ನಪಾಸಾದ ವ್ಯವಸ್ಥೆ.

ProfileImg
26 May '24
2 min read


image

ನಪಾಸಾದ ವ್ಯವಸ್ಥೆ.

ಮದವೇರಿದ ಹಣವಿರುವ ಜನರು ಹಾಗೂ ಅವರ ಅಪ್ರಾಪ್ತ ಮಕ್ಕಳು ನಮ್ಮ ದೇಶದಲ್ಲಿ ನಡೆದುಕೊಳ್ಳುವ ರೀತಿ ಅಸಹ್ಯ ಹುಟ್ಟಿಸುವಂತೆ ಇದೆ. ನಾವು ಏನೂ ಮಾಡಿದರೂ ತಪ್ಪಿಸಿಕೊಳ್ಳಬಹುದು ಎಂಬ ನಂಬಿಕೆ ಹಣ ಉಳ್ಳವರಲ್ಲಿ ಅಥವಾ ಅಧಿಕಾರ ಇರುವವರಲ್ಲಿ ಬಲವಾಗಿ ಬೇರೂರಿದೆ. ಈ ಭಾವನೆ ಪ್ರಜಾಪ್ರಭುತ್ವ ವ್ಯವಸ್ಥೆಯ ದೌರ್ಬಲ್ಯದಿಂದ ಉಂಟಾಗಿದೆ.

ಅಧಿಕಾರಿಗಳು ಆಮಿಷಕ್ಕೆ ಒಳಗಾಗಿ ಮತ್ತು ಅಸಡ್ಡೆಯ ಮನೋಭಾವದ ಪರಿಣಾಮವಾಗಿ ಸರಿಯಾಗಿ ಸರಿಯಾದ ಸಮಯದಲ್ಲಿ ತೆಗದುಕೊಳ್ಳದ ನಿರ್ಧಾರಗಳಿಂದ ಬಹಳಷ್ಟು ಅಪರಾಧ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವುದೇ ಇಲ್ಲ.

ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ನಾಲ್ಕಾರು ದಿನಗಳ ಹಿಂದೆ ನಡೆದ ಅಪ್ರಾಪ್ತ ಬಾಲಕನಿಂದ ನಡೆದ ಅಪಘಾತ ಪ್ರಕರಣ. 

ಈ ಪ್ರಕರಣ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ  ಪ್ರಮುಖ ಸುದ್ಧಿಯಾಗಿ ಬಿತ್ತರಗೊಳ್ಳುತ್ತಿದೆ. ಇಂತಹ ಪ್ರಕರಣಗಳು ನಮ್ಮ ದೇಶದಲ್ಲಿ ಸಾಮನ್ಯ ಎಂಬಂತೆ ಆಗಿಹೋಗಿದೆ.

ಮೇಲ್ನೋಟಕ್ಕೆ ಕಾಣುವ ಹಾಗೆ, ಈ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗ ಎರಡೂ ದೊಡ್ಡ ರೀತಿಯಲ್ಲಿ ಎಡವಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಅಪಘಾತ ಆಕಸ್ಮಿಕವಾದರೂ, ಮಾಡಿದವನಿಗೆ ತಾನು ಮಾಡಿರುವುದು ತಪ್ಪು ಎಂಬ ಪಶ್ಚಾತಾಪ ಇರಬೇಕು. 

ಸ್ವಯಂ ಆಗಿ ಕಾನೂನಿಗೆ ಶರಣಾಗಿ ನೊಂದವರಲ್ಲಿ ಕ್ಷಮೆ ಕೇಳಿ ಅವರಿಗೆ ಪರಿಹಾರ ಒದಗಿಸುವುದು ಅಪಘಾತ ಮಾಡಿದವನ ಆದ್ಯ ಕರ್ತವ್ಯ ಆಗಬೇಕು. 

ಅದು ಬಿಟ್ಟು, ಅವನು ಮತ್ತು ಅವರ ಮನೆಯವರು ತಪ್ಪು ಮಾಡಿರುವವನನ್ನು ಉಳಿಸಲು ಅಕ್ರಮ ಮಾರ್ಗ ಬಳಸುವುದು ಅಕ್ಷಮ್ಯ ಅಪರಾಧ, ಇಂತಹವರಿಗೆ ತಕ್ಷಣವೇ ಶಿಕ್ಷೆ ಆಗುವಂತೆ ನಮ್ಮ ಅಧಿಕಾರಿ ವರ್ಗ ನೋಡಿಕೊಳ್ಳಬೇಕು.

ನಮ್ಮ ನ್ಯಾಯಾಂಗ ವ್ಯವಸ್ಥೆ ಬಲಹೀನರ ತಪ್ಪುಗಳನ್ನು ಕ್ಷಮಿಸಿ ಬಿಟ್ಟರೂ ಪರವಾಗಿಲ್ಲ, ಬಲವಂತರ ಪರ ಖಂಡಿತ ನಿಲ್ಲಬಾರದು. 

ಏಕೆಂದರೆ ಬಲವಂತರು ಕಾನೂನು ಹಿಡಿತದಿಂದ ತಪ್ಪಿಸಿಕೊಂಡರೆ ಸಾಮಾನ್ಯ ಜನರಿಗೆ ತಪ್ಪು ಸಂದೇಶ ಕೊಟ್ಟಂತೆ ಆಗುವುದಲ್ಲದೆ, ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲವಾಗುತ್ತದೆ. ಇದರಿಂದ ಸಣ್ಣದಾಗಿ ಮೊಳಕೆಯೊಡೆದ ಅಸಮಾಧಾನ ಅರಾಜಕತೆಗೆ ನಾಂದಿ ಹಾಡುತ್ತದೆ. ಜನರೇ ಕಾನೂನು ಮೀರಿ ಅಪಘಾತ ಮಾಡಿದವರನ್ನು ಗುಂಪು ಸೇರಿ ಹೊಡೆಯುವುದು ಅಥವಾ ಮಿತಿ ಮೀರಿ ಕೊಲೆ ಮಾಡುವುದು ನಡೆಯುತ್ತವೆ. 

ಇಂಥಹ ಸಂದರ್ಭಗಳಿಂದ ಅಮಾಯಕರು ಬಲಿಯಾಗುವ ಸಾಧ್ಯತೆ ಹೆಚ್ಚು.

ಆದುದರಿಂದ, ದೇಶದ ವ್ಯವಸ್ಥೆ ಸಾಮಾನ್ಯ ಹಾಗೂ ಅತಿ ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಇರಬೇಕು. ಕೇವಲ ಅಧಿಕಾರ, ಹಣ ಬಲವಿರುವ ಅಹಂಕಾರದ ಕೆಲವೇ ಜನರ ಪರವಾಗಿ ನಿಲ್ಲಬಾರದು.

 

 

 

 

 

 

Category:NewsProfileImg

Written by Kumaraswamy S