Do you have a passion for writing?Join Ayra as a Writertoday and start earning.

ದೇವತೆ

ProfileImg
22 Apr '24
6 min read


image

" ಕೊನೆಯ ಕಾಲದಲ್ಲಿ ನಾನು ಇನ್ನೊಬ್ಬರ ಹಂಗಿನಲ್ಲಿ ಬದುಕಬೇಕು ಅಂತೀಯ ನೀನು...ಏನು ಮಾಡೋದು ನನ್ನ ಹಣೆಬರಹವೇ ಇಷ್ಟು..."
ಎತ್ತಲೋ ನೋಡಿ ಅಮ್ಮ ಗದ್ಗದಿತಳಾಗಿ ನುಡಿದಾಗ ಹಿತೇಶ ಕಸಿವಿಸಿಗೊಳಗಾದ.
" ಹಂಗು ಅಂತ ಯಾಕೆ ಭಾವಿಸ್ತಿ ಅಮ್ಮ ನೀನು...? ನೀನಿರೋದು ನಿನ್ನ ಮಗಳ ಮನೇಲಿ  ತಾನೇ..?"
" ಮಗಳೇನೋ ನಮ್ಮವಳು ಸರಿ..ಆದರೆ ನಾಗರಾಜ....?ಅವನು ಎಷ್ಟಾದ್ರೂ ಅಳಿಯ...ಅವನು ನಮ್ಮವನಾಗಲು ಸಾಧ್ಯವೇ..?"
" ಯಾಕೆ ಹಾಗಂತಿ? ನಮ್ಮವನು ಅಂತ ಭಾವಿಸಿದ್ರೆ ನಮ್ಮವನು..ಇಲ್ಲದಿದ್ರೆ ಅಲ್ಲ...ಎಲ್ಲ ನಾವು ಯೋಚಿಸೋ ರೀತಿಯಲ್ಲಿರುತ್ತೆ ಅಲ್ವ‌....?"
" ನೀನೇನೋ ಸುಲಭವಾಗಿ ಹೇಳ್ತಿ ಹಿತೇಶ...ಆದರೆ ಅಲ್ಲಿ  ನಾನು ಪ್ರತಿಕ್ಷಣವೂ ಅವರೇನು ಅನ್ತಾರೋ ಇವರೇನು ಅನ್ತಾರೋ ಅಂತ ಮೈಯೆಲ್ಲ ಹಿಡಿಯಾಗಿಯೇ ಬದುಕಬೇಕು...ನನ್ನದೆನ್ನುವ ಸ್ವಾತಂತ್ರ್ಯ ನಂಗೆ ಅಲ್ಲಿ ಕಿಂಚಿತ್ತಾದರೂ ಇರುತ್ತಾ ಹೇಳು...ಈ ವಯಸ್ಸಿನಲ್ಲೂ ನಾನು ಇನ್ನೊಬ್ಬರಿಗೆ ಅಂಜಿಕೊಂಡೇ ಬದುಕಬೇಕು......"

ಹೌದಲ್ಲ...! ಮಗಳ ಮನೆಯಲ್ಲಿ ಬದುಕುವುದು ಒಂದು ರೀತಿಯ ಹಂಗೇ...ತುಂಬಾ ಸ್ವಾಭಿಮಾನಿಯಾದ ಅಮ್ಮನಿಗಂತೂ ಅದು ಅಸಾಧ್ಯವೇ ಸರಿ...ಹಾಗಾದರೆ ತಾನೇನು ಮಾಡಲಿ..?
" ನೀನು ಮದುವೆಯಾಗಿ ಸುನೀತಾಳನ್ನು ನಿನ್ನ ಜೊತೆ ವಿದೇಶಕ್ಕೆ ಕರೆದುಕೊಂಡು ಹೋಗುವುದಾದರೆ ಮಾತ್ರ ಮಾತುಕತೆ ಮುಂದುವರಿಸುವ. ಇಲ್ಲದಿದ್ರೆ ಅವಳನ್ನು ಮದುವೆಯಾಗೋ ಆಲೋಚನೆಯನ್ನೇ ಬಿಟ್ಟುಬಿಡು.."
ಸುನೀತಾಳ ಸೋದರಮಾವ ಖಡಾಖಡಿಯಾಗಿ ಹೇಳಿದ್ದರು..ಆದರೆ ಸುನೀತಾಳನ್ನು ನೋಡಿದ ಅನಂತರ ಹಿತೇಶ ಇವಳೇ ತನ್ನ ಮಡದಿಯಾಗಬೇಕಾದವಳು ಎಂದು ದೃಢವಾಗಿ ನಿರ್ಧರಿಸಿಬಿಟ್ಟಿದ್ದ..ಅವಳ ನಡೆನುಡಿ ಅವನಿಗೆ ಬಹಳ ಆಪ್ಯಾಯಮಾನವೆನಿಸಿತ್ತು...ಅವಳ ರೂಪು ಲಾಣ್ಯ ಅವನನ್ನು ಇನ್ನಿಲ್ಲದಂತೆ ಸೆಳೆದಿತ್ತು. ಅವಳು ತನ್ನನ್ನು ಮದುವೆಯಾಗಲು ಒಪ್ಪಿದರೆ ಅದು ತನ್ನ ಭಾಗ್ಯವೇ ಸರಿ ಎಂದು ಭಾವಿಸಿದ್ದ..ದುಂಡಗಿನ ಮುಖ...ಎಣ್ಣೆಗಪ್ಪಿನ ಮೈ ಬಣ್ಣ..ಮುಖದಲ್ಲಿ ಮೂಡುವ ಮೋಹಕ ಮುಗುಳ್ನಗು ...ಎಲ್ಲವೂ ತನಗಾಗಿಯೇ ಸೃಷ್ಟಿಯಾಗಿದೆಯೆನಿಸಿತ್ತು ಹಿತೇಶನಿಗೆ. ಅವಳ ಸಂಬಂಧಿಕರ ಪರಿಚಯವಿದ್ದುದರಿಂದ ಅವರ ಮೂಲಕ ಅವಳನ್ನು ಮದುವೆಯಾಗುವ ಪ್ರಸ್ತಾಪ ಇರಿಸಿದ್ದ..ಅವರ ಕಡೆಯಿಂದ ಒಪ್ಪಿಗೆಯೇನೋ ದೊರೆತಿತ್ತು...ಆದರೆ ಒಂದೇ ಒಂದು ಕಂಡೀಷನ್‌....ಮದುವೆಯ ನಂತ್ರ ಅವಳನ್ನೂ ವಿದೇಶಕ್ಕೆ ಕರೆದೊಯ್ಯುವುದಾದರೆ ಮಾತ್ರ....!!!
ಹಿತೇಶನಿಗೆ ಬಿಸಿತುಪ್ಪ ಬಾಯಲ್ಲಿಟ್ಟ ಅನುಭವ....!ನುಂಗುವ ಹಾಗಿಲ್ಲ...ಉಗುಳಲು ಮನಸ್ಸಿಲ್ಲ....!
ಮದುವೆಯ ನಂತ್ರ ಅವಳನ್ನೇನೋ ತನ್ನ ಜೊತೆ ಕರೆದುಕೊಂಡು ಹೋಗಬಹುದು..ಅಲ್ಲಿಯ ಖರ್ಚುವೆಚ್ಚಗಳನ್ನೂ ಹೇಗಾದರೂ ನಿಭಾಯಿಸಬಹುದು...ಆದರೆ ಅಮ್ಮ....!? ಅಮ್ಮ ಇಲ್ಲಿ ಒಂಟಿಯಾಗುತ್ತಾರಲ್ಲ.....ಇಷ್ಟೊಂದು ದೊಡ್ಡ ಮನೆಯಲ್ಲಿ ತನ್ನವರೆನ್ನುವ ಒಂದೇ ಒಂದು ಜೀವವಿಲ್ಲದೆ ತೀರಾ ಒಂಟಿಯಾಗಿ ಅಮ್ಮನಿಗಿಲ್ಲಿ ಬದುಕಲು ಸಾಧ್ಯವೇ..? ಅಪ್ಪನಾದರೂ ಇರುತ್ತಿದ್ದರೆ....!
ಅಕಾಲದಲ್ಲಿಯೇ ಅಪ್ಪನನ್ನು ಕಳೆದುಕೊಂಡ ಹಿತೇಶ ಮತ್ತು ಲಕ್ಷ್ಮಿಗೆ ಅಮ್ಮನೇ ಎಲ್ಲವೂ ಆಗಿದ್ದರು...ಇದ್ದ ಅಲ್ಪ ಸ್ವಲ್ಪ ಜಮೀನಿನಲ್ಲಿಯೇ ಹೇಗೋ ಮಕ್ಕಳನ್ನು ಓದಿಸಿದ್ದರು. ಅವರ ಓದಿಗೆ ಅವರು ಪಡಬಾರದ ಕಷ್ಟವಿರಲಿಲ್ಲ....ಓದಿನಲ್ಲಿ ಜಾಣನಾಗಿದ್ದ ಹಿತೇಶನಿಗೆ ಓದಿನ ನಂತರ ತಕ್ಷಣವೇ ವಿದೇಶದಲ್ಲಿ ಅತ್ಯುತ್ತಮವೆನಿಸುವ ಉದ್ಯೋಗವೂ ದೊರೆತಿತ್ತು...ಆಕರ್ಷಕ ವೇತನದ ಜೊತೆಗೆ ಉತ್ತಮ ಸವಲತ್ತುಗಳೂ ಇದ್ದವು..ಅವನು ತನ್ನ ತಂಗಿಗೆ ಹೆಚ್ಚಿನ ಓದನ್ನೂ ಮುಂದುವರಿಸಲು ಸಹಕರಿಸಿದ್ದ....

ಇಬ್ಬರದೂ ಈಗ ವಿವಾಹದ ವಯಸ್ಸು..ಹಿತೇಶ ತಂಗಿಗೊಬ್ಬ ಸೂಕ್ತ ಅನುಕೂಲಸ್ಥ ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿದ. ಅವಳ ಮದುವೆಯಾದರೆ ನಂತರ ತನಗೆ ಸುನೀತಾಳನ್ನು ಮದುವೆಯಾಗಬಹುದು....ಸುನೀತಾಳನ್ನು ತನ್ನ ಜೊತೆಗೆ ಕರೆದೊಯ್ಯುವ ಮನಸಿದ್ದರೂ ಅದು ಸಾಧುವಲ್ಲ ಎಂದವನಿಗೆ ತಿಳಿದಿತ್ತು......
" ನೀನು ಸುನೀತಾಳನ್ನು ಮದುವೆಯಾಗುವುದು ಸಂತೋಷವೇ....ಆದರೆ ನೀನವಳನ್ನು ಇಲ್ಲಿ ಬಿಟ್ಟು ಹೋಗಬೇಕು..ನೀನು ವರ್ಷಕ್ಕೆರಡು ಬಾರಿ ಬಂದು ಹೋಗು. ಅವಳನ್ನು ಇಲ್ಲಿ ಉದ್ಯೋಗಕ್ಕೂ ಬೇಕಾದರೆ ಕಳುಹಿಸು. ನಾನು ಬೇಡ ಅನ್ನೋದಿಲ್ಲ...ಆದರೆ ವಿದೇಶಕ್ಕೆ ಕರ್ಕೊಂಡು ಹೋಗ್ತೇನೆ ಅಂತ ಮಾತ್ರ ಹೇಳ್ಬೇಡ...ನಾನು ಒಬ್ಳೇ ಇಲ್ಲಿ ಹೇಗಿರೋದು..!?"
ಅಮ್ಮನ ದನಿಯಲ್ಲಿ ಬೇಡಿಕೆಯೇ ಮೈವೆತ್ತಂತಿತ್ತು. ಅಮ್ಮ ಹೇಳಿದಂತೆ ನಡೆದರೆ ತನಗೂ ಕ್ಷೇಮ. ಒಂದು ಹತ್ತು ವರ್ಷದ ನಂತರ ಊರಿಗೇ ಬಂದು ಏನಾದರೂ ಒಂದು ಸ್ವಂತ ಉದ್ಯೋಗ ನೋಡಿಕೊಂಡರಾಯಿತು.
ಆದರೆ ಈ ವ್ಯವಸ್ಥೆಗೆ ಸುನೀತಾಳ ಮನೆಯವರ ಒಪ್ಪಿಗೆಯೇ ಇಲ್ಲ....

                   *                *                *

'ಸುನೀತಾಳಿಗೆ ಬೇರೆ ಮದುವೆಯಾಗದಿರಲಿ ದೇವರೇ' ಎಂದು ಪ್ರಾರ್ಥಿಸುತ್ತಲೇ ಹಿತೇಶ ತಂಗಿಯ ಮದುವೆಯನ್ನು ಸಾಧ್ಯವಾದಷ್ಟೂ ಚೆನ್ನಾದ ರೀತಿಯಲ್ಲಿಯೇ ಮಾಡಿ ಮುಗಿಸಿದ....
ಮದುವೆಯ ಗೌಜಿ ಗದ್ದಲಗಳು ಅವರ ತಿರುಗಾಟಗಳು ಎಲ್ಲ ಮುಗಿದ ಬಳಿಕ ಹಿತೇಶ ಒಂದು ದಿನ ಅವರ ಬಳಿ ಕುಳಿತು ತನ್ನ ವಿಚಾರವನ್ನು ಪ್ರಸ್ತಾಪಿಸಿದ.

ನಾಗರಾಜ ತನ್ನ ಧ್ವನಿಯಲ್ಲಿ ಯಾವುದೇ ಕೃತಕತೆ ಸೋಕದಂತೆ ಅತ್ಯಂತ ಸಹಜ ಹಾಗೂ ಅತ್ಯಂತ ನಯವಾಗಿಯೇ ನುಡಿದ.....
" ಅತ್ತೆಯನ್ನು ಕರೆದುಕೊಂಡು ಹೋಗಲು ನಂದೇನೂ ಅಭ್ಯಂತರವಿಲ್ಲ ಬಾವ....ಅವರು ನನಗೂ ಅಮ್ಮನಂತೆಯೇ ಅಲ್ಲವೇ...ಆದರೆ ಅವರಿಗೆ ನಮ್ಮ ಮನೆಯಲ್ಲಿ ಕಷ್ಟವಾಗಬಹುದೇನೋ......."
ಲಕ್ಷ್ಮಿಯಿಂದ ಯಾವ ಪ್ರತಿಕ್ರಿಯೆಯೂ ಇಲ್ಲ...
ನಾಗರಾಜನಿಲ್ಲದ ಒಂದು ಸಂದರ್ಭದಲ್ಲಿ ಅವಳು ಹಿತೇಶನ ಬಳಿ ನುಡಿದಳು:
" ಅಲ್ಲ...ನಾನೇ ಅಲ್ಲಿಗೆ ಹೊಸಬಳು...ನಾನೇ ಅವರ ಜೊತೆ ಹೊಂದಿಕೊಳ್ಳುವುದು ಹೇಗೆಂದು ಯೋಚಿಸಬೇಕಷ್ಟೆ..ಇನ್ನು ಅಮ್ಮನನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ ಯಾಕವರಿಗೆ ಹಿಂಸೆ ನೀಡಲಿ...?ನಿನಗೆ ಅಷ್ಟೂ ಗೊತ್ತಾಗಲ್ವೇ...?ಅಮ್ಮನನ್ನು ನಿನಗೇ ನಿನ್ನ ಜೊತೆ ಕರೆದುಕೊಂಡು ಹೋಗಬಹುದಲ್ವೆ?"
" ನಿನಗೆ ನಿನ್ನ ಜೊತೆ ಅಮ್ಮನನ್ನು ಕರೆದುಕೊಂಡು ಹೋಗಲು ಮನಸ್ಸಿಲ್ಲ...ಇನ್ನು ನನ್ನ ಹೆಂಡತಿಯಾಗುವವಳು ಅತ್ತೆಯನ್ನು ತನ್ನ ಜೊತೆ ಕರೆದುಕೊಂಡುಹೋಗಲು ಒಪ್ತಾಳೆ ಅಂತ ಹೇಗೆ ಹೇಳ್ತಿ..? ಈಗಿನ ಕಾಲದ ಹುಡುಗಿಯರ ವಿಚಾರ ನಿನಗೂ ಗೊತ್ತಿದೆಯಲ್ವ...?"
" ನೀನು ಮಗ....ನೀನು ಹೇಳಿದರೆ ನಿನ್ನ ಹೆಂಡತಿ ಒಪ್ಪಲೇಬೇಕು...ಅಲ್ಲದೆ ಅಮ್ಮನ ವಿಚಾರದಲ್ಲಿ ಯಾರಿಗೆ  ಬೇಕಾದ್ದು ಹೆಚ್ಚು ಜವಾಬ್ದಾರಿ..? ನೀನಿನ್ನು ವಿದೇಶಕ್ಕೆ ಹೋಗೋದೇ ಬೇಡ....ಇಲ್ಲೇ ಎಲ್ಲಾದ್ರೂ ಒಂದು ಉದ್ಯೋಗ ನೋಡ್ಕೋ...."
" ಅಷ್ಟೊಂದು ಒಳ್ಳೇ ಉದ್ಯೋಗ ನಂಗೆ ಇಲ್ಲಿ ಸಿಗೋದು ಬಹಳ ಕಷ್ಟ ಕಣೇ ಲಕ್ಷ್ಮಿ...."
" ಯಾವುದಾದರೂ ಒಂದನ್ನು ತ್ಯಾಗ ಮಾಡಲೇಬೇಕಪ್ಪ...ನಿನ್ನ ಸ್ವಾರ್ಥದ ಬಗ್ಗೆ ಮಾತ್ರ ಯೋಚನೆ ಮಾಡಿದರೆ ಹೇಗೆ.....?.ಇನ್ನೊಬ್ಬರ ಸಮಸ್ಯೆಯನ್ನೂ ಅರ್ಥಮಾಡ್ಕೋಬೇಕು...."
ನೇರವಾಗಿ ನುಡಿದ ಲಕ್ಷ್ಮಿ ಇನ್ನು ಮುಂದಕ್ಕೆ ಮಾತನಾಡುವ ಅಗತ್ಯವೇ ಇಲ್ಲವೆಂಬ ಭಾವದಲ್ಲಿ ನಿರ್ಗಮಿಸಿದಳು.

ಉತ್ತಮ ಉದ್ಯೋಗದ ಆಯ್ಕೆಯಾದರೆ ಸುನೀತಾಳನ್ನು ಮರೆಯಬೇಕು...
ಸುನೀತಾಳೇ ಬೇಕಾದರೆ ಉತ್ತಮ ಸಂಪಾದನೆಯುಳ್ಳ ಉದ್ಯೋಗವನ್ನು ತೊರೆಯಬೇಕು...
ಹಿತೇಶ ದ್ವಂದ್ವ ಗೊಂದಲ ತುಮುಲಗಳಿಂದ ತೊಳಲಾಡಿದ‌. ಬಹಳ ಬೇಗ
ಏನಾದರೂ ಒಂದು ನಿರ್ಧಾರ ಕೈಗೊಳ್ಳಲೇ ಬೇಕಾಗಿತ್ತು..ಸುನೀತಾಳ ಸೋದರಮಾವ ಅವನನ್ನು ನೆನಪಿಸುತ್ತಲೇ ಇದ್ದರು.
" ಏನಾದರೂ ಒಂದು ನಿರ್ಧಾರ ಹೇಳಿ ಬೇಗ..ಇಲ್ಲದಿದ್ರೆ ನಾವು ಸುನೀತಾಳಿಗೆ ಬೇರೆ ಸಂಬಂಧ ನೋಡ್ತೇವೆ..."
" ನಾನೊಮ್ಮೆ ಸುನೀತಾಳ ಬಳಿ ಮಾತನಾಡಬಹುದೇ...?"
" ಇಲ್ಲ...ಅದು ಮಾತ್ರ ಸಾಧ್ಯವಿಲ್ಲ..ಈ ವಿಚಾರ ಹಿರಿಯರಿಗೆಲ್ಲ ಒಪ್ಪಿಗೆಯಾದ್ರೆ ಮಾತ್ರ ನಾವು ಮುಂದುವರಿಯೋದು...ಹಿರಿಯರ ಒಪ್ಪಿಗೆಯಿಲ್ಲದೆ ಯಾವ ಮಾತುಕತೆಯೂ ಬೇಡ..."
ಎಲ್ಲರೂ ಎಷ್ಟೊಂದು ಖಂಡತುಂಡವಾಗಿ ಮಾತನಾಡುತ್ತಾರೆನಿಸಿತು..
ಸುನೀತಾಳನ್ನು ಮರೆಯಲೇ......? ಯಾಕೋ ಹೃದಯ ಹಿಂಡಿಹೋದಂತನ್ನಿಸಿತು...ಅವಳನ್ನು ಮರೆತರೆ ತನ್ನ ಬಾಳು ತೀರ..ತೀರಾ...ನೀರಸವೇ ಸರಿ....
ಸುನೀತಾಳನ್ನು ತನ್ನ ಜೊತೆ ಕರೆದುಕೊಂಡು ಹೋಗಲೇ...?
ಅಮ್ಮ......! ಅಮ್ಮ ಇಲ್ಲಿ ಒಂಟಿಯಾಗುತ್ತಾರಲ್ಲ..! ಅವರಿಲ್ಲಿ ಅನಾಥೆಯಂತೆ ಬದುಕುವುದನ್ನು ಕಲ್ಪಿಸಿಯೇ ಹಿತೇಶನಿಗೆ ಕಣ್ಣು ತೇವವಾಯಿತು.
ಇಲ್ಲೇ ಒಂದು ಉದ್ಯೋಗ ನೋಡಲೇ...?ಅಷ್ಟೊಂದು ಒಳ್ಳೆಯ ಸವಲತ್ತುಗಳುಳ್ಳ ಉದ್ಯೋಗ ದೊರೆಯುವುದು ಕನಸಿನ ಮಾತೇ ಸರಿ.
ಭಾವುಕತೆಗೆ ಬಲಿ ಬಿದ್ದು ಇದ್ದ ಉದ್ಯೋಗವನ್ನೂ ಕಳೆದುಕೊಂಡು ಮುಂದೆ ಪರರೆದುರು ಕೈಚಾಚುವಂತಾದರೆ...!
ಸುನೀತಾಳನ್ನು ಮರೆತು ವಿದೇಶಕ್ಕೆ ಹಾರಿದರೆ ಸುನೀತಾ ಮತ್ತೆಂದೂ ತನ್ನವಳಾಗೋದಿಲ್ಲ...ಮತ್ತೆ ಹುಡುಕಾಟ...! ಎಂತಹ ಹುಡುಗಿಯರು ಸಿಗುತ್ತಾರೋ....ಅವರ ಬೇಡಿಕೆಗಳೇನಿರುತ್ತೋ.....ಅವರ ಹಿರಿಯರ ಬೇಡಿಕೆಗಳು ಏನಿರುತ್ತೋ....ಈ ಬೇಡಿಕೆಗಳ ಪ್ರವಾಹದಲ್ಲಿ ತನ್ನ ಅಸ್ತಿತ್ವವೇ ಕೊಚ್ಚಿಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.....
" ಅಲ್ಲ ಹತ್ತು ವರ್ಷಗಳ ನಂತರ ನೀನು ಇಲ್ಲಿಗೇ ಬಂದು ಸ್ವಂತ ಉದ್ಯೋಗ ಮಾಡುವವನಾಗಿದ್ದರೆ ಈಗ್ಲೇ ಯಾಕೆ ಆ ಕೆಲ್ಸ ಮಾಡಬಾರದು...?"
ಅಮ್ಮನ ಆ ಒಂದು ಸಲಹೆ ಅವನಿಗೊಂದು ಆಶಾಕಿರಣ ತೋರಿಸಿತು. ಆದರೆ ಬಂಡವಾಳ...? ತಂಗಿಯ ಮದುವೆ ...‌ಚಿನ್ನ..ವರೋಪಚಾರ ....ತನ್ನ ಮದುವೆ ....ಈ ಎಲ್ಲಾ ಖರ್ಚುಗಳ ಬಳಿಕ ಉಳಿಯುವುದಾದರೂ ಏನಿದೆ...?
ಆದರೆ ಇಲ್ಲೇ  ಈಗಲೇ ಸೆಟಲ್ ಆದರೆ ಸುನೀತಾ ಸಿಗ್ತಾಳೆ...ಅವಳು ತನ್ನ ಬಾಳಸಂಗಾತಿಯಾದರೆ ಏನು ಬೇಕಾದರೂ ಸಾಧಿಸಬಹುದು. ಹತ್ತು ವರ್ಷದ ನಂತರ ಮಾಡುವುದನ್ನು ಈಗಲೇ ಮಾಡಿಬಿಡೋಣ....
ಹೀಗೊಂದು ಬೆಳಕಿನ ಕಿರಣ ಗೋಚರಿಸಿದಾಗ ಮನಸಿಗೆ ತುಸು ನೆಮ್ಮದಿಯೆನಿಸಿತು.....ಈ ವ್ಯವಸ್ಥೆಗೆ ಸುನೀತಾಳ ಮನೆಯವರ ಒಪ್ಪಿಗೆ ದೊರೆತಾಗ ಸ್ವರ್ಗಕ್ಕೆ ಮೂರೇ ಗೇಣು.......ಸುನೀತಾ ತನ್ನವಳಾಗುತ್ತಾಳೆ ಎಂಬ ಭಾವವೇ ಅವನಿಗೆ ಇನ್ನಿಲ್ಲದ ಸ್ಫೂರ್ತಿ ತುಂಬಿತು..........

                                   **************

" ನಿಮ್ಮಲ್ಲೊಂದು ಮಾತು ಕೇಳಲಾ...?" 
" ಹುಂ ಕೇಳು..."
" ನೀವು ವಿದೇಶಕ್ಕೆ ಹೋಗೋದನ್ನು ಯಾಕೆ ಕ್ಯಾನ್ಸಲ್ ಮಾಡಿದಿರಿ?"
" ಯಾಕಂದ್ರೆ , ವಿದೇಶಕ್ಕೆ ಹೋಗೋದಾದ್ರೆ ಸುನೀತಾಳನ್ನೂ ಕರೆದುಕೊಂಡು ಹೋಗಲೇ ಬೇಕು...ಇಲ್ಲದಿದ್ದರೆ ಅವಳನ್ನು ಮದುವೆಯಾಗೋ ಆಸೇನೇ ಬಿಟ್ಬಿಡು ಎಂದು ನಿನ್ನ ಸೋದರ ಮಾವ ಹಟ ಹಿಡಿದರು...ನೀವಿಬ್ರೂ ಹೋದ್ರೆ ನಾನಿಲ್ಲಿ ಅನಾಥೆಯಯಂತೆ ಬದುಕಬೇಕಾ ಎಂದು ಅಮ್ಮ ಕಣ್ಣೀರಾದರು."
" ನಿಮ್ಮ ತಂಗಿ ಏನಂದ್ರು..?"

" ಅಮ್ಮನ ಜವಾಬ್ದಾರಿ ನೋಡ್ಕೋಬೇಕಾದವನು ಮಗ....ಮಗಳ ಮೇಲೆ ಅವರ ಭಾರ ಹಾಕ್ಬಾರ್ದು ಅಂದ್ಲು..."
" ಅಂದ್ರೆ ಕೇವಲ ನನಗೋಸ್ಕರ ನೀವು ವಿದೇಶಕ್ಕೆ ಹೋಗೋದನ್ನು ಕೈ ಬಿಟ್ರಿ...!ಅಷ್ಟೊಂದು ಒಳ್ಳೇ ಉದ್ಯೋಗವನ್ನೂ ಬಿಟ್ಟು ಬಿಟ್ರಿ....!!"
" ಹೌದು..ನನಗೆ ಬೇರೆ ದಾರಿಯಿರಲಿಲ್ಲ....ನನಗೆ ನೀನೇ ನನ್ನ ಹೆಂಡತಿಯಾಗಬೇಕಿತ್ತು..... ನೀನೊಬ್ಳು ನನ್ನ ಜೊತೆಗಿದ್ರೆ ಸಾಕು.....ನಾನು ಏನು ಬೇಕಾದ್ರೂ ಸಾಧಿಸಬಲ್ಲೆ...."
" ಮುಂದಿನ ಉದ್ಯೋಗ...?"
" ಏನಾದ್ರೂ ಸ್ವಂತದ್ದು ಮಾಡೋಣ ಅಂತ..."
" ಸ್ವಂತದ್ದು ಏನು...?"
" ಇನ್ನೂ ಪ್ಲಾನ್ ಮಾಡಿಲ್ಲ...."
" ಏನು...! ಇನ್ನೂ ಪ್ಲಾನೇ ಮಾಡಿಲ್ವ...? ಇನ್ನು ಹೊಸದಾಗಿ ಆರಂಭಿಸಬೇಕಷ್ಟೆಯಾ...!? ನಮ್ಮ ಮುಂದಿನ ಬದುಕಿನ ದಾರಿ......?"
ಹೊಸಹೆಂಡತಿಯ ಮಾತುಗಳಿಂದ ಹಿತೇಶನೆದೆ ಧಸಕ್ಕೆಂದಿತು..ಹೆಂಡತಿಯಿಂದ ಅದೇನೋ ಅನುನಯದ ಮಾತುಗಳಿಗಾಗಿ ಹಂಬಲಿಸಿದವನಿಗೆ.....! ತಣ್ಣಗೆ ಇರಿದ ಅನುಭವ.....!
" ನಿನ್ನನ್ನು ಸಾಕುವ ಜವಾಬ್ದಾರಿ ನಂದು...."
ಗಂಡನ ಅಹಮಿಕೆಯ ಆವೇಶದಿಂದ ಹಿತೇಶ ನುಡಿದ. 
" ಸರಿ...ಸ್ವಂತ ಉದ್ಯೋಗ ಅಂತೀರಿ.....ಯಾವ ಉದ್ಯೋಗ....?.ಇದಕ್ಕೆ ಬಂಡವಾಳ.....?"
" ಎಲ್ಲಯಾದರೂ ಸಾಲ ಸಿಗುತ್ತಾ.......ನೋಡೋಣ...."
" ಸಾಲ.....!?....ಕೊಂಚವೂ ಮೂಲಧನವಿಲ್ಲದೆ ಕೇವಲ ಸಾಲದಲ್ಲೇ ಉದ್ಯಮ ಆರಂಭಿಸೋದ...?ಉದ್ಯಮ ಕೈ ಹಿಡಿಯದಿದ್ರೆ..?"
ಹಿತೇಶನ ಮುಖ ಕಪ್ಪಿಟ್ಟಿತು..ತಾನು ಹಗಲಿರುಳು ಬಯಸಿ ಹಂಬಲಿಸಿ ಮದುವೆಯಾದವಳ ಬಾಯಿಂದ ಬರುವ ಮಾತುಗಳೇ ಇವು? ಈ ಹೆಣ್ಣಿಗಾಗಿ ತಾನು ಅಷ್ಟೊಂದು ಒಳ್ಳೆಯ ಉದ್ಯೋಗ ತೊರೆದು ಕೆಟ್ಟು ಹೋದೆನೇ.......?
ಏನಾದರೂ ಭರವಸೆಯ ಮಾತುಗಳನ್ನಾಡುತ್ತಾಳೋ ಎಂದು ತವಕಿಸಿದರೆ.....?! ಬರೀ ಅಧೈರ್ಯದ ಮಾತುಗಳು.....!!
" ಯಾಕೆ ಅಪಶಕುನದ ಮಾತಾಡ್ತೀಯ...?"
" ಅಪಶಕುನ ಅಂತ ಯಾಕೆ ಭಾವಿಸ್ತೀರಿ...? ಸ್ವಂತ ಉದ್ಯಮ ಅಂದ್ಮೇಲೆ ಎಲ್ಲವನ್ನೂ ಮನಸ್ಸಲ್ಲಿಟ್ಟುಕೊಂಡು ಎಲ್ಲದಕ್ಕೂ ತಯಾರಾಗಿರಬೇಕಲ್ವೇ...?ಅವೆಲ್ಲದಕ್ಕೂ ನೀವು ಸಿದ್ಧವಾಗಿದ್ದೀರಾ...?"
ಹಿತೇಶನಿಗೆ ಯಾಕೋ ಕೋಪ ಉಕ್ಕಿ ಬಂತು...ಸುನೀತಾಳ ಕೆನ್ನೆಗೆರಡು ಬಾರಿಸಿ ಎಲ್ಲಿಗಾದರೂ ಹೊರಟು ಹೋಗೋಣವೆನಿಸಿತಾದರೂ ಸಾವರಿಸಿಕೊಂಡು ತನಗಿನ್ನು ಯಾವ ಮಾತನ್ನಾಡಲೂ ಇಷ್ಟವಿಲ್ಲವೆಂಬ ಭಾವದಲ್ಲಿ ಮೌನಿಯಾದ...
" ನಿಮ್ಮನ್ನು ಅಧೀರಗೊಳಿಸಬೇಕೆಂಬ ಯಾವ ಉದ್ದೇಶವೂ ನನಗಿಲ್ಲ...ನಾವೀಗ ದಂಪತಿ...ಮುಂದಿನ ಬದುಕಿನ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ, ಯೋಜನೆ  ಇರಬೇಕಲ್ವೇ...? ಯಾವ ಒಂದು ಗುರಿ ಉದ್ದೇಶ ಯೋಜನೆಗಳಿಲ್ಲದೆ ಗಾಳಿಗೆ ಸಿಲುಕುವ ನಾವೆಯಂತೆ ನಮ್ಮ ಬದುಕು ಸಾಗಬೇಕು ಅಂತೀರೇನು...?"
" ಅದಕ್ಕೆ ನಾನೇನು ಮಾಡ್ಬೇಕು ಅಂತೀಯಾ ನೀನು....?"
" ನಾವ್ಯಾಕೆ ಮತ್ತೆ ವಿದೇಶಕ್ಕೆ ಹೋಗ್ಬಾರ್ದು...?"
" ಅಮ್ಮನನ್ನೇನು ಬಾವಿಗೆ ತಳ್ಳು ಅಂತೀಯೇನು? ನಂಗೊತ್ತು ಈಗಿನ ಕಾಲದ ಹುಡುಗಿಯರೇ ಹೀಗೆ....‌ ! ಮಹಾ ಸ್ವಾರ್ಥಿಗಳು......!! ಮದುವೆಯಾದ ತಕ್ಷಣ ಅತ್ತೆ ಮಾವನನ್ನು ಎಲ್ಲಿಯಾದರೂ ವೃದ್ಧಾಶ್ರಮಕ್ಕೆ ಸೇರಿಸಬೇಕೆಂದೇ ಯೋಜನೆ ಹಾಕಿಕೊಂಡು ಬರ್ತಾರೆ........ತಾವೂ ಮುಂದೊಮ್ಮೆ ಅತ್ತೆ ಆಗ್ತೇವೆ ಅಂತ ಕಿಂಚಿತ್ತೂ ಯೋಚನೆ ಮಾಡೋದಿಲ್ಲ......ಅದಕೇ ಹೇಳೋದು ಹೆಂಗಸರ ಬುದ್ಧಿ ಮೊಣಕಾಲು ಕೆಳಗೆ ಅಂತ..."
ಹಿತೇಶ ಆವೇಶದಿಂದ ಕೂಗಾಡಿದ.....
" ಯಾಕೆ ನೀವು ಏನೇನೋ ಕಲ್ಪಿಸಿಕೊಳ್ತೀರಾ...? ನಾನೆಲ್ಲಿ ಹಾಗೆ ಹೇಳಿದೆ...? ನಾವು ನಮ್ಮ ಜೊತೆಯಲ್ಲೇ ಅತ್ತೆಯನ್ನೂ  ಕರೆದುಕೊಂಡುಹೋಗೋಣ.... ನಿಮ್ಮಮ್ಮ ಇನ್ನು ನನಗೂ ಅಮ್ಮನ ಹಾಗೇ ಅಲ್ಲವೇ...?"
" ಅಲ್ಲಿ ಮೂರು ಜನರ ಖರ್ಚು ಎಷ್ಟು ದುಬಾರಿಯಾದೀತು ಗೊತ್ತೇ...ಹೊಟ್ಟೆಗೇನು ತಿನ್ನೋದು ...?ಮಣ್ಣಾ...?!"
" ಅಯ್ಯೋ ಯಾಕೆ ಹೀಗೆಲ್ಲ ಮಾತಾಡ್ತೀರಿ...? ನನಗೂ ವಿದ್ಯೆಯಿದೆ...ನಾನೂ ಅಲ್ಲಿ ಏನಾದರೂ ಕೆಲ್ಸಕ್ಕೆ ಸೇರ್ಕೋತೀನಿ...ನಮ್ಮ ಬದುಕಿನ ಬಂಡಿಯ ಚಕ್ರಗಳು ನಾವೇ ಅಲ್ವೇ...? ನಿಮಗೆ ಹೆಗಲಿಗೆ ಹೆಗಲಾಗಿ ನಾನಿರ್ತೀನಿ...‌ನಮ್ಮಿಬ್ಬರ ಸಂಪಾದನೆಯಿಂದ ಒಂದು ಉತ್ತಮ ಬದುಕು ಕಟ್ಟಿಕೊಳ್ಳೋಣ...ಇಳಿವಯಸ್ಸಿನ ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳೋಣ....ಅಲ್ಲಿ ಸಾಕಷ್ಟು ಸಂಪಾದನೆಯಾದ ಬಳಿಕ ಊರಿಗೆ ಬಂದು ನಮ್ಮ ಸಂಪಾದನೆಯ ಅರ್ಧಭಾಗಕ್ಕೆ ಸಾಲವನ್ನೂ ಸೇರಿಸಿ ಜೊತೆಯಾಗಿ ದುಡಿಯೋಣ.....ಏನಂತೀರಿ...??"
ಹೆಂಡತಿಯ ಮಾತುಗಳನ್ನೇ ಕೇಳುತ್ತಾ ಬೆಪ್ಪಾಗಿ ನಿಂತಿದ್ದ ಹಿತೇಶನಿಗೆ ನಾಚಿಕೆಯಿಂದ ಮಾತುಗಳೇ ಹೊರಡಲಿಲ್ಲ.......

ತೆಂಕಬೈಲು ಸೂರ್ಯನಾರಾಯಣ
ಅಂಚೆ: ಕರೋಪಾಡಿ
ಬಂಟ್ವಾಳ ತಾಲೂಕು
ದ.ಕ. 574279
Phone: 9481020521

ಸ್ನೇಹಿತರೆ ನಮಸ್ಕಾರ.......ನನ್ನ ಕತೆ ಓದಿ ಹೇಗನ್ನಿಸಿತು ತಿಳಿಸುತ್ತೀರಲ್ಲ.....ನೀವು ಏನಾದರೂ ಪ್ರತಿಕ್ರಿಯೆ ಕೊಟ್ಟರೆ ಮಾತ್ರ ನನಗೆ ಬರೆಯುವ ಜೀವ ಬರ್ತದೆ......ನಿಮಗೆ ನನ್ ಬರಹ ಇಷ್ಟವಾಗದಿದ್ರೆ...ದಯವಿಟ್ಟು ಹೇಳಿ.......
ಇಂತಿ ನಿಮ್ಮವ....
ತೆಂಕಬೈಲು ಸೂರ್ಯನಾರಾಯಣ
 


 

Category : Stories


ProfileImg

Written by Sooryanarayana Bhat. T.