ಮಂತ್ರಾಲಯಕ್ಕೆ ಹೆಚ್ಚಿನವರು ಒಂದು ದಿವಸ ಪ್ರವಾಸ ಮಾಡಿ ತಮ್ಮ ತಮ್ಮ ಊರಿಗೆ ಹಿಂತಿರುಗುವುದು ಪರಿಪಾಠ. ನಮ್ಮ ಬಳಿ ಎರಡು ದಿನ ಹಾಗೂ ಮತ್ತೊಂದು ಅರ್ಧ ದಿನ ಪ್ರವಾಸ ಎಂದುಕೊಂಡಿದ್ದೆವು. ಮಂತ್ರಾಲಯದ ಸುತ್ತುಮುತ್ತಲಿನ ಭಾಗಗಳನ್ನು ನೋಡಿ ಮತ್ತು ರಾಯರ ಬೃಂದಾವನ ಮತ್ತು ವಸ್ತು ಸಂಗ್ರಹಾಲಯ ನೋಡಿ ಎರಡನೇ ದಿನಕ್ಕೆ ಏನು ಮಾಡುವುದು ಎಂದು ಗೊತ್ತಿರಲಿಲ್ಲ. ಆವಾಗ ನೆನಪಿಗೆ ಬಂದದ್ದು ಹತ್ತಿರದ ರಾಯಚೂರನ್ನು ನೋಡುವುದು ಎಂದು. ಆದರೆ ರಾಯಚೂರಿಗೆ ಬಸ್ಸಿನಲ್ಲಿ ಹೋಗಿ ಮತ್ತೇನು ಮಾಡುವುದು ಎಂದು ಆಲೋಚಿಸಿದಾಗ ನಮ್ಮ ನೆನಪಿಗೆ ಬಂದದ್ದು ನಮ್ಮ ಒಬ್ಬರು ಯೋಗ ಬಂಧು. ಅವರನ್ನು ಸಂಪರ್ಕಿಸಿದಾಗ ಅವರು ತಮ್ಮ ಬಂಧುಗಳ ಕಾರನ್ನು ಚಾಲಕ ಸಮೇತ ನಮಗೆ ವ್ಯವಸ್ಥೆ ಮಾಡಿಕೊಟ್ಟರು. ನಮ್ಮ ಆ ದಿನದ ಪಟ್ಟಿಯಲ್ಲಿ ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನ, ಮಾನವಿ , ಚೀಕಲಪರ್ವಿ ಹಾಗೂ ಮೋಸರ್ ಕಲ್ಲು ಇವಿಷ್ಟು ಇದ್ದವು. ದಾರಿಯಲ್ಲಿ ಒಂದು ವಿಶಿಷ್ಟವಾದ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನೋಡುವ ಕಾರ್ಯಕ್ರಮ ಕೂಡ ಇತ್ತು.
ಮೊದಲಿಗೆ ಬಸ್ಸಿನಲ್ಲಿ ರಾಯಚೂರು ತಲುಪಿ ನಮ್ಮನ್ನು ಕರೆದುಕೊಂಡು ಹೋಗಲು ತಯಾರಿದ್ದ ಚಾಲಕರನ್ನು ಭೇಟಿ ಮಾಡಿದೆವು. ಅಲ್ಲಿಂದ ಮೊದಲಿಗೆ ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೊರಟೆವು. ಇದು ರಾಯಚೂರಿನಿಂದ 13 ಮೈಲು ದೂರದಲ್ಲಿದೆ. ರಾಯಚೂರಿನ ಹೊರಭಾಗ ಮೆಣಸಿನ ಹೊಲಗಳು, ತಂಬಾಕಿನ ಹೊಲಗಳಿಂದ ತುಂಬಿವೆ. ಹವೆ ಸ್ವಲ್ಪ ಒಣ ಹವೆ. ಕಲ್ಲೂರಿನ ಸುತ್ತಮುತ್ತ ಕಲ್ಲುಗಳ ರಾಶಿಯೇ ಇದೆ. ಪ್ರಾಯಶಃ ಲಕ್ಷ್ಮಿಯು ಈ ಒಂದು ಗುಡ್ಡದ ಮೇಲೆ ಇದ್ದಳು ಅಂತ ಅನಿಸುತ್ತದೆ. ಲಕ್ಷ್ಮಿಯು ಬಳಿಕ ಕೆಳಗೆ ಬಂದು ನೆಲೆಸಿದಳು ಎಂದು ಚಾಲಕರು ತಿಳಿಸಿದರು. ಇದು ಎರಡನೆಯ ಕೊಲ್ಲಾಪುರ ಎಂದು ಕೂಡ ಪ್ರಸಿದ್ಧ. ಇಂಟರ್ನೆಟ್ ಮಾಧ್ಯಮದಲ್ಲಿ ಕಲ್ಲೂರು ಮಹಾಲಕ್ಷ್ಮಿಯ ಕಥೆ ಚೆನ್ನಾಗಿ ವಿವರಿಸಿದ್ದಾರೆ.
ಕಲ್ಲೂರಿನಿಂದ ಮಾನವಿ ದಾರಿಯಾಗಿ ಚೀಕಲಪರವಿಗೆ ಹೊರಟೆವು. ಇಲ್ಲಿ ವಿಜಯದಾಸರ ಮನೆ ಇದೆ. ವಿಜಯದಾಸರಿಗೆ ರಾಶಿಯಲ್ಲಿ ದೊರೆತ ಬೀಸುವ ಕಲ್ಲು ಮತ್ತು ಅವರು ಪೂಜಿಸುತ್ತಿದ್ದ ದೇವರ ವಿಗ್ರಹಗಳನ್ನು ಇಲ್ಲಿ ನೋಡಬಹುದು. ತಮ್ಮ ಮಗ ಮೋಹನದಾಸರಿಗೆ ಅಪಮೃತ್ಯು ಪರಿಹಾರವನ್ನು ಮಾಡಿದ ಸ್ಥಳ ಕೂಡ ಇಲ್ಲಿ ನೋಡಬಹುದು. ಇಲ್ಲಿ ಪ್ರಸಾದವಾಗಿ ಬೀಸುವ ಕಲ್ಲಿನಿಂದ ಅಕ್ಕಿಯನ್ನು ಕೊಡುತ್ತಾರೆ. ಅದನ್ನು ನಮ್ಮ ಮನೆಯ ಅಕ್ಕಿಯ ಜೊತೆ ಸೇರಿಸಿ ಅನ್ನ ಮಾಡಬಹುದು. ವಿಜಯದಾಸರ ಮನೆಯ ವಾತಾವರಣ ಪ್ರಶಾಂತವಾಗಿದೆ. ಇಲ್ಲಿಂದ ಸ್ವಲ್ಪ ಮುಂದೆ ವಿಜಯ ದಾಸರ ಕಟ್ಟೆ ಎಂಬ ಒಂದು ಸ್ಥಳವಿದೆ. ಇಲ್ಲಿ ವಿಜಯದಾಸರು ತಮ್ಮ ಪಿತೃಗಳ ಶ್ರಾದ್ಧ ಮಾಡಿದ ಸ್ಥಳವಿದೆ. ಅಲ್ಲಿಯೇ ಪಕ್ಕದಲ್ಲಿ ಶ್ರೀ ಪಾದರಾಜರು ಪ್ರತಿಷ್ಠಾಪಿಸಿದ ಶಿವಲಿಂಗಲಿದೆ. ಇಲ್ಲಿ ಸುಸ್ವರಂ ನಾಗರಾಜ ಆಚಾರ್ಯ ಅವರು ಬಂದಿದ್ದರು ಹಾಗೂ ಸಣ್ಣದಾಗಿ ಪ್ರವಚನ ಮಾಡುತ್ತಿದ್ದರು. ಅವರ ಪ್ರವಚನವನ್ನು ಕೇಳಿ ಅಲ್ಲಿಯೇ ಭೋಜನವನ್ನು ಸ್ವೀಕರಿಸಿ ಮಾನವಿಗೆ ಹೊರಟೆವು. ಮಾನವೀ ಜಗನ್ನಾಥದಾಸರ ಊರು. ಅಲ್ಲಿ ಅವರ ಮನೆ ಇದೆ ಹಾಗೂ ಮನೆಯಲ್ಲಿ ಅವರು ತಮ್ಮ ಉದ್ಗ್ರಂಥ ಹರಿಕಥಾಮೃತಸಾರ ಬರೆದ ಸ್ಥಳವನ್ನು ಕೂಡ ನೋಡಬಹುದು. ತಮ್ಮ ಇಳಿ ವಯಸ್ಸಿನಲ್ಲಿ ಒಂದು ಮರದ ಕಂಬಕ್ಕೆ ಹೊರಗೆ ಕುಳಿತು ಹರಿಕಥಾಮೃತಸಾರವನ್ನು ಬರೆದರು. ಅಲ್ಲಿ ಹರಿಕಥಾಮೃತಸಾರದ ಮಂಗಳಾಚಾರಣ ಸಂಧಿಯನ್ನ ಓದಿ ನಾವು ಮೊಸರ ಕಲ್ಲಿಗೆ ಹೊರಟೆವು. ಇದು ಗೋಪಾಲ ದಾಸರ ಊರು. ಇಲ್ಲಿ ಗೋಪಾಲ ದಾಸರ ಮನೆ ಇದೆ. ಇವರು ಜಗನ್ನಾಥದಾಸರನ್ನ ಉದ್ದರಿಸಿದ ದಾಸರು. ಈ ಮನೆಯಲ್ಲಿ ದಾಸರು ಅರ್ಚಿಸಿದ ದೇವತಾ ವಿಗ್ರಹ ಹಾಗೂ ಅವರ ತಂಬೂರಿಯನ್ನು ಸಹ ಕಾಣಬಹುದು. ದಾರಿಯಲ್ಲಿ ಗಬ್ಬೂರು ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ಕೂಡ ನೋಡಿದೆವು. ಇಲ್ಲಿ ದೇವರ ತಲೆಯ ಮೇಲೆ ಬಿಸಿ ನೀರು ಸುರಿದರೆ ಕೆಳಬರುವಷ್ಟರಲ್ಲಿ ತಂಪಾಗುವಂತ ಒಂದು ಕುತೂಹಲದ ಪ್ರಸಂಗ ನೋಡಬಹುದು. ಅದನ್ನು ಕೇವಲ ಆದಿತ್ಯವಾರ ಮಾತ್ರ ಮಾಡಿ ತೋರಿಸುತ್ತಾರೆ. ಆದುದರಿಂದ ಈ ದೇವಸ್ಥಾನಕ್ಕೆ ಹೋಗುವವರು ಆದಿತ್ಯವಾರ ಹೋದರೆ ಈ ಒಂದು ಕುತೂಹಲವನ್ನು ನೋಡಬಹುದು.
ಅಂತೂ ಬಹಳ ದಿನಗಳ ನಿರೀಕ್ಷೆಯ ನಂತರ ಜಗನ್ನಾಥದಾಸರ ಊರು ಹಾಗೂ ಇತರ ಪ್ರಮುಖ ದಾಸರ ಸ್ಥಳಗಳನ್ನು ವೀಕ್ಷಿಸಿ ಆ ದಿನದ ನಮ್ಮ ಪ್ರವಾಸವನ್ನು ಮುಕ್ತಾಯಗೊಳಿಸಿದೆವು. ರಾಯಚೂರಿನಿಂದ ಸಾಯಂಕಾಲ ಮಂತ್ರಾಲಯಕ್ಕೆ ಮರಳಿ ನಾವು ಉಳಿದುಕೊಂಡ ಹೋಟೆಲಿಗೆ ಬಂದು ವಿಶ್ರಾಂತಿಯನ್ನು ತೆಗೆದುಕೊಂಡೆವು. ಮರು ದಿವಸ ಮಧ್ಯಾಹ್ನ ಕರ್ನಾಟಕದ ಸಾರಿಗೆ ಸಂಸ್ಥೆಯ ಐರಾವತ ಬಸ್ಸಿನಲ್ಲಿ ಬೆಂಗಳೂರಿಗೆ ವಾಪಸಾದೆವು.