-:ದಯಾಮಯಿ ಕರ್ಣ:-
ನುಡಿಯೇ ತಾಯಿ,
ನಿನ್ನದು ಅಂಧಾಭಿಮಾನವೋ,
ಇಲ್ಲವೇ ನಿನ್ನ ಅಂದ ಅಭಿರಾಮವೋ,
ನಿನ್ನ ಕೌಮಾರ್ಯದಲ್ಲಿ
ಮುನಿವರ್ಯರು ಪಾಲಿಸಿದ
ಪಂಚ ಮಂತ್ರದಿ
ಮೊದಲ ಪಠಣಕ್ಕೆ ಸೂರ್ಯನಂಶಜ,
ಕರ್ಣೋದ್ಭವ ಅಗ್ರಜನಿಗೇ,
ಏಕೆ ತಾತ್ಸಾರವೊ ನಿನಗೆ. .....
ಗರ್ಭದೊಳು ನವಮಾಸ ಕಳೆಯದ
ಒಡಲ ಶೋಭಿಸದ ಕೂಸೆಂದು ಮುನಿದೆಯೋ,
ಇಲ್ಲವೇ ಅಕ್ರಮದ ಅಪಖ್ಯಾತಿಗೆ ಹೆದರಿ
ಲೋಕೈಕ ಆಗ್ರಹಕ್ಕೆ ಮಣಿದೆಯೋ,
ನುಡಿಯೇ ತಾಯಿ
ನಿನ್ನದು ಅಂಧಾಭಿಮಾನವೋ,
ಇಲ್ಲವೇ ನಿನ್ನ ಅಂದ ಅಭಿರಾಮವೋ,
ಪಾವನಿ ಗಂಗೆಯಲ್ಲಂದು
ಬೆಳದಲ್ಲಿ , ಬೆಳೆಯೆಂದು
ತೇಲಿಸಿ ಕೈ ಬಿಟ್ಟಾಗ
ಆ ಕಣ್ಣೀರ ಪ್ರವಾಹದಲ್ಲಿ
ಬಲಿಯದ ರಟ್ಟೆಗಳು ಸೋಕಲಾದಿತೆಂದೆಯೋ,
ಇಲ್ಲವೇ, ಅದುವೇ ಶೋಕವಾಯಿತೆಂದೆಯೋ,
ನುಡಿಯೇ ತಾಯಿ
ನಿನ್ನದು ಅಂಧಾಭಿಮಾನವೋ,
ಇಲ್ಲವೇ ನಿನ್ನ ಅಂದ ಅಭಿರಾಮವೋ,
ಅಂದು ಅಂಬು ತೊರೆದ ಬಳ್ಳಿಗೆ
ಸುಯೋಧನನೆಂಬ ಮರ ಆವರಿಸಿದ್ದಾಗ
ನಿನ್ನ ಭಾತೃ ಸಮಾನ
ಕೃಷ್ಣನ ಕುಹಕ ನುಡಿಗೆ ಕಿವಿಗೊಡದೆ
ಒಡೆಯನ ಒಡನೆ ಅನ್ನವನ್ನುಂಡ
ನನ್ನ ನಾಲಿಗೆ ಹೇಸಿಗಾದಿತೆಂದು
ಎನ್ನೊಡೆಯನ ಸಂಗ ಭಂಗ ತರುವ
ಸಂಧಾನದ ಮುರಿತಕ್ಕೆ ರೋಸಿ ಹೋದೆಯೋ,
ಇಲ್ಲವೇ ಗಾಸಿ ಹೋದೆಯೋ,
ನುಡಿಯೇ ತಾಯಿ
ನಿನ್ನದು ಅಂಧಾಭಿಮಾನವೋ,
ಇಲ್ಲವೇ ನಿನ್ನ ಅಂದ ಅಭಿರಾಮವೋ,
ಮುಂದಿನ ಕುರುಕ್ಷೇತ್ರದೊಳು
ಪಾಂಡು ಸುತರ ಹಿತಕ್ಕೆ,
ದಯ ಬಿಕ್ಷೆ ನಿಧಿಯೇ ನೀನೆಂದು
ಬಳಸಿನಿಂದ, ಒಲವಿನಿಂದ
ಕುಂಡಲ ಪಾಲಿಸೆಂದು ಬೇಡುವಾಗ
ನಿನ್ನೊಡಲ ಕರುಳ ಕಿವಿಚಿತೋ,
ಇಲ್ಲವೋ ಉಭಯ ಕುಂದು ಅವಿತಿತೋ...
ನುಡಿಯೇ ತಾಯಿ
ನಿನ್ನದು ಅಂಧಾಭಿಮಾನವೋ,
ಇಲ್ಲವೇ ನಿನ್ನ ಅಂದ ಅಭಿರಾಮವೋ,
ಇದೇ ಕೊನೆ ಮೊದಲು ತಾಯಿ
ಮಸೆದ ಕತ್ತಿಗೆ
ಶಿರ ಹರಿಯುವೆ
ಶತೃ ಪಾಳೆಕ್ಕೆ ನುಗ್ಗಿ, ಮುನ್ನಡೆಯುವೆ
ಆದರೆ ನಿನ್ನೈವರ ಉರ ಕಾಯುವೆ,
ಇದು ನಿನ್ನಾಣೆ,ನನ್ನೊಡೆಯನಾಣೆ,
ಇದುವೇ ನನ್ನ ಸ್ವಾಭಿಮಾನದ ಮೇಲಾಣೆ.......
✒ಮಾಹಶ್ರೀ ✒