ಮಳೆಗಾಲದ ಒಂದು ರಾತ್ರಿ. ಹೊರಗೆ ಆಕಾಶಕ್ಕೆ ತೂತು ಬಿದ್ದಂತೆ ಮಳೆ ಧೋ ಎಂದು ಸುರಿಯುತ್ತಿತ್ತು. ಮಲೆನಾಡಿನವರಿಗೆ ಅದು ಹೇಗಿರುತ್ತದೆಂದು ವಿವರಿಸಿ ಹೇಳಬೇಕಿಲ್ಲ. ಸಮಯ ಬಹುಶಃ ಹತ್ತು ಗಂಟೆ ಆಗಿತ್ತೆಂದು ನೆನಪು. ವಿದ್ಯುತ್ ಹೊರಟುಹೋಗಿ ಸುತ್ತೆಲ್ಲ ಗಾಢಾಂಧಕಾರ ಕವಿದಿತ್ತು. ಮನೆಯ ಅಂಗಳದಲ್ಲಿ ಕುಳಿತು ನಾನು, ನನ್ನ ತಮ್ಮ ಸುಮ್ಮನೆ ಆ ಮಳೆಯನ್ನು ಆಸ್ವಾದಿಸುತ್ತ ಕೂತಿದ್ದೆವು. ಕತ್ತಲು ಎಷ್ಟೊಂದು ದಟ್ಟವಾಗಿತ್ತೆಂದರೆ ಜಗಲಿಯಲ್ಲೇ ಕುಳಿತು ನಮ್ಮೆದುರಿಗೇ ಸುರಿಯುತ್ತಿರುವ ಮಳೆಯತ್ತ ದೃಷ್ಟಿ ನೆಟ್ಟಿದ್ದರೂ ನಮ್ಮ ಕಿವಿಗೆ ಅದರ ಶಬ್ದ ಅಪ್ಪಳಿಸುತ್ತಿತ್ತೇ ಹೊರತು ಏನೂ ಕಾಣುತ್ತಿರಲಿಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕ್ರಿಮಿಕೀಟಗಳು ಹಾಗೂ ಕಪ್ಪೆಯಂಥ ಚಿಕ್ಕಪುಟ್ಟ ಪ್ರಾಣಿಗಳ ಕಲರವ ಇಡೀ ಪರಿಸರವನ್ನೆಲ್ಲ ಆವರಿಸಿರುತ್ತದೆ. ಆದರೆ ಅಂದು ಮಳೆ ಯಾವ ರೀತಿ ಹೊಯ್ಯುತ್ತಿತ್ತೆಂದರೆ ಅದರ ಶಬ್ದದ ಮುಂದೆ ಬೇರೆ ಯಾವ ಶಬ್ದವೂ ಕೇಳಿಸುತ್ತಿರಲಿಲ್ಲ. ನಾವು ಆ ಮಳೆಯನ್ನೇ ಆಸ್ವಾದಿಸುತ್ತ ಅದು ಇದು ಮಾತನಾಡುತ್ತ ಕುಳಿತಿದ್ದೆವು.
ಅರ್ಧ ಗಂಟೆ ಒಂದೇ ಸಮನೆ ಸುರಿದ ಮಳೆ ಕೊಂಚ ನಿಧಾನವಾಗತೊಡಗಿತು. ಅದುವರೆಗೆ ಅದರ ಭೋರ್ಗರೆತದಲ್ಲಿ ಮರೆಯಾಗಿದ್ದ ಶಬ್ದಗಳೆಲ್ಲ ನಿಧಾನವಾಗಿ ಈಗ ನಮ್ಮ ಕಿವಿಗಳಿಗೆ ಬೀಳತೊಡಗಿದವು. ಸಮೀಪದಲ್ಲೇ ಎಲ್ಲೋ ಒಂದು ಚಿಮ್ಮಂಡೆ ಕಿವಿ ಕಿವುಡಾಗುವಂತೆ ಕಿರುಚುತ್ತಿತ್ತು. ಅದರ ನಡುವೆ ಮನೆಯ ಹಿಂಭಾಗದಿಂದ ಕಪ್ಪೆಗಳ ಹಿಮ್ಮೇಳವೂ ಕೇಳಲಾರಂಭಿಸಿತು. ನಮಗೆ ಅದೇನೂ ಹೊಸದಾಗಿರಲಿಲ್ಲ. ಆದರೆ ಪ್ರತಿಸಲವೂ ಮಲಗಿದ ಮೇಲೆ ಅದನ್ನು ಕೇಳಿಸಿಕೊಳ್ಳುತ್ತಿದ್ದೆವು. ಅವತ್ತು ಇನ್ನೂ ಎಚ್ಚರವಾಗಿಯೇ ಇದ್ದಿದ್ದರಿಂದ ಒಮ್ಮೆ ಹಿಂದಕ್ಕೆ ಹೋಗಿ ನೋಡೋಣವೆಂದು ಮಾತನಾಡಿಕೊಂಡೆವು. ಟಾರ್ಚೊಂದನ್ನು ಕೈಯಲ್ಲಿ ಹಿಡಿದು ಇನ್ನೂ ಹನಿಹನಿಯಾಗಿ ತೊಟ್ಟಿಕ್ಕುತ್ತಿದ್ದ ಮಳೆಯ ನಡುವೆಯೇ ಆ ಚಳಿಯನ್ನೂ ಲೆಕ್ಕಿಸದೆ ಅಂಗಳಕ್ಕಿಳಿದೆವು. ಏಕೆಂದರೆ ಅಂಗಳದಲ್ಲೆಲ್ಲ ಪಾಚಿ ಕಟ್ಟಿದ್ದರಿಂದ ಅಲ್ಲಿ ಬಹಳ ಜಾಗರೂಕತೆಯಿಂದ ನಡೆಯಬೇಕಿತ್ತು. ಅಂಥ ಪರಿಸ್ಥಿತಿಯಲ್ಲಿ ಕೈಯಲ್ಲೊಂದು ಟಾರ್ಚ್ ಹಿಡಿದು, ಅದರ ಜೊತೆಗೆ ಛತ್ರಿಯನ್ನೂ ಹಿಡಿದು ಸಾಗುವುದು ಅಸಂಭವವೇ ಆಗಿತ್ತು. ಆದ್ದರಿಂದ ಮಳೆಯಲ್ಲಿ ನೆನೆಯುತ್ತಲೇ ಹುಷಾರಾಗಿ ಮನೆಯ ಹಿಂಭಾಗದತ್ತ ಹೆಜ್ಜೆ ಹಾಕಿದೆವು.
ನಮ್ಮ ಮನೆಯ ಹಿಂಭಾಗದಲ್ಲಿ ಒಂದು ದೊಡ್ಡ ಗುಂಡಿ ಇತ್ತು. ಸುಮಾರು ಹನ್ನೆರಡು ಅಡಿ ಆಳವಿದ್ದ ಆ ಗುಂಡಿ ಹೆಚ್ಚುಕಡಿಮೆ ಅಷ್ಟೇ ಉದ್ದಗಲವೂ ಇತ್ತು. ಅದರಲ್ಲಿ ಎಲ್ಲಿಂದಲೋ ತಂದು ಎಸೆದಿದ್ದ ಕರಿಬಾಳೆ ಗಿಡವೊಂದು ಬೇರುಬಿಟ್ಟು ದೊಡ್ಡ ಮರವಾಗಿತ್ತು. ಅದರ ಅಕ್ಕಪಕ್ಕ ಇನ್ನೂ ಮೂರ್ನಾಲ್ಕು ಗಿಡಗಳು ಸಹ ಬೆಳೆದಿದ್ದವು. ಆ ಗುಂಡಿಯ ತಳವೇ ನೆಲಮಟ್ಟದಿಂದ ಹನ್ನೆರಡು ಅಡಿ ಕೆಳಕ್ಕಿದ್ದರೂ ಈಗ ಆ ಗಿಡಗಳ ಗುಂಪು ಬೆಳೆದು ನೆಲಮಟ್ಟಕ್ಕಿಂತ ಮೇಲಕ್ಕೆ ಎದ್ದಿದ್ದವು. ಆ ಮಳೆಯ ನಡುವೆ ಏಳುತ್ತ ಬೀಳುತ್ತ ಅಲ್ಲಿಯವರೆಗೆ ಬಂದು ಆ ಬಾಳೆಗಿಡಗಳತ್ತ ಅಕಸ್ಮಾತ್ ನೋಡಿದಾಗ ನಮಗೆ ಅಲ್ಲಿ ಕಂಡ ದೃಶ್ಯ ಎಷ್ಟು ಖುಷಿ ಕೊಟ್ಟಿತೆಂದರೆ ಆ ಮಳೆಯಲ್ಲಿ ನೆಂದ ಬೇಸರವೂ ಮಾಯವಾಯಿತು. ಅಲ್ಲಿ ಆ ಬಾಳೆಗಿಡದ ಕಾಂಡದ ಮೇಲೆ ಎರಡು ಹಸಿರು ಮರಗಪ್ಪೆಗಳು ಅಪ್ಪಿಕೊಂಡು ಪಿಳಿಪಿಳಿ ಕಣ್ಣುಬಿಡುತ್ತ ಕೂತಿದ್ದವು! ಒಂದು ದೊಡ್ಡ ಕಪ್ಪೆಯ ಬೆನ್ನಮೇಲೆ ಇನ್ನೊಂದು ಸವಾರಿ ಮಾಡುತ್ತಿತ್ತು. ಅದು ಹೆಣ್ಣುಕಪ್ಪೆಯ ಮೇಲೆ ಗಂಡುಕಪ್ಪೆ ಕುಳಿತಿದ್ದೆಂದು ನಮಗೆ ಗೊತ್ತಾಯಿತು. ಮರಗಪ್ಪೆಗಳನ್ನು ನಿಸ್ಸಂಶಯವಾಗಿ ಕಪ್ಪೆ ಪ್ರಪಂಚದ ರೂಪದರ್ಶಿಗಳೆಂದು ಕರೆಯಬಹುದು. ಮರದ ಎಲೆಗಳನ್ನೇ ತದ್ವತ್ತಾಗಿ ಹೋಲುವ ಹಸಿರುಬಣ್ಣದ ನಡುವೆ ಅವುಗಳ ಪಾದಗಳು ಮಾತ್ರ ಕಡುಗೆಂಪು ಬಣ್ಣದಲ್ಲಿ ಹೊಳೆಯುತ್ತವೆ. ಇದಕ್ಕೆಲ್ಲ ಕಲಶವಿಟ್ಟಂತೆ ಕಪ್ಪು ಗುಲಗಂಜಿಯಂಥ ಕಣ್ಣುಗಳು. ಒಟ್ಟಿನಲ್ಲಿ ಅವುಗಳ ಸೌಂದರ್ಯ ಕಂಡು ಎಂಥವರೂ ತಲೆಬಾಗಲೇಬೇಕು.
ನಾವು ನೋಡುತ್ತಿದ್ದುದು ಮಲಬಾರ್ ಫ್ಲೈಯಿಂಗ್ ಫ್ರಾಗ್, ಅಂದರೆ ಹಾರುವ ಕಪ್ಪೆ. ಎಲ್ಲ ಕಪ್ಪೆಗಳು ನೆಲದ ಮೇಲೆ ಕುಪ್ಪಳಿಸುವುದನ್ನು ನಾವು ನೋಡಿದ್ದೇವೆ. ಕೆಲವು ಚಿಕ್ಕ ಕಪ್ಪೆಗಳಂತೂ ತಮ್ಮ ದೇಹಗಾತ್ರದ ಹತ್ತಾರು ಪಟ್ಟು ದೂರ ನೆಗೆಯಬಲ್ಲವು. ಕಪ್ಪೆಗಳ ಹಿಂಗಾಲುಗಳು ಮುಂಗಾಲುಗಳಿಗಿಂತ ಅಸಾಧಾರಣ ಉದ್ದವಾಗಿರುತ್ತವೆ. ಅಲ್ಲದೇ ಅವು ಕುಳಿತಿರುವಾಗ ಹಿಂಗಾಲುಗಳನ್ನು ಮಡಚಿ ಕುಳಿತಿರುವುದರಿಂದ ಅವುಗಳ ಸಾಮರ್ಥ್ಯ ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ಹಾರುವಾಗ ಸ್ಪ್ರಿಂಗ್‌ನಂತೆ ಮಡಚಿ ಕುಳಿತಿರುವ ಈ ಕಾಲುಗಳು ಬಿಲ್ಲಿನಿಂದ ಬಿಟ್ಟ ಬಾಣದಂತೆ ಕಪ್ಪೆಯನ್ನು ಮುಂದಕ್ಕೆ ಎಸೆಯುತ್ತದೆ. ಹಾಗಾಗಿಯೇ ಅವು ಅಷ್ಟು ದೂರ ಮಿಂಚಿನಂತೆ ನೆಗೆಯುವುದು.
ನಾವು ಕಪ್ಪೆಗಳ ಮಿಲನದ ಬಗ್ಗೆ ಕೇಳಿದ್ದೆವೇ ಹೊರತು ಅದುವರೆಗೆ ಪ್ರತ್ಯಕ್ಷವಾಗಿ ನೋಡಿರಲಿಲ್ಲ. ಬಹುಶಃ ನಮ್ಮ ಟಾರ್ಚ್‌ನ ಬೆಳಕು ಅವಕ್ಕೆ ತೊಂದರೆ ಕೊಡುತ್ತದೆ ಎಂದು ಊಹಿಸಿ ಟಾರ್ಚ್ ಆರಿಸಿ ಅ ಹೊಂಡದ ದಡದ ಮೇಲೆ ಬೆಳೆದಿದ್ದ ಕರಿಬೇವಿನ ಮರಕ್ಕೆ ಒರಗಿಕೊಂಡು ನಿಂತೆವು.
ಆ ಕಾರ್ಗತ್ತಲಲ್ಲಿ ಸುತ್ತಲಿನ ಶಬ್ದಗಳು ನಮ್ಮ ಕಿವಿಗೆ ಬೀಳದಿರುತ್ತಿದ್ದರೆ ನಮ್ಮ ಅಸ್ತಿತ್ವ ನಮಗೇ ತಿಳಿಯುವಂತಿರಲಿಲ್ಲ. ದಟ್ಟವಾದ ಮೋಡಗಳು ಕವಿದಿದ್ದರಿಂದ ಆಗಸದಲ್ಲಿ ಚಂದ್ರನಾಗಲೀ ಅಥವಾ ಒಂದೇ ಒಂದು ನಕ್ಷತ್ರವಾಗಲೀ ಕಾಣುವ ಸಾಧ್ಯತೆಯೇ ಇರಲಿಲ್ಲ. ಆ ಕತ್ತಲಿನ ಪರದೆಯನ್ನು ಭೇದಿಸಿ ಆಗೀಗ ಮಿಂಚುಹುಳುಗಳು ಅಲ್ಲೊಂದು ಇಲ್ಲೊಂದು ಮಿಂಚುತ್ತಿದ್ದವು. ಅಷ್ಟರಲ್ಲಿ ತೊಪ್ ಎಂದು ಏನೋ ಸದ್ದಾಯಿತು. ಆ ಸದ್ದು ಏನೆಂದು ನಮಗೆ ಸ್ಪಷ್ಟವಾಗಿ ಗೊತ್ತಿತ್ತು. ಆ ಕ್ಷಣ ಟಾರ್ಚ್ ಹತ್ತಿಸಿದೆವು. ಬಾಳೆಗಿಡದ ಮೇಲಿದ್ದ ಕಪ್ಪೆಗಳು ಕಣ್ಮರೆಯಾಗಿದ್ದವು. ಅವು ಅಲ್ಲಿಂದ ಹಾರಿ ಪಕ್ಕದಲ್ಲೆಲ್ಲೋ ನೆಲಕ್ಕೆ ಬಿದ್ದಿರಬೇಕು. ನಮಗೆ ಕೇಳಿದ್ದ ಶಬ್ದ ಅದೇ. ಆದರೆ ಎಲ್ಲಿ ಬಿದ್ದವು ಎಂದಾಗಲೀ ಬಿದ್ದಮೇಲೆ ಎಲ್ಲಿಗೆ ಹೋದವು ಎನ್ನುವುದಾಗಲೀ ಗೊತ್ತಾಗಲಿಲ್ಲ. ಆ ಕತ್ತಲಿನಲ್ಲಿ ಅವುಗಳನ್ನು ಹುಡುಕುವುದು ಸಹ ಸಾಧ್ಯವಿರಲಿಲ್ಲ. ಅವುಗಳನ್ನು ಅವುಗಳ ಪಾಡಿಗೆ ಬಿಟ್ಟು ಮನೆಯ ದಾರಿ ಹಿಡಿದೆವು.
ಮರಗಪ್ಪೆಗಳನ್ನು ಇನ್ನೊಮ್ಮೆ ನಾನು ನೋಡಿದ್ದು ಗೋವಾದಲ್ಲಿ. ಅಲ್ಲಿನ ನೇತ್ರಾವಳಿ ಅಭಯಾರಣ್ಯದಲ್ಲಿ ಹರ್ಪೆಟೋಕ್ಯಾಂಪ್ (ಉರಗಗಳ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮ) ನಡೆದಿದ್ದಾಗ ಅದರಲ್ಲಿ ಭಾಗವಹಿಸಲು ಹೋಗಿದ್ದೆ. ಅಲ್ಲಿ ರಾತ್ರಿಯ ವೇಳೆ ಕಾಡಿನಲ್ಲಿ ಒಂದು ನಡಿಗೆಯನ್ನು ಏರ್ಪಡಿಸಿದ್ದರು. ಅಲ್ಲಿ ಅಭಯಾರಣ್ಯದ ನಡುವೆಯೇ ಇದ್ದ ಮನೆಯೊಂದರಲ್ಲಿ ನಮಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಮನೆಯತ್ತ ಹೋಗುತ್ತಿದ್ದಾಗ ದಾರಿಯಲ್ಲಿ ಒಂದು ಮನೆಯಿತ್ತು. ಮಳೆ ಜೋರಾಗಿದ್ದರಿಂದ ಆ ಮನೆಯ ಕೊಟ್ಟಿಗೆಯಲ್ಲಿ ಆಶ್ರಯ ಪಡೆದೆವು. ಅಲ್ಲಿ ಕೊಟ್ಟಿಗೆಯ ಕಂಬವೊಂದರ ಮೇಲೆ ಎರಡು ಮರಗಪ್ಪೆಗಳು ಮಿಲನಕ್ರಿಯೆಯಲ್ಲಿ ತೊಡಗಿದ್ದವು. ಅವುಗಳ ಹಿಂದೆ ಸಾಬೂನಿನ ನೊರೆಯಂತೆ ದಟ್ಟವಾದ ನೊರೆ ಇತ್ತು. ಕಪ್ಪೆಗಳ ಒಂದು ವಿಶೇಷವನ್ನು ಇಲ್ಲಿ ಹೇಳಬೇಕು. ಅವುಗಳ ಮಿಲನ ಸ್ತನಿ ಅಥವಾ ಪಕ್ಷಿಗಳ ಮಿಲನಕ್ಕಿಂತ ಭಿನ್ನ. ಅದನ್ನು ಬಾಹ್ಯ ಫಲವತ್ತಾಗುವಿಕೆ (ಎಕ್ಸ್‌ಟರ್ನಲ್ ಫರ್ಟಿಲೈಸೇಶನ್) ಎಂದು ಕರೆಯುತ್ತಾರೆ. ಗಂಡುಕಪ್ಪೆ ನೊರೆಯನ್ನು ವಿಸರ್ಜಿಸುತ್ತದೆ ಹಾಗೂ ಹೆಣ್ಣು ಅದರ ಮೇಲೆ ಮೊಟ್ಟೆಯಿಡುತ್ತದೆ. ಆ ಮೊಟ್ಟೆಗಳ ಮೇಲೆ ಗಂಡು ವೀರ್ಯವನ್ನು ವಿಸರ್ಜಿಸುತ್ತದೆ. ಹೀಗೆ ಫಲವಂತಿಕೆ ದೇಹದ ಹೊರಗೆ ನಡೆಯುವುದು ಕಪ್ಪೆಗಳ ವಿಶೇಷ.
ಸುಮಾರು ನಾಲ್ಕೈದು ನಿಮಿಷಗಳ ಬಳಿಕ ಅವುಗಳ ಕೆಲಸ ಮುಗಿಯಿತೆಂದು ಕಾಣುತ್ತದೆ. ಅವೆರಡೂ ಅಲ್ಲಿಂದ ಚಿಮ್ಮಿ ಹಾರಿಹೋದವು. ನಮಗೆ ಅಂದಿನ ರಾತ್ರಿನಡಿಗೆ ವ್ಯರ್ಥವಾಗಲಿಲ್ಲ ಎಂಬ ಖುಷಿ. ಮಳೆ ಕಡಿಮೆಯಾದಮೇಲೆ ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕಿದೆವು.
ಕಪ್ಪೆಗಳು ಉಭಯವಾಸಿಗಳ ತರಗತಿಯಲ್ಲೇ ಅತ್ಯಧಿಕ ಸಂಖ್ಯೆಯಲ್ಲಿರುವ ಜೀವಿಗಳು. ಉಭಯಚರಿಗಳನ್ನು ಎಪೋಡಾ, ಎನ್ಯೂರಾ ಹಾಗೂ ಯೂರೋಡೀಲಾ ಎಂಬ ಮೂರು ಪ್ರಧಾನ ವರ್ಗಗಳಲ್ಲಿ ವಿಂಗಡಿಸಲಾಗಿದೆ. ಎಪೋಡಾ ಎಂದರೆ ಕಾಲಿಲ್ಲದ, ದೊಡ್ಡ ಎರೆಹುಳುಗಳಂತಿರುವ ಉಭಯಚರಿಗಳು. ಎರಡನೆಯ ಎನ್ಯೂರಾ ಎಂದರೆ ಬಾಲವಿಲ್ಲದ ಉಭಯಚರಿಗಳು, ಅವೇ ಕಪ್ಪೆಗಳು. ಒಂದು ಅಂದಾಜಿನ ಪ್ರಕಾರ ಎಲ್ಲ ಉಭಯವಾಸಿ ಪ್ರಭೇದಗಳ ಶೇಕಡಾ 88-90ರಷ್ಟು ಪ್ರಭೇದಗಳು ಕಪ್ಪೆಗಳೇ ಆಗಿವೆ. (ವಾಸ್ತವವಾಗಿ ಕಪ್ಪೆಗಳಿಗೆ ಅವುಗಳ ಬಾಲ್ಯಾವಸ್ಥೆಯಲ್ಲಿ ಬಾಲವಿರುತ್ತದೆ. ಆದರೆ ಬೆಳೆದಮೇಲೆ ಅದು ಮಾಯವಾಗುತ್ತದೆ.) ಮೂರನೆಯದು ಯೂರೋಡೀಲಾ. ಅದು ನೋಡಲು ಹಲ್ಲಿಗಳಂತೆ ಕಾಣುವ, ಆಡುಭಾಷೆಯಲ್ಲಿ ನೀರೋತಿ ಎಂದು ಕರೆಯಲ್ಪಡುವ ಸಲಮ್ಯಾಂಡರ್, ನ್ಯೂಟ್ ಮತ್ತು ಅಕ್ಸೊಲಾಟಲ್‌ಗಳ ವರ್ಗ. ಹಾಗಾಗಿ ನಾವು ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಕಪ್ಪೆಗಳನ್ನು ಕಾಣುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಕಪ್ಪೆಗಳೆಂದ ಕೂಡಲೇ ನಮಗೆ ನೆನಪಾಗುವ ಇನ್ನೊಂದು ಸಂಗತಿ ಎಂದರೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳ ಹಿಂದಿದ್ದ ಕಪ್ಪೆಗಳ ಸಂಖ್ಯೆಗೂ ಈಗಿನ ಕಪ್ಪೆಗಳ ಸಂಖ್ಯೆಗೂ ಇರುವ ಅಜಗಜಾಂತರ ವ್ಯತ್ಯಾಸ. ನಮ್ಮ ಅಜ್ಜಿಯ ಮನೆಗೆ ಆಗೆಲ್ಲ ರಜಾದಿನಗಳಲ್ಲಿ ಹೋಗುತ್ತಿದ್ದೆವು. ನಮ್ಮೂರೇ ಒಂದು ಸಾಧಾರಣವಾದ ಹಳ್ಳಿಯಾದರೆ ಅಜ್ಜಿಯ ಮನೆ ಇನ್ನೂ ಚಿಕ್ಕ ಹಳ್ಳಿ. ಆಗಿನ ಕಾಲಕ್ಕೆ ಅವರ ಮನೆಯ ಸುತ್ತಮುತ್ತ ಸುಮಾರು ಎರಡು-ಮೂರು ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಇದ್ದಿದ್ದು ಬಹುಶಃ ನಾಲ್ಕೋ ಐದೋ ಮನೆಗಳಷ್ಟೆ. ಮನೆಯ ಸುತ್ತಲೂ ದಟ್ಟವಾದ ಕಾಡು ಬೆಳೆದಿತ್ತು. ಅದೇನೂ ಹುಲಿ-ಚಿರತೆಗಳಿದ್ದ ಭಯಾನಕ ಕಾಡಲ್ಲವಾದರೂ ನಮ್ಮ ಕುತೂಹಲ ತಣಿಸಲು, ರೋಮಾಂಚನ ಮೂಡಿಸಲು ಸಾಕಷ್ಟು ಪ್ರಾಣಿಪಕ್ಷಿಗಳು ಇದ್ದವು. ಅಲ್ಲಿ ಮನೆಯಂಗಳದ ಮುಂದೆ, ಮೇಲೆ, ಕೆಳಗೆ ಸಾಕಷ್ಟು ವಿಸ್ತಾರವಾದ ಬಯಲಿತ್ತು. ಕೆಳಗಿನ ಬಯಲಿಗಿಂತಲೂ ಕೆಳಗೆ ಗದ್ದೆಗಳಿದ್ದವು. ಆ ಎಲ್ಲ ಬಯಲುಪ್ರದೇಶಗಳಲ್ಲೂ ಕಪ್ಪೆಗಳು ಅಸಂಖ್ಯಾತವಾಗಿದ್ದವು. ಸುಮ್ಮನೆ ಅಂಗಳದಲ್ಲಿ ಒಂದು ಸುತ್ತು ಹಾಕಿದರೆ ಸಾಕು, ನಮ್ಮ ಕಾಲಡಿಯಿಂದ ಹತ್ತಾರು ಕಪ್ಪೆಗಳು ಅತ್ತಿತ್ತ ಜಿಗಿದಾಡುವುದು ಕಣ್ಣಿಗೆ ಬೀಳುತ್ತಿತ್ತು. ನಮ್ಮ ಮನೆಯ ಹತ್ತಿರ ಅಷ್ಟೊಂದು ಕಪ್ಪೆಗಳನ್ನು ನಾವೆಂದೂ ಕಂಡಿದ್ದಿಲ್ಲ. ಹಾಗಾಗಿ ನಮಗೆ ಅದು ಕಪ್ಪೆಗಳ ಸ್ವರ್ಗದಂತೆ ಕಂಡಿತ್ತು. ಸಾಮಾನ್ಯವಾಗಿ ಎಲ್ಲೆಡೆ ಮಳೆಗಾಲದಲ್ಲಿ ಕಪ್ಪೆಗಳು ಹೇರಳವಾಗಿ ಕಂಡುಬರುತ್ತವೆ. ಆದರೆ ಇಲ್ಲಿ ಬೇಸಿಗೆಯಲ್ಲಿ ಸಹ ಕಪ್ಪೆಗಳು ಕಂಡುಬರುತ್ತಿದ್ದವು. ಆದರೆ ಇಂದು ಅಲ್ಲಿದ್ದ ಕಾಡಿನಲ್ಲಿ ಅರ್ಧಕ್ಕರ್ಧ ನಾಶವಾಗಿದೆ. ಈಗ ಅಜ್ಜ, ಅಜ್ಜಿ ಇಬ್ಬರೂ ಇಲ್ಲ. ಅವರು ಇದ್ದಾಗಲೇ ಆ ಮನೆ ಬಿಟ್ಟು ಅಲ್ಲಿಗೆ ಬೇರೆಯವರು ಬಂದಿದ್ದರಿಂದ ನಾವು ಅಲ್ಲಿಗೆ ಹೋಗಿಬರುವುದು ತಪ್ಪಿತ್ತು. ಆದರೂ ನಾಲ್ಕೈದು ವರ್ಷಗಳ ಹಿಂದೊಮ್ಮೆ ಅಲ್ಲಿಗೆ ಯಾವುದೋ ಕಾರಣಕ್ಕೆ ಹೋಗಿದ್ದಾಗ ಅಲ್ಲಿನ ಪರಿಸರವನ್ನು ಕಂಡು ನಮಗಾದ ಆಘಾತ ಅಷ್ಟಿಷ್ಟಲ್ಲ. ಒಂದು ಕಾಲದಲ್ಲಿ ಕಾಲಿಡಲೂ ಸಾಧ್ಯವಿಲ್ಲದಷ್ಟು ದಟ್ಟವಾಗಿ ಬೆಳೆದಿದ್ದ ಪೊದೆಗಳು, ಮರಗಳು ಎಲ್ಲವೂ ಹೇಳಹೆಸರಿಲ್ಲದೆ ನಾಮಾವಶೇಷವಾಗಿ ಅಲ್ಲಿ ಬೈಕು, ಕಾರುಗಳು ಓಡಾಡಲು ರಸ್ತೆ ಮಾಡಿದ್ದರು. ಅಲ್ಲಿ ಕಪ್ಪೆಗಳು ಹಾಗಿರಲಿ, ಹುಳುಹುಪ್ಪಟೆಗಳು ಸಹ ಇರುವುದು ಅಸಂಭವವೆಂದು ನಮಗನ್ನಿಸಿತು.
ಉಭಯವಾಸಿಗಳೆಂದರೆ ನೀರು ಮತ್ತು ನೆಲ ಎರಡೂ ಕಡೆಗಳಲ್ಲಿ ವಾಸಿಸಬಲ್ಲ ಪ್ರಾಣಿಗಳು ಎಂದು ನಾವೆಲ್ಲ ಭಾವಿಸಿದ್ದೇವೆ. ಕೆಲವು ಪುಸ್ತಕಗಳಲ್ಲಿ ಅದೇರೀತಿ ಇದೆ ಕೂಡ. ಪದಶಃ ಅರ್ಥ ನೋಡಿದಾಗ ಅದೇ ಸರಿ ಎನ್ನಿಸುತ್ತದೆ. ಈ ವ್ಯಾಖ್ಯಾನದ ಆಧಾರದ ಮೇಲೆ ಆಮೆ ಮತ್ತು ಮೊಸಳೆಗಳನ್ನು ಕೂಡ ಉಭಯವಾಸಿಗಳೆಂದು ಕರೆಯುವುದನ್ನು ಸಹ ಕೇಳಿದ್ದೇನೆ ಮತ್ತು ಓದಿದ್ದೇನೆ. ಆದರೆ ವೈಜ್ಞಾನಿಕವಾಗಿ ಈ ಉಭಯವಾಸಿಗಳ ಅರ್ಥ ಅವಕ್ಕೆ ಲಾರ್ವಾ ಸ್ಥಿತಿಯಲ್ಲಿ ನೀರಿನ ಅಗತ್ಯವಿದೆ ಮತ್ತು ಆ ಸ್ಥಿತಿಯಲ್ಲಿ ಅವು ನೀರಿನಲ್ಲಿ ಮಾತ್ರ ಬದುಕಬಲ್ಲವು ಎಂಬುದಾಗಿದೆ. ಅದಕ್ಕೇ ಕಪ್ಪೆಗಳು ನೀರಿನ ಪ್ರದೇಶಗಳಲ್ಲೇ ಮೊಟ್ಟೆಯಿಡುವುದು. ಕೆಲವು ಕಪ್ಪೆಗಳು ನೇರವಾಗಿ ನಿಂತ ನೀರಿನಲ್ಲೇ ಮೊಟ್ಟೆಯಿಟ್ಟರೆ ಕೆಲವು ಮರಗಳ ಎಲೆಗಳ ಮೇಲೆ ಮೊಟ್ಟೆಯಿಡುತ್ತವೆ. ಆ ಮೊಟ್ಟೆಗಳು ಒಡೆದು ಮರಿಗಳು ಬಂದಾಗ ಅವು ನೇರವಾಗಿ ನೀರಿಗೆ ಬೀಳುವಂತೆ ಇರುವ ಎಲೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಕಪ್ಪೆಯ ಮರಿಗಳು ಪ್ರೌಢ ಕಪ್ಪೆಗಳನ್ನು ಯಾವ ರೀತಿಯಲ್ಲೂ ಹೋಲುವುದಿಲ್ಲ. ಉದ್ದನೆಯ ಬಾಲವಿರುವ ಅವುಗಳನ್ನು ಗೊದಮೊಟ್ಟೆಗಳೆಂದು ಕರೆಯುತ್ತಾರೆ. ಆಗ ಅಜ್ಜಿಯ ಮನೆಯೆದುರು ಇದ್ದ ಬಾವಿಯಲ್ಲಿ ಅಂಥ ಅಸಂಖ್ಯಾತ ಗೊದಮೊಟ್ಟೆಗಳನ್ನು ಕಾಣುತ್ತಿದ್ದೆವು. ಒಮ್ಮೊಮ್ಮೆ ಆಕಸ್ಮಿಕವಾಗಿ ನಾವು ನೀರು ಸೇದಿದಾಗ ಕೊಡದೊಳಗೆ ಗೊದಮೊಟ್ಟೆಗಳು ಸೇರಿಕೊಳ್ಳುತ್ತಿದ್ದವು. ಅವುಗಳನ್ನು ಹಿಡಿದು ಮತ್ತೆ ನೀರಿಗೆ ಬಿಡಬೇಕೆಂದು ಎಷ್ಟು ಪ್ರಯತ್ನಿಸಿದರೂ ಕೈಗೇ ಸಿಗದೆ ಜಾರಿಕೊಳ್ಳುತ್ತಿದ್ದವು. ಅಷ್ಟು ಸಣ್ಣ ಕೊಡದೊಳಗಿನ ಸೀಮಿತ ಜಾಗದಲ್ಲಿ ಅವು ಹೇಗೆ ಕೈಗೆ ಸಿಗದೆ ನುಣುಚಿಕೊಳ್ಳುತ್ತಿದ್ದವು ಎಂದು ಊಹಿಸಿದರೆ ಆಶ್ಚರ್ಯವಾಗುತ್ತದೆ. ಕಡೆಗೆ ಬೇರೆ ದಾರಿಯಿಲ್ಲದೆ ಇಡೀ ಕೊಡ ನೀರನ್ನೇ ಮರಳಿ ಬಾವಿಗೆ ಸುರಿದು ಮತ್ತೆ ಸೇದುತ್ತಿದ್ದೆವು.
ಕಪ್ಪೆಗಳ ಪ್ರಪಂಚದಲ್ಲಿ ವೈವಿಧ್ಯ ಕೂಡ ಅಪಾರವಾಗಿದೆ. ದಕ್ಷಿಣ ಅಮೆರಿಕದ ಅಮೆಜಾನ್ ಕಾಡುಗಳ ವಾಮನರೂಪಿ ಕಪ್ಪೆಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸುವುದು ಉಚಿತ. ಹಕ್ಕಿಗಳನ್ನು ಮೀರಿಸುವಂಥ ಕಣ್ಣುಕೋರೈಸುವ ಬಣ್ಣಗಳ ಈ ಕಪ್ಪೆಗಳನ್ನು ನೋಡಿ ಓಹ್ ಎಷ್ಟು ಚೆನ್ನಾಗಿದೆ ಎಂದು ಮುಟ್ಟಲು ಹೋಗಬೇಡಿ, ಏಕೆಂದರೆ ಅವುಗಳ ಮೈಯೆಲ್ಲ ಘನಘೋರ ವಿಷ. ಅವುಗಳನ್ನು ಮುಟ್ಟಿದರೂ ಸಾಕು, ಮುಟ್ಟಿದ ಕೆಲವೇ ಕ್ಷಣಗಳಲ್ಲಿ ಪಾರ್ಶ್ವವಾಯು ಹೊಡೆದು ಸಾಯುವಂಥ ವಿಷ ಅವುಗಳದ್ದು. ಅವುಗಳನ್ನು ಅಲ್ಲಿನ ಬುಡಕಟ್ಟು ಜನಾಂಗದವರು ಹಿಡಿದು, ತಮ್ಮ ಬಾಣಗಳ ತುದಿಗಳಿಗೆ ಅವುಗಳ ವಿಷವನ್ನು ಒರೆಸಿ ಬೇಟೆಯಾಡಲು ಬಳಸುತ್ತಿದ್ದರು. ಆ ಬಾಣಗಳು ಚುಚ್ಚಿದಕೂಡಲೇ ಯಾವುದೇ ಪ್ರಾಣಿಯಾದರೂ ಅಲ್ಲೇ ಬಿದ್ದು ಸಾವನ್ನಪ್ಪುತ್ತದೆ. ಅವು ಈ ವಿಷವನ್ನು ಪಡೆಯುವುದು ಅವು ಅಲ್ಲಿ ತಿನ್ನುವ ವಿಷಕಾರಿ ಕೀಟಗಳಿಂದ. ಒಂದುವೇಳೆ ಅವುಗಳನ್ನು ಗೊದಮೊಟ್ಟೆಯ ರೂಪದಲ್ಲಿದ್ದಾಗಲೇ ಹಿಡಿದು ತಂದು ವಿಷಕಾರಿಯಲ್ಲದ ಕೀಟಗಳನ್ನೇ ತಿನ್ನಿಸಿ ಬೆಳೆಸಿದರೆ ಅವು ವಿಷರಹಿತ ಕಪ್ಪೆಗಳಾಗಿ ಬೆಳೆಯುತ್ತವೆ. ಆದರೆ ಶತ್ರುಗಳಿಗೆ ಎಚ್ಚರಿಕೆ ನೀಡುವ ಕಣ್ಣುಕೋರೈಸುವ ಬಣ್ಣ ಮಾತ್ರ ಹಾಗೇ ಇರುತ್ತದೆ. ಈ ಕುಟುಂಬದ ಕಪ್ಪೆಗಳನ್ನೆಲ್ಲ ಆರೋ ಪಾಯಿಸನ್ ಫ್ರಾಗ್ ಎಂದೇ ಕರೆಯುತ್ತಾರೆ. ಬಾಣದ ತುದಿಗೆ ಲೇಪಿಸುವ ವಿಷಕ್ಕಾಗಿ ಇವುಗಳನ್ನು ಬಳಸುವುದೇ ಈ ಹೆಸರಿಗೆ ಕಾರಣ.
ಇವುಗಳಲ್ಲೇ ಕಡುಗೆಂಪು ಬಣ್ಣದ ಸ್ಟ್ರಾಬೆರಿ ಪಾಯಸನ್ ಫ್ರಾಗ್ ಎಂಬ ಕಪ್ಪೆಯೊಂದಿದೆ. ಅದು ಬ್ರೊಮಿಲಿಯಾಡ್ (ನಮ್ಮ ಅನಾನಸ್ ಅಥವಾ ಪೈನಾಪಲ್ ಗಿಡ ಗೊತ್ತಲ್ಲ? ಅದೂ ಸಹ ಒಂದು ಬಗೆಯ ಬ್ರೊಮಿಲಿಯಾಡ್ ಗಿಡ) ಗಿಡದ ಮಧ್ಯದಲ್ಲಿ ತನ್ನ ಗೊದಮೊಟ್ಟೆಯನ್ನು ಸಾಕುತ್ತದೆ ಎನ್ನುವುದು ನಿಮಗೆ ಗೊತ್ತೆ? ಇದಕ್ಕೆ ಕಾರಣವಿದೆ.
ಗೊದಮೊಟ್ಟೆಗಳು ತಮ್ಮ ತಂದೆತಾಯಿಯರಂತೆ ವಿಷಕಾರಿಗಳಲ್ಲ. ಹಾಗಾಗಿ ಅವುಗಳನ್ನು ಹಿಡಿದು ತಿನ್ನುವ ಶತ್ರುಗಳು ಬೇಕಾದಷ್ಟು ಇರುತ್ತವೆ. ಈ ಬ್ರೊಮಿಲಿಯಾಡ್ ಗಿಡಗಳು ಅಮೆಜಾನ್ ಮಹಾರಣ್ಯದ ಯಾವುದಾದರೂ ದೊಡ್ಡ ಮರಗಳ ಕಾಂಡಗಳ ಮೇಲೆ ಬೆಳೆಯುತ್ತವೆ. ಅಲ್ಲಿ ಅವುಗಳ ಮಧ್ಯಭಾಗದಲ್ಲಿ ಒಂದಿಷ್ಟು ನೀರು ಶೇಖರವಾಗಿರುತ್ತದೆ. ಆ ಪುಟ್ಟ ಕೊಳ ಒಂದು ಗೊದಮೊಟ್ಟೆಗೆ ಸಾಕಾಗುತ್ತದೆ. ಆದರೆ ಕಪ್ಪೆ ನೇರವಾಗಿ ಅಲ್ಲೇ ಮೊಟ್ಟೆಯಿಟ್ಟಿರುವುದಿಲ್ಲ. ನೆಲದಲ್ಲಿ ಎಲ್ಲೋ ಇಟ್ಟ ಮೊಟ್ಟೆ ಒಡೆದು ಗೊದಮೊಟ್ಟೆ ಹೊರಕ್ಕೆ ಬಂದಮೇಲೆ ತಾಯಿ ಅದನ್ನು ತನ್ನ ಬೆನ್ನಮೇಲೆ ಹೊತ್ತು ಆ ಮರದ ಕೊಂಬೆಯ ಮೇಲೆ ಕುಪ್ಪಳಿಸುತ್ತ ಸಾಗಿ ಬ್ರೊಮಿಲಿಯಾಡ್ ಗಿಡದ ಮಧ್ಯದಲ್ಲಿರುವ ಪುಟ್ಟ ಕೊಳದಲ್ಲಿ ಬಿಡುತ್ತದೆ. ಅಷ್ಟು ಚಿಕ್ಕ ಕಪ್ಪೆಗೆ ಆ ಕೆಲವು ಹತ್ತಾರು ಮೀಟರ್ ದೂರದ ಪ್ರಯಾಣ ನಿಜಕ್ಕೂ ಮ್ಯಾರಥಾನ್ ಪ್ರಯಾಣವೇ ಸರಿ. ಆದರೆ ಗೊದಮೊಟ್ಟೆಯನ್ನು ಅಲ್ಲಿ ಬಿಟ್ಟರೆ ಮುಗಿಯಲಿಲ್ಲ. ಅದರ ಹೊಟ್ಟೆಪಾಡು ಕಳೆಯಬೇಕಲ್ಲ? ಅದಕ್ಕೆ ಅಲ್ಲಿ ತನ್ನ ಒಂದು ಫಲಿತವಾಗದ ಮೊಟ್ಟೆಯನ್ನು ಉದುರಿಸುತ್ತದೆ. ಆ ಎತ್ತರದ ತೊಟ್ಟಿಲಲ್ಲಿ ಬಹುತೇಕ ಶತ್ರುಗಳಿಂದ ಸುರಕ್ಷಿತವಾಗಿ ಗೊದಮೊಟ್ಟೆ ತನ್ನ ಬಾಲ್ಯವನ್ನು ಕಳೆಯುತ್ತದೆ.
ಕಪ್ಪೆಗಳಲ್ಲಿ ಅತ್ಯಂತ ವಿಶೇಷವಾದ ಪ್ರಭೇದವೊಂದಿದೆ. ಅದು ದಕ್ಷಿಣ ಅಮೆರಿಕದ ಪ್ಯಾರಡಾಕ್ಸಿಕಲ್ ಫ್ರಾಗ್. ಅದಕ್ಕೆ ವಿರೋಧಾಭಾಸದ ಕಪ್ಪೆ ಎಂದು ಅನುವಾದ ಮಾಡಬಹುದೇ? ಈ ವಿಚಿತ್ರ ಹೆಸರು ಬರಲು ಕಾರಣ ಇದರ ಗೊದಮೊಟ್ಟೆಗಳು ಪ್ರೌಢ ಕಪ್ಪೆಗಳ ಮೂರು-ನಾಲ್ಕು ಪಟ್ಟು ದೊಡ್ಡದಿರುವುದೇ ಆಗಿದೆ. ಜಗತ್ತಿನ ಯಾವುದೇ ಜೀವಿಯನ್ನು ತೆಗೆದುಕೊಂಡರೂ ಮರಿಗಳು ಪ್ರೌಢಜೀವಿಗಳಿಗಿಂತ ಚಿಕ್ಕದಾಗಿರುತ್ತವೆ. ಅದೇ ಪ್ರಕೃತಿನಿಯಮ ಎಂದು ನಾವು ಒಪ್ಪಿಕೊಂಡೂಬಿಟ್ಟಿದ್ದೇವೆ. ಆದರೆ ಈ ಕಪ್ಪೆ ಮಾತ್ರ ಇದಕ್ಕೆ ಅಪವಾದ! ಇದರ ಗೊದಮೊಟ್ಟೆ ಸುಮಾರು ಇಪ್ಪತ್ತೇಳು ಸೆಂಟಿಮೀಟರ್ (ಅಂದರೆ ಹತ್ತಿರಹತ್ತಿರ ಒಂದು ಅಡಿ) ದೊಡ್ಡದಿರುತ್ತದೆ. ಆದರೆ ಪ್ರೌಢಾವಸ್ಥೆಗೆ ಬರುವಾಗ ಅದರ ಗಾತ್ರ ಕುಗ್ಗಿ ಸುಮಾರು ಏಳರಿಂದ ಎಂಟು ಸೆಂಟಿಮೀಟರ್ ಮಾತ್ರ ಆಗುತ್ತದೆ.
ಕಪ್ಪೆಗಳು ರೈತರ ಮಿತ್ರರು ಎನ್ನುತ್ತಾರೆ. ಅವು ಕೇವಲ ರೈತರಿಗಷ್ಟೇ ಅಲ್ಲ, ಇಡೀ ಮನುಕುಲಕ್ಕೇ ಮಿತ್ರರು. ಅವು ಪ್ರತಿದಿನ ತಮ್ಮ ದೇಹದ ತೂಕದಷ್ಟೇ ಕ್ರಿಮಿಕೀಟಗಳನ್ನು ತಿನ್ನುತ್ತವೆ. ಹಾಗಾಗಿ ನಿಮ್ಮ ತೋಟ ಅಥವಾ ಗದ್ದೆಗಳಲ್ಲಿ ಕಪ್ಪೆಗಳಿದ್ದರೆ ಖುಷಿಪಡಿ. ಆದರೆ ಕಪ್ಪೆಗಳನ್ನೇ ತಿನ್ನುವ ಕೀಟಗಳಿವೆ ಎನ್ನುವ ವಿಷಯ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಎಪೋಮಿಸ್ ಎನ್ನುವ ಒಂದು ಜಾತಿಯ ಓಡುಹುಳ (ಓಡುಹುಳ ಎಂದರೆ ರೆಕ್ಕೆಯ ಮೇಲೆ ಗಟ್ಟಿಯಾದ ಚಿಪ್ಪಿರುವ ಹುಳಗಳ ಕುಲ. ತೆಂಗಿನಮರ ಕೊರೆಯುವ ದುಂಬಿಗಳು, ಮಿಂಚುಹುಳಗಳು ಎಲ್ಲ ಇದೇ ವರ್ಗಕ್ಕೆ ಸೇರುತ್ತವೆ) ಕಪ್ಪೆಗಳನ್ನೇ ಹಿಡಿದು ತಿನ್ನುವುದರಲ್ಲಿ ಹೆಸರುವಾಸಿ. ಅದರಲ್ಲೂ ಈ ಹುಳದ ಲಾರ್ವಾಗಳಂತೂ ಕಪ್ಪೆಗಳ ಗಂಟಲ ಕೆಳಗೆ ಹಿಡಿದುಕೊಂಡು ಅವುಗಳನ್ನು ಜೀವಂತವಾಗಿರುವಾಗಲೇ ತಿನ್ನುತ್ತವೆ. ಈ ಅಭ್ಯಾಸ ಅವಕ್ಕೆ ಹೇಗೆ ಬಂತು ಎನ್ನುವುದು ಯಾರಿಗೂ ಗೊತ್ತಿಲ್ಲ. ಅವು ಉದ್ದೇಶಪೂರ್ವಕವಾಗಿಯೇ ಕಪ್ಪೆಗಳೆದುರು ಅಸಹಾಯಕ ಹುಳುಗಳಂತೆ ಒದ್ದಾಡುವುದೂ ಅದನ್ನು ಕಂಡು ಕಪ್ಪೆಗಳು ಸುಲಭಕ್ಕೆ ಮಿಕ ಸಿಕ್ಕಿತೆಂದು ಅವುಗಳನ್ನು ಹಿಡಿಯಲು ಹೋಗುವುದೂ, ಆಗ ಆ ಲಾರ್ವಾಗಳು ಕಪ್ಪೆಗಳನ್ನೇ ಹಿಡಿದು, ತಮ್ಮ ಇಕ್ಕಳದಂಥ ಕೊಂಬುಗಳಿಂದ ಅವುಗಳ ಗಂಟಲ ಕೆಳಗೆ ಹಿಡಿದುಕೊಂಡು ಅವುಗಳನ್ನು ಇಂಚಿಂಚಾಗಿ ತಿನ್ನುತ್ತವೆ. ಒಮ್ಮೆ ಹಿಡಿದುಕೊಂಡ ಈ ಹುಳಗಳ ಕಬಂಧಬಾಹುಗಳಿಂದ ಏನು ಮಾಡಿದರೂ ಬಿಡಿಸಿಕೊಳ್ಳಲು ಕಪ್ಪೆಗಳಿಗೆ ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆ ಕಪ್ಪೆಗಳು ಈ ಹುಳಗಳನ್ನು ನುಂಗಿದರೂ ಒಂದೆರಡು ಗಂಟೆಗಳ ಬಳಿಕ ಅವುಗಳನ್ನು ಉಗಿದಿದ್ದನ್ನೂ, ಹೊರಬಿದ್ದ ಹುಳಗಳು ಇನ್ನೂ ಜೀವಂತವಾಗಿದ್ದಲ್ಲದೇ ಕೂಡಲೇ ಕಪ್ಪೆಗಳ ಮೇಲೆ ಎರಗಿದ್ದನ್ನೂ ಸಂಶೋಧಕರು ಗಮನಿಸಿದ್ದಾರೆ. ಬಹುಶಃ ವಿಕಾಸದ ಮಜಲಿನ ಯಾವುದೋ ಒಂದು ಹಂತದಲ್ಲಿ ತನ್ನ ಆತ್ಮರಕ್ಷಣೆಗಾಗಿ ಈ ಹುಳಗಳು ಕಪ್ಪೆಗಳ ಮೇಲೆ ತಿರುಗಿಬಿದ್ದು, ಅವುಗಳನ್ನೂ ತಿನ್ನಬಹುದೆಂದು ಕಂಡುಕೊಂಡವೋ ಏನೋ? ಇದನ್ನೆಲ್ಲ ಸದ್ಯಕ್ಕೆ ನಾವು ಊಹೆ ಮಾಡಬಹುದಷ್ಟೇ ಹೊರತು ಕಾಲಗರ್ಭದಲ್ಲಿ ಶಾಶ್ವತವಾಗಿ ಹೂತುಹೋಗಿರುವ ಈ ಸತ್ಯವನ್ನು ಇದಮಿತ್ಥಂ ಎಂದು ನಿರ್ಧರಿಸುವುದು ಸಾಧ್ಯವಿಲ್ಲ.
ಪ್ರೌಢ ಎಪೋಮಿಸ್ ದುಂಬಿಗಳು ಬೇರೆ ಚಿಕ್ಕಪುಟ್ಟ ಕೀಟಗಳನ್ನು ಸಹ ಬೇಟೆಯಾಡುತ್ತವೆ. ಆದರೆ ಲಾರ್ವಾಗಳು ಮಾತ್ರ ಕಪ್ಪೆಗಳನ್ನಷ್ಟೇ ತಿನ್ನುತ್ತವೆ. ಲಾರ್ವಾಗಳು ಸಾಮಾನ್ಯವಾಗಿ ಕಪ್ಪೆಗಳ ಗಂಟಲ ಕೆಳಗೇ ಕಚ್ಚಿಹಿಡಿಯುತ್ತವೆ. ಆದರೆ ದುಂಬಿಗಳು ಅವುಗಳ ಮೇಲೆ ಹಿಂದಿನಿಂದ ದಾಳಿಮಾಡಿ, ಅವುಗಳ ಕಾಲಿನ ಸ್ನಾಯುಗಳನ್ನು ಕತ್ತರಿಸಿ ಚಲಿಸಲಾಗದ ಅಸಹಾಯಕ ಸ್ಥಿತಿಗೆ ಅವುಗಳನ್ನು ದೂಡಿ ನಂತರ ಬಾಹ್ಯ ಪರಾವಲಂಬಿಯಂತೆ ಅವುಗಳನ್ನು ತಿನ್ನುತ್ತವೆ. ಇನ್ನೂ ಜೀವವಿರುವ ಕಪ್ಪೆಗಳು ಒದ್ದಾಡುವಾಗ ಅವುಗಳನ್ನು ತಿನ್ನುವ ದುಂಬಿಗಳು ಖಳನಾಯಕರಂತೆ, ಯಾವುದೋ ಭಯಾನಕ ಸಿನಿಮಾ ನೋಡಿದಂತೆ ಭಾಸವಾಗುತ್ತದೆ. ಆದರೆ ಪ್ರಕೃತಿಯಲ್ಲಿ ದಿನನಿತ್ಯ ನಡೆಯುವ ನೂರಾರು ರುದ್ರನಾಟಕಗಳಲ್ಲಿ ಇದೂ ಒಂದು ಅಷ್ಟೆ.
ನಮ್ಮಲ್ಲಿರುವ ಕಪ್ಪೆಗಳಲ್ಲೆಲ್ಲ ಅತ್ಯಂತ ದೊಡ್ಡದು ಗೂಳಿಕಪ್ಪೆ. ಅಂಗೈಯಗಲದ ಈ ಭಾರೀ ಕಪ್ಪೆಗಳು ಒಂದು ಕಾಲದಲ್ಲಿ ಎಲ್ಲೆಡೆ ಹೇರಳವಾಗಿದ್ದವು. ಆದರೆ ಅವುಗಳ ಹಿಂಗಾಲುಗಳು ಸ್ವಾದಿಷ್ಟ ಖಾದ್ಯವಾಗಿ ವಿದೇಶಗಳಲ್ಲೂ ಪ್ರಸಿದ್ಧವಾಗಿದ್ದರಿಂದ ಅವುಗಳನ್ನು ಅಪಾರ ಪ್ರಮಾಣದಲ್ಲಿ ಬೇಟೆಯಾಡಿ ವಿದೇಶಗಳಿಗೂ ಅವುಗಳ ಕಾಲುಗಳನ್ನು ರಫ್ತುಮಾಡುತ್ತಿದ್ದರು. ಇದರಿಂದಾಗಿ ಅವು ಅವನತಿಯಂಚಿಗೆ ತಲುಪಿದವು. ಈಗ ಅವುಗಳಿಗೆ ಕಾನೂನಿನ ರಕ್ಷಣೆ ಇದ್ದರೂ ಅಲ್ಲಿ, ಇಲ್ಲಿ ಕದ್ದುಮುಚ್ಚಿ ಅವುಗಳ ಬೇಟೆ ನಡೆದೇ ಇದೆ.
ಕಪ್ಪೆಗಳ ಮೈಚರ್ಮ ಒದ್ದೆಯಾಗಿರುವುದನ್ನು ನೀವೆಲ್ಲ ನೋಡಿರಬಹುದು. ಆದ್ದರಿಂದ ಅವಕ್ಕೆ ನೀರಿನ ಸಾಮೀಪ್ಯ ಸದಾ ಅಗತ್ಯ. ಹಾಗಾಗಿ ಅವು ಮಳೆಗಾಲದಲ್ಲಷ್ಟೇ ಎಲ್ಲೆಡೆ ಕಾಣಿಸಿಕೊಳ್ಳುತ್ತವೆ. ಬೇಸಿಗೆಯಲ್ಲಿ ಅವು ಎಲ್ಲಿ ಹೋಗುತ್ತವೆ ಎಂದು ಯೋಚಿಸಿದ್ದೀರಾ? ಅವು ಮಣ್ಣಿನಡಿಯಲ್ಲೆಲ್ಲೋ ಹುದುಗಿ ದೀರ್ಘನಿದ್ರೆ ಮಾಡುತ್ತವೆ. ಮಳೆಕಾಡುಗಳಲ್ಲಿ, ಸದಾ ತಂಪಿರುವ ನೀರಿನ ಆಸರೆಗಳ ಅಕ್ಕಪಕ್ಕದಲ್ಲಿ ಮಾತ್ರ ಅವು ಬೇಸಿಗೆಯಲ್ಲಿ ಸಹ ಕಂಡುಬರಬಹುದು. ಅವು ಎಂದೂ ನೇರವಾಗಿ ಸೂರ್ಯನ ಬಿಸಿಲಿಗೆ ತೆರೆದುಕೊಳ್ಳುವುದಿಲ್ಲ. ಏಕೆಂದರೆ ಬಿಸಿಲಿಗೆ ಚರ್ಮ ಒಣಗಿದರೆ ಅವು ಸಾಯುತ್ತವೆ. ಆದರೆ ಇದಕ್ಕೂ ಒಂದು ಅಪವಾದ ಇದೆ! ದಕ್ಷಿಣ ಅಮೆರಿಕಾದ ಕಾಡುಗಳ ವ್ಯಾಕ್ಸಿ ಮಂಕಿ ಟ್ರೀ ಫ್ರಾಗ್ (ಇದನ್ನು ಕೂಪಮಂಡೂಕ ಅಲ್ಲ, ಕಪಿಮಂಡೂಕ ಎನ್ನೋಣವೇ?) ಎಂಬ ಕಪ್ಪೆಯ ಚರ್ಮವು ಒಂದು ಬಗೆಯ ಮೇಣದಂಥ ವಸ್ತುವನ್ನು ಸ್ರವಿಸುತ್ತದೆ. ತನ್ನ ಕಾಲುಗಳಿಂದ ಈ ಕಪ್ಪೆ ಆ ವಸ್ತುವನ್ನು ತನ್ನ ಮೈಗೆಲ್ಲ ಹಚ್ಚಿಕೊಳ್ಳುತ್ತದೆ. ಈ ಕಪ್ಪೆ ಇಪ್ಪತ್ತರಿಂದ ನಲವತ್ತು ಡಿಗ್ರಿ ಸೆಲ್ಷಿಯಸ್‌ಗಳ ಅಗಾಧವಾದ ಉಷ್ಣತೆಯ ಏರುಪೇರುಗಳನ್ನು ಸಹಿಸಬಲ್ಲದು. ಈ ಸಾಮರ್ಥ್ಯ ಬೇರೆ ಪ್ರಭೇದದ ಕಪ್ಪೆಗಳಿಗೆ ಹೋಲಿಸಿದರೆ ಇದರಲ್ಲಿ ಅತಿಹೆಚ್ಚು.
ಆಫ್ರಿಕದ ಗೂಳಿಕಪ್ಪೆಗಳು ಭಾರತದ ಗೂಳಿಕಪ್ಪೆಗಳಿಗಿಂತ ಹೆಚ್ಚು ಆಕ್ರಮಣಕಾರಿ ಎಂದು ಹೆಸರಾಗಿವೆ. ಇವು ಸಣ್ಣಪುಟ್ಟ ಹಾವು, ಕ್ರಿಮಿಕೀಟಗಳು ಹಾಗೂ ತಮ್ಮ ಬಾಯಿಯ ಅಳತೆಗೆ ನಿಲುಕುವಂಥ ಯಾವ ಪ್ರಾಣಿಯನ್ನಾದರೂ ನುಂಗುತ್ತದೆ. ಕಪ್ಪೆಯೇ ಹಾವನ್ನು ನುಂಗುವುದು ವಿಚಿತ್ರ ಎನ್ನಿಸಿದರೂ ಇದು ಸತ್ಯ. ಜೊತೆಗೆ ಇವುಗಳಲ್ಲಿ ಗಂಡುಗಳು ಹೆಣ್ಣಿನ ಎರಡು ಪಟ್ಟು ದೊಡ್ಡದಾಗಿದ್ದು, ಇದು ಕಪ್ಪೆಗಳಲ್ಲೆಲ್ಲ ಅತ್ಯಂತ ಅಪರೂಪದ ಉದಾಹರಣೆಯಾಗಿದೆ. ಏಕೆಂದರೆ ನಮ್ಮಲ್ಲಿ ಗೂಳಿಕಪ್ಪೆಗಳು ಮತ್ತು ಮರಗಪ್ಪೆಗಳಲ್ಲೆಲ್ಲ (ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಕಂಡುಬರುವ ಎಲ್ಲ ಕಪ್ಪೆಗಳಿಗೂ ಇದು ಅನ್ವಯಿಸುತ್ತದೆ) ಹೆಣ್ಣುಗಳೇ ಗಂಡಿನ ಎರಡುಪಟ್ಟು ದೊಡ್ಡದಾಗಿರುತ್ತವೆ.
ಆಫ್ರಿಕದ ಗೂಳಿಕಪ್ಪೆಗಳು ಸ್ವಜಾತಿ ಭಕ್ಷಕಗಳೆಂದೂ ಹೆಸರಾಗಿವೆ. ಅವು ತಮ್ಮದೇ ಜಾತಿಯ ಗೊದಮೊಟ್ಟೆಗಳನ್ನು ಸಹ ಒಮ್ಮೊಮ್ಮೆ ತಿನ್ನುತ್ತವೆ. ಹಾಗೆಂದಮಾತ್ರಕ್ಕೆ ಅವುಗಳನ್ನು ಸಂವೇದನಾರಹಿತ ಜೀವಿಗಳೆಂದು ಪರಿಗಣಿಸಬೇಕಿಲ್ಲ. ಗಂಡು ಗೂಳಿಕಪ್ಪೆಗಳು ತಮ್ಮ ಮರಿಗಳಿಗಾಗಿ ಸಾಕಷ್ಟು ಕಾಳಜಿ ವಹಿಸುತ್ತವೆ. ಸಾಮಾನ್ಯವಾಗಿ ಆಫ್ರಿಕದಲ್ಲಿ ಮಳೆ ಕಡಿಮೆಯಿರುವ ಒಣಪ್ರದೇಶಗಳಲ್ಲಿ ಅಲ್ಲಲ್ಲಿ ಇರುವ ನೀರಿನ ಹೊಂಡಗಳಲ್ಲಿ ಹೆಣ್ಣುಗಳು ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದು ಹೊರಬಂದ ಗೊದಮೊಟ್ಟೆಗಳು ಆ ಚಿಕ್ಕ ಹೊಂಡದಲ್ಲಿ ಬದುಕಿಗಾಗಿ ದೊಡ್ಡ ಹೋರಾಟವನ್ನೇ ಮಾಡಬೇಕಾಗುತ್ತದೆ. ಬಿಸಿಲು ಏರಿದಂತೆ ಹೊಂಡದಲ್ಲಿರುವ ನೀರು ವೇಗವಾಗಿ ಆವಿಯಾಗುತ್ತದೆ. ಅದು ಪೂರ್ಣವಾಗಿ ಇಂಗಿಹೋದರೆ ಅಲ್ಲಿದ್ದ ಗೊದಮೊಟ್ಟೆಗಳೆಲ್ಲ ಸಾವನ್ನಪ್ಪುವುದು ಶತಸ್ಸಿದ್ಧ. ಆದರೆ ಅದನ್ನು ಸಮೀಪದಲ್ಲಿ ಕುಳಿತು ನೋಡುತ್ತಿದ್ದ ಅವುಗಳ ತಂದೆ ಸುಮ್ಮನೆ ಕೂರುವುದಿಲ್ಲ. ಪಕ್ಕದಲ್ಲಿದ್ದ ಇನ್ನೊಂದು ದೊಡ್ಡ ಹೊಂಡದಿಂದ ಈ ಹೊಂಡಕ್ಕೆ ಒಂದು ಕಾಲುವೆ ತೋಡುತ್ತದೆ. ಅಲ್ಲಿಂದ ಹರಿದುಬರುವ ನೀರು ಚಿಕ್ಕ ಹೊಂಡವನ್ನು ತುಂಬಿಸುತ್ತದೆ. ಸಾವಿನ ದವಡೆಯಲ್ಲಿದ್ದ ಮರಿಗಳಿಗೆ ಮರುಜನ್ಮ ಸಿಕ್ಕಿದಂತೆ ಆಗುತ್ತದೆ.
ಕಪ್ಪೆಗಳನ್ನು ಸ್ಥೂಲವಾಗಿ ಫ್ರಾಗ್ ಮತ್ತು ಟೋಡ್‌ಗಳೆಂದು ವಿಂಗಡಿಸುತ್ತಾರೆ. ಇವುಗಳ ನಡುವೆ ಇರುವ ಮುಖ್ಯವಾದ ವ್ಯತ್ಯಾಸವೆಂದರೆ ಅವುಗಳ ಚರ್ಮ. ಫ್ರಾಗ್‌ಗಳ ಚರ್ಮ ಮೃದುವಾಗಿದ್ದರೆ ಟೋಡ್‌ಗಳ ಚರ್ಮ ಗಂಟುಗಂಟಾಗಿದ್ದು, ಒರಟಾಗಿರುತ್ತದೆ. ಟೋಡ್‌ಗಳ ಹಿಂಗಾಲುಗಳು ಫ್ರಾಗ್‌ಗಳ ಹಿಂಗಾಲುಗಳಿಗಿಂತ ಗಿಡ್ಡವಾಗಿರುತ್ತವೆ. ಆದ್ದರಿಂದ ಅವು ಕಪ್ಪೆಗಳಂತೆ ಕುಪ್ಪಳಿಸಲಾರವು. ಅವು ನಡೆಯುವುದೇ ಹೆಚ್ಚು. ಒಂದೊಮ್ಮೆ ಕುಪ್ಪಳಿಸಿದರೂ ಕಪ್ಪೆಗಳಷ್ಟು ದೂರಕ್ಕೆ ಕುಪ್ಪಳಿಸಲಾರವು. ಆಫ್ರಿಕದ ಪೆಬಲ್ ಟೋಡ್ ಎಂಬ ಒಂದು ಪುಟ್ಟ ಕಪ್ಪೆ, ಕೆಲವೇ ಸೆಂಟಿಮೀಟರ್ ಉದ್ದವಿರುತ್ತದೆ. ಇದೂ ಸಹ ಕುಪ್ಪಳಿಸಲಾರದು. ಬಂಡೆಗಳ ನಡುವೆ ವಾಸಿಸುವ ಈ ಕಪ್ಪೆಗೆ ಅಲ್ಲಿಯೇ ಭಯಾನಕವಾದ ಶತ್ರುವೊಂದಿದೆ. ಕಪ್ಪೆಗಳನ್ನು ಹಿಡಿದು ತಿನ್ನುವ ಟ್ಯಾರಂಟುಲಾ ಎಂಬ ಬೃಹತ್ ಜೇಡ ಈ ಬಂಡೆಗಳ ನಡುವೆ ಹೊಂಚುಹಾಕುತ್ತಿರುತ್ತದೆ. ಆದರೆ ಬೇರೆ ಕಪ್ಪೆಗಳಂತೆ ಕುಪ್ಪಳಿಸಲಾಗದ ಈ ಕಪ್ಪೆ ಜೇಡವನ್ನು ಕಂಡೊಡನೆ ತನ್ನ ಕೈಕಾಲುಗಳನ್ನು ಸೆಟೆದುಕೊಂಡು ತನ್ನ ಇಡೀ ದೇಹವನ್ನು ಒಂದು ರಬ್ಬರ್ ಚೆಂಡಿನಂತೆ ಮಾಡಿಕೊಂಡು ಅಷ್ಟು ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಬಂಡೆಗಳ ಮೇಲೆ ಚೆಂಡಿನಂತೆಯೇ ಪುಟನೆಗೆದು ಕೆಳಗಿರುವ ಪುಟ್ಟ ನೀರಿನ ಹೊಂಡದಲ್ಲಿ ಬೀಳುತ್ತದೆ. ಅದು ಅಷ್ಟು ಚಿಕ್ಕದಾಗಿರುವುದರಿಂದ ಬಂಡೆಗಳ ಮೇಲೆ ಉರುಳುರುಳಿ ಬಿದ್ದರೂ ಅದಕ್ಕೆ ಘಾಸಿಯಾಗುವುದಿಲ್ಲ.
ರಜಾದಿನಗಳಲ್ಲಿ ಜಲಪಾತಗಳ ವೀಕ್ಷಣೆಗೆ ಹೋಗುವುದು ನಮ್ಮ ಅಚ್ಚುಮೆಚ್ಚಿನ ಹವ್ಯಾಸಗಳಲ್ಲೊಂದು. ನಮ್ಮೂರಿನಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಅದ್ಭುತವಾದ ಜಲಪಾತವೊಂದನ್ನು ನೋಡಲು ಒಮ್ಮೆ ಐದಾರು ಜನ ಸ್ನೇಹಿತರೊಂದಿಗೆ ಹೋಗಿದ್ದೆವು. ಅದು ಬಹುಶಃ ಡಿಸೆಂಬರ್ ತಿಂಗಳಿರಬಹುದು. ಸೂರ್ಯ ನೆತ್ತಿಯ ಮೇಲೆ ಬಂದಿದ್ದರೂ ಆ ಕಾಡು ದಟ್ಟವಾಗಿದ್ದ ಕಾರಣ ನಮಗೆ ಬಿಸಿಲು ಬೀಳುತ್ತಿರಲಿಲ್ಲ. ಎತ್ತರದಿಂದ ಧುಮ್ಮಿಕ್ಕುವ ಜಲಪಾತವನ್ನು ನೋಡುತ್ತ ಮೈಮರೆತಿದ್ದೆವು. ಅಷ್ಟರಲ್ಲಿ ಅಲ್ಲೇ ಕುಳಿತಿದ್ದ ನನ್ನ ತಮ್ಮ ಸಮೀಪದಲ್ಲಿದ್ದ ಕಪ್ಪೆಯೊಂದರತ್ತ ನಮ್ಮ ಗಮನಸೆಳೆದ. ಅದು ಒಂದೆರಡೇ ಸೆಂಟಿಮೀಟರ್ ಗಾತ್ರದ ಚಿಕ್ಕ ಕಪ್ಪೆ. ಆದರೆ ಅದು ಅಲ್ಲೇ ಇದ್ದ ಬಂಡೆಯೊಂದರ ಮೇಲೆ ಕುಳಿತು ತನ್ನ ಕಾಲನ್ನೆತ್ತಿ ಯಾರನ್ನೋ ಕರೆಯುವಂತೆ ಗಾಳಿಯಲ್ಲಿ ಆಡಿಸುತ್ತಿತ್ತು. ನಮಗೆ ಅದನ್ನು ನೋಡಿ ಅಚ್ಚರಿಯಾಯಿತು. ಕೂಡಲೇ ಅದು ಡ್ಯಾನ್ಸಿಂಗ್ ಫ್ರಾಗ್ ಎನ್ನುವುದು ನೆನಪಾಯಿತು. ಸರ್ ಡೇವಿಡ್ ಅಟೆನ್‌ಬರೋ ಅವರ ಸಾಕ್ಷ್ಯಚಿತ್ರವೊಂದರಲ್ಲಿ ಈ ಕಪ್ಪೆಯ ಬಗ್ಗೆ ನೋಡಿದ್ದೆವು. ಇದು ಜಲಪಾತ ಮತ್ತು ನದಿಗಳ ಬದಿಯಲ್ಲಿ ವಾಸಿಸುವ ಒಂದು ಬಗೆಯ ಕಪ್ಪೆ. ಸಾಮಾನ್ಯವಾಗಿ ನಾವೆಲ್ಲ ಮನೆಗಳ ಬಳಿ ದೊಡ್ಡದಾಗಿ ವಟಗುಟ್ಟುತ್ತ ಹೆಣ್ಣನ್ನು ಆಕರ್ಷಿಸುವ ಕಪ್ಪೆಗಳನ್ನು ಕಂಡಿದ್ದೇವೆ. ಆದರೆ ಇಲ್ಲಿ ನದಿಯ ಭೋರ್ಗರೆತದ ನಡುವೆ ಕಪ್ಪೆಯ ಕೂಗು ನಿಷ್ಪ್ರಯೋಜಕ. ದೂರದಲ್ಲೆಲ್ಲೋ ಕುಳಿತ ಹೆಣ್ಣಿಗೆ ಆ ಧ್ವನಿ ಕೇಳುವುದು ಸಾಧ್ಯವೇ ಇಲ್ಲ. ಆದ್ದರಿಂದ ಅದನ್ನು ಆಕರ್ಷಿಸಲು ಈ ಕಪ್ಪೆಗಳು ಕೈಬೀಸುವುದನ್ನು ಕಲಿತಿವೆ.
ಕಪ್ಪೆಗಳ ಪುರಾಣ ಮುಗಿಸುವ ಮೊದಲು ಇನ್ನೊಂದು ವಿಚಿತ್ರ ಕಪ್ಪೆಯ ಬಗ್ಗೆ ಹೇಳುತ್ತೇನೆ. ಸುರಿನಾಮ್ ಟೋಡ್ ಎಂಬ ಹೆಸರಿರುವ ಇದು ನಿಜವಾಗಿ ಟೋಡ್ ಅಲ್ಲ, ಒಂದು ಫ್ರಾಗ್. ಈ ಕಪ್ಪೆಯ ಬೆನ್ನು ಮೊಟ್ಟೆಯಿಡುವ ಸಂದರ್ಭದಲ್ಲಿ ಸ್ಪಂಜಿನಂತೆ ಆಗುತ್ತದೆ. ಅದರ ಮೊಟ್ಟೆಗಳು ಈ ಸ್ಪಂಜಿನ ಒಳಗೇ ಹುದುಗಿಕೊಂಡು ಬೆಳೆಯುತ್ತವೆ. ಮರಿಗಳು ಬೆಳೆದು ದೊಡ್ಡದಾಗುವವರೆಗೂ ಅದರ ಬೆನ್ನಿನಮೇಲೆಯೇ ಬೆಳೆಯುತ್ತವೆ. ತನ್ನ ದೇಹದ ಮೇಲೆಯೇ ಮೊಟ್ಟೆಗಳನ್ನು ಧರಿಸಿ ಲಾರ್ವಾಗಳು ಹೊರಬರುವವರೆಗೂ ಅವುಗಳನ್ನು ಹೊತ್ತುಕೊಂಡು ತಿರುಗುವ ಏಕೈಕ ಕಪ್ಪೆ ಇದು. ಇದನ್ನು ನೋಡಿದ ತಕ್ಷಣ ಇದೊಂದು ಕಪ್ಪೆ ಎನ್ನಿಸುವುದೇ ಇಲ್ಲ. ಒಣಗಿದ ಮರದ ಎಲೆಯಂತೆ ಕಾಣುತ್ತದೆ. ಇದರ ಕಣ್ಣುಗಳು ಸಹ ಕಂಡೂಕಾಣದಷ್ಟು ಚಿಕ್ಕವು. ಇಷ್ಟೊಂದು ಚಪ್ಪಟೆಯಾದ ದೇಹವನ್ನು ಹೊಂದಿರುವ ಕಪ್ಪೆ ಇದೊಂದೇ.
0 Followers
0 Following