ಕೃಷ್ಣ ಜನ್ಮಾಷ್ಟಮಿಯ ದಿನ ಪೋಷಕರು ತಮ್ಮ ಮುದ್ದುಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂತೋಷ ಪಡುತ್ತಾರೆ. ಹಾಗೆಯೇ “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬಂತೆ ಜನರು ಹೊಟ್ಟೆಪಾಡಿಗಾಗಿ ನಾನಾ ವೇಷಗಳನ್ನು ಹಾಕುತ್ತಾರೆ. ಆದರೆ ಪೃಕೃತಿಯಲ್ಲಿ ಹೊಟ್ಟೆಪಾಡಿಗಾಗಿ ಅಥವಾ ಬದುಕುವುದಕ್ಕಾಗಿ ಅನೇಕ ಪ್ರಾಣಿಗಳು ಎಷ್ಟೋ ಕೋಟ್ಯಾಂತರ ವರ್ಷಗಳಿಂದ ಈ ಛದ್ಮವೇಷದ ಕಲೆಯನ್ನು ಕರಗತ ಮಾಡಿಕೊಂಡಿವೆ. ಅದರಲ್ಲೂ ಕೀಟಗಳದ್ದಂತೂ ಛದ್ಮವೇಷ ಧಾರಣೆಯಲ್ಲಿ ಎತ್ತಿದ ಕೈ. ಹಾಗಾದರೆ ಧರೆಯಲ್ಲಿ ಯಾವ್ಯಾವ ಪ್ರಾಣಿಗಳೆಲ್ಲ ಛದ್ಮವೇಷ ಧರಿಸಿವೆ? ಅವುಗಳ ಉದ್ದೇಶವೇನು? ಈ ಬಗ್ಗೆ ಒಂದಿಷ್ಟು ಗಮನಹರಿಸೋಣ.
ಕೀಟಸಾಮ್ರಾಜ್ಯದಲ್ಲಿ “ಫಾಸ್ಮಿಡಾ” ಎಂಬ ಒಂದು ವರ್ಗವಿದೆ. ಈ ವರ್ಗವಂತೂ ಛದ್ಮವೇಷಕ್ಕೇ ಸುಪ್ರಸಿದ್ಧವಾಗಿದೆ. ಕಡ್ಡಿಕೀಟ ಮತ್ತು ಎಲೆಕೀಟಗಳು ಈ ಗುಂಪಿಗೆ ಸೇರುತ್ತವೆ. ತಾವು ಕುಳಿತ ಸ್ಥಳದಿಂದ ಇವು ಚಲಿಸದೇ ಇದ್ದರೆ ಯಾರೂ ಪತ್ತೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಕಡ್ಡಿಕೀಟಗಳ ಇಡೀ ದೇಹ ಮತ್ತು ಕೈಕಾಲುಗಳೆಲ್ಲಾ ತದ್ವತ್ತಾಗಿ ಕಡ್ಡಿಯನ್ನೇ ಹೋಲುತ್ತವೆ. ಎಲೆಕೀಟವೂ ಅಷ್ಟೆ, ಎಲೆಯನ್ನೇ ಹೋಲುವ ದೇಹವನ್ನು ಪಡೆದಿವೆ. ಅವುಗಳ ರೆಕ್ಕೆಗಳು ಸಹ ತಾವು ವಾಸಿಸುವ ಗಿಡದ ಎಲೆಯನ್ನೇ ಹೋಲುತ್ತವೆ. ಎಲೆಗಳ ನಡುವೆ ಗೆರೆಗಳಿರುವಂತೆ ಇವುಗಳ ರೆಕ್ಕೆಗಳ ನಡುವೆ ಕೂಡ ಗೆರೆಗಳಿರುತ್ತವೆ. ಜೊತೆಗೆ ಮರದ ಎಲೆಗಳು ಒಣಗಿದಾಗ ಇವುಗಳ ರೆಕ್ಕೆಗಳೂ ಕೂಡ ಒಣಗಿದ ಎಲೆಗಳ ಬಣ್ಣವನ್ನೇ ತಳೆಯುತ್ತವೆ! ಕೀಟಗಳ ಬಹುಮುಖ್ಯ ಶತ್ರುಗಳಾದ ಪಕ್ಷಿಗಳಿಂದ ಬಹುಸುಲಭವಾಗಿ ಪಾರಾಗಲು ಇದು ಅತ್ಯುತ್ತಮ ಉಪಾಯ. ಜೊತೆಗೆ ಅವುಗಳ ಕಾಲುಗಳಿಗೆ ಸಹ ಎಲೆಯ ಚೂರುಗಳು ಅಂಟಿಕೊಂಡಂತೆ ಕಾಣುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಅವು ಸಾಮಾನ್ಯ ಕಣ್ಣಿಗೆ ಕೀಟಗಳೇ ಅಲ್ಲ, ಎಲೆಗಳು! ತಮ್ಮ ಈ ಛದ್ಮವೇಷದಿಂದಾಗಿಯೇ ವೈರಿಗಳ ಕಣ್ಣಿಗೆ ಸುಲಭವಾಗಿ ಬೀಳದೆ ಲಕ್ಷಾಂತರ ವರ್ಷಗಳಿಂದ ನೆಮ್ಮದಿಯ ಬದುಕು ಸಾಗಿಸುತ್ತಿವೆ. ಕೆಲ್ಲಿಮಾ ಎಂಬ ಒಂದು ಜಾತಿಯ ಚಿಟ್ಟೆ ಇದೆ. ಅದೂ ಸಹ ಒಣಗಿದ ಎಲೆಗಳನ್ನು ಹೋಲುತ್ತದೆ. ಹಾಗಾಗಿ ಅದು ನೆಲದ ಮೇಲೆ ಸತ್ತಂತೆ ಬಿದ್ದಿದ್ದರೆ ಯಾರೂ ಅದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ.
ಈ ತಂತ್ರ ಕೇವಲ ಕೀಟಗಳಿಗಷ್ಟೇ ಸೀಮಿತವಾಗಿಲ್ಲ. ಪಕ್ಷಿಗಳು ಸಹ ಈ ತಂತ್ರವನ್ನು ಕೈಗೂಡಿಸಿಕೊಂಡಿವೆ. ಅದರಲ್ಲಿ “ಫ್ರಾಗ್ ಮೌತ್” ಎಂಬ ಹಕ್ಕಿ ಬಹಳ ಪ್ರಸಿದ್ಧವಾಗಿದೆ. ಈ ಹಕ್ಕಿ ಕುರುಡುಗಪ್ಪಟ ಹಕ್ಕಿಗಳ ಹತ್ತಿರದ ಸಂಬಂಧಿ. ಒಣಗಿದ ಮರದಲ್ಲಿ ಇದು ಕುಳಿತರೆ ಇದನ್ನು ಪತ್ತೆ ಹಚ್ಚುವುದು ಸಾಧ್ಯವೇ ಇಲ್ಲ ಅಷ್ಟೊಂದು ಅದ್ಭುತವಾಗಿ ತಾವು ಕುಳಿತ ಮರದಲ್ಲೇ ಲೀನವಾಗಿಬಿಡುತ್ತವೆ. ನಿಶಾಚರಿಗಳಾದ ಈ ಹಕ್ಕಿಗಳು ಹಗಲುಹೊತ್ತಿನಲ್ಲಿ ಒಂದು ಕೊಂಬೆಯನ್ನು ಆರಿಸಿಕೊಂಡು ಅಲ್ಲಿ ಅಲ್ಲಾಡದೆ ಕುಳಿತುಬಿಡುತ್ತವೆ. ಅದರ ಗರಿಗಳ ಬಣ್ಣ ಮತ್ತು ರಚನೆ ತರಗೆಲೆಗಳನ್ನೇ ಹೋಲುವಂತಿರುತ್ತದೆ. ಹೀಗಾಗಿ ಅಲ್ಲೊಂದು ಹಕ್ಕಿ ಕುಳಿತಿದೆ ಎಂದು ಪತ್ತೆಹಚ್ಚುವುದು ತುಂಬಾ ಕಷ್ಟ. ಹೀಗೆ ಹಗಲಿಡೀ ಅವು ನಿಶ್ಚಿಂತೆಯಿಂದ ನಿದ್ರಿಸುತ್ತವೆ.
ಇದೇ ತಂತ್ರವನ್ನು ಅಳವಡಿಸಿಕೊಂಡಿರುವ ಇನ್ನೂ ಅನೇಕ ಹಕ್ಕಿಗಳಿವೆ. ಸಾಮಾನ್ಯವಾಗಿ ನಿಶಾಚರಿ ಹಕ್ಕಿಗಳೇ ಈ ತಂತ್ರವನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತವೆ. ಹಗಲುಹೊತ್ತಿನಲ್ಲಿ ಶತ್ರುಗಳ ಕಣ್ಣಿಗೆ ಬೀಳದಿರಲು ಅವು ಈ ತಂತ್ರ ಅನುಸರಿಸುತ್ತವೆ. ಸಾಮಾನ್ಯವಾಗಿ ಅವು ಒಣಗಿದ ತರಗೆಲೆಗಳನ್ನು ಅಥವಾ ಮರದ ಬೊಡ್ಡೆಗಳನ್ನು ಹೋಲುತ್ತವೆ. ಅಲ್ಲೊಂದು ಹಕ್ಕಿಯಿದೆಯೆಂದು ಪತ್ತೆ ಮಾಡುವುದು ಸಾಧ್ಯವೇ ಇಲ್ಲ ಎಂಬಂಥ ರೀತಿಯಲ್ಲಿ ಕುಳಿತಿರುತ್ತವೆ. ಅಮೆರಿಕದಲ್ಲಿ ಬಿಟರ್ನ್ ಎಂಬ ಒಂದು ಪಕ್ಷಿ ಇದೆ. ಅದು ಈ ರೀತಿಯ ಛದ್ಮವೇಷಕ್ಕೆ ಹೆಸರುವಾಸಿ. ಅದು ಸಾಮಾನ್ಯವಾಗಿ ವಾಸಿಸುವುದು ಹುಲ್ಲುಗಾವಲುಗಳಲ್ಲಿ. ಬೇಸಿಗೆಯಲ್ಲಿ ಹುಲ್ಲುಗಾವಲು ಒಣಗಿ ನಿಂತಾಗ ಈ ಹಕ್ಕಿ ಒಣಗಿದ ಹುಲ್ಲುಕಡ್ಡಿಗಳ ನಡುವೆ ತಾನೂ ಹುಲ್ಲಾಗಿ ನಿಂತುಬಿಡುತ್ತದೆ. ಯಾವುದೇ ಬೇಟೆಗಾರನಿಗೆ ಇಲ್ಲೊಂದು ಪಕ್ಷಿಯಿದೆ ಎಂಬ ಸಣ್ಣ ಅನುಮಾನ ಕೂಡ ಬರುವುದಿಲ್ಲ.
ಪಕ್ಷಿಗಳ ಹೋರಾಟ ಆತ್ಮರಕ್ಷಣೆಗಷ್ಟೇ ಮೀಸಲಾಗಿಲ್ಲ. ತಮ್ಮ ಮೊಟ್ಟೆ, ಮರಿಗಳನ್ನು ಶತ್ರುಗಳಿಂದ ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾದ ಕೆಲಸ. ಅನೇಕ ಹಕ್ಕಿಗಳು ತಮ್ಮ ಗೂಡುಗಳನ್ನು ತಾವು ವಾಸಿಸುವ ಮರದ ಮೇಲೆ ಗುರುತಿಸಲು ಸಾಧ್ಯವೇ ಆಗದ ರೀತಿಯಲ್ಲಿ ಕಟ್ಟುತ್ತವೆ. ಇನ್ನೂ ಕೆಲವು ಹಕ್ಕಿಗಳು ಮರದಲ್ಲಿ ಗೂಡು ಕಟ್ಟುವ ಉಸಾಬರಿಯೇ ಬೇಡವೆಂದು ನೆಲದ ಮೇಲೆಯೇ ಮೊಟ್ಟೆಯಿಡುತ್ತವೆ. ಅವುಗಳಲ್ಲಿ ಟಿಟ್ಟಿಭ ಹಕ್ಕಿಗಳ ಸಮೀಪದ ಸಂಬಂಧಿಗಳಾದ ಪ್ಲೋವರ್‌ಗಳು ಅತ್ಯಂತ ಪ್ರಮುಖವಾದವು. ಅವುಗಳ ಮೊಟ್ಟೆಗಳ ಮೇಲಿನ ಚಿತ್ತಾರವೂ ನೆಲದ ಮೇಲೆ ಬಿದ್ದಿರುವ ಕಲ್ಲುಗಳನ್ನೇ ತದ್ವತ್ತಾಗಿ ಹೋಲುತ್ತದೆ. ಹಾಗಾಗಿ ಅಲ್ಲಿ ಮೊಟ್ಟೆಗಳಿವೆಯೆಂದು ಯಾರೂ ಪತ್ತೆ ಮಾಡಲು ಸಾಧ್ಯವೇ ಇಲ್ಲ. ಜೊತೆಗೆ ಯಾರಾದರೂ ಹತ್ತಿರ ಬಂದರೆ ಆ ಹಕ್ಕಿ ದೊಡ್ಡ ನಾಟಕ ಆಡುತ್ತದೆ. ಶತ್ರುವಿನ ಗಮನವನ್ನು ಮೊಟ್ಟೆಗಳಿಂದ ದೂರ ಸೆಳೆಯುವುದಕ್ಕಾಗಿ ತನ್ನ ರೆಕ್ಕೆ ಮುರಿದಿರುವಂತೆ ನಾಟಕವಾಡುತ್ತ ಒದ್ದಾಡುತ್ತದೆ. ಸರಿಯಾಗಿ ಹಾರಲು ಬಾರದ ಈ ಹಕ್ಕಿಯನ್ನು ಸುಲಭವಾಗಿ ತಿನ್ನಬಹುದೆಂದು ಶತ್ರು ಅದನ್ನು ಬೆನ್ನಟ್ಟುತ್ತದೆ. ತನ್ನ ಮೊಟ್ಟೆಯಿಂದ ಶತ್ರುವನ್ನು ಸಾಕಷ್ಟು ದೂರ ಕೊಂಡೊಯ್ದ ಬಳಿಕ ಪ್ಲೋವರ್ ತನ್ನ ನಾಟಕವನ್ನು ನಿಲ್ಲಿಸಿ ನೇರವಾಗಿ ತನ್ನ ಮೊಟ್ಟೆಗಳತ್ತ ಹಾರಿಬರುತ್ತದೆ.
ಹಾರುವ ಓತಿಯನ್ನು ನೋಡಿರದಿದ್ದರೂ ಅದರ ಹೆಸರನ್ನಂತೂ ಹೆಚ್ಚಿನವರು ಕೇಳಿರುತ್ತಾರೆ. ಸಾಮಾನ್ಯವಾಗಿ ದಟ್ಟವಾದ ಮಳೆಕಾಡುಗಳಲ್ಲಿ ಕಾಣಸಿಗುವ ಇವು ಸಹ ತಮ್ಮ ರಕ್ಷಣೆಗಾಗಿ ಛದ್ಮವೇಷವನ್ನೇ ಮೆಚ್ಚಿಕೊಂಡಿವೆ. ಅವುಗಳ ಮೈಬಣ್ಣ ಹೇಗಿದೆಯೆಂದರೆ ಮರದ ತೊಗಟೆಯನ್ನೇ ತದ್ವತ್ತಾಗಿ ಹೋಲುತ್ತದೆ. ಹಾಗಾಗಿ ಅದು ಚಲಿಸದ ಹೊರತು ಅದನ್ನು ಪತ್ತೆ ಮಾಡುವುದು ಸಾಧ್ಯವೇ ಇಲ್ಲ.
ಛದ್ಮವೇಷಿ ಜೀವಿಗಳ ಬಗೆಗೆ ಹೇಳುವಾಗ ಗೋಸುಂಬೆಗಳ ಬಗೆಗೆ ಹೇಳದಿದ್ದರೆ ಲೇಖನವೇ ಅಪರಿಪೂರ್ಣವಾಗುತ್ತದೆ. ಗೋಸುಂಬೆಯ ಹೆಸರನ್ನು ಬಹುಶಃ ಕೇಳದವರೇ ಇಲ್ಲ. ಆದರೆ ತನ್ನ ಬಣ್ಣ ಬದಲಾಯಿಸುವ ಗುಣದಿಂದಾಗಿಯೇ ಈ ನಿರುಪದ್ರವಿ ಜೀವಿ ಕುಖ್ಯಾತಿಗೆ ಈಡಾಗಿದ್ದು ಮಾತ್ರ ದುರದೃಷ್ಟಕರ. ತನ್ನ ಹೊಟ್ಟೆಪಾಡಿಗಾಗಿ ಮತ್ತು ಶತ್ರುಗಳಿಂದ ತಪ್ಪಿಸಿಕೊಳ್ಳಲು ಬಣ್ಣ ಬದಲಾಯಿಸುವ ಈ ನಿರುಪದ್ರವಿ ಜೀವಿಯನ್ನು ಸ್ವಾರ್ಥಕ್ಕಾಗಿ ನಿಮಿಷಕ್ಕೊಂದು ರೀತಿ ವರ್ತಿಸುವ ಮನುಷ್ಯರಿಗೆ ಹೋಲಿಸಲಾಗುತ್ತಿದೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದ ಪಾಪದ ಗೋಸುಂಬೆ ತನ್ನ ಪಾಡಿಗೆ ತಾನು ಬೇಲಿಯ ಮೇಲೆ, ಮರಗಳ ಮೇಲೆ ಹುಳುಗಳನ್ನು ಹಿಡಿದು ತಿನ್ನುತ್ತ ಬದುಕುತ್ತಿದೆ!
ಇದು ತಮ್ಮ ಆತ್ಮರಕ್ಷಣೆಗೆಂದು ಪ್ರಕೃತಿಯಲ್ಲಿ ಲೀನವಾಗುವ ಜೀವಿಗಳ ಕಥೆಯಾದರೆ ಅನೇಕ ಬೇಟೆಗಾರ ಪ್ರಾಣಿಗಳೂ ಸಹ ಇದೇ ತಂತ್ರವನ್ನು ಅನುಸರಿಸುತ್ತವೆ. ನಾವು ಬೇಟೆಗಾರ ಪ್ರಾಣಿಗಳ ಜೀವನ ಬಲಿಪ್ರಾಣಿಗಳಿಗಿಂತ ಸುಲಭ ಎಂದುಕೊಂಡಿರುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಅವೂ ಕೂಡ ತಮ್ಮ ಬೇಟೆಯನ್ನು ಪಡೆಯಲು ಸಾಕಷ್ಟು ಬೆವರು ಹರಿಸಬೇಕಾಗುತ್ತದೆ ಮತ್ತು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ ಛದ್ಮವೇಷಧಾರಿ ಪ್ರಾಣಿಗಳನ್ನು ಹಿಡಿಯುವುದು ಬಹಳ ಕಷ್ಟ. ಅದಕ್ಕಾಗಿಯೇ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಗಾದೆಯಂತೆ ಅನೇಕ ಪ್ರಾಣಿಗಳು ಇದೇ ತಂತ್ರ ಬಳಸಿ ಬೇಟೆಯಾಡುತ್ತವೆ. ಎಷ್ಟೇ ಬಲಿಷ್ಟ ಪ್ರಾಣಿಯಾದರೂ ಕೂಡ ತನ್ನ ಆಗಮನದ ಸುಳಿವನ್ನು ಕೊಡದೇ ಬಲಿಯ ಸಮೀಪ ಸಾಗಿದರೆ ಮಾತ್ರ ಕೆಲಸ ಸುಲಭವಾಗುತ್ತದೆ. ಇಲ್ಲವಾದರೆ ಮಿಕ ಪರಾರಿಯಾಗುತ್ತದೆ. ಬೇಟೆಗಾರನಿಗೆ ಉಪವಾಸವೇ ಗತಿ!
ಕೀಟ ಸಾಮ್ರಾಜ್ಯದಲ್ಲಿ ಸೂರ್ಯನ ಕುದುರೆ (ಪ್ರೇಯಿಂಗ್ ಮ್ಯಾಂಟಿಸ್)ಗಳದ್ದು ಒಂದು ಪ್ರಮುಖ ವರ್ಗ. ಪ್ರಾರ್ಥನೆ ಮಾಡುವಾಗ ನಾವು ಕೈಜೋಡಿಸಿ ನಿಲ್ಲುವಂತೆ ಅವು ನಿಲ್ಲುತ್ತವೆ. ಆದ್ದರಿಂದ ಅವುಗಳಿಗೆ ಈ ಹೆಸರು ಬಂದಿದೆ. ಆ ಎರಡು ಕೈಗಳು ನಿಜಕ್ಕೂ ಪ್ರಾರ್ಥನೆ ಮಾಡುವ ಉದ್ದೇಶದಿಂದ ಜೋಡಿಸಿದ್ದಲ್ಲ. ಬೇಟೆಯಾಡುವ ಉದ್ದೇಶದಿಂದ ಜೋಡಿಸಿ ಹಿಡಿದಿದ್ದು! ತನ್ನ ಸಮೀಪ ಬರುವ ಚಿಕ್ಕಪುಟ್ಟ ಕೀಟಗಳನ್ನು ಗಬಕ್ಕನೆ ಹಿಡಿದು ತಿನ್ನುತ್ತವೆ. ಈ ವರ್ಗದಲ್ಲೇ ಕೆಲವು ಜಾತಿಗಳು ಛದ್ಮವೇಷಧಾರಿಗಳಾಗಿವೆ. ಆರ್ಕಿಡ್ ಕುಸುಮಗಳ ನಡುವೆ ಅವುಗಳನ್ನೇ ಹೋಲುವ ಸೂರ್ಯಕುದುರೆಗಳು ಕುಳಿತು ಹೊಂಚುಹಾಕುತ್ತಿರುತ್ತವೆ. ಯಾವುದಾದರೂ ಬಡಪಾಯಿ ಪಾತರಗಿತ್ತಿ ಗೊತ್ತಿಲ್ಲದೆ ಹತ್ತಿರ ಬಂದರೆ ಅದರ ಕಥೆ ಅಲ್ಲಿಗೆ ಮುಗಿದಂತೆ!
ಕೀಟಗಳ ಪ್ರಮುಖ ಬೇಟೆಗಾರರೆಂದರೆ ಜೇಡಗಳು. ಅವುಗಳಲ್ಲಿ ಕೂಡ ಛದ್ಮವೇಷಧಾರಿಗಳು ಬೇಕಾದಷ್ಟಿವೆ. ಏಡಿ ಜೇಡ ಎಂಬ ಪುಟ್ಟ ಜೇಡವೊಂದು ಹೂವಿನ ಪಕಳೆಗಳನ್ನೇ ಹೋಲುವ ದೇಹವನ್ನು ಪಡೆದಿದೆ. ಹೂವಿನ ನಡುವೆ ಕುಳಿತು ಅವೂ ಸಹ ಪಾತರಗಿತ್ತಿಗಳನ್ನು ಹಿಡಿಯುತ್ತವೆ. ಇರುವೆಗಳನ್ನು ಹೋಲುವ ಇನ್ನೊಂದು ಜಾತಿಯ ಜಾತಿಯ ಜೇಡವಿದೆ. “ಆಂಟ್ ಮಿಮಿಕಿಂಗ್ ಸ್ಪೈಡರ್” ಎಂದು ಕರೆಯಲ್ಪಡುವ ಈ ಜೇಡ ನೋಡಲು ಇರುವೆಯನ್ನು ಎಷ್ಟರಮಟ್ಟಿಗೆ ಹೋಲುತ್ತದೆಯೆಂದರೆ ಅದು ಇರುವೆ ಸಾಲಿನಲ್ಲಿ ಮತ್ತೊಂದು ಇರುವೆಯಂತೆಯೇ ಸಾಗುತ್ತಿರುತ್ತದೆ. ಸಮಯ ಸಾಧಿಸಿ ಇರುವೆಯೊಂದನ್ನು ಕುಟುಕಿ ತನ್ನ ನೂಲಿನಲ್ಲಿ ತೇಲುತ್ತ ಹೊತ್ತೊಯ್ಯುತ್ತದೆ. ತಮ್ಮೊಳಗೇ ಶತ್ರುವೊಬ್ಬ ಬಂದು ಸೇರಿಕೊಂಡಿದ್ದಾನೆಂದು ಇರುವೆಗಳಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಎಂಟು ಕಾಲುಗಳನ್ನು ಹೊಂದಿರುವ ಜೇಡ ತನ್ನ ಮುಂದಿನ ಕಾಲುಗಳನ್ನು ಇರುವೆಯ ಆಂಟೆನಾದಂತೆ ಎತ್ತಿಹಿಡಿದರೆ ಇರುವೆಗಳು ಹಾಗಿರಲಿ, ಮನುಷ್ಯರು ಕೂಡ ಅದನ್ನು ಜೇಡವೆಂದು ಗುರುತಿಸಲಾರರು!
ಇನ್ನು ದೊಡ್ಡ ಪ್ರಾಣಿಗಳ ವಿಷಯಕ್ಕೆ ಬಂದರೆ ನಮಗೆ ಮೊದಲು ನೆನಪಾಗುವ ಬೇಟೆಗಾರರೆಂದರೆ ಹುಲಿ, ಸಿಂಹ ಮತ್ತು ಚಿರತೆ ಇತ್ಯಾದಿ ದೊಡ್ಡ ಬೆಕ್ಕುಗಳು. ಹುಲಿ, ಚಿರತೆಗಳ ಮೈಮೇಲಿನ ಚಿತ್ತಾರ ಕೂಡ ಅವಕ್ಕೆ ಬೇಟೆಯಾಡಲು ಅನುಕೂಲ ಮಾಡಿಕೊಡುವ ಸಲುವಾಗಿಯೇ ಇದೆ. ನೀವು ಕಾಡಿನಲ್ಲಿ ಹುಲಿ, ಚಿರತೆಗಳು ಬೇಟೆಗಾಗಿ ಹೊಂಚುಹಾಕುವುದನ್ನು ಎಂದಾದರೂ ನೋಡಿದ್ದರೆ ನಿಮಗಿದು ಚೆನ್ನಾಗಿ ಅರ್ಥವಾಗುತ್ತದೆ. ಅವುಗಳದು ನಾಯಿ, ತೋಳಗಳಂತೆ ಬೇಟೆಯನ್ನು ಅನೇಕ ಮೈಲುಗಳವರೆಗೆ ಓಡಿಸಿ ಹಿಡಿಯುವ ಪರಿಪಾಠವಲ್ಲ. ಅವು ಬೇಟೆಯನ್ನು ಹೊಂಚುಹಾಕಿ ಹಿಡಿಯುತ್ತವೆ. ಹಾಗಾಗಿ ಬೇಟೆಯ ಬಳಿ ತಲುಪಲು ತಮ್ಮ ಪರಿಸರದಲ್ಲಿ ಲೀನವಾಗುವ ಕಲೆ ತುಂಬಾ ಅವಶ್ಯಕ. ಹುಲಿಯ ಪಟ್ಟೆಗಳಾಗಲೀ ಅಥವಾ ಚಿರತೆಯ ಮಚ್ಚೆಗಳಾಗಲೀ ಸುಮ್ಮನೆ ಸೌಂದರ್ಯದ ದೃಷ್ಟಿಯಿಂದ ಇರುವಂಥದ್ದಲ್ಲ. ಗಿಡಗಂಟೆಗಳ ನಡುವೆ ಅವು ನುಸುಳುತ್ತ ಚಲಿಸುವಾಗ ಮಿಕಗಳಿಗೆ ಅವುಗಳ ಸುಳಿವು ಸಿಗದಿರಲಿ ಎಂಬುದೇ ಇದರ ಉದ್ದೇಶ. ಅದರಲ್ಲೂ ಆಫ್ರಿಕದ ಹುಲ್ಲುಬಯಲಿನ ನಡುವೆ ಚಿರತೆಗಳು ಬೇಟೆಯಾಡುವುದನ್ನು ನೋಡುವಾಗ ಅವುಗಳ ಚಿತ್ತಾರ ಎಷ್ಟೊಂದು ಅಮೂಲ್ಯವೆಂದು ಗೊತ್ತಾಗುತ್ತದೆ.
ಫ್ರಿಟ್ಜ್ ಮುಲ್ಲರ್ ಮತ್ತು ಹೆನ್ರಿ ವಾಲ್ಟರ್ ಬೇಟ್ಸ್ ಎಂಬುವವರಿಬ್ಬರು ಎರಡು ಸಿದ್ಧಾಂತಗಳನ್ನು ಮಂಡಿಸಿದರು. ಛದ್ಮವೇಷಧಾರಿಗಳ ಬಗೆಗೆ ಅವರು ಮಂಡಿಸಿದ ಸಿದ್ಧಾಂತಗಳು ಮುಲ್ಲೇರಿಯನ್ ಮಿಮಿಕ್ರಿ ಮತ್ತು ಬೇಟ್ಸಿಯನ್ ಮಿಮಿಕ್ರಿ ಎಂದೇ ಪ್ರಸಿದ್ಧವಾಗಿದೆ. ಕೆಲವು ಕೀಟಗಳು ತಮ್ಮ ದೇಹದಲ್ಲಿ ಆತ್ಮರಕ್ಷಣೆಗಾಗಿ ವಿಷವನ್ನು ಹೊಂದಿರುತ್ತವೆ. ಆದರೆ ವಿಷವನ್ನು ಆತ್ಮರಕ್ಷಣೆಗಾಗಿ ಬಳಸುವಾಗ ಒಂದು ಸಮಸ್ಯೆ ಇದೆ. ಅದೇನೆಂದರೆ ಶತ್ರುವಿಗೆ ಆ ಕೀಟವನ್ನು ತಿಂದಾದ ಮೇಲೆ ವಿಷ ಎಂದು ಗೊತ್ತಾದರೆ ಅದರಿಂದ ಕೀಟಕ್ಕೇನೂ ಪ್ರಯೋಜನವಿಲ್ಲ. ಅದರ ಜೀವ ಹೋಗಿರುತ್ತದೆ. ಅದಕ್ಕೇ ಕೀಟಗಳು ಕಣ್ಣುಕುಕ್ಕುವಂಥ ಬಣ್ಣಗಳ ಮೂಲಕ “ನಾನು ವಿಷಕಾರಿ, ನನ್ನನ್ನು ಮುಟ್ಟಬೇಡಿ” ಎಂಬ ಸಂದೇಶವನ್ನು ಜಗತ್ತಿಗೇ ಸಾರಿಹೇಳುತ್ತವೆ. ಪಕ್ಷಿಗಳು ಆ ಕಣ್ಣುಕುಕ್ಕುವ ಬಣ್ಣಗಳನ್ನು ನೋಡಿಯೇ ಇವು ತಿನ್ನಲಾಗದ ಕೀಟಗಳೆಂದು ಅರ್ಥಮಾಡಿಕೊಳ್ಳುತ್ತವೆ. ಮುಲ್ಲರ್ ನೋಡಲು ಒಂದೇ ರೀತಿ ಕಾಣುವ ಬೇರೆ ಬೇರೆ ವಿಷಕಾರಿ ಕೀಟಗಳನ್ನು ಅಧ್ಯಯನ ಮಾಡಿ ಒಂದು ಸಂಗತಿಯನ್ನು ಕಂಡುಹಿಡಿದ. ೧೮೭೮ರಲ್ಲಿ ಆತ ಈ ವಿಷಯವನ್ನು ಪ್ರತಿಪಾದಿಸಿದ. ಇದರ ಸಾರಾಂಶವೆಂದರೆ ಎರಡು ಬೇರೆ ಬೇರೆ ಜಾತಿಯ ಕೀಟಗಳು, ಅವು ಹತ್ತಿರದ ಸಂಬಂಧಿಗಳಾಗಿರದಿದ್ದರೂ ಕೂಡ ಒಂದನ್ನೊಂದು ಹೋಲುತ್ತವೆ. ಇದು ಸಹ ಶತ್ರುಗಳಿಂದ ಪಾರಾಗುವ ಒಂದು ತಂತ್ರ. ಆ ಕೀಟಗಳನ್ನು ನೋಡಿದ ತಕ್ಷಣ ಶತ್ರುವಿಗೆ ಇದು ಅಪಾಯಕಾರಿಯೆಂದು ಗೊತ್ತಾಗಿ ಅದರ ತಂಟೆಗೇ ಹೋಗುವುದಿಲ್ಲ. ಕೀಟಸಾಮ್ರಾಜ್ಯದಲ್ಲಿ ಇಂಥ ಅಸಂಖ್ಯಾತ ಉದಾಹರಣೆಗಳನ್ನು ಕಾಣಬಹುದು. ಹೆಲಿಕೋನಿಯಸ್ ಎಂಬ ಜೀನಸ್‌ಗೆ ಸೇರಿದ ಚಿಟ್ಟೆಗಳಲ್ಲಿ ಇದನ್ನು ಪ್ರಧಾನವಾಗಿ ಗಮನಿಸಬಹುದು.
ಇದಕ್ಕೆ ತದ್ವಿರುದ್ಧವಾಗಿ ಬೇಟ್ಸಿಯನ್ ಮಿಮಿಕ್ರಿಯಲ್ಲಿ ವಿಷಕಾರಿಯಲ್ಲದ ನಿರಪಾಯಕಾರಿಗಳು ಭಯಂಕರ ವಿಷಕಾರಿಗಳನ್ನು ನಕಲಿ ಮಾಡುವ ಮೂಲಕ ಜೀವ ಉಳಿಸಿಕೊಳ್ಳುತ್ತವೆ. ಮತ್ತೆ ನಾವು ಇಂಥ ಮಹಾನ್ ಛದ್ಮವೇಷ ಕಲಾವಿದರನ್ನು ಬಹುಸಂಖ್ಯೆಯಲ್ಲಿ ನೋಡಬಹುದಾಗಿರುವುದು ಕೀಟ ಸಾಮ್ರಾಜ್ಯದಲ್ಲೇ. ಆದರೆ ಒಮ್ಮೊಮ್ಮೆ ನಾವು ಮುಲ್ಲೇರಿಯನ್ ಮಿಮಿಕ್ರಿಯ ಸಂದರ್ಭಗಳನ್ನು ಬೇಟ್ಸಿಯನ್ ಮಿಮಿಕ್ರಿ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆಗಳಿವೆ. ಉದಾಹರಣೆಗೆ ಮೊನಾರ್ಕ್ ಎಂಬ ಸುಪ್ರಸಿದ್ಧ ಚಿಟ್ಟೆಯ ಹೆಸರನ್ನು ಸಾಮಾನ್ಯವಾಗಿ ನೀವು ಕೇಳಿರಬಹುದು. ತನ್ನ ವಲಸೆ ಹೋಗುವ ಗುಣದಿಂದಾಗಿಯೇ ಸುಪ್ರಸಿದ್ಧವಾದ ಸುಂದರ ಪಾತರಗಿತ್ತಿ ಇದು. ಈ ಚಿಟ್ಟೆ ವಿಷಕಾರಿಯಾದ್ದರಿಂದ ಇದಕ್ಕೆ ಶತ್ರುಗಳ ಕಾಟ ಬಹಳ ಕಡಿಮೆ. ಆದ್ದರಿಂದ ವೈಸ್‌ರಾಯ್ ಚಿಟ್ಟೆ ಇದನ್ನು ಅನುಕರಿಸುತ್ತದೆ. ಮೊದಲು ಈ ಅನುಕರಣೆಯನ್ನು ಬೇಟ್ಸಿಯನ್ ಮಿಮಿಕ್ರಿ ಎಂದು ತಿಳಿಯಲಾಗಿತ್ತು. ಈಗ ಅದನ್ನು ಮುಲ್ಲೇರಿಯನ್ ಮಿಮಿಕ್ರಿ ಎಂದು ಗುರುತಿಸಲಾಗಿದೆ. ಏಕೆಂದರೆ ವಿಷರಹಿತವೆಂದು ನಂಬಲಾಗಿದ್ದ ವೈಸ್‌ರಾಯ್ ಚಿಟ್ಟೆಗಳು ಮೊನಾರ್ಕ್‌ಗಳಿಗಿಂತಲೂ ವಿಷಕಾರಿಯೆಂದು ಈಗ ತಿಳಿದುಬಂದಿದೆ.
ಕಣಜಗಳು ಬೇಟ್ಸಿಯನ್ ಮಿಮಿಕ್ರಿಗೆ ಉತ್ತಮ ಉದಾಹರಣೆಗಳು. ಸಾಮಾನ್ಯವಾಗಿ ಕುಟುಕುವ ವಿಷಕಾರಿ ಕಣಜಗಳ ತಂಟೆಗೆ ಯಾರೂ ಹೋಗುವುದಿಲ್ಲ. ಕೆಲವೇ ಕೆಲವು ಪರಿಣತ ಹಕ್ಕಿಗಳನ್ನು ಹೊರತುಪಡಿಸಿ ಹೆಚ್ಚಿನ ಶತ್ರುಗಳು ಇಂಥ ಕೀಟಗಳಿಂದ ದೂರವೇ ಉಳಿಯುತ್ತವೆ. ಜೊತೆಗೆ ಇವು ಕಣ್ಣುಕುಕ್ಕುವಂಥ ಬಣ್ಣಗಳ ಮೂಲಕ ತಾವು ವಿಷಕಾರಿಗಳೆಂದು ಶತ್ರುಗಳಿಗೆ ಎಚ್ಚರಿಕೆ ಕೊಡುತ್ತವೆ. ಆದ್ದರಿಂದ ನಿರಪಾಯಕಾರಿಗಳಾದ ಕೆಲ ಕಣಜಗಳು ಇಂಥ ಕಣಜಗಳನ್ನು ಅನುಕರಿಸಿ ತಮ್ಮ ರಕ್ಷಣೆ ಮಾಡಿಕೊಳ್ಳುತ್ತವೆ, ಇರುವೆಗಳು ಸಹ ಇದೇ ತಂತ್ರ ಅನುಸರಿಸುವುದನ್ನು ಕಾಣಬಹುದು.
ಮೆಕ್ಸಿಕೋದಲ್ಲಿ ಭಯಾನಕ ವಿಷಕಾರಿಯಾದ ಕೋರಾಲ್ ಸ್ನೇಕ್ ಎಂಬ ಒಂದು ಹಾವಿದೆ. ಅದೇ ದೇಶದಲ್ಲಿ ವಿಷರಹಿತವಾದ ಮಿಲ್ಕ್ ಸ್ನೇಕ್ ಎಂಬ ಹಾವು ಕೋರಾಲ್ ಸ್ನೇಕ್ ಮೈಮೇಲಿನ ಚಿತ್ತಾರವನ್ನು ಅನುಕರಿಸುವ ಮೂಲಕ ತಾನು ಕೂಡ ವಿಷಕಾರಿಯೆಂದು ಶತ್ರುಗಳನ್ನು ಎಚ್ಚರಿಸುತ್ತದೆ. ಸೂಕ್ಷ್ಮವಾಗಿ ನೋಡದ ಹೊರತು ಮಾನವರಿಗೆ ಕೂಡ ಈ ವ್ಯತ್ಯಾಸ ಗೊತ್ತಾಗುವುದಿಲ್ಲ. ಅದೇ ರೀತಿ ಹಾಕ್ ಕಕ್ಕೂ ಎಂದು ಕರೆಯಲಾಗುವ ಒಂದು ಜಾತಿಯ ಹಕ್ಕಿ (ಈ ಹಕ್ಕಿ ಕಕ್ಕೂ ಜಾತಿಯ ಪರಪುಟ್ಟ ಹಕ್ಕಿಯಾಗಿದೆ) ಸ್ಪ್ಯಾರೋ ಹಾಕ್ ಎಂಬ ಬೇಟೆಗಾರ ಹಕ್ಕಿಯನ್ನು ಹೋಲುತ್ತದೆ. ಹೀಗಾಗಿ ಇದು ಸಣ್ಣ ಹಕ್ಕಿಗಳ ಗೂಡಿನ ಬಳಿ ಸುಳಿದಾಡಿದರೆ ಅದನ್ನು ಕಂಡು ಬೇಟೆಗಾರನೆಂದು ಭಾವಿಸಿ ಆ ಹಕ್ಕಿಗಳು ಗಾಬರಿಗೊಂಡು ದೂರ ಹೋಗುತ್ತವೆ. ಆಗ ಈ ಹಕ್ಕಿ ನಿರಾಯಾಸವಾಗಿ ಅವುಗಳ ಗೂಡಿನಲ್ಲಿ ಮೊಟ್ಟೆಯಿಟ್ಟು ತನ್ನ ಕೆಲಸ ಪೂರೈಸಿಕೊಳ್ಳುತ್ತದೆ.
ಯಾವುದೇ ಜೀವಿಯ ದೇಹದಲ್ಲಿ ಬಹುಮುಖ್ಯ ಅಂಗವೆಂದರೆ ತಲೆ. ಅದು ಬೇಟೆಗಾರರಿಗೂ ಗೊತ್ತು. ಹಾಗಾಗಿ ಬೇಟೆಗಾರರು ಮೊದಲು ದಾಳಿ ಮಾಡುವುದು ತಲೆಗೇ. ಹಾಗಾದರೆ ಈ ದಾಳಿಯಿಂದ ಪಾರಾಗುವುದು ಹೇಗೆ? ದೇಹದ ಹಿಂಭಾಗದಲ್ಲಿ ತಲೆಯೊಂದು ಇರುವಂತೆ ತೋರಿಸಿದರೆ ಶತ್ರು ಮೊದಲು ಅಲ್ಲಿಗೇ ದಾಳಿ ಮಾಡುತ್ತದೆ. ಆಗ ಆ ಜೀವಿ ತಲೆಗೆ ಮಾರಣಾಂತಿಕ ಏಟು ಬೀಳುವುದನ್ನು ತಪ್ಪಿಸಿಕೊಂಡು ಬಚಾವಾಗುತ್ತದೆ. ಬಟರ್ ಫ್ಲೈ ಫಿಶ್ ಎಂಬ ಒಂದು ಮೀನು ತನ್ನ ಹಿಂಭಾಗದಲ್ಲಿ ದೊಡ್ಡ ಕಪ್ಪು ಮಚ್ಚೆಯೊಂದನ್ನು ಹೊಂದಿದ್ದು ಅದು ನೋಡಲು ಕಣ್ಣಿನಂತೆ ಕಾಣುತ್ತದೆ. ಅದರಿಂದಾಗಿ ಶತ್ರುವಿಗೆ ಅದರ ನಿಜವಾದ ತಲೆ ಯಾವುದೆಂದು ತಿಳಿಯದೆ ಗೊಂದಲಕ್ಕೊಳಗಾಗುತ್ತದೆ. ಈ ಕಪ್ಪು ಮಚ್ಚೆ ನಿಜವಾದ ಕಣ್ಣಿಗಿಂತ ದೊಡ್ಡದಿರುವುದರಿಂದ ಅದನ್ನೇ ತಲೆಯೆಂದು ಭಾವಿಸಿ ಶತ್ರು ಮೋಸಹೋಗುತ್ತದೆ. ಮೀನು ಈ ಗೊಂದಲದಲ್ಲಿ ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ. ಇದೇ ತಂತ್ರವನ್ನು ಕೆಲವಾರು ಚಿಟ್ಟೆಗಳೂ ಅನುಕರಿಸುತ್ತವೆ. ಹಿಂಭಾಗದಲ್ಲಿ ನಕಲಿ ಕಣ್ಣು, ಆಂಟೆನಾಗಳಿಂದ ಕೂಡಿದ ಮತ್ತು ನಿಜವಾದ ತಲೆಗಿಂತ ಪ್ರಧಾನವಾಗಿ ಕಾಣುವಂಥ ಸುಳ್ಳು ತಲೆಯೊಂದನ್ನು ಹೊಂದಿರುತ್ತವೆ. ಅದನ್ನು ಕಂಡ ಪಕ್ಷಿಗಳು ನಿಜವಾದ ತಲೆಯ ಬದಲು ಹಿಂಭಾಗಕ್ಕೆ ದಾಳಿ ಮಾಡುತ್ತವೆ. ಆಗ ಚಿಟ್ಟೆಗಳು ತಲೆಗೆ ಏನೂ ಅಪಾಯವಾಗದೆ ಸುಲಭದಲ್ಲಿ ಪಾರಾಗುತ್ತವೆ.
ಔಲ್ ಬಟರ್ ಫ್ಲೈ ಎಂಬ ಚಿಟ್ಟೆಯೊಂದಿದೆ. ಅದರ ರೆಕ್ಕೆಯ ಮೇಲೆ ಗೂಬೆಯ ಕಣ್ಣುಗಳನ್ನು ಹೋಲುವ ದೊಡ್ಡ ಮಚ್ಚೆಗಳಿವೆ. ಯಾವುದಾದರೂ ಹಕ್ಕಿ ತನ್ನ ಮೇಲೆ ದಾಳಿ ಮಾಡಲು ಬಂದರೆ ಈ ಚಿಟ್ಟೆ ತನ್ನ ರೆಕ್ಕೆಗಳನ್ನು ಬಿಡಿಸಿ ಪ್ರದರ್ಶಿಸುತ್ತದೆ. ಸುಂದರವಾದ ಚಿಟ್ಟೆ ಹಠಾತ್ತನೆ ಭಯಾನಕ ಗೂಬೆಯಾಗಿ ಬದಲಾಗಿದ್ದನ್ನು ನೋಡಿ ಬೆಚ್ಚಿಬೀಳುವ ಆ ಪಕ್ಷಿ ಪಲಾಯನ ಮಾಡುತ್ತದೆ.
ನೀರಿನಲ್ಲಿ ವಾಸಿಸುವ ಅನೇಕ ಮೀನು ಮತ್ತಿತರ ಜಲಚರಗಳು ಇನ್ನೊಂದು ಸುಲಭ ಉಪಾಯವನ್ನು ಕಂಡುಕೊಂಡಿವೆ. ಅವು ಪಾರದರ್ಶಕವಾದ ಗಾಜಿನಂಥ ದೇಹ ಹೊಂದುವ ಮೂಲಕ ಅದೃಶ್ಯವಾಗಲು ಪ್ರಯತ್ನಿಸುತ್ತವೆ. ಸಂಪೂರ್ಣ ಪಾರದರ್ಶಕತೆಯನ್ನು ಸಾಧಿಸುವುದು ಅಸಾಧ್ಯ. ಆದರೆ ನೀರಿನಲ್ಲಿ ವಾಸಿಸುವ ಜೀವಿಗಳಿಗೆ ಕೆಲಮಟ್ಟಿಗೆ ಪಾರದರ್ಶಕತೆಯನ್ನು ಸಾಧಿಸುವುದು ಸಾಧ್ಯ. ಜೊತೆಗೆ ಸಾಗರದಾಳದಲ್ಲಿ ಬೆಳಕಿನ ಲಭ್ಯತೆಯೂ ತುಂಬ ಕಡಿಮೆಯಿರುವುದರಿಂದ ಅಲ್ಲಿ ಸ್ವಲ್ಪಮಟ್ಟಿಗೆ ಪಾರದರ್ಶಕವಾಗಿದ್ದರೂ ಅದರಿಂದ ಭಾರೀ ಲಾಭವೇ ಆಗುತ್ತದೆ. ಮೀನುಗಳು ಮಾತ್ರವಲ್ಲ ಕೆಲವು ಬಗೆಯ ಸ್ಕ್ವಿಡ್‌ಗಳು ಹಾಗೂ ಅಂಬಲಿಮೀನುಗಳು ಸಹ ಈ ಪಾರದರ್ಶಕತೆಯ ಲಾಭ ಪಡೆದುಕೊಳ್ಳುತ್ತವೆ.
ಹೀಗೆ ಆತ್ಮರಕ್ಷಣೆಗಾಗಿ ಜೀವಿಗಳು ಅನುಸರಿಸುವ ತಂತ್ರಗಳು ಅಸಂಖ್ಯ. ಆ ಅಸಂಖ್ಯ ತಂತ್ರಗಳಲ್ಲಿ ಛದ್ಮವೇಷವೂ ಒಂದು. ಪರಿಸರದಲ್ಲಿ ಕಂಡೂಕಾಣದಂತಿರುವ ಕೀಟಗಳು, ಭಯಾನಕ ವಿಷಕಾರಿಗಳನ್ನು ಹೋಲುವ ನಿರುಪದ್ರವಿಗಳು, ತಾನೇ ಬೇಟೆಗಾರನೆಂದು ಭ್ರಮೆ ಮೂಡಿಸುವ ಬಲಿಪ್ರಾಣಿಗಳು, ಹೀಗೆ ಛದ್ಮವೇಷಧಾರಿಗಳಲ್ಲಿ ನಾನಾ ಬಗೆ. ಆದರೆ ಅದೆಲ್ಲದರ ಉದ್ದೇಶ ಒಂದೋ ಆತ್ಮರಕ್ಷಣೆ, ಅಥವಾ ಆಹಾರ ಸಂಪಾದನೆ. ಒಟ್ಟಿನಲ್ಲಿ ಪ್ರಕೃತಿಯ ವಿಸ್ಮಯಗಳ ಖಜಾನೆ ಎಂದೆಂದಿಗೂ ಬರಿದಾಗುವುದಿಲ್ಲ!
0 Followers
0 Following