ಪ್ರವಾಸ ಹೋಗುವುದೆಂದರೆ ನನಗೆ ತುಂಬಾ ಇಷ್ಟ.ಅದು ಮನಸ್ಸಿಗೆ ಉಲ್ಲಾಸ ಕೊಡುತ್ತದೆ.
ಭಾರತದ ಒಳಗೇ ಸಣ್ಣ ಪುಟ್ಟ ಪ್ರವಾಸ ಮಾಡಿದ್ದರೂ ನನ್ನ ಮರೆಯಲಾರದ ಪ್ರವಾಸ ಎಂದರೆ ನನ್ನ ಅಂಡಮಾನ್ ಮತ್ತು ಅಮೇರಿಕಾದ ಪ್ರವಾಸಗಳು.
"ದೇಶ ಸುತ್ತು ಕೋಶ ಓದು" ಎಂದು ನಾಣ್ನುಡಿ ಇದೆ.ದೇಶ, ವಿದೇಶಗಳನ್ನು ಸುತ್ತಿದಾಗ ನಮ್ಮ ಅನುಭವ ಹೆಚ್ಚಾಗುತ್ತದೆ ಅಷ್ಟೇ ಅಲ್ಲ ಜನರ ಸ್ವಭಾವಗಳನ್ನು ತಿಳಿಯಲು ಸಹಾಯ ವಾಗುತ್ತದೆ.
ನಾನು ನಾಲ್ಕು ಸಲ ಅಮೇರಿಕಾಕ್ಕೆ ಪ್ರಯಾಣ ಬೆಳೆಸಿದ್ದೇನೆ. ಮೂರು ಸಲ ಆರಾರು ತಿಂಗಳುಗಳಿದ್ದು ಅಲ್ಲಿಯ ಜೀವನಕ್ರಮದ ಬಗ್ಗೆ ತಿಳಿದುಕೊಂಡಿದ್ದೇನೆ.
ಅದರಲ್ಲಿ ನನ್ನ ಮೊದಲ ಅಮೇರಿಕಾ ಪ್ರಯಾಣದ ಬಗ್ಗೆ ಈ ಲೇಖನ.ನಾಲ್ಕು ಸಲ ಅಮೇರಿಕಕ್ಕೆ ಹೋಗಿದ್ದರೂ ಮೊದಲ ಸಲದ ವಿದೇಶ ಪ್ರಯಾಣದ ಮೆಲುಕು ಮುದಕೊಡುವಂತಾದ್ದು.
ಅದರಲ್ಲೂ ಬೇರೆ ದೇಶಕ್ಕೆ ಹೋಗುವುದು ಎಂದಾಗ ಚೆನ್ನಾಗಿ ತಯಾರಾಗಬೇಕು.
ಇಸವಿ ೨೦೧೫.ಅಮೇರಿಕದಲ್ಲಿದ್ದ ಮಗಳು ಆಮಂತ್ರಿಸಿದ್ದರೂ ನನಗೆ ಶಾಲೆಗೆ ರಜೆ ಹಾಕಿ ಹೋಗಲು ಇಷ್ಟವಿರಲಿಲ್ಲ..ಮತ್ತೆ ಮೇ ಜೂನ್ ತಿಂಗಳಲ್ಲಿ ನಮ್ಗೆ ರಜೆ ಇರುವುದು.ಮೇ ಏಳಕ್ಕೆ ಮಗಳ ಗ್ರಾಜುಯೇಷನ್ ದಿನ. ಅದಕ್ಕೆ ಹೋಗಲು ನಾನೂ ನನ್ನ ಪತಿಯೂ ನಿರ್ಧರಿಸಿದೆವು. ವೀಸಾಕ್ಕಾಗಿ ಚೆನೈಗೆ ಹೋದೆವು.ನನ್ನ ಪಾಸ್ಪೋರ್ಟ್ ಮಾಡಿಸಿಯಾಯಿತು..ನನ್ನ ಪತಿ ಜರ್ಮನಿ,ಅರ್ಜೈಂನಾಗಳಿಗೆ ಹೋಗಿದ್ದುದರಿಂದ ಪಾಸ್ಪೋರ್ಟ್ ಮೊದಲೇ ಇತ್ತು.ಎರಡು ತಿಂಗಳುಗಳಿಗಾದರೂ ಬರಬೇಕು.ಒಂದು ತಿಂಗಳಿನಲ್ಲಿ ಎಲ್ಲ ನೋಡಲಾಗುವುದಿಲ್ಲ ಅಂತ ಮಗಳು ಹೇಳಿದರೂ ನಾನು ಮುಖ್ಯೋಪಾಧ್ಯಾಯಿನಿಯೂ ಆಗಿದ್ದುದರಿಂದ ಹೆಚ್ಚು ದಿನ ರಜೆ ಹಾಕುವುದು ಇಷ್ಟವಿರಲಿಲ್ಲ.
ವೀಸಾ ಅಧಿಕಾರಿಣಿ ನಾವು ಹೋಗುವ ಉದ್ದೇಶ, ಎಷ್ಟು ಸಮಯಕ್ಕೆ ಮುಂತಾಗಿ ಪ್ರಶ್ನಿಸಿದಳು. ನಾನು ನಲುವತ್ತು ದಿನಕ್ಕೆ ಹೋಗುವುದು ಎಂದಾಗ ಯಾಕೆ ಅಷ್ಟೇ ದಿನ , ಜಾಸ್ತಿ ದಿನ ಇರಬಾರದಾ ಎಂದು ಕೇಳಿದಳು. ನಾನು ನನ್ನ ಕೆಲಸದ ಬಗ್ಗೆ ಹೇಳಿದೆ. ಹತ್ತು ವರ್ಷಗಳಿಗೆ ವೀಸಾ ಸಿಕ್ಕಿತು. ಮತ್ತೆ ನಾವು ಪ್ರಯಾಣದ ಸಿದ್ದತೆ ಮಾಡಿಕೊಳ್ಳತೊಡಗಿದೆವು. ನಾನು ನಲುವತ್ತು ದಿನಕ್ಕೆ ಸಾಕು ಎಂದಿದ್ದಕ್ಕೆ ಮಗಳು ಸಿಟ್ಟಾದಳು. ಮತ್ತೆ ಎರಡು ತಿಂಗಳು .ಮೇ ಆರರಿಂದ ಜುಲೈ ಹತ್ತಿರ ತಾನು ಇರುವುದೆಂದು ನಿರ್ಧಾರ ವಾಯ್ತು. ಮತ್ತೆ ವಿದೇಶಕ್ಕೆ ಹೋಗುವ ಕಾರಣ ಮೇಲಧಿಕಾರಿಗಳಿಂದ ಒಪ್ಪಿಗೆ ಪಡೆದೂ ಆಯಿತು.
ಮಗಳ ಅತ್ತೆ ಮನೆಯೂ ಬೆಂಗಳೂರಲ್ಲಿ ಇದ್ದುದರಿಂದ ಅವರ ಮನೆಯಿಂದಲೂ ಅಡಿಗೆ ಸಾಮಾನುಗಳ ಅಂದರೆ ಸಾರಿನ ಪುಡಿ ಮುಂತಾದವುಗಳ ತಯಾರಿಯೂ ಆಯಿತು.
ಇವುಗಳ ಮಧ್ಯೆ ಒಂದು ದುಃಖದ ಸಂಗತಿ ನಡೆಯಿತು. ನಮ್ಮ ದು ದೂರ ಪ್ರಯಾಣ ವಾದುದರಿಂದ ನಮ್ಮ ಮನೆಯವರು ಊರಿನಲ್ಲಿದ್ದ ತೊಂಭತ್ತೆರಡು ವರ್ಷದ ಅವರ ಅಮ್ಮನನ್ನು ನೋಡಿ ಬರುತ್ತೇನೆ ಎಂದರು. ಆ ದಿನ ಎಪ್ರಿಲ್ ೨೩. ಆ ದಿನ ರಾತ್ರಿ. ಹೋಗುವುದು ಎಂದಾಗ ..ನಾನೂ ಬರುತ್ತೇನೆ ಎಂದು ಹೇಳಿದೆ. ಇನ್ನೇನು ನಾನು ಶಾಲೆಗೆ ಹೊರಡಬೇಕು ಎನ್ನುವಾಗ ಊರಿಂದ ಮೈದುನನ ಹೆಂಡತಿ ನನ್ನ ವಾರಗಿತ್ತಿಯ ಫೋನ್ ಬಂತು. ಅತ್ತೆ ಗೆ ಸ್ವಲ್ಪ ಸೌಖ್ಯ ವಿಲ್ಲ.ಉಸಿರಾಡಲು ತೊಂದರೆಯಾಗುತ್ತದೆ ಎಂದು. ಅವರಿರುವುದು ವಿಟ್ಲದಲ್ಲಿ. ಮತ್ತೆ ನನ್ನ ಯಜಮಾನರು ಮಂಗಳೂರಿನ ಮೈದುನನಿಗೆ ಫೋನ್ ಮಾಡಿ ಆಕ್ಸಿಜನ್ ಕೊಡಬೇಕಾಗಬಹುದು . ಆಂಬುಲೆನ್ಸ್ ತೆಗೆದುಕೊಂಡು ಹೋಗು ಎಂದಾಗ..ಅವನು ನಾನು ಹೊರಟಿದ್ದೇನೆ.. ಅಮ್ಮ ಇನ್ನಿಲ್ಲ ಎಂದ.
ಸರಿ ಮತ್ತೆ ನಾವು ಮಗ , ಮೈದುನನ ಮಗಳು ಎಲ್ಲಾ ಊರಿಗೆ ಹೋದೆವು. ನನ್ನ ಅತ್ತೆ ಯ ಬಗ್ಗೆ ಹೇಳಬೇಕೆಂದರೆ ,ಅವರು ತುಂಬಾ ಮಾಡರ್ನ್. ತೊಂಭತ್ತೆರಡರಲ್ಲೂ ಎಪ್ಪತ್ತರಂತೆ ಕಾಣುತ್ತಿದ್ದರು . ಮೊಬೈಲ್ ಇಟ್ಟುಕೊಂಡಿದ್ದರು.ಸಾಯುವ ದಿನ ಬೆಳಿಗ್ಗೆ ಐದು ಗಂಟೆಗೆ ಎದ್ದು ಸೊಸೆ ಕೊಟ್ಟ ಟೇ ಕುಡಿದು ಕಪ್ ತೊಳೆದು ಇಟ್ಟಿದ್ದರಂತೆ. ಎಂಟೂವರೆಗೆ ಅವರಿಲ್ಲ.! ಮೈದುನನು ಡಾಕ್ಟರ್ ,ವಾರಗಿತ್ತಿಯೂ ಡಾಕ್ಟರೇ. ಆದರೆ ಅತ್ತೆಯವರ ಅವರ ಆಯುಸ್ಸು ತುಂಬಿತ್ತು.
ಅಂತ್ಯಕ್ರಿಯೆಯೆಲ್ಲಾ ಮುಗಿದ ಮೂರನೇ ದಿನ
ನಾನು ಬೆಂಗಳೂರಿಗೆ ಹಿಂದಿರುಗಿದೆ. .ಪ್ರಯಾಣದ ನಮ್ಮವರು ಹಿರೀ ಮಗ ಆದುದರಿಂದ ಊರಲ್ಲಿಯೇ ಉಳಿದರು. ನಾನು ಮತ್ತೆ ಹತ್ತನೆಯ ದಿನಕ್ಕೆ ಹೋದೆ .ಉತ್ತರಕ್ರಿಯಾದಿ ಕಾರ್ಯಗಳು ಹದಿಮೂರು ದಿನ ಇರುವುದು. ಆದರೆ ನಾವು ಮೇ ನಾಲ್ಕಕ್ಕೆ ಹೊರಟೆವು .ಕೊನೆ ದಿನದ ಕಾರ್ಯ ತಮ್ಮಂದಿರು ಮಾಡಿದರು. ನಮಗೆ ಪ್ರಯಾಣದ ಅಟ್ಟಣೆ .. ಅಂತೂ ಐದಕ್ಕೆ ಲುಫ್ತಾನ್ಸಾ ಏರಿದೆವು.
ಅತ್ತೆಯ ಮರಣದ ಬಗ್ಗೆ ಚಿಂತಿಸಲೂ ಸಮಯವಿಲ್ಲ. ಮತ್ತೆ ವಿಮಾನವೇರಿದಾಗ ,ವಿಮಾನ ಮೋಡಗಳೆಡೆಯಲ್ಲಿ ಸಾಗುವಾಗ ಅನಿಸಿದ್ದು.. ಈ ಬ್ರಹ್ಮಾಂಡದಲ್ಲಿ ನಾವು ಒಂದು ಬಿಂದುವೂ ಅಲ್ಲ.
ಆತ್ಮ ಅಂತ ಇದ್ದರೆ ಅತ್ತೆಯವರ ಆತ್ಮ ಈ ಆಕಾಶದಲ್ಲಿ ಇರಬಹುದೇ.. ಹೀಗೆ ಏನೇನೋ ಆಲೋಚನೆಗಳು.
ಮುಂದೆ ಫ್ರಾಂಕ್ಫರ್ಟ್ ನಲ್ಲಿ ವಿಮಾನ ಇಳಿದಾಗ ಅಲ್ಲಿ ಬೆಳಗಿನ ಆರೋ ,ಏಳೋ ಇರಬಹುದು. ನೆನಪಿಲ್ಲ.
ಎರಡು ಗಂಟೆಯ ಸಮಯವಿತ್ತು ಡೆಟ್ರಾಯಿಟ್ ಗೆ ಹೋಗುವ ಫ್ಲೈಟಿಗೆ.
ಮತ್ತೆ ಫ್ರಾಂಕ್ಫರ್ಟ್ ನಲ್ಲಿ ಚೆಕ್ ಇನ್ ಆಗಬೇಕಲ್ಲ.
ನನ್ನ ಪಾಸ್ಪೋರ್ಟ್ ಯಜಮಾನರ ಕೈಯಲ್ಲಿ ಇತ್ತು. ಅಲ್ಲಿ ಕುಳಿತಿದ್ದ ಅಧಿಕಾರಿಯ ಹತ್ತಿರ ಎರಡು ಪಾಸ್ ಪೋರ್ಟ್ ತೋರಿಸಿ ಅವರು ಮುಂದೆ ಹೋದರು. ನಾನು ಹಾಗೆ ಗೇಟು ದಾಟಲು ಹೋದರೆ ಆ ಅಧಿಕಾರಿಣಿ ನನ್ನನ್ನು ಕರೆದಳು. ಹಲೋ .. ಪಾಸ್ ಪೋರ್ಟ್ ಬೇಡ್ವಾ ಅಂತ ನನ್ನ ಪಾಸ್ಪೋರ್ಟ್ ಕೊಟ್ಟಳು. ನಾನು ಯಜಮಾನರಿಗೆ ಅವಳು ಹಿಂದಿರುಗಿಸಿದ ಬಹುದೆಂದು ಭಾವಿಸಿದ್ದೆ. ಪಾಸ್ ಪೋರ್ಟ್ ಬಿಟ್ಟು ಹೋಗುವ ಟೆರರಿಸ್ಟ್ ಅಂತ ತಿಳ್ಕೊಂಡಳೋ ಏನೋ..ಹುಬ್ಬುಗಂಟಿಕ್ಕಿದ್ದಳು.
ಮತ್ತೆ ಡೆಟ್ರಾಯಿಟ್ ಗೆ ಪಯಣ. ವಿಮಾನದಲ್ಲಿ ವೆಜ್ ಊಟ ಪರವಾಗಿರಲಿಲ್ಲ.
ಸಾಯಂಕಾಲ ನಾಲ್ಕೂವರೆಗೆ ಡೆಟ್ರಾಯಿಟ್ ತಲುಪಿದರೆ ಅಲ್ಲಿ ಇಮ್ಮಿಗ್ರೇಷನ್ ಫಾರ್ಮ್ , ಬೆರಳಚ್ಚು ಕೊಡಬೇಕು. ನಮ್ಮನೆಯವರು ಮೊದಲು ಹೋದರು . ತಮ್ಮ ಕೆಲಸ ಆದ ಕೂಡ್ಲೇ ಅವರು ಹೊರಟೇ ಬಿಡುವುದಾ.. ಸೂಟ್ಕೇಸ್ ತಳ್ಳಿಕೊಂಡು ಹೊರಟರು. ನಾನು ಬರುತ್ತಿದ್ದೀನಾ ಅಂತಲೂ ನೋಡ್ಲಿಲ್ಲ.. ಅದು ಅವರ ಅಭ್ಯಾಸ..😀 ಆದರೆ ವಿದೇಶದಲ್ಲೂ ಹಾಗೆ ಮಾಡಿದರೆ ಹೇಗೆ. ಅಲ್ಲಿದ್ದ ಅಧಿಕಾರಿಣಿ ಇದನ್ನೆಲ್ಲಾ ನೋಡುತ್ತಿದ್ದವಳು. ನನ್ನಲ್ಲಿ ಹೇಳೇ ಬಿಟ್ಟಳು.
Look, your husband is leaving you and going.. ಆಹಾ..ವಿದೇಶದಲ್ಲೂ ಇವರ ಸ್ವಭಾವ ತೋರಿಸಿಯೇ ಬಿಟ್ಟರು.ಬಹುಷ ಅಲ್ಲಿ ಹೆಂಡತಿಯನ್ನು ಬಿಟ್ಟು ಹೋದ ಕೇಸು ಇದ್ದಿರಲೂ ಬಹುದು.
ಅಲ್ಲಿ ಗಂಡ ಹೆಂಡತಿಗೆ ವಿಶೇಷ ಗೌರವ ಕೊಡುತ್ತಾರೆ ..ಹೇಗೆಂದರೆ ಬಸ್ ಯಾ ಫ್ಲೈಟ್ ಗಳಲ್ಲಿಯೂ ಪತಿ ಪತ್ನಿ ಯರಿಗೆ ಒಟ್ಟಿಗೆ ಕುಳಿತುಕೊಳ್ಳಲು ಅನುವು ಮಾಡಿ ಕೊಡುತ್ತಾರೆ. ಅಂತೂ ನಾವು ಲೌಂಜ್ ಗೆ ಬಂದಾಗ ಮಗಳು ಅಳಿಯ ಕಾಯುತ್ತಿದ್ದರು. ಅಲ್ಲಿಂದ ಅವರ ಮನೆ ತಿರುವು ಸ್ಟರ್ಲಿಂಗ್ ಹೈಟಿಗೆ ಸುಮಾರು ಒಂದು ಒಂದೂವರೆ ಗಂಟೆಯ ಪಯಣ.
ಮರುದಿನ ಗ್ರಾಜುಯೇಷನ್ ಗೆ ತಯ್ಯಾರಿ. ಮೇ ಏಳಕ್ಕೆ ಮಗಳು ಗ್ರಾಜುಯೇಷನ್ಗೆ ಹೋದದ್ದು,ಮುಂದಿನ ಎರಡು ತಿಂಗಳುಗಳಲ್ಲಿ , ವಾಶಿಂಗ್ಟನ್, ನ್ಯೂಯಾರ್ಕ್, ನ್ಯೂಜೆರ್ಸಿ ಶಿಕಾಗೋದಲ್ಲಿ ,ಬಫೆಲೋ, ಸಿನ್ಸಿನ್ನಾತಿ ಮುಂತಾದ ನಗರಗಳಲ್ಲಿ ನೋಡಿದಂತ ಮ್ಯೂಸಿಯಂಗಳು, ನಯಾಗರಾ ಜಲಪಾತ, ಸ್ವಾಮಿ ನಾರಾಯಣ ದೇವಾಲಯ,ಬಾಲಾಜಿ ದೇವಸ್ಥಾನ,ಮಾಮ್ಮತ್ ಕೇವ್ಸ್ ,ಪಂಚ ಮಹಾ ಸರೋವರಗಳು.ಫೋರ್ಡ ಕಾರಿನ ಮ್ಯೂಸಿಯಂ..ರೈಟ್ ಬ್ರದರ್ಸ್ ನ ಮ್ಯೂಸಿಯಂ..ಟ್ವಕೋಮೆನನ್ ನ ಬಣ್ಣದ ಜಲಪಾತ ,ಗ್ರೋಟ್ಟೋ ಫಾಲ್ಸ್ ,ಜೊತೆಗೆ ಸ್ಟ್ರಾಬೆರಿ ಪಿಕ್ ಮತ್ತು ,ಸೇಬು 'ಪಿಕ್' ಬರೆಯುತ್ತಾ ಹೋದರೆ ಪುಸ್ತಕವೇ ಆಗಬಹುದು.ಕೆಲವು ಸ್ವಾರಸ್ಯ ಘಟನೆಗಳೂ ನಡೆದುವು. ಮತ್ತೆ ಅಲ್ಲಿ ಒಂದು ಶಾಲೆಗೆ ಭೇಟಿಕೊಟ್ಟದ್ದೂ ಅವಿಸ್ಮರಣೀಯ.ಮುಂದಿನ ಪ್ರವಾಸದಲ್ಲಿ ವಿಮಾನ ತಪ್ಪಿ ಪಾಡು ಪಟ್ಟದ್ದೂ ಸ್ವಾರಸ್ಯಕರ.ಪ್ರವಾಸಕಥನದ ಪುಸ್ತಕವನ್ನೇ ಬರೆಯಬಹುದು.!
✍️ ಪರಮೇಶ್ವರಿ ಭಟ್