ಕಾಂತಿಮಾನ

ನಕ್ಷತ್ರಗಳ ಪ್ರಕಾಶವನ್ನು ಅಳೆಯುವ ವಿಧಾನ

ProfileImg
20 Mar '24
8 min read


image

     ನಾವು ವಾಸಿಸುತ್ತಿರುವ ಈ ವಿಶ್ವ ವಿಶಾಲವಾದದ್ದು. ನಾವು ಅದನ್ನು ಅನಂತವೆಂದು ಪರಿಗಣಿಸುತ್ತೇವೆ. ಅದು ಅನಂತವೋ, ಅದಕ್ಕೊಂದು ಅಂತ್ಯ ಇದೆಯೋ, ಏನೇ ಆದರೂ ಆ ಅಂತ್ಯ ನಮ್ಮ ಕಣ್ಣಿಗೆ ಅಥವಾ ನಮ್ಮ ದೂರದರ್ಶಕಗಳ ಕಣ್ಣಿಗೆ ಕೂಡ ಕಾಣುವಷ್ಟು ದೂರದಲ್ಲಿ ಕೂಡ ಇಲ್ಲ. ಹಾಗಾಗಿ ಅದನ್ನು ಅನಂತವೆಂದು ಪರಿಗಣಿಸಲಡ್ಡಿಯಿಲ್ಲ. ಆದರೆ ನಮಗೆ ಅದು ಅಗಣಿತ ಕುತೂಹಲಗಳ ಗಣಿ ಎಂಬುದಂತೂ ನಿಜ. ರಾತ್ರಿಯ ನಿರಭ್ರ ಆಗಸದಲ್ಲಿ ಚೆಲ್ಲಿದ ವಜ್ರದ ಹರಳುಗಳಂತೆ ಮಿನುಗುವ ಅಸಂಖ್ಯ ನಕ್ಷತ್ರಗಳು ಮತ್ತು ಅವುಗಳ ನಡುವಿನ ದಾರಿಯಲ್ಲಿ ಸಂಚರಿಸುವ ಗ್ರಹಗಳು ಇವೆಲ್ಲ ಒಂದು ಭ್ರಾಮಕ ಲೋಕವನ್ನೇ ಸೃಷ್ಟಿಸುತ್ತವೆ. ಅಷ್ಟೊಂದು ಅಸಂಖ್ಯಾತವಾಗಿರುವ ನಕ್ಷತ್ರಗಳ ಸುತ್ತ ಭೂಮಿಯಂಥ ಗ್ರಹಗಳಿರಬಹುದೇ? ಅದರಲ್ಲಿ ಜೀವಿಗಳಿರಬಹುದೇ? ಇದ್ದರೆ ನಮ್ಮಂಥ ಅಥವಾ ನಮಗಿಂತ ಬುದ್ಧಿವಂತ ಜೀವಿಗಳಿರಬಹುದೇ? ಇತ್ಯಾದಿ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇವಕ್ಕೆಲ್ಲ ಉತ್ತರ ಕಂಡುಹಿಡಿಯುವ ಉದ್ದೇಶದಿಂದ ಮನುಷ್ಯ ಖಗೋಳವೀಕ್ಷಣೆ ಆರಂಭಿಸಿದ. ನೇರವಾಗಿ ತಲೆಯೆತ್ತಿ ಆಕಾಶವನ್ನು ನೋಡುವುದು ಖಗೋಳವೀಕ್ಷಣೆಯ ಮೊದಲ ಮೆಟ್ಟಿಲು. ಆಮೇಲೆ ಅವುಗಳ ಚಲನೆಯನ್ನು ಅಭ್ಯಾಸಮಾಡುವುದು ಮುಂದಿನ ಹಂತ. ಅನೇಕ ಶತಮಾನಗಳಿಂದ ವೀಕ್ಷಣೆ ನಡೆಸುತ್ತ, ಮೊದಲಿಗೆ ಬರಿಗಣ್ಣಿನಿಂದ ಆರಂಭಿಸಿ ಕ್ರಮೇಣ ದೂರದರ್ಶಕಗಳ ಮೂಲಕ ವೀಕ್ಷಣೆ ಆರಂಭಿಸಿ ಇಂದು ಕೃತಕ ಉಪಗ್ರಹಗಳನ್ನು ಬೇರೆ ಗ್ರಹಗಳಿಗೆ ಹಾರಿಬಿಡುವಷ್ಟು ಪ್ರಗತಿ ಸಾಧಿಸಿದ್ದೇವೆ. ಇದೆಲ್ಲ ಹಂತಹಂತವಾಗಿ ಸಾಧಿಸಿದ ಪ್ರಗತಿಯ ಮೆಟ್ಟಿಲುಗಳು.

    ಸೂರ್ಯ-ಚಂದ್ರರ ಕಾಂತಿ: ಹೋಲಿಕೆ ಹೇಗೆ?
    ಬಾಹ್ಯಾಕಾಶದಲ್ಲಿ ನಮಗೆ ಅತ್ಯಂತ ಸಮೀಪದ ಕಾಯವೆಂದರೆ ಚಂದ್ರ. ನಮ್ಮಿಂದ ಮೂರುಲಕ್ಷದ ಎಂಬತ್ನಾಲ್ಕು ಸಾವಿರ ಕಿಲೋಮೀಟರ್ ದೂರದಲ್ಲಿ ಭೂಮಿಯನ್ನು ಸುತ್ತುತ್ತಿರುವ ಒಂದು ಸ್ವಾಭಾವಿಕ ಉಪಗ್ರಹ. ಚಂದ್ರ ಮತ್ತು ಭೂಮಿಯ ಗಾತ್ರಾನುಪಾತವನ್ನು ನೋಡಿದ ವಿಜ್ಞಾನಿಗಳು ಇವನ್ನು ಗ್ರಹ-ಉಪಗ್ರಹ ಜೋಡಿ ಎನ್ನುವುದಕ್ಕಿಂದ ಗ್ರಹಯುಗ್ಮ ಎಂದರೆ ತಪ್ಪಿಲ್ಲ ಎನ್ನುತ್ತಾರೆ. ಅದೇನೇ ಆದರೂ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯವೆಂದರೆ ಚಂದ್ರನೇ. ಚ೦ದ್ರನ ಬೆಳದಿಂಗಳು ಕೂಡ ಅತ್ಯಂತ ಪ್ರಸಿದ್ಧವಾದದ್ದು ಹಾಗೂ ಕವಿಗಳಿಗೆ ಅಚ್ಚುಮೆಚ್ಚಿನ ವಸ್ತು. ಭೂಮಿಯಿಂದ ನೋಡಿದಾಗ ಚಂದ್ರ ಕೂಡ ಸೂರ್ಯನಷ್ಟೇ ದೊಡ್ಡದಾಗಿ ಕಾಣಿಸುತ್ತದೆ. ಆದರೆ ಹಗಲಿನಲ್ಲಿ ಸೂರ್ಯನ ಪ್ರಖರತೆಯ ಮುಂದೆ ಚಂದ್ರ ತೀರಾ ಮಂಕಾಗಿ ಕಾಣಿಸುತ್ತದೆ. ಮಂಕಾಗಿ ಎಂದರೆ ಎಷ್ಟು ಮಂಕಾಗಿ ಕಾಣುತ್ತದೆ? ನಾವು ಬಾಯಿಮಾತಿನಲ್ಲಿ ಅಂದಾಜು ಗಣನೆ ಹೇಳಬಹುದು. ಆದರೆ ಸೂರ್ಯ ಚಂದ್ರನಿಗಿಂತ ಎಷ್ಟು ಪಟ್ಟು ಪ್ರಖರ? ರಾತ್ರಿಯವೇಳೆ ಪ್ರಕಾಶಮಾನವಾಗಿ ಹೊಳೆಯುವ ಶುಕ್ರಗ್ರಹ (ರಾತ್ರಿಯ ಆಗಸದಲ್ಲಿ ಚಂದ್ರನನ್ನು ಬಿಟ್ಟರೆ ಶುಕ್ರನೇ ಪ್ರಕಾಶಮಾನವಾದ ಕಾಯ) ಬೇರೆಲ್ಲ ನಕ್ಷತ್ರಗಳಿಗಿಂತ ಎಷ್ಟು ಪ್ರಖರ? ಇದನ್ನೆಲ್ಲ ಬರಿಗಣ್ಣಿನ ಅಂದಾಜಿನ ಮೇಲೆ ಹೇಳಲು ಸಾಧ್ಯವಿಲ್ಲ. ಹಾಗಾದರೆ ಅವುಗಳನ್ನು ಅಳೆಯುವ ಮಾನ ಯಾವುದು?
    ನಕ್ಷತ್ರಗಳ (ಅಥವಾ ಬೇರಾವುದೇ ಆಕಾಶಕಾಯದ) ಕಾಂತಿಯನ್ನು ಅಳೆಯಲು ಕಾಂತಿಮಾನ ಎಂಬ ಮಾನವನ್ನು ಬಳಸುತ್ತಾರೆ. ಇದನ್ನು ಆಂಗ್ಲಭಾಷೆಯಲ್ಲಿ ಮ್ಯಾಗ್ನಿಟ್ಯೂಡ್ ಎನ್ನುತ್ತಾರೆ. ಅದರಲ್ಲೂ ಸಾಪೇಕ್ಷ ಕಾಂತಿಮಾನ (ರಿಲೇಟಿವ್ ಮ್ಯಾಗ್ನಿಟ್ಯೂಡ್ ಅಥವಾ ಅಪರೆಂಟ್ ಮ್ಯಾಗ್ನಿಟ್ಯೂಡ್) ಹಾಗೂ ನಿರಪೇಕ್ಷ ಕಾಂತಿಮಾನ (ಆಬ್ಸೊಲ್ಯೂಟ್ ಮ್ಯಾಗ್ನಿಟ್ಯೂಡ್) ಎಂಬ ಎರಡು ವಿಧದ ಕಾಂತಿಮಾನಗಳಿವೆ. ಸಾಮಾನ್ಯವಾಗಿ ನಾವು ಭೂಮಿಯಿಂದ ನೋಡುವ ಆಕಾಶಕಾಯಗಳ ಕಾಂತಿಯನ್ನು ಅಳೆಯುವುದು ಅಪರೆಂಟ್ ಮ್ಯಾಗ್ನಿಟ್ಯೂಡ್ ಆಧಾರದ ಮೇಲೆಯೇ. ಅಪರೆಂಟ್ ಮ್ಯಾಗ್ನಿಟ್ಯೂಡ್‌ನ ಅರ್ಥವೇ ಭೂಮಿಯಿಂದ ಕಾಣುವ ಪ್ರಕಾಶ ಎಂದು. ಆದ್ದರಿಂದಲೇ ಭೂಮಿಯಿಂದ ನೋಡುವಾಗ ಸೂರ್ಯನಿಗಿಂತ ಸಾವಿರಾರು ಪಟ್ಟು ಅಧಿಕ ಪ್ರಕಾಶದ ನಕ್ಷತ್ರಗಳೂ ತೀರಾ ಚಿಕ್ಕ ಬೆಳಕಿನ ಬಿಂದುಗಳಂತೆ ಕಾಣುತ್ತವೆ.

    ಪ್ರಾಚೀನ ಇತಿಹಾಸ
    ನಕ್ಷತ್ರಗಳ ಪ್ರಕಾಶವನ್ನು ಹೋಲಿಸಿನೋಡುವ ಈ ಪ್ರಯತ್ನ ತೀರಾ ಇತ್ತೀಚಿನದ್ದೇನೂ ಅಲ್ಲ. ಸುಮಾರು ಎರಡುಸಾವಿರ ವರ್ಷಗಳ ಹಿಂದೆಯೇ ಗ್ರೀಕ್ ಖಗೋಳಶಾಸ್ತ್ರಜ್ಙ ಹಿಪಾರ್ಕಸ್ ಎಂಬಾತ ನಕ್ಷತ್ರಗಳನ್ನು ಅವುಗಳ ಗಾತ್ರದ ಆಧಾರದ ಮೇಲೆ ವರ್ಗೀಕರಿಸುವ ಪ್ರಯತ್ನ ಮಾಡಿದ. ಅವನು ಸಂಜೆ ಮೊದಲು ಕಾಣುವ ನಕ್ಷತ್ರಗಳನ್ನೆಲ್ಲ ಮೊದಲ ಕಾಂತಿಮಾನದ ನಕ್ಷತ್ರಗಳೆಂದು ಕರೆದ. ಸ್ವಲ್ಪ ತಡವಾಗಿ ಕಾಣುವಂಥವನ್ನು ಎರಡನೇ ಕಾಂತಿಮಾನದ ನಕ್ಷತ್ರಗಳೆಂದು ಕರೆದ. ಹೀಗೆ ವಿಂಗಡಿಸುತ್ತಾ ಬರಿಗಣ್ಣಿನ ಮಿತಿಯ ಅಂಚಿನಲ್ಲಿ ಬರುವ, ಅಂದರೆ ತೀರಾ ಕ್ಷೀಣವಾಗಿ ಕಾಣುವ ತಾರೆಗಳನ್ನು ಆರನೇ ಕಾಂತಿಮಾನದ ತಾರೆಗಳೆಂದು ವರ್ಗೀಕರಿಸಿದ. ಈ ಮೂಲ ವರ್ಗೀಕರಣವೇ ಇಂದಿನ ಸುಧಾರಿತ ವ್ಯವಸ್ಥೆಗೆ ಕೂಡ ಅಂದು ಆತ ಮಾಡಿದ ವರ್ಗೀಕರಣ ವ್ಯವಸ್ಥೆಯೇ ಮೂಲ. (ಕೆಲವರು ಈ ಪ್ರಯತ್ನವನ್ನು ಮಾಡಿದ್ದು ಟಾಲೆಮಿ ಎನ್ನುತ್ತಾರೆ) ಅದೇನೇ ಇದ್ದರೂ ಅಂದಿನ ಪ್ರಯತ್ನಗಳು ನಿಜಕ್ಕೂ ಗಮನಾರ್ಹವೇ ಆಗಿದ್ದವು. ಏಕೆಂದರೆ ಅವನು ಯಾವುದೇ ದೂರದರ್ಶಕ ಅಥವಾ ಅಂಥ ಬೇರೆ ಯಂತ್ರಗಳೇನೂ ಇಲ್ಲದೆ ಬರಿಗಣ್ಣಿನಿಂದ ವೀಕ್ಷಣೆ ನಡೆಸಿ ನಕ್ಷತ್ರಗಳನ್ನು ವರ್ಗೀಕರಿಸಿದ. 
    ಮುಂದೆ ಟೈಕೋ ಬ್ರಾಹೆ ನಕ್ಷತ್ರಗಳ ತೋರಿಕೆಯ ಗಾತ್ರವನ್ನು (ಅಂದರೆ ಭೂಮಿಯಿಂದ ಕಾಣುವಂತೆ ನಕ್ಷತ್ರದ ಗಾತ್ರ. ನಮಗೆ ಸೂರ್ಯ ಮತ್ತು ಚಂದ್ರರ ಗಾತ್ರವನ್ನು ಮಾತ್ರ ಸ್ಪಷ್ಟವಾಗಿ ವೃತ್ತಾಕಾರದಲ್ಲಿ ಕಾಣಬಹುದೇ ಹೊರತು ಇನ್ನೆಲ್ಲ ನಕ್ಷತ್ರಗಳು ಬರೇ ಬೆಳಕಿನ ಬಿಂದುಗಳಾಗಿ ಕಾಣುತ್ತವೆ) ಅಳೆಯುವ ಸಾಹಸ ಮಾಡಿದ. ಮುಂದೆ ಬೇರೆಬೇರೆ ವಿಜ್ಞಾನಿಗಳು ಬೇರೆಬೇರೆ ರೀತಿಯಲ್ಲಿ ತಮ್ಮ ಪ್ರಯತ್ನ ಮಾಡಿದರು. ದೂರದರ್ಶಕಗಳು ಬಂದಮೇಲೆ ಈ ಪ್ರಯತ್ನಕ್ಕೆ ಬಲ ಬಂದಿತು. ಪ್ರಬಲವಾದ ದೂರದರ್ಶಕಗಳ ನೆರವಿನಿಂದ ಕಾಂತಿಮಾನವನ್ನು ಅಳೆಯಲಾರಂಭಿಸಿದಮೇಲೆ ಒಂದನೇ ಕಾಂತಿಮಾನದ ನಕ್ಷತ್ರ ಆರನೇ ಕಾಂತಿಮಾನದ ನಕ್ಷತ್ರಕ್ಕಿಂತ ನೂರುಪಟ್ಟು ಪ್ರಕಾಶಮಾನವಾಗಿರುತ್ತದೆ ಎಂದು ಅಳೆದರು. ಮುಂದೆ ನಾರ್ಮನ್ ಪೋಗ್ಸನ್ ಎಂಬಾತ ಇದನ್ನು ಲಘುಗಣಕಗಳ (ಲಾಗರಿದಮ್) ನೆರವಿನಿಂದ ಇದನ್ನು ಇನ್ನಷ್ಟು ನಿಖರವಾಗಿ ವಿವರಿಸಿದ. ಪ್ರತಿಯೊಂದು ಕಾಂತಿಮಾನದ ನಕ್ಷತ್ರ ಅದರ ಮುಂದಿನ ಕಾಂತಿಮಾನದ ನಕ್ಷತ್ರಕ್ಕಿಂತ ೨.೫೧೨ ಪಟ್ಟು ಪ್ರಕಾಶಮಾನವಾಗಿರುತ್ತದೆ ಎಂದು ವಿವರಿಸಿದ. ೨.೫೧೨ ಎಂಬುದು ನೂರರ ಐದನೇ ಘಾತಮೂಲ. (ಅಂದರೆ ೨.೫೧೨ನ್ನು ಐದು ಸಲ ಅದರಿಂದಲೇ ಗುಣಿಸಿದರೆ ನೂರು ಬರುತ್ತದೆ ಎಂದರ್ಥ.) ಈ ಸಂಖ್ಯೆಗಳಲ್ಲಿ ಇನ್ನೊಂದು ವಿಶೇಷವಿದೆ. ಅದೆಂದರೆ ಸಂಖ್ಯೆ ಕಡಿಮೆಯಾದಷ್ಟೂ ಆ ನಕ್ಷತ್ರದ ಕಾಂತಿ ಹೆಚ್ಚುತ್ತದೆ. ಇದರಲ್ಲಿ ಸೊನ್ನೆ, ಋಣಾತ್ಮಕ (ಮೈನಸ್) ಹಾಗೂ ಘನಾತ್ಮಕ (ಪ್ಲಸ್) ಸಂಖ್ಯೆಗಳಿವೆ. ಮೈನಸ್ ಸಂಖ್ಯೆಯ ನಕ್ಷತ್ರಗಳದ್ದೆಲ್ಲ ಅಧಿಕ ಕಾಂತಿ. ಅಲ್ಲಿಂದ ಸೊನ್ನೆಗೆ ಬಂದು ಪ್ಲಸ್ ಸಂಖ್ಯೆಗಳು ಹೆಚ್ಚುತ್ತ ಹೋದಂತೆಲ್ಲ ಅವುಗಳ ಕಾಂತಿ ಕಡಿಮೆಯಾಗುತ್ತ ಹೋಗುತ್ತದೆ. ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕೆಂದರೆ ಪರೀಕ್ಷೆಯಲ್ಲಿ ರ‍್ಯಾಂಕ್ ತೆಗೆದ ವಿದ್ಯಾರ್ಥಿಗಳನ್ನು ನೆನಪಿಸಿಕೊಳ್ಳಿ. ಮೊದಲ ರ‍್ಯಾಂಕ್ ತೆಗೆದ ವಿದ್ಯಾರ್ಥಿ ಎರಡನೇ ರ‍್ಯಾಂಕ್ ತೆಗೆದವನಿಗಿಂತ ಹೆಚ್ಚು ಅಂಕ ಗಳಿಸಿರುತ್ತಾನಲ್ಲವೇ? ಇದೇ ರೀತಿ ಮೊದಲ ಕಾಂತಿಮಾನದ ನಕ್ಷತ್ರ ಎರಡನೇ ಕಾಂತಿಮಾನದ ನಕ್ಷತ್ರಕ್ಕಿಂತ ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಒಂದೇ ವ್ಯತ್ಯಾಸವೆಂದರೆ ರ‍್ಯಾಂಕ್ ಪದ್ಧತಿಯಲ್ಲಿಲ್ಲದ ದಶಮಾಂಶ ಹಾಗೂ ಋಣಾತ್ಮಕ ಸಂಖ್ಯೆಗಳು ಇದರಲ್ಲಿವೆ ಅಷ್ಟೆ.
    ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಉದಾಹರಣೆಗಳನ್ನು ನೋಡೋಣ. ನಮ್ಮ ಸೂರ್ಯ ನಮ್ಮ ದೃಷ್ಟಿಗೆ ಗೋಚರವಾಗುವ ಅತ್ಯಂತ ಪ್ರಖರವಾದ ಕಾಯ. ಅದಕ್ಕಿಂತ ಎಷ್ಟೋ ಪಟ್ಟು ಪ್ರಕಾಶಮಾನವಾದ ನಕ್ಷತ್ರಗಳು ಅಸಂಖ್ಯಾತವಾಗಿದ್ದರೂ ನಮಗೆ ಅತ್ಯಂತ ಸಮೀಪದಲ್ಲಿರುವುದರಿಂದ ನಮ್ಮ ತೋರಿಕೆಗೆ ಅತ್ಯಂತ ಪ್ರಕಾಶಮಾನವಾದ ಕಾಯ ಸೂರ್ಯ. ಅದರ ಕಾಂತಿಮಾನ -೨೬.೭. ಸೂರ್ಯನನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಕಾಯ ಚಂದ್ರ. ಗಾತ್ರದಲ್ಲಿ ಸೂರ್ಯ ಮತ್ತು ಚಂದ್ರ ಎರಡೂ ಒಂದೇರೀತಿ ಕಂಡರೂ ಅವುಗಳ ತೋರಿಕೆಯ ಕಾಂತಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಚ೦ದ್ರನ ತೋರಿಕೆಯ ಕಾಂತಿಮಾನ -೧೨.೭. ಅಂದರೆ ಸೂರ್ಯ ಚಂದ್ರನ ಎರಡು ಪಟ್ಟು ಪ್ರಕಾಶಮಾನವಾಗಿದೆ ಎಂದರ್ಥವಲ್ಲ. ಮೊದಲೇ ಹೇಳಿದಂತೆ ಕಾಂತಿಮಾನದಲ್ಲಿ ಒಂದು ಸಂಖ್ಯೆ ವ್ಯತ್ಯಾಸವಾದರೆ ಕಾಂತಿಯಲ್ಲಿ ೨.೫೧೨ ಪಟ್ಟು ವ್ಯತ್ಯಾಸ ಉಂಟಾಗುತ್ತದೆ. ಅದರ ಪ್ರಕಾರ ಸೂರ್ಯನ ಕಾಂತಿ ಚಂದ್ರನ ಕಾಂತಿಗಿಂತ ನಾಲ್ಕು ಲಕ್ಷ ಪಟ್ಟು ಅಧಿಕ! ಅಂದರೆ ನಾವು ಭೂಮಿಯಿಂದ ಕಾಣುವಂತೆ ಸೂರ್ಯನ ಪ್ರಖರತೆಗೆ ಚಂದ್ರನ ಪ್ರಖರತೆ ಸರಿಸಾಟಿಯಾಗಬೇಕಾದರೆ ಆಗಸದಲ್ಲಿ ಅಂಥ ನಾಲ್ಕು ಲಕ್ಷ ಚಂದ್ರರು ಬೆಳಗಬೇಕಾಗುತ್ತದೆ. ಅಂದರೆ ಇಡೀ ಆಗಸದ ತುಂಬಾ ಎಲ್ಲಿ ನೋಡಿದರೂ ಚಂದ್ರಬಿಂಬಗಳು!

    ಗ್ರಹಗಳ ಕಾಂತಿಮಾನ
    ನಮಗೆಲ್ಲ ತಿಳಿದಿರುವಂತೆ ಶುಕ್ರ ಗ್ರಹಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಗ್ರಹ. ಅದನ್ನು ಮುಂಜಾನೆ ಅಥವಾ ಸಂಜೆಯ ನಕ್ಷತ್ರ ಎಂದು ಕರೆಯುತ್ತಾರಾದರೂ ಅದು ನಕ್ಷತ್ರವಲ್ಲ. ಅದರ ಮೇಲೆ ಇರುವ ಅಪಾರವಾದ ಇಂಗಾಲದ ಡೈ ಆಕ್ಸೈಡ್ ಅನಿಲದ ಪರಿಣಾಮ ಅದರಲ್ಲಿ ಹಸಿರುಮನೆ ಪರಿಣಾಮ ಉಂಟಾಗಿರುವುದು ಗೊತ್ತಿರುವ ವಿಷಯ. ಜೊತೆಗೆ ಇದು ತನ್ನ ಮೇಲೆ ಬೀಳುವ ಸೂರ್ಯಪ್ರಕಾಶದ ಶೇಕಡಾ ೭೯ರಷ್ಟನ್ನು ಪ್ರತಿಫಲಿಸುವುದಲ್ಲದೆ ಭೂಮಿಗೆ ಅತ್ಯಂತ ಸಮೀಪದ ಗ್ರಹವೂ ಆಗಿರುವುದರಿಂದ ಇದರ ಕಾಂತಿಮಾನ -೪.೯ ಆಗಿದ್ದು, ಚಂದ್ರನಿಲ್ಲದ ರಾತ್ರಿಗಳಲ್ಲಿ ಇದರ ಬೆಳಕು ಭೂಮಿಯ ಮೇಲೆ ವಸ್ತುಗಳ ನೆರಳನ್ನು ಮೂಡಿಸುವಷ್ಟು ಪ್ರಕಾಶಮಾನವಾಗಿರುತ್ತದೆ. ಇದು ನಕ್ಷತ್ರಗಳ ಪೈಕಿ ಅತ್ಯಂತ ಪ್ರಕಾಶಮಾನವಾದ ಸಿರಿಯಸ್ ನಕ್ಷತ್ರಕ್ಕಿಂತಲೂ ಹದಿನೆಂಟು ಪಟ್ಟು ಪ್ರಕಾಶಮಾನವಾಗಿದೆ. ಶುಕ್ರನನ್ನು ಬಿಟ್ಟರೆ ಎರಡನೇ ಅತಿಹೆಚ್ಚು ಪ್ರಕಾಶಮಾನವಾದ ಗ್ರಹ ಗುರು. ಅದರ ಕಾಂತಿಮಾನ -೨.೯೪. ಅದನ್ನು ಬಿಟ್ಟರೆ ಮಂಗಳನ ಕಾಂತಿಮಾನ -೨.೯೧.

    ನಕ್ಷತ್ರಗಳ ಕಾಂತಿಮಾನ
    ನಕ್ಷತ್ರಗಳ ವಿಷಯಕ್ಕೆ ಬಂದರೆ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ ಸಿರಿಯಸ್. ಇದರ ಕಾಂತಿಮಾನ -೧.೪೬. ಆದರೆ ಇದು ಒಂದೇ ನಕ್ಷತ್ರವಲ್ಲ. ಇದೊಂದು ದ್ವಿನಕ್ಷತ್ರ ವ್ಯವಸ್ಥೆ. ಅಂದರೆ ಒಂದು ಸಾಮಾನ್ಯ ದ್ರವ್ಯರಾಶಿ ಕೇಂದ್ರದ ಸುತ್ತ ಸುತ್ತುತ್ತಿರುವ ಎರಡು ನಕ್ಷತ್ರಗಳ ವ್ಯವಸ್ಥೆ. ಸಿರಿಯಸ್ ಎ ಮತ್ತು ಸಿರಿಯಸ್ ಬಿ ಎಂದು ಹೆಸರಿಸಲಾಗಿರುವ ಈ ಎರಡು ನಕ್ಷತ್ರಗಳ ಪೈಕಿ ಸಿರಿಯಸ್ ಎ ನಮ್ಮ ಸೂರ್ಯನ ಎರಡರಷ್ಟು ದ್ರವ್ಯರಾಶಿ ಹೊಂದಿದ್ದು ಸೂರ್ಯನಿಗಿಂತ ಇಪ್ಪತ್ತೈದು ಪಟ್ಟು ಹೆಚ್ಚು ಪ್ರಕಾಶಮಾನವಾಗಿದೆ. ಸಿರಿಯಸ್ ಬಿ ಇನ್ನೂ ಹೆಚ್ಚಿನ ದ್ರವ್ಯರಾಶಿ ಹೊಂದಿದ್ದ ದೈತ್ಯ ನಕ್ಷತ್ರವಾಗಿದ್ದು ಅದರ ಪರಿಣಾಮ ಅದರ ಇಂಧನವೆಲ್ಲ ಬೇಗನೆ ಮುಗಿದುಹೋಗಿ ಅದು ಕೆಂಪುದೈತ್ಯ ಅವಸ್ಥೆಯನ್ನು ತಲುಪಿ ತನ್ನ ಹೊರಕವಚದ ದ್ರವ್ಯರಾಶಿಯನ್ನೆಲ್ಲ ಕಳೆದ ಹನ್ನೆರಡು ಕೋಟಿ ವರ್ಷಗಳ ಹಿಂದೆ ಈಗಿನ ಶ್ವೇತಕುಬ್ಜ ಅವಸ್ಥೆಗೆ ತಲುಪಿದೆ. ಇದು ನಮ್ಮಿಂದ ೮.೬ ಜ್ಯೋತಿರ್ವರ್ಷ ದೂರದಲ್ಲಿದೆ. 
    ಎರಡನೇ ಪ್ರಕಾಶಮಾನವಾದ ನಕ್ಷತ್ರ ಕ್ಯಾನೋಪಸ್. ಇದರ ಕಾಂತಿಮಾನ -೦.೭೪. ಆದರೆ ಇದು ಸಿರಿಯಸ್‌ಗಿಂತ ಬಹಳ ಹೆಚ್ಚು ಪ್ರಕಾಶಮಾನವಾದ ನಕ್ಷತ್ರವಾದರೂ ಇದು ನಮ್ಮಿಂದ ೩೧೦ ಜ್ಯೋತಿರ್ವರ್ಷ ದೂರದಲ್ಲಿರುವುದರಿಂದ ಇದರ ಪ್ರಕಾಶ ನಮಗೆ ಸಿರಿಯಸ್‌ಗಿಂತ ಕಡಿಮೆಯಾಗಿ ಕಾಣುತ್ತದೆ. ನಮ್ಮ ಸೂರ್ಯನ ಎಂಟುಪಟ್ಟು ದ್ರವ್ಯರಾಶಿಯ ಈ ನಕ್ಷತ್ರದ ಪ್ರಕಾಶ ಸೂರ್ಯನ ಪ್ರಕಾಶಕ್ಕಿಂತಲೂ ಸುಮಾರು ೧೦೭೦೦ ಪಟ್ಟು ಅಧಿಕ. ಇದನ್ನು ಹೊರತುಪಡಿಸಿದರೆ ಪ್ರಕಾಶಮಾನವಾದ ನಕ್ಷತ್ರಗಳೆಂದರೆ ಆಲ್ಫಾ ಸೆಂಟಾರಿ, ಆರ್ಕ್ಟ್ರಸ್, ವೇಗಾ, ಕ್ಯಾಪೆಲ್ಲಾ ಮತ್ತು ರಿಗೆಲ್ ಇತ್ಯಾದಿ ನಕ್ಷತ್ರಗಳು.

    ಬರಿಗಣ್ಣಿನ ಮಿತಿ
    ನಮ್ಮ ಬರಿಗಣ್ಣಿಗೆ ಕಾಣಿಸಬಲ್ಲ ನಕ್ಷತ್ರಗಳ ಕಾಂತಿಮಾನದ ಮಿತಿ ೬. ಅಂದರೆ ಇದಕ್ಕಿಂತ ಕಡಿಮೆ ಕಾಂತಿಯ (ಕಾಂತಿ ಕಡಿಮೆಯಾದರೆ ಕಾಂತಿಮಾನದ ಸಂಖ್ಯೆ ಜಾಸ್ತಿಯಾಗುತ್ತದೆ) ನಕ್ಷತ್ರಗಳನ್ನು ನಾವು ಬರಿಗಣ್ಣಿನಿಂದ ಕಾಣಲು ಸಾಧ್ಯವಿಲ್ಲ. ಮನುಷ್ಯರ ಕಣ್ಣಿನ ಸಾಮರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತ ಹೋಗುತ್ತದಾದರೂ ಇದನ್ನು ಒಂದು ಸಾಮಾನ್ಯ ಹೋಲಿಕೆಯಾಗಿ ಬಳಸಲಡ್ಡಿಯಿಲ್ಲ. ನಮ್ಮ ಸೌರವ್ಯೂಹದಲ್ಲಿ ಶನಿಯಿಂದ ಆಚೆಗಿನ ಗ್ರಹಗಳನ್ನು ಬರಿಗಣ್ಣಿನಿಂದ ಕಾಣಲು ಸಾಧ್ಯವಿಲ್ಲ. ಆದರೆ ತೀರಾ ಗಮನವಿಟ್ಟು ನೋಡಿದರೆ ಪರಿಸ್ಥಿತಿ ಅನುಕೂಲಕರವಾಗಿದ್ದಾಗ ಯುರೇನಸ್ ಗ್ರಹ ಕಾಣುತ್ತದೆ. ಆದರೆ ಇದು ಅತ್ಯಂತ ಕ್ಷೀಣವಾಗಿ ಕಾಣುತ್ತದೆ ಮತ್ತು ಇದನ್ನು ಗುರುತಿಸಲು ಅನುಭವಿ ಕಣ್ಣುಗಳೇ ಬೇಕಾಗುತ್ತವೆ. 
    ಇನ್ನೊಂದು ಮುಖ್ಯ ವಿಷಯವನ್ನು ನೆನಪಿಡಬೇಕು. ಅದೆಂದರೆ ಭೂಮಿಯಿಂದ ಯಾವುದೇ ಕಾಯವನ್ನು ನೋಡಲು ಎರಡು ಮುಖ್ಯವಾದ ಅಂಶಗಳು ಪ್ರಭಾವ ಬೀರುತ್ತವೆ. ಮೊದಲನೆಯದಾಗಿ ಆ ಕಾಯದ ಕೋನೀಯ ಅಳತೆ, ಅಂದರೆ ಭೂಮಿಯಿಂದ ಕಂಡುಬರುವ ಅದರ ಗಾತ್ರ ಹಾಗೂ ಅದರ ಪ್ರಕಾಶ. ಈ ಎರಡು ಅಂಶಗಳ ಪೈಕಿ ಒಂದು ಇಲ್ಲದಿದ್ದರೂ ಕಾಯವನ್ನು ಭೂಮಿಯಿಂದ ಕಾಣಲು ಸಾಧ್ಯವಿಲ್ಲ. ಅದಕ್ಕೊಂದು ಅತ್ಯುತ್ತಮ ಉದಾಹರಣೆಯೆಂದರೆ ಅಮಾವಾಸ್ಯೆಯ ಚಂದ್ರ. ಅಮಾವಾಸ್ಯೆಯ ಚಂದ್ರನ ಕೋನೀಯ ಅಳತೆ ಕೂಡ ಹುಣ್ಣಿಮೆ ಚಂದ್ರನಷ್ಟೇ ಇದ್ದರೂ ಅಮಾವಾಸ್ಯೆಯ ಚಂದ್ರ ನಮಗೆ ಕಾಣಿಸುವುದಿಲ್ಲ. ಏಕೆಂದರೆ ಅಮಾವಾಸ್ಯೆಯ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಭಾಗ ನಮಗೆ ಕಾಣುವುದೇ ಇಲ್ಲ. ಹಾಗಾಗಿ ಅಮಾವಾಸ್ಯೆಯ ದಿನ ನಾವು ಚಂದ್ರನನ್ನು ನೋಡಲಾರೆವು. ಜೊತೆಗೆ ಕೆಲವರಿಗೆ ಕಾಣುವ ಕುಬ್ಜಕಾಯಗಳೆಲ್ಲ ಎಲ್ಲರಿಗೂ ಕಾಣುತ್ತವೆ ಎನ್ನಲಾಗದು. ಗುರುವಿನ ಚಂದ್ರ ಗ್ಯಾನಿಮೀಡ್ ಹಾಗೂ ಅತಿದೊಡ್ಡ ಕ್ಷುದ್ರಗ್ರಹಗಳಾದ ಸಿರಿಸ್, ವೆಸ್ಟಾ ಇತ್ಯಾದಿಗಳ ಕಾಂತಿಮಾನ ಆರಕ್ಕಿಂತ ಕಡಿಮೆಯಿದ್ದರೂ ಅವುಗಳನ್ನು ಬರಿಗಣ್ಣಿನಿಂದ ಎಲ್ಲ ಸಂದರ್ಭಗಳಲ್ಲೂ ಕಾಣಲಾಗುವುದಿಲ್ಲ. 
    ನಮ್ಮ ನೆರೆಯ ಆಂಡ್ರೋಮೆಡಾ ಗ್ಯಾಲಕ್ಸಿ ನಮ್ಮ ಬರಿಗಣ್ಣಿಗೇ ಗೋಚರವಾಗುವಷ್ಟು ಪ್ರಕಾಶಮಾನವಾದ ಗ್ಯಾಲಕ್ಸಿ. ಅದು ನಮ್ಮಿಂದ ಸುಮಾರು ಇಪ್ಪತ್ತೈದು ಲಕ್ಷ ಜ್ಯೋತಿರ್ವರ್ಷ ದೂರದಲ್ಲಿದೆ. ಅದರ ಕಾಂತಿಮಾನ +೩.೪೪. ದ್ಯುತಿಮಾಲಿನ್ಯವಿಲ್ಲದ ಹಳ್ಳಿಗಳ ಆಗಸದಲ್ಲಿ ಅದನ್ನು ಸ್ಪಷ್ಟವಾಗಿ ನೋಡಬಹುದು. ಆದರೆ ಹಗಲಿಗೂ ರಾತ್ರಿಗೂ ವ್ಯತ್ಯಾಸವೇ ತಿಳಿಯದಂತೆ ದೀಪಗಳಿಂದ ಝಗಮಗಿಸುವ ಪಟ್ಟಣಗಳಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ. 
    ಬರಿಗಣ್ಣಿನಿಂದ ನೋಡಬಹುದಾದ ನಕ್ಷತ್ರಗಳ ಕಾಂತಿಮಾನದ ಮಿತಿ ಆರು ಎಂದು ತಿಳಿದೆವು. ಹಾಗಾದರೆ ಬೇರೆಬೇರೆ ದೂರದರ್ಶಕಗಳ ದೃಷ್ಟಿಗೆ ಎಟುಕುವ ನಕ್ಷತ್ರಗಳ ಪ್ರಕಾಶದ ಮಿತಿ ಎಷ್ಟು? ಸಾಮಾನ್ಯವಾಗಿ ಎಲ್ಲರೂ ಬಳಸುವ ದುರ್ಬೀನಿನಿಂದ ಸುಮಾರು ೯.೫ ಕಾಂತಿಮಾನದ ನಕ್ಷತ್ರಗಳನ್ನು ನೋಡಬಹುದು. ಎಂದರೆ ಅವು ನಮ್ಮ ಕಣ್ಣಿಗಿಂತ ಸುಮಾರು ಇಪ್ಪತ್ತೈದು ಪಟ್ಟು ಅಧಿಕ ಸಾಮರ್ಥ್ಯ ಹೊಂದಿವೆ. ಎರಡು ಅಡಿ ವ್ಯಾಸದ ಮಸೂರಗಳನ್ನು ಹೊಂದಿದ ರಿಚಿ-ಕ್ರೇಟನ್    ದೂರದರ್ಶಕದಿಂದ ಸುಮಾರು ೨೨ ಕಾಂತಿಮಾನದ ಕಾಯಗಳನ್ನು ನೋಡಬಹುದು. ವಿಶ್ವಪ್ರಸಿದ್ಧ ಹಬಲ್ ಬಾಹ್ಯಾಕಾಶ ದೂರದರ್ಶಕದಿಂದ ೩೧.೫ ಕಾಂತಿಮಾನದ ನಕ್ಷತ್ರಗಳನ್ನು ನೋಡಬಹುದು. ನವನವೀನವಾದ ಜೇಮ್ಸ್ ವೆಬ್ ದೂರದರ್ಶಕದ ನೆರವಿನಿಂದ ೩೪ ಕಾಂತಿಮಾನದ ನಕ್ಷತ್ರಗಳನ್ನೂ ನೋಡಬಹುದು. ಜೇಮ್ಸ್ ವೆಬ್ ದೂರದರ್ಶಕ ಇದುವರೆಗೆ ನಾವು ಅನ್ವೇಷಿಸಿದ ಚಾಕ್ಷುಷ (ಅಂದರೆ ದೃಗ್ಗೋಚರ ಬೆಳಕಿನ ನೆರವಿನಿಂದ ನಕ್ಷತ್ರಗಳನ್ನು ಅನ್ವೇಷಿಸುವ ದೂರದರ್ಶಕ) ದೂರದರ್ಶಕಗಳಲ್ಲೆಲ್ಲ ಅತ್ಯಂತ ಪ್ರಬಲವಾದದ್ದು. 
    ಕಾಂತಿಮಾನ ಎಂಬುದು ಯಾವುದೇ ಕಾಯದಿಂದ ಹೊರಹೊಮ್ಮುವ ಬೆಳಕನ್ನು ಅವಲಂಬಿಸಿರುವುದರಿಂದ ಆ ಕಾಯ ದೂರದ ಬೇರೆಬೇರೆ ಆಕಾಶಕಾಯಗಳಿಂದ ಹೇಗೆ ಕಾಣುತ್ತದೆ ಎಂಬುದನ್ನು ಊಹಿಸುವುದು ಒಂದು ಆಸಕ್ತಿದಾಯಕ ಕೆಲಸ. ನಮ್ಮ ಭೂಮಿಯಿಂದ ಸೂರ್ಯ ಹೀಗೆ ಕಂಡರೆ ಬೇರೆ ಗ್ರಹಗಳ ಮೇಲಿಂದ ಹೇಗೆ ಕಾಣುತ್ತದೆ ಎಂದು ಊಹಿಸುವುದೇ ಒಂದು ಮೋಜು. ಸಹಜವಾಗಿಯೇ ದೂರದ ಯುರೇನಸ್, ನೆಪ್ಚೂನ್, ಪ್ಲೂಟೋಗಳ ಮೇಲಿನಿಂದ ಸೂರ್ಯನ ನೋಟವನ್ನು ನಮ್ಮ ಭೂಮಿಯ ಮೇಲೆ ಕಂಡಂತೆಯೇ ಕಾಣಲು ಅಸಾಧ್ಯ. ಸೂರ್ಯನನ್ನು ೫೯೦ ಕೋಟಿ ಕಿಲೋಮೀಟರ್ ದೂರದಲ್ಲಿ ಸುತ್ತುತ್ತಿರುವ ಪ್ಲೂಟೋದ ಮೇಲೆ ಸೂರ್ಯ ನಮ್ಮ ಭೂಮಿಯಿಂದ ಶುಕ್ರಗ್ರಹ ಕಂಡಂತೆ ಮಾತ್ರ ಕಾಣಲು ಸಾಧ್ಯ. ಆದರೆ ಎಷ್ಟೆಂದರೂ ಶುಕ್ರಗ್ರಹ ಸೂರ್ಯನ ಬೆಳಕನ್ನು ಪ್ರತಿಫಲಿಸುವುದು, ಆದರೆ ಸೂರ್ಯನದ್ದು ಸ್ವಯಂಪ್ರಭೆ. ಹಾಗಾಗಿ ಪ್ಲೂಟೋದ ಮೇಲೆ ಸೂರ್ಯನ ದೃಶ್ಯ ಭೂಮಿಯ ಮೇಲೆ ಶುಕ್ರ ಕಾಣುವಷ್ಟೇ ಗಾತ್ರ ಅಥವಾ ಅದಕ್ಕಿಂತ ಚಿಕ್ಕದಾಗಿ ಕಂಡರೂ ಅದರ ಕಾಂತಿ ಮಾತ್ರ ಹೆಚ್ಚಾಗಿಯೇ ಇರುತ್ತದೆ. ಪ್ಲೂಟೋದ ಮೇಲೆ ಸೂರ್ಯನ ಕಾಂತಿಮಾನ -೧೮.೨೦ ಎಂದು ಲೆಕ್ಕ ಹಾಕಲಾಗಿದೆ. ಅಂದರೆ ಅದು ಕೇವಲ ಶುಕ್ರನಿಗಿಂತ ಮಾತ್ರವಲ್ಲ, ಭೂಮಿಯ ಮೇಲೆ ಚಂದ್ರ ಹೇಗೆ ಕಾಣುತ್ತದೋ ಅದಕ್ಕಿಂತ ಸುಮಾರು ನೂರೈವತ್ತು ಪಟ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ!

    ಹಗಲಿನಲ್ಲೂ ಕಾಣುವ ಸೂಪರ್‌ನೋವಾ!
    ಸೂರ್ಯನನ್ನು ಹೊರತುಪಡಿಸಿ ಭೂಮಿಯಿಂದ ಕಂಡುಬಂದ ಬೇರೆ ನಕ್ಷತ್ರಗಳಿಗೆ ಸಂಬಂಧಿಸಿದ ಅತ್ಯಂತ ಪ್ರಕಾಶಮಾನವಾದ ವಿದ್ಯಮಾನವೆಂದರೆ ಕ್ರಿ.ಶ. ೧೦೦೬ರ ಏಪ್ರಿಲ್-ಮೇನಲ್ಲಿ ಕಂಡುಬಂದ ಸೂಪರ್‌ನೋವಾ ಸ್ಫೋಟದ ಕಾಂತಿಮಾನ -೭.೫ ಆಗಿತ್ತು. ೧೦೫೪ರಲ್ಲಿ ಕಂಡುಬಂದ ಏಡಿ ನೀಹಾರಿಕೆ ಅಥವಾ ಕ್ರ್ಯಾಬ್ ನೆಬ್ಯೂಲಾದಲ್ಲಿನ ಸೂಪರ್‌ನೋವಾ -೬ರ ಕಾಂತಿಮಾನ ಹೊಂದಿತ್ತು. ಹೀಗಾಗಿ ಸೂಪರ್‌ನೋವಾ ಸ್ಫೋಟಗಳು ಹಗಲಿನಲ್ಲೂ ಇದ್ದಕ್ಕಿದ್ದಂತೆ ದೃಗ್ಗೋಚರವಾಗುವಷ್ಟು ಪ್ರಕಾಶಮಾನವಾಗುತ್ತವೆ. ಅವುಗಳಿಂದ ಬಿಡುಗಡೆಯಾಗುವ ಪ್ರಕಾಶ, ಶಕ್ತಿ ಒಂದಿಡೀ ಗ್ಯಾಲಕ್ಸಿಯಿಂದ ಬಿಡುಗಡೆಯಾಗುವ ಶಕ್ತಿಗಿಂತಲೂ ಹೆಚ್ಚಿರುತ್ತದೆ. 
    ಗೋಚರ ಕಾಂತಿಮಾನವು ಯಾವುದೇ ನಕ್ಷತ್ರ ನಮ್ಮಿಂದ ಹೇಗೆ ಕಾಣುತ್ತದೆ ಎಂಬುದನ್ನು ತಿಳಿಸುತ್ತದೆಯೇ ಹೊರತು ಅದು ನಿಜಕ್ಕೂ ಎಷ್ಟು ಪ್ರಕಾಶಮಾನವಾಗಿದೆ ಎಂದು ತಿಳಿಸುವುದಿಲ್ಲ. ಅದನ್ನು ತಿಳಿಸಲು ನಿರಪೇಕ್ಷ ಕಾಂತಿಮಾನ (ಆಬ್ಸೊಲ್ಯೂಟ್ ಮ್ನಾಗ್ನಿಟ್ಯೂಡ್) ಎಂಬ ಇನ್ನೊಂದು ಅಳತೆಯನ್ನು ಬಳಸುತ್ತಾರೆ. ಈ ಅಳತೆಯಲ್ಲಿ ಎಲ್ಲ ನಕ್ಷತ್ರಗಳನ್ನು ಒಂದು ನಿರ್ದಿಷ್ಟ ದೂರದಲ್ಲಿ ನಿಲ್ಲಿಸಿದರೆ ಅವುಗಳ ಪ್ರಕಾಶ ಹೇಗೆ ಕಾಣುತ್ತದೆ ಎಂದು ಲೆಕ್ಕಹಾಕಿ ಅದರ ಮೇಲೆ ಅವುಗಳ ಕಾಂತಿಮಾನವನ್ನು ನಿರ್ಧರಿಸುತ್ತಾರೆ. ಭುಮಿಯಿಂದ ೧೦ ಪಾರ್ಸೆಕ್ (೩೨.೬ ಜ್ಯೋತಿರ್ವರ್ಷ) ದೂರದಲ್ಲಿಟ್ಟರೆ ಆ ನಕ್ಷತ್ರ ಹೇಗೆ ಕಾಣುತ್ತದೆ ಎಂದು ಲೆಕ್ಕಹಾಕಿ ಅದರ ಆಧಾರದ ಮೇಲೆ ನಕ್ಷತ್ರದ ನಿರಪೇಕ್ಷ ಕಾಂತಿಮಾನವನ್ನು ನಿರ್ಧರಿಸುತ್ತಾರೆ. ಕೆಲವೊಂದು ಪ್ರಕಾಶಮಾನವಾದ ನಕ್ಷತ್ರಗಳು ಅಷ್ಟು ದೂರದಲ್ಲಿದ್ದರೆ ಅವು ನಮ್ಮ ಸೌರವ್ಯೂಹದ ಗ್ರಹಗಳ ಪ್ರಕಾಶವನ್ನೆಲ್ಲ ಹಿಮ್ಮೆಟ್ಟಿಸಿ ಅತ್ಯಂತ ಪ್ರಕಾಶಮಾನವಾಗಿ ಕಾಣಿಸುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಉದಾಹರಣೆಗೆ ರಿಗೆಲ್‌ನ ನಿರಪೇಕ್ಷ ಕಾಂತಿಮಾನ -೭ ಹಾಗೂ ಬೀಟಲ್‌ಗೀಸ್‌ನದ್ದು -೫.೬. ನಮ್ಮ ಆಗಸದಲ್ಲಿ ಇವು ಹತ್ತು ಪಾರ್ಸೆಕ್ ದೂರದಲ್ಲಿದ್ದರೆ ಶುಕ್ರಗ್ರಹಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ.

    ಕಾಲಾಂತರದಲ್ಲಿ ಬದಲಾವಣೆ
    ಗೋಚರ ಕಾಂತಿಮಾನ ಒಂದೇ ರೀತಿ ಇರುವಂಥದ್ದಲ್ಲ. ಅದು ಬದಲಾಗುತ್ತದೆ. ಈ ಬದಲಾಗುವಿಕೆಯು ನೀವು ನಕ್ಷತ್ರವನ್ನು ಭೂಮಿಯ ಯಾವ ದಿಕ್ಕಿನಿಂದ ನೋಡುತ್ತಿದ್ದೀರಿ, ಭೂಮಿಯ ವಾತಾವರಣದ ಮಾಲಿನ್ಯ, ಸುತ್ತಮುತ್ತಲಿನ ಬೆಳಕಿನ ಮಾಲಿನ್ಯ ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಜೊತೆಗೆ ವಿಶ್ವವು ವಿಸ್ತರಿಸುತ್ತಿರುವುದರಿಂದ ಇಂದು ಪ್ರಕಾಶಮಾನವಾಗಿ ಕಾಣುತ್ತಿರುವ ಎಷ್ಟೋ ನಕ್ಷತ್ರಗಳು ಕೆಲವಾರು ಕೋಟಿ ವರ್ಷಗಳು ಕಳೆದಬಳಿಕ ನಮ್ಮಿಂದ ದೂರ ಸರಿಯಬಹುದು ಹಾಗೂ ಅವುಗಳ ಕಾಂತಿ ಕಡಿಮೆಯಾಗಬಹುದು. ಅಥವಾ ಅವು ತಮ್ಮ ದ್ರವ್ಯರಾಶಿಯನ್ನೆಲ್ಲ ಖಾಲಿಮಾಡಿ ಸೂಪರ್‌ನೋವಾ ಆಗಿ ಸಿಡಿದು ಅಂತ್ಯಕಾಣಬಹುದು. ಅಥವಾ ಕಡಿಮೆ ದ್ರವ್ಯರಾಶಿಯ ನಕ್ಷತ್ರವಾದರೆ ಕೆಂಪುದೈತ್ಯನಾಗಿ ನಂತರ ಶ್ವೇತಕುಬ್ಜವಾಗಿ ಅವಸಾನ ಕಾಣಬಹುದು. ಉದಾಹರಣೆಗೆ ಇಂದು ನಮಗೆ ಗೋಚರವಾಗುವ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ ಸಿರಿಯಸ್. ಅದು ಇನ್ನು ೨೧೦,೦೦೦ ವರ್ಷಗಳವರೆಗೆ ನಮ್ಮ ಆಗಸದ ಅತ್ಯಂತ ಪ್ರಕಾಶಮಾನ ನಕ್ಷತ್ರವಾಗಿಯೇ ಉಳಿಯುತ್ತದೆ. ನಂತರ ನಮ್ಮಿಂದ ದೂರ ಸರಿಯುವ ಕಾರಣ ಅದರ ಪ್ರಕಾಶ ಕಡಿಮೆಯಾಗುತ್ತದೆ. 
    ಇನ್ನೊಂದು ವಿಷಯವೇನೆಂದರೆ ಭೂಮಿಯಿಂದ ಬರಿಗಣ್ಣಿಗೆ ಒಂದೇ ನಕ್ಷತ್ರವಾಗಿ ಕಾಣುವ ಎಷ್ಟೋ ತಾರೆಗಳು ವಾಸ್ತವವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ನಕ್ಷತ್ರಗಳ ವ್ಯವಸ್ಥೆಯಾಗಿದೆ! ಅತ್ಯಂತ ಪ್ರಕಾಶಮಾನವಾದ ಸಿರಿಯಸ್ ನಕ್ಷತ್ರವೇ ಸಿರಿಯಸ್ ಎ ಎಂಬ ಒಂದು ಪ್ರಕಾಶಮಾನವಾದ ಹಾಗೂ ಸಿರಿಯಸ್ ಬಿ ಎಂಬ ಒಂದು ಮಬ್ಬಾದ ಶ್ವೇತಕುಬ್ಜ ತಾರೆಯ ಸಂಗಮವಾಗಿದೆ. ನಮಗೆ ಅತ್ಯಂತ ಹತ್ತಿರದ ನಕ್ಷತ್ರವಾದ ಆಲ್ಫಾ ಸೆಂಟಾರಿ ಎಂಬುದು ಆಲ್ಫಾ ಸೆಂಟಾರಿ ಎ, ಆಲ್ಫಾ ಸೆಂಟಾರಿ ಬಿ ಹಾಗೂ ಪ್ರಾಕ್ಸಿಮಾ ಸೆಂಟಾರಿ ಎಂಬ ಮೂರು ನಕ್ಷತ್ರಗಳ ಸಂಗಮ. ಹಾಗಾಗಿ ಎಷ್ಟೋ ನಕ್ಷತ್ರಗಳ ಗೋಚರ ಕಾಂತಿಮಾನ ನಿಜವಾಗಿ ಒಂದು ನಕ್ಷತ್ರದ ಕಾಂತಿಮಾನ ಆಗಿರುವುದೇ ಇಲ್ಲ!
    ಒಟ್ಟಿನಲ್ಲಿ ಕಾಂತಿಮಾನ ಎಂಬುದು ನಕ್ಷತ್ರವೊಂದರ ಪ್ರಕಾಶವನ್ನು ವ್ಯವಸ್ಥಿತವಾಗಿ ಅಳೆದು ಬೇರೆಬೇರೆ ನಕ್ಷತ್ರಗಳನ್ನು ಅವುಗಳ ಪ್ರಕಾಶದ ಆಧಾರದ ಮೇಲೆ ವಿಂಗಡಿಸುವ ಸುಸಜ್ಜಿತ ವ್ಯವಸ್ಥೆಯಾಗಿದೆ.
 

Category:Education



ProfileImg

Written by Srinivasa Murthy

Verified