Do you have a passion for writing?Join Ayra as a Writertoday and start earning.

ಪೇಟೆಯೊಳಗೊಂದು ಮನೆಯ ಮಾಡಿ

ProfileImg
11 May '24
7 min read


image

ಏನ್ ಮಳೆನಪ್ಪ ದೇವ್ರೇ ಒಂದು ಐದು ನಿಮಿಷ ಬಿಡುವಿಲ್ದೆ ಸುರಿತಾನೆ ಇದ್ಯಲ್ಲ, ಪೇಟೆಯಿಂದ ಮನೆಗೆ ಬರೋವಷ್ಟ್ರಲ್ಲಿ ಸಾಕಪ್ಪ ಸಾಕಾಯ್ತು ಎಂದು ಗೊಣಗಿಕೊಂಡು ಒಳ ಬಂದ ನನಗೆ ನನ್ನ ಪತ್ನಿಯ ದರ್ಶನವಾಗುತ್ತಿಲ್ಲ ನನ್ನ ಗೊಣಗಿಗೆ ಗೋಣು ಹಾಕಲಾದ್ರು ಹತ್ತಿರ ಇರಬಾರದೇ ಎಂದು ಮನೆಯೊಡತಿಯ ಹುಡುಕತೊಡಗಿದೆ ಮನೆಯೊಳಗೆಲ್ಲ ಕತ್ತಲೆ,ಅಯ್ಯೋ ರಾತ್ರಿಯ ಕತ್ತಲು ಇದಲ್ಲ ನನ್ನ ಮನೆಯೇ ಹೀಗೆ ನಮ್ಮ ತಾತನವರಿಗೆ ಅವರ ತಾತನವರು ಕಟ್ಟಿಸಿಕೊಟ್ಟದಂತೆ ಅವರ, ಅವರ ಕಾಲಕ್ಕೆ ಹೆಂಚು ಪಕ್ಕಾಸುಗಳ್ಳನ್ನು ರಿಪೇರಿ ಮಾಡಿಸಿಕೊಂಡು ಬಂದಿದ್ದಾರೆ ಅನ್ನೋದು ಒಂದು ಬಿಟ್ರೆ ಈ ಮನೆಯಲ್ಲಿ ಹೆಚ್ಚಿನದೇನೋ ಬದಲಾವಣೆಗಳಿಲ್ಲ ಬಿಡಿ, ನೆಟ್ಟಗೆ ನಡೆದರೆ ಹಣೆಗೆ ಹೊಡೆಯುವಂತ ತಲಬಾಗಿಲು, ಇನ್ನೂ ಅದಕ್ಕಿಂತ ಸ್ವಲ್ಪ ಎತ್ತರಕ್ಕೆ ಅಟ್ಟ,ಅಟ್ಟದ ತುಂಬೆಲ್ಲ ನಮ್ಮದೇ ತೋಟದಕಾಯಿ, ಇನ್ನೇನೋ ವಸ್ತುಗಳು, ಹುಡುಕ ಹೊರಟರೇ ಒಂದು ಹೊಸ ಇತಿಹಾಸ ಬರೆಯುವಷ್ಟು, ಸಣ್ಣ ಸಣ್ಣ ಕಿಟಕಿ ಅಲ್ಲಲ ಕಿಂಡಿ ಎನ್ನುವುದೇ ಲೇಸು ಈ ಪುಟ್ಟ ಕುಟೀರದಲ್ಲಿ ಇನ್ನೆಷ್ಟು ಬೆಳಕು ಬರಬೇಕು ಹೇಳಿ ಅದಕ್ಕೆ ಸರಿಯಾಗಿ ಹೊರಗೆ ಮಳೆ ಬೇರೆ ತೋಟದ ಮಧ್ಯದ ನಮ್ಮ ಮನೆ ಕತ್ತಲಲ್ಲಿ ಮುಳುಗಿದೆ. ಕೋಣೆ ಕೋಣೆ ಹುಡುಕುತ್ತಾ ಬಂದ ನನಗೆ ಮನೆಯ ಹಿಂದೆ ಬಚ್ಚಲು ಮನೆಯ ಹತ್ರ ಹೊಗೆಯ ಮಧ್ಯದಲ್ಲಿ ಪತ್ನಿಯ ದರ್ಶನವಾಯಿತು ಏನು ಸಂಜೆ ಹೋಮಕ್ಕೆ ತಯಾರಿಯ ಎಂದು ಛೇಡಿಸಿದೆ, ಥೂ ಈ ಹಾಳು ಮಳೆಗೆ ಕಟ್ಟಿಗೆ ಎಲ್ಲ ಒದ್ದೆ ಸ್ನಾನಕ್ಕೆ ನೀರು ಬಿಸಿ ಮಾಡೋದು ಹೋಮ ಹವನ ಮಾಡೋ ರೀತಿ ಆಗಿದೆ, ಬೆಳ್ಳಗೆ ಹೋದವರು ಈಗ ಬರೋದ? ಎಂದು ಅನುಮಾನಿಸಿದಾಗ ಈ ಕೊಂಪೆಯಿಂದ ಬ್ಯಾಂಕ್ ಗೆ ಹೋಗೋ ದಾರಿಯಲ್ಲಿ ಇರೋವಷ್ಟು ಹೊಂಡ ಇಡೀ ಚಂದ್ರನ ಮೇಲೆ ಇರೋವಷ್ಟಿದೆ ಇನ್ನೆಲ್ಲಿ ಬೇಗ ಬರೋದು ಈ ಹಾಳು ಕೊಂಪೆ ಇದು ಜ್ವರದ ಕಾಡು ಎಂದು ಮತ್ತೆ ಗೊಣಗಾಟ ಶುರು ಹಚ್ಚಿಕೊಂಡೆ, ಸಾಮಾನ್ಯವಾಗಿ ಎಲ್ಲರಿಗೂ ಇರೋ ರೀತಿ ಹಿರಿಯರು ಮಾಡಿದ ಈ ಮನೆ,ಆಸ್ತಿ ಮೇಲೆ ವಿಶೇಷ ಆಸ್ತೆ ಏನು ನನಗೆ ಇರಲಿಲ್ಲ,ಹಾಗಂತ ಇದನೆಲ್ಲ ಬಿಟ್ಟು ಹೋಗೋ ಹಾಗೆ ಇರಲಿಲ್ಲ ಒಬ್ಬನೇ ಮಗ ಅನ್ನೋ ತಂದೆಯ ಹಂಬಲಕ್ಕೆ ಬಿದ್ದು ಬಿಟ್ಟೆ, ಹಾಗಂತ ಈ ಹಾಳು ಕೊಂಪೆಯಲ್ಲೇ ಉಳಿಯಬೇಕೆಂದು ಅಂದುಕೊಂಡವನು ಅಲ್ಲ ಬಿಡಿ ಹೊರಟು ಬಿಡಬೇಕೆಂದು ಮಾಡಿದ ಪ್ರಯತ್ನ ಯಾವುದು ಕೈಗೂಡಲಿಲ್ಲ ಎಂಬುದು ಸರಿಯಾದ ಸತ್ಯ. ಅದಕ್ಕೆ ನನ್ನ ಮಗರಾಯ ಎಸ್. ಎಸ್. ಲ್. ಸಿ ನಂತರ ಹಾಸ್ಟೆಲ್ ಹೊರಡಬೇಕೆಂದಾಗ ಅವನಿಗಿಂತ ಹೆಚ್ಚಿನ ಮುತುವರ್ಜಿ ನಾನೇ ವಹಿಸಿಕೊಂಡೆ ಪಾಪ ನನ್ನವಳು ಈ ಊರಿನ ಸುಣ್ಣ ಬಣ್ಣ ಕಾಣದ ಕಾಲೇಜು ಎನ್ನುವ ಕಟ್ಟಡವನ್ನು ತನ್ನ ಮಗನ ದೂರದ ಅಗಲುವಿಕೆ ಕಾರಣ ಎಂದು ಎಷ್ಟೊಂದು ಶಪಿಸಿದಾಳೋ ದೇವರೇ ಬಲ್ಲ, ಮಗನ ಅಡ್ಮಿಶನ್ ನೆಪದಲ್ಲಿ ನಾನು ನಾಲ್ಕು ದಿನ ಕಳೆದೆ ಶಹರದಲ್ಲಿ, ಹೋಟೆಲು ಊಟವೇ ರುಚಿ ಎನಿಸಿತು, ಸದಾ ಕತ್ತಲೆ ಅಲ್ಲದ ಕತ್ತಲಿನ0ತ್ತಿದ್ದ ಊರಿಂದ ಬೆಳಕಿನೆಡೆಗೆ ಬಂದತ್ತಾಗಿತ್ತು, ಮೋಟಾರಿಗೆ ಕಾಯುವ ಅವಶ್ಯಕತೆ ಇಲ್ಲ ಮಿಗಿಲಾಗಿ ಮೋಟಾರಿಗಾಗಿ ಮೈಲಿಗಟ್ಟಲೆ ನಡೆಯಬೇಕಾದ ಅವಶ್ಯಕತೆಯೇ ಇಲ್ಲ, ಶಾಲೆಗ, ಕಾಲೇಜು ಎಲ್ಲ ಹತ್ತಿರದಲ್ಲೇ. ಒಳ್ಳೆ ರಸ್ತೆ, ಹತ್ತಿರದಲ್ಲೇ ಅಂಗಡಿ, ವಠಾರ, ಚಿತ್ರ ಮಂದಿರ, ಅದೇನೋ ಶಾಪಿಂಗ್ ಮಾಲ್ ಎಷ್ಟೊಂದು ದೊಡ್ಡದು ಅಲ್ಲಿ ಸಿಗದ ವಸ್ತುಗಳೇ ಇಲ್ಲ ಅರ್ಧ ದಿನದೊಳಗೆ ಸಿಟಿ ಸುತ್ತಬಹುದು ಎಂಬ ಆಲೋಚನೆಗಳಲ್ಲೇ ಮಗ್ನನಾಗಿದ್ದೆ, ಅಯ್ಯ ಬೇಗ ಬೇಗ ಎಂದು ಕೇಳಿದೊಡನೆ ಅಂಗಳಕ್ಕೆ ಬಂದೆ ನಮ್ಮ ಸತೀಶನ ಮಗ ಮೇಲ್ದೋಟದಿಂದ ಇಳಿದು ಬರುವಾಗ ಪಾಂಪುವಿಂದ(ಕಾಲುಸಂಕ) ಜಾರಿ ತೋಡಿಗೆ ಬಿದ್ದು ಭಾರಿ ಪೆಟ್ಟಾಗಿದೆಯಂತೆ ಪೇಟೆಯ ಆಸ್ಪತ್ರೆಗೆ ಕೊಂಡು ಹೋಗಿದ್ದಾರೆ ಎಂದು ಒಂದೇ ಏಟಿಗೆ ಉಸುರಿದ ಸೋಮ, ನಮ್ಮ ಆಸ್ಪತ್ರೆಗೆ ಯಾಕೆ ಕರ್ಕೊಂಡು ಹೋಗ್ಲಿಲ್ಲ ಅಷ್ಟು ತುರ್ತು ಇದ್ರೆ ಎಂದೆ ನಾನು, ಅದು ಎಂತ ಹೇಳುದಯ್ಯಾ ಅಲ್ಲಿ ಡಾಕ್ಟರ್ ಎಲ್ಲಿದ್ದಾರೆ ಬರಿ ನರ್ಸ್ ಇರುದಲ್ಲ ಇವರ ಆಪತ್ತಿಗೆ ಅವಳು ಇವತ್ತು ರಜೆಯಂತೆ ಇನ್ನು ಅಲ್ಲಿಯ ವಾಚ್ ಮ್ಯಾನ್ ಪಟ್ಟಿ ಕಟ್ಟಬೇಕಷ್ಟೆ ಎಂದು ವಿಷಯವನ್ನಷ್ಟೇ ತಿಳಿಸಲು ಬಂದಂತೆ ಮುಂದೆ ಹೋದ, ಇವನ ಹಿರಿಯರು ನಮ್ಮಲ್ಲಿ ಊಲಿಗಕ್ಕೆ ಇದ್ದರಂತೆ ಈಗ ಎಲ್ಲಿಯ ಊಳಿಗ? ಸಂಬಳ, ಊಟದ ಮೇಲೆ ರಾಜಾಮರ್ಯಾದೆ ಕೊಟ್ಟರು ತೋಟದ ಕೆಲಸಕ್ಕೆ ಜನ ಇಲ್ಲ,ನನಗೆ ಅಯ್ಯ ಅನ್ನೋ ಪಟ್ಟ ಒಂದು ಬಿಟ್ಟರೆ.ಇದಕ್ಕಿಂತ ಪೇಟೆಯೇ ಚಂದ ಯಾರು ಧಣಿಗಳಲ್ಲ, ಯಾರು ಊಲಿಗವಲ್ಲ ದುಡ್ಡು ಕೊಟ್ಟು ಕೆಲಸ ತೆಗೆಸು ಕೆಲಸದ ಜನಕ್ಕೂ ಕೊರತೆಯಿಲ್ಲ.

"ಸತ್ತೇ ಹೋದ" ಎಂದು ಹೆಂಡತಿಯ ಸ್ವರ ಕೇಳಿ ಯಾರೇ ಅಂದೇ ಇನ್ಯಾರು ಅದೇ ಕರೆಂಟ್ನವ ಸಂಜೆ ಸಂಜೆಯೇ ಕರೆಂಟಿಗೆ ಕತ್ತರಿ ಹಾಕುತ್ತಾನಲ್ಲ ಇನ್ನೂ ಯಾವಾಗ ವಾಪಾಸ್ ಕರೆಂಟ್ ಬರುತ್ತೋ ಗೊತ್ತಿಲ್ಲ, ಮೊಬೈಲ್ ಅಲ್ಲಿ ಸೀರಿಯಲ್ ನೋಡೋಣ ಅಂದ್ರು ಹಾಳಾದ್ ನೆಟ್ವರ್ಕ್ ಸಿಗಬೇಕೆ ಈ ಗುಂಡಿಯಲ್ಲಿ,ಇನ್ನೇನೋ ಬಡ ಬಡ ಮಾಡತೊಡಗಿದಳು.

ಯಾವತ್ತೂ ಇಷ್ಟವಿರದ ಈ ಊರು ಯಾಕೋ ಇನ್ನಷ್ಟು ಕಷ್ಟ ಅನಿಸತೊಡಗಿತು ಎಲ್ಲ ಕಡೆ ಕೊರತೆಗಳೇ ಕಾಣತೊಡಗಿತು, ತಟ್ಟನೆ,ಸದ್ಯಕ್ಕೆ ನನ್ನನು ಇಲ್ಲಿ ಬಂಧಿಸಿ ಇಟ್ಟಿರುವುದಾದರೂ ಏನು? ಶಹರಿಗೆ ಹೋಗಲೇಬಾರದು ಎಂದು ಆಜ್ಞೆ ಮಾಡಲು ತಂದೆಯವರಿಲ್ಲ, ಹೋಗಲಾಗುದಿವುಲ್ಲ ಎಂಬ ದೊಡ್ಡ ಕಾರಣವೂ ಇಲ್ಲ, ಹೆಚ್ಚಾಗಿ ಈಗ ಅಲ್ಲಿ ಹೋಗಿ ಇರುದಕ್ಕೆ ಕಾರಣಗಳು ಸಿಗುತ್ತಿದೆ,ಮಗ ಹಾಸ್ಟೇಲ್ ಸೇರಿಕೊಂಡ ಮೇಲೆ ನನ್ನಾಕೆಗೂ ಈ ಮನೆ, ಊರಿನ ಆಸೆ ಕಮ್ಮಿ ಆದ ಹಾಗಿದೆ ಯಾಕೆ ಪೇಟೆಯಲ್ಲಿ ಒಂದು ಮನೆ ಮಾಡಬಾರದು? ಆಮೇಲೆ ನಾವು ಸಿಟಿಯವರಂತೆ ಅಪರೂಪಕ್ಕೆ ಇಲ್ಲಿ ಬಂದು ಹೋಗಬಹುದು ಇಲ್ಲಿದು ಮಾಡುವುದೇನಿದೆ? ಈಗೇನು ತೋಟವೋ? ಸಾಗುವಳಿಯೋ?.ಮಗನನ್ನು ಹತ್ತಿರ ಉಳಿಸಿಕೊಳ್ಳಬಹುದು ಎಂದರೆ ಇವಳು ಪಟ್ಟನೆ ಒಪ್ಪುವಳು, ಹೇಗಿದ್ದರೂ ತಂದೆ ತೀರಿಕೊಂಡ ನಂತರ ಬಂದ ಸ್ವಲ್ಪ ದುಡ್ಡು ಇದೆ, ತಂದೆಗಿಂತ ಮೊದಲೇ ತೀರಿಹೋದ ತಾಯಿಯ ಒಡವೆಗಳಿವೆ ಎಂದು ಲೆಕ್ಕಾಚಾರ ಹಾಕತೊಡಗಿದೆ, ಏನೋ ಹೊಸ ಹುಮ್ಮಸ್ಸು ಬಂದಂತೆ ನನ್ನ ಎಣಿಕೆಯನ್ನು ಮಡದಿಗೆ ಹೇಳಿದಾಗ ತುಸು ಯೋಚಿಸಿದಲಾದರೂ ಒಬ್ಬನೇ ಮಗನ ನೆನಪಾಗಿ ಒಪ್ಪಿಕೊಂಡಳು ಅವಳ ಅಷ್ಟು ವೇಗದ ತೀರ್ಮಾಣ ನೋಡಿ ನನಗೆ ಇನ್ನಷ್ಟು ಹುಮ್ಮಸ್ಸಾಯಿತು, ಇವಳೇ ತಡ ಮಾಡುವುದು ಬೇಡ ನಾಳೆನೇ ಮನೆ ಒಂದು ಹುಡುಕ ಹೊರಡ್ತೇನೆ, ಅಪ್ಪನ ಸ್ವಲ್ಪ ದುಡ್ಡು ಎತ್ತಿಟ್ಟಿದೆ ಅದನ್ನ ನಾಳೆ ಅಂಗಿ ಜೇಬಿಗೆ ಹಾಕಿಡು, ಹಾಗೆ ಬೆಳಗ್ಗೆ ನಾನು ಹೊರಟ ಮೇಲೆ ಸೋಮನಿಗೆ ಸಂಜೆ ಮನೆ ಕಡೆ ಬರಲು ಹೇಳು ನಾವು ಪೇಟೆಗೆ ಹೋದಮೇಲೆ ತೋಟ ನೋಡಿಕೊಳ್ಳುತ್ತಾನ ಕೇಳಬೇಕು? ಈ ತೋಟ ಎಲ್ಲ ಬರೇ ಖರ್ಚು ಈಗೀಗ,ಸಾಧ್ಯವಾದ್ರೆ ಮುಂದೆ ಮಾರಿಯೇ ತೀರೋದು, ಹೇಗಿದ್ರು ನನ್ನ ಮೊದಲೇ ಪೇಟೆ ಸೇರಿದ ಮಗ ಇಲ್ಲಿ ಬಂದು ದುಡಿಯುವನೇ?ಎಂದುಕೊಂಡೇ ನಿದ್ದೆ ಹೋದೆ.

ಬೆಳಗ್ಗೆ ಎಂದಿಗಿಂತ ಬೇಗ ಎಚ್ಚರಗೊಂಡೆ ಹಳೆಯ ಆಸೆಗಳೆಲ್ಲ ಮತ್ತೆ ಜೀವಂತ ಆದಂತೆ ಹೆಸರಿಗೆ ಸ್ನಾನ ಮಾಡಿ ತಿಂಡಿ ತಿಂದು, ದುಡ್ಡನೆಲ್ಲ ಜೇಬಿನೊಳಗೆ ಭದ್ರ ಮಾಡಿ ಬೆಳಗ್ಗೆ ಬಸ್ಗೆ ಹೊರಟೆ, ಪೇಟೆ ತಲುಪಿದಾಗ ಮಳೆ ಬಿಟ್ಟು ಬಿಸಿಲು ಹಿಡಿದಿತ್ತು ಮನಸ್ಸಿಗೆ ಉಲ್ಲಾಸ ಎನ್ನಿಸಿತು ಗಂಟೆಯೂ ಹನ್ನೊಂದು ಆಗಿತ್ತು ಎನ್ನಿ, ಅಲ್ಲೇ ಹತ್ತಿರದಲ್ಲಿದ ಹೋಟೆಲು ಹೊಕ್ಕು ಒಂದು ಚಾ ಹೇಳಿದೆ, ಎಲ್ಲಿಂದ ಹೇಗೆ ಹುಡುಕಾಟ ಪ್ರಾರಂಭಿಸೋದು ಎಂಬ ಯೋಚನೆ ತಲೆಯಲ್ಲಿ ಸುತ್ತ ತೊಡಗಿತು ಮಗನ ಕಾಲೇಜ್ಗೆ ಹತ್ತಿರ ಇದ್ರೆ ಒಳ್ಳೇದು ಅನ್ನಿಸ್ತು, ಚಾ ಮುಗಿಸಿ ಹೊಟೇಲಿಂದ ಹೊರಬಂದ ತಕ್ಷಣ ರಿಕ್ಷಾ ಡ್ರೈವರ್ ಎಲ್ಲಿಗೆ ಸರ್ ಬನ್ನಿ ಅಂತ ಕರೆದ ಜಾಸ್ತಿ ಯೋಚನೆ ಮಾಡದೆ ಮಿಲ್ ರೋಡ್ ಎಂದೆ, ಸರಿ ಬನ್ನಿ ಕೂತ್ಕೊಳ್ಳಿ ಸರ್ ಎಂದು ಮೀಟರ್ ಚಾಲು ಮಾಡಿದ ಸ್ವಲ್ಪ ಮುಂದೆ ಹೋಗುತ್ತಲ್ಲೇ ಮಿಲ್ ರೋಡ್ ಅಲ್ಲಿ ಎಲ್ಲಿ ಸರ್ ಅಂದ ನಾನು ಸ್ವಲ್ಪ ಯೋಚನೆ ಮಾಡಿ , ಮತ್ತೆ. M. S ಕಾಲೇಜ್ ಇದ್ಯಲ್ಲ ಅಲ್ಲೇ ಎಲ್ಲಾದ್ರೂ ಇಳಿಸು ಅಂದೇ ನನ್ನ ಸ್ಪಷ್ಟತೆ ಇರದ ಮಾತು ನೋಡಿ ಅವ ಮುಂದಿನ ಕನ್ನಡಿಯಿಂದ ನನ್ನ ಮುಖ ನೋಡಿದ ಅವನ ಅನುಮಾನ ಅರ್ಥ ಆಗಿ ನಾನು ನನ್ನ ಬಂದ ಕಾರ್ಯ ತಿಳಿಸಿದೆ ಅದಕ್ಕವನು ಅಯ್ಯೋ ಸರ್ ಆ ಮಿಲ್ ರೋಡ್ ಹತ್ರ ಸಿಕ್ಕಾಪಟ್ಟೆ ಬಾಡಿಗೆ ಜಾಸ್ತಿ ಸರ್, ಹೆಸರಿಗೆ ಮಾತ್ರ ಮಿಲ್ ರೋಡ್ ಅಲ್ಲೆಲ್ಲ ಈ ಸಾಫ್ಟ್ವೇರ್, ಸ್ಟೂಡೆಂಟ್ಸ್ ತುಂಬೋಗಿದ್ದಾರೆ ಬಾಡಿಗೆ ಸಿಗೋದು ಕಷ್ಟನೇ ಜೊತೆಗೆ ಅಷ್ಟೊಂದು ಬಾಡಿಗೆ ನಿಮ್ಮಿಂದ ಕೊಡೋಕ್ಅಗುತ್ಯೆ ಎಂಬಂತೆ ಅನುಮಾನಿಸಿದ ನಂಗೆ ಪೆಚ್ಚಾಯಿತು ನನ್ನ ಪೆಚ್ಚು ಮೊರೆ ನೋಡಿಯೇ ಅವನು ಸರ್ ಇಲ್ಲಿಗಿಂತ ಮುಂದೆ ರಾಮ್ ನಗರ್ ಅಲ್ಲಿ ಚೆನ್ನಾಗಿದೆ ಸರ್ ಅಂದ, ಹಾಗಲ್ಲಪ್ಪ ನನ್ ಮಗ ಇಲ್ಲೇ M. S ಕಾಲೇಜ್ ಅಲ್ಲಿ ಓದ್ಕೊಂಡಿದಾನೆ ಆವ್ನುಗು ಹತ್ರ ಆಗ್ಬೇಕಲ್ಲ, ಅಯ್ಯೋ ಅದೇನ್ ಮಹಾ ಬಿಡಿ ಸರ್ ಅಲ್ಲಿಂದ ಡೈರೆಕ್ಟ್ ಮೋಟಾರು ಬೇಕಾದಷ್ಟಿದೆ ಅಬ್ಬಬಾ ಅಂದ್ರೆ ಅರ್ಧ ಗಂಟೆ ದಾರಿ ಅಂದ, ಬಿಸಿಲು ಚುರುಕಾಗ ತೊಡಗಿತು ಮಧ್ಯಾಹ್ನ ಟ್ರಾಫಿಕ್ಕೂ ಉದಕ್ಕೆ ಎಳೆದಿತ್ತು ಹೊಟ್ಟೆ ನಿಧಾನಕ್ಕೆ ತಾಳ ಹಾಕಲು ಶುರು ಮಾಡಿತ್ತು, ಎನ್ನಪ್ಪ ಮಾಡೋದು ಅಂದುಕೊಳ್ಳುತ್ತಿರುವಾಗನೇ ಸರ್ ನಮ್ ಪರಿಚಯದ ಬ್ರೋಕರ್ ಇದ್ದಾರೆ ಅವರಲ್ಲಿ ಕರ್ಕೊಂಡು ಹೋಗೋದ ಹೇಗೆ? ಎಂದು ಮತ್ತೆ ನನ್ನ ಗೊಂದಲಕ್ಕೆ ಎಳೆದ ನಾನು "ಹೂ" ಎನ್ನದೆ ಬೇರೇ ಉಪಾಯವು ಇರ್ಲಿಲ್ಲ, ಮಗನಿಗಾದರೂ ಒಂದು ಮಾತು ಕೇಳೋಣ ಕಾಲೇಜ್ ಗೆ ಮೊಬೈಲ್ ತಗೆದುಕೊಂಡು ಹೋಗ್ತಾನೋ ಇಲ್ವೋ ಎಂದು ಯೋಚನೆ ಮಾಡಿ ಜೇಬು ತಡಕಿದೆ, ಮೊಬೈಲ್ ಇಲ್ಲ, ಅಯ್ಯೋ ಈ ಅವಸರಕ್ಕೆ ಮೊಬೈಲ್ ಬಿಟ್ಟು ಬಂದೇನೆ ನನ್ನ ಮರೆವಿಗಿಷ್ಟು ಎಂದು ಮನದಲ್ಲೇ ನನ್ನ ಹಳಿಯ ತೊಡಗಿದೆ, ರಿಕ್ಷಾ ಯಾವ್ದೋ ಸಂದಿ ಸಂದಿ ದಾಟಿ ವೃಕ್ಷ ಅನ್ನೋ 4 ಅಂತಸ್ತಿನ ಕಟ್ಟಡ ಮುಂದೆ ನಿಂತಿತು. ಸರ್ ಇಲ್ಲೇ ನಿಂತಿರಿ ಇದರಲ್ಲೇ 2ನೇ ಮಹಡಿಯಲ್ಲಿ ಮನೆ ಖಾಲಿ ಇದೆ ಅಂದಿದ್ರು ಬ್ರೋಕರ್ ಗೆ ಫೋನ್ ಮಾಡುತ್ತೇನೆ ತಡಿರೀ ಎಂದು ಆತನ ಮೊಬೈಲ್ ಹಿಡಿದು ದೂರ ಸರಿದ, ನಾನು ನಿಂತಲ್ಲೇ ಕಟ್ಟಡವನ್ನು ನೋಡ ತೊಡಗಿದೆ ಬರೇ ನಾಲ್ಕು ಅಂತಸ್ತಿನದ್ದು ಚಿಕ್ಕದಾದರೂ ಚೊಕ್ಕವಾಗಿತ್ತು, ಇದರ ಗೋಡೆಗೆ ತಾಗಿಕೊಂಡು ಮತ್ತೆ ಬೇರೇ ಕಟ್ಟಡಗಳಿತ್ತು, ಹೊಚ್ಚ ಹೊಸದಲ್ಲದಿದ್ದರು ಸಾಧರಣ ಹೊಸತರಂತೆ ಕಂಡಿತು ನನಗೆ. ಕೆಳ ಅಂತಸ್ತಿನಲ್ಲಿ ಕಿರಾಣಿ ಅಗಂಡಿಯಿತ್ತು ಅದರ ಮಾಲೀಕ ಗ್ರಾಹಕರೊಂದಿಗೆ ವ್ಯಸ್ತವಾಗಿದ್ದ ಜನ ಓಡಾಟ ಹೆಚ್ಚೇ ಇತ್ತೆನ್ನಿ, ಅಷ್ಟರಲ್ಲಿ ಒಬ್ಬ ದಡೂತಿ, ಬಿಳಿ ಶರಟು ಹಾಕಿದ ವ್ಯಕ್ತಿಯೊಡನೆ ರಿಕ್ಷಾ ಡ್ರೈವರ್ ಬಂದ ಸರ್ ಇವರೇ ಕೃಷ್ಣ ಅಂತ ಎಂದು ಬ್ರೋಕರ್ ಪರಿಚಯ ಮಾಡಿಕೊಟ್ಟು ಸರ್ ನಾನಿನ್ನು ಬರ್ತೇನೆ ಎಂದು ಬಾಡಿಗೆ 350 ಎಂದ, ನಾನು ಏನೋ ಹೇಳಲು ತೆರೆದ ಬಾಯಿ ಮುಚ್ಚಿ ಮನೆಯಿಂದ ತಂದ ದುಡ್ಡನ್ನು ಜೋಪಾನವಾಗಿ ಹೊರತೆಗೆದು ಅದರಲ್ಲಿ 350 ತೆಗೆದು ಕೊಟ್ಟೆ.

ಸರ್ ಊಟ ಆಯ್ತಾ ಎಂದು ಬ್ರೋಕರ್ ಕೇಳಲು ಹೊಟ್ಟೆ ಮತ್ತೆ ಚುರ್ ಎಂದಿತು ಹಸಿವು ತೀಕ್ಷಣವಾದಂತೆ ಎನಿಸಿತು ಇಲ್ಲ ಎಂದೆ ಹಾಗಾದ್ರೆ ಬೇಗ ಬೇಗ ಮನೆ ನೋಡ್ಬಿಡೋಣ ಸರ್ ಅಂದ ಕೃಷ್ಣ. ಸರ್ ಲಿಫ್ಟ್ ಇಲ್ಲ ನಿಮ್ಮದು ಎರಡನೆಯ ಮಹಡಿನೇ ಬನ್ನಿ ಬನ್ನಿ, ಸರ್ ಇಲ್ಲಿ ಎಲ್ಲೂ ಸುತ್ತಲೂ ಈಗ ಮನೆ ಖಾಲಿನೇ ಇಲ್ಲ ಸರ್ ಅದ್ರಲ್ಲೂ ಸಂಸಾರ ಜೊತೆ ಇರೋರಿಗೆ ರೂಮ್ ಇಲ್ಲ ಅಂತಾನೇ ಅನ್ನಿ ಇಲ್ಲೇ ಒಂದು ಕ್ರಾಸ್ ಕಳೆದ್ರೆ ಹೊಸತು ಯಾವ್ದೋ ಒಂದು ಐಟಿ ಕಂಪನಿ ಅಂತೇ ಮಾಡಿದ್ದಾರೆ ಅವ್ರೆ ಎಲ್ಲ ತುಂಬೋಗಿದ್ದಾರೆ ಸರ್, ಅದ್ರ ಪಕ್ಕನೇ ಯಾವ್ದೋ ಫ್ಯಾಷನ್ ಸ್ಕೂಲ್ ಅಂತೇ ಎಲ್ಲ ಹೊರಗಿಂದ ಬಂದಿರೋ ವಿದ್ಯಾರ್ಥಿಗಳೇ ಹಾಗೆ ಇಲ್ಲೂ ಮನೆ ಬಾರಿ ಕಷ್ಟ ಆಗೋಗಿದೆ ಸರ್, ಇನ್ನೂ ಆ ಮಿಲ್ ರೋಡ್ ಅಲ್ಲಿ ಮನೆನೇ ಇಲ್ಲ ಸರ್, ಅಲ್ಲೆಲಾ ಎರಡು ಬೆಡ್ರೂಮ್ ಮನೆಗೆ ಹನ್ನೆರಡರಿಂದ ಹದಿನೈದು ಸಾವಿರ ಹೇಳ್ತಾರಲ್ಲ ಸರ್ ಅಂದ,ಹನ್ನೆರಡ ಅಂದಾಗ ತಲೆ ಒಮ್ಮೆಗೆ ದಿಮ್ ಎಂದಿತು ಅಷ್ಟರಲ್ಲಿ ನಾವು ನೋಡ್ಬೇಕು ಅಂದಿದ್ದ ಮನೆ ಮುಂದೆ ಬಂದಾಗಿತ್ತು. ಕೃಷ್ಣ ಜೇಬಲ್ಲಿ ಏನೋ ತಡವರಿಸತೊಡಗಿದ ನಾನು ಬಾಡಿಗೆ ಎಷ್ಟು ಎಂದೆ ಸರ್ ಇದು ಎರಡು bhk ಬರೇ ಒಂಬತ್ತುಸಾವಿರ ಸರ್ ಮತ್ತೆ ಜೇಬು ಹುಡುಕುತ್ತಲೇ ಉತ್ತರಿಸಿದ. ಏನಾಯ್ತು? ಎಂದೆ, ಸರ್ ಕ್ಷಮಿಸಿ ಕೀ ಮರೆತು ಬಂದು ಬಿಟ್ಟೆ ಹೊರಗಿನಿಂದನೆ ನೋಡ್ತಾ ಇರಿ ಈಗ ಬಂದೆ ಎಂದು ಆತುರದಿಂದ ಇಳಿದು ಹೋದ, ನನಗೆ ಹಸಿವಿಗೆ ಕಣ್ಣು ಕತ್ತಲು ಹಿಡಿಯಲು ಶುರುವಾಯ್ತು ಇದೊಂದು ಮುಗಿಸಿ ಊಟ ಮಾಡಬೇಕೆನ್ನುತ ಕಿಟಕಿಯಿಂದ ಒಳಗೆ ಕಣ್ಣು ಹಾಯಿಸಿದೆ ಸಣ್ಣ ಸಣ್ಣ ಕೋಣೆಗಳು, ಅಡಿಗೆ ಕೋಣೆ, ಪುಟ್ಟ ದೇವರ ಮನೆ ಗಾಳಿ ಬೆಳಕಿಗೆ ಚೆನ್ನಾಗಿದೆ ಎನ್ನಿಸಿತು ಆದರೆ ಒಂಬತ್ತುಸಾವಿರ ಅಯ್ಯೋ ದೇವರೇ ಅನಿಸಿತು ಎರಡು ಮಹಡಿ ಹತ್ತಿ ಬಂದು ಹಸಿವಿನಲ್ಲಿ ಸುಸ್ತು ಕಾಣಿಸಿತು, ಅಲ್ಲೇ ಹತ್ತಿರ ಇದ್ದ ಮೆಟ್ಟಿಲಿನ ಮೇಲೆ ಕುಳಿತೆ, ಸಮಯ ಸಂದರೂ ಈ ಕೃಷ್ಣನ ಪತ್ತೆ ಇಲ್ಲ ಮೊದಲು ಸಿಟ್ಟೇನಿಸಿತು ನಿಧಾನಕ್ಕೆ ಅನುಮಾನವಯಿತು ಮೈ ಬೆವರಲು ಶುರು ಹಚ್ಚಿಕೊಂಡಿತು, ಹೃದಯ ಬಡಿದುಕೊಳ್ಳಲಾರಂಭಿಸಿತು ಕೈ ಜೇಬಿಗೆ ಇಳಿಯಿತು ಒಮ್ಮೆಗೆ ಹೃದಯ ನಿಂತಾತಾಯಿತು ಅನುಮಾನ ನಿಜವಾಯಿತು ಜೇಬಿಗೆ ಕತ್ತರಿ ಬಿದ್ದಿದೆ, ಕೃಷ್ಣ ಎಂದು ಕೆಳಗೆ ಓಡೋಡಿ ಬಂದೆ ನಾನು ಬಂದ ರಭಸವನ್ನು ಕಿರಾಣಿ ಅಂಗಡಿಯವನು ನೋಡಿದರು ಗಣನೆಗೆ ತೆಗೆದುಕೊಳ್ಳದೆ ಗ್ರಾಹಕರ ಕಡೆ ತಿರುಗಿದ.

ರಸ್ತೆಗೆ ಬಂದ ನಾನು ಯಾವ ಕಡೆ ಹುಡುಕ ಹೊರಡಲಿ ಎಂದು ಚಿಂತಾಕ್ರಾಂತನಾದೆ ಎಲ್ಲೆಲ್ಲೂ ಜನರು, ಎಲ್ಲರೂ ಧಾವಂತದಲ್ಲಿದ್ದಂತೆ ನನ್ನನು ನೋಡಿಯೂ ನೋಡದವರಂತೆ ಮುಂದೆ ಹೋಗುತ್ತಿದರು, ಯಾವ ರಸ್ತೆಗೆ ಇಳಿದರು ಒಂದೇ ರೀತಿ ಕಾಣುತಿತ್ತು ಎಲ್ಲರು ಕೃಷ್ಣನಂತೆ ಕಂಡರು, ಕಣ್ಣಲ್ಲಿ ನೀರು ನನಗೆ ಗೊತ್ತಿಲ್ಲದಂತೆ ಜಿನುಗಿತ್ತು, ಶರಟಿನ ಜೇಬು ಮುಟ್ಟಿನೋಡಿದೆ ಬೆಳ್ಳಗ್ಗೆ ಚಾ ಕುಡಿದು ಪಡೆದುಕೊಂಡ ಚಿಲ್ಲರೆ ನೋಟುಗಳಿತ್ತು, ಪೇಟೆಯಲ್ಲಿ ಬಿಸಿಲು,ಉದ್ದನೆಯ ದಾರಿ , ಎತ್ತರದ ಮಹಡಿಯ ಮನೆಗಳು ನನ್ನ ನೋಡಿ ನಗುತಿತ್ತು.

GEEVAProfileImg

Written by Vandana Amin

KANNADA KANASU MANASU