ಅಮ್ಮ

ತಾಯಿ

ProfileImg
18 May '24
2 min read


image

 

ಪ್ರತಿ ಯಶಸ್ವೀ ಪುರುಷನ ಹಿಂದೆ ಸ್ತ್ರೀಯೊಬ್ಬಳು ಇರುತ್ತಾಳೆ.  ಆಕೆಯ ರೂಪ ಮಾತ್ರ ಹಲವು. ಆಕೆ ಜೀವಕೊಟ್ಟ ತಾಯಿ, ನಮ್ಮ ಸಲಹುವ ಭೂತಾಯಿ, ಗೆಳೆತನದ ಸಿರಿತನ ಧಾರೆ ಎರೆಯುವ ಸ್ನೇಹಿತೆ, ಬಾಳಿನ ಕಷ್ಟ-ನಷ್ಟಗಳಲ್ಲಿ ಜೊತೆಯಾಗಿರುವ ಜೀವದ ಒಡತಿ, ಇನ್ನು ಹಗಲಲ್ಲೂ  ಇರುಳಿನ ಕತ್ತಲೆಯ ಭಯವ ತರಿಸಿ ಕಥೆಗಳ ಮೂಲಕ ಮೆಚ್ಚಿಸುವ ಅಜ್ಜಿ, ಬದುಕಿಗೆ ಸ್ಪೂರ್ತಿಯ ಮಾತುಗಳನ್ನು ನೀಡುವ ಟೀಚರ್… ಹೀಗೆ ನಾನಾ ರೂಪದಲ್ಲಿ ಮಹಿಳೆಯರು ಬಾಳಿಗೊಂದು ಸ್ಪರ್ಶ ನೀಡಿರುತ್ತಾರೆ. ಆದರಲ್ಲೂ ನಾವು ಹೇಗಿದ್ದರೂ, ಎಲ್ಲಿದ್ದರೂ ಕೊನೆಯವರೆಗೂ ಪ್ರೀತಿಸುವ ಹೆತ್ತಬ್ಬೆಯ ಕುರಿತು ಹತ್ತು ಸಾಲು ಬರೆಯದಿದ್ದರೆ ಹೇಗೆ…

ಬಾಳು ಬಂಗಾರವಾಗಬೇಕಾದರೆ ಕಠಿಣ ಪರಿಶ್ರಮ ಬೇಕು. ಕಠಿಣ ಪರಿಶ್ರಮ  ತಕ್ಕ ಪ್ರತಿಫಲ ನೀಡುತ್ತದೆ, ಗುರಿ ಮುಟ್ಟಲು ಪ್ರೇರಣೆ ನೀಡುತ್ತದೆ. ಅಂಥಹ ಪ್ರೇರಕ ಮನಸ್ಸುಗಳು ನಮ್ಮ ಜೊತೆಗಿದ್ದರೆ ನಮ್ಮ ಅಂದುಕೊಂಡ ನಿಲುವಿಗೆ ಗೆಲುವು ಸಿಗುತ್ತದೆ. ನನ್ನ ಬಾಳಲ್ಲೂ ಪ್ರೇರಕ ಶಕ್ತಿ ಸದಾ ಜೊತೆಯಲ್ಲೇ ಇರುವುದು ನನ್ನ ಅದೃಷ್ಟ. ನನ್ನ ಬದುಕನ್ನು ಸುಂದರ ಪುಟಗಳಲ್ಲಿ ಪೋಣಿಸಿ, ಸೋಲಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಗೆಲುವಿಗಾಗಿ ಜೊತೆಯಲ್ಲೇ ನಡೆದು, ಹೊಸ ಅಧ್ಯಾಯ ಸೃಷ್ಟಿಸಿ, ಯಶಸ್ಸಿನ ಜೀವನ ಕೊಟ್ಟು ಬದುಕಿಗೆ ಸ್ಪೂರ್ತಿ, ಕೀರ್ತಿ ಎಲ್ಲವೂ ಆದವಳು ನನ್ನ ಅಮ್ಮ.   
  
ಕಷ್ಟದಲ್ಲಿ ಮನಸ್ಸು ನೊಂದಿದ್ದರೆ ನಿನ್ನ ಸ್ಪೂರ್ತಿದಾಯಕ ಮಾತುಗಳು ಆಶಾಕಿರಣ ಮೂಡಿಸುತ್ತವೆ. ಸೋತಾಗಲು ಎದೆಗುಂದದೆ ಅಚಲನಾಗದೆ ನೀ ನಿಲ್ಲದಿರು, ಭಯಗೊಂಡರೆ ಮನವು ಕುಗ್ಗುತ್ತದೆ-ಹೆದರುತ್ತದೆ,  ಧೈರ್ಯದಿಂದ ಅದನ್ನು ಎದುರಿಸಿದರೆ ಕಷ್ಟವೂ ಕರಗುತ್ತದೆ. ಈ ನಿನ್ನ ಆದರ್ಶದ ಮಾತುಗಳು ನಿಜಕ್ಕೂ ನನಗೆ ಶಕ್ತಿ, ಸ್ಪೂರ್ತಿ ನೀಡುತ್ತದೆ. 
     
ಅಮ್ಮಾ ನನಗಾಗಿ ನೀನು ಅದೆಷ್ಟು ತ್ಯಾಗ ಮಾಡಿರುವೆ. ನೆರಳಾಗಿ ಜೊತೆಯಾಗಿ ನೀ ಬಂದು ನೋವಿನ ಪ್ರತಿ ಸಮಯದಿ ನಿಂತು ನೆಮ್ಮದಿಯ ಆಧಾರವಾದೆ. ಹಸಿವಾಗುವ ಮುನ್ನ ಕೊಟ್ಟ  ಕೈ ತುತ್ತು, ಕೆನ್ನೆಗೆ ಕೊಟ್ಟ ಸಿಹಿ ಮುತ್ತು, ಮರೆಯಲಾರೆ ನಾ ಯಾವತ್ತು. ಅಕ್ಷರ ಅಭಿರುಚಿ ಸಾಹಿತ್ಯ ಪ್ರೇಮವನ್ನು ಮನದಲ್ಲಿ ಬೆಳೆಸಿದವಳು ನೀನೆ. ಜೀವನಕ್ಕೆ  ಅರ್ಥ ಕೊಟ್ಟು ಸಮರ್ಥ ಬದುಕಿಗೆ  ಮುನ್ನುಡಿ ಬರೆದೆ. ಜೀವ ಕೊಟ್ಟೆ ಜೀವನ ಹೇಗೆ ನಡೆಸಬೇಕೆಂದು ಹೇಳಿಕೊಟ್ಟೆ. ಆದರೆ ಹೇಳದೆ ಅದೆಷ್ಟೋ ನೋವು ನೀನೇ ನುಂಗಿಬಿಟ್ಟೆ. ನನ್ನ ಒಳಿತಿಗಾಗಿ ಹಗಲಿರುಳು ಕಷ್ಟಪಟ್ಟೆ. ಅಮ್ಮಾ… ನಿನ್ನ ಕುರಿತು ಎಷ್ಟೇ ಬರೆದರೂ ಅದು ಕಡಿಮೆಯೇ ಅಲ್ಲವೇ?!

ಗಿರೀಶ್ ಪಿ.ಎಂ
ದ್ವಿತೀಯ ಎಂ.ಎ, ಇತಿಹಾಸ ಮತ್ತು ಪುರಾತತ್ವಶಾಸ್ತ್ರ
ವಿ ವಿ ಕಾಲೇಜು ಮಂಗಳೂರು

Category:Fashion



ProfileImg

Written by Gireesh Pm