ತಾಯ್ತನದ ಭಾಷ್ಯ
----------------------
ಮಗು ಮೊದಲು ಅತ್ತಾಗ
ನಗು ಸೂಸಿದ್ದು ಅದೇ ಮೊದಲು
ಪ್ರೀತಿ ಸಿಂಚನ ಜಗ ಮರೆತು !
ಮಡಿಲಲ್ಲಿ ಆಡುವ ಕೂಸನು ಮುದ್ದಿಸುತ
ಬೇರೆ ಲೋಕದಲ್ಲೇ ಮನೆ ಮಾಡುತ್ತಾಳೆ
ಮಾತೃತ್ವದ ಕುರುಹು ನಿತ್ಯ ಸತ್ಯವು !
ಏನನ್ನೂ ಆಶಿಸದ ಈಕೆ
ಬದುಕುತ್ತಾಳೆ ಸದಾ ಕುಟುಂಬಕ್ಕಾಗಿ
ಕರುಳು ಬಳ್ಳಿ ಹಬ್ಬಲೆಂಬ ಆಶಾಭಾವ !
ತನ್ನ ಬೇಕು ಬೇಡಗಳನ್ನು
ಅದೆಂದೋ ಕಟ್ಟಿಯಾಗಿದೆಯಲ್ಲ
ಹುರಿದುಂಬಿಸುತ್ತಾಳೆ ಏಳ್ಗೆಗಾಗಿ !
ಹರಿದ ಸೀರೆಯ ಚುಂಗು ಮರೆಮಾಚಿ
ಹೊಸ ದಿರಿಸಿನ ನಾಟಕ
ಅರೆಹೊಟ್ಟೆಯಲೂ ಸಂತಸ ಪಡುವ ಜೀವ !
ತೀರದ ಭಾವಾಂಬುಧಿ
ನಡೆದಾಡುವ ದೇವರ ಸನ್ನಿಧಿ
ಹರಕೆ ಹೊರುತ್ತಾಳೆ ಪಾರ್ಥಿಸುತ್ತಾಳೆ
ತಾಯ್ತನದ ಭಾಷ್ಯಕೆ ಸಾಕ್ಷಿಯಾಗುತ್ತಾಳೆ !
ಶ್ರೀವಲ್ಲಭ ಕುಲಕರ್ಣಿ
ಹುಬ್ಬಳ್ಳಿ
ನಾನೊಬ್ಬ ಕವಿ, ಹಾಸ್ಯ ಬರಹಗಾರ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಉಳ್ಳವನು.
0 Followers
0 Following