ಆನು ಇಂದು ಅಮ್ಮಂಗೆ ಫೋನ್ ಮಾಡಿ ಅಪ್ಪಗ ಅಭಿ ಓಡಿ ಬಂದು ಫೋನ್ ನೆಗ್ಗಿತ್ತು ,ಅದರದ್ದು ಮನೆಲಿ “ಆನು ಫೋನ್ ನೆಗ್ಗುದು ಹೇಳಿ “ಯಾವಾಗಲು ಗಲಾಟೆ !ಅಭಿ ಹೇಳಿರೆ ಎನ್ನ ತಮ್ಮನ ಮಗಳು ,ಮೂರು ವರ್ಷದ ಸಣ್ಣ ಕೂಸು ,ಮಾತಿನ ಮಲ್ಲಿ .ಫೋನ್ ನೆಗ್ಗಿ ಹಲೋ ಹೇಳಿತ್ತು .ಎಂತ ಮಾಡುತ್ತಾ ಇದ್ದೆ ಅಭಿ,ಉಂಡಾತ ?ಹೇಳಿ ಕೊಂಡಾಟಲ್ಲಿ ಕೇಳಿದೆ .
ಆನು ತುಂಬಾ ಉಂಡಿದೆ ಹೇಳಿತ್ತು .,ಅದು ಎಂತದುದೆ ಸರಿಯಾಗಿ ಉಂಡು ತಿಂದು ಮಾಡುತ್ತಿಲ್ಲೆ (ಈಗಣ ಎಲ್ಲ ಮಕ್ಕಳದ್ದೂ ಇದೇ ಕಥೆ ಅನ್ನೇ ) ಹಾಂಗೆ ಸಪೂರಕ್ಕೆ ಸಣ್ಣಕ್ಕೆ ಇದ್ದು ನೋಡುಲೆ ,ಕಾರ್ಬಾರು ಮಾತ್ರ ಗುಡ್ಡೆ ಅಷ್ಟು ಇದ್ದು ,ಅದು ಬೇರೆ ವಿಚಾರ .ಎಂತದೂ ಉಂಡು ತಿಂದು ಮಾಡದ್ದೆ ಅದರಮ್ಮನ ಬೊಡಿಸುವ ಜೆನ ತುಂಬಾ ಉಂಡಿದೆ ಹೇಳುವಗ ನೆಗೆ ಬಂತು ಎನಗೆ .
ಮತ್ತೆ ಅಮ್ಮ ಫೋನ್ ತೆಕ್ಕೊಂಡ .ಹೀಂಗೆ ಮಾತಾಡುವಾಗ ಅಮ್ಮನತ್ರೆ ಹೇಳಿದೆ ಅಭಿ ತುಂಬಾ ಉಂಡಿದೆ ಹೇಳಿತ್ತು ,ಉಂಡು ತಿಂದು ಮಾಡುತ್ತಾ ?ಗೆನ ಆಯಿದ ಈಗ ?ಹೇಳಿ ಕೇಳಿದೆ .”ಉಂಬ ಕಥೆ ಹೇಳಿ ಪ್ರಯೋಜನ ಇಲ್ಲೆ .ಆದರೆ ರಜ್ಜ ಗೆನ ಆಗಿತ್ತು ”ಬೇಳೆಗೆ ಮಣ್ಣು ಉದ್ದಿದ ಹಾಂಗೆ” ,ಮತ್ತೆ ಮೊನ್ನೆ ಎರಡು ದಿನ ಶೀತ ಜ್ವರ ಬಂತು ಮತ್ತೆ ಪುನ ಹಾಂಗೆ ಬಚ್ಚಿದ್ದು” ಹೇಳಿ ಹೇಳಿದ ಅಮ್ಮ .
ಅಷ್ಟಪ್ಪಗ ಅಮ್ಮ ಮಾತಿನ ನಡುಗೆ ಉಪಯೋಗಿಸಿದ ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳುವ ನುಡಿಗಟ್ಟು ಎನ್ನ ಗಮನಕ್ಕೆ ಬಂತು .ಆನು ಸಣ್ಣಾದಿಪ್ಪಗಲೇ ಈ ಮಾತಿನ ಕೇಳಿದ್ದೆ .ಎಂತ ಅದರ ಅರ್ಥ ಹೇಳಿ ಗಮನಿಸಿತ್ತಿಲ್ಲೆ.
ಸಣ್ಣಾದಿಪ್ಪಗ ಎನ್ನ ಅಜ್ಜನ ಮನೆಲಿ ಬೇಸಗೆಲಿ ಹಲಸಿನ ಹಣ್ಣು ತಿಂದ ಮೇಲೆ ಹೊದುಂಕುಳಿಂದ ಬೇಳೆಯ ಪೀಂಕಿಸಿ ತೆಗದು ,ಒಳ್ಳೆ ಬೇಳೆಗಳ ಬೇರೆ ಮಡುಗಿ ಕೊಂಡು ಇತ್ತಿದವು .ನಂತರ ಒಂದು ಅಳಗೆಲಿ ರಜ್ಜ ಲಾಯ್ಕ ಮಣ್ಣು ತಂದು ನೀರು ಹಾಕಿ ಮಣ್ಣು ನೀರು ತಯಾರು ಮಾಡಿಕೊಂಡು ,ಅದಕ್ಕೆ ಬೇಳೆಗಳ ಹಾಕಿ ಅದರ ಕೊಟ್ಟಗೆಯ ಮೂಲೆಲಿ ಸೊರುಗಿಕೊಂಡು ಇತ್ತಿದವು ,ಬೇಸಗೆಯ ಬೆಶಿಗೆ ನೀರು ಆವಿಯಾಗಿ ಬೇಳೆ ಹಾಂಗೆ ಒಳುಕ್ಕೊಂದು ಇತ್ತು , ಬೇಳೆಗಳ ಮೇಲೆ ತೆಳುವಾಗಿ ಕಂಡೂ ಕಾಣದ್ದ ಹಾಂಗೆ ಮಣ್ಣು ಹಿಡಿತ್ತು.
ಹಾಂಗೆ ಜತನ ಮಾಡಿದ ಹಲಸಿನ ಕಾಯಿಯ ಬೇಳೆ ಹುಟ್ಟಿಗೊಂಡು ಹಾಳಾವುತ್ತಿಲ್ಲೆ,ಮತ್ತೆ ಪೂನ್ಕೆ ಬಂದು ದೆ ಹಾಳಾವುತ್ತಿಲ್ಲೆ .ಅದರ ನಂತ್ರಣ ಬೇಸಗೆ ಬಪ್ಪಲ್ಲಿಯವರೆಗೂ ಉಪಯೋಗಿಸುಲೆ ಆಗಿಯೊಂಡು ಇತ್ತು. ನಮ್ಮ ಹೆರಿಯೋರತ್ತರೆ ಇಂಥ ಹಲವು ಉಪಾಯಂಗ ಕೌಶಲ್ಯಂಗ ಇತ್ತು .
ತೀರಾ ಬಚ್ಚಿ ಎಲ್ಕೋಟೆ ಕಟ್ಟಿದೋರು ರಜ “ಅಪ್ಪಾ ಅಲ್ಲದ ಹೇಳುವ ಹಾಂಗೆ” ಗೆನ ಆದರೆ,ಅದರ ರಜ ಗೆನ ಆಯಿದು ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳಿ ಹೋಲಿಕೆ ಮಾಡಿ ಹೇಳುತ್ತವು .ಬೇಳೆಗೆ ತುಂಬಾ ತೆಳುವಾಗಿ ಮಣ್ಣು ಹಿಡಿವದು ಹಾಂಗೆ .ರಜ ಗೆನ ಆಗಿ, ಚೋಲಿ ಹಸಿ ಆಯಿದು ಹೇಳುದರ ಹೇಳುವಾಗ ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳುವ ಮಾತಿನ ನಮ್ಮಲ್ಲಿ ಬಳಕೆ ಮಾಡುತ್ತವು .
0 Followers
0 Following