ಮಹಾನಗರಿ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಧಾವಂತ. ಕೈಗೆ ಸಿಗದದ್ದೇನನ್ನೋ ಹುಡುಕಿ ಹೊರಟ ಜನತೆ. ಬರೀ ಓಟ. ನಿಧಾನವೇ ಪ್ರಧಾನ ಎಂಬ ಗಾದೆ ಮೂಲೆ ಸೇರಿ ಮೂರು ಯುಗವಾಗಿದೆ ಇಲ್ಲಿ. ಈ ಮೆಟ್ರೊಪಾಲಿಟನ್ ಸಿಟಿಯ ಮೆಟ್ರೋ ರೈಲಿನಲ್ಲಿ ನಾನು ಕಂಡ ಕೆಲವು ಘಟನೆಗಳು ನನ್ನ ಮನಸ್ಸು ಹೊಕ್ಕಿವೆ. ಅಂಥಹ ಮೂರು ಘಟನೆಗಳನ್ನು ಇಲ್ಲಿ ನೆನೆಸಿಕೊಂಡಿದ್ದೇನೆ.
ಘಟನೆ - 1
ಎಂಟು ವರ್ಷಗಳ ಹಿಂದೆ ನಾನಿನ್ನೂ ಎಂಜಿನಿಯರ್ ಅಗಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆಯಿದು.
ಸಂಜೆ ಆಫೀಸು ಮುಗಿಸಿ ಕ್ಯಾಬಿನಲ್ಲಿ ಬೈಯ್ಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ಗೆ ಬಂದಾಗ ಮಳೆ ಧೊಯ್ಯನೆ ಸುರಿಯುತ್ತಿತ್ತು. ಅರೆಬರೆ ನೆನದು ಸ್ಟೇಷನ್ ಒಳಗೆ ಓಡಿದೆ. ಮೆಟ್ರೋ ಸ್ಟೇಷನ್ ಒಳಗೆ ನಾನೆಂದೂ ಓಡುವುದಿಲ್ಲ. 5-10 ನಿಮಿಷಕ್ಕೆ ಒಂದು ರೈಲಿದೆ. ಆದರೂ ಎಲ್ಲರೂ ಏಕೆ ಇದೇ ರೈಲು ಕ್ಯಾಚ್ ಮಾಡಬೇಕೆಂದು ಧಾವಂತದಲ್ಲಿ ಓಡುತ್ತಾರೆ ಎಂದು ನನಗಿನ್ನೂ ಅರ್ಥವಾಗಿಲ್ಲ. ಒಳಗೆ ಹೋದ ಮೇಲೆ ಸುಂದರವಾಗಿ ಸುರಿಯುತ್ತಿರುವ ಮಳೆಯನ್ನು ನೋಡಿ ಸುಖಿಸುತ್ತಲೇ ಟಿಕೇಟು ತೆಗೆದುಕೊಂಡು ಮೆಟ್ರೋ ರೈಲು ಏರಿ ಸೀಟು ಸಿಗದೆ ಕಂಬಿ ಹಿಡಿದು ನಿಂತೆ. ಎದುರಿಗೆ ಒಬ್ಬಳು ಸುಂದರವಾದ ಹುಡುಗಿ. ಫೋನಿನಲ್ಲಿ ಮಾತನಾಡುತ್ತಿದ್ದಳು. ನಾನು ಮಳೆಯಲ್ಲಿ ನೆನೆದದ್ದಕ್ಕೋ ಏನೋ ಮನಸ್ಸು ಹಸಿಯಾದ ಒಂದು ಮುದದಲ್ಲಿ ತೇಲುತ್ತಿತ್ತು. ಅಕೆಯ ಸುಂದರ ವದನವನ್ನು ಮೆಚ್ಚುತ್ತಲೇ ಅವಳ ಕಾಲು ನೋಡಿದೆ. ನನಗದೊಂದು ಅಭ್ಯಾಸ, ಸುಂದರವಾದ ಹುಡುಗಿಯ ಮುಖ ನೋಡಿದ ನಂತರ ಅವರ ಕಾಲು ನೋಡುವುದು. ಕಾಲುಂಗುರವಿತ್ತು. ಮದುವೆಯಾಗಿದೆ ಎಂದುಕೊಂಡು ಹಾಗೂ ಯಾರದೇ ಮುಖವನ್ನು ತುಂಬಾ ಹೊತ್ತು ದಿಟ್ಟಿಸುವುದು ಸಮಂಜಸವಲ್ಲವೆಂದುಕೊಂಡು ಅವಳ ಮಾತಿನ ಕಡೆ ಗಮನ ಹರಿಸಿದೆ. ಆಕೆ ತಮಿಳಿನಲ್ಲಿ ತನ್ನ ಗಂಡನೊಡನೆ ಮಾತನಾಡುತ್ತಿದ್ದಳು. ಮಣಿರತ್ನಂ ಚಲನಚಿತ್ರಗಳನ್ನು ಬಿಟ್ಟರೆ ತಮಿಳು ಅಷ್ಟು ಮೃದು ಮಧುರವಾಗಿ ಕೇಳಿಸಿದ್ದು ಅದೇ ಮೊದಲು. ಆಕೆ ಅತ್ಯಂತ ಮೃದುವಾಗಿ ಅಕ್ಕಪಕ್ಕದವರಿಗೆ ಎಲ್ಲಿ ಕೇಳಿಸಿಬಿಡುತ್ತದೋ ಎಂಬಂತೆ ಪ್ರೀತಿಯಿಂದ ಮಾತನಾಡುತ್ತಿದ್ದಳು. ನನಗೆ ಮುದ್ದಣ-ಮನೋರಮೆಯರ ಪ್ರೇಮ ಸಲ್ಲಾಪ ನೆನಪಾಗುತ್ತಿತ್ತು. ಪ್ರೇಮದ ಅನುಭೂತಿಯೊಂದು ಹಳೆಯ ನೆನಪುಗಳನ್ನು ಹೆಕ್ಕಿ ತಂದು ನನ್ನ ಮನದಲ್ಲಿ ಮಳೆಯಾಗಿ ಸುರಿಯಲಾರಂಭಿಸಿತ್ತು....
ಆಕೆ ಎಲ್ಲಿದ್ದಾಳೋ ಏನೋ, ಅವತ್ತಿನ ಅದೇ ಹಚ್ಚ ಹಸಿರ ಪ್ರೇಮ ಅವಳ ಮನದಲ್ಲಿ ಈಗಲೂ ಹಾಗೆಯೇ ಇರಲಿ ಎಂದು ಅಶಿಸುತ್ತಲೇ ನನ್ನ ಪ್ರೇಮದ, ಮೌನದ, ಆನಂದದ ಮಳೆಯಲ್ಲಿ ನಾನಿಂದು ನೆನೆಯಲಿಚ್ಛಿಸುತ್ತೇನೆ.
ಘಟನೆ-2
ಒಂದು ದಿನ ನಾನು ಯಾವುದೋ ಚಲನಚಿತ್ರ ವೀಕ್ಷಿಸಲು ಮಲ್ಲೇಶ್ವರಂನ ಸಂಪಿಗೆ ಟಾಕೀಸಿಗೆ ಹೋಗಿದ್ದೆ. ಶೋ ಶುರುವಾಗಲು ಇನ್ನೂ ಅರ್ಧ ಗಂಟೆ ಸಮಯವಿತ್ತು. ಟಿಕೇಟು ತೆಗೆದುಕೊಂಡು ಅಲ್ಲಿಯೇ ಥಿಯೇಟರಿನ ಮೆಟ್ಟಿಲ ಮೇಲೆ ಕುಳಿತಿದ್ದೆ. ಆಗ ಒಬ್ಬಾಕೆಯ ಕಡೆ ನನ್ನ ಗಮನ ಹೋಯಿತು. ಬಹುಶಃ ಆಕೆಯ ವಯಸ್ಸು 40ರ ಆಸುಪಾಸಿರಬಹುದು. ಥಿಯೇಟರಿನ ಕಾಂಪೌಂಡಿನ ಹೊರಗಿನ ಫುಟ್-ಪಾತಿನಲ್ಲಿ ನಿಂತು ತನ್ನ ಫೋನಿನಲ್ಲಿ ಯಾರೊಡನೆಯೋ ಮಾತನಾಡುತ್ತಿದ್ದಳು.....ಅಳುತ್ತಾ!
ಅಳು ಎಂದರೆ ಸುಮ್ಮನೆ ಮೆಲ್ಲಗೆ ಕೆನ್ನೆ ಮೇಲಿನ ಕಣ್ಣೀರು ಒರೆಸಿಕೊಂಡು ಯಾವುದೇ ಶಬ್ದವಿಲ್ಲದೇ ಅಳುವುದಲ್ಲ. ಬಿಕ್ಕಿ ಬಿಕ್ಕಿ ರೋದಿಸುತ್ತಾ, ಯಾವುದೋ ಜೀವನ್ಮರಣದ ಪ್ರಶ್ನೆಗಾಗಿ ಹೋರಾಡುತ್ತಿರುವಂತೆ ಅಳುವುದು. ಆಕೆಯನ್ನು ಕಂಡು ನನಗೆ ಕಸಿವಿಸಿಯಾಯಿತು. ಆಕೆ ಯಾರೊಡನೆಯೋ ಜಗಳವಾಡುತ್ತಾ ಅಳುತ್ತಿದ್ದಳು. ರೋದಿಸುತ್ತಿದ್ದಳು. ಆಕೆ ಅಷ್ಟು ಜೋರಾಗಿ ಅಳುತ್ತಿದ್ದರೂ, ಕೂಗಾಡುತ್ತಿದ್ದರೂ ನನ್ನ ಅಕ್ಕಪಕ್ಕವಿದ್ದವರಾಗಲೀ, ಆ ದಾರಿಯಲ್ಲಿ ನಡೆದು ಹೋಗುತ್ತಿದ್ದ ಇತರರಾಗಲೀ ಆಕೆಯ ಕಡೆ ಗಮನ ಕೊಡುತ್ತಿರುವಂತೆ ಕಾಣಲಿಲ್ಲ.
ನನಗೆ ಆಕೆಯ ಬಳಿಗೆ ಹೋಗಿ ''Are you okay madam?'' ಎಂದು ಕೇಳಬೇಕೆನಿಸಿತು. ಆಕೆ ಫೋನ್ ಕಾಲಿನಲ್ಲಿ ಇದ್ದುದರಿಂದ ಹಾಗೆ ಹೋಗಿ ಕೇಳುವುದು ಸರಿಯೇ? ತಪ್ಪೇ? ಎಂಬ ಜಿಜ್ಞಾಸೆ ಮನದೊಳಗೆ. ನನ್ನ ಪರಿಚಯದವರನ್ನೇ ನೆಟ್ಟಗೆ ಮಾತನಾಡಿಸದ ನಾನು, ದಿಢೀರನೆ ಒಬ್ಬಳು stranger ಹೆಂಗಸನ್ನು ಹೋಗಿ ಮಾತನಾಡಿಸುವುದು, ಅದರಲ್ಲೂ ಅಂತಹ ಪರಿಸ್ಥಿತಿಯಲ್ಲಿ; ಈ ಕೆಲಸ ಸಮುದ್ರೋಲ್ಲಂಘನದಷ್ಟೇ ಕಠಿಣ ಕೆಲಸ ನನಗೆ ಎಂದೆನೆಸಿ ಅಳುಕು ಕಾಡಿತು.
ಕೊನೆಗೂ ನಾನವಳನ್ನು ವಿಚಾರಿಸಲು ಹೋಗಲಿಲ್ಲ. ಈಗಲೂ ಅವಳ ರೋದನೆಯ ದನಿ ನನಗೆ ಕೇಳಿಸುತ್ತದೆ. ಆಕೆಯ ಅಳುವ ಮುಖ ನನ್ನ ಕಣ್ಣ ಮುಂದೆ ಹಾಗಯೇ ಇದೆ. ನಾನು ಹೋಗಿ ಆಕೆಯನ್ನು ಮಾತನಾಡಿಸಬೇಕಿತ್ತೆಂಬ incompleteness ನನ್ನ ಮನದಲ್ಲಿ ಹಾಗೇ ಉಳಿದಿದೆ. ಆ ಕ್ಷಣಕ್ಕೆ ನಾನು ಒಬ್ಬ ಮನುಷ್ಯತ್ವವಿಲ್ಲದ ಕಠಿಣ ಹೃದಯಿ ಯುವಕನಾಗಿದ್ದೆ ಎಂಬುದಂತೂ ಕಟುಸತ್ಯ.
ಘಟನೆ - 3
ಹತ್ತಿರ ಹತ್ತಿರ ಒಂದು ತಿಂಗಳ ಹಿಂದಿನ ಘಟನೆ. ಎಂದಿನಂತೆ ಕೆಲಸ ಮುಗಿಸಿ ಮೆಟ್ರೋ ಹತ್ತಿ ಸೀಟು ಸಿಗದೆ ನಿಂತಿದ್ದೆ. ಎದುರಿಗೆ ಒಬ್ಬ ಮಧ್ಯವಯಸ್ಕ ಮಹಿಳೆ. ಆಕೆಯ ಅಕ್ಕ ಪಕ್ಕದಲ್ಲಿ ಆಕೆಯ ಇಬ್ಬರು ಹೆಣ್ಣುಮಕ್ಕಳು. ಒಬ್ಬಳು ಬಹುಶಃ ಏಳನೇ ತರಗತಿಯಿರಬಹುದು, ಮತ್ತೊಬ್ಬಳು ಮೂರನೇ ತರಗತಿ ಅನಿಸುತ್ತೆ. ಈ ಅಮ್ಮ ಮಕ್ಕಳ ಕಡೆ ನನ್ನ ಗಮನ ಹೋಗಿದ್ದು ಆ ಪುಟ್ಟ ಹುಡುಗಿ ಹೇಳಿದ ಒಂದು ವಾಕ್ಯದಿಂದ , '' ಅಮ್ಮಾ, i am not feeling comfortable without my bag.'' ಮುದ್ದಾದ ಬೇಜಾರಿನಲ್ಲಿ ಈ ಮಾತನ್ನು ಆ ಮಗು ಹೇಳಿದ ತಕ್ಷಣ ನಾನು ಅವರ ಕಡೆಗೆ ತಿರುಗಿದ್ದೆ. ಆ ಮಗುವಿನ ಮುಖ ಬಾಡಿ ಬೇಸರದಲ್ಲಿತ್ತು. ಕಣ್ಣಂಚಲ್ಲಿ ನೀರಿತ್ತು. ಆ ಮಗುವಿನ ಮಾತು ಕೇಳಿ ಆಕೆಯ ಅಮ್ಮ ಹಾಗೂ ಅಕ್ಕ ತುಸುನಕ್ಕರು. ಅವರಿಗೆ ಆಕೆಯನ್ನು ಸಮಾಧಾನ ಮಾಡಿ ಮಾಡಿ ಸಾಕಾಗಿರಬೇಕು. ಆ ಹುಡುಗಿಯ ಅಕ್ಕ ತನ್ನ ಬ್ಯಾಗನ್ನು ತಂಗಿಗೆ ಕೊಟ್ಟು ''ತಗೋ ಇದನ್ನ ಇಟ್ಟುಕೊಂಡು comfortable ಆಗಿ ಕೂತುಕೋ'' ಎಂದಳು. ಆಕೆಯ ಅಮ್ಮನೊಂದಿಗೆ ನಾನೂ ಕೂಡ ನಕ್ಕೆ.
ನಡೆದಿದ್ದುದು ಇಷ್ಟು - ಆ ಪುಟ್ಟ ಹುಡುಗಿ ಶಾಲೆ ಮುಗಿಸಿ ಆಟೋದಲ್ಲಿ ಮೆಟ್ರೋ ಸ್ಟೇಷನ್ನಿಗೆ ಬರುವಾಗ ತನ್ನ ಸ್ಕೂಲ್ ಬ್ಯಾಗ್ ಮರೆತುಬಿಟ್ಟಿದ್ದಳು. ಮರೆತದ್ದಕ್ಕಾಗಿ ಸಾಕಷ್ಟು ಅತ್ತಿದ್ದಳು ಎಂಬುದು ಆಕೆಯ ಮುಖ ನೋಡಿದರೇ ತಿಳಿಯುತ್ತಿತ್ತು.
ಆಕೆಯ ಅಮ್ಮ ಮತ್ತು ಅಕ್ಕ ಆ ಬ್ಯಾಗಿನಲ್ಲಿರುವ ಐಡಿ ಕಾರ್ಡ್ ಹಾಗೂ daily diary ತೆಗೆದು ಅವಳಿಗೆ ತೋರಿಸುತ್ತಾ 'ನಿನ್ ಬ್ಯಾಗಲ್ಲಿರೊ ಐಡಿಲಿ ಶಾಲೆಯ ಅಡ್ರೆಸ್ ಇದೆ, ನಿನ್ ಬ್ಯಾಗ್ ಎಲ್ಲೂ ಹೋಗಲ್ಲ ತಂದುಕೊಡುತ್ತಾರೆ ಅಳಬೇಡ' ಎನ್ನುತ್ತಾ ಸಮಾಧಾನಿಸುತ್ತಿದ್ದರು. ಆ ಮಗುವಿನ ವರ್ತನೆ ಕಂಡು ನಾನೂ ಕೂಡ ಮುಗುಳುನಗುತ್ತಿದ್ದೆ. ನಾನು ನಗುವುದನ್ನು ಕಂಡ ಆ ತಾಯಿ ನನ್ನೊಡನೆ ನಗುತ್ತಾ ''ಈ ಮಕ್ಕಳನ್ನು ಸಮಾಧಾನಿಸುವುದು ತುಂಬಾ ಕಷ್ಟ'' ಎಂದಳು. ನಾನು ಹೌದೆಂದು ತಲೆಯಾಡಿಸಿದೆ.
ಈ ನಡುವೆ ಅಕ್ಕನ ಬ್ಯಾಗಿನಿಂದ ಒಂದು ಪುಸ್ತಕ ತೆಗೆದು ಸಾಧ್ಯವಾದದ್ದನ್ನು ಓದುತ್ತಾ ಆ ಹುಡುಗಿ ಅಳು ನಿಲ್ಲಿಸಿದ್ದಳು. ನಂತರ ಅಕ್ಕನೊಡನೆ ಒಂದೆರಡು ಚುಕ್ಕಿ ಆಟ ಆಡಿದಳು. ಅಕ್ಕ ಬೇಕಂತಲೇ ಸೋತಳು. ಇದೆಲ್ಲ ಅಗುವಷ್ಟರಲ್ಲಿ ಆ ಪುಟ್ಟ ಹುಡುಗಿ ಕಿಲಕಿಲನೆ ನಗುತ್ತಾ ಆರಾಮಾಗಿದ್ದಳು. ಮಕ್ಕಳು ಎಷ್ಟು ಬೇಗ ತಮ್ಮ ದುಃಖದಿಂದ ಹೊರಬರುತ್ತಾರೆ. ಬೆಳೆದ ಮೇಲೆ ಏನಾಗುತ್ತದೆ ನಮಗೆ? ಒಂದೇ ದುಃಖಕ್ಕೆ ನೂರು ಬಾರಿ ಅಳುತ್ತೇವಲ್ಲ ಎಂದುಕೊಂಡೆ. ಆದರೆ ನಂತರ ನಡೆದದ್ದೇ ನನ್ನ ಸೋಜಿಗಕ್ಕೆ ಕಾರಣವಾಗಿದ್ದು. ಅಕ್ಕನ ಪುಸ್ತಕದಲ್ಲಿ ಆ ಹುಡುಗಿ ಏನನ್ನೋ ಬರೆಯ ತೊಡಗಿದಳು - ಅವರಮ್ಮ ಹಾಗೂ ಅಕ್ಕನಿಗೆ ಕಾಣದಂತೆ ಮುಚ್ಚಿಕೊಂಡು ಬರೆಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಳು. ಆ ಪುಟ್ಟ ಕೈಗಳು ಎಷ್ಟನ್ನು ಮುಚ್ಚಿಡಲಾದೀತು, ಆಕೆ ಬರೆಯುತ್ತಿದ್ದುದೆಲ್ಲವೂ ನನಗೆ ಕಾಣುತ್ತಿತ್ತು. ಆಕೆ ಬರೆದ ಸಾಲು....
''I am feeling sad today. Because i lost my bag today''
ಮುಖದಲ್ಲಿ ಕಿಂಚಿತ್ತಾದರೂ ದುಃಖದ,ಬೇಸರದ ಸುಳಿವಿಲ್ಲ. ಆದರೆ ಆಕೆಯ ಎದೆಯಲ್ಲಿ ಆ ನೋವಿದೆ. ಮಕ್ಕಳು ದುಃಖವನ್ನು ಬೇಗ ಮರೆಯುತ್ತಾರೆ, ಮನದಲ್ಲಿ ದುಃಖವಿದ್ದರೂ ಹೊರಗೆ ನಗುಗುತ್ತಲೇ ಇರುವವರು ಬೆಳೆದವರು ಮಾತ್ರವೇ, ಮಕ್ಕಳು ಹಾಗಿರುವುದಿಲ್ಲ ಎಂದೇ ನಂಬಿದ್ದ ನನಗೆ ಆಶ್ಚರ್ಯ. ಚಿಕ್ಕ ವಯಸ್ಸಿನಲ್ಲಿ ದುಃಖವಾದರೆ ಅಳುತ್ತೇವೆ, ಖುಷಿಯಾದರೆ ನಗುತ್ತೇವೆ its that simple ಅಂದುಕೊಂಡಿದ್ದೆ. ಆದರದು ಸುಳ್ಳು ಎಂದು ಅವತ್ತು ಗೊತ್ತಾಯಿತು.
ಅಷ್ಟರಲ್ಲಿ ಅವರು ಇಳಿಯುವ ಸ್ಟೇಷನ್ ಬಂದಿತ್ತು. ಸೀಟು ಬಿಟ್ಟು ಎದ್ದ ಆ ತಾಯಿಯನ್ನು ಆ ಹುಡುಗಿಯ ಹೆಸರೇನೆಂದು ಕೇಳಿದೆ. ಶಿಶಿರ ಎಂದರು. ನಾನು ''ಅವಳಷ್ಟೇ ಮುದ್ದಾದ ಹೆಸರ'' ಎಂದೆ. ಆ ತಾಯಿ ಥ್ಯಾಂಕ್ಸ್ ಎಂದು ನಕ್ಕರು. ನಾನು ಆಕೆಯ ಬಗ್ಗೆ ಏನೋ ಕೇಳಿದೆ ಎಂದರಿತ ಶಿಶಿರ ತನ್ನ ಅಮ್ಮನನ್ನು ''ಏನ್ ಕೇಳಿದರು ಅವರು?'' ಎಂದು ಪ್ರಶ್ನಿಸಿದಳು. ಅಮ್ಮ ಉತ್ತರಿಸುವಷ್ಟರಲ್ಲಿ ನಾನೇ ಹೇಳಿದೆ - ''ನೀನು ನಗುತ್ತಿದ್ದರೆ ತುಂಬಾ ಮುದ್ದಾಗಿ ಕಾಣುತ್ತೀಯ ಅಳಬೇಡ ಅಂತ ಹೇಳಿ ಶಿಶಿರಗೆ ಅಂತ ಹೇಳಿದೆ'' ಎಂದು. ಶಿಶಿರ ನಾಚಿ ನಗುತ್ತ ಮೆಟ್ರೊ ಇಳಿದು ಹೋದಳು.
ಇಂದಿಗೂ ಶಿಶಿರಳಿಗೆ ತನ್ನ ಪ್ರೀತಿಯ ಬ್ಯಾಗ್ ಮತ್ತು ಆಕೆಯ ಇಷ್ಟವಾದ ಪುಸ್ತಕ ಸಿಕ್ಕತೇ ಇಲ್ಲವೇ ಎಂದು ಯೋಚಿಸುತ್ತಿರುತ್ತೇನೆ.
ಕಲೆ, ಕಾವ್ಯ, ಬರಹ, ಚಲನಚಿತ್ರಗಳ ಅಭಿಮಾನಿ. ಹೀಗೆ ಸುಮ್ಮನೆ ಬರೆಯುವವ.