ಮಾತೂ..... ನಿಮ್ಮದೇ, ಸಂಬಂಧಗಳೂ... ನಿಮ್ಮದೇ, ಜಾಗ್ರತೆಯಿರಲಿ!!!!



image

ನುಡಿದರೆ ಮುತ್ತಿನ ಹಾರದಂತಿರಬೇಕು 
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು

ಎಂಬ ಶರಣವಾಣಿ ಅಚಂದ್ರಾರ್ಕವಾದದ್ದು. ಪ್ರತಿಯೊಬ್ಬರ ಕಿವಿಗಳಲ್ಲಿ ಈ ಅಮೃತವಾಣಿ ನಿರಂತರ ಪ್ರತಿದ್ವನಿಸುತ್ತಲೇ ಇರಬೇಕು. ಮನಸಿನ ಭಾವನೆಗಳನ್ನು, ಕಾಮನೆಗಳನ್ನು ಹಂಚಿಕೊಳ್ಳಲು ಕೇವಲ ಮಾನವನಿಗೆ ಮಾತ್ರ ಭಗವಂತನು ಕರುಣಿಸಿರುವ ಅದ್ಭುತ ಶಕ್ತಿ ಮಾತು. ನಮ್ಮ ಮಾತುಗಳು ಹೃದಯಗಳನ್ನು ಬೆಸೆಯಲು ಮತ್ತು ಮನಸುಗಳನ್ನು ಅರಳಿಸಲು ಪೂರಕವಾಗಿರಬೇಕು. ಒಂದೊಳ್ಳೆ ಮಾತಿನಿಂದ ಏಕಕಾಲದಲ್ಲಿ ಅಸಂಖ್ಯಾತ ಹೃದಯಗಳನ್ನು ಮುಟ್ಟಲು ಸಾಧ್ಯ, ಅಂತೆಯೇ ಒಂದೇ ಒಂದು ಒರಟು ಮಾತು ಅಸಂಖ್ಯಾತ ಭಾಂದವ್ಯಗಳಿಗೂ ಮುಳುವಾಗಲೂಬಹುದು, ಅದಕ್ಕೆ ಹಿರಿಯರು ಹೇಳುವುದು ಮಾತೇ ಮುತ್ತು, ಮಾತೇ ಮೃತ್ಯು. ಬಾಯಿಂದ ಹೊರಟ ಮಾತು, ಬಿಟ್ಟ ಬಾಣದಂತೆ, ಒಮ್ಮೆ ಚಿಮ್ಮಿದ ಮೇಲಾಯ್ತು ಮತ್ತೆ ಹಿಂದಿರುಗಲಾಗದು, ಹಾಗಾಗಿ ಆಡಬೇಕಾದ ಮಾತನ್ನು ಗಮನವಿಟ್ಟು, ಸಂದರ್ಭ ಅರಿತು, ಪರಿಣಾಮವನ್ನು ಮುಂದಾಲೋಚಿಸಿ ಹದದಲ್ಲಿ ಮಾತನಾಡಿದರೆ ಮಾತುಗಳಿಗೆ ಅರ್ಥವಿರುತ್ತದೆ.

ಕುಂಭಕರ್ಣನು ಬ್ರಹ್ಮನಲ್ಲಿ ವರ ಕೇಳುವಾಗ ಇಂದ್ರಾಸನವನ್ನು ನೀಡು ಎನ್ನುವ ಬದಲು, ತಪಸಿನ ಆಯಾಸದಲ್ಲಿ ಕ್ಷಣಕಾಲ ಮೈ ಮರೆತು ನಿದ್ರಾಸನವನ್ನು ನೀಡು ಎಂದು ಕೋರಿಬಿಟ್ಟ, ಒಂದೊಳ್ಳೆ ಅವಕಾಶ, ಕೇವಲ ಮಾತಿನಿಂದಾದ ತಪ್ಪಿಗೆ ಇಂದಿಗೂ ಜೋರು ನಿದ್ದೆ ಮಾಡುವವರನ್ನು ಕುಂಭಕರ್ಣನಿಗೆ ಹೋಲಿಸಲಾಗುತ್ತದೆ ಅಲ್ಲವೇ? ಮಾತು ನಮ್ಮ ವ್ಯಕ್ತಿತ್ವದ ಸತ್ವವನ್ನು, ಸಾಮರ್ಥ್ಯಗಳನ್ನು, ನಮ್ಮ ಗುಣ-ಅವಗುಣಗಳನ್ನು, ಸ್ವಭಾವ ವರ್ತನೆಗಳ ಮೂಲಕ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಮನುಷ್ಯನನ್ನು ಅಂದಗೊಳಿಸುವುದು ಒಡವೆ ವಸ್ತ್ರಗಳಲ್ಲ, ಸೌಂದರ್ಯ ಪ್ರಸಾಧನ ಲೇಪನಗಳಂತೂ ಅಲ್ಲವೇ ಅಲ್ಲ, ಕೇಶಾಲಂಕಾರದ ಹೂಗಳೂ ಅಲ್ಲ, ಕೇವಲ ಶುದ್ದ ಹೃದಯದ, ಸನ್ನಡತೆಯ ಮಾತು.

ಒಬ್ಬೊಬ್ಬ ವ್ಯಕ್ತಿ ಒಂದೊಂದು ರೀತಿ ಮಾತನಾಡುತ್ತಾನೆ. ಕೆಲವರು ತಿಳಿದು ಮಾತನಾಡುತ್ತಾರೆ. ಇನ್ನೂ ಕೆಲವರು ತಿಳಿದವರಂತೆ ಮಾತನಾಡುತ್ತಾರೆ. ಕೆಲವರು ಅನುಭವದಿಂದ ಮಾತನಾಡಿದರೆ, ಇನ್ನೂ ಕೆಲವರು ಅನುಮಾನದಿಂದ ಮಾತನಾಡುತ್ತಾರೆ. ಕೆಲವರು ಮಾತನಾಡುವಾಗ ಯಾರೋ ಹೇಳಿದರು, ಎಲ್ಲೋ ಓದಿದಂತೆ, ಎಲ್ಲೋ ಕೇಳಿದಂತೆ ಎಂದು ಹೇಳಿ ಮಾತನಾಡುತ್ತಾರೆ. ಇಂತಹ ಅನವಶ್ಯಕ ಮಾತುಗಳಿಂದ ಸಮಯವೂ ವ್ಯರ್ಥ-ಕೆಲವೊಂದು ಸಂದರ್ಭಗಳಲ್ಲಿ ಸಂಬಂಧಗಳಿಗೂ ಧಕ್ಕೆ ಆಗುವ ಸಾಧ್ಯತೆಗಳು ಹೆಚ್ಚು. ಅಂತಹವರಿಗಾಗಿಯೇ ದಾಸ ಶ್ರೇಷ್ಟ ಪುರಂದರದಾಸರು ಹೇಳಿರುವುದು ಮತಿಯಿಲ್ಲದೆ ಮಾತನಾಡುವ, ಚಾಡಿ, ಸುಳ್ಳುಗಳನ್ನು ಹೆಣೆಯುವ ನಾಲಿಗೆಗೆ ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ, ಪರರ ದೂಷಿಸುವುದಕ್ಕೆ ಚಾಚಿ ಕೊಂಡಿರುವ ನಾಲಿಗೆ. ಮಾತಿನಲ್ಲಿ ಕೇವಲ ಶಭ್ಧಾರ್ಥ-ಜೀವರ್ಥಗಳನ್ನಲ್ಲದೆ ಉದ್ದೇಶಗಳನ್ನು ಸಂವೇದನೆಗಳನ್ನು ಗ್ರಹಿಸದೆ, ಪದಗಳಿಗೆ ಅರ್ಥ ಹುಡುಕುವ ಬದಲಿಗೆ ಪದಗಳ ಹಿಂದಿನ ಭಾವನೆಗಳಿಗೆ ಅರ್ಥ ಹುಡುಕಿದರೆ ಮಾತು ಸ್ವಾರಸ್ಯಕರವಾಗಿರುತ್ತದೆ, ಇಲ್ಲವೆ ಮಾತುಗಳ  ಕಠೋರತೆ ಸಾವಿನ ಮನೆಗೂ ಕರೆದೊಯ್ಯುತ್ತದೆ. ಬಂಧುಗಳೇ, ನಾವು ಸಶಕ್ತ ಸಮಾಜ ಕಟ್ಟುವ ಮತ್ತು ಸರ್ವಾಂಗೀಣ ಅಭಿವೃದ್ಧಿ ಬಯಸುವ ವಿಶಾಲವಾದ ಆಶಯ ಹೊಂದಿದ್ದೆ ಆದರೆ ನಮ್ಮ ಮಾತುಗಳು ಲಕ್ಷ ಕಂಠಗಳಲ್ಲಿ ಪ್ರತಿಧ್ವನಿಸುವಂತಿರಬೇಕು, ಹೃದಯಗಳನ್ನು ಬಡಿದೆಬ್ಬಿಸುವಂತಿರಬೇಕು. ಅಂತಹ ಪ್ರಖರ ಮಾತಿನ ವಾಗ್ಮಿಗಳು ನೀವಾಗಬೇಕು. ಎಂಬುದೇ ನನ್ನ ಆಶಯ. 

ಪ್ರತಿಯೊಂದು ಮಾತಿಗೂ ಭೂತ, ವರ್ತಮಾನ, ಭವಿಷ್ಯಗಳ ಸಂಬಂಧ ಇದ್ದೇ ಇರುತ್ತದೆ. ಪ್ರೀತಿ ತುಂಬಿದ, ಭಾವನಾಯುಕ್ತವಾದ ಮಾತುಗಳಿಂದ ಮಾತ್ರವೇ ಮನುಷ್ಯರಲ್ಲಿನ ಸಂಬಂಧಗಳನ್ನು  ಗಟ್ಟಿಗೊಳಿಸಬಹುದು. ಮಾತುಗಳು ಅರ್ಥ ತಪ್ಪಿದರೆ ಸಂಬಂಧಗಳು ಘಾಸಿಯೂ ಆಗಬಹುದು. ಮಾತುಗಳು ಭಾಂದವ್ಯವನ್ನು ಬೆಸೆಯುತ್ತದೆ ಎಂಬುದನ್ನು ಎಂದಿಗೂ ಮರೆಯುವಂತಿಲ್ಲ. ಆದರೆ ಇಂದು ಮನೆ ಮನೆಯಲ್ಲಿ ಅಕ್ಷರ ಜ್ಞಾನ ಹೆಚ್ಚಾಗಿದೆ. ಅರ್ಥ ಮಾಡಿ ಕೊಳ್ಳುವ ಮನಸ್ಥಿತಿ ಕಡಿಮೆ ಆಗಿದೆ. ಮಾತು ಮಾತಿಗೆ ನಾನೇನು ಕಡಿಮೆ ಎನ್ನುವ ಮಟ್ಟಿಗೆ ವಾದಗಳನ್ನು ನಡೆಸಿ-ವಿವಾದಗಳನ್ನು ಸೃಷ್ಟಿಸಿಕೊಂಡು ಮನೆಯಲ್ಲಿದ್ದು ಮುಖ ತಿರುಗಿಸಿಕೊಂಡು ಇರುವಂತಹವರ ಸಂಖ್ಯೆ ಹೆಚ್ಚಾಗುತ್ತಿದೆ. ನಾವು ಚಂದ್ರ-ಅಂತರಿಕ್ಷಗಳ ಜೊತೆ ಸಂಬಂಧಗಳನ್ನು ಬೆಸೆಯುವುದನ್ನು ಕಾಣುತ್ತಿದ್ದೇವೆ, ಆದರೆ ಭೂಮಿಯ  ಮೇಲಿರುವ ನಮ್ಮ ಸಂಬಂಧಗಳನ್ನು ಮರೆಯುತ್ತಿದ್ದೇವೆ. ಯಾವುದೇ ಒಂದು ಮನೆ ಗಟ್ಟಿಯಾಗಿ ಉಳಿಯಬೇಕಾದರೆ ಮೊದಲು ಬುನಾದಿ ಸದೃಢವಾಗಿರಬೇಕು.  ಹಾಗೆಯೇ ಯಾವುದೇ ಸಂಬಂಧಗಳು ಗಟ್ಟಿಯಾಗಿ ಉಳಿಯಬೇಕಾದರೆ ನಾವು ವ್ಯಕ್ತಪಡಿಸುವ ಭಾವನೆಗಳು ಶುದ್ಧವಾಗಿರಬೇಕು. ಇತ್ತೀಚಿನ ವರ್ಷಗಳಲ್ಲಿ ಕೇವಲ ಮಾತುಗಳಿಂದಲೇ ಸಾವಿರಾರು ಕುಟುಂಬಗಳಲ್ಲಿ ಒಡಕು ಮೂಡಿ ಜೀವನ ಭರ್ಬರವಾಗಿದೆ. ಎಷ್ಟೋ ಯುವ ದಂಪತಿಗಳು ಮಾತು-ಕೃತಿಗಳಗೆ ಅರ್ಥಗಳನ್ನು ಹುಡುಕುತ್ತಾ ಭಾವನೆಗಳಿಗೆ ಮಾನ್ಯತೆ ನೀಡದೆ ಧುಮ್ಮಿಕ್ಕುವ ಜಲಧಾರೆಯಂತೆ ಮಾತಾಡಿ ಮಾತಾಡಿ, ಒಂದಾಗಿ ಬಾಳಿ ಬೇಳಗಬೇಕಾದ ಮನೆಯಲ್ಲಿಯೇ ಕತ್ತಲೆಯ ಜೀವನ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಒಳ್ಳೆಯ ವಾಗ್ಮಿಗಳಾಗಿ ಸಮಾಜದ ನಾನಾ ಸ್ತರಗಳಲ್ಲಿ ಸೈ ಎನಿಸಿಕೊಂಡರೂ ಸಹ ತಮ್ಮ ಕುಟುಂಬದಲ್ಲಿ ಅಹಂಕಾರದ ಮಾತುಗಳನ್ನಾಡುವ ಮೂಲಕ ತಮ್ಮ ಜೀವನಕ್ಕೆ ತಾವೇ ಮುಳುವಾಗುತ್ತಾರೆ. ಮಾತುಗಳು ಸಂಬಂಧಗಳನ್ನು ಉಳಿಸಿ ಬೆಳೆಸುವ ಅಮೃತಧಾರೆಯಾದಾಗ ಮಾತ್ರ ನಮ್ಮ ಮಾತುಗಳಿಗೆ ವಿಶ್ವಮಾನ್ಯತೆ ಇರುತ್ತದೆ.

ಒಂದೊಂದು ಬಾರಿ ಬದುಕಿನ ಬಂಡಿ ಸಹಜವಾಗಿದ್ದರೂ ಕೃತಕವೆನಿಸತೊಡಗುತ್ತದೆ. ಮೆಚ್ಚುಗೆಯ ಮಾತಿಗೂ ಒಂದು ಅನುಮಾನ ಕಾಡುತ್ತದೆ. “ನಾವೆಲ್ಲ ಈಗ ಕಾಣುವುದಿಲ್ಲ” ಎಂದು ಕಾಡುವ ಮಾತನ್ನು ಆಗಾಗ ಸಂಗಾತಿಗಳಿಗೆ ಚುಚ್ಚುತ್ತೇವೆ, ಆದರೆ ಇಂತಹ ಚುಚ್ಚು ಮಾತುಗಳಿಂದ, ಅನುಮಾನಗಳಿಂದ, ಅವಮಾನಗಳಿಂದ ಬಾಂಧವ್ಯ ಗಟ್ಟಿಯಾಗಿ ಉಳಿಯಬಹುದೇ? ಇದು ನಂಬಿಕೆಯ ಬುನಾದಿಗೆ ಬೀಳುವ ಪೆಟ್ಟು ಅಲ್ಲವೇ? ಪ್ರತಿಸಲವು ಇಂತಹ ಅನುಮಾನ, ಅವಮಾನಗಳನ್ನು ಅನುಭವಿಸುವುದಾದರೆ ಆ ಸಾಂಗತ್ಯವೇ ಬೇಡವೆನಿಸುವ ಸಾಧ್ಯತೆಗಳಿರುತ್ತದೆ. ಅಲ್ಲವೇ? ನಮ್ಮ ಕಣ್ಣು ಚೆನ್ನಾಗಿದ್ದರೆ ಇಡೀ ಜಗತ್ತು ನಮಗೆ ಚೆನ್ನಾಗಿ ಕಾಣುತ್ತದೆ. ಅದೇ ನಮ್ಮ ನಾಲಿಗೆ ಚೆನ್ನಾಗಿದ್ದರೆ ಇಡೀ ಜಗತ್ತಿಗೆ ನಾವು ಚೆನ್ನಾಗಿ ಕಾಣುತ್ತೇವೆ. ಬೀಗಿ ಬದುಕುವುದಕ್ಕಿಂತ ಬಾಗಿ ಬದುಕಿದರೆ ಸಾರ್ಥಕ ಬದುಕು ನಮ್ಮದಾಗುತ್ತದೆ.    

ಯಾವುದೇ ಸಮಸ್ಯೆಗಳನ್ನು ನಿಭಾಯಿಸುವುದು ಕಷ್ಟವೇನಲ್ಲ. ಆದರೆ ಪರಿಹಾರದ ಮಾತುಗಳು ಆಯಾ ಸಂದರ್ಭ ಮತ್ತು ಸಂಬಂಧಗಳ ತೀವ್ರತೆಯನ್ನು ಅವಲಂಭಿಸಿರುತ್ತದೆ. ಪ್ರತಿ ಸಂಬಂಧಕ್ಕೂ ನಂಬಿಕೆಯೊಂದಿಗೆ, ಕ್ಷಮೆಯು, ಕ್ಷಮೆಯೊಡನೆ ಮರೆವು ಇರುತ್ತದೆ. ಅವಮಾನ ಅನುಮಾನಗಳು ಮೀರಿ ಬೆಳೆಯ ಬಾರದು ಅಷ್ಟೇ. ಸಂಬಂಧಗಳನ್ನು ಒಂದು ಸೂತ್ರದಿಂದ ಬಂಧಿಸಲು ಸಾಧ್ಯವಿಲ್ಲ, ಒಂದು ಚೌಕಟ್ಟಿನಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ. ಸಂಬಂಧಗಳಿಗೆ ಸಾವಿರಾರು ರೂಪ ಸಂಬಂಧಗಳ ಅಂತರಂಗವನ್ನು ತಿಳಿದು ಮಾತನಾಡಿದರೆ ಸಂಬಂಧದ ಮೌಲ್ಯ ಹೆಚ್ಚುತ್ತದೆ. ಸಂಬಂಧ ಎಂದರೆ ನಾನು ಎಂಬ ಒಂಟಿತನ ಹೋಗಲಾಡಿಸಿ, ನಾವು ಎಂಬ ಭರವಸೆಯ ಭಾವ ಮೂಡಿಸುವುದು. ನಮ್ಮ ಮನೆ, ನಮ್ಮ ಸಮಾಜ, ನಮ್ಮ ಪ್ರಪಂಚ ಸುಂದರವೆನಿಸುವುದು ನಾವು ರೂಢಿಸಿಕೊಳ್ಳುವ ನಿಜವಾದ ಸಂಬಂಧಗಳಿಂದ, ಇಂತಹ ಸಂಬಂಧಗಳು ಶಾಶ್ವತವಾಗಿ ವೃದ್ಧಿಸಲು ಪ್ರಮುಖವಾದದ್ದು ನಾವು ನುಡಿಯುವ ಮಾತುಗಳು. ನಮ್ಮ ಮಾತುಗಳು ನಮ್ಮೊಳಗೆ ವೈರತ್ವವನ್ನು ಅಥವಾ ಹತಾಶೆಯನ್ನು ಉಂಟುಮಾಡುವ ಬದಲು ಪ್ರೀತಿ ವಿಶ್ವಾಸಗಳನ್ನು ಹರಿಸುವಂತಿರಬೇಕು. ನಮ್ಮ ಸಮಸ್ಯೆಗಳ ಗಾತ್ರವು ನಮ್ಮ ಸಾಮರ್ಥ್ಯಕ್ಕೆ ಹೋಲಿಸಿದರೆ ಏನೂ ಅಲ್ಲ, ಆದರೆ, ನಾವು ನಮ್ಮ ಸಮಸ್ಯೆಗಳನ್ನು ಅಂದಾಜು ಮಾಡುವುದರಲ್ಲಿ ತಪ್ಪುತ್ತೇವೆ. ಅನ್ಯಥಾ ಮನಸ್ತಾಪಗಳಿಗೆ ನಾಂದಿ ಹಾಡುತ್ತೇವೆ. ಎರಡೇ ಎರಡು ಅಕ್ಷರಗಳ “ಮಾತು” ಜೀವನವನ್ನು ಮುಗಿಲೇತ್ತರಕ್ಕೆ ಕೊಂಡೊಯ್ಯುವ ಶಕ್ತಿ ಹೊಂದಿದೆ, ಮಾತು ಅರ್ಥ ತಪ್ಪಿದರೆ ಜೀವನಕ್ಕೆ ನೆಲೆ-ಬೆಲೆ ಇಲ್ಲದಂತೆ ಮಾಡುವ ಶಕ್ತಿಯನ್ನು ಹೊಂದಿದೆ. ನಾವು ಏನಾಗುತ್ತೇವೆಂಬುದು, ನಮ್ಮ ಮಾತುಗಳಿಂದಲೇ ಸಮಾಜಕ್ಕೆ ತಿಳಿಯುತ್ತದೆ.

ಬಂಧುಗಳೇ ಜಗತ್ತಿಗೆ ಬಂದು ಹೋಗುವ ಅತಿಥಿಗಳು ನಾವು, ಭೂಮಿಗೆ ಬಂದಾಗ ಗುರುತಿಸುವವರು ಯಾರೂ ಇಲ್ಲ. ಭೂಮಿಯನ್ನು ಬಿಟ್ಟಾಗ ವಿಶ್ವ ನಮ್ಮನ್ನು ಗುರುತಿಸುವಂತಹ ಸಾಧನೆಯನ್ನು ಮಾಡಿ ಹೋಗಬೇಕಾದ್ದು ನಮ್ಮ ಕರ್ತವ್ಯ, ಬನ್ನಿ ಅನಾವಶ್ಯಕವಾದ, ಬೇಜವಾಬ್ದಾರಿಯುತ, ಅನುಮಾನದ, ಅಸಹ್ಯದ ಅನಾಗರೀಕತನದ ಮಾತುಗಳಿಗೆ ಇತಿಶ್ರೀ ಹಾಡಿ ಸುಂದರ ಬದುಕು ರೂಪಿಸುವ ಹಾಗೂ ಉಜ್ವಲ ಭವಿಷ್ಯ ನೀಡುವ ಅಮೃತಧಾರೆಯಂತಹ ಮಾತುಗಳನ್ನು ಆಡುತ್ತಾ ಮಾತಿಗೂ-ಸಂಬಂಧಗಳಿಗೂ ಅರ್ಥ ಕೊಡೋಣ.

Category:Personal Development



ProfileImg

Written by ಆರ್ ಪಿ ರವಿಶಂಕರ್

Verified

Writer, President- Karnataka Arya Vysya Mahasabha(R) Vice President - The Mysore Silk Cloth Merchants' Co-operative Bank Ltd.