ನನ್ನ ಕಾಡಿದ ಇಂಗ್ಲಿಷ್ ಚಲನಚಿತ್ರಗಳು ಚಿತ್ರ ಪ್ರೇಮಿ

ಚಿತ್ರ ಪ್ರೇಮಿ

ProfileImg
31 May '24
4 min read


image

 ನನ್ನ ಕಾಡಿದ ಇಂಗ್ಲಿಷ್ ಚಲನಚಿತ್ರಗಳು 

 


  ಇಂಗ್ಲಿಷ್ ನನ್ನ ಅಚ್ಚುಮೆಚ್ಚಿನ ಭಾಷೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಿನಿಮಾ ವಿಷಯಕ್ಕೆ ಬಂದರೆ ಹಾಲಿವುಡ್ ಸಿನಿಮಾಗಳನ್ನು ಅಷ್ಟೊಂದು ನೋಡಿಲ್ಲ. ಇದಕ್ಕೆ ಕಾರಣ ಆಂಗ್ಲರ ಉಚ್ಚಾರಣೆ ಅಷ್ಟಾಗಿ ಅಭ್ಯಾಸವಿಲ್ಲದಿರಬಹುದು . ಸಬ್ ಟೈಟಲ್ಸ್ ಓದಿ, ಸಿನಿಮಾ ನೋಡುವುದು ನನಗೆ ಅದೆಕೋ ಕಿರಿ ಕಿರಿ ಉಂಟು ಮಾಡುತ್ತದೆ. ಆದರೂ ನನಗೆ ತಿಳಿಯದ ಭಾಷೆಗಳ ಸುಮಾರು ಸಿನಿಮಾ ನೋಡಿದ್ದೇನೆ. ಅದಕ್ಕೆ ಕಾರಣ ನನಗೆ ಸಿನಿಮಾದಲ್ಲಿ ಆಸಕ್ತಿ . ಈ ಆಸಕ್ತಿಯೇ ಅನ್ಯ ಭಾಷೆಯ ಚಿತ್ರಗಳನ್ನು ನೋಡಲು ಪ್ರೆರೇಪಿಸುತ್ತದೆ.

'ಇಂಡಿಯನ್ ಇಂಗ್ಲಿಷ್ ' ಸಿನಿಮಾಗಳು ಹಾಗು ಕಾದಂಬರಿಗಳು ತಿಳಿದುಕೊಳ್ಳಲು ಸುಲಭ ಹಾಗು ವಿಶಿಷ್ಟವಾಗಿ ಇರುತ್ತವೆ, ಭಾರತೀಯತೆಯನ್ನು ಬಿಂಬಿಸುತ್ತವೆ  ಎನ್ನುವುದು  ನನ್ನ ಅಭಿಪ್ರಾಯ. ಈ ಚಿತ್ರಗಳಲ್ಲಿ, ಭಾರತೀಯ ಕಲಾವಿದರು, ನಮ್ಮ ನಿಮ್ಮ ಹಾಗೆ ಸರಳವಾದ ಇಂಗ್ಲಿಷನಲ್ಲಿ ಸಂಭಾಷಣೆ ಮಾಡಿರುತ್ತಾರೆ. ಕಥೆಯ ಆಳಕ್ಕೆ ಇಳಿಯಬೇಕೆಂದರೆ , ಸಂಭಾಷಣೆ ತಿಳಿದುಕೊಳ್ಳಬೇಕು. ಇಲ್ಲವಾದರೆ ಆ 'ಕನೆಕ್ಟಿವಿಟಿ' ಇರುವುದಿಲ್ಲ.

ಚಲನಚಿತ್ರಗಳಲ್ಲಿ 'ಕಲಾತ್ಮಕ ಚಿತ್ರಗಳು' ಹಾಗೂ 'ಕಮರ್ಷಿಯಲ್' ಚಿತ್ರಗಳು ಎರಡೂ ವೀಕ್ಷಕರ ಮನಸ್ಸನ್ನು ಸೂರೆಗೊಳಿಸುವಲ್ಲಿ ಯಶಸ್ವಿಯಾಗಿವೆ.
ನಮ್ಮ ಮನೆಗೆ ಹೊಸದಾಗಿ ಟಿವಿ ಬಂದಾಗ, ದೂರದರ್ಶನದಲ್ಲಿ ಪ್ರಸಾರವಾಗುವ ಎಲ್ಲ ಚಿತ್ರಗಳನ್ನು ನೋಡುವುದೇ ಅನ್ನುವ ನನ್ನ ಹವ್ಯಾಸವಾಗಿತ್ತು  . ಅದು ತಿಳಿಯಲಿ ಬಿಡಲಿ. ಪ್ರತಿ ರವಿವಾರ, ಮಧ್ಯಾನ ಪ್ರಶಸ್ತಿ ವಿಜೇತ ಭಾರತೀಯ ವಿವಿಧ ಭಾಷೆಯ ಚಲನ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದರು. ಹೆಚ್ಚಾಗಿ ಪ್ರಶಸ್ತಿ ವಿಜೇತ ಚಲನಚಿತ್ರಗಳಲ್ಲಿ ಕಲಾತ್ಮಕತೆಗೆ ಹೆಚ್ಚು ಪ್ರಾಮುಖ್ಯತೆ  ಕೊಟ್ಟಿರುತ್ತಿದ್ದರು. ಅಲ್ಲಿ ಗ್ಲಾಮರಗೆ ಅಥವಾ ಮಸಾಲೆಗೆ ಅವಕಾಶವಿರಲಿಲ್ಲ . ಆದರೆ ಇಂತಹ ಚಿತ್ರಗಳು ಅದ್ಭುತ ಕಥೆಗಳನ್ನು ಹೊಂದಿರುತ್ತವೆ ಎನ್ನುವುದು ಸಿನಿಪ್ರಿಯಳಾಗಿ ನನ್ನ ಅಭಿಪ್ರ್ರಾಯ . ಇಂಥ ಚಿತ್ರಗಳಿಲ್ಲಿದ್ದ  ಸಶಕ್ತ ಕಥಾ ವಸ್ತು ಚಿತ್ರ ರಸಿಕರನ್ನು ತಮ್ಮತ್ತ ಸೆಳೆಯದೇ ಬಿಡುತ್ತಿರಲಿಲ್ಲ. ಈಗಲು ಕಲಾತ್ಮಕ ಚಿತ್ರಗಳಿಗೆ ಅದರದೇ ಆದ ಘನತೆ, ಗೌರವವಿದೆ, ಅದರದೇ ಆದ ನೋಡುಗ ವೃಂದವಿದೆ .  ಇಂತಹ ಕಲಾತ್ಮಕ ಚಿತ್ರಗಳಲ್ಲಿ, ನನ್ನ ನೆಚ್ಚಿನ ಸಿನಿಮಾ Mr and Mrs Iyer (ಮಿಸ್ಟರ್ ಅಂಡ್ ಮಿಸೆಸ್ ಐಯೆರ್ ). ಇದು 2002 ರಲ್ಲಿ ಬಿಡುಗಡೆಯಾಗಿ, ಹಲವು ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.


 ಇದನ್ನು ಪ್ರಸಿದ್ಧ ನಿರ್ದೇಶಕಿ ಅಪರ್ಣ ಸೆನ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಅವರ ಸುಪುತ್ರಿ ಕೊಂಕಣ ಸೇನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇವರ ಜೊತೆ ನಾಯಕನಾಗಿ ರಾಹುಲ್ ಭೋಸ್ ನಟಿಸಿದ್ದಾರೆ. ಚಿತ್ರಕಥೆ ಕೂಡ ಬಂಗಾಳಿ ನಿರ್ದೇಶಕಿ ಅಪರ್ಣ ಸೆನ್ ಅವರದೇ ಆಗಿದೆ.

 ಈ ಚಲನಚಿತ್ರದ ಕಥೆ ತುಂಬಾ ಸರಳ, ಆದರೆ ಅದು ಸಮಾಜಕ್ಕೆ ಕೊಡುವ ಸಂದೇಶ ಆತ್ಯಮೂಲ್ಯ. ನಾಯಕ ನಟರು ಅತ್ಯಂತ ಪ್ರಬುದ್ಧ ನಟನೆಯಿಂದ, ನೋಡುಗರ ಮನಸ್ಸನ್ನು ಹಿಡಿದಿಡುತ್ತಾರೆ. ಇಲ್ಲಿ ಹಿಂದು- ಮುಸ್ಲಿಂ ದಂಗೆಯ ಆಕಸ್ಮಿಕ ಸನ್ನಿವೇಶದಲ್ಲಿ ಸಿಕ್ಕಿ ಹಾಕಿಕೊಂಡ ಇಬ್ಬರು ಅಪರಿಚಿತರ ಪರಿಚಯ ಹೇಗೆ ಸ್ನೇಹಕ್ಕೆ ತಿರುಗುತ್ತದೆ ಎಂದು ಮನೋಜ್ಞವಾಗಿ ತೋರಿಸಿದ್ದಾರೆ.

'ಮೀನಾಕ್ಷಿ ಐಯರ್' ಒಬ್ಬ ತಮಿಳು ಬ್ರಾಹ್ಮಣ ವಿವಾಹಿತ ಮಹಿಳೆ. ಪುಟ್ಟ ಮಗು 'ಸಂತಾನಮ್' ಜೊತೆ ಕಲ್ಕತ್ತಾ ಕ್ಕೆ  ಒಬ್ಬಂಟಿಯಾಗಿ ಪ್ರಯಾಣ ಮಾಡುತ್ತಿರುತ್ತಾಳೆ. ಅಲ್ಲಿ ಅವಳಿಗೆ 'ರಾಜಾ ಜಹಾಂಗೀರ್ ಚೌಧರಿ' ಎಂಬ ಮುಸ್ಲಿಂ ಫೋಟೋಗ್ರಾಫರ್ ಒಬ್ಬನ ಸಹಪ್ರಯಾಣಿಕನಾಗಿ ಪರಿಚಯವಾಗುತ್ತದೆ.

ಪ್ರಯಾಣದ ಮಧ್ಯದಲ್ಲಿ ಆಕಸ್ಮಿಕವಾಗಿ, ಹಿಂದು  ದಂಗೆಕೋರರು, ಇವರು ಪ್ರಯಾಣಿಸುವ  ಬಸ್ಸಗೆ ದಾಳಿ ಮಾಡುತ್ತಾರೆ ಆಚೆ .ಪೊಲೀಸರು ಕರಫಿಯು ವಿಧಿಸುತ್ತಾರೆ. ಆಗ ಮೀನಾಕ್ಷಿ ತನ್ನ ಮಗುವನ್ನು ರಾಜಾ ಚೌಧರಿಯ ತೊಡೆಯ ಮೇಲೆ ಕೂರಿಸಿ ಅವನು ಮುಸ್ಲಿಂ ಅಲ್ಲ , ನನ್ನ ಪತಿ Mr Iyer ಎಂದು ಹೇಳುತ್ತಾಳೆ. ಆಗ ಆ ದಂಗೆಕೋರರು ಅವನನ್ನು ಜೀವಸಹಿತ ಬಿಟ್ಟು ಬಿಡುತ್ತಾರೆ. ಬ್ರಾಹ್ಮಣ ಹೆಂಗಸಾಗಿ, ಮುಸ್ಲಿಂ ಜಾತಿಯ ಒಬ್ಬ ಕೊಟ್ಟ ನೀರನ್ನು ಕುಡಿಯುವ ಪ್ರಸಂಗ ಬಂದಿತಲ್ಲ ಎಂದು ಪೇಚಾಡಿದ ನಾಯಕಿ, ಅವನ ಜೀವ ಉಳಿಸಲು, ಅವನೇ ನನ್ನ ಪತಿ ಎಂದು ಇಡೀ ಬಸ್ಸ್ ನ ಪ್ರಯಾಣಿಕರ ಮುಂದೆ ಹೇಳುತ್ತಾಳೆ. ಆ ಕೆಲವು ಗಂಟೆಗಳ ಪ್ರಯಾಣದಲ್ಲಿ ಅವರಿಬ್ಬರೂ ಜಾತಿಯಂಬ ವಿಷವರ್ತುಲದಿಂದ ಹೊರಗೆ ಬಂದು, ಮಾನವೀಯತೆಯನ್ನು ಅಪ್ಪಿಕೊಳ್ಳುತ್ತಾರೆ.

ನಸುಗಪ್ಪು ಮೈ ಬಣ್ಣ ಹೊಂದಿರುವ ಕೊಂಕಣ ಸೇನ್, ಯಾವುದೇ ಮೇಕ್ ಅಪ್ ಇರದೆ, ತನ್ನ ಮೀನಿನ ಕಣ್ಣುಗಳಿಂದ, ಸುಮಧುರ ಧ್ವನಿಯಿಂದ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಾಳೆ. ಪಕ್ಕ ಐಯ್ಯರ್ ನಾರಿಯಂತೆ ಕಾಣುತ್ತಾಳೆ. ಅವಳ ದಕ್ಷಿಣ ಭಾರತೀಯ ಮಹಿಳೆಯಂತೆ ಬಾಡಿ  ಲ್ಯಾಂಗ್ವೇಜ್, ಅವಳ ಮಾತಿನ ಶೈಲಿ , ಅವಳ  ಹಿಂಜರಿಕೆ, ನಾಚಿಕೆ, ಭಯ ಎಲ್ಲವನ್ನು ತುಂಬಾ ಸುಂದರವಾಗಿ ಅಭಿನಯಿಸಿದ್ದಾಳೆ . ಅವ್ಳ ಅಭಿನಯ ಎಷ್ಟು ಆಕರ್ಷಕವಾಗಿ , ನೈಜವಾಗಿದೆಯಂದರೆ , ಎಷ್ಟು ಸಾರಿ ಈ ಚಿತ್ರವನ್ನು ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ಅದೇ ರೀತಿ, ರಾಹುಲ್ ಬೋಸ್ ಕೂಡಾ ಅತ್ಯಂತ ಪ್ರಾಮಾಣಿಕ, ಸರಳ,ಸಜ್ಜನ ವ್ಯಕ್ತಿಯ ಪಾತ್ರವನ್ನು ನೈಜವಾಗಿ ಅಭಿನಯಿಸಿದ್ದಾರೆ. ಇದರಲ್ಲಿ ಬರುವ ಪುಟ್ಟ ಮಗು ಕೂಡ ತನ್ನ ಮುದ್ದು ಮುಖದಿಂದ ನೋಡುಗರಲ್ಲಿ ತನ್ನ ಛಾಪು ಮೂಡಿಸುತ್ತದೆ.

ಸುಸಂಸ್ಕೃತ ಪರಿವಾರದಿಂದ ಬಂದ ಮಹಿಳೆಯ, ಯಾರೋ ಒಬ್ಬ ಅಪರಿಚಿತ ಸಹಪ್ರಯಾಣಿಕನಿಗೆ ತನ್ನ ಪತಿಯೆಂದು ಹೇಳಿಕೊಳ್ಳಲು ಅವಳಿಗೆ ಅದೆಷ್ಟು ಧೈರ್ಯ ಒಟ್ಟುಗೂಡಿಸಿರಬಹುದು ಎಂದು ಊಹಿಸಲು ಪ್ರಯತ್ನಿಸಿದಾಗ , ಆ ಸನ್ನಿವೇಶದ ಎಷ್ಟು ಗಂಭೀರವಾಗಿತ್ತು  ಎಂದು ಗೋಚರಿಸುತ್ತದೆ . ಮಾನವೀಯತೆ ಮೊದಲು, ಜಾತಿ ಆಮೇಲೆ ಎಂದು ಆ ದೃಶ್ಯವು ಸೂಕ್ತ ಸಂದೇಶವನ್ನು ನೀಡುತ್ತದೆ . ನಾಯಕಿಯ ಸಮಯ ಪ್ರಜ್ಞೆ, ನಾಯಕನ ಜೀವ ಉಳಿಸುತ್ತದೆ. ಜೀವಕ್ಕೆ ಕುತ್ತು ಬಂದಾಗ ಯುಕ್ತಿಯಿಂದ ಪಾರಾಗಬೇಕು, ಧೃತಿಗೆಟ್ಟರೆ ನಮ್ಮ ಸಾವು ನಾವೇ ತಂದುಕೊಂಡಂತೆ! ಎನ್ನುವ ಸಣ್ಣ ಸಣ್ಣ ಅರ್ಥಪೂರ್ಣಸಂದೇಶಗಳು  ಕೂಡ ನೋಡುಗರನ್ನು ತಲುಪುತ್ತವೆ .

ನಾಯಕನೂ ತನ್ನ ಸಮಯ ಪ್ರಜ್ಞೆಯಿಂದ, ತಾನು ಮೀನಾಕ್ಷಿಯ ಗಂಡನಂತೆ ಎಲ್ಲರ ಮುಂದೆ ಅಭಿನಯಿಸುತ್ತಾನೆ. ಈ ನಡುವೆ ಅವನ ಮಾತುಗಳಿಗೆ ಮೀನಾಕ್ಷಿ ಸೋಲುತ್ತಾಳೆ, ಅವನ ಒಳ್ಳೆಯತನಕ್ಕೆ ಆಕರ್ಷಿತಳಾಗುತ್ತಾಳೆ. ಯಾವುದೇ ಅಸಭ್ಯ ದೃಶ್ಯಗಳಿಗೆ ದಾರಿ ಮಾಡಿಕೊಡದೆ, ನವಿರಾಗಿ ಗಂಡು ಹೆಣ್ಣಿನ ಸೂಕ್ಷ್ಮ ಆಕರ್ಷಣೆಯನ್ನು ತೋರಿಸಿದ್ದಾರೆ. ಎಲ್ಲ ಮುಸ್ಲಿಮರು ಆತಂಕವಾದಿಗಳಲ್ಲ,  ಮುಸ್ಲಿಂ ಎಂದಾಕ್ಷಣ ಕೊಲೆಗೆಡುಕರ, ಬಾಲಾತ್ಕಾರಿಗಳಲ್ಲಾ. ಅವರಿಗೂ ಮಹಿಳೆಯರ, ಹಿರಿಯರ ಬಗ್ಗೆ ಗೌರವವಿರುತ್ತದೆ. ಅವರಲ್ಲಿಯೂ ಒಳ್ಳೆಯ ಚರಿತ್ರೆ , ಒಳ್ಳೆಯ ನಡತೆ ಉಳ್ಳವರು ಇರುತ್ತಾರೆ. ಒಂಟಿ ಮಹಿಳೆಯನ್ನು ನೋಡಿ, ಅವಳಿಗೆ ಮೋಸ ಮಾಡುವ ಇರಾದೆ ಎಲ್ಲರಲ್ಲೂ  ಇರುವುದಿಲ್ಲ ಎಂದು ಈ ಸಿನಿಮಾ ಸಾರಿ ಸಾರಿ ತನ್ನ ಎಲ್ಲ ದೃಶ್ಯಗಳಲ್ಲಿ ಹೇಳುತ್ತದೆ.ಇಷ್ಟಾದರೂ, ತನ್ನ ಪತ್ನಿಯನ್ನು ಸುರಕ್ಷಿತವಾಗಿ ತನ್ನ ಊರಿಗೆ ತಲುಪಿಸಿದ ವ್ಯಕ್ತಿ ಮುಸ್ಲಿಮ್ ಎಂದು ತಿಳಿದಮೇಲೆ, ಮೀನಾಕ್ಷಿಯ ಪತಿ ಮುಖ ಸಿಂಡರಿಸುತ್ತಾನೆ. ಸಿನಿಮಾ ಮುಗಿಯುವಷ್ಟರಲ್ಲಿ  ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ ಎಂದು ತಿಳಿಯುತ್ತದೆ , ಅನ್ಯ ಮತೀಯರಲ್ಲಿ ಒಳ್ಳೆಯತನವನ್ನು ನಿರೀಕ್ಷಿವುದ್ರಲ್ಲಿ ತಪ್ಪೇನಲ್ಲ .ಆದ್ರೆ ನವ್ವು ಜಾಗೃತವಾಗಿರಬೇಕು , ಜೊತೆಗೆ ನಮ್ಮ ವರ್ತನೆಯಲ್ಲಿ ಮೃದುತ್ವ ಹೊಂದಬೇಕಾಗುತ್ತದೆ , ಈ ಹೊಂದಾಣಿಕೆ ಗುಣ ನಮ್ಮ ಜನರಲ್ಲಿ ಇದ್ದೆ ಇದೆ ಎನ್ನುವ ಅಂಶ ಈ ಚಿತ್ರವು ಬೆಳಕು ಚೆಲ್ಲುತ್ತದೆ  


 ಆಂಗ್ಲ ಚಲನಚಿತ್ರಗಳು ಬರೀ ಅಶ್ಲೀಲತೆಯಿಂದ ತುಂಬಿರುತ್ತವೆ, ಎನ್ನುವುದು ಒಂದು ಮಿಥ್ಯ. ಇದಕ್ಕೆ ಇನ್ನೊಂದು ಸಾಕ್ಷಿ ಇನ್ನೊಂದು ಆಂಗ್ಲ್ ಚಿತ್ರ ‘Contagion’. ಈ ಚಲನಚಿತ್ರವನ್ನು ನಾನು ಕರೋನ್ ಲಾಕ್ ಡೌನ್ ನಲ್ಲಿ ನೋಡಿದ್ದೆ  . ಈ ಚಿತ್ರದಲ್ಲಿ ಹೆಸರಿರದ  ಮಹಾಮಾರಿ ಒಂದು ದೇಶದಲ್ಲಿ ಅಪ್ಪಳಿಸಿದಾಗ, ಆಗುವ ಅನಾಹುತಗಳೇನು ಎಂದು ಅದ್ಭುತವಾಗಿ ಚಿತ್ರಿಸಿದ್ದಾರೆ. ಕರೋನ ವಿಪತ್ತಿನ ಬಗ್ಗೆ ಇವರಿಗೆ ಮೊದಲೆ ತಿಳಿದಿತ್ತೆ ಎಂದು ಸಂಶಯ ಬರುತ್ತದೆ. ಈ ಚಿತ್ರವನ್ನು ಎಲ್ಲರೂ ನೋಡಲೇಬೇಕು ಏನ್ನುವಷ್ಟು ಸ್ವಾರಸ್ಯಕರವಾಗಿದೆ  


ಇನ್ನೂ ನಾನು, ನನ್ನ ಮಗನ ಜೊತೆ Harry potter, Frozen, Spiderman, Avengers, Titanic, Baby's Day out ಮುಂತಾದ ಅನಿಮೆಷನ್ ಚಿತ್ರಗಳನ್ನು ನೋಡಿದ್ದೇನೆ. ಕೆಲವೊಂದು ಇಂಗ್ಲೀಷ್ ಚಿತ್ರಗಳ, ಹಿಂದಿ ಡಬ್ಬಿಂಗ್ ನೋಡಿದ್ದೇನೆ. ಒಟ್ಟಿನಲ್ಲಿ ಚಲನಚಿತ್ರವನ್ನು ನೋಡಿ ಆನಂದಿಸುವದೊಂದೇ ಉದ್ದೇಶ.

ಒಟ್ಟಾರೆ ಹೇಳಬೇಕೆಂದರೆ ಆಂಗ್ಲ ಚಿತ್ರಗಳಲ್ಲಿ, ತಂತ್ರಜ್ಞಾನದ ಬಳಕೆ ಹೆಚ್ಚಾಗಿರುತ್ತದೆ. ಅದೆಷ್ಟೋ ಹಿಂದಿ ಚಲನಚಿತ್ರಗಳು, ಆಂಗ್ಲ ಚಿತ್ರಗಳ ರೂಪಾಂತರಗಳಾಗಿವೆ. ಅಲ್ಲಿ ನಮ್ಮ ಚಲನಚಿತ್ರಗಳಂತೆ ಹಾಡು-ಕುಣಿತ ಅಷ್ಟಾಗಿ ಇರುವುದಿಲ್ಲ. ಶೀರ್ಷಿಕೆ ಹಾಡು ಅಥವಾ ಹಿನ್ನಲೆ ಸಂಗೀತ ಕೇಳಿ ಬರುತ್ತದೆ ಅಷ್ಟೇ 
ಅದೇ ಪದ್ಧತಿಯನ್ನು, ಇತ್ತೀಚಿನ ಭಾರತೀಯ ಚಿತ್ರಗಳಲ್ಲಿ ಕಾಣುತ್ತಿದ್ದೇವೆ. ಈಗ , ಹಳೆಯ ಕಾಲದಂತೆ  ಹಾಡುಗಳನ್ನು ಸಮಯ ವ್ಯಯಿಸಲು ತುರುಕಿದ್ದಾರೆ ಎಂದೆನಿಸುವುದಿಲ್ಲ.

ಆಂಗ್ಲ ಚಲನಚಿತ್ರಗಳನ್ನು ನೋಡಿದಾಗ ಅದರ ಭವ್ಯತೆಯ ಅಂದಾಜು ಸಿಗುತ್ತದೆ ಅದಕ್ಕೆ ತಾನೆ 'ಆಸ್ಕರ್ ಪ್ರಶಸ್ತಿಗೆ' ಅಷ್ಟೊಂದು ಮಹತ್ವವಿದೆ. ಅದನ್ನು ಪಡೆಯುವದು ಸುಲಭವೇನಲ್ಲ. ಆದರೆ ಭಾರತೀಯ ಕಲಾವಿದರಿಗೆ ಯಾವದು ಅಸಾಧ್ಯವಲ್ಲ. ನಮ್ಮಲ್ಲಿ ಕಲಾತ್ಮಕತೆ, ಕ್ರಿಯಾಶೀಲತೆ ನರನಾಡಿಗಳಲ್ಲಿ ತುಂಬಿದೆ. ವೀಕ್ಷಕರ ಪ್ರೋತ್ಸಾಹ ಒಂದಿದ್ದರೆ ಸಾಕು.

 

 

ಮೃಣಾಲಿನಿ 


 

Category:EntertainmentProfileImg

Written by Mrunalini Agarkhed

English,Kannada Blogger