ಅಮ್ಮ ಎಂಬ ಶಬ್ದದ ಉಚ್ಚಾರವೇ ಸ್ಪಷ್ಟವಾಗಿ ಹೇಳುತ್ತದೆ ಇದು ಕರುಳಿನ ಬಂಧ ಎಂದು. ಅಮ್ಮ ಎಂದು ಉಚ್ಚರಿಸುವಾಗ “ಅ” ಎನ್ನುವ ಅಕ್ಷರ ಕರುಳಿನಿಂದಲೇ ಜನಿಸುತ್ತದೆ. ಜೀವಿಯೊಂದು ಜನ್ಮ ತಾಳುವ ಪವಿತ್ರವಾದ ಸ್ಥಳ ಅಮ್ಮನ ಒಡಲು. ಜೀವಿಯೊಂದು ಸುರಕ್ಷಿತವಾಗಿರುವ ಸ್ಥಳ ಅಮ್ಮನ ಮಡಿಲು. ದೇವರಿಗೆ ಸರಿ ಸಮಾನವಾಗಿ ಪೂಜಿಸಿಕೊಳ್ಳುವ ವ್ಯಕ್ತಿತ್ವದವಳು. ವಾತ್ಸಲ್ಯದ ವಿಶಾಲ ಹೃದಯದವಳು. ದುಡಿಮೆಯ ದಣಿವರಿಯದ, ಸಂಬಳದ ನಿರೀಕ್ಷೆಯಿಲ್ಲದ, ಸಹನೆಯಾಗಿ, ಕರುಣೆಯಾಗಿ, ಮಮತೆಯಾಗಿ, ತ್ಯಾಗದ ಪ್ರತಿರೂಪವಾಗಿ, ಇಡೀ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು, ಸಮರ್ಥವಾಗಿ ನಿರ್ವಹಿಸುವ ಏಕೈಕ ಶಕ್ತಿ ತಾಯಿ.
ವ್ಯಾಖ್ಯಾನಕ್ಕೆ ಸಿಗದ ವ್ಯಕ್ತಿತ್ವದವಳನ್ನು ವರ್ಣಿಸುವುದು ಹೇಗೆ? ತ್ಯಾಗಿ ಎನ್ನುವ ಪದಕ್ಕೆ ಯಾವುದಾದರೊಂದು ಸಮಾನಾರ್ಥಕ ಪದವಿದೆ ಎಂದರೆ ಅದು ತಾಯಿ. ಸಹಿಷ್ಣುತೆ ಎನ್ನುವ ಪದಕ್ಕೆ ಇನ್ನೊಂದು ಅರ್ಥವಿದೆ ಎಂದರೆ ಅದು “ಅಮ್ಮ”. ತನ್ನ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಲ್ಪಿಯೂ ಇವಳೇ. ತನ್ನ ಹೊಕ್ಕಳ ಬಳ್ಳಿಯನ್ನು ರಕ್ಷಿಸುವ ಯೋಧಳೂ ಇವಳೇ.ಜೀವನದಲ್ಲಿ ಎಷ್ಟೇ ಕಷ್ಟಗಳು, ನೋವುಗಳು ಎದುರಾದರೂ ಎಲ್ಲವನ್ನು ತನ್ನ ಹೊಟ್ಟೆಯೊಳಗೆ ಮುಚ್ಚಿಟ್ಟುಕೊಂಡು, ತನ್ನ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಸಲಹುವಂತಹ ಸಹನಾಮಯಿ.
ಮಾನವೀಯ ಸಂಬಂಧಗಳಲ್ಲಿ ಅತಿ ಹೆಚ್ಚು ಭಾವನಾತ್ಮಕ ಸಂಬಂಧಗಳನ್ನು ಹೊಂದಿರುವವಳೇ ತಾಯಿ. ದೇವರನ್ನು ಬಿಟ್ಟರೆ ನಂತರದ ಸ್ಥಾನವನ್ನು ತುಂಬುವವಳು ಅವಳೇ. ಅಕ್ಕ, ತಂಗಿ, ಹೆಂಡತಿ ಇವರೆಲ್ಲರಿಗಿಂತ ಹೆಚ್ಚು ಗೌರವಿಸಲ್ಪಡುವವಳು. ತಾಯಿ ಅದೊಂದು ಅದ್ಭುತವಾದಂತಹ ಶಕ್ತಿ. ತಾಯಿನಾಡು, ತಾಯಿನುಡಿ, ತಾಯಿಭಾಷೆ, ತಾಯಿಕರುಳು ಇಂತಹ ಪದಗಳೇ ಹೇಳುತ್ತವೆ ತಾಯಿ ಎನ್ನುವ ಪದ ಎಷ್ಟು ಗೌರವಿಸಲ್ಪಡುತ್ತದೆ ಎಂದು. ಅಮ್ಮ ಎನ್ನುವ ಪದವೇ ಅತಿ ಹೆಚ್ಚು ಪೂಜ್ಯ ಭಾವನೆಯಿಂದ ಪೂಜಿಸಿಕೊಳ್ಳುವ ವ್ಯಕ್ತಿತ್ವ.
9 ತಿಂಗಳುಗಳ ಕಾಲ ಯಾವುದಾದರೂ ಒಂದು ಜೀವಿ ಮತ್ತೊಂದು ಜೀವಿಯನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಪೋಷಿಸುತ್ತದೆಂದರೆ ಅದು ತಾಯಿ ಮಾತ್ರ. ಕರುಳ ಬಳ್ಳಿಯಿಂದಲೇ ತನ್ನ ಮಗುವನ್ನು ಪೋಷಿಸುತ್ತಾಳೆ. ಇದು ಪ್ರಕೃತಿಯ ಸಹಜ ಪ್ರಕ್ರಿಯೆ. ಇಂತಹ ಪ್ರಕ್ರಿಯೆಗಳೇ ತಾಯಿಯನ್ನು ದೈವತ್ವ ಸ್ಥಾನಕ್ಕೇರಿಸಿವೆ. ಕರುಳ ಬಳ್ಳಿಯ ಕತ್ತರಿಸುವಿಕೆಯಿಂದ ಹೊರಬಂದ ಮಗುವನ್ನು ತಾಯಿ ಹೆಚ್ಚು ಭಾವನಾತ್ಮಕವಾಗಿ ಪ್ರೀತಿಸುತ್ತಾಳೆ. ಹುಟ್ಟಿದ ಕ್ಷಣದಿಂದ ಮಗು ತನ್ನ ತಾಯಿಯ ಬಳಿಯಲ್ಲಿಯೇ ಇರುತ್ತದೆ. ತಾಯಿಯು ಮಗುವಿಗೆ ಮೊದಲ ಸಂಬಂಧಿಯಾಗಿ, ಮೊದಲ ಗುರುವಾಗಿ ಪರಿಣಮಿಸುತ್ತಾಳೆ. ಮಗುವಿನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾ, ತಪ್ಪುಗಳನ್ನು ಬಿದ್ದುತ್ತಾ ಎಡರುತೊಡರುಗಳಲ್ಲಿ ಜೊತೆಯಾಗಿ ಕೈಹಿಡಿದು ನಡೆಯುತ್ತಾ ಮಗುವಿನ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಶಿಲ್ಪಿಯಾಗಿ ನಿಲ್ಲುತ್ತಾಳೆ.
ಜನ್ಮ ನೀಡಿ ಮಗುವಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಟ್ಟು, ಸಮಾಜದಲ್ಲಿ ಒಳ್ಳೆಯ ಪ್ರಜೆಯನ್ನಾಗಿ ಮಾಡಿ, ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ತನ್ನ ಮಗುವಿಗಾಗಿ ಇಡೀ ಜೀವನವನ್ನು ತ್ಯಾಗ ಮಾಡಿದ ತಾಯಿಯನ್ನು ವೃದ್ಧಾಶ್ರಮದಲ್ಲೋ, ಅನಾಥಾಶ್ರಮದಲ್ಲೋ, ರಸ್ತೆ ಬದಿಯಲ್ಲಿಯೋ ಬಿಡುವುದು ಎಷ್ಟು ನ್ಯಾಯ? ವಯಸ್ಸಾದ ಆ ತಾಯಿಗೆ ಬೇಕಾಗಿರುವುದು ಹಣ, ಆಸ್ತಿ, ಸಂಪತ್ತಲ್ಲ. ಈ ಸಮಯದಲ್ಲಿ ಅವರಿಗೆ ಬೇಕಾಗಿರುವುದು ಮಕ್ಕಳ ಪ್ರೀತಿ, ಕಾಳಜಿ, ಆಸರೆ, ಆಶ್ರಯ ಅಷ್ಟೇ
- ರೂಪಾ ಹೊಸದುರ್ಗ
Writer