೆ.

ಬಾಲ್ಯದಲ್ಲಿ  ನನ್ನ ಸಂಗಾತಿಗಳಾಗಿದ್ದ ಗುಬ್ಬಿಗಳಿಗೂ ನನಗೂ ಅವಿನಾಭಾವ ಸಂಬಂಧ.  ಗುಬ್ಬಿ ಸಂಸಾರದ ಇಂತಹ ಪ್ರಕ್ರಿಯೆಗಳನ್ನು ತದೇಕಚಿತ್ತಳಾಗಿ ನೋಡುತ್ತಾ ಸಂಭ್ರಮಿಸುತ್ತಿದ್ದೆ.
ಅಮ್ಮನ ಸೀರೆಯ ಕೌದಿ ಹೊದ್ದು ಮಲಗಿರುತ್ತಿದ್ದ ನನ್ನನ್ನು, ಇಂಪಾದ ರಾಗದಲ್ಲಿ ಸುಪ್ರಭಾತವನ್ನು ಹಾಡಿ ನಿತ್ಯ ಬೆಳಿಗ್ಗೆ ಎಬ್ಬಿಸುತ್ತಿದ್ದಿದ್ದು....ಇವೇ ಗುಬ್ಬಿಗಳು.

ಬಾಡಿಗೆ ನೀಡದ ಬಾಡಿಗೆದಾರರಾಗಿ ಹಂಚಿನ ಮಾಡಿನ ನಡುವೆ ಮತ್ತು ಗೋಡೆಯ ಸಂದುಗಳಲ್ಲಿ, ವಿದ್ಯುತ್ ಮೀಟರನ್ನೇ ಬುನಾದಿಯನ್ನಾಗಿಸಿಕೊಂಡು ಕಟ್ಟಿದ ಹುಲ್ಲಿನ ಅರಮನೆಯಲ್ಲಿ  ಕೆಲವು ಗುಬ್ಬಿ ಕುಟುಂಬಗಳು ನಮ್ಮ ದೊಡ್ಡ ಕುಟುಂಬದೊಂದಿಗೆ  ಸಹಬಾಳ್ವೆ ನಡೆಸುತ್ತಿದ್ದವು.  

ಊಟಕ್ಕಾಗಿ ಅವು ಅಲೆದಾಡಿದ್ದನ್ನು ನಾನು ಎಂದೂ ನೋಡಿಲ್ಲ. ದೀಪಾವಳಿಯ ಬಲಿಪಾಡ್ಯಮಿಯಂದು ಮುಂಬಾಗಿಲಿಗೆ ಕಟ್ಟಿದ ಭತ್ತದ ತೆನೆಯ ತೋರಣ, ಅಮ್ಮ ಅಕ್ಕಿ ಆರಿಸುವಾಗ ಎಸೆಯುತ್ತಿದ್ದ ನೆಲ್ಲು, ಅಕ್ಕಿಯನ್ನು ಜರಡಿ ಹಿಡಿಯುವಾಗ ಅವುಗಳಿಗಾಗಿಯೇ ಚೆಲ್ಲುತ್ತಿದ್ದ ಒಂದು ಹಿಡಿ ನುಚ್ಚು ಎಲ್ಲವೂ ಇಲ್ಲಿಯೇ ಸಿಗುವಾಗ...ಆಹಾರಕ್ಕಾಗಿ ದೂರಕ್ಕೆ ಹಾರಿಹೋಗುವ ಅಗತ್ಯ ಅವುಗಳಿಗೆ ಇರಲಿಲ್ಲ. ವಾಸ್ತವದಲ್ಲಿ ಕಿಚಿಪಿಚಿ ಎನ್ನುವ ಅವುಗಳಿಗೆ ಆಹಾರ ಒದಗಿಸುತ್ತ, ಆವುಗಳ ಆಟವನ್ನು ನೋಡುತ್ತ ಅಕ್ಕಿ ಹಸನುಗೊಳಿಸದಿದ್ದರೆ ಅಮ್ಮನಿಗೂ ಸಮಾಧಾನವಿರುತ್ತಿರಲಿಲ್ಲ. ಒಂದು‌ ಕಾಳಿಗಾಗಿ ಪೈಪೋಟಿ ನಡೆಸುತ್ತಾ, ಸಣ್ಣ ಕಾಳುಗಳಾದರೆ ಕೊಕ್ಕಿನಲ್ಲಿ ಕಚ್ಚಿ ಕೊಂಡೊಯ್ದು...ತಮ್ಮ‌ ಮರಿಗಳಿಗೆ ತಿನ್ನಿಸುತ್ತಿದ್ದ ಗುಬ್ಬಿಗಳು ನನ್ನ ಕಣ್ಣಿಗೆ ಥೇಟ್ ನನ್ನಮ್ಮನಂತೆ ಕಾಣುತ್ತಿದ್ದವು. ಒಂದು ಭತ್ತವನ್ನು ತಮ್ಮ ಪುಟ್ಟ ಕೊಕ್ಕಿನಿಂದ ಕುಕ್ಕಿ, ಅಕ್ಕಿ ಹೊರತೆಗೆದು ಉಂಡು ತೇಗುವ ಗುಬ್ಬಿಗಳು ಅದರಲ್ಲಿ ಸಂತೃಪ್ತಿಯನ್ನು ಕಾಣುತ್ತಿದ್ದವು.  

ತಮ್ಮ ಶರೀರದ ಗರಿಗಳ ನಡುವೆ ಅಂಟಿಕೊಂಡಿರುತ್ತಿದ್ದ ಹೇನುಗಳಿಂದ ಮುಕ್ತಿ ಪಡೆಯಲು ಮಣ್ಣಿನ‌ ಸ್ನಾನ ಮಾಡುತ್ತಿದ್ದವೆಂದು ಈಗ ಅಂದುಕೊಳ್ಳುತ್ತೇನೆ.  ಧೂಳಿನ ಸ್ನಾನದಷ್ಟೇ ನೀರಿನ ಸ್ನಾನವೂ ಅತ್ಯಂತ ಪ್ರಿಯ ಮನೆಗುಬ್ಬಿಗಳಿಗೆ. ಸಂಜೆಯಲ್ಲಿ ಗಿಡಗಳಿಗೆ ನೀರುಣಿಸುವಾಗ...ಪಾತಿಯಲ್ಲಿ‌ ನಿಂತಿರುತ್ತಿದ್ದ ನೀರಿನಲ್ಲಿ ಅಭ್ಯಂಗವನ್ನೂ ಮಾಡುತ್ತಿದ್ದವು.

ಬಾಲ್ಯಸಹಜ ಆಸಕ್ತಿಗಳು ವಯಸ್ಸಿನ ಜೊತೆಗೇ ಬದಲಾಗುತ್ತ, ಬದುಕಿನ‌ ಹಾದಿ ವಿಸ್ತಾರಗೊಳ್ಳುತ್ತ ...ಅವುಗಳ ಒಡನಾಟದಿಂದ ನಿಧಾನವಾಗಿ ದೂರವಾಗಿ ನನ್ನದೇ ಆದ ವ್ಯಸ್ತತೆಯಲ್ಲಿ ಸಾಗುತ್ತಿದ್ದಾಗಲೇ ಒಮ್ಮೆ ನನ್ನ ಬಾಲ್ಯದತ್ತ ತಿರುಗಿ‌ನೋಡಿದಾಗ... ನನ್ನ ಬಾಲ್ಯ, ಬಾಲ್ಯದ ಗೆಳತಿಯರ ಜೊತೆಗೆ....ನನ್ನ ಪಾಲಿಗೆ ಗುಬ್ಬಕ್ಕರಾಗಿದ್ದ ಪುಟ್ಟ ಹಕ್ಕಿಗಳು ಸಹ ಮತ್ತೆಂದೂ ಬರಲಾರದಂತೆ... ಕಾಲದ ತೆರೆಯ ಮರೆಗೆ ಸರಿದುಹೋಗಿಬಿಟ್ಟಿದ್ದವು!

ಹೌದು....ಎಂಭತ್ತರ ದಶಕದಲ್ಲಿಯೂ ಸರ್ವೇಸಾಮಾನ್ಯವಾಗಿ ಕಂಡುಬರುತ್ತಿದ್ದ ಗುಬ್ಬಿಗಳು, ತೊಂಭತ್ತರ ದಶಕದ ಹೊತ್ತಿಗಾಗಲೇ ವಿರಳವಾಗತೊಡಗಿದವು. ಮಲೆನಾಡಿನ ತವರು ತೊರೆದು ಬೆಂಗಳೂರು ಸೇರಿದಮೇಲೂ ನಮ್ಮ ಅಜ್ಜಿ  ಅಕ್ಕಿ, ರಾಗಿಯನ್ನು ಹಸನು ಮಾಡುತ್ತಿರುವಾಗ ಪುರ್ರನೇ ಹಾರಿಬಂದು ಅಜ್ಜಿ ಕೈಬೀಸುವ ಮುನ್ನವೇ ಕೊಕ್ಕಿನಲ್ಲಿ ಸಿಕ್ಕಿದಷ್ಟು ಕಾಳುಗಳನ್ನು ತುಂಬಿಕೊಂಡು ಹಾರಿ ದೂರ ಕುಳಿತು ಅಜ್ಜಿಯನ್ನು ಅಣಕಿಸುತ್ತಿದ್ದ ಅವುಗಳ ಆಟವನ್ನು ನೋಡುತ್ತಾ ಪುಟ್ಟ ಹುಡುಗಿಯೇ ಆಗಿಬಿಡುತ್ತಿದ್ದೆ. ಅವುಗಳನ್ನು ನೋಡುತ್ತಾ ಅಜ್ಜಿಯ ಸುತ್ತಲೂ ಕುಳಿತಿರುತ್ತಿದ್ದ ಪುಟ್ಟ ಮಕ್ಕಳು ನನ್ನಂತೆಯೇ ಗುಬ್ಬಿ ಸಂಸಾರದೊಂದಿಗೆ ಗೆಳೆತನ ಬೆಳೆಸಿದ್ದವು.

ನೋಡ ನೋಡುತ್ತಾ ವರ್ಷಗಳು ಉರುಳಿದಂತೆಲ್ಲ ಗುಬ್ಬಿಗಳ ಸಂತತಿ ಗಣನೀಯವಾಗಿ ಇಳಿಕೆಯಾಗತೊಡಗಿತು. ಅಪರೂಪವಾಗತೊಡಗಿದ ಗುಬ್ಬಕ್ಕನ ಸಂಸಾರ, ನಂತರದ ದಿನಗಳಲ್ಲಿ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಕಾಣದಾದಾಗ....ಬಾಲ್ಯ ಸ್ನೇಹಿತರನ್ನು ಕಳೆದುಕೊಂಡಿದ್ದಕ್ಕಿಂತ ಹೆಚ್ಚು ದುಃಖವಾಗಿದ್ದಂತೂ ಸತ್ಯ.

ಗುಬ್ಬಿಯ ಜೊತೆ ಬಾಲ್ಯ ತಳಕುಹಾಕಿಕೊಂಡಿದ್ದ  ನಮ್ಮ‌ ಕಾಲದವರಿಗೆ ಗುಬ್ಬಿಯ ಸಂತತಿ ಅಳಿವಿನ ಅಂಚಿನಲ್ಲಿದೆ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದಿದ್ದರೂ ಒಪ್ಪಲೇಬೇಕಾದ ಅನಿವಾರ್ಯತೆಗೆ ತಂದುಕೊಂಡು ಸುಮಾರು ಇಪ್ಪತ್ತೈದು ವರ್ಷಗಳೇ ಆಗಿವೆ.

ನಗರ ಪ್ರದೇಶದ ಕಲುಷಿತ ವಾತಾವರಣ, ಅವೈಜ್ಞಾನಿಕವಾಗಿ ವಿಸ್ತಾರಗೊಳ್ಳುತ್ತಿರುವ ವಸತಿ ಪ್ರದೇಶಗಳು, ಹೇಳಹೆಸರಿಲ್ಲದೇ ಕಾಣದಾಗುತ್ತಿರುವ ಹಸಿರು, ಅತಿ ಕಡಿಮೆಯಾಗಿರುವ ಕೃಷಿ ಚಟುವಟಿಕೆಗಳು, ಕೆರೆಗಳಿಗೆ ಸೇರುತ್ತಿರುವ ಕಾರ್ಖಾನೆಗಳ ತ್ಯಾಜ್ಯ, ವಿಷಯುಕ್ತ ಗಾಳಿ ಇವೆಲ್ಲವೂ ಗುಬ್ಬಿಗಳ ಸಂತತಿ ಅಳಿವಿನ ಹಂತಕ್ಕೆ ತಲುಪಲು ಕಾರಣವೆಂದು ತಿಳಿದರೂ ಏನೂ ಮಾಡಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಖ್ಯಾತ ಪರಿಸರತಜ್ಞ ಕೃಪಾಕರ ಹೇಳುವಂತೆ...  ವೇಗವಾಗಿ ಆಧುನಿಕತೆಯತ್ತ ಸಾಗುತ್ತಿರುವ ನಮ್ಮಿಂದ  ಗುಬ್ಬಿಗಳು ತಮ್ಮ‌ ನೆಲೆಯನ್ನು  ಕಳೆದುಕೊಳ್ಳುತ್ತಿವೆ.

ಆದರೂ ಅಳಿದುಳಿದ ಗುಬ್ಬಿಯ ಸಂತತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಸ್ವಲ್ಪ ಕಾಳಜಿವಹಿಸಿದರೂ ನಿರುಪದ್ರವಿ ಪುಟ್ಟ ಹಕ್ಕಿಗಳು ಉಳಿಯಬಲ್ಲವು. 
ನಮ್ಮ ಮನೆಯ ಸುತ್ತಲೂ ಆದಷ್ಟು ಹೆಚ್ಚು ಹಸಿರನ್ನು ಬೆಳೆಸಬೇಕು. ಗಿಡಗಳಿಗೆ ರಾಸಾಯನಿಕ ಗೊಬ್ಬರದ ಪರ್ಯಾಯವಾಗಿ ನೈಸರ್ಗಿಕವಾದ ಸಾವಯವ  ಗೊಬ್ಬರವನ್ನೇ ಬಳಸಬೇಕು. ಮನೆಯ ಹೊರ ಆವರಣದಲ್ಲಿ ಅಲ್ಲಲ್ಲಿ ಗೂಡುಗಳನ್ನಿಟ್ಟು ಮಣ್ಣಿನ ಪಾತ್ರೆಗಳಲ್ಲಿ ನೀರು ಇಡಬೇಕು. ಜೋಳ, ರಾಗಿ ಮುಂತಾದ ಧಾನ್ಯವನ್ನು ಮನೆಯ ಆವರಣದಲ್ಲಿ, ಗಿಡಗಳ ಬುಡದಲ್ಲಿ ಹಾಕಬೇಕು.

ಇತ್ತೀಚಿನ ದಿನಗಳಲ್ಲಿ ಕೃಷಿಕರು ಧಾನ್ಯಗಳನ್ನು ಬೆಳೆಯುವ ಆಸಕ್ತಿ ತೋರದೇ ವಾಣಿಜ್ಯ ಬೆಳೆಗಳತ್ತ ಹೆಚ್ಚು ವಾಲುತ್ತಿರುವುದು ಕಂಡುಬರುತ್ತಿದೆ. ಇದರಿಂದ ಆಹಾರದ ಅಸಮತೋಲನ ಕಾಡುವ ಸಾಧ್ಯತೆ ಇಲ್ಲದಿಲ್ಲ. ರಾಸಾಯನಿಕ ಕೀಟನಾಶಕಗಳ ಅತಿಯಾದ ಬಳಕೆಯಿಂದ ರೈತರ ಮಿತ್ರರಾದ ಕೀಟಭಕ್ಷಕ ಪಕ್ಷಿಗಳು, ಓತಿಕ್ಯಾತ, ಹಾವುರಾಣಿ ಮುಂತಾದ ಕೀಟಭಕ್ಷಕ ಜೀವಿಗಳಿಗೆ ಆಹಾರದ ಕೊರತೆ ಕಾಡುತ್ತಿರುವುದು ಸುಳ್ಳಲ್ಲ.

ಗುಬ್ಬಿ ಮಾತ್ರವಲ್ಲದೇ ನೈಸರ್ಗಿಕ ಆಲಾರಾಂ ಆಗಿದ್ದ ಕಾಗೆಯೂ ಇತ್ತೀಚಿನ ವರ್ಷಗಳಲ್ಲಿ ಬಹಳ ಅಪರೂಪವಾಗಿದೆ. 
ಮನೆಯ ಮಾಡಿನಮೇಲೆ ಹಿರಿಯರಿಗೆ ಇಡುವ ಎಡೆಗಾಗಿ "ಕಾ ಕಾ"  ಎನ್ನುತ್ತಾ ತನ್ನ ಇಡೀ ಬಳಗವನ್ನೇ ಕರೆಯುತ್ತಿದ್ದ ಕಾಗೆಯನ್ನು ಕಾಣದೇ 'ಎಡೆಯನ್ನು ತಿನ್ನುವ ಪಾರಿವಾಳವೂ ಪಕ್ಷಿಯೇ ತಾನೇ?' ಎಂದು ನಾವು ಸಮಾಧಾನಪಟ್ಟುಕೊಳ್ಳಬೇಕಾಗಿದೆ.

ಕೃಷಿ ಪ್ರಧಾನವಾದ ಹಳ್ಳಿಗಳಲ್ಲಿ ವಿರಳವಾಗಿ ಗುಬ್ಬಿಗಳನ್ನು ಕಾಣಬಹುದಾದರೂ, ಯಂತ್ರಗಳಮೇಲೆ ಅವಲಂಬಿತವಾಗುತ್ತಿರುವ ಆಧುನಿಕ ಕೃಷಿ ಪದ್ಧತಿಯ ಪರಿಣಾಮ ಅವುಗಳ ಮೇಲೆ ಆಗಿದೆ. ಕೃಷಿಯಲ್ಲಿ ಬಳಸುವ ರಾಸಾಯನಿಕ ಕೀಟನಾಶಕಗಳು ಗುಬ್ಬಿಗಳಿಗೆ ಕಂಟಕಪ್ರಾಯವಾಗಿವೆ. ಗದ್ದೆಯ ನಾಟಿಯಿಂದ ಕಟಾವಿನವರೆಗೂ, ಕಟಾವಿನಿಂದ ಗಿರಣಿಯವರೆಗೂ ಎಲ್ಲವನ್ನು ಯಂತ್ರಗಳೇ ನಿರ್ವಹಿಸುತ್ತವೆ. ಹಿಂದಿನ ದಿನಗಳಂತೆ ಮನೆಯಲ್ಲಿ ಅಕ್ಕಿಯನ್ನು ಕೇರುವ, ಆರಿಸುವ ಚಿತ್ರಣ ಈಗಿಲ್ಲ. ಪ್ಲಾಸ್ಟಿಕ್ ಹೊದಿಕೆಯನ್ನು ಹೊದ್ದು, ಒಂದು ನುಚ್ಚಿನ ಕಣವೂ ಇರದಂತೆ ಅಡುಗೆಮನೆಗೆ ಬರುವ ಅಕ್ಕಿಯಲ್ಲಿ ಹಕ್ಕಿಗಳಿಗೆ ಬೇಕಾಗುವ ಪದಾರ್ಥವಿಲ್ಲ. ಅಲ್ಲದೇ ಹಳ್ಳಿಗಳಲ್ಲೂ ಸಾಮಾನ್ಯವಾಗಿರುವ  ತಾರಸಿಯ ಮನೆಗಳಲ್ಲಿ ಗುಬ್ಬಿಯ ಸಂಸಾರದ ವಾಸ್ತವ್ಯಕ್ಕೆ ಸೂಕ್ತವಾದ ಸ್ಥಳವೂ ಇಲ್ಲ.

ನಿಸರ್ಗದ ವ್ಯವಸ್ಥೆಯು ಜೈವಿಕ ಸರಪಳಿಯನ್ನು ಅವಲಂಬಿಸಿದೆ. ಈ ಸರಪಳಿಯಲ್ಲಿ ಕೆಲವೇ ಕೊಂಡಿಗಳು ಕಳಚಿದರೂ ಅದರ ದುಷ್ಪರಿಣಾಮ ಇಡೀ ವ್ಯವಸ್ಥೆಯ ಮೇಲೆ ಆಗುತ್ತದೆ. ನಿಸರ್ಗದ ಕ್ರಿಯೆಗಳು ಏರುಪೇರಾಗುತ್ತವೆ.

'ನೇಚರ್ ಫಾರೆವರ್ ಸೊಸೈಟಿ' ಮತ್ತು ಇಕೋಷಿಸ್ ಆಕ್ಷನ್ ಫೌಂಟೇಶನ್ ಸಹಯೋಗದೊಂದಿಗೆ ಮಾರ್ಚ್ ೨೦ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತಿದೆ. ಕಾಣೆಯಾಗುತ್ತಿರುವ ಗುಬ್ಬಿಗಳ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ನಾಸಿಕ್ ನಿವಾಸಿ ಮಹಮ್ಮದ ದಿಲಾವರ್ ಅವರು ನೇಚರ್ ಫಾರೆವರ್ ಸೊಸೈಟಿಯನ್ನು ಸ್ಥಾಪಿಸಿದರು. ೨೦೧೦ರಲ್ಲಿ ಮೊದಲ ವಿಶ್ವ ಗುಬ್ಬಿಗಳ ದಿನವನ್ನು ಆಚರಿಸಲಾಯಿತು.

ಆಧುನಿಕ ಮಾನವನ ವೇಗಕ್ಕೆ ಸಮನಾಗಿ ಓಡಲಾರದೇ  ಹಿಂದೆಯೇ ಉಳಿದುಬಿಟ್ಟ ಇಂತಹ ಜೀವಿಗಳೆಷ್ಟೋ. ದೂರ..ಬಹುದೂರ ವೇಗವಾಗಿ ಸಾಗುವ ಭರದಲ್ಲಿ ತಮ್ಮನ್ನು ಮರೆತೇಬಿಟ್ಟಿರುವ ಮಾನವನನ್ನು ಕಂಡು ಅವು ಬಿಟ್ಟ ನಿಟ್ಟುಸಿರೇ ಅವುಗಳ ಕೊನೆಯುಸಿರೂ ಆಗಿರಬಹುದು.  ಎಚ್ಚೆತ್ತುಕೊಳ್ಳದಿದ್ದರೆ ವಿನಾಶ ಖಚಿತ ಎನ್ನುವುದನ್ನು ಮನಗಂಡು, ಭೂಮಿಯಲ್ಲಿ ಮನುಷ್ಯನಿಗಿಂತ ಹಿಂದೆಯೇ ಸೃಷ್ಟಿಯಾದ ಗುಬ್ಬಿಗಳನ್ನು ಮತ್ತು‌ ವಿನಾಶದ ಅಂಚಿನಲ್ಲಿರುವ ಇಂತಹ ಎಷ್ಟೋ ಇತರ ಜೀವಿಗಳನ್ನು ನಾವು ಉಳಿಸಿಕೊಳ್ಳುವುದು ಅತ್ಯಗತ್ಯ.

ಶೋಭಾ ಮೂರ್ತಿ.

 

(ನಾನೇ ಬಿಡಿಸಿದ ಗುಬ್ಬಿಯ ಚಿತ್ರ)

 

 

 

 


 

 

 

 

Category:World



ProfileImg

Written by shobha murthy