ವರಾಹರೂಪಂ...

ದ್ಯಾಮಕ್ಕ, ಹಂದಿ ಮತ್ತು ಹುಲಿ

ProfileImg
23 Mar '24
10 min read


image

        "ಯಾವನ್ಲಾ ಅವನು ನನ್ನ ವಿಷ್ಣುವಿಗೆ ಹೊಡೆದವನು?" ತನ್ನ ಹಂದಿಯೊಂದಿಗೆ ಅಬ್ಬರಿಸುತ್ತ ಬಂದ ದ್ಯಾಮಕ್ಕನನ್ನೇ ಅರಳಿಕಟ್ಟೆಯ ಮೇಲೆ ಕುಳಿತವರೆಲ್ಲ ಭಯದಿಂದ ನೋಡಿದರು. ಐದಡಿಗಿಂತಲೂ ಕಡಿಮೆ ಎತ್ತರದ, ನಲ್ವತ್ತೈದು ಕಿಲೋ ತೂಕದ ಈ ಬಡಕಲು ಹೆಂಗಸಿಗೆ ಊರವರೆಲ್ಲ ಹೆದರುತ್ತಿದ್ದರು. ಅದಕ್ಕೆ ಅವಳ ಬಾಯಿಯೇ ಕಾರಣ. ಬೈಯಲು ಶುರುಮಾಡಿದಳೆಂದರೆ ಎದುರಿಗಿರುವವನು ಯಾರೇ ಆಗಿರಲಿ, ಅವನ ವಂಶವೃಕ್ಷವನ್ನೆಲ್ಲ ಜಾಲಾಡಿಬಿಡುತ್ತಿದ್ದಳು. ಇದೀಗ ತನ್ನ ಹಂದಿ ಕಿರ್ರೋ ಎಂದು ಕಿರುಚುತ್ತ ಬಂದಾಗ ಅವಳಿಗೆ ಖಾತ್ರಿಯಾಗಿತ್ತು, ಯಾರೋ ಹೊಡೆಯದೇ ಅದು ಹಾಗೆ ಓಡಿಬರುವುದಿಲ್ಲವೆಂದು. ಆ ಊರಿನಲ್ಲಿ ಯಾವ ಕೆಲಸವನ್ನೂ ಮಾಡದೆ ಬೆಳಗಿನಿಂದ ಸಂಜೆಯವರೆಗೆ ಕೇವಲ ಹರಟೆಯಲ್ಲೇ ಕಾಲಹರಣ ಮಾಡುತ್ತಿದ್ದ ಗಂಡಸರ ಗುಂಪೊಂದಿತ್ತು. ಪ್ರತಿದಿನ ಅರಳಿಕಟ್ಟೆ ಅವರ ಹರಟೆಗಾಗಿಯೇ ಮೀಸಲು. ಕೆಲಸವಿಲ್ಲದ ಅವರಲ್ಲೇ ಯಾರೋ ಒಬ್ಬ ಮಾಡಿದ ಕಿತಾಪತಿ ಇರಬೇಕು ಎಂಬ ಅನುಮಾನ ದ್ಯಾಮಕ್ಕನಿಗೆ. ಆದ್ದರಿಂದ ಅವಳು ಸೀದಾ ಅಲ್ಲಿಗೆ ಬಂದಿದ್ದಳು.

       ತಾನು ಸಾಕಿದ ಆ ಹಂದಿಯೆಂದರೆ ದ್ಯಾಮಕ್ಕನಿಗೆ ಪಂಚಪ್ರಾಣ. ಅದನ್ನು ಹಗಲುಹೊತ್ತು ಊರಿನಲ್ಲಿ ಸ್ವೇಚ್ಛೆಯಾಗಿ ತಿರುಗಾಡಲು ಬಿಡುತ್ತಿದ್ದಳು. ಮನೆಯಲ್ಲೂ ಅದಕ್ಕೆ ತಾನು ತಿನ್ನುತ್ತಿದ್ದ ರೊಟ್ಟಿ, ದೋಸೆ, ಅನ್ನ ಸಾರು ಎಲ್ಲದರಲ್ಲೂ ಪಾಲು ಕೊಡುತ್ತಿದ್ದಳು. ಹಾಗಾಗಿ ಅದು ಚೆನ್ನಾಗಿ ಕೊಬ್ಬಿ ಬೆಳೆದಿತ್ತು. ಅದು ಸಹ ಅವಳನ್ನು ತುಂಬಾ ಹಚ್ಚಿಕೊಂಡಿತ್ತು. ಅವಳು ಅದಕ್ಕೆ ವಿಷ್ಣು ಎಂದು ಹೆಸರಿಟ್ಟಿದ್ದು ಜನರಿಗೆಲ್ಲ ತಮಾಷೆಯಾಗಿ ಕಾಣಿಸಿತ್ತು. ಒಮ್ಮೆ ಒಬ್ಬ ಅದಕ್ಕೇಕೆ ಆ ಹೆಸರಿಟ್ಟಿದ್ದೆಂದು ಕೇಳಿದ. "ಒಮ್ಮೆ ವಿಷ್ಣು ಹಂದಿವೇಷ ಹಾಕಿದ್ದನಂತೆ. ಅದಕ್ಕೇ ನನ್ನ ಹಂದಿಗೆ ಆ ಹೆಸರಿಟ್ಟೆ" ಎಂದಳು. ವರಾಹಾವತಾರ ಎಂಬ ಸಂಸ್ಕೃತ ಶಬ್ದ ಅವಳ ಬಾಯಿಯಿಂದ ಬರದಿದ್ದರೂ ಅವಳ ಪುರಾಣಪ್ರಜ್ಞೆ ಬೆರಗಾಗಿಸುವಂತಿತ್ತು.

       "ದ್ಯಾಮಕ್ಕಾ, ನಾವ್ಯಾರೂ ನಿನ್ನ ಹಂದಿಗೆ ಹೊಡೆದಿಲ್ಲ. ಅದು ಇಲ್ಲಿಗೆ ಬರಲೇ ಇಲ್ಲ. ಇಷ್ಟಕ್ಕೂ ನಿನ್ನ ಹಂದಿಗೆ ಹೊಡೆಯುವ ಧೈರ್ಯ ನಮಗೆಲ್ಲಿದೆ?" ಆ ಗುಂಪಿನಲ್ಲಿ ಇದ್ದುದರಲ್ಲಿಯೇ ಧೈರ್ಯಶಾಲಿಯಾದ ಸಿದ್ದೇಗೌಡ ಹೇಳಿದ. ದ್ಯಾಮಕ್ಕನ ಸಮಸ್ಯೆಯೇನೂ ಅವನ ಉತ್ತರದಿಂದ ಪರಿಹಾರವಾಗದಿದ್ದರೂ ಅವನ ಮಾತಿನಿಂದ ತನ್ನ ಪೌರುಷಕ್ಕೊಂದು ಬೆಲೆ ಬಂದಂತೆನಿಸಿ ಅವಳಿಗೆ ಸ್ವಲ್ಪ ಸಮಾಧಾನವಾಯಿತು. "ಅದು ಆ ಕನ್ನಡ ಮೇಷ್ಟ್ರ ಕೆಲಸಾನೇ ಇರ್ಬೇಕು. ತಾಳು ಅವನ ಗ್ರಾಚಾರ ಬಿಡಿಸ್ತೀನಿ" ಎನ್ನುತ್ತ ಬಿರಬಿರನೇ ಕನ್ನಡ ಮೇಷ್ಟ್ರು ಪರಮೇಶ್ವರಪ್ಪನವರ ಮನೆಯತ್ತ ಹೆಜ್ಜೆ ಹಾಕಿದಳು. ಮುಂದಿನ ಕೆಲವು ತಾಸುಗಳ ಕಾಲ ಮೇಷ್ಟ್ರ ಮನೆಯ ಮುಂದೆ ನಡೆಯಬಹುದಾದ ರುದ್ರನಾಟಕವನ್ನು ಊಹಿಸಿಕೊಂಡ ಜನರು ಅವರಿಗಾಗಿ ಮರುಗಿದರಾದರೂ ದ್ಯಾಮಕ್ಕನನ್ನು ತಡೆಯುವ ಧೈರ್ಯ ಅವರಲ್ಲಿ ಯಾರಿಗೂ ಇರಲಿಲ್ಲ. ಅವರ ಮನಸ್ಸು ಆರು ತಿಂಗಳ ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡವು.

       ಊರಿನ ಸರ್ಕಾರಿ ಶಾಲೆಗೆ ಹೊಸದಾಗಿ ವರ್ಗವಾಗಿ ಬಂದಿದ್ದ ಕನ್ನಡ ಶಿಕ್ಷಕ ಪರಮೇಶ್ವರಪ್ಪನವರು ಸ್ವಾತಂತ್ರ್ಯೋತ್ಸವದ ದಿನ ಅಚ್ಚ ಬಿಳಿಯ ಜುಬ್ಬಾ ಮತ್ತು ಪಂಚೆ ಧರಿಸಿ ವೇಗವಾಗಿ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದರು. ಆಗ ರಸ್ತೆ ಬದಿಯಲ್ಲೇ ಏನನ್ನೋ ಮೇಯುತ್ತಿದ್ದ ದ್ಯಾಮಕ್ಕನ ಹಂದಿ ಅವರತ್ತ ನೋಡಿ ಅವರ ಹಿಂದೆಯೇ ಬರತೊಡಗಿತು. ಊರಲ್ಲಿ ಯಾರೂ ತೊಡದಂಥ ವೇಷವನ್ನು ಅವರು ತೊಟ್ಟಿದ್ದರಿಂದ ಅವರ ಹಿಂದೆ ಬಂದಿತೋ ಅಥವಾ ಅವರು ಶಾಲೆಯಲ್ಲಿ ಮಕ್ಕಳಿಗೆ ಹಂಚಲು ಕೊಂಡೊಯ್ಯುತ್ತಿದ್ದ ಲಾಡುಗಳ ಪರಿಮಳಕ್ಕೆ ಅವರ ಹಿಂದೆ ಬಿದ್ದಿತೋ ಗೊತ್ತಿಲ್ಲ. ದ್ಯಾಮಕ್ಕನಂತೂ ಹಬ್ಬಹರಿದಿನಗಳಲ್ಲಿ ಧಾರಾಳವಾಗಿ ಅದಕ್ಕೆ ಭಕ್ಷ್ಯಭೋಜ್ಯಗಳನ್ನು ನೀಡುತ್ತಿದ್ದುದರಿಂದ ಅದಕ್ಕೆ ಅವುಗಳ ರುಚಿ ಹತ್ತಿಬಿಟ್ಟಿತ್ತು. ತಮ್ಮ ಬೆನ್ನುಬಿದ್ದ ಈ ಬೇತಾಳವನ್ನು ನೋಡಿದ ಮೇಷ್ಟ್ರು ಎಲ್ಲಿ ತನ್ನ ಶ್ವೇತವಸ್ತ್ರಗಳನ್ನು ಹೊಲಸು ಮಾಡುತ್ತದೋ ಎಂಬ ಭಯದಿಂದ "ಶೂ, ಶೂ" ಎಂದು ಕೂಗಿ ನೆಲದ ಮೇಲಿಂದ ಒಂದು ಸಣ್ಣ ಕಲ್ಲನ್ನೆತ್ತಿ ಅದರತ್ತ ಎಸದರು. ಆ ಸಣ್ಣ ಕಲ್ಲು ಆ ಕೊಬ್ಬಿದ ಹಂದಿಗೆ ಯಾವ ಮೂಲೆಗೂ ತಾಗುತ್ತಿರಲಿಲ್ಲ. ಅಲ್ಲದೆ ಮೇಷ್ಟ್ರ ಉದ್ದೇಶವೂ ಹಂದಿಯನ್ನು ಹೆದರಿಸಿ ಓಡಿಸುವುದಾಗಿತ್ತೇ ಹೊರತು ಕಲ್ಲು ಹೊಡೆದು ಗಾಯಗೊಳಿಸುವುದಾಗಿರಲಿಲ್ಲ. ಆದರೆ ದ್ಯಾಮಕ್ಕನ ಪಿತ್ತ ನೆತ್ತಿಗೇರಲು ಅಷ್ಟು ಕಾರಣ ಧಾರಾಳವಾಗಿ ಸಾಕಿತ್ತು. ಎಲ್ಲಿದ್ದಳೋ ಆಕೆ ಹಠಾತ್ತಾಗಿ ಮೇಷ್ಟ್ರ ಮೇಲೆರಗಿ ಅವರ ಜುಬ್ಬದ ಕಾಲರ್ ಹಿಡಿದೆಳೆದಳು. "ಏಯ್ ಯಾವನೋ ನೀನು? ನೀನು ಯಾವತ್ತಾದರೂ ಆ ಹಂದಿಗೆ ಒಂದು ತುತ್ತು ಅನ್ನ ಹಾಕಿದ್ದೀಯಾ? ಅದಕ್ಕೆ ಹೊಡೆಯೋಕೆ ನಿನಗೇನು ಹಕ್ಕಿದೆ? ನೀನು ಮನೆಯಲ್ಲಿ ಸಾಕಿದ ಯಾವುದಾದರೂ ಪ್ರಾಣಿಗೆ ನಾನು ಬಂದು ಕಲ್ಲು ಹೊಡೆದರೆ ಸುಮ್ಮನಿರ್ತೀಯೇನೋ? ಮೂಕಪ್ರಾಣಿ ಅದು. ನಿಂಗೇನು ಮಾಡಿತು ಅದು? ತನ್ನ ಪಾಡಿಗೆ ತಾನು ಹೋಗ್ತಿತ್ತು. ನೀನು ಏನಾದ್ರೂ ತಿಂಡಿ ಕೊಡ್ತೀಯಾ ಅಂತ ನಿನ್ ಹತ್ರ ಬಂತು. ಕೊಡೋದಾದ್ರೆ ಕೊಡು ಇಲ್ಲಾಂದ್ರೆ ಸುಮ್ನಿರು. ಕಲ್ಲು ಹೊಡೆಯೋಕೆ ನೀನೇನು ಅದನ್ನು ಹುಟ್ಟಿಸಿದ್ದೀಯೇನೋ?" ಎಂದು ಅಬ್ಬರಿಸಿದಳು. ಅದರೊಂದಿಗೇ ಅವಳ ಬಾಯಿಯಿಂದ ಸಾಕಷ್ಟು ಅವಾಚ್ಯ ಶಬ್ದಗಳೂ ನಿರರ್ಗಳವಾಗಿ ಹರಿದುಬಂದವು. ಈ ಅನಿರೀಕ್ಷಿತ ದಾಳಿಯಿಂದ ಪರಮೇಶ್ವರಪ್ಪನವರು ಕಂಗಾಲಾದರು. ಪಾಪ ತುಂಬ ಸಜ್ಜನರಾದ ಅವರಿಗೆ ಅಂಥ ಪದಗಳೆಲ್ಲ ತಮ್ಮ ಪಾಲಿನ ಮರಣದಂಡನೆಯಂತೆಯೇ ಭಾಸವಾಗಿದ್ದರಲ್ಲಿ ಆಶ್ಚರ್ಯವಿಲ್ಲ. ಅಲ್ಲದೆ ಆಜನ್ಮ ಬ್ರಹ್ಮಚಾರಿಗಳಾದ ಅವರಿಗೆ "ನೀನೇನು ಅದನ್ನು ಹುಟ್ಟಿಸಿದ್ದೀಯೇನೋ?" ಎಂಬ ವಾಕ್ಯ ಕೇಳಿ ನಿಜಕ್ಕೂ ಗಾಬರಿಯಾಗಿತ್ತು. ಅಷ್ಟರಲ್ಲಿ ಅವರ ಅದೃಷ್ಟಕ್ಕೆ ಅವರ ನಾಲ್ಕಾರು ಜನ ವಿದ್ಯಾರ್ಥಿಗಳು ಅದೇ ದಾರಿಯಾಗಿ ಬಂದರು. ತಮ್ಮ ಗುರುಗಳಿಗೊದಗಿದ ದುರವಸ್ಥೆಯನ್ನು ಕಂಡು ಗಾಬರಿಯಾದರು. ಅವರೆಲ್ಲ ಸೇರಿ ಶಕ್ತಿಮೀರಿ ಹೋರಾಡಿ ದ್ಯಾಮಕ್ಕನ ಕೈಯಿಂದ ತಮ್ಮ ಗುರುಗಳನ್ನು ಬಿಡಿಸಿಕೊಂಡರು. "ಇವ್ರು ನಮ್ಮ ಮೇಷ್ಟ್ರು ಕಣಕ್ಕಾ. ಈ ಊರಿಗೆ ಹೊಸದಾಗಿ ಬಂದವ್ರೆ. ಬಿಡು ಇನ್ನು ಮುಂದೆ ಅವ್ರು ನಿನ್ ಹಂದಿ ಸಾವಾಸಕ್ಕೆ ಬರಾಕಿಲ್ಲ" ಎಂದರು ಹುಡುಗರು. "ಮೇಷ್ಟ್ರಾಗಲಿ ಯಾರಾಗಲಿ ನನಗೇನು? ಏನೋ ಈ ಊರಿಗೆ ಹೊಸಬ ಅಂತ ಬಿಟ್ಟಿದೀನಿ. ಇನ್ನೊಮ್ಮೆ ನನ್ ಹಂದಿಗೆ ಹೊಡೆದ್ರೆ ಸುಮ್ನಿರಾಕಿಲ್ಲ" ಎಂದು ದ್ಯಾಮಕ್ಕ ಆವಾಜ್ ಹಾಕಿದಳು. ಆಮೇಲೆ ವಿದ್ಯಾರ್ಥಿಗಳಿಂದ ಅವಳ ಬಗ್ಗೆ ಕೇಳಿ ತಿಳಿದುಕೊಂಡ ಮೇಷ್ಟ್ರು ಮುಂದೆ ಅವಳ ಹಂದಿ ಕಂಡರೆ ಹುಲಿ ಕಂಡವರಂತೆ ದೂರದಿಂದಲೇ ಬೇರೆ ದಾರಿ ಹಿಡಿದು ಹೋಗಿಬಿಡುತ್ತಿದ್ದರು. 

       ಅವತ್ತು ಕಲ್ಲು ಹೊಡೆದ ಕನ್ನಡ ಮೇಷ್ಟ್ರೇ ಇವತ್ತೂ ಹೊಡೆದಿರಬಹುದೆಂದು ದ್ಯಾಮಕ್ಕನಿಗೆ ಅನುಮಾನ. ಸೀದಾ ಅವರ ಮನೆಗೆ ಹೋದಾಗ ಅವರು ಇರಲಿಲ್ಲ. ಅವರ ವಯಸ್ಸಾದ ತಾಯಿ ಸರಸ್ವತಮ್ಮನವರು ಮಾತ್ರ ಮನೆಯಲ್ಲಿದ್ದರು. "ಎಲ್ಲವನೆ ಆ ಮೇಷ್ಟ್ರು" ಮನೆಯ ಅಂಗಳದಲ್ಲಿ ನಿಂತು ಆರ್ಭಟಿಸಿದ ದ್ಯಾಮಕ್ಕಳ ವೈಖರಿಗೆ ಸರಸ್ವತಮ್ಮನವರು ಅವಾಕ್ಕಾದರು. ತನ್ನ ಮಗ ಊರಿನಲ್ಲೆಲ್ಲ ಎಷ್ಟು ಗೌರವಾನ್ವಿತ ವ್ಯಕ್ತಿಯೆಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ಅಲ್ಲದೆ ತಾಯಿಯ ಮನಸ್ಸಿಗೆ ಬೇಸರ ಉಂಟುಮಾಡುವುದು ಬೇಡವೆಂದು ಪರಮೇಶ್ವರಪ್ಪನವರು ಅಂದಿನ ಘಟನೆಯನ್ನು ಹೇಳಿರಲಿಲ್ಲ. ಮನೆಯಿಂದ ಯಾವತ್ತೂ ಹೊರಗೆ ಹೋಗದ, ಹೋದರೂ ಅಂಗಳ ಮತ್ತು ಹಿತ್ತಲು ಬಿಟ್ಟು ಬೇರೆಡೆಗೆ ಹೋಗದ ಅವರಿಗೆ ಈ ಊರಿನ ಅನಭಿಷಿಕ್ತ ರಾಣಿಯಾದ ದ್ಯಾಮಕ್ಕನ ಬಗೆಗೆ ಏನೂ ತಿಳಿದಿರಲಿಲ್ಲ. ಹಾಗಾಗಿ ಮೆಲ್ಲಗೆ ಹೊರಗೆ ಬಂದ ಅವರು "ಅವನು ಶಾಲೆಗೆ ಹೋಗಿದ್ದಾನೆ. ಸಂಜೆ ನಾಲ್ಕೂವರೆಗೆ ಬರ್ತಾನೆ" ಎಂದರು. "ಶಾಲೆಗೆ ಹೋಗಿದ್ದಾನಾ ಕಳ್ಳಭಡವ? ನನ್ನ ಹಂದಿಗೆ ಹೊಡೆದು ಏನೂ ಗೊತ್ತಿಲ್ಲದ ಹಾಗೆ ಹೋಗಿ ಕೂತಿದ್ದಾನೆ. ಬರಲಿ ಅವನು. ಎಷ್ಟು ಹೊತ್ತಾದರೂ ಸರಿ, ನಾನು ಇಲ್ಲೇ ಕಾಯ್ತೀನಿ. ಇವತ್ತು ಅವನ ಪಂಚೆ ಬಿಚ್ಚಿ ಊರಿನಲ್ಲಿ ಮೆರವಣಿಗೆ ಮಾಡದಿದ್ದರೆ ನನ್ನ ಹೆಸರು ದ್ಯಾಮಕ್ಕನೇ ಅಲ್ಲ" ಎಂದು ಅಂಗಳದಲ್ಲಿ ಧರಣಿ ಕುಳಿತೇಬಿಟ್ಟಳು.

       ಸರಸ್ವತಮ್ಮನವರಿಗೆ ಎಲ್ಲವೂ ಅಯೋಮಯವಾಗಿ ಕಂಡಿತು. ತನ್ನ ಮಗ ಯಾವ ಊರಿನಲ್ಲೂ ಯಾವತ್ತೂ ಹೆಸರು ಕೆಡಿಸಿಕೊಂಡವನಲ್ಲ. ಇವತ್ತು ಇದೇನು ಹೀಗೆ ಎಂದು ಅವರಿಗೆ ಅರ್ಥವಾಗಲಿಲ್ಲ. ಅವರು ಕೇಳಿಯೇ ಬಿಟ್ಟರು "ಯಾರವ್ವಾ ನೀನು? ನನ್ನ ಮಗ ನಿನಗೆ ಏನು ಮಾಡಿದ್ದಾನೆ? ಯಾಕೆ ಹೀಗೆ ನನ್ನ ಮನೆ ಮುಂದೆ ಕೂತಿದ್ದೀಯಾ?" ಎಂದು ಕೇಳಿದರು. "ನಿಮ್ಮ ಮಗನಾ ಅವನು? ನೋಡಿ ಅಮ್ಮ ಅವತ್ತೂ ನನ್ನ ಹಂದಿಗೆ ಹೊಡೆದಿದ್ದ. ಅವತ್ತೇನೋ ಊರಿಗೆ ಹೊಸಬ ಅಂತ ಬಿಟ್ಟಿದ್ದೆ. ಇವತ್ತು ಮತ್ತೆ ಹೊಡೆದಿದ್ದಾನೆ. ಬರಲಿ ಇವತ್ತು ಅವನಿಗೆ ಇದೆ ಮಾರಿಹಬ್ಬ" ಎಂದಳು. ಸರಸ್ವತಮ್ಮನವರು ಗಾಬರಿಯಾಗಿ "ನೋಡಮ್ಮ ನನ್ನ ಮಗ ಯಾರಿಗೂ ಯಾವತ್ತೂ ಕೇಡು ಬಗೆದವನಲ್ಲ. ನಿನ್ನ ಹಂದಿಯೇ ಮೊದಲು ಅವನಿಗೆ ಏನೋ ಮಾಡಿರಬೇಕು ಅದಕ್ಕೆ ಅವನು ಒಂದು ಕಲ್ಲು ಹೊಡೆದಿರಬಹುದು. ಅದೇನು ಅಂಥ ದೊಡ್ಡ ಅಪರಾಧವೇ? ಯಾಕೆ ಸಣ್ಣ ವಿಷಯಕ್ಕೆಲ್ಲ ಇಷ್ಟು ಗಲಾಟೆ? ಸುಮ್ಮನೆ ಮನೆಗೆ ಹೋಗು" ಎಂದರು. "ಅದೆಂಗಾಯ್ತದೆ? ಅದೆಲ್ಲಾ ಸಾಧ್ಯವಿಲ್ಲ. ಹೀಗೇ ಬಿಟ್ರೆ ಮುಂದೊಂದು ದಿನ ನಿಮ್ಮ ಮಗ ನನ್ ಹಂದೀನ ಕೊಂದೇ ಬಿಡ್ತಾನೆ ಅಷ್ಟೆ" ಎಂದಳು ದ್ಯಾಮಕ್ಕ. ಏನು ಮಾಡಬೇಕೆಂದು ತಿಳಿಯದ ಸರಸ್ವತಮ್ಮನವರು ಬಾಗಿಲು ಹಾಕಿಕೊಂಡು ಒಳಗೆ ಹೋಗಿ ದೇವರ ಕೋಣೆಯಲ್ಲಿ ಧ್ಯಾನಿಸುತ್ತ ಕುಳಿತರು.

       ಇತ್ತ ಸಂಜೆ ಶಾಲೆಯಿಂದ ಮನೆಗೆ ಬಂದ ಪರಮೇಶ್ವರಪ್ಪನವರು ಗೇಟು ತೆಗೆಯಲು ಕೈಯಿಟ್ಟವರೇ ಒಮ್ಮೆ ಗಕ್ಕನೇ ನಿಂತರು. ಈ ಬಾಯಿಬಡುಕಿ ಇಲ್ಲಿಗೇಕೆ ಬಂದಳು? ಇವಳ ದರಿದ್ರ ಹಂದಿ ನಮ್ಮ ಮನೆಗೆ ಬಂದು, ಅಮ್ಮ ಗೊತ್ತಿಲ್ಲದೆ ಅದಕ್ಕೇನಾದರೂ ಮಾಡಿದಳೋ ಏನೋ? ಇವಳು ಹೀಗೆ ಮನೆಯಂಗಳದಲ್ಲಿ ಕುಳಿತಿರುವ ಉದ್ದೇಶವಾದರೂ ಏನು?

ಅವರ ಆಲೋಚನೆಗಳ ಸರಪಳಿಯನ್ನು ತುಂಡರಿಸುವಂತೆ ದ್ಯಾಮಕ್ಕನ ಅಬ್ಬರದ ಧ್ವನಿ ಕೇಳಿಸಿತು "ಏನು ಮಾಡಕ್ಕೆ ಹೋಗಿದ್ದೆಯೋ ಹಡಬೆ? ಇವತ್ತು ಮತ್ತೆ ನನ್ನ ಹಂದಿಗೆ ಕಲ್ಲು ಹೊಡೆದೆಯೇನೋ? ನಿನಗೆ ನನ್ನ ಹಂದಿ ಅಂದ್ರೆ ಏನು ಆಟದ ಸಾಮಾನು ಆಗಿಬಿಟ್ಟಿದೆಯಾ?" ಮೇಷ್ಟ್ರ ತಾಯಿ ಸರಸ್ವತಮ್ಮ ಮನೆಬಾಗಿಲಿನಲ್ಲಿ ಗಡಗಡ ನಡುಗುತ್ತ ನೋಡುತ್ತಿದ್ದಾರೆ. ಮೇಷ್ಟ್ರಿಗೆ ನಖಶಿಖಾಂತ ಸಿಟ್ಟು ಬಂತು. ಎಂದೂ ಯಾವತ್ತೂ ವಿದ್ಯಾರ್ಥಿಗಳ ಬಳಿಯೂ ಧ್ವನಿ ಏರಿಸಿ ಕೂಗದಿದ್ದ ಅವರಿಗೆ ಅಂದು ದ್ಯಾಮಕ್ಕ ತನ್ನ ತಾಯಿಯ ಎದುರೇ ತನಗೇ ಹಾಗೆ ಹೇಳಿದ್ದನ್ನು ಸಹಿಸಲಾಗಲಿಲ್ಲ. ಅವರೂ ಧ್ವನಿ ಏರಿಸಿ "ನೋಡಮ್ಮ ನೀನು ಯಾರೆಂದೇ ನನಗೆ ಗೊತ್ತಿಲ್ಲ. ಊರಿನಲ್ಲಿರುವ ಹಂದಿಗಳಿಗೆಲ್ಲ ಕಲ್ಲು ಹೊಡೆಯುತ್ತ ಕೂರಲು ನನಗೇನು ಬೇರೆ ಕೆಲಸವಿಲ್ಲವೇ? ಇಂದು ಬೆಳಿಗ್ಗೆ ಶಾಲೆಗೆ ಹೋದವನು ಈಗ ಬರುತ್ತಿದ್ದೇನೆ. ಇವತ್ತು ಏನೇನೋ ಕೆಲಸಗಳಿದ್ದರಿಂದ ನನಗೆ ಊಟ ಮಾಡಲು ಸಹ ಬಿಡುವು ಸಿಕ್ಕಿಲ್ಲ. ಹಸಿವಿನಿಂದ ಹೊಟ್ಟೆ ಚುರುಗುಟ್ಟುತ್ತಿದೆ. ಇದರ ನಡುವೆ ನಿನ್ನದೊಂದು ಕಿರಿಕಿರಿ. ನಿನಗೆ ಮಾಡಲು ಬೇರೇನೂ ಕೆಲಸವಿಲ್ಲವೇ? ಸುಮ್ಮನೆ ತೊಲಗಿಲ್ಲಿಂದ. ಇಲ್ಲವಾದರೆ ಪೋಲೀಸ್ ಕಂಪ್ಲೇಂಟ್ ಕೊಡಬೇಕಾಗುತ್ತದೆ" ಎಂದರು.

       ದ್ಯಾಮಕ್ಕನಿಗೆ ಇದು ಅನಿರೀಕ್ಷಿತ ಹೊಡೆತವಾಗಿತ್ತು. ಅವಳಿಗೆ ಈ ಹಿಂದೆ ಯಾರೂ ಎದುರಾಡಿದವರೇ ಇಲ್ಲ. ಅವಳು ಸುಳ್ಳುಸುಳ್ಳೇ ಆರೋಪ ಮಾಡಿದರೂ ಅದನ್ನು ಅಲ್ಲಗಳೆಯುವ ಧೈರ್ಯವನ್ನು ಯಾರೂ ತೋರುತ್ತಿರಲಿಲ್ಲ. ಅಂಥದ್ದರಲ್ಲಿ ಅಷ್ಟೊಂದು ಸೌಮ್ಯಸ್ವಭಾವದ ಪರಮೇಶ್ವರಪ್ಪನವರು ಹಾಗೆ ಎದುರಾಡಬಹುದೆಂದು ಅವಳು ಕನಸುಮನಸಿನಲ್ಲೂ ಊಹಿಸಿರಲಿಲ್ಲ. ಅವಳಿಗೆ ನಿಜಕ್ಕೂ ಮುಖಭಂಗವಾದಂತಾಗಿತ್ತು. ಮರುಮಾತಿಲ್ಲದೆ ಎದ್ದುಹೋದಳು. ಅದುವರೆಗೂ ರಸ್ತೆಯಲ್ಲಿ ನಿಂತು ಮನರಂಜನೆಯನ್ನು ನಿರೀಕ್ಷಿಸುತ್ತಿದ್ದ ಒಂದಿಬ್ಬರು ಕಿಡಿಗೇಡಿಗಳಿಗೆ ಇದರಿಂದ ನಿರಾಸೆಯಾಯಿತು. ಅವರು ಬೇಸರದಿಂದ ತಮ್ಮ ದಾರಿ ಹಿಡಿದು ಹೊರಟರು. ಆದರೆ ಅವರಿಗೆ ನಿರಾಸೆಗಿಂತ ಹೆಚ್ಚು ಆಶ್ಚರ್ಯವಾಗಿತ್ತೆಂದರೆ ಸರಿ. ಏಕೆಂದರೆ ಮೃದುಸ್ವಭಾವದ ಪರಮೇಶ್ವರಪ್ಪನವರ ಉಗ್ರರೂಪವನ್ನು ಮೊದಲ ಬಾರಿಗೆ ನೋಡಿದ್ದರು.

       "ಅಮ್ಮಾ, ಹಸಿವು. ಊಟ ಬಡಿಸು. ಮಧ್ಯಾಹ್ನ ಕೂಡ ಊಟ ಮಾಡಲು ಸಾಧ್ಯವಾಗಲಿಲ್ಲ" ಎನ್ನುತ್ತ ಒಳಬಂದ ಮಗನನ್ನು ತಾಯಿ ಕೇಳಿದರು "ಯಾರೋ ಅವಳು? ಬೆಳಿಗ್ಗೆಯಿಂದ ಬಂದು ಅಲ್ಲಾಡದೇ ಕೂತಿದಾಳೆ ಅಲ್ಲಿ. ನನಗೆ ತುಂಬಾ ಭಯವಾಗಿತ್ತು" ಎಂದರು. "ಅಮ್ಮಾ, ನನಗೂ ಗೊತ್ತಿಲ್ಲ ಯಾರು ಅಂತ. ಯಾರೋ ಹುಚ್ಚಿ ಇರಬೇಕು. ಅವಳ ಮಾತಿನಿಂದ ನನಗೆ ಎಲ್ಲಿಲ್ಲದ ಕೋಪ ಬಂದು ರೇಗಿಬಿಟ್ಟೆ. ಅಲ್ಲದೆ ನನಗೆ ಮೊದಲೇ ಹೊಟ್ಟೆ ಬೇರೆ ಹಸಿಯುತ್ತಿತ್ತು. ಇರಲಿ ಅದನ್ನು ಮರೆತುಬಿಡು. ಈಗ ನನಗೆ ಊಟ ಬಡಿಸು" ಎಂದರು. ಸರಸ್ವತಮ್ಮನವರೂ ವಿಷಯವನ್ನು ಬೆಳೆಸಲಿಚ್ಛಿಸದೆ ಒಳಕ್ಕೆ ಹೋದರು. 

       ವಿಷಯ ಬಾಯಿಯಿಂದ ಬಾಯಿಗೆ ಹಬ್ಬಿ "ಪರಮೇಶ್ವರಪ್ಪ ಮೇಷ್ಟ್ರು ದ್ಯಾಮಕ್ಕನಿಗೆ ಬೈದರಂತೆ" ಎಂದು ಊರೆಲ್ಲ ಸುದ್ದಿಯಾಯಿತು. ಅವಳ ಮೇಲೆ ಎಷ್ಟೇ ಸಿಟ್ಟಿದ್ದರೂ ಬೈಯಲು ಧೈರ್ಯವಿರದ ಎಷ್ಟೋ ಜನ ಗಂಡಸರು ಮೇಷ್ಟ್ರನ್ನು ಮನಸ್ಸಿನಲ್ಲೇ ಅಭಿನಂದಿಸಿದರು. ಅಂದಿನಿಂದ ದ್ಯಾಮಕ್ಕನ ಬಾಯಿ ಸಂಪೂರ್ಣ ಬಂದ್ ಆಯಿತು. ಮೊದಲು ದಿನಕ್ಕೊಮ್ಮೆಯಾದರೂ ಏನಾದರೂ ನೆಪ ತೆಗೆದು ಯಾರಮೇಲಾದರೂ ಕೂಗಾಡುತ್ತಲೇ ಇರುತ್ತಿದ್ದ ದ್ಯಾಮಕ್ಕ ಈಗ ಸಂಪೂರ್ಣ ಮೌನಿಯಾದಳು. ತಾನಾಗಿ ಯಾರನ್ನೂ ಮಾತನಾಡಿಸುತ್ತಿರಲಿಲ್ಲ. ಯಾರಾದರೂ ಮಾತನಾಡಿಸಿದರೆ ಬರೇ "ಹೂಂ, ಊಹೂಂ" ಇಷ್ಟರಲ್ಲೇ ಮುಗಿಸುತ್ತಿದ್ದಳು. ಹತ್ತಾರು ವರ್ಷಗಳಿಂದ ಊರಿನ ಎಲ್ಲರ ಮೇಲೂ ತನ್ನ ಬೊಂಬಾಯಿಯಿಂದ ದಬ್ಬಾಳಿಕೆ ನಡೆಸುತ್ತಿದ್ದ ದ್ಯಾಮಕ್ಕ ಮೇಷ್ಟ್ರ ಒಂದೇ ಒಂದು ಮಾತಿಗೆ ಸಂಪೂರ್ಣ ತಣ್ಣಗಾಗಿಹೋಗಿದ್ದು ಎಲ್ಲರಿಗೂ ಜಗತ್ತಿನ ಎಂಟನೆಯ ಅದ್ಭುತದಂತೆ ಕಂಡಿತ್ತು. ಎಲ್ಲರಿಗೂ ಮೇಷ್ಟ್ರು ಪವಾಡಪುರುಷರಂತೆ ಕಾಣಿಸತೊಡಗಿದರು. ಮೊದಲೇ ಅವರ ಬಗ್ಗೆ ತುಂಬ ಭಯಭಕ್ತಿ ಹೊಂದಿದ್ದ ಜನರ ಭಕ್ತಿ ಇನ್ನಷ್ಟು ಹೆಚ್ಚಿತು.

       ಈ ಘಟನೆ ನಡೆದ ನಾಲ್ಕಾರು ದಿನಗಳ ಬಳಿಕ ಮತ್ತೊಮ್ಮೆ ದ್ಯಾಮಕ್ಕನ ಹಂದಿ ಕಿರ್ರೋ ಎನ್ನುತ್ತ ಮನೆಗೆ ಬಂದಿತು. ಈ ಬಾರಿ ಅದು ಹಾಗೇ ಬಂದಿರಲಿಲ್ಲ. ಅದರ ಬೆನ್ನ ಮೇಲೆ ಪರಚಿದ ಗಾಯದ ಗುರುತುಗಳಿದ್ದವು. ದ್ಯಾಮಕ್ಕ ನಿಜಕ್ಕೂ ಈಗ ಗಾಬರಿಯಾದಳು. ತನ್ನ ಹಂದಿಯ ಮೇಲೆ ಯಾರೋ ಕಣ್ಣು ಹಾಕಿದ್ದಾರೆಂದು ಅವಳಿಗೆ ಖಾತ್ರಿಯಾಯಿತು. ಬಹುಶಃ ಆ ವ್ಯಕ್ತಿಯ ಬಳಿ ಕೋವಿ ಇಲ್ಲವೆಂದು ತೋರುತ್ತದೆ. ಚಾಕು ಹಿಡಿದು ಹಂದಿ ಕೊಲ್ಲಲು ಯತ್ನಿಸಿ ವಿಫಲನಾಗಿದ್ದಾನೆ ಎಂದು ತಿಳಿದಳು. ಆದರೆ ಅವಳು ಈ ಬಾರಿ ಊರಿನಲ್ಲಿ ಗಲಾಟೆ ಮಾಡಲು ಹೋಗಲಿಲ್ಲ. ಪರಮೇಶ್ವರಪ್ಪನವರಿಂದ ಬೈಯಿಸಿಕೊಂಡಿದ್ದು ಅವಳ ಪ್ರತಿಷ್ಠೆಗೆ ಬಲವಾದ ಪೆಟ್ಟು ಬಿದ್ದಂತಾಗಿತ್ತು. ಸುಮ್ಮನೆ ಹಂದಿಯನ್ನು ಒಡ್ಡಿಯಲ್ಲಿ ಕಟ್ಟಿಹಾಕಿದಳು. ಕೆಲವು ದಿನ ಅದನ್ನು ಊರಿನಲ್ಲಿ ತಿರುಗಾಡಲು ಬಿಡುವುದೇ ಬೇಡವೆಂದು ನಿರ್ಧರಿಸಿದಳು.

       ಕೆಲವು ದಿನ ಹಾಗೇ ಕಟ್ಟಿಹಾಕಿ ಹಂದಿಯನ್ನು ಸಾಕಿದಳು. ಆದರೆ ಕ್ರಮೇಣ ಅದೊಂದು ಹೊರೆ ಎಂದು ಅವಳಿಗೆ ಅನಿಸತೊಡಗಿತು. ಹೊರಗೆ ಮೇಯಲು ಬಿಟ್ಟಾಗ ಅದಕ್ಕೆ ಮನೆಯಲ್ಲಿ ಹೆಚ್ಚೇನೂ ಹಾಕಬೇಕಾಗಿರಲಿಲ್ಲ. ಆದರೆ ಈಗ ಅದನ್ನು ಕಟ್ಟಿಯೇ ಹಾಕುತ್ತಿದ್ದರಿಂದ ಅದರ ಹೊಟ್ಟೆಗೆ ಹಾಕಬೇಕಿದ್ದ ಆಹಾರದ ಪ್ರಮಾಣವೂ ಹೆಚ್ಚಿ, ದ್ಯಾಮಕ್ಕನಿಗೆ ಕಷ್ಟವಾಗತೊಡಗಿತು. ಆದ್ದರಿಂದ ಅವಳು ಧೈರ್ಯ ಮಾಡಿ ತನ್ನ ಹಂದಿಯನ್ನು ಮತ್ತೆ ಹೊರಗೆ ಬಿಡಲು ಪ್ರಾರಂಭಿಸಿದಳು. ಆದರೂ ಅವಳಿಗೆ ಭಯ ಇದ್ದೇ ಇತ್ತು. ಹೇಗೋ ಧೈರ್ಯ ಮಾಡಿ ಬಿಡುತ್ತಿದ್ದಳು. ಮತ್ತೆ ಒಂದು ವಾರ ಹೀಗೆಯೇ ಕಳೆಯಿತು. ಇದಾದ ಬಳಿಕ ಇನ್ನೊಂದು ದಿನ ಮತ್ತೆ ಅವಳ ಹಂದಿ ಮೈಕೈಯೆಲ್ಲಾ ಗಾಯ ಮಾಡಿಕೊಂಡು ಆರ್ತನಾದ ಮಾಡುತ್ತ ಮನೆಗೆ ಮರಳಿತು!

       ಈಗ ದ್ಯಾಮಕ್ಕನ ಸಹನೆಯ ಕಟ್ಟೆಯೊಡೆಯಿತು. ಹಂದಿಯ ಮೇಲೆ ಕಣ್ಣು ಹಾಕಿದವನನ್ನು ಪತ್ತೆ ಮಾಡಿ ಅವನಿಗೊಂದು ಗತಿ ಕಾಣಿಸಿಯೇ ಬಿಡಬೇಕೆಂದು ನಿರ್ಧರಿಸಿದಳು. ಅದಕ್ಕಾಗಿ ಒಂದು ದಿನವಿಡೀ ವ್ಯರ್ಥವಾದರೂ ಚಿಂತೆಯಿಲ್ಲ, ಏನಾದರೂ ಮಾಡಲೇ ಬೇಕು ಎಂದು ತೀರ್ಮಾನಿಸಿದಳು. ಮರುದಿನ ಹಂದಿಯನ್ನು ಮೇಯಲು ಬಿಟ್ಟು ಅದರ ಹಿಂದೆಯೇ ಹೊರಟಳು. ಅವಳು ಹಂದಿ ಎಲ್ಲೆಲ್ಲಿ ಹೋಗುತ್ತದೆ, ಏನೇನು ತಿನ್ನುತ್ತದೆ ಎಂಬ ಬಗೆಗೆಲ್ಲ ಯಾವತ್ತೂ ತಲೆಕೆಡಿಸಿಕೊಂಡವಳೇ ಅಲ್ಲ. ಆದರೆ ಈಗ ಮಾತ್ರ ಅದರ ಪ್ರತಿ ಚಲನವಲನದ ಮೇಲೂ ನಿಗಾ ಇಡಬೇಕಾದ ಅವಶ್ಯಕತೆ ಬಂದೊದಗಿತ್ತು. 

       ಹಂದಿ ಬಿಟ್ಟಕೂಡಲೇ ಎಲ್ಲೂ ನಿಲ್ಲದೆ ಸೀದಾ ರಾಜಮಾರ್ಗದಲ್ಲಿ ಪಕ್ಕದೂರಿನ ಬೆಟ್ಟಕಾಡಿನತ್ತ ಮುನ್ನುಗ್ಗಿತು. ಬೆಟ್ಟಕಾಡು ಹಳ್ಳಿಯಿಂದ ಹತ್ತು ಕಿಲೋಮೀಟರ್ ದೂರದಲ್ಲಿತ್ತು. ಆ ಕಾಡು ತುಂಬಾ ದೊಡ್ಡ ಕಾಡಂತೆ, ಅಲ್ಲಿ ಭಯಾನಕವಾದ ಪ್ರಾಣಿಗಳಿವೆಯಂತೆ ಎಂಬೆಲ್ಲ ವದಂತಿಗಳು ಊರ ತುಂಬೆಲ್ಲ ಹಬ್ಬಿದ್ದವು. ಆ ಊರಿನಲ್ಲಿ ಕಾಡಿನತ್ತ ತಲೆಹಾಕುವ ಧೈರ್ಯ ಯಾರಿಗೂ ಇರಲಿಲ್ಲ. ಕೋವಿ ಎಂದರೇನೆಂದು ತಿಳಿಯದ ಅಲ್ಲಿನ ಬಹುಸಂಖ್ಯಾತ ಜನರಿಗೆ ಬೇಟೆ ಎಂಬುದು ದೂರದ ಮಾತೇ ಆಗಿತ್ತು. ಅಲ್ಲದೆ ಅಲ್ಲಿ ಬ್ರಹ್ಮರಾಕ್ಷಸ ಇದೆಯಂತೆ, ಹತ್ತಿರ ಬಂದವರನ್ನು ತಿಂದುಬಿಡುತ್ತದೆಯಂತೆ ಎಂಬ ಪ್ರತೀತಿ ಅನೇಕ ವರ್ಷಗಳಿಂದಲೂ ಹಬ್ಬಿತ್ತು. ಹಳ್ಳಿಯ ಜನ ಅಸ್ತಿತ್ವದಲ್ಲಿರುವ ಪ್ರಾಣಿಗಳಿಗೆ ಹೆದರದಿದ್ದರೂ ಭೂತ, ದೆವ್ವ, ರಾಕ್ಷಸರಿಗೆಲ್ಲ ಖಂಡಿತ ಹೆದರುತ್ತಾರೆ. ಜನ ಕಾಡಿನತ್ತ ತಲೆಹಾಕದಿರಲು ಇದೂ ಒಂದು ಕಾರಣವಿರಲೂಬಹುದು. ಕಾಡಿನ ಯಾವ ಪ್ರಾಣಿಯೂ ಕೂಡ ತಮ್ಮ ಗಡಿಯನ್ನು ಉಲ್ಲಂಘಿಸಿ ನಾಡಿಗೆ ಯಾವತ್ತೂ ಬರುತ್ತಿರಲಿಲ್ಲ. ಎಲ್ಲೇ ಆದರೂ ಅಂಥ ಗಡಿ ಉಲ್ಲಂಘನೆಯಂಥ ಕೆಲಸಗಳೆಲ್ಲ ನಡೆಯುವುದು ಮನುಷ್ಯರಿಂದಲೇ ತಾನೆ? ತಮ್ಮ ಸೀಮೆಯೊಳಗೆ ಮನುಷ್ಯರು ಬಂದು ದಾಂಧಲೆ ಆರಂಭಿಸಿದಾಗ ಮಾತ್ರ ಅನಿವಾರ್ಯವಾಗಿ ಪ್ರಾಣಿಗಳು ಊರಿಗೆ ಬರುತ್ತವೆಯೇ ಹೊರತು ಉಳಿದಂತೆ ತಮ್ಮ ಸಾಮ್ರಾಜ್ಯದಲ್ಲಿ ನಿರಾತಂಕವಾಗಿ ಬದುಕುತ್ತವೆ. ಇಲ್ಲಿಯೂ ಹಾಗೆಯೇ ಆಗಿದ್ದು. ಆದ್ದರಿಂದ ಆ ಕಾಡಿನಲ್ಲಿ ಯಾವ್ಯಾವ ಪ್ರಾಣಿಗಳಿವೆಯಂದು ಯಾರಿಗೂ ಗೊತ್ತಿರಲಿಲ್ಲ.

       ದ್ಯಾಮಕ್ಕ ತನ್ನ ಹಂದಿ ಹಿಡಿದ ದಾರಿಯನ್ನು ಕಂಡು ಗಾಬರಿಯಾದಳು. ಅದುವರೆಗೂ ಹಂದಿಗಾದ ಗಾಯಗಳಿಗೆ ಯಾರೋ ಮನುಷ್ಯರೇ ಕಾರಣವಿರಬೇಕೆಂದು ಯೋಚಿಸುತ್ತಿದ್ದ ಅವಳಿಗೆ ಮೊದಲಬಾರಿಗೆ ಇದಕ್ಕೆ ಮನುಷ್ಯರು ಕಾರಣರಲ್ಲ ಎಂದು ಮನವರಿಕೆಯಾಯಿತು. ಆದರೆ ಅವಳು ಅದು ಯಾವುದೋ ಪ್ರಾಣಿಯ ಕೆಲಸವೆಂದು ಊಹಿಸಲಿಲ್ಲ. ಬ್ರಹ್ಮರಾಕ್ಷಸನ ಕೆಲಸವೇ ಇರಬೇಕೆಂದು ನಿರ್ಧರಿಸಿದಳು. "ಏ ವಿಷ್ಣೂ, ಬಾ ಇಲ್ಲಿ, ಅಲ್ಲಿ ಹೋಗಬೇಡ" ಎಂದು ಕೂಗಿ ಕರೆದಳು. ಆದರೆ ಹಂದಿ ಅವಳ ಮಾತು ಕೇಳದೆ ಕಾಡಿನತ್ತ ಮುನ್ನುಗ್ಗಿತು. ದ್ಯಾಮಕ್ಕನಿಗೆ ಉಭಯಸಂಕಟಕ್ಕಿಟ್ಟುಕೊಂಟಿತು. ಅತ್ತ ಹಂದಿಯ ಮೇಲಿನ ಮೋಹವನ್ನೂ ಬಿಡಲೊಲ್ಲಳು, ಇತ್ತ ತನ್ನ ಜೀವದಾಸೆಯನ್ನೂ ಬಿಡಲೊಲ್ಲಳು. ಬ್ರಹ್ಮರಾಕ್ಷಸನ ಭೀತಿಯಲ್ಲಿ ಮುಂದಡಿಯಿಡಲು ಹೆದರಿದ ಅವಳು ಕಾಡು ಕಣ್ಣಿಗೆ ಕಾಣಿಸುವಷ್ಟು ದೂರದಲ್ಲಿ ನಿಂತು ಗಂಟಲು ಹರಿಯುವಂತೆ ತನ್ನ ಹಂದಿಯನ್ನು ಕರೆಯತೊಡಗಿದಳು. ಆದರೆ ಅದಕ್ಕೆ ಕಾಡಿನಲ್ಲಿ ಏನು ಆಕರ್ಷಣೆಯಿತ್ತೋ ಏನೋ ಅವಳ ಕರೆಯನ್ನು ಕೇಳಿಯೂ ಕೇಳಿಸದಂತೆ ಮುನ್ನುಗ್ಗಿತು. ಊರಿನಲ್ಲಿದ್ದಾಗ "ಏ ವಿಷ್ಣೂ, ಬಾ ಇಲ್ಲಿ" ಎಂದು ದ್ಯಾಮಕ್ಕ ಕೂಗಿದರೆ ಎಲ್ಲೇ ಇದ್ದರೂ ಓಡಿಬರುತ್ತಿದ್ದ ಅದು ಈಗೇಗೆ ತನ್ನ ಕರೆಯನ್ನು ಉಪೇಕ್ಷಿಸುತ್ತಿದೆ ಎಂದು ಆಕೆಗೆ ಅರ್ಥವಾಗಲಿಲ್ಲ. ಆಕೆ ಸುಮ್ಮನೆ ಅಸಹಾಯಕಳಾಗಿ ನೋಡುತ್ತ ನಿಂತಳು. ಹಂದಿ ಕೆಲವೇ ಕ್ಷಣಗಳಲ್ಲಿ ಕಾಡಿನ ಆವರಣದೊಳಗೆ ನುಗ್ಗಿ ದಟ್ಟವಾದ ಪೊದೆಗಳ ನಡುವೆ ಕಣ್ಮರೆಯಾಯಿತು.

       ಮುಂದಿನ ಕೆಲವು ಕ್ಷಣಗಳು ದ್ಯಾಮಕ್ಕನಿಗೆ ಯುಗಗಳಂತೆ ಭಾಸವಾದವು. ತನ್ನ ಹಂದಿ ಯಾವ ಕ್ಷಣದಲ್ಲಾದರೂ ಕುಯ್ಯೋ ಮರ್ರೋ ಎನ್ನುತ್ತ ಹಿಂದಿರುಗಿ ಓಡಿಬರಬಹುದೆಂಬ ನಿರೀಕ್ಷೆಯಲ್ಲಿ ಅವಳು ನಿಂತೇ ಇದ್ದಳು. ಆದರೆ ಕಾಯುತ್ತ ನಿಂತಿದ್ದ ಅವಳ ಎದೆ ಬಿರಿಯುವಂತೆ ಹಂದಿಯ ಚೀರಾಟ ಕೇಳಿಸಿತು! ದ್ಯಾಮಕ್ಕನಿಗೆ ಆ ಕ್ಷಣ ಭೂತ, ಪಿಶಾಚಿ, ಬ್ರಹ್ಮರಾಕ್ಷಸ ಎಲ್ಲವೂ ಮರೆತೇ ಹೋದವು. ತನ್ನ ಹಂದಿಯನ್ನು ಸಾವಿನಿಂದ ಪಾರುಮಾಡುವುದೊಂದೇ ಅವಳ ಉದ್ದೇಶವಾಯಿತು. "ವಿಷ್ಣೂ. ಏನಾಯ್ತು ನಿಂಗೆ?" ಎಂದು ಕೂಗುತ್ತ ಅದರ ಚೀರಾಟ ಕೇಳಿಬಂದ ದಿಕ್ಕಿನತ್ತ ಓಡಿದಳು. ಅಷ್ಟರಲ್ಲಿ ಅವಳಿಗೆ ಕೇಳಿಸಿತು ರಕ್ತಹೆಪ್ಪುಗಟ್ಟಿಸುವಂಥ ಆ ಧ್ವನಿ! ತನ್ನ ಜೀವನದಲ್ಲಿ ಅವಳು ಮೊದಲಬಾರಿಗೆ ಆ ಧ್ವನಿಯನ್ನು ಕೇಳುತ್ತಿದ್ದಳು!!

       "ಹ್ರಾಂಮ್ ಹ್ರಾಂಮ್ ಹ್ರೂಂಮ್" ಎದೆಬಿರಿಯುವಂಥ ಆ ಭಯಾನಕ ಧ್ವನಿಯನ್ನು ಕೇಳಿದ ದ್ಯಾಮಕ್ಕನ ಮನಸ್ಸಿಗೆ ಮತ್ತೆ ಬ್ರಹ್ಮರಾಕ್ಷಸನ ಭೀತಿ ಮರುಕಳಿಸಿತು. ಅದು ಬ್ರಹ್ಮರಾಕ್ಷಸನ ಕೂಗೇ ಇರಬೇಕೆಂದು ಅವಳು ಭಾವಿಸಿದಳು. ಅಷ್ಟರಲ್ಲಿ ಕಾಡಿನ ಅಂಚಿನಿಂದ ಅವಳ ಹಂದಿ ಹೊರಕ್ಕೆ ಹಾರಿತು. ಅದರ ಹಿಂದೆಯೇ ಅದರ ಮೇಲೆ ಹಾರಿತು ಬೃಹದಾಕಾರದ ಹೆಬ್ಬುಲಿ! ಈ ಹಿಂದೆ ಎರಡು ಸಲ ತನ್ನಿಂದ ತಪ್ಪಿಸಿಕೊಂಡಿದ್ದ ಹಂದಿಯನ್ನು ಈ ಬಾರಿ ಬಿಡಲೇ ಬಾರದೆಂದು ಹುಲಿ ನಿರ್ಧರಿಸಿದಂತಿತ್ತು. ಕೆಲವೇ ಕ್ಷಣಗಳವರೆಗೆ ಒದ್ದಾಡಿದ ಹಂದಿ ಹುಲಿಯ ಬಿಗಿಹಿಡಿತದಿಂದ ತಪ್ಪಿಸಿಕೊಳ್ಳಲಾಗದೆ ಕೊನೆಯುಸಿರೆಳೆಯಿತು. ತನ್ನ ಪ್ರೀತಿಯ ಸಾಕುಪ್ರಾಣಿ ತನ್ನ ಕಣ್ಮುಂದೆಯೇ ಹುಲಿಯ ಬಾಯಿಗೆ ಆಹಾರವಾಗಿದ್ದನ್ನು ನೋಡಿದ ದ್ಯಾಮಕ್ಕ, ಭಯದಿಂದ ಮರಗಟ್ಟಿ ಏನು ಮಾಡಲೂ ತೋಚದೆ ಕಲ್ಲಿನಂತೆ ನಿಂತುಬಿಟ್ಟಳು. ಹುಲಿ ಅವಳ ಕಣ್ಣೆದುರಿಗೇ ಅವಳನ್ನು ಗಣನೆಗೇ ತೆಗೆದುಕೊಳ್ಳದೆ ಹಂದಿಯನ್ನು ದರದರನೇ ಎಳೆದೊಯ್ದಿತು.

       ವಾಸ್ತವಕ್ಕೆ ಮರಳಿದ ಬಳಿಕ ದ್ಯಾಮಕ್ಕ ಯೋಚಿಸತೊಡಗಿದಳು. ಎಲ್ಲಾ ಬಿಟ್ಟು ಹೋಗಿ ಹೋಗಿ ತನ್ನ ವಿಷ್ಣು ಈ ಕಾಡಿಗೇಕೆ ಬಂದ? ಊರಿನಲ್ಲೇ ಅಲ್ಲಿ ಇಲ್ಲಿ ಸುತ್ತಾಡಿದರೆ ಬೇಕಾದಷ್ಟು ತಿನ್ನಲು ಸಿಗುತ್ತಿದ್ದುದರ ಜೊತೆಗೆ ಮನೆಯಲ್ಲೂ ತಾನು ಬೇಕಾದಷ್ಟು ಕೊಡುತ್ತಿದ್ದೆನಲ್ಲ, ಹಾಗಿದ್ದೂ ಕಾಡಿಗೆ ಹೋಗಲು ಅದಕ್ಕೇನು ಗ್ರಹಚಾರ ಬಂದಿತ್ತೆಂದು ಯೋಚಿಸತೊಡಗಿದಳು. ಪಾಪ ಅವಳಿಗೇನು ಗೊತ್ತು ತನ್ನ ವಿಷ್ಣು ಕಾಡಿನಿಂದ ದಾರಿತಪ್ಪಿ ನಾಡಿಗೆ ಬಂದ ಹೆಣ್ಣುಹಂದಿಯನ್ನು ಹಿಂಬಾಲಿಸಿ ಆ ಕಾಡಿಗೆ ಹೋಗಿದ್ದೆಂದು?

       ಮನೆಗೆ ಬಂದು ಕುಸಿದು ಕುಳಿತ ಅವಳಿಗೆ ಜಗತ್ತೇ ಶೂನ್ಯವಾದಂತೆನಿಸಿತು. ಇಡೀ ಭೂಮಿಯ ಮೇಲೆ ಅವಳಿಗೆ ತನ್ನವರು ಎಂದು ಇದ್ದಿದ್ದು ಆ ಹಂದಿ ಮಾತ್ರ. ಇದೀಗ ಅದನ್ನೂ ಕಳೆದುಕೊಂಡ ಅವಳಿಗೆ ದುಃಖ ತಡೆಯಲಾಗಲಿಲ್ಲ. ಭೋರೆಂದು ಮನೆಯ ಒಳಕೋಣೆಯಲ್ಲಿ ಬಿದ್ದು ಅಳಲಾರಂಭಿಸಿದಳು. ಅವಳ ಅಳು ಕೇಳಿದರೂ ಅಕ್ಕಪಕ್ಕದ ಮನೆಯವರಾರೂ ವಿಚಾರಿಸಲು ಬರಲಿಲ್ಲ. ಏಕೆಂದರೆ ಅವರಿಗೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ದ್ಯಾಮಕ್ಕ ಬೈದು ಎಲ್ಲರ ದ್ವೇಷ ಕಟ್ಟಿಕೊಂಡಿದ್ದಳು. ಹಾಗಾಗಿ ಈಗ ಅವಳ ದುಃಸ್ಥಿತಿಯನ್ನು ಕಂಡು ಎಲ್ಲರೂ ಖುಷಿಪಟ್ಟರು. ಆ ದಿನವಿಡೀ ಅಳುತ್ತಲೇ ಕಳೆದ ದ್ಯಾಮಕ್ಕ ಅಡುಗೆಯನ್ನೂ ಮಾಡಲಿಲ್ಲ, ಊಟವನ್ನೂ ಮಾಡಲಿಲ್ಲ. ಬರೇ ಹೊಟ್ಟೆಯಲ್ಲಿ ರಾತ್ರಿ ಮಲಗಿದಳು. ಯಾವಾಗ ನಿದ್ರೆ ಹತ್ತಿತೋ ಅವಳಿಗೇ ತಿಳಿಯದು.

       ಮಧ್ಯರಾತ್ರಿ ಎಷ್ಟೋ ಹೊತ್ತಿಗೆ ಅವಲ ಮನೆಯ ಬಾಗಿಲು ತೆರೆದುಕೊಂಡಿತು. ಬಾಗಿಲಿನಿಂದ ಒಳಬಂದ ಆಕೃತಿಯನ್ನು ದ್ಯಾಮಕ್ಕ ಬೆಕ್ಕಸಬೆರಗಾಗಿ ನೋಡಿದಳು. ಅದು ಬೇರೆ ಯಾರೂ ಅಲ್ಲ, ಅವಳ ಪ್ರೀತಿಯ ವಿಷ್ಣು! ಅವಳು ಓಡಿಹೋಗಿ ಅದನ್ನು ಹಿಡಿದುಕೊಳ್ಳುವ ಯತ್ನ ಮಾಡಿದಳು. ಅದು ಅವಳ ಕೈಗೆ ಸಿಗದೆ ಓಡಿತು. ಓಡುತ್ತ ಓಡುತ್ತ ಬೆಟ್ಟಕಾಡಿನತ್ತ ಓಡಿತು. ಕೆಲವೇ ಕ್ಷಣಗಳಲ್ಲಿ ಅದರ ಹೃದಯವಿದ್ರಾವಕ ಆಕ್ರಂದನ ಕೇಳಿಸಿತು...

       ಗಡಬಡಿಸಿ ಎದ್ದುಕುಳಿತ ದ್ಯಾಮಕ್ಕನ ಮೈಯೆಲ್ಲ ಬೆವರಿತ್ತು. ಇದುವರೆಗೆ ಕಂಡಿದ್ದೆಲ್ಲ ಕನಸೆಂದು ಅರಿವಾದ ಅವಳಿಗೆ ತನ್ನ ವಿಷ್ಣು ಇನ್ನೆಂದೂ ಮರಳಿಬರಲಾರನೆಂಬ ಕಹಿಸತ್ಯ ಅರವಿಗೆ ಬಂದಿತು. ಬಾಗಿಲು ತೆರೆದು ಹೊರಗೋಡಿದವಳೇ "ವಿಷ್ಣೂ" ಎಂದು ಊರಿಗೆ ಊರೇ ಬೆಚ್ಚಿ ಎಚ್ಚರವಾಗುವಂತೆ ಗಟ್ಟಿಧ್ವನಿಯಲ್ಲಿ ಕಿರುಚುತ್ತ ಬೆಟ್ಟಕಾಡಿನತ್ತ ಓಡಿದಳು...

Category:Stories



ProfileImg

Written by Srinivasa Murthy

Verified