ಮಂತ್ರಾಲಯ ರಾಯಚೂರು ಪ್ರವಾಸ

ಭಾಗ 2

ProfileImg
26 Apr '24
2 min read


image

ಅನೇಕರು ರಾಘವೇಂದ್ರ ತೀರ್ಥರು, ಅಪ್ಪಣ್ಣಾಚಾರ್ಯರು ಹಾಗೂ ಜಗನ್ನಾಥದಾಸರ ಬಗ್ಗೆ ವಿವರಗಳನ್ನು ತಿಳಿಸಿ ಎಂದು ಕೇಳಿದ್ದಾರೆ. ಅದನ್ನು ಇಲ್ಲಿ ಬರೆದು ವಿವರಿಸುವ ಪ್ರಯತ್ನವನ್ನು ಮಾಡುತ್ತೇನೆ. 
ರಾಘವೇಂದ್ರ ತೀರ್ಥರು ಮೂಲತಃ ಶಂಕುಕರ್ಣ ಎಂಬ ಕರ್ಮಜ ದೇವತೆ. ಇವರು ಬ್ರಹ್ಮ ಲೋಕದಲ್ಲಿ ಬ್ರಹ್ಮದೇವರ ಸೇವೆಗೆಂದು ಶ್ರೀಹರಿಯಿಂದ ನೇಮಿತರಾದವರು. ಅದಕ್ಕೂ ಮೊದಲು ಶಂಕುಕರ್ಣ ಹರಿಯ ಸೇವೆಯನ್ನು ಲಕ್ಷ್ಮಿಯ ಅನುಪಸ್ಥಿತಿಯಲ್ಲಿ ಮಾಡುತ್ತಿದ್ದರು. ಶ್ರೀಹರಿಯ ಕಿವಿಯಿಂದ ಜನಿಸಿದ ಕಾರಣ ಶಂಕು ಕರ್ಣ ಎಂಬ ಹೆಸರು. ಬ್ರಹ್ಮ ಲೋಕದಲ್ಲಿ ಒಮ್ಮೆ ಸೇವಾ ಭ್ರಷ್ಟ ರಾದಾಗ ಬ್ರಹ್ಮ ದೇವರಿಂದ ಶಾಪಕ್ಕೊಳಗಾದವರು. ಕೆಲವೊಮ್ಮೆ ಶಾಪವೂ ಕೂಡ ವರವಾಗಿ ಪರಿಣಮಿಸುತ್ತದೆ. ಹಾಗಾಗಿ ಶಂಕುಕರ್ಣ ಹಿರಣ್ಯಕಶಿಪುವಿನ ಮಗ ಪ್ರಹ್ಲಾದನಾಗಿ ಜನಿಸುತ್ತಾರೆ. ಈ ಜನ್ಮದಲ್ಲಿ ಸಾಕ್ಷಾತ್ ನರಸಿಂಹ ದೇವರನ್ನು ಕಂಡು ಧನ್ಯರಾಗುತ್ತಾರೆ. ತಮ್ಮ ಮುಂದಿನ ಜನ್ಮದಲ್ಲಿ ಶಂತನು ಮಹಾರಾಜರ ಅಣ್ಣ ಬಾಹಲೀಕರಾಜರಾಗಿ ಹುಟ್ಟುತ್ತಾರೆ. ಬಾಹಲಿ ಕದೇಶ ಹಿಮಾಲಯದ ಉತ್ತರದಲ್ಲಿ ಇರುವ ದೇಶ. ಬಕ್ಟ್ರಿಯಾ ಪ್ರದೇಶ. ಕುತುಬ್ ಮಿನಾರ್ ಪ್ರದೇಶದಲ್ಲಿರುವ ಕಬ್ಬಿಣದ ಸ್ತಂಭದ ಮೇಲೆ ಕೂಡ ಚಂದ್ರಗುಪ್ತ ಮೌರ್ಯರು ಬಾಹಲೀಕ ದೇಶದ ಮೇಲೆ ಯುದ್ಧ ಮಾಡಿರುವ ಶಾಸನ ಇದೆಯಂತೆ. ಮಹಾಭಾರತ ಯುದ್ಧದಲ್ಲಿ ಹೋರಾಡಿದ ರಾಜರಲ್ಲಿ ಶಂತನುವಿನ ಅಣ್ಣ ಬಾಹಲೀಕರು ಅತಿ ಹಿರಿಯರು. ಯುದ್ಧದಲ್ಲಿ ಭೀಮಸೇನರ ಗದಾ ಪ್ರಹಾರದಿಂದ ಹತರಾದರು. ಮುಂದೆ ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಈ ವ್ಯಾಸತೀರ್ಥರಾಗಿ ಜನನ.  ತದನಂತರ 1595ರಲ್ಲಿ ತಮಿಳುನಾಡಿನ ಭುವನಗಿರಿಯಲ್ಲಿ ಮರುಜನ್ಮ. ಇಲ್ಲಿ ವೆಂಕಟನಾಥ ಭಟ್ಟ ಎಂದು ನಾಮಕರಣ. ಮುಂದೆ ಗುರು ರಾಘವೇಂದ್ರ ತೀರ್ಥರು ಎಂದು ಪ್ರಸಿದ್ಧರಾದರು. 1671ರಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶ. ಇಲ್ಲಿಂದ ಮುಂದಿನ 700 ವರ್ಷಗಳು ಬೃಂದಾವನದಲ್ಲಿಯೇ ಇರುತ್ತಾರೆ ಎಂದು ನಂಬಿಕೆ. 
ರಾಘವೇಂದ್ರ ತೀರ್ಥರ ನೆಚ್ಚಿನ ಶಿಷ್ಯರು ಅಪ್ಪಣ್ಣಾಚಾರ್ಯರು. ಇವರು ತುಂಗಭದ್ರಾ ತೀರದ ಭಿಕ್ಷಾಲಯ ಎಂಬ ಊರಿನಲ್ಲಿ ಆಶ್ರಮವನ್ನು ನಡೆಸುತ್ತಿದ್ದರು. ಇಲ್ಲಿಯೇ ರಾಘವೇಂದ್ರ ತೀರ್ಥರು ಕೂಡ ತಮ್ಮ ಜ್ಞಾನ ಪ್ರಸಾರವನ್ನು ಮಾಡುತ್ತಿದ್ದರು. ಅಪ್ಪಣ್ಣಾಚಾರ್ಯರು ರಾಘವೇಂದ್ರ ತೀರ್ಥರಿಗೆ ಅಡುಗೆ ಮಾಡಿ ಬಡಿಸುತ್ತಿದ್ದ ಜಾಗ ಮತ್ತು ಮಸಾಲೆ ಅರೆಯುತ್ತಿದ್ದ ಕಲ್ಲು ಇಲ್ಲಿ ಕಾಣಲು ಸಿಗುತ್ತದೆ. ಅಪ್ಪಣ್ಣಾಚಾರ್ಯರ ಮನೆಯಲ್ಲಿ ರಾಘವೇಂದ್ರ ತೀರ್ಥರು ವಿಶ್ರಮಿಸುತ್ತಿದ್ದ ಜಾಗವನ್ನು ಇನ್ನೂ ನೋಡಬಹುದು. ಇವರ ಬೃಂದಾವನ ಪ್ರವೇಶದ ದಿನ ಅಪ್ಪಣ್ಣಾಚಾರ್ಯರು ಭಿಕ್ಷಾಲಯದಲ್ಲಿಯೇ ಇದ್ದರು. ವಿಷಯ ತಿಳಿದು ಆಚಾರ್ಯರು ತುಂಗಭದ್ರ ನದಿಯಲ್ಲಿಯೇ ಈಜಿಕೊಂಡು ಮಂತ್ರಾಲಯವನ್ನು ತಲುಪುತ್ತಾರೆ. ಈ ಸಮಯದಲ್ಲಿ ರಾಯರನ್ನು ನೆನೆಸಿಕೊಂಡು ರಾಯರ ಅಷ್ಟೋತ್ತರವನ್ನು ರಚಿಸುತ್ತಾರೆ. ಅಷ್ಟೋತ್ತರದ ಕೊನೆಯ ಸಾಲನ್ನು ರಾಘವೇಂದ್ರ ತೀರ್ಥರೇ ಸಂಪೂರ್ಣ ಮಾಡಿದರು ಎಂದು ಕೂಡ ತಿಳಿದು ಬರುತ್ತದೆ. ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಎಂಬ ಶ್ಲೋಕದ ರಚನೆ ಕೂಡ ಅಪ್ಪಣ್ಣಾಚಾರ್ಯರಿಂದ ರಚಿಸಲ್ಪಟ್ಟಿದ್ದು.
ಜಗನ್ನಾಥದಾಸರು ಪ್ರಹಲ್ಲಾದರ ತಮ್ಮ ಸಹಲಾದರು. ಇವರು ಸಹ ಒಬ್ಬರು ಕರ್ಮಜ ದೇವತೆ. ಸಮುದ್ರಮಥನವನ್ನು ಸಾಕ್ಷಾತ್ ಕಂಡವರೆಂದು ನಂಬಿಕೆ. ಹಿರಣ್ಯಕಶಿಪುವಿನ ಮಗನಾಗಿ ಪ್ರಹ್ಲಾದರ ತಮ್ಮನಾಗಿ ಜನನ. ಮುಂದೆ ದ್ವಾಪರ ಯುಗದಲ್ಲಿ ಮಹಾರಾಜ ಶಲ್ಯನಾಗಿ ಕರ್ಣನ ಸಾರಥಿಯಾಗಿ ಮಹಾಭಾರತ ಯುದ್ಧದಲ್ಲಿ ಭಾಗಿ. ಕಲಿಯುಗದಲ್ಲಿ ಕೊಂಡಪ್ಪನಾಗಿ . ಇಲ್ಲಿ ಕನಕದಾಸರು ಪುರಂದರದಾಸರ ಒಡನಾಟ. ಮುಂದೆ 1728ರ ಜುಲೈ 27ರಂದು ಬ್ಯಾಗವಟ್ಟಿಯಲ್ಲಿ ಜನನ. ಶ್ರೀನಿವಾಸ ಆಚಾರ್ಯರು ಎಂದು ನಾಮಕರಣ, ನಂತರ ಹರಿದಾಸ ದೀಕ್ಷೆ ಪಡೆದು ಜಗನ್ನಾಥದಾಸರು ಎಂದು ಪ್ರಸಿದ್ಧರಾದರು. ಇವರ ಹರಿಕಥಾಮೃತಸಾರ ಎಂಬ ಮೇರುಕೃತಿ ಎಲ್ಲರೂ ಓದಿ ಅರಿತುಕೊಂಡು ಪಾಲಿಸತಕ್ಕದ್ದು. ಮುಂದಿನ ಭಾಗದಲ್ಲಿ ಇವರ ಬಗ್ಗೆ ವಿಸ್ತಾರವಾಗಿ ಬರೆಯುತ್ತೇನೆ.

Category:Spirituality



ProfileImg

Written by Sachin Mungila

0 Followers

0 Following