Do you have a passion for writing?Join Ayra as a Writertoday and start earning.

ಮಧ್ಯ ರಾತ್ರಿ ಚಿರತೆ ಕಂಡವಳು !!! (ಕತೆ)

ಶೌಚಾಲಯದಲ್ಲಿ ಅರ್ಧ ರಾತ್ರಿ ಕಳೆದ ವಾಣಿ : ಕಡೆಯಲ್ಲಿ ಹೊರ ಬಂದ ಬಗೆimage

ಅದು ಮಧ್ಯಮ‌ ವರ್ಗದ ಕುಟುಂಬ. ಮಧ್ಯಮ ಮತ್ತು ಬಡ ವರ್ಗದ ಜನರೇ ವಾಸಿಸುವ ಸಾಮಾನ್ಯವಾದ ಏರಿಯಾ. ಸಿಂಗಲ್ ಬೆಡದ ರೂಂ ಮನೆ. ಗಂಡ ಹೆಂಡತಿ ಎರಡು ಪುಟ್ಟ ಮಕ್ಕಳು. ಮನೆಯ ಮುಂದಿನ ಬಾಗಿಲು ತೆರೆದರೆ ಬೀದಿ. ಮನೆಯ ಹಿಂದಿನ ಬಾಗಿಲಿನಿಂದ ಹೋದರೆ ಒಂದಷ್ಟು ತೆರದ ಅಂಗಳ. ಒಂದು ಮೂಲೆಯಲ್ಲಿ ಶೌಚಾಲಯ. ಮತ್ತೊಂದು ಮೂಲೆಯಲ್ಲಿ ಒಂದಷ್ಟು ಹಳೇ ಸಾಮಾನುಗಳು. ಅಲ್ಲಲ್ಲಿ ಸಣ್ಣ ಪುಟ್ಟ ಗಿಡಗಳು. ಬಟ್ಟೆ ಒಗೆಯುವುದು, ಬಟ್ಟೆ ಒಣಗಿ ಹಾಕುವುದು, ಪಾತ್ರೆ ಪಗಡೆ ತೊಳೆಯುವುದು ಎಲ್ಲವೂ ಅಲ್ಲೇ. ಇದೇನೂ ಹೊರಗೆ ಕಾಣದಂತೆ ಸುತ್ತಲೂ ಎತ್ತರದ ಕಾಂಪೌಂಡು.‌ ಅದರ ಹಿಂದೆ ದೊಡ್ಡ ಚರಂಡಿ.

ಮನೆಯೊಡತಿ ವಾಣಿಗೆ ಮಧ್ಯರಾತ್ರಿ ಎಚ್ಚರಗೊಂಡು ಒಂದಕ್ಕೆ ಹೋಗುವುದು ಸಾಮಾನ್ಯ ಅಭ್ಯಾಸ. ಎಂದಿನಂತೆ ಮಧ್ಯರಾತ್ರಿ ಎಚ್ಚರಗೊಂಡಳು. ಬಾಯಿ ಆಕಳಿಸುತ್ತಾ, ತಲೆ ಕೆರೆದುಕೊಳ್ಳುತ್ತಾ ತಲೆ ಎತ್ತಿ ಗಡಿಯಾರ ನೋಡಿದಳು.‌ ಸಮಯ 2:15 ಗಂಟೆ. ಹಿತ್ತಲಿನ‌ ಲೈಟ್ ಆನ್ ಮಾಡಿ ಬಾಗಿಲು ತೆರದುಕೊಂಡು ಹೊರ ಹೋದಳು. ಆ ಲೈಟ್‌ನಲ್ಲಿ ಅಗತ್ಯಕ್ಕಷ್ಟೇ ಬೇಕಾದ ಬೆಳಕು. ಬೆಳಕು ಕಡಿಮೆ ಇದ್ದರೂ ಶೌಚಾಲಯಕ್ಕೆ ಹೋಗಿ ಬರಲು ಸಾಕು ಎನ್ನುವಂತಿತ್ತು. ವಾಣಿ ಶೌಚಾಲಯ ಮುಗಿಸಿ ಬಾಗಿಲು ತೆರಯುತ್ತಿದ್ದಂತೆ ಸಾಮಾನು ಬಿದ್ದಿದ್ದ ಮೂಲೆಯಲ್ಲಿ ಕಂಡಿದ್ದು ಚಿರತೆ. ಗಾಬರಿಗೊಂಡು ದಡಾರ್ ಎಂದು ಶೌಚಾಲಯದ ಬಾಗಿಲು ಮತ್ತೆ ಹಾಕಿಕೊಂಡಳು. ಒಳಗಿನಿಂದ‌ ರೀ... ರೀ... ಎಂದು ಚೀರುತ್ತಿದ್ದಾಳೆ. ಕೋಣೆಯಲ್ಲಿ ಮಕ್ಕಳೊಂದಿಗೆ ಮಲಗಿರುವ ಗಂಡ ಗಾಢವಾದ ನಿದ್ತೆಯಲ್ಲಿದ್ದಾನೆ.‌ ಈಕೆಯ ಧ್ವನಿ ಕೊಂಚವೂ ಕೇಳಿಸುತ್ತಿಲ್ಲ. ಬಾಗಿಲಿನ ಕಿಂಡಿಯಿಂದ ಚಿರತೆಯನ್ನು ಕಾಣಲು ಯತ್ನಿಸುತ್ತಾಳೆ. ಆದರೆ ಅಲ್ಲಿಂದ ಸ್ಪಷ್ಟವಾಗಿ ಏನೂ ಕಾಣುತ್ತಿಲ್ಲ. ಜೀವ ಭಯದಲ್ಲಿ ಶೌಚಾಲಯದಲ್ಲೇ ಅಡಗಿ ಕುಳಿತು ಗಂಡನನ್ನು ಕೂಗಿ ಕೂಗಿ ಸಾಕಾಗಿ ಹೋಗಿದ್ದಳು.ಹೀಗೆಯೇ ಸುಮಾರು ಅರ್ಧ ತಾಸು ಕಳೆಯಿತು. 

ಆನಂತರ ಅದೃಷ್ಟಕ್ಕೆ ಗಂಡನಿಗೆ ಎಚ್ಚರವಾಯಿತು. ಆಗ ಪತ್ನಿ ಕೂಗುತ್ತಿರುವಂತೆ ಸದ್ದು ಕೇಳಿಸಿತು. ಕೊನೆಗೂ ಎದ್ದು ಬಂದು ಹಿತ್ತಲಿನ ಬಾಗಿಲು ತೆರದು ಏನು ಎಂದು ಕೇಳಿದ. ಆತನ ಕಣ್ಣಿಗೆ ಚಿರತೆ ದರ್ಶನವಾಗಿಲ್ಲ. ತಕ್ಷಣ ಭಯದಲ್ಲೇ ರೀ... ನಮ್ಮ ಹಿತ್ತಲಲ್ಲಿ ಚಿರತೆ ಬಂದು ಬಿಟ್ಟಿದೆ. ಬಾಗಿಲು ಹಾಕಿ ಒಳಗೆ ಹೋಗಿ ಎಂದು ಕಿರುಚಿಕೊಂಡಳು. ಭಯಭೀತನಾದ ಗಂಡ ಬಾಗಿಲು ಹಾಕಿಕೊಂಡ. ನಂತರ ಇಬ್ಬರ ಸಂಭಾಷಣೆ ಮುಂದುವರೆಯಿತು.

ಮನೆ ಒಳಗಿಂದ ಗಂಡ : ಚಿರತೆ ಎಲ್ಲಿದೆ ಎಂದು ಕಿರುಚಿದ. (ಮಕ್ಕಳಿಗೂ ಎಚ್ಚರವಾಯಿತು) 
ಶೌಚಾಲಯದಿಂದ ಆಕೆ : ನಮ್ಮ ಹಿತ್ತಲ ಮೂಲೆಯಲ್ಲಿದೆ, ಯಾರಿಗಾದರೂ ಕರೆಯಿರಿ, ಪೊಲೀಸರಿಗೆ ಫೋನ್ ಮಾಡಿಸಿ, ಜೋಪಾನ, ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳಿ ಎಂದು ಕೂಗಿದಳು.

ಗಂಡ - ನಾನು ಏನಾದರು ಮಾಡುತ್ತೇನೆ.‌ ನೀನು ಹೊರಗಡೆ ಬರಬೇಡ. ಅಲ್ಲೇ‌‌ ಇರು ಎಂದ. (ಗಂಡನಿಗೆ ಕೈಕಾಲುಗಳೇ ಓಡುತ್ತಿಲ್ಲ‌) ಗಾಬರಿಯಾಗಿದ್ದ ಮಕ್ಕಳನ್ನು ಸಮಾಧಾನ ಪಡಿಸುತ್ತಲೇ ಕೈಗೆ ಫೋನ್ ಎತ್ತಿಕೊಂಡ.‌ ಯಾರಿಗೆ ಕರೆ ಮಾಡುವುದು ಎಂಬುದೇ ತಿಳಿಯುತ್ತಿಲ್ಲ. ಕೊನೆಗೆ ಸ್ನೇಹಿತನೊಬ್ಬನಿಗೆ ಕರೆ ಮಾಡಿದ. ಆದರೆ ಆತ ಫೋನ್ ತೆಗೆಯಲಿಲ್ಲ. ಅಕ್ಕಪಕ್ಕದವರಿಗೆ ಫೋನ್ ಮಾಡಲು ಯತ್ನಿಸುತ್ತಿದ್ದಾನೆ. ಯಾರೂ ಕೂಡಾ ಫೋನ್ ತೆಗೆಯುತ್ತಿಲ್ಲ. ಅಷ್ಟರಲ್ಲಿ ಮತ್ತೆ ಪತ್ನಿಯ ಕೂಗು - ರೀ ಏನಾಯಿತು ? ಯಾರಿಗಾದರೂ ತಿಳಿಸಿದ್ರಾ ? ಮಾಡ್ತಿದ್ದೀನಿ ಯಾರೂ ಕರೆ ತೆಗೆಯುತ್ತಿಲ್ಲ ಎಂದನು.‌ ವಾಣಿಗೆ ಇದ್ದಷ್ಟೂ ಆತಂಕ‌ ಹೆಚ್ಚಾಯಿತು. ಶೌಚಾಲಯದ ಒಳಗೆ ಇರುವುದಕ್ಕೂ ಆಗುತ್ತಿಲ್ಲ. ಆಗಲೇ 3:00 ಗಂಟೆಯಾಗುತ್ತಿತ್ತು.

ಗಂಡ ಗೂಗಲ್ ಸರ್ಚ್ ಮಾಡಿ ಸ್ಥಳೀಯ ಪೊಲೀಸ್ ಠಾಣೆಯ ನಂಬರ್ ಹುಡುಕಿದ. ಆತನಿಗೆ ಲ್ಯಾಂಡ್ ಲೈನ್ ನಂಬರ್ ಸಿಕ್ಕಿತು. ಆ ನಂಬರಿಗೆ ಕರೆ‌ ಮಾಡಿದ.‌ ದುರಾದೃಷ್ಟಕ್ಕೆ ಸಂಪರ್ಕ ಸಿಗಲಿಲ್ಲ. ಈ ಮಧ್ಯೆ ಪತ್ನಿಗೆ ಧೈರ್ಯ ಹೇಳುತ್ತಾ, ಮೊಂಡು ಧೈರ್ಯ ಮಾಡಿಕೊಂಡು ಮನೆಯ ಬಾಗಿಲು ಸಣ್ಣಗೆ ತೆರೆದು ಚಿರತೆಯನ್ನು ನೋಡಲು ಯತ್ನಿಸಿದ. ಅಷ್ಟರಲ್ಲೇ ಕರೆಂಟ್ ಹೋಯಿತು‌. ಕಡು ಕಪ್ಪು ಕತ್ತಲೆ. ಗಂಡ ಹೆಂಡತಿ ಇಬ್ಬರಲ್ಲೂ ಆತಂಕ ಹೆಚ್ಚಾಯಿತು. ಆಕೆಗೆ ಧೈರ್ಯ ಹೇಳುತ್ತಿದ್ದ ಗಂಡನೇ ಇನ್ನಷ್ಟು ಹೆಚ್ಚು ಗಾಬರಿಗೊಂಡ. ಮತ್ತೆ ಪತ್ನಿಗೆ ಕೇಳಿದ. ಚಿರತೆಯನ್ನು ನೀನು ಎಲ್ಲಿ ನೋಡಿದೆ ? ಸರಿಯಾಗಿ ನೋಡಿದೆಯಾ ? ಹೌದು, ನಾನು ನೋಡಿದೆ,‌ ಎದುರು ಮೂಲೆಯಲ್ಲಿ ಕಣ್ಣಾರೆ ಕಂಡೆ ಎಂದಳು.

ಬಾಗಿಲು ತೆರೆದುಕೊಂಡು ಬೀದಿಗೆ ಹೋಗಲೂ ಭಯ. ಏನು ಮಾಡುವುದು ಎಂಬುದೇ ತಿಳಿಯುತ್ತಿಲ್ಲ. ಮಕ್ಕಳನ್ನು ಮತ್ತೆ ಮಲಗಿಸಿದ. ನಂತರ ಮನೆಯ ಮುಂದಿನ ಬಾಗಿಲು ಕೊಂಚ ತೆರೆದು ಹೊರಗೆ ನೋಡಿದ. ಎಲ್ಲೆಲ್ಲೂ ಕತ್ತಲೂ ಏನೂ ಕಾಣುತ್ತಿಲ್ಲ.

ಸಮಯ‌ ಬೆಳಗಿನ ಜಾವ 3:30 ಗಂಟೆಯಾಯಿತು. ಪಕ್ಕದ ಬೀದಿಯಲ್ಲಿ ವಾಸವಿರುವ ತನ್ನ ಸ್ನೇಹಿತನಿಗೆ ಬಹಳ ಸಲ ಫೋನ್ ಮಾಡಿದ್ದ. ಕೊನೆಗೆ ಎಚ್ಚರಗೊಂಡ ಆತನಿಂದ ಫೋನ್ ಬಂತು. ಆಪತ್ಬಾಂಧವನ ಕರೆಯಿಂದ‌ ಒಂದಷ್ಟು ಧೈರ್ಯ‌ ಬಂತು. ತಕ್ಷಣ ಫೋನ್ ರಿಸೀವ್ ಮಾಡಿ ಪರಿಸ್ಥಿತಿಯನ್ನೆಲ್ಲಾ ವಿವರಿಸಿದ. ನಿದ್ದೆಗಣ್ಣಿನಲ್ಲೇ ಇವನ ಮಾತುಗಳನ್ನು ಕೇಳಿದ ಸ್ನೇಹಿತನಿಗೆ ನಿದ್ದೆ ಹಾರಿಹೋಯಿತು. ಸರಿ ಎಂದು ಆತ ತನ್ನ ಬೇರೆ ಬೇರೆ ಸ್ನೇಹಿತರಿಗೆ ಕರೆ ಮಾಡಿ ಹಾಗೋ ಹೀಗೋ ಪೊಲೀಸ್ ಠಾಣೆಯ ನಂಬರ್ ದೊರಕಿಸಿ ಕೊಟ್ಟ. ಕೂಡಲೇ ಇವನು ಪೊಲೀಸರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ. ಪೊಲೀಸರು ಅರಣ್ಯ ಇಲಾಖೆಯವರಿಗೆ ಸಂಪರ್ಕಿಸಿ ಮಾಹಿತಿ ನೀಡಿದರು. ಅರಣ್ಯ ಇಲಾಖೆಯವರು ಚಿರತೆಯ ಸೆರೆಗೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಂಡು ಬರಬೇಕು.

ಇತ್ತ ವಾಣಿ ಗಂಟೆಗಟ್ಟಲೆ ಶೌಚಾಲಯದಲ್ಲೇ ಕಳೆದು ಯಾತನೆ ಅನುಭವಿಸುತ್ತಿದ್ದಾಳೆ. ಗಂಡನಿಗೆ ತನ್ನ ಪತ್ನಿ ಹೇಗಾದರೂ ಮನೆಯೊಳಗೆ ಬಂದರೆ ಅಷ್ಟೇ ಸಾಕಾಗಿರುತ್ತದೆ. ಆತ ಟೆಂಷನ್‌ನಲ್ಲಿ ಮನೆಯೊಳಗೆ ಅತ್ತಿಂದಿತ್ತ ಓಡಾಡುತ್ತಾ ಇಲಾಖೆಯವರಿಗೆ ಕಾಯುತ್ತಿದ್ದಾನೆ.‌ ಅಷ್ಟೊತ್ತಿಗಾಗಲೇ ಬೆಳಗಿನ ಜಾವ 4:30 ಗಂಟೆಯಾಗಿತ್ತು. ಕರೆಂಟ್ ಕೂಡಾ ಬಂತು. ಈಗ ಗಂಡ ಸ್ವಲ್ಪ ಮಟ್ಟಿಗೆ ಧೈರ್ಯ ಮಾಡಿ ಹಿತ್ತಲಿನ ಬಾಗಿಲು ತೆರೆದು ಚಿರತೆಯನ್ನು ಕಾಣಲು ಪ್ರಯತ್ನಿಸುತ್ತಾನೆ. ಬಾಗಿಲ ಕಿಂಡಿಯಿಂದ ಅತ್ತಿತ್ತ ನೋಡುತ್ತಾನೆ. ಆದರೆ ಅಲ್ಲಿಂದ ಸ್ಪಷ್ಟವಾಗಿ ಏನೂ ಕಾಣುವುದಿಲ್ಲ. ನಂತರ ತಲೆ ಸ್ವಲ್ಪ‌ ಹೊರ‌ಹಾಕಿ ಸುತ್ತಲೂ ನೋಡುತ್ತಾನೆ.  ಚಿರತೆ ಎಲ್ಲೂ ಇಲ್ಲ. ಬಾಗಿಲು ತೆರದು ಒಂದು ಕಾಲು ಹೊರಗಿಟ್ಟು ಇಣುಕಿ ಇಣುಕಿ ನೋಡಲು ಯತ್ನಿಸುತ್ತಾನೆ.. ಆಗಲೂ ಚಿರತೆಯ ದರ್ಶನವಾಗುವುದಿಲ್ಲ. ಪತ್ನಿಯನ್ನು ಕರೆದು ತಾನು ಎಲ್ಲಾ ಕಡೆ ನೋಡಿದ್ದು, ಎಲ್ಲೂ ಕೂಡ ಚಿರತೆ ಇಲ್ಲ. ಮೆಲ್ಲಗೆ ಬಾಗಿಲು ತೆರೆದು ನೀನು ಚಿರತೆ ಕಂಡ ಜಾಗದಲ್ಲಿ ಮತ್ತೊಮ್ಮೆ ನೋಡು ಎನ್ನುತ್ತಾನೆ. ಗಂಡನ ಮಾತು ಕೇಳಿದ ಪತ್ನಿ   ಬಾಗಿಲು ತೆರೆದು ಸಣ್ಣ ಕಿಂಡಿಯಿಂದ ನೋಡುತ್ತಾಳೆ. ಅದೇ ಸ್ಥಳದಲ್ಲಿ ಮತ್ತೆ ಚಿರತೆಯ ಮೈ ಕಾಣಿಸಿ ಬಿಡುತ್ತದೆ. ಅಯ್ಯೋ ಅಮ್ಮಾ ಎಂದು ಕಿರುಚಿಕೊಂಡು ಜೋರಾಗಿ ಬಾಗಿಲು ಮುಚ್ಚಿಕೊಳ್ಳುತ್ತಾಳೆ. ಪತ್ನಿಯ ಕೂಗಾಟಕ್ಕೆ ಗಂಡನೂ ಭಯ ಪಟ್ಟು ಮನೆ ಬಾಗಿಲು ಹಾಕಿಕೊಳ್ಳುತ್ತಾನೆ.

ಸ್ವಲ್ಪ ಸಮಯದ ನಂತರ ನಿಧಾನವಾಗಿ ಮುಂಜಾನೆಯ ಬೆಳಕು ಮೂಡುತ್ತಾ ಬರುತ್ತದೆ. ಗಂಡ ಹಿತ್ತಲಿನ ಬಾಗಿಲು ತೂತು ಮಾಡಲು ಮುಂದಾಗುತ್ತಾನೆ. ಮೊನಚಾದ ಕಬ್ಬಿಣದ ಸಲಾಕೆಯಿಂದ ಬಾಗಿಲು ಕೊರೆಯಲು ಪ್ರಾರಂಭಿಸುತ್ತಾನೆ. ಪೂರ್ತಿ ಕೊರೆದು ತೂತು ಮಾಡುವಷ್ಟರಲ್ಲಿ ಬೆಳಕಾಗಿರುತ್ತದೆ. ತೂತಿನಿಂದ ನೋಡಿದರೆ  ಶೌಚಾಲಯದಿಂದ ವಾಣಿ ಹೊರ ಬಂದು ಬಾಗಿಲ ಬಳಿ ನಿಂತಿರುತ್ತಾಳೆ. ಆಶ್ಚರ್ಯಗೊಂಡ ಗಂಡ  ವಾಣಿಯನ್ನು ಒಳಗೆ ಕರೆದುಕೊಂಡು, ಹೇಗೆ ಬಂದೆ ಎಂದು ಕೇಳುತ್ತಾನೆ.

ಅದು ಚಿರತೆಯಲ್ಲ. ಚಿರತೆ ಡಿಸೈನ್ ಇರುವ ಬಟ್ಟೆ. ಗಾಳಿಗೆ ಹಾರಿಕೊಂಡು ಬಂದು ಇಲ್ಲಿ ಬಿದ್ದಿದೆ. ಬೆಳಕಿನಲ್ಲಿ ಇದು ಖಚಿತವಾದ ಮೇಲೆ ವಾಣಿ ಧೈರ್ಯವಾಗಿ ಹೊರ ಬಂದಿರುತ್ತಾಳೆ. ನಂತರ ಇಬ್ಬರೂ ಹೋಗಿ ಮಲಗುತ್ತಾರೆ. ಹೀಗೆ ಮೂರ್ನಾಲ್ಕು ಗಂಟೆಗಳ ಅವಾಂತರ ಅಂತ್ಯಗೊಳ್ಳತ್ತದೆ.

Category : Stories


ProfileImg

Written by ಎಂ.ಡಿ.ಯುನುಸ್

Verified

ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ