ಮಿಕ್ಸಿ ಪುರಾಣ

ಲಘು ಬರಹ- ಕೋವಿಡ್‌ ಲಾಕಡೌನ್‌ ಸಮಯದಲ್ಲಿ ನಾನಾಗೇ ಮನೆಯಲ್ಲಿ ಮೆಣಸಿನ ಪುಡಿ ಚಟ್ನಿಪುಡಿಗಳನ್ನು ಮಾಡಲು ಹೊರಟಾಗ ಆದ ಎಡವಟ್ಟಿನ ಬಗೆಗಿನ ಲಘು ಬರಹ.

ProfileImg
13 Sep '23
5 min read


image

ಮದುವೆಯ ನಂತರ ಕೃಷ್ಣನೊಡನೆ(ಮನೆಯವರೊಡನೆ) ರಿಯಾದ್‌ ಸೇರಿದ ಮೇಲೆ ಪ್ರತೀ ವರ್ಷ ಮೂರರಿಂದ ನಾಲ್ಕು ಬಾರಿಯಾದರೂ ಬೆಂಗಳೂರಿಗೆ ಬಂದೂ ಹೋಗಿ ಮಾಡುತ್ತಿದ್ದೆವು. ಹಾಗೆ ಪ್ರತೀ ಸತಿ ಬಂದು ಹೋಗುವಾಗಲೂ, ದಿನ ನಿತ್ಯ ಉಪಯೋಗಿಸುವ ಸಾರಿನ ಪುಡಿ, ಸಾಂಬಾರು, ಕೂಟಿನ ಪುಡಿ, ಚಟ್ನಿ ಪುಟಿ, ಪಪ್ಪಿನಪುಡಿ, ಉಪ್ಪಿನಕಾಯಿಗಳು ಎಲ್ಲವನ್ನೂ ಬೆಂಗಳುರಿನಿಂದಲೇ ತೆಗೆದುಕೊಂಡು ಹೋಗಿಬಿಡುತ್ತಿದ್ದೆ. ಕೆಲವು ಪುಡಿಗಳನ್ನು ಅತ್ತೆಯೂ ಇನ್ನು ಕೆಲವನ್ನು ಅಮ್ಮನೂ ಮಾಡಿಕೊಟ್ಟುಬಿಡುತ್ತಿದ್ದರಿಂದ ಇದನ್ನೆಲ್ಲಾ ನಾನಾಗಿಯೇ ಒಂದು ದಿನವೂ ಇದನ್ನೆಲ್ಲಾ ಮಾಡುವ ಗೋಜಿಗೆ ಹೋಗದೆ ನೆಮ್ಮದಿಯಾಗಿದ್ದೆ. 

 

ರಿಯಾದ್‌ಗೆ ಹೋಗಿ ಬಂದು ಮಾಡುತ್ತಿದ್ದ ಮೊದಲೆರಡು ವರ್ಷಗಳಲ್ಲಿ ಆದ ಘಟನೆಯಿದು. ಬ್ಯಾಗ್‌ ಪ್ಯಾಕ್‌ ಮಾಡುತ್ತಿದ್ದಾಗ, ಜಾಗ ಸಾಲುತ್ತಿಲ್ಲವೆಂದು ಹ್ಯಾಂಡ್‌ ಬ್ಯಾಗ್‌ ಅಲ್ಲಿ, ಪಪ್ಪಿನ ಪುಡಿಯನ್ನೂ, ಚಟ್ನೀ ಪುಟಿಯನ್ನೂ ಇಟ್ಟು ಪ್ಯಾಕ್‌ ಮಾಡಿದ್ದೆ. ಸೆಕ್ಯುರಿಟಿ ಚೆಕ್‌ಇನ್‌ ಆಲ್ಲಿ ಒಬ್ಬಳು ನನ್ನ ಬ್ಯಾಗ್‌ ತೆಗಿಸಿ ನೋಡುತ್ತಾ, “ಇದನ್ನ ನೀನು ಫ್ಲೈಟ್‌ ಒಳಗೆ ತೆಗೆದುಕೊಂಡು ಹೋಗುವ ಹಾಗಿಲ್ಲ ಸೆಕ್ಯುರಿಟಿ ಥ್ರೆಟ್.” ಎಂದು ಎತ್ತಿಟ್ಟುಕೊಂಡಳು. ಅಲ್ಲ ಈ ಪಪ್ಪಿನ ಪುಡಿ, ಚಟ್ನಿ ಪುಟಿ ಇಂದ ಅದೇನು ಸೆಕ್ಯುರಿಟಿ ಥ್ರೆಟ್‌ ಆಗಲು ಸಾಧ್ಯ ಅಂತ ನಾನು ಎಷ್ಟು ವಾದ ಮಾಡಿದರೂ ಅವಳು “ಇಲ್ಲ ಇದು ನೋಡೋಕ್ಕೆ ಕೆಂಪಗಿದೆ, ಇದರಲ್ಲಿ ಚಿಲ್ಲಿ ಇದೆ ನಾನಿದನ್ನು ಬಿಡೋ ಹಾಗಿಲ್ಲ.” ಅಂದಳು. ನಾನೆಷ್ಟು ವಾದ ಮಾಡಿದರೂ ಬಗ್ಗಲಿಲ್ಲ. ನನಗೆ ಕಣ್ಣಲ್ಲಿ ನೀರು, “ವಾಟ್‌ ವಿಲ್ ಯು ಡು ವಿದ್‌ ಇಟ್?”‌ ಅಂತ ಸಿಟ್ಟಿನಿಂದ ಕೇಳಿದೆ. ನನ್ನ ಮುಂದೆಯೇ ಅದನ್ನ ಅವಳು ಡಸ್ಟ್‌ ಬಿನ್‌ಗೆ ಹಾಕುತ್ತಿದ್ದರೆ, ಈ ಪುಡಿಯನ್ನ ಮಾಡಲು ಅಮ್ಮ, ಅತ್ತೆ ಪಟ್ಟ ಕಷ್ಟ ನೆನಪಾಗಿ ಇನ್ನೂ ಸಂಕಟವಾಯಿತು.‌

 

 

 

 

 

ಅಲ್ಲೇ ನಿಂತು ಅಳುತ್ತಿದ್ದ ನನ್ನನ್ನು ಕೃಷ್ಣ, “ಆಯ್ತು ಬಾ, ಸುಮ್ಮನೆ ತಡ ಆಗತ್ತೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡ.” ಎಂದು ನನ್ನ ಅಲ್ಲಿಂದ ಎಳೆದುಕೊಂಡೇ ಹೋದ.  ಕೆಟ್ಟಮೇಲೆ ಬುದ್ದಿ ಬಂತು ಅನ್ನೋ ಹಾಗೆ ಇನ್ಯಾವತ್ತೂ ಇಂಥವುಗಳನ್ನು ಹ್ಯಾಂಡ್‌ ಬ್ಯಾಗ್‌ ಅಲ್ಲಿ ಇಟ್ಟುಕೊಂಡು ಹೋಗಲಿಲ್ಲ.

 

ಇನ್ನು ಮುಂದೆ ಹೇಳುವುದು ಕರೋನಾ ಕಾಲದ ಮಾತು. ಆಗಿನ್ನೂ ಕರೋನಾ ನಮ್ಮ ಕಡೆಗೆ ಹಬ್ಬಿರಲಿಲ್ಲ. ಯಾವತ್ತಿನ ಥರ ಮಗನಿಗೆ ಪರೀಕ್ಷೆ ಮುಗಿದ ತಕ್ಷಣ ಬೆಂಗಳೂರಿಗೆ ಹೋಗವುದೆಂದು, ಅಲ್ಲಿ ಒಂದು ಹದಿನೈದು ದಿನ ಇದ್ದು ವಾಪಾಸ್ಸು ಬರುವುದೆಂದು ಮೊದಲೇ ನಿರ್ಧಾರ ಮಾಡಿದ್ದರಿಂದ, ನನಗೂ ಅಚಿಂತ್ಯನಿಗೂ ಒಂದು ತಿಂಗಳು ಮುಂಚೆಯೇ ಫ್ಲೈಟ್‌ ಬುಕ್‌ ಮಾಡಿಯಾಗಿತ್ತು. ಬೆಂಗಳೂರಿಗೆ ಹೊರಡುವ ದಿನ ಹತ್ತಿರ ಬಂದಂತೆಲ್ಲಾ ಕರೋನಾ ಭಾರತಕ್ಕೂ ಹಬ್ಬುತ್ತಿರುವ ಸುದ್ದಿ ಬರತೊಡಗಿತ್ತು. 

 

ರಿಯಾದ್‌ನಲ್ಲಿ ಮಕ್ಕಳಿಗೆ ಕೊನೆಯ ಪರೀಕ್ಷೆಯನ್ನ ಕ್ಯಾನ್ಸೆಲ್‌ ಮಾಡಿ ಸ್ಕೂಲು ಕಾಲೇಜುಗಳಿಗೆ ಅಡ್ವಾನ್ಸ್‌ ಆಗಿ ರಾಜಾ ಘೋಶಿಸಿದ್ದರು. ಬೆಂಗಳೂರಲ್ಲೂ ಕಾರೋನಾ ಭೀತಿ ಸಣ್ಣಗೆ ಶುರುವಾಗಿತ್ತು. ಆದರೆ ಭಾರತಕ್ಕೆ ಹೋಗುತ್ತಿದ್ದ ಯಾವ ಫ್ಲೈಟ್ಸ್‌ ಅನ್ನು ಇನ್ನೂ ನಿಲ್ಲಿಸಿರಲಿಲ್ಲ. ನಾವು ರಿಯಾದ್‌ ಇಂದ ಬೆಂಗಳೂರಿಗೆ ಹೋಗಲು ಯಾವ ನಿರ್ಬಂಧವೂ ಇರಲಿಲ್ಲ.

 

ಕೃಷ್ಣ "ಸೇಫ್‌ ಇಲ್ಲ, ಈಗ ಹೋಗ್ಬೇಡ ಆಮೇಲೆ ನೋಡಣ," ಎಂದು ಆಕ್ಷೇಪ ಎತ್ತತೊಡಗಿದ್ದ. ನನಗೋ ಹೋಗಬೇಕೆಂದು ಒಂದು ಸತಿ ಮನಸು ಮಾಡಿದ ಮೇಲೆ ಹೋಗದೇ ಇರುವುದೆಂದರೆ ತುಂಬಾ ಕಷ್ಟ. ಕೊನೆಗೆ ನನ್ನ ಸೋದರತ್ತೆಯ ಮಗಳು ಡಾ.ಶುಭಾಗೆ ಫೋನ್‌ಮಾಡಿ, "ಶುಭಾ ನಾನು ಬೆಂಗಳೂರಿಗೆ ಬರಲೋ? ಬಂದರೆ ವಾಪಾಸ್ಸು ಹೋಗುವುದಕ್ಕೆ ಇನ್ಫೆಕ್ಷನ್‌ ಇಲ್ಲದಿದ್ದರೆ ಕೋವಿಡ್‌ ನೆಗೆಟಿವ್‌ ಅಂತ ಸರ್ಟಿಫಿಕೆಟ್‌ ಕೊಡಿಸಲು ಸಾಧ್ಯವ?" ಎಂದೆಲ್ಲಾ ವಿಚಾರಿಸಿಕೊಂಡೆ. ಅವಳು ಒಂದೇ ಏಟಿಗೆ, "ನೀನು ಟ್ರಾವಲ್‌ ಮಾಡದ್ರೆ ನಿಂಗೂ ಇನ್ಫೆಕ್ಷನ್‌ ಆಗತ್ತೆ. ನೀನು ಮೀಟ್‌ ಮಾಡ್ದೋರ್ಗೆಲ್ಲಾ ಇನ್ಫೆಕ್ಷನ್‌ ಹಬ್ಬತ್ತೆ. ಎಲ್ಲಿದಿಯೋ ಸುಮ್ಮನೆ ಅಲ್ಲೇ ಇರು." ಅಂತ ಖಡಾಖಂಡಿತವಾಗಿ ಹೇಳಿ ಬಿಟ್ಟಳು. ಸರಿ, ಇನ್ನು ಬೆಂಗಳೂರಿಗೆ ಹೋಗುವ ಪ್ಲಾನ್‌ಗೆ ಅಲ್ಲಿಗೆ ತಿಲಾಂಜಲಿ ಬಿಡಲಾಯಿತು.

 

ಅಷ್ಟೊತ್ತಿಗೆ ಹೋದ ಸತಿ ಊರಿನಿಂದ ಬಂದಾಗ ತಂದಿದ್ದ ಪುಡಿಗಳು, ಉಪ್ಪಿನಕಾಯಿಗಳೆಲ್ಲಾ ತಳ ಮುಟ್ಟಿದ್ದವು. ಇನ್ನೊಂದು ಸ್ವಲ್ಪ ದಿನ ಕಳೆಯಲಿ ಫ್ಲೈಟ್ಸ್‌ ಎಲ್ಲಾ ಓಪನ್‌ ಆದ ಮೇಲೆ ಕಾರ್ಗೋ ತರಿಸಿಕೊಂಡಾರಯಿತೆಂದು ಅವೆಲ್ಲವನ್ನೂ ನಾಜೂಕಾಗಿ ಬಳಸತೊಡಗಿದ್ದೆ. ಎಷ್ಟೇ ನಾಜೂಕಾಗಿ ಬಳಸಿದರೂ ತಿಂಗಳ ಕೊನೆಯ ವೇಳೆಗೆ, ಎಲ್ಲಾ ಖಾಲಿಯಾಗಿ "ಮುಂದೇನು?" ಅನ್ನೋ ಪ್ರಶ್ನೆ ಎದುರಾಯಿತು. ಅತ್ತೆಗೆ, ಅಮ್ಮನಿಗೆ ಫೋನಾಯಿಸಿದೆ. ಇಬ್ಬರೂ  "ಅದೇನ್‌ ಕಷ್ಟನಾ? ಸುಲ್ಭವಾಗ್‌ ಮಾಡ್ಬೋದು. ನೀನೇ ಮಾಡ್ಕೊ." ಎನ್ನುವ ಧಾಟಿಯಲ್ಲಿ ಒಂದಷ್ಟು ರೆಸಿಪಿಗಳನ್ನ ಪಟ ಪಟ ಎಂದು ಹೇಳಿಬಿಟ್ಟರು. ನಾನೂ ಕೂಡಾ, "ಪರ್ವಾಗಿಲ್ಲ ಮಾಡ್ಬೋದು" ಅನ್ನೋ ಧೈರ್ಯದಲ್ಲಿ ಪಾಕ ಪ್ರವೀಣೆಯಾಗುವ ಹುಮ್ಮಸ್ಸಿನಲ್ಲಿದ್ದೆ. 

 

ಆದರೆ ನನ್ನ ಹುಮ್ಮಸ್ಸಿಗೆ ತಣ್ಣೀರರೆಚಲು ಸಿದ್ಧವಾಗಿ ನಿಂತಿದ್ದಂತೆ ಕಂಡವು ಈ ಬ್ಯಾಡಗಿ ಮತ್ತು ಗುಂಟೂರು ಮೆಣಸಿನ ಕಾಯಿಗಳು. ರಿಯಾದ್ ಅಲ್ಲೂ ಅಷ್ಟೊತ್ತಿಗೆ ಸಂಪೂರ್ಣ ಲಾಕ್ಡೌನ್‌ ಆಗಿದ್ದರಿಂದ‌ ಲುಲು, ಹೈಪರ್‌ಪಾಂಡ, ಕಾರಿಫೋರ್‌, ತಮೀಮಿ, ಅಂಥಾ ಎಲ್ಲಾ ಸೂಪರ್‌ ಮಾರ್ಕೆಟ್ಟುಗಳಿಂದ ಆನ್ಲೈನ್‌ ವ್ಯವಹಾರ ಮಾಡಬೇಕಿತ್ತು. ನಾನು ಈ ಮಾರ್ಕೆಟ್ಟುಗಳ ಆಪ್‌ನಲ್ಲಿ, "ಬ್ಯಾಡ್ಗಿ ಚಿಲ್ಲಿ" "ಗುಂಟೂರ್‌ಚಿಲ್ಲಿ" ಎಂದು ಕರ್ನಾಟಕದ ಮೆಣಸಿನಕಾಯಿಯನ್ನ ಹುಡುಕುತ್ತಿದ್ದರೆ, ಅವು ಇಂಡೋನೇಷ್ಯನ್‌ ಚಿಲ್ಲಿ, ತೈವಾನ್‌ ಚಿಲ್ಲಿ ಅಂತ ಯಾವ್ಯಾವುದೋ ಮೆಣಸುಗಳನ್ನ ತೋರಿಸುತ್ತಿತ್ತು. ಮಲಯಾಳಿಗಳು ಇಟ್ಟುಕೊಂಡಿದ್ದ ಇಂಡಿಯನ್‌ ಸ್ಟೋರ್ಗಳಿಗೆ ಫೋನ್‌ಮಾಡಿ ವಿಚಾರಿಸಿದ ಕೃಷ್ಣ. "ಈಸ್ಟ್ರನ್‌ ಬ್ರಾಂಡ್‌ನ ಚಿಲ್ಲಿ ಬಿಟ್ಟರೆ ಬೇರೆ ಯಾವ ಚಿಲ್ಲಿಯೂ ಇಲ್ಲ.” ಎಂದು ಅವರೂ ಕೈ ಚಲ್ಲಿದರು. ನಮಗೆ ತಿಳಿದಿದ್ದ ಎಲ್ಲಾ ಜಾಗಗಳಲ್ಲಿ ವಿಚಾರಿಸಿ ಹುಡುಕಿ ತಡಕಾಡಿದರೂ, ಬ್ಯಾಡಗಿ ಆಗಲೀ, ಗುಂಟೂರು ಮೆಣಸಿನಕಾಯಿಯದಾಗಲೀ ಎಲ್ಲೂ ಸುಳಿವಿರಲಿಲ್ಲ.

 

ಅದಿಲ್ಲದೆ ಈ ಪುಡಿಗಳನ್ನ ಮಾಡೋದು ಹೇಗೆ? ಕೃಷ್ಣ ಮಾತ್ರ ಆರಾಮಾಗಿ, "ಒಂದ್‌ ಸ್ವಲ್ಪ ಚಿಲ್ಲಿ ಪೌಡರ್‌ ಹಾಕ್‌ ಮಾಡು. ಏನ್‌ ತುಂಬಾ ಡಿಫ್ರೆನ್ಸ್‌ ಆಗ್ಬಿಡತ್ತೆ." ಅಂದ. ಆಗ ನನಗೆ, “ಗೇಮ್‌ ಆಫ್‌ ಥ್ರೋನ್ಸ್‌ʼ ಅಲ್ಲಿ ಬರೋ ಎಗ್ರಿಟ್‌ ಅನ್ನೋ ಹುಡುಗಿ ಹೇಳೋ ಥರ, "ಯು ನೋ ನಥಿಂಗ್‌ ಜಾನ್‌ ಸ್ನೋ!" ಅನ್ನೋಣ ಅನ್ನಿಸಿತ್ತು. ಕೃಷ್ಣನಿಗೂ ಅಡುಗೆ ಮನೆಗೂ ಎಷ್ಟು ಹತ್ತಿದರ ಸಂಬಂಧವೆಂದರೆ ಗೋಕಲಾಷ್ಟಮಿಗೂ ಇಮಾಮ್‌ ಸಾಬಿಗೂ ಇರುವಷ್ಟು ಹತ್ತಿರದ್ದು. ಇದು ಇವನ ಜೊತೆ ಚರ್ಚಿಸೋ ವಿಶಯವಲ್ಲವೆಂದು ಮತ್ತೆ ಅಮ್ಮನಿಗೆ ಫೋನಾಯಿಸಿದೆ. ಅಮ್ಮನಿಗೂ ಏನು ಮಾಡಬೇಕೆಂದು ತಿಳಿಯಲಿಲ್ಲ. ಕೊನೆಗೆ "ಅಲ್ಲಿ ಸಿಗೋ ಮೆಣಸಿನಕಾಯಿಯನ್ನೇ ಉಪಯೋಗಿಸಿ ಸ್ವಲ್ಪ ಪುಡಿ ಮಾಡಿ ನೋಡು." ಅಂದರು. 

ಅದಕ್ಕೇ ʼಈಸ್ಟರ್ನ್‌ ಚಿಲ್ಲಿʼಯನ್ನೇ ತರಿಸಿದೆವು. ಮೊದಲು ಚಟ್ನಿ ಪುಡಿ ಮಾಡೋದೆಂದು, ಎಲ್ಲಾ ಬೇಳೆಗಳನ್ನ, ಮೆಣಸಿನಕಾಯಿಯನ್ನ ಹುರಿದುಕೊಂಡು, ಮಿಕ್ಸಿಗೆ ಹಾಕಿ ಟರ್‌ರ್‌ ಅನ್ನಿಸಿದೆ... ಒಂದೆರೆಡು ನಿಮಿಷ ಸುತ್ತಿದ ಮಿಕ್ಸಿ ಇದ್ದಕ್ಕಿದ್ದ ಹಾಗೆ ನಿಂತು ಹೋಗಿಬಿಡೋದೆ? ನನಗೆ ಝಂಗಾಬಲವೇ ಉಡುಗಿ ಹೋಯಿತು. “ಅಯ್ಯೋ ಈ ಮಿಕ್ಸಿ ಬೇರೆ ಹಾಳಾಗಿ ಕೂತರೆ ಒಂದು ಚಟ್ನಿ ಮಾಡೋಕ್ಕೂ ಗತಿ ಇಲ್ಲದ ಹಾಗೆ ಆಗಿ ಹೋಗುತ್ತದಲ್ಲ! ಎಂದು ಚಿಂಚೆಂತೆಯಾಗಿ ಪಕ್ಕದಲ್ಲಿದ್ದ ವೆಂಕಟರಮಣನ ಫೋಟೋಗೆ “ಮಿಕ್ಸಿ ಕಾಪಾಡಿಬಿಡಪ್ಪ” ಎಂದು ಕೈ ಕೈ ಮುಗಿದೆ. 

 

ಮಿಕ್ಸಿ ಹೀಟ್‌ ಆಗಿರಬೇಕು, ಒಂದು ಗಂಟೆ ಬಿಟ್ಟು ಮತ್ತೆ ಟ್ರೈ ಮಾಡಿ ನೋಡೋಣ ಅಂತ ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಪ್ರಯತ್ನಿಸಿದೆ. ಈ ಹಾಳದ ಮಿಕ್ಸಿ, ನನಗೂ ನಿನಗೂ ಸಂಭಂಧವೇ ಇಲ್ಲ ಅನ್ನೋ ಥರ ಮುನಿಸಿಕೊಂಡು ಕೂತು ಬಿಟ್ಟಿತ್ತು. ಇನ್ನು ಇದನ್ನ ರಿಪೇರಿ ಮಾಡಿಸದೆ ಬೇರೆ ದಾರಿ ಇರಲಿಲ್ಲ. ಮಿಕ್ಸಿ ರಿಪೇರಿ ಮಾಡಿಸಿಕೊಳ್ಳಲು ಇಡೀ ರಿಯಾದ್‌ ನಲ್ಲಿದ್ದದ್ದು ಎರೆಡೋ ಮೂರೋ ಅಂಗಡಿಗಳು ಮಾತ್ರ. ಲಾಕ್ಡೌನ್‌ ಇಲ್ಲದ ಕೆಲವು ಘಂಟೆಗಳಲ್ಲಿ ಕೃಷ್ಣ ಹೋಗಿ ಮಿಕ್ಸಿ ರಿಪೇರಿ ಮಾಡಿಸಿಕೊಂಡು ಬಂದ. 

ನಾನು ಹಿಂದಿನ ದಿನವೇ ಹುರಿದಿಟ್ಟಿದ್ದ, ಅರ್ಧಂಬರ್ಧ ಪುಡಿಯಾಗಿದ್ದ, ಪುಡಿಯನ್ನೇ ಹೊಸದಾಗಿ ರಿಪೇರಿಯಾಗಿ ಬಂದ ಮಿಕ್ಸಿಗೆ ಹಾಕಿ ಬಟನ್‌ ಪ್ರೆಸ್‌ ಮಾಡಿದೆ, ಮೆಲ್ಲಗೆ ತಿರುಗಲು ಶುರು ಮಾಡಿದ್ದ ಮಿಕ್ಸಿ ಇದ್ದಕ್ಕಿದ್ದ ಹಾಗೆ ಭೂಮಿ ನಡುಗುವ ಹಾಗೆ ಸದ್ದು ಮಾಡತೊಡಗಿತು. ನಾನು ಹೆದರಿ ಅದನ್ನ ಆಫ್‌ ಮಾಡಲು ಕೈ ಎತ್ತುವ ಹೊತ್ತಿಗೆ ನನಗೆ ಆ ಕಷ್ಟವೇ ಬೇಡವೆಂದು ತಾನೇ ಆಫ್‌ ಆಗಿ ಕೂತಿತ್ತು. ಏನಾಯಿತೆಂದು ಮುಚ್ಚಳ ತಗೆದು ನೋಡಿದರೆ ತಿರುಗುವ ಬ್ಲೇಡ್‌ ಎರೆಡು ತುಂಡಾಗಿ ಕೂತಿದೆ.

 

ಇನ್ನು ಇದನ್ನ ಸರಿ ಮಾಡಿಸುವ ಯೋಚನೆಯನ್ನ ಕೈ ಬಿಟ್ಟೆ. ಬೇರೆ ಮಿಕ್ಸಿ ತಗೆದುಕೊಳ್ಳಬೇಕು. ಆದರೆ ಹಾಗೇ ತೆಗೆದುಕೊಳ್ಳು ಸಾಧ್ಯವೇ? ಈ ಮಿಕ್ಸಿ ಯಾಕೆ ಕೈ ಕೊಟ್ಟಿತು, ಮುಂದೆ ಯಾವ ಥರದ್ದು ತೆಗೆದುಕೊಳ್ಳಬೇಕು, ಯಾವುದಕ್ಕೆ ಹೆಚ್ಚು ಡಿಸ್ಕೌಂಟ್‌ ಇದೆ, ಇಂಡಿಯನ್‌ ಮೇಡ್‌ ತೊಗೊಳೊದೋ, ಇಲ್ಲೀದೇ ತೊಗೋಳೋದೋ, ಇತ್ಯಾದಿ ಇತ್ಯಾದಿಗಳನ್ನ ನೋಡಬೇಡವೇ? ಜೊತೆಗೆ ಹೊಸದೇ ತೆಗೆದುಕೊಳ್ಳುವುದಾದರೆ, ಅದಕ್ಕೆಲ್ಲಾ ಆನ್ಲೈನ್‌ ರಿವ್ಯೂ ನೋಡಬೇಕು, ಸ್ನೇಹಿತರ ಸಲಹೆ ಬೇಕು ಇದಕ್ಕೆಲ್ಲಾ ಕಮ್ಮಿ ಎಂದರೂ ಒಂದು ಮೂರು ನಾಲ್ಕು ದಿನವಾದರೂ ಸಮಯ ಬೇಕಿತ್ತು.

 

ನಾವು ಇದ್ದಿದ್ದು ಸಹಾರ ಟವರ್ಸ್‌ ಅನ್ನೋ ಒಂದು ಕಾಂಪೌಂಡ್‌ ಅಲ್ಲಿ, ಕಾಂಪೌಂಡ್‌ ಅಂದರೆ ಇಲ್ಲಿನ ಗೇಟೆಡ್‌ ಕಮ್ಯುನಿಟಿಗಳ ಥರ. ನಾವು ಐದನೇ ಬಿಲ್ಡಿಂಗ್‌ನಲ್ಲಿದ್ದೆವು, ನಮ್ಮ ಪಕ್ಕದ ನಾಲ್ಕನೇ ಬಿಲ್ಡಿಂಗ್‌ನ, ಗ್ರೌಂಡ್‌ ಫ್ಲೋರ್ನಲ್ಲಿ ತಮಿಳುನಾಡಿನ ವೇಲು, ಚಿತ್ರ ಮತ್ತವರ ಮಕ್ಕಳಿದ್ದರು. ಚಿತ್ರ ನನಗೆ ಒಳ್ಳೆಯ ಸ್ನೇಹಿತೆಯಾದ್ದರಿಂದ, ಅವರ ಹತ್ತಿರ ನನ್ನ ಮಿಕ್ಸಿ ಗೋಳನ್ನ ತೋಡಿಕೊಂಡೆ. 

 

ಅವರು ನಗುತ್ತಾ, "ಇದಕ್ಕೆಲ್ಲಾ ಇವೊಳೊ ಸ್ಯಾಡ್‌ ಫೀಲ್‌ ಪಣ್ಣಾ ಎಪ್ಪಡಿ?" ಅಂತ ಇನ್ನೂ ಏನೇನೋ ತಮಿಳಿನಲ್ಲಿ ಸಮಾಧಾನ ಮಾಡಿ, ಕೈಗೊಂದು ಕಾಫಿ ಕೊಟ್ಟು, "ವೇಯ್ಟ್‌ ಐ ವಿಲ್‌ ಕಮ್‌!" ಅಂತ ರೂಮ್‌ ಒಳಗೆ ಹೋದರು. ಅಲ್ಲಿ ಅವರು ಏನೋ ಹುಡುಕುತ್ತಿರುವ ಸದ್ದು, ಕೊನೆಗೆ ಆ ಹುಡುಕೋ ಶಬ್ಧ ನಿಂತು, ಅವರೇ ಲಿವಿಂಗ್‌ ರೂಮ್ಗೆ ಕೈಯಲ್ಲೊಂದು ಮಿಕ್ಸಿ ಹಿಡಿದುಕೊಂಡು ಬಂದು ಬಿಡೋದೇ?

 

ನನಗೆ ಪರಮಾಶ್ಚರ್ಯ. ಬಿಳೀ ಬಣ್ಣದ ಮಿಕ್ಸಿ. ಆ ಮಿಕ್ಸಿಯ ಮಧ್ಯದಲ್ಲೊಂದು ಮುದ್ದಾದ ಮುಖ, ನೀಟಾಗಿ ಕೆಂಪು ಅಲ್ಲ ಮರೂನ್ ಬಣ್ಣದ ಸೀರೆ ಉಟ್ಟು, ಸರಗು ಹೊದ್ದುಕೊಂಡ, ಕುಂಕುಮವಿಟ್ಟ ಬೆಳ್ಳಗಿನ ದುಂಡು ಮುಖದ ಚಿತ್ರ. ಯಾರೇ ಆ ಚಿತ್ರ ನೋಡಿದರೂ, ಅವರ ಆ ಚಿತ್ರದ ಬಗ್ಗೆ ಗೌರವ ಮೂಡುವಂತೆ ಮಾಡಬಲ್ಲ "ಅಮ್ಮ"ನ ಮುಖ. ಜಯಲಲಿತಾ ಅಮ್ಮನ ಮುಖ. ನಾನು ಚಿತ್ರಾ ಕಡೆ ನೋಡಿದೆ. ಅವರು ನಗುತ್ತಾ, "ನನ್ನ ಹತ್ತಿರ ಇನ್ನೊಂದು ಮಿಕ್ಸಿ ಇತ್ತು. ಈಗಿರೋದು ಹಾಳಾದರೆ ಇದನ್ನ ಉಪಯೋಗಿಸೋಣ ಅಂತ ಇಟ್ಕೊಂಡಿದ್ದೆ. ಇದನ್ನ ತೊಗೊಂಡು ಹೋಗಿ. ನೀವೇ ಇಟ್ಕೊಳಿ. ಎಲ್ಲಾ ಪುಡಿಗಳನ್ನು ಮಾಡಿ." ಅಂದರು. 

 

ನನಗೆ ತುಂಬಾ ಸಂಕೋಚವಾಯಿತು. "ಇಲ್ಲಾ ಚಿತ್ರಾ, ಬೇಡ. ನಾನು ಹೊಸಾದನ್ನೇ ತೊಗೋತಿನಿ." ಅಂದೆ. ಅವರು ಬಲವಂತ ಮಾಡುತ್ತಾ, "ನೀವು ಮಾಡುವ ಪುಡಿಗಳಲ್ಲೆಲ್ಲಾ ಒಂದೊಂದು ಚೂರು ಕೊಡಿ, ಆಯ್ತಾ." ಎಂದು ನನ್ನ ಕೈಗದನ್ನ ಒಪ್ಪಿಸುತ್ತಾ, "ಇದು ಹೇಗಿದೆಯೋ ಗೊತ್ತಿಲ್ಲ. ಯಾಕಂದ್ರೆ, ಎರಡನೇ ಸತಿ ಎಲೆಕ್ಷನ್ ಟೈಮಲ್ಲಿ ಕೊಟ್ಟಿದ್ದು ಇದು. ಅಷ್ಟು ಚನ್ನಾಗಿಲ್ಲ ಅಂತಾರೆ. ನಾನು ಬಳಸೋದು ನೋಡಿ, ಅದು ಮೊದಲನೇ ಎಲೆಕ್ಷನ್‌ಅಲ್ಲಿ ಸಿಕ್ಕಿದ್ದು. ಕ್ವಾಲಿಟಿ ತುಂಬಾ ಚನ್ನಾಗಿದೆ." ಎಂದರು. 

 

ಅಷ್ಟು ದಿನಗಳಿಂದ ನೆರೆಮನೆಯವರಾಗಿದ್ದರೂ ನಾನು ಚಿತ್ರಾ ಮನೆಯ ಮಿಕ್ಸಿ ಮತ್ತು ಗ್ರೈಂಡರ್‌ ಅನ್ನ ಗಮನಿಸಿಯೇ ಇರಲಿಲ್ಲ. ಅವೆರೆಡೂ ಅಮ್ಮಾ ಬ್ರಾಂಡ್‌ದೇ ಅಗಿದ್ದವು. ಬಿಳೀ ಬಣ್ಣದ ಮಿಕ್ಸಿ, ಮರೂನ್‌ ಬಣ್ಣದ ವೆಟ್‌ ಗ್ರೈಂಡರ್.‌ ಎರಡರ ಮೇಲೂ ಅಮ್ಮನ ಚಿತ್ರ. ಜಯಲಲಿತಾ ತೀರಿಕೊಂಡು ಎಷ್ಟು ವರ್ಷವಾದರೂ ಅವರು ಕೊಡಿಸಿದ ಮಿಕ್ಸಿ ಗ್ರೈಂಡರ್‌ ದೆಸೆಯಿಂದ ತಮಿಳುನಾಡಿನ ಅದೆಷ್ಟೋ ಮನೆಗಳಲ್ಲಿ ಇವತ್ತಿಗೂ ಇಡ್ಲಿ ದೋಸೆ ಚಟ್ನಿಗಳು ಆಗುತ್ತಿವೆಯೋ.

 

ನಾನು ಕಾಫಿ ಕುಡಿದು ಚಿತ್ರಾ ಕೊಟ್ಟ ಆ ಮಿಕ್ಸಿಯನ್ನ ಮನೆಗೆ ತೆಗೆದುಕೊಂಡು ಹೋದೆ. 

 

Category:Food and Cooking



ProfileImg

Written by Siri Hulikal