ಮಾಸದ ಕಾಲ

ProfileImg
12 May '24
1 min read


image

          ಈ ಸಮಯ ಎನ್ನುವುದು ಎಷ್ಟು ಅದ್ಭುತ ಎಂದರೆ ಸಿಹಿ ನೆನಪುಗಳನ್ನು ಮರಳಿಸಬಲ್ಲದು ಜೊತೆ ಜೊತೆಗೆ ಕಹಿ ನೆನಪುಗಳನ್ನು ಮರೆಸಲೂ ಬಲ್ಲದು.

          ಅದು ಶಾಲಾ ದಿನಗಳ ಅದ್ಭುತ ಪಯಣ ಶಾಲೆಗೆ ಹೋಗಲು ಮನಸ್ಸಿಲ್ಲದಿದ್ದರೂ ಎಳೆದೊಯ್ದು ಶಾಲೆಗೆ ಬಿಟ್ಟು ಬರುತ್ತಿದ್ದ ಅಮ್ಮ.  ಬೆಳಿಗ್ಗೆ 9:30 ಕ್ಕೆ ಶಾಲೆಯ  ಪ್ರಾರ್ಥನೆ ಮುಗಿಸಿ ಶಾಲಾ ಕೊಠಡಿಯೊಳಗೆ ಹೋದರೆ ತರಗತಿಗಳನ್ನು ಮುಗಿಸಿ 4:30 ರ ಸಮಯಕ್ಕೆ ತರಗತಿಯಿಂದ ಹೊರ ಬರುತ್ತಿದ್ದೆವು. ಈ 4:30 ರ ಸಮಯ ಆದಾಗ ಗೋಡೆಗೆ ನೇತು ಹಾಕಿದ್ದ ಗಡಿಯಾರವನ್ನು ಅದೆಷ್ಟು ಬಾರಿ ನೋಡುತ್ತಿದ್ದೆವೋ....! ಸಂಜೆ  4:30 ರ  ಸಮಯ ಆದಾಗ ಶಾಲೆಯ ಗಂಟೆ ಬಾರಿಸದೆ ಹೋದರೆ ಏನೋ ಒಂದು ತಳಮಳ , ಆಕಾಶವೇ ಕಳಚಿ ನೆತ್ತಿಗೆ ಬಿದ್ದಂತೆ ಭಾಸವಾಗುತ್ತಿತ್ತು ಕಾರಣ ಸಂಜೆ ಶಾಲೆಯಿಂದ ಮನೆಗೆ ಹೋಗುತ್ತಿದ್ದಂತೆಯೇ ಗೆಳೆಯರೊಡನೆ ಸೇರಿ ಗದ್ದೆಯ ಕೆಸರಿನಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದ ಏಡಿಗಳನ್ನು ಹಿಡಿಯುವ ಸಂಭ್ರಮ ಜೊತೆಗೆ ನಮ್ಮ ಇಡೀ ಹಳ್ಳಿಯನ್ನೇ ಸುತ್ತುವ ಆನಂದ. ಹಾಗಾಗಿಯೇ 4:30ರ ಸಮಯಕ್ಕೆ ಆಗುತ್ತಿದ್ದ ಖುಷಿ ಬರೀ ಮಾತಿನಲ್ಲಿ ಹೇಳತೀರದು. ಹೀಗೆ ಸಮಯದ ಜೊತೆಗಿನ ಒಡನಾಟ ದಿನಕಳೆದಂತೆ ಜವಾಬ್ದಾರಿಗಳ ಜವಾಬ್ದಾರಿ ಹೊರಲು ಶುರು ಮಾಡಿದಾಗ ಇಂಚಿಂಚು ಕೂಡ ಸಮಯ ಪಾಠ ಹೇಳತೊಡಗಿತು. ಹೀಗೆ ಪ್ರತಿಬಾರಿ ಸಮಯದ ಪಾಠ ಕೇಳುವಾಗಲೆಲ್ಲ ಈ ಸಮಯ ಎನ್ನುವುದು ಅತೀ ಅಗತ್ಯ ಎನಿಸಲು ಶುರುವಾಯಿತು. ಹೀಗೆಯೇ  ಕಾಲ ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದೊಂದು ರೀತಿಯ ಪಾಠ ಕಲಿಸುತ್ತದೆ, ಕಲಿಯುವ ಸಹನೆ ಮತ್ತು ತಾಳ್ಮೆ ನಮ್ಮಲ್ಲಿರಬೇಕು ಅಷ್ಟೇ. ಎದೆಯಲ್ಲಿಯೇ ಮುಳ್ಳಿದ್ದರೂ ಕಾಲವನ್ನು ತಿಳಿಸುತ್ತಾ ಗಡಿಯಾರ  ಪ್ರತಿಯೊಬ್ಬರ ಪಾಲಿಗೆ ಗುರುವಾಗಿದೆ.

Category:Literature



ProfileImg

Written by Param Sahitya

Writer, Poet