ತಾಯ್ತನ..

ಒಂದು ಮೈಲಿಗಲ್ಲು

ProfileImg
19 Mar '24
4 min read


image

    ತಾಯ್ತನ ಎನ್ನುವುದು ಹೆಣ್ಣಿನ ಜೀವನದಲ್ಲಿ ಮಹತ್ವದ ಘಟ್ಟ ಎನ್ನಬಹುದು. ಹೆಣ್ಣು ಗರ್ಭಿಣಿ ಎಂದಾಗಲೇ ತನ್ನ ತಾಯ್ತನದ ಹೆಮ್ಮೆ ಅವಳ ಮುಖದಲ್ಲಿ ಕಾಣಿಸತೊಡಗುತ್ತದೆ. ಜೊತೆಗೆ ತನ್ನ ಗರ್ಭದಲ್ಲಿರುವ ಮಗುವಿನ ಬಗ್ಗೆ ಪ್ರೀತಿ, ರಕ್ಷಣಾ ಭಾವ, ಆತಂಕ ಶುರುವಾಗುತ್ತದೆ. ಆಗಲೇ ಅವಳ ತಾಯ್ತನದ ಮನೋಭಾವ ಜಾಗ್ರತಗೊಳ್ಳುವುದು. ತಾಯಿಯಾದ ಬಳಿಕ ಪ್ರತೀ ಹೆಣ್ಣಿಗೆ ಹೊಸ ಜನ್ಮ ದೊರೆತಂತೆ. ತನ್ನ ಉಸಿರಿನಿಂದ ಇನ್ನೊಂದು ಜೀವಕ್ಕೆ ಜೀವ ನೀಡಿದ ಖುಷಿಯನ್ನು ಆಕೆ ಕಾಣುತ್ತಾಳೆ.

     ಪ್ರಸವದ ಬಳಿಕ ಹೆಣ್ಣಿಗೆ ಹೆಚ್ಚಿನ ಸವಾಲಿನ ದಿನಗಳು  ಎದುರಾಗುತ್ತವೆ. ತಾಯ್ತನ ಎನ್ನುವುದು ಅವಳ ಪಾಲಿಗೆ ಹೊಸದಾಗಿರುತ್ತದೆ. ತಾನಿನ್ನು ಚಿಕ್ಕ ಹುಡುಗಿ ಎಂಬುದನ್ನು ಮರೆತು ತಾನೊಬ್ಬಳು ಮಗುವಿನ ತಾಯಿ ಎನ್ನುವ ಅಂಶ ಅವಳ ಮನದಲ್ಲಿ ಬೇರೂರಬೇಕು. 

    ಮೊದಲ ಮೂರರಿಂದ ಆರು ತಿಂಗಳ ಕಾಲ ಮಗುವಿಗೆ ಎದೆ ಹಾಲಿನ ಅವಶ್ಯಕತೆ ಇರುತ್ತದೆ. ತಾಯಿಯಾಗುವುದಕ್ಕಿಂತ ಮೊದಲು ಗರ್ಭಿಣಿ ಮಹಿಳೆಯ ಆಹಾರ ಕ್ರಮವನ್ನು ಎಷ್ಟು ಉತ್ತಮ ರೀತಿಯಲ್ಲಿ ನಿರ್ವಹಿಸುವರೋ ಅಷ್ಟೇ ಮುತುವರ್ಜಿ ಪ್ರಸವದ ನಂತರವೂ ಇರಬೇಕಾಗದುದು ಅಗತ್ಯವಿದೆ. ಏಕೆಂದರೆ ಇದು ತಾಯಿಯ ಮಾತ್ರವಲ್ಲ ಮಗುವಿನ ಆರೋಗ್ಯದ ಮೇಲೂ ನೇರ ಪರಿಣಾಮ ಬೀರುತ್ತದೆಆ ಸಮಯದಲ್ಲಿ ತಾಯಿಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡಿ ಅವಳನ್ನು ಹೆಚ್ಚು ಕಾಳಜಿಯಿಂದ ಪೋಷಿಸುವ ಜವಾಬ್ದಾರಿ ಮನೆಯ ಸದಸ್ಯರದಾಗಿರುತ್ತದೆ.

      ಮಗುವಿನ ಜನನವಾದ ಮೇಲೆ ತಾಯಿಯ ಕರ್ತವ್ಯ ಹೆಚ್ಚಾಗಿ, ತನ್ನ ಮೇಲಿನ ಆಸಕ್ತಿ ಕಡಿಮೆಯಾಗಿ ಮಗುವಿನ ಕಡೆ ಹೆಚ್ಚಿನ ಗಮನಕೊಡಬೇಕಾಗುತ್ತದೆ. ಮಗುವಿಗೆ ಸಮಯಕ್ಕೆ ಸರಿಯಾಗಿ ಅದರ ಬೇಕು ಬೇಡಗಳನ್ನು ಪೂರೈಕೆ ಮಾಡಬೇಕು. ಹಾಗೆಯೇ ಮಗು ಅತ್ತಾಗ, ರಚ್ಚೆ ಹಿಡಿದಾಗ ಸಮಾಧಾನಪಡಿಸಲು ತಯಾರಿರಬೇಕು.

   ಮಗು ಜನನದ ಕೆಲವು ತಿಂಗಳು ಅವಳಿಗೆ ತನ್ನ ತವರಿನ, ಹಾಗೂ ಇತರ ಸದಸ್ಯರ ಸಹಾಯ ಸಿಗಬಹುದು. ಆದರೂ ಮಗುವಿಗೆ ಆಗಾಗ್ಗೆ ಹಾಲು ಕುಡಿಸಿ ನಿದ್ರೆ ಮಾಡಿಸಿ, ಅದರ ಒದ್ದೆ ಬಟ್ಟೆಗಳನ್ನು ತೆಗೆಯುವ ಕೆಲಸವೆಲ್ಲವನ್ನು ಅವಳೇ ಮಾಡಬೇಕಾಗುತ್ತದೆ. ತವರಿನಲ್ಲಿದ್ದಾಗ ಅವಳಿಗೂ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಅವಕಾಶ ಸಿಗುತ್ತದೆ. ಮೊದಲನೇ ಹೆರಿಗೆಯಾದಾಗ ತಾಯಿಯಾಗಿ ಇವೆಲ್ಲವನ್ನೂ ನಿಭಾಯಿಸಲು ಬಹುಮುಖ್ಯವಾಗಿ ಅವಳಿಗೆ ಮಾನಸಿಕ ಆರೋಗ್ಯ ಬೇಕಾಗುತ್ತದೆ.

    ಮಗು ಜನಿಸಿದ ಬಳಿಕ ಮಹಿಳೆಯರ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಈ ಅಂಶವನ್ನು ಅರಿತು ಮನೆಯವರು ಆಕೆಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಕೆಲವು ಬಾಣಂತಿಯರನ್ನು ಕಾಡುವ ಬಾಣಂತಿ ಸನ್ನಿ ಮತ್ತು ಬಾಣಂತನದ ಖಿನ್ನತೆಯ ಲಕ್ಷಣಗಳ ಬಗ್ಗೆಯೂ ಮನೆಯ ಸದಸ್ಯರು ತಿಳಿದಿರಬೇಕು.

ತಾಯಿಯಾದ ನಂತರ ಉಂಟಾಗುವ ಭಾವನೆಗಳು :

    ತಾಯಿಯಾದ ನಂತರ ಉಂಟಾಗುವ ಭಾವನೆಗಳಲ್ಲಿ ಸಂತೋಷ, ದುಃಖ, ಸಿಟ್ಟು, ಖಿನ್ನತೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಲಾಗಿದೆ. ಮಗುವಿನ ಆರೋಗ್ಯದ ಚಿಂತೆ ಹಾಗೂ ದೈಹಿಕವಾಗಿ ಆಗುವ ಬದಲಾವಣೆಗಳಿಗೆ ಒಗ್ಗಿಕೊಂಡು ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.

ಬಳಲಿಕೆ: ತಾಯಿಯಾದ ಬಳಿಕ ಸಂಸಾರ ತೂಗಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಮಗುವಿನ ಮತ್ತು ತನ್ನ ಆರೋಗ್ಯದ ಜೊತೆಗೆ ಮನೆಯನ್ನೂ ಒಳ್ಳೆಯ ರೀತಿಯಲ್ಲಿ ತೂಗಿಸಿಕೊಂಡು ಹೋಗುವ ಕೆಲಸ ಮತ್ತು ಜವಾಬ್ದಾರಿ ತಾಯಿಯದೇ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ಅವಳಿಗೆ ಹೆಚ್ಚು ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ ಹಾಗೂ ಆಹಾರವನ್ನು ಸರಿಯಾಗಿ ಸೇವಿಸದೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುವುದಿಲ್ಲ. ಜೊತೆಗೆ  ಮಗುವಿಗೆ ಎದೆ ಹಾಲನ್ನು ಉಣಿಸಬೇಕಾಗಿರುವುದರಿಂದ ತಾನು ಸೇವಿಸಿದ ಆಹಾರದ ಪ್ರಮಾಣ ಕಡಿಮೆ ಆಗಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಗದೆ ಹೆಚ್ಚು ಬಳಲಿಕೆ ಉಂಟಾಗುತ್ತದೆ.

ಖಿನ್ನತೆ: ತಾಯಿಯಾದ ಬಳಿಕ ಹಾರ್ಮೋನ್ ಗಳ ವ್ಯತ್ಯಾಸವಾಗುತ್ತದೆ. ಈ ಸಂದರ್ಭದಲ್ಲಿ ಸಹಜವಾಗಿಯೇ ಮನಸಿನಲ್ಲಿ ಹೇಳಿಕೊಳ್ಳಲಾಗದಂತಹ ತುಮುಲ ಏರ್ಪಡುತ್ತದೆ. ಅದನ್ನು ಯಾರಲ್ಲೂ ಹೇಳಲು ಸಾಧ್ಯವಿಲ್ಲದೇ ಇದ್ದಾಗ ಮಾನಸಿಕ ಹಿಂಸೆಗೆ ಒಳಗಾಗಿ ಖಿನ್ನತೆಗೆ ಒಳಗಾಗುವ ಪರಿಸ್ಥಿತಿ ಎದುರಾಗುತ್ತದೆ.

ಆರೋಗ್ಯದಲ್ಲಿ ಏರುಪೇರು: ಮಹಿಳೆಗೆ ಇಂತಹ ಸಂದರ್ಭದಲ್ಲಿ ದೇಹದ ಆರೋಗ್ಯದಲ್ಲಿ ಏರುಪೇರು ಸಹಜ. ಏಕೆಂದರೆ ಹೆಚ್ಚು ಸಮಯ ಮನೆ ಮಗುವಿನ ಕೆಲಸದಲ್ಲೇ ತೊಡಗಿದಾಗ ಅವಳು ತನ್ನ ಆರೋಗ್ಯದ ಕಡೆ ಗಮನ ಕೊಡಲು ಮರೆಯುತ್ತಾಳೆ. ಸೊಂಟನೋವು ಹಾಗೂ ಬೆನ್ನುನೋವಿನ ಸಮಸ್ಯೆಗಳು ಇಂತಹ ಸಂದರ್ಭದಲ್ಲೇ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ತಾಯಿಗೆ ಪೌಷ್ಠಿಕ ಆಹಾರ ಹಾಗೂ ಹೆಚ್ಚಿನ ವಿಶ್ರಾಂತಿಯು ಅತ್ಯಗತ್ಯವಾಗಿರುತ್ತದೆ.

ಸಾರ್ಥಕತೆ:  ತಾನು ಒಂದು ಆರೋಗ್ಯಕರವಾದ ಮಗುವಿಗೆ ಜನ್ಮ ನೀಡಿದ ಸಾರ್ಥಕ ಮನೋಭಾವ ಅವಳಲ್ಲಿ ಉಂಟಾಗುತ್ತದೆ. ಹಾಗೆಯೇ ಗರ್ಭಿಣಿಯಾಗಿದ್ದಾಗಿನ ಭಯ ಆತಂಕಗಳು ಮಾಯವಾಗಿ ಧನ್ಯತಾ ಭಾವನೆ ಬರುತ್ತದೆ.

ಅತಿಯಾದ ಕೋಪ: ತಾಯ್ತನ ಒಂದು ಹೊಸ ಅನುಭವವಾದ್ದರಿಂದ ಹಾಗೂ ತನ್ನ ದಿನನಿತ್ಯದ ಚಟುವಟಿಕೆಗಳಲ್ಲಿ ಬದಲಾವಣೆಯಾಗಿ ಕೆಲವು ಸಲ ಮನಸ್ಸಿಗೆ ಕಿರಿಕಿರಿಯಾದಂತೆನಿಸಿ ಎಲ್ಲರ ಮೇಲೂ ಕೋಪಗೊಳ್ಳುವ ಸಂದರ್ಭಗಳು ಎದುರಾಗುತ್ತವೆ.  ಮನೆಯಲ್ಲಿ ಶಾಂತತೆಯ ವಾತಾವರಣವನ್ನು ಕಲ್ಪಿಸಿಕೊಡಬೇಕಾಗುತ್ತದೆ.

ಕಾಳಜಿ: ತಾಯಿಗೆ ಮಗುವಿನ ಬಗೆಗಿನ ಕಾಳಜಿ ಹೆಚ್ಚಾಗಿ ಕಂಡುಬರುತ್ತದೆ. ತಾನು ಏನೇ ಕೆಲಸ ಮಾಡುತ್ತಿದ್ದರೂ ಮನಸ್ಸೆಲ್ಲಾ ಮಗುವಿನ ಚಲನವಲನದಲ್ಲೇ ಇರುತ್ತದೆ. ಮಗುವಿನ ಆರೈಕೆಯಲ್ಲಿ ಯಾವುದೇ ಕುಂದುಕೊರತೆಗಳು ಬರದಂತೆ ನಿಗಾ ವಹಿಸುತ್ತಾಳೆ.

ಪ್ರೀತಿ, ಮಮತೆ: ತನಗೆಷ್ಟೇ ನೋವಿದ್ದರೂ ತನ್ನ ಹೊಟ್ಟೆಯಲ್ಲಿ ಒಂಭತ್ತು ತಿಂಗಳು ಹೊತ್ತು ಹೆತ್ತ ಮಗುವಿನ ಮೇಲೆ ಯಾವ ತಾಯಿಗೆ ಆಗಲಿ ಪ್ರೀತಿ ಮಮತೆ ಹೆಚ್ಚಾಗಿಯೇ ಇರುತ್ತದೆ. ಪ್ರೀತಿಯ ಮಹಾಪೂರವನ್ನೇ ಹರಿಸುತ್ತಾಳೆ.

ಸಹಿಷ್ಣುತೆ: ತಾಯಿಯಾದವಳಿಗೆ ಮಗುವಾದ ಬಳಿಕ ಬೇಕಾದುದು ತಾಳ್ಮೆ. ಹೆರಿಗೆಯ ಮೊದಲು ಇದ್ದಂತಹ ಕೋಪ ಸಿಟ್ಟುಗಳನ್ನು ಆದಷ್ಟು ಕಡಿಮೆ ಮಾಡುವ ಪ್ರಯತ್ನ ಮಾಡಬೇಕಾಗುತ್ತದೆ. ತಾಯಿ ತಾನೇ ತಾಳ್ಮೆ ಕಳೆದುಕೊಂಡರೆ ಮಗುವಿನ ಲಾಲನೆ ಪಾಲನೆ ಪೋಷಣೆಯ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ಇದರಿಂದಾಗಿ ಕುಟುಂಬದ ಇತರ ಸದಸ್ಯರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಭವಿಷ್ಯದ ಬಗ್ಗೆ ಚಿಂತನೆ: ತಾಯಿಯು ಸದಾ ತನ್ನ ಮಕ್ಕಳ ಭವಿಷ್ಯ ಉಜ್ವಲವಾಗಿರಲೆಂದು ಆಶಿಸುತ್ತಾಳೆ. ಅವರ ಯಶಸ್ಸಿಗಾಗಿ ತನಗಿರುವ ಎಷ್ಟೋ ಆಸೆ ಆಕಾಂಕ್ಷೆಗಳನ್ನು ಬಲಿಕೊಡಲು ಸಿದ್ದಳಾಗುತ್ತಾಳೆ.

ನೋವಿನ ನಗು: ತಾಯಿಯು ತನ್ನ ನೋವಿನಲ್ಲೂ ನಗುವನ್ನು ನೋಡುವ ಪ್ರಯತ್ನ ಮಾಡುತ್ತಾಳೆ. ಮಕ್ಕಳ ನಗುವಿನಲ್ಲೇ ತನ್ನ ನೋವನ್ನು ಮರೆಯುವ ಕಲೆಯನ್ನು ಒಂದು ಹೆಣ್ಣು ಅರಿಯುವುದೇ ಅವಳು ತಾಯಿಯಾದ ನಂತರ ಅಲ್ಲವೇ?

ಆದರೆ ಹೊರಗೆ ಕಚೇರಿಗಳಿಗೆ ಹೋಗಿ ದುಡಿಯುವ  ತಾಯಂದಿರಿಗೆ ಇನ್ನೂ ಹೆಚ್ಚಿನ ಸಮಸ್ಯೆಗಳು ಉದ್ಭವಿಸುತ್ತವೆ. ಮಗು ಜನಿಸಿದ ನಂತರ ಕೆಲವು ತಿಂಗಳುಗಳ ಕಾಲ ರಜೆ ಸಿಗಬಹುದು. ಆದರೂ ರಜೆ ಮುಗಿದು ಕೆಲಸಕ್ಕೆ ಹೋಗಲು ಶುರುಮಾಡಿದ ನಂತರ ಅವಳ ದಿನನಿತ್ಯದ ಚಟುವಟಿಕೆಗಳು ಬದಲಾಗುತ್ತವೆ. ಆ ಬದಲಾವಣೆಗೆ ಹೊಂದಿಕೊಳ್ಳಲು ತಾಯಿಗೂ ಸಮಯಾವಕಾಶ ಬೇಕಾಗುತ್ತದೆ. 

   ಇತ್ತೀಚೆಗೆ ಆಧುನಿಕತೆಯ ಗುಂಗಿನಲ್ಲಿ ಕಾಲ ಕಳೆಯುವ ಹುಚ್ಚಿನಲ್ಲಿ ಮಗುವಿಗೆ ಎದೆ ಹಾಲು ಕೊಡಲು ತಾಯಂದಿರು ನಿರಾಕರಿಸುತ್ತಾರೆ. ತಮ್ಮ ಸೌಂದರ್ಯ ಹಾಳಾಗುತ್ತದೆ ಎನ್ನುವ ತಪ್ಪು ಕಲ್ಪನೆಯೇ ಇದಕ್ಕೆ ಮೂಲ ಕಾರಣವಾಗಿದೆ. ಇದರಿಂದಾಗಿ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಶೇಖರಿಸಿಟ್ಟ ಹಾಲು, ಆಹಾರ ಪದಾರ್ಥಗಳನ್ನು ಕೊಡುವುದರಿಂದ ಮಗುವಿನ ಆರೋಗ್ಯಕ್ಕೆ ಹಾನಿಯಾಗುವುದು ಶತಸ್ಸಿದ್ದ. ಹಾಗೆಯೇ ತಾಯಿಯು ತನ್ನ ಮಡಿಲಿನಲ್ಲಿ ಮಗುವನ್ನು ಮಲಗಿಸಿಕೊಂಡು ಲಾಲನೆ ಪಾಲನೆ ಹಾಗೂ ಎದೆ ಹಾಲನ್ನು ಕೊಡುವುದನ್ನು ಅಭ್ಯಾಸ ಮಾಡಿಕೊಂಡರೆ ಮಗು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಹಾಯಕವಾಗುತ್ತದೆ.
 

ತಾಯ್ತನದ ಮೆಟ್ಟಿಲೇರಿರುವ ಹೆಣ್ಣಿಗೆ ಕುಟುಂಬದ ಸದಸ್ಯರ ಬೆಂಬಲ ಹಾಗೂ ಸಹಕಾರಗಳು ಬೇಕೇ ಬೇಕಾಗುತ್ತದೆ. ಕುಟುಂಬದವರ ಸಹಕಾರದಿಂದ ತಾಯಿಯಾದವಳ ಮಾನಸಿಕ ಸ್ವಾಸ್ಥ್ಯ ಹಾಗೂ ದೈಹಿಕ ಆರೋಗ್ಯ ಹದಗೆಡುವುದಿಲ್ಲ ಹಾಗೂ ಇದು ಮಗುವಿನ ಬೆಳವಣಿಗೆಗೂ ಅಗತ್ಯವಾದ ಆರೋಗ್ಯಕರ ವಾತಾವರಣವನ್ನು ಕಲ್ಪಿಸಿದಂತಾಗುತ್ತದೆ.

✍️ ಧನು
 

Category:Parenting and Family



ProfileImg

Written by dhanu