ಅಮ್ಮನ ಉರಿನೋಟ, ಜೀವನ ಪಾಠ

ProfileImg
01 Apr '24
4 min read


image

ಅಂಗಳದ ತುದಿಯಲ್ಲಿ ಇಬ್ಬರು ಯಾರೋ ಬರುವುದನ್ನು ನೋಡಿ ಹೌಹಾರಿದರು ಕೌಸಲ್ಯ. ಹೊತ್ತು ಕಂತುವ ಸಮಯ.ಮಬ್ಬುಗತ್ತಲು.
ಅವರು ಹತ್ತಿರ ಬರುತ್ತಿದ್ದಂತೆ ತನ್ನ ದೊಡ್ಡಪ್ಪನ ಮಕ್ಕಳು ಎಂದು ಗೊತ್ತಾಯಿತು ಕೌಸಲ್ಯಾಳಿಗೆ ಒಟ್ಟಿಗೇ ದಿಗಿಲೂ ಆಯಿತು. ಕಾರಣ ಮನೆಯಲ್ಲಿ  ಅಕ್ಕಿಯ ಕೊರತೆ. 
ಕೌಸಲ್ಯಳಿಗೆ ಐದು ಜನ ಮಕ್ಕಳು. ಗಂಡ ದೂರದಲ್ಲಿ ಒಬ್ಬ ಶ್ರೀಮಂತರ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ವಾರಕ್ಕೊಮ್ಮೆ ಬರುತ್ತಿದ್ದ. ಮನೆಯಲ್ಲಿ ಕರೆಯುವ ಹಸು , ಸಣ್ಣ ಹಿತ್ತಲು ಇತ್ತು. ಹಿತ್ತಲಿನಲ್ಲಿ  ತರಕಾರಿ ಬೆಳೆಸಿದ್ದು ಕೌಸಲ್ಯಾ. ಹಾಗೆ ಫಲಭರಿತವಾದ ನಾಲ್ಕು ತೆಂಗಿನ ಮರಗಳಿದ್ದವು. 
ಆಕೆಯ ದುರಾದೃಷ್ಟಕ್ಕೆ ಮನೆಯಲ್ಲಿ ಅಕ್ಕಿ ಸ್ವಲ್ಪವೇ ಇತ್ತು. ಅವಳದ್ದು ಕೊಡುಗೈ. ಊಟ ಉಪಚಾರಕ್ಕೆ ಪ್ರಸಿದ್ಧ. ಚೊಕ್ಕವಾಗಿ ಸಂಸಾರ ಸಾಗಿಸುತ್ತಿದ್ದಳು.  ನಾವು ಬರುತ್ತಿದ್ದೇವೆ ಎಂದು ತಿಳಿಸಲು ಅದು ಈಗಿನ ಕಾಲ ಅಲ್ಲ. ನೆಂಟರು ಬಂದಾಗಲೇ ತಿಳಿಯುವುದು. ಕೌಸಲ್ಯ ನೆಂಟರು ಬಂದಾಗಲೆಲ್ಲಾ ಮಾಡುತ್ತಿದ್ದ ಸಿಹಿ ಎಂದರೆ ಪಾಯಸ. ಮಕ್ಕಳಿಗೂ ಗೊತ್ತು ನೆಂಟರು ಬಂದರೆ ತಮಗೆ ಪಾಯಸ ಸಿಗುತ್ತದೆ ಅಂತ. ಆದರೆ ಕೌಸಲ್ಯಾಳಿಗೆ ಮಾತ್ರ ಈ ದಿನ ಪೇಚಾಟಕ್ಕಿಟ್ಟುಕೊಂಡಿತು. ಮನೆಯಲ್ಲಿ ಅಕ್ಕಿ ಹೊರತು ಬೆರೆ ಬೇಳೆ ಕಾಳುಗಳಿಲ್ಲ. ಗಂಡ ಬಾರದೆ ಎರಡು ವಾರವಾಯಿತು. ಪಾಪ ಆತನಿಗೆ ತುಂಬಾ ಕೆಲಸ.ಒಮ್ಮೆ ಆತನ ಮೇಲೆ ಸಿಟ್ಟು ಬಂದರೂ ಆತನೂ ಕಷ್ಟಪಡುತ್ತಿದ್ದಾನಲ್ಲಾ ಅಂತ ಯೋಚಿಸಿ ಬೇಸರ ಪಟ್ಟುಕೊಂಡಳು.
ಕೌಸಲ್ಯ ಬಂದ ನೆಂಟರನ್ನು ವಿಚಾರಿಸಿ ರುಚಿಯಾದ ಕಾಫಿ ಮಾಡಿಕೊಟ್ಟಳು. ಹಾಲು ಕೊಡುವ ಹಸು ಇದ್ದುದರಿಂದ ಆಕೆಗೆ ಹಾಲಿನ ಚಿಂತೆ ಇರಲಿಲ್ಲ. 
ಹಪ್ಪಳ ಕರಿಯಲು ಎಣ್ಣೆಯೂ ಇಲ್ಲ. ಬೇಸರದಿಂದಲೇ  ಒಂದು ಸಾರು,  ತಂಬುಳಿ , ಬದನೆಕಾಯಿ ಪಲ್ಯ ಮಾಡಿದಳು.ಪಾಯಸಕ್ಕೆ ಬೇರೇನೂ ಇರಲಿಲ್ಲ. ಅನ್ನದಿಂದ ಪಾಯಸ ಮಾಡಿದರಾಯಿತು ಅಂತ ಅನ್ನಕ್ಕೆ ಬೆಲ್ಲ ಕಾಯಿಹಾಲು ಹಾಕಿ ಪಾಯಸ ಮಾಡಿದಳು. ಹಾಲು ಚೆನ್ನಾಗಿಯೇ ಬಿದ್ದು  ಪಾಯಸದ ಘಮ ಮಕ್ಕಳ ಮೂಗಿಗೆ ಅಡರಿತು. ತುಂಬಾ ದಿನಗಳಿಂದ ನೆಂಟರು ಯಾರೂ ಬಾರದಿರುವುದರಿಂದ  ಮಕ್ಕಳಿಗೆ ಪಾಯಸ ತಿನ್ನಲು ಅವಕಾಶ ಇರಲಿಲ್ಲ. ಈಗ ಪಾಯಸಕ್ಕಾಗಿ ಕಾದು ಕುಳಿತರು. ಆದರೆ ಪಾಯಸ ಮಾಡಿದುದು ಸ್ವಲ್ಪವೇ. ಹಾಗಾಗಿ ಮಕ್ಕಳನ್ನು ಕರೆದು ಗುಟ್ಟಾಗಿ " ನೋಡಿ ಮಕ್ಕಳೇ, ಪಾಯಸ ಸ್ವಲ್ಪವೇ ಇದೆ. ಅದು ಅತಿಥಿಗಳಿಗೆ . ನಿಮಗೂ ಸ್ವಲ್ಪ ಬಡಿಸುತ್ತೇನೆ. ಪುನಃ ಕೇಳಬೇಡಿ "ಅಂತ  ಸೂಚನೆ ಕೊಟ್ಟಳು.'ಹೂಂ' ಎಂದು ಮಕ್ಕಳು ಊಟಕ್ಕೆ ಕಾದು ಕುಳಿತರು.


ಹಪ್ಪಳ ಸುಟ್ಟು , ಊಟಕ್ಕೆ ಬಾಳೆ ಎಲೆ ಹಾಕಿ ನೆಂಟರನ್ನು ಕರೆದಳು. ಅದಕ್ಕಿಂತ ಮೊದಲೇ ಬಾಳೆ ಎಲೆಯ ಮುಂದೆ ಕುಳಿತಿದ್ದ ಮಕ್ಕಳನ್ನು ನೋಡಿ " ಓ ದೇವರೇ ,ಪಾಯಸ ಕೇಳಿ ಮರ್ಯಾದೆ ತೆಗೆಯದಿದ್ದರೆ ಸಾಕು"
ಎಂದು ಮನದಲ್ಲೇ ದೇವರನ್ನು ಬೇಡಿಕೊಂಡಳು.
ಊಟಕ್ಕೆ ಕುಳಿತ ನೆಂಟರು ಘಮಘಮಿಸುವ  ಸಾರು , ನೆಲ್ಲಿಕಾಯಿ ತಂಬುಳಿ , ಬಾಳೆಕಾಯಿ ಪಲ್ಯ  ಉಂಡು ,' ಅಬ್ಬಾ , ಕೌಸಲ್ಯಾ ,  ನಿನ್ನ ಕೈ ರುಚಿ  ಯಾವತ್ತೂ ಮರೆಯಲು ಸಾಧ್ಯವಿಲ್ಲ . ಅದೇನು ರುಚಿ ಈ ಸಾರಿಗೆ!"ಅಂತ ಚೆನ್ನಾಗಿ ಉಂಟುಮಾಡಿದರು. ಅನ್ನಕ್ಕೆ ಕೊರತೆಯಾದರೆ ಅಂತ ಪುಕ ಪುಕ ಆಗುತ್ತಿದ್ದರೂ ಪೆಚ್ಚು ನಗೆ ನಕ್ಕಳು ಕೌಸಲ್ಯಾ.
ಮತ್ತೆ ಪಾಯಸ ಬಂದಾಗ ಆಕೆ ನೆಂಟರಿಗೆ ಬಡಿಸಿದಳು. ಮಕ್ಕಳಿಗೆ ಸ್ವಲ್ಪ ಸ್ವಲ್ಪ ಬಡಿಸಿದಳು. ಮಕ್ಕಳೋ ಒಂದೇ ಸಲಕ್ಕೆ ಅದನ್ನು ತಿಂದು ಕೈ ನೆಕ್ಕುತ್ತಾ ಕುಳಿತರು. ನೆಂಟರು ರುಚಿಯಾದ ಪಾಯಸವನ್ನು ಚಪ್ಪರಿಸುತ್ತಾ ಸೇವಿಸಿದರೆ ಮಕ್ಕಳು ಕೈ ನೆಕ್ಕುತ್ತಾ ಕುಳಿತಿದ್ದವು.  ಏಳಲು ಮನಸಿಲ್ಲ. ಮಕ್ಕಳಲ್ಲಿ ಗುಂಡಗಿದ್ದ ಪುಟ್ಟನಿಗೆ ಯಾವಾಗಲೂ ಊಟ ಜಾಸ್ತಿ ಬೇಕು. ಅಮ್ಮ ಪಾಯಸ ಬಡಿಸುತ್ತಾರೋ ಅಂತ ಅಮ್ಮನ ಮುಖ ನೋಡಿದಾಗ ಅವಳು ಉರಿಮುಖದಿಂದ ತನ್ನನ್ನು ನೋಡಿದಳು. ಆ ಉರಿಮುಖದಲ್ಲಿ ಗೂಢಾರ್ಥ ಇತ್ತು. ಅದು ಏಳು ಅಂತ ಹೇಳುತ್ತಿತ್ತು. ನೆಂಟರೋ ಅವರ ಪಾಡಿಗೆ  ಪಾಯಸ ಸವಿಯುತ್ತಿದ್ದರು.ಪುಟ್ಟನಿಗೆ ಆಸೆ ತಡೆಯಲಿಲ್ಲ. 
ತಲೆ ತಗ್ಗಿಸಿ " ಅಮ್ಮ ನಂಗೆ"..ಅಂತ ಹೇಳುವಾಗಲೆ ಆತ ಏನು ಹೇಳುತ್ತಾನೆ ಅಂತ ಗೊತ್ತಿದ್ದೂ   ಕೌಸಲ್ಯಾ ." ಏನು ಊಟ ಆಯ್ತಾ ,ಏಳು ,ಕೈತೊಳೆ"  ಎಂದಳು.ಆತ ಅಮ್ಮನ ಮುಖ ನೋಡಲಾರ.ಯಾಕೆಂದರೆ ನೋಡಿದರೆ ಅವಳ ಉರಿಮುಖ ಎದುರಿಸಬೇಕಾಗಬಹುದು.  

 


ಯಾವ ಗೊಡವೆಯೂ ಇಲ್ಲದೆ ಊಟ ಮಾಡುತ್ತಿದ್ದ ನೆಂಟರು ತಲೆ ಎತ್ತಿ 'ಅವನಿಗೆ ಪಾಯಸ ಬೇಕೋ ಏನೋ.. ತುಂಬಾ ರುಚಿಯಾಗಿದೆ' ಎಂದಾಗ ಗಲಿಬಿಲಿಗೊಂಡ ಕೌಸಲ್ಯಾ..ಇಲ್ಲ ಅಣ್ಣ ಅವರು ಅಷ್ಟೇ ಪಾಯಸ ತಿನ್ನುವುದು. ಅವರ ಊಟ ಆಯ್ತು ಅಂತ ಹೇಳಿದಳು. ಅಲ್ಲಿ ಪಾಯಸ ಇದ್ದುದು ಅರ್ಧ ಸೌಟು.! 

ರಾತ್ರಿ ಮಲಗುವಾಗ ಪುಟ್ಟನ ಅಕ್ಕ ಪಿಸುಮಾತಿನಲ್ಲಿ , ' ಅಲ್ಲಾ ಪುಟ್ಟ, ಅಮ್ಮ  ಪಾಯಸ ಕೇಳಬಾರದು ಅಂತ ಹೇಳಿದ್ದರೂ  ಕೇಳಿದ್ದೇಕೆ? ನಿಂಗೆ ಬುದ್ಧಿ ಕಡಿಮೆ. ನೆಂಟರ ಮುಂದೆ ಅವಮಾನ ಮಾಡಬೇಕೆಂದೇ ನಿನ್ನ  ಆಸೆಯೋ?" ಅಂತ ಕೇಳಿದಾಗ ಪುಟ್ಟ," ಸ್ವಲ್ಪ ಪಾಯಸ ಇತ್ತಲ್ಲಾ, ಅದಕ್ಕೆ ಕೇಳಿದ್ದು. "  

 “ಹ್ಞೂಂ, ಆದರೆ ನೆಂಟರು ಕೇಳಿದ್ರೆ ಕೊಡಬೇಕಲ್ವಾ..ಅವರು ಕೇಳಿದಾಗ ಪಾಯಸ ಖಾಲಿ ಅಂತ ಹೇಳಲಾಗುತ್ತದೆಯೇ?” 

 ಇವರ ಗುಸುಗುಸು ಮಾತು ಕೇಳಿ ಕೌಸಲ್ಯ ಬಂದು.. “ಅದೇನದು  ಗುಟ್ಟು ? ಮಲಕ್ಕೊಳ್ಳಿ ಮಾತಾಡದೆ . ” ಅಂತ ಜೋರು ಮಾಡಿದಳು.  ನೆಂಟರಿಗೂ ಮಲಗಲು ಹಾಸಿಗೆ ಹಾಕಿ ಕೊಟ್ಟು ಮಲಗಿದಳು. ಮರುದಿನದ ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಅಂತ ಯೋಚಿಸಿ ನಿದ್ದೆ ಹೋದಳು. 

ಮರುದಿನ ಬೇಗನೆ ಎದ್ದ ಕೌಸಲ್ಯ ಹಿತ್ತಲಲ್ಲಿದ್ದ ಬಲಿತ ಬಾಳೆಕಾಯಿ ತಂದು ಬೇಯಿಸಿ ಅದರಿಂದ ಸೇಮಿಗೆ ಮಾಡಿದಳು.ಅದಕ್ಕೆ ಸಾಕಷ್ಟು ತೆಂಗಿನ ತುರಿ ಹಾಕಿ ಒಗ್ಗರಣೆ ಕೊಟ್ಟಳು.ಸೇಮಿಗೆ ರುಚಿಯಾಗಿತ್ತು.

ಬಾಳೆಕಾಯಿಯ ಸೇಮಿಗೆಯನ್ನು ಉಪಾಹಾರಕ್ಕೆ  ಕೊಟ್ಟು  ನೆಂಟರನ್ನು ಕಳಿಸಿಕೊಟ್ಟಳು ಕೌಸಲ್ಯಾ.

 ಹೋಗುವಾಗ ನೆಂಟರು" ಊಟ ತುಂಬಾ ರುಚಿಯಾಗಿತ್ತಮ್ಮ.ಎಂತಹ ಸಂದರ್ಭದಲ್ಲೂ ನೀನು ಸೋಲಲ್ಲ.  ದೇವರು ನಿಮಗೆ ಒಳ್ಳೆಯದು ಮಾಡ್ತಾನೆ . ನಿನ್ನೆ ನೀನು ಮಕ್ಕಳಲ್ಲಿ ಹೇಳಿದುದನ್ನು ಕೇಳಿಸಿಕೊಂಡೆವು". ಪರವಾಗಿಲ್ಲ, ನಿನ್ನ ಮಕ್ಕಳೂ  ವಿನಯವಂತರು, ಬುದ್ಧಿವಂತರು" ಅಂತ ಹೇಳಿ ಪುಟ್ಟನ ಕೈಗೆ ನೂರು ರೂಪಾಯಿ ಇಟ್ಟು ಹೊರಟರು.
ಕೌಸಲ್ಯಳಿಗೆ  ತಾನು ಮಕ್ಕಳಿಗೆ ಹೇಳಿದುದನ್ನು ನೆಂಟರು ಕೇಳಿಸಿಕೊಂಡರಲ್ಲಾ ಅಂತ ನಾಚಿಕೆಯಾಯಿತು.
                         ***
ಈಗ ಪುಟ್ಟ ಆಫೀಸರ್ ಆಗಿದ್ದಾನೆ. ಪಾಯಸ ಎಂದಾಗಲೆಲ್ಲಾ ಅವನಿಗೆ ಬಾಲ್ಯದ ಘಟನೆ ನೆನಪಾಗುತ್ತದೆ.ತನ್ನ ತಾಯಿಯ ಉರಿನೋಟದಲ್ಲಿ ಅಸಹಾಯಕತೆ ಇತ್ತು ಎಂಬುದನ್ನು ಆತ ತಿಳಿದುಕೊಂಡಿದ್ದಾನೆ. ಆದರೆ ಅದರಲ ಲಿ  ಜೀವನದ ಪಾಠ ಇತ್ತು.ಸಂಯಮದ ಪ್ರಾಮುಖ್ಯತೆಯ ಮನವರಿಕೆ ಇತ್ತು.

ಬಾಲ್ಯ ದಲ್ಲಿ ಅಮ್ಮನ ಕಷ್ಟದ ಅರಿವಿದ್ದರೂ  ಆಸೆಯನ್ನು ತಡೆದಿಟ್ಟುಕೊಳ್ಳುವ ಪ್ರಭುದ್ಧತೆಯಿರಲಿಲ್ಲ.ಆದರೆ ನೀತಿಯ ಒಂದು ಗಟ್ಟಿಯಾದ ತಳಹದಿ ಇತ್ತು.

ತನ್ನ ಮಕ್ಕಳಿಗೆ ಈಗ ಯಾವುದೇ ಕೊರತೆ ಇಲ್ಲ. ಅವರಿಗೆ ಪಾಯಸ ಎಂದರೆ ಅಷ್ಟಕ್ಕಷ್ಟೇ.ಅಷ್ಟೇ ಅಲ್ಲ, ಅವರು ಏನು ಕೇಳಿದರೂ ಕೊಡಿಸುವ ತಾಕತ್ತು ತನಗಿದೆ..ಆದರೆ ಆಗ ತನಗೆ ಅಮ್ಮ ಮಾಡಿ ಹಾಕುತ್ತಿದ್ದ ಅಡಿಗೆ, ಅದನ್ನು ಜೊತೆಯಾಗಿ ಕೂತು ಉಣ್ಣುವಾಗ ಸಿಗುತ್ತಿದ್ದ ಸಂತೋಷ ತನ್ನ ಮಕ್ಕಳಿಗೆ ಖಂಡಿತಾ ಸಿಗದು. ಹೀಗೆ ಯೋಚಿಸುತ್ತಾ ಆತ ಗೋಡೆಯಲ್ಲಿ  ನೇತುಹಾಕಿದ್ದ ಅಮ್ಮನ ಫೋಟೋ ನೋಡಿ ಅತ ಹನಿಗಣ್ಣಾದನು.

 


✍️ ಪರಮೇಶ್ವರಿ ಭಟ್

 

Category:Stories



ProfileImg

Written by Parameshwari Bhat

0 Followers

0 Following