ಈಗ ನಾವಿರುವುದು ಸ್ಪರ್ಧಾತ್ಮಕ ಯುಗದಲ್ಲಿ.ಬಾಲ್ಯದಿಂದಲೇ ಬದುಕು ಸ್ಪರ್ಧೆಗೆ ತೆರೆದುಕೊಳ್ಳುತ್ತಿದೆ. ವಿದ್ಯಾರ್ಥಿ ಜೀವನವು ಸ್ಪರ್ಧಾತ್ಮಕವಾಗಿದೆ. ಮುಂದೆ ಜೀವನಯಾನಕ್ಕೆ ಯಾವ ಉದ್ಯೋಗವನ್ನು ಆರಿಸಿಕೊಳ್ಳಬೇಕು ಎಂದು ಮಕ್ಕಳಿಂದ ಹೆಚ್ಚಾಗಿ ಅವರ ಹೆತ್ತವರೇ ನಿರ್ಧರಿಸುತ್ತಾರೆ.
ಇಂಜಿನಿಯರಿಂಗ್ ಮತ್ತು ಮೆಡಿಕಲ್ ಪ್ರತಿಷ್ಠೆಯ ಉದ್ಯೋಗಗಳಾಗಿವೆ. ಅದಕ್ಕಾಗಿ ಹೆತ್ತವರು ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಲು ಹಿಂಜರಿಯುವುದಿಲ್ಲ. ಪ್ರತಿಭೆ ಇಲ್ಲದಿದ್ದರೂ , ಆಸಕ್ತಿ ಇಲ್ಲದಿದ್ದರೂ ಹೆತ್ತವರಿಗಾಗಿ ಮಕ್ಕಳು
ತಮ್ಮ ಇಚ್ಛೆಯನ್ನು ಬಲಿ ಕೊಡಬೇಕಾಗುತ್ತದೆ.
ಹಾಗಾಗಿ ಕೋಚಿಂಗ್ ಅನಿವಾರ್ಯ ಅಂತ ಅದಕ್ಕಾಗಿ ಹಣ ,ಸಮಯ ಮೀಸಲಿಡುತ್ತಾರೆ.ಆದರೆ ಆ ಒತ್ತಡ ತಡೆಯಲಾರದೆ ಕೆಲವರು ಜೀವಕ್ಕೇ ಸಂಚಕಾರ ತಂದುಕೊಳ್ಳುತ್ತಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬರೆದು ಜಯಶೀಲರಾಗದಿದ್ದರೆ ಕೋಮಲ ಮನಸಿನವರಿಗೆ ನಿರಾಶೆಯಾಗುತ್ತದೆ. ಮುಂದೆ ಓದಲೂ ನಿರುತ್ಸಾಹ ಉಂಟಾಗುತ್ತದೆ. ಜೀವನವೇ ಮುಗಿದುಹೋಯಿತು ಅಂತ ತಿಳಿದುಕೊಳ್ಳುತ್ತಾರೆ.
ಆತ್ಮಹತ್ಯೆಯ ಆಲೋಚನೆಯನ್ನೂ ಮಾಡುತ್ತಾರೆ.ಆದರೆ
ದೃಢ ಮನಸಿನವರು ಮರಳಿ ಯತ್ನವನ್ನು ಮಾಡುತ್ತಾರೆ. ಮತ್ತೂ ಜಯ ಗಳಿಸದಿದ್ದರೆ ಇನ್ನೊಂದು ದಾರಿ ಹುಡುಕುತ್ತಾರೆ ಬದುಕಲು ಹಲವು ದಾರಿಗಳಿವೆ.ಆತ್ಮವಿಶ್ವಾಸವೊಂದಿದ್ದರೆ ಸಾಕು!.
ಕಲಿತದ್ದು ಒಂದು ಬದುಕಿನ ದಾರಿ ಕಂಡುಕೊಂಡದ್ದು ಇನ್ನೊಂದು ಎಂಬುದನ್ನು ದಿನ ನಿತ್ಯ ನೋಡುತ್ತಿದ್ದೇವೆ. ಇಂಜಿನಿಯರಿಂಗ್ ಕಲಿತವರು ನಟರು ,ಕ್ರಿಕೆಟರ್ಸ್ ಆಗಿದ್ದಾರೆ.ಯಾವುದೇ ಪದವಿ ಇಲ್ಲದಿದ್ದರೂ ಸಾಧನೆ ಮಾಡಿದವರಿದ್ದಾರೆ. ತನ್ನ ಮೇಲೆ ನಂಬಿಕೆ ವಿಶ್ವಾಸ, ಗುರಿ, ಗುರಿಯೆಡೆಗೆ ಯತ್ನ ಇದ್ದರೆ ಗೆಲುವು ಕಟ್ಟಿಟ್ಟ ಬುತ್ತಿ.ಆದರೂ ವಿದ್ಯೆ ಎಂಬುದು ಮುಂದಿನ ಬದುಕಿಗೆ ರಹದಾರಿ.
ವಿದ್ಯಾ ದದಾತಿ ವಿನಯಂ
ವಿನಯಂ ದಾತಿ ಪಾತ್ರತಾಂ
ಪಾತ್ರತ್ವಾದ್ಧನ ಮಾಪ್ನೋತಿ
ಧನಾದ್ಧರ್ಮಂ ತತ:ಸುಖಂ
ವಿದ್ಯೆಯಿಂದ ವಿನಯ ,ವಿನಯದಿಂದ ಯೋಗ್ಯತೆ,ಯೋಗ್ಯತೆಯಿಂದ ವೃತ್ತಿ ಪಡೆದು ಅದರಿಂದ ಧನಪ್ರಾಪ್ತಿ. ಧನದಿಂದ ಧರ್ಮಕಾರ್ಯ ಮಾಡಿ, ಅದರಿಂದ ಎಲ್ಲಾ ಸುಖಗಳು ಪ್ರಾಪ್ತಿಯಾಗುತ್ತದೆ ಎಂಬುದು ಈ ಶ್ಲೋಕದ ಅರ್ಥ.ಹಾಗಾಗಿ ವಿದ್ಯೆ ಅಗತ್ಯ.
೨೦೨೦ರಲ್ಲಿ ರಂಜಿತ್ ಸಿಂಹ ದಿಸಾಳೆ ಎಂಬ ಪ್ರಾಥಮಿಕ ಶಾಲಾಶಿಕ್ಷಕರಿಗೆ ಗ್ಲೋಬಲ್ ಶಿಕ್ಷಕ ಎಂಬ ಪ್ರಶಸ್ತಿ ಬಂದಿತ್ತು. ಒಂದು ಮಿಲಿಯನ್ ಅಮೆರಿಕನ್ ಡಾಲರ್ ಪ್ರಶಸ್ತಿಯ ಮೊತ್ತ.
ವರ್ಕಿ ಫೌಂಡೇಶನ್ ನವರು ನಡೆಸಿದ ಸ್ಪರ್ಧೆಯಲ್ಲಿ ಸುಮಾರು ಹನ್ನೆರಡು ಸಾವಿರ ಶಿಕ್ಷಕರು ೧೪೦ ದೇಶಗಳಿಂದ ಅರ್ಜಿ ಸಲ್ಲಿಸಿದ್ದರು. ಕೊನೆಗೆ ಹತ್ತು ಜನರನ್ನು ಶಾರ್ಟ್ ಲಿಸ್ಟ್ ಮಾಡಿದ್ದರು. ಅದರಲ್ಲಿ ರಂಜಿತ್ ಸಿಂಗ್ ಮೊದಲ ಸ್ಥಾನ ಪಡೆದರು. ಅವರು ತನಗೆ ದೊರಕಿದ ೭.೪ ಕೋಟಿ ರೂಪಾಯಿಯ ಅರ್ಧದಷ್ಟು ಮೊತ್ತವನ್ನು ಉಳಿದ ಒಂಬತ್ತು ಫೈನಲಿಸ್ಟ್ ಗಳಿಗೆ ಹಂಚಲು ನಿರ್ಧರಿಸಿ ಎಲ್ಲರಿಂದ ಪ್ರಶಂಸೆ ಪಡೆದರು.
ಎನ್ ಸಿ ಇ ಆರ್ ಟಿ ಪಠ್ಯಗಳಿಗೆ ಕ್ಯೂಆರ್ ಕೋಡ್ ನ್ನು ಅಳವಡಿಸಿದವರಲ್ಲಿ ಮೊದಲಿಗರು ರಂಜಿತ್. ಮಹಾರಾಷ್ಟ್ರದ ಹಳ್ಳಿಯೊಂದರ ಸರಕಾರಿ ಶಾಲೆಯ ಶಿಕ್ಷಕರಾದ ರಂಜಿತ್ ಸಮಾಜ ಸುಧಾರಣೆಯ ಕೆಲಸವನ್ನೂ ಮಾಡಿದ್ದರು. ಬಾಲ್ಯವಿವಾಹವನ್ನು ತಡೆಗಟ್ಟಿದ್ದರು. ಮಹಾರಾಷ್ಟ್ರದ ಸೋಲಾಪುರದ ಪರಿತೆವಾಡಿಯಲ್ಲಿ ಶಿಕ್ಷಕರಾಗಿದ್ದ ರಂಜಿತ್ ಅಲ್ಲಿಯ ಕನ್ನಡ ಮಾತೃಭಾಷೆಯ ಮಕ್ಕಳಿಗೆ ಕನ್ನಡ ಕಲಿಸಲು ಪಠ್ಯಪುಸ್ತಕವನ್ನು ಮರುವಿನ್ಯಾಸ ಮಾಡಿದ್ದರಂತೆ.
ಇನ್ನೊಂದು ಮುಖ್ಯ ಸಂಗತಿ ಎಂದರೆ ರಂಜಿತ್ ಸಿಂಹ ಮೊದಲು ಸೇರಿದ್ದು ಇಂಜಿನಿಯರಿಂಗ್ ಕಾಲೇಜಿಗಂತೆ! ಅಲ್ಲಿ ರಾಗಿಂಗ್ ತಡೆಯಲಾರದೆ ಇಂಜಿನಿಯರಿಂಗ್ ಬಿಟ್ಟು ಶಿಕ್ಷಕರ ತರಬೇತಿ ಪಡೆದರು. ಈಗ ಅವರ ಹೆಸರು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಪ್ರಧಾನ ಮಂತ್ರಿ ದಲಾಯಿ ಲಾಮ ,ಶಶಿ ತಾರೂರ್ ಕೂಡ ರಂಜಿತ್ ಸಿಂಹರ ಸಾಧನೆಯನ್ನು ಹೊಗಳಿ ಅಭಿನಂದನೆ ಸಲ್ಲಿಸಿದ್ದಾರೆ. ಸಾಧನೆಗೆ ಹಲವು ದಾರಿ. ಮನಸಿದ್ದಲ್ಲಿ ಮಾರ್ಗವಿದೆ.
ವಿದ್ಯೆ ಇಲ್ಲದೆ ಬದುಕಲು ಸಾಧ್ಯವಿದೆಯೇ?
ಕೆಲವು ವರ್ಷಗಳ ಹಿಂದೆ ನಮ್ಮಲ್ಲೊಂದು ಸ್ಕೂಟರ್ ಇತ್ತು. ಅದರ ರಿಪೇರಿಗೆ ಒಂದು ವರ್ಕ್ ಶಾಪಲ್ಲಿ ಕೊಟ್ಟಿದ್ದೆವು.ರಿಪೇರಿ ಮಾಡಿ ಮನೆಗೆ ತಂದವನು ಒಬ್ಬ ಹುಡುಗ . ಸುಮಾರು ಹನ್ನೆರಡು ವರ್ಷವಿರಬೇಕು. ಹೆಸರು ತೌಫೀಕ್ ಅಂತ ಹೇಳಿದ. ನಗುನಗುತ್ತಾ ಮಾತಾಡಿದ. ಆತ ಕೇವಲ ಮೂರನೇ ತರಗತಿಯ ವರೆಗೆ ಓದಿದ್ದಂತೆ. ಶಾಲೆಗೆ ಹೋಗುವುದಿಲ್ಲವೇ ಅಂತ ಕೇಳಿದಾಗ ' ಇಲ್ಲ , ಈ ರಿಪೇರಿ ಕೆಲಸ ಇಷ್ಟ 'ಅಂತ ಹೇಳಿದ. ಆತನ ಅಕ್ಕ ಕಾಲೇಜಿಗೆ ಹೋಗುತ್ತಿದ್ದಳಂತೆ. ಈತನಿಗೆ ಓದಲು ಏನೇನೂ ಇಷ್ಟವಿರಲಿಲ್ಲ. ಹಾಗಾಗಿ ತನಗೆ ಇಷ್ಟವಿರುವ ಕೆಲಸ ಮಾಡುತ್ತಿದ್ದ. ಆತನಲ್ಲಿದ್ದ ಆತ್ಮವಿಶ್ವಾಸ ನೋಡಿ ದಂಗಾಗಿದ್ದೆ. ಆತ ಬದುಕುವ ದಾರಿ ಕಂಡುಕೊಂಡಿದ್ದ.ಈಗ ಎಲ್ಲೋ ಅಂಗಡಿಯನ್ನೇ ತೆರೆದಿರಬೇಕು. ಅಷ್ಟು ಭರವಸೆ ಅವನ ಮುಖದಲ್ಲಿದ್ದ ನಗು ಸೂಚಿಸುತ್ತಿತ್ತು.ಖಂಡಿತಾ
ಬದುಕಲು ದಾರಿ ಹಲವು ಇವೆ.ಸಾಧನೆಗೂ ದಾರಿ ಹಲವು.
✍️ ಪರಮೇಶ್ವರಿ ಭಟ್
0 Followers
0 Following