ಜಾದೂಗಾರ

ಮೇಘಾಲಯದ ಗಾರುಡಿಗನ ಕಥೆ

ProfileImg
20 Mar '24
13 min read


image

      ಅಂದು ಭಾನುವಾರವಾದ್ದರಿಂದ ಕಚೇರಿಗೆ ಹೋಗುವ ಗಡಿಬಿಡಿ ಇರಲಿಲ್ಲ. ನಿಧಾನಕ್ಕೆ ಎದ್ದು ನಿತ್ಯಕರ್ಮಗಳನ್ನೆಲ್ಲ ಮುಗಿಸಿ ಕಾಫಿ, ತಿಂಡಿ ಮುಗಿಸಿ ಲ್ಯಾಪ್‌ಟಾಪ್‌ ತೆಗೆದೆ. ಒಂದು ವಾರದಿಂದ ಇಮೇಲ್‌ ನೋಡಿರಲಿಲ್ಲ. ಆದರೆ ಅವತ್ತು ಇಮೇಲ್‌ ತೆಗೆದು ನೋಡುತ್ತಿದ್ದಂತೆ ನನಗೊಂದು ಆಶ್ಚರ್ಯ ಕಾದಿತ್ತು. ಖ್ಯಾತ ಜಾದೂಗಾರ ಬೆನ್‌ ಫ್ಯಾಂಟಮ್‌ನಿಂದ ಒಂದು ಮೇಲ್‌ ಬಂದಿತ್ತು! ಎರಡು ದಿನಗಳ ಹಿಂದೆಯೇ ಬಂದಿದ್ದ ಅದರ ಒಕ್ಕಣೆ ಹೀಗಿತ್ತು “ಪ್ರಿಯ ಮಿತ್ರ, ನೀವು ಜಾದೂ ವಿದ್ಯೆಯಲ್ಲಿ ಆಸಕ್ತಿ ಹೊಂದಿದ್ದೀರಿ ಹಾಗೂ ಪ್ರಾಣಿಪಕ್ಷಿಗಳ ಬಗ್ಗೆ ಬಹಳ ಪ್ರೀತಿ ಹೊಂದಿದ್ದೀರಿ ಎಂಬುದು ನಿಮ್ಮ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ನೋಡಿ ತಿಳಿಯಿತು. ಆದ್ದರಿಂದ ನಿಮ್ಮನ್ನು ನನ್ನ ಖಾಸಗಿ ಅರಣ್ಯಕ್ಕೆ ಆಹ್ವಾನಿಸುತ್ತಿದ್ದೇನೆ. ನೀವು ಕೆಲವು ದಿನಗಳ ಮಟ್ಟಿಗೆ ಬಿಡುವು ಮಾಡಿಕೊಂಡು ನನ್ನ ಅತಿಥಿಯಾಗಿ ಬಂದಿರುವುದಾದರೆ ನನಗೆ ಬಹಳ ಸಂತೋಷವಾಗುತ್ತದೆ. ನೀವು ಯಾವಾಗ ಬಿಡುವಾಗಿದ್ದೀರಿ ಎಂದು ಮೊದಲೇ ತಿಳಿಸಿದರೆ ಆ ದಿನಕ್ಕೆ ನಿಮ್ಮ ವಿಮಾನದ ಟಿಕೆಟನ್ನು ನಾನೇ ಬುಕ್‌ ಮಾಡಿ ಕಳುಹಿಸುತ್ತೇನೆ. ಅಲ್ಲದೆ ನಿಲ್ದಾಣದಿಂದ ನಿಮ್ಮನ್ನು ನನ್ನ ಮನೆಗೆ ಕರೆಸಿಕೊಳ್ಳುವ ಜವಾಬ್ದಾರಿಯೂ ನನ್ನದೇ. ನೀವು ಯಾವಾಗ ಬಿಡುವಾಗಿರುತ್ತೀರಿ ಎಂದು ನೋಡಿಕೊಂಡು ಕನಿಷ್ಠ ಒಂದು ವಾರದ ಮಟ್ಟಿಗಾದರೂ ನನ್ನ ಅತಿಥಿಯಾಗಿ ಬರಲು ನಿಮಗೆ ಆಹ್ವಾನಿಸುತ್ತಿದ್ದೇನೆ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುತ್ತೇನೆ. ಧನ್ಯವಾದಗಳು” ಎಂದು ಅದರಲ್ಲಿ ಬರೆದಿತ್ತು. 

       ನಾನು ಕಥೆಯನ್ನು ಮುಂದುವರೆಸುವ ಮೊದಲು ಬೆನ್‌ ಫ್ಯಾಂಟಮ್‌ ಬಗ್ಗೆ ನಿಮಗೆ ಒಂದಿಷ್ಟು ಹೇಳಲೇಬೇಕು. ಆತ ಇಂಗ್ಲೆಂಡಿನವನು. ಸುಮಾರು ಐವತ್ತೈದು ವರ್ಷ ವಯಸ್ಸಿನ, ಆರಡಿ ಎತ್ತರದ ಆಜಾನುಬಾಹು. ಆದರೆ ಅವನನ್ನು ನೋಡಿದರೆ ಐವತ್ತೈದು ವಯಸ್ಸಾಗಿದೆ ಎಂದು ಯಾರೂ ಹೇಳಲು ಸಾಧ್ಯವಿರಲಿಲ್ಲ. ಹೆಚ್ಚೆಂದರೆ ಮೂವತ್ತೈದು ವರ್ಷ ಇರಬಹುದೆನ್ನಿಸುತ್ತಿತ್ತು. ಅಷ್ಟೊಂದು ಯುವಕನಾಗಿ ಕಾಣಿಸುತ್ತಿದ್ದ. ಅವನು ಜಗತ್ತಿನ ಸರ್ವಶ್ರೇಷ್ಠ ಜಾದೂಗಾರ ಎಂದು ಪರಿಗಣಿಸಲ್ಪಿಟ್ಟಿದ್ದ. ಹ್ಯಾರಿ ಹೌದಿನಿ ಮತ್ತು ಡೇವಿಡ್‌ ಕಾಪರ್‌ಫೀಲ್ಡ್‌ ಜೊತೆ ಅವನನ್ನು ಹೋಲಿಸಲಾಗುತ್ತಿತ್ತು. ಜಾದೂ ವಿದ್ಯೆಯಿಂದಲೇ ಅವನು ಸಂಪಾದಿಸಿದ್ದ ಆಸ್ತಿ ಸುಮಾರು ಹತ್ತು ಬಿಲಿಯನ್‌ ಡಾಲರ್‌ಗಿಂತಲೂ ಅಧಿಕವಾಗಿತ್ತು. ಭಾರತದ ಕರೆನ್ಸಿಯಲ್ಲಿ ಅದರ ಮೌಲ್ಯ ಸುಮಾರು ಎಂಬತ್ತು ಸಾವಿರ ಕೋಟಿ ರೂಪಾಯಿಗಿಂತ ಅಧಿಕ. ಆದರೆ ಅಷ್ಟೊಂದು ಸಿರಿವಂತನಾಗಿದ್ದರೂ ಆತ ಪ್ರಚಾರಪ್ರಿಯನಲ್ಲ ಅಥವಾ ಅಹಂಕಾರಿಯೂ ಅಲ್ಲ. ತುಂಬಾ ಸಂಕೋಚ ಸ್ವಭಾವದವನು. ಭಾರತವನ್ನು ಕಂಡರೆ ಅವನಿಗೆ ಅಪಾರ ಪ್ರೀತಿ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆಯೇ ಮೇಘಾಲಯದ ಹಳ್ಳಿಯೊಂದರಲ್ಲಿ ಎರಡು ಸಾವಿರ ಎಕರೆ ಭೂಮಿ ಖರೀದಿಸಿ ಅದರಲ್ಲಿ ತನ್ನದೊಂದು ಸ್ವಂತ ಪ್ರಾಣಿಸಂಗ್ರಹಾಲಯವನ್ನೇ ನಿರ್ಮಿಸಿದ್ದ. ಆದರೆ ಅದು ಸಂಪೂರ್ಣವಾಗಿ ಅವನ ಖರ್ಚಿನಲ್ಲೇ ನಡೆಯುತ್ತಿತ್ತು. ಅಂದರೆ ಅಲ್ಲಿ ವೀಕ್ಷಕರಿಗೆ ಪ್ರವೇಶವಿರಲಿಲ್ಲ. ಅದು ಸಂಪೂರ್ಣವಾಗಿ ಅವನು ತನ್ನ ಸ್ವಂತ ಖುಷಿಗಾಗಿ ಮಾಡಿಕೊಂಡಿದ್ದ. ಆದರೆ ಆಸಕ್ತರನ್ನು ಅಲ್ಲಿಗೆ ಆಹ್ವಾನಿಸಿ ಉಚಿತವಾಗಿ ಎಲ್ಲವನ್ನೂ ತೋರಿಸುತ್ತಿದ್ದ. ನನಗೂ ಅವನ ಬಗ್ಗೆ, ಅವನ ಪ್ರಾಣಿಸಂಗ್ರಹಾಲಯದ ಬಗ್ಗೆ ಬಹಳ ಆಸಕ್ತಿ ಇತ್ತು. ಫೇಸ್‌ಬುಕ್‌ನಲ್ಲಿ ಅದರ ಪುಟವನ್ನು ಲೈಕ್‌ ಮಾಡಿದ್ದೆ. ಅಲ್ಲದೆ ಅವನಿಗೆ ಫೇಸ್‌ಬುಕ್‌ನಲ್ಲಿ ಖಾಸಗಿಯಾಗಿ ಮೆಸೇಜ್‌ ಸಹ ಮಾಡಿದ್ದೆ. ಅದನ್ನು ನೋಡಿ ಅವನು ನನಗೆ ಇಮೇಲ್‌ ಮಾಡಿದ್ದ. ನನಗೆ ನಿಧಿ ಸಿಕ್ಕಷ್ಟು ಸಂತೋಷವಾಗಿತ್ತು. ಸಾಧ್ಯವಿದ್ದರೆ ಅವತ್ತೇ ಹೊರಡಲು ನಾನು ಸಿದ್ಧನಾಗಿದ್ದೆ. ಆದರೆ ಮೇಘಾಲಯವೆಂದರೆ ಪಕ್ಕದೂರಿಗೆ ಹೋಗಿಬಂದಷ್ಟು ಸುಲಭವಂತೂ ಅಲ್ಲವಲ್ಲ. ಹಾಗಾಗಿ ಅದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಕನಿಷ್ಠ ಒಂದು ವಾರದ ಕಾಲಾವಕಾಶವಾದರೂ ಬೇಕಿತ್ತು. ಹಾಗಾಗಿ ಇನ್ನೊಂದು ವಾರದಲ್ಲಿ ಬರುವುದಾಗಿ ಅವನ ಇಮೇಲ್‌ಗೆ ಪ್ರತ್ಯುತ್ತರಿಸಿದೆ. ಕೆಲವೇ ನಿಮಿಷಗಳಲ್ಲಿ ಅವನ ಉತ್ತರ ಬಂತು. ನಾನು ಬರುತ್ತಿದ್ದೇನೆಂದು ತಿಳಿಸಿದ್ದರಿಂದ ಬಹಳ ಖುಷಿಯಾಗಿದೆ ಎಂದೂ, ಜೊತೆಗೆ ವಿಮಾನದ ಟಿಕೆಟನ್ನು ಮಾಡಿ ಕಳುಹಿಸುವುದಾಗಿಯೂ, ಯಾವುದೇ ಕಾರಣಕ್ಕೂ ನಾನು ಅದನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿಲ್ಲವೆಂದು ಖಡಾಖಂಡಿತವಾಗಿ ಅದರಲ್ಲಿ ತಿಳಿಸಿದ್ದ. ಅದೇ ಶನಿವಾರ ಹೊರಡುವುದೆಂದು ನಿರ್ಧರಿಸಿದೆ. ಮೊದಲು ನಾನು ಊರಿನಿಂದ ಬೆಂಗಳೂರಿಗೆ ಹೋಗಬೇಕಿತ್ತು. ಶುಕ್ರವಾರ ರಾತ್ರಿ ಊರಿನಿಂದ ಬಸ್ಸು ಹತ್ತಿದರೆ ಶನಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿರುತ್ತೇನೆ. ಅಲ್ಲಿಂದ ಶಿಲ್ಲಾಂಗ್‌ಗೆ ವಿಮಾನದಲ್ಲಿ ಪ್ರಯಾಣ. ಇಷ್ಟನ್ನು ನಿರ್ಧರಿಸಿ ಅವನ ಮೇಲ್‌ಗೆ ಪ್ರತ್ಯುತ್ತರಿಸಿದೆ. ಅಂದು ಸಂಜೆಯೊಳಗೆ ಶನಿವಾರ ಬೆಳಗ್ಗಿನ ವಿಮಾನದಲ್ಲಿ ನನಗೆ ಟಿಕೆಟ್‌ ಕಾದಿರಿಸಿ ಕಳುಹಿಸಿದ. 

       ನನ್ನಿಂದ ಒಂದು ವಾರ ಕಾಯುವುದಂತೂ ಸುಲಭವಾಗಿರಲಿಲ್ಲ. ಆಫೀಸಿನಲ್ಲಿ ರಜಕ್ಕೆ ಕೇಳಿದರೆ ಬಾಸ್‌ ಒಪ್ಪುವುದಿಲ್ಲವೆಂದು ಖಂಡಿತ ಗೊತ್ತಿತ್ತು. ಅದರಲ್ಲೂ ಎರಡು ವಾರ ಎಂದರೆ ಖಂಡಿತ ಎಗರಿಬೀಳುತ್ತಾನೆ. ಹಾಗಾಗಿ ಶನಿವಾರ ಬೆಳಿಗ್ಗೆ ಹುಷಾರಿಲ್ಲವೆಂದು ಅವನಿಗೊಂದು ಮೆಸೇಜು ಹಾಕಿದರೆ ಆಯಿತು ಎಂದುಕೊಂಡು ವಿಷಯವನ್ನು ಅವನಿಗೆ ಶುಕ್ರವಾರದವರೆಗೂ ತಿಳಿಸಲಿಲ್ಲ. ಎಲ್ಲವೂ ನಾನಂದುಕೊಂಡಂತೆಯೇ ನಡೆಯಿತು. ಶನಿವಾರ ಬೆಳಿಗ್ಗೆ ಶಿಲ್ಲಾಂಗಿಗೆ ಹೋಗುವ ವಿಮಾನ ಏರಿದ್ದೂ ಆಯಿತು. 

       ಶಿಲ್ಲಾಂಗ್‌ ಏರ್‌ಪೋರ್ಟಿನಲ್ಲಿ ನಾನು ಇಳಿದು ಹೊರಬರುತ್ತಿದ್ದಂತೆಯೇ ಸುಮಾರು ಐದೂವರೆ ಅಡಿ ಎತ್ತರದ ನಗುಮೊಗದ ವ್ಯಕ್ತಿಯೊಬ್ಬ ಎದುರುಗೊಂಡ. “ಸರ್‌, ಯು ಆರ್‌ ಮನೋಜ್‌, ಅವರ್‌ ಫ್ಯಾಂಟಮ್‌ ಸರ್‌ ವಾಸ್‌ ಟೆಲ್ಲಿಂಗ್‌ ಎ ಲಾಟ್‌ ಎಬೌಟ್‌ ಯು. ಐ ಹ್ಯಾವ್‌ ಕಮ್‌ ಟು ಪಿಕ್‌ ಯು” ಎಂದು ಇಂಗ್ಲಿಷಿನಲ್ಲಿ ಉಸುರಿದ. ನಾನು ಅವನ ಕೈಕುಲುಕಿದ. ಬಳಿಕ ಬೇಡಬೇಡವೆಂದರೂ ಕೇಳದೆ ನನ್ನ ಒಂದು ಸೂಟ್‌ಕೇಸ್‌ ಮತ್ತು ಒಂದು ಬ್ಯಾಗನ್ನು ತಾನೇ ಹಿಡಿದು ಕಾರಿನ ಡಿಕ್ಕಿಯಲ್ಲಿ ಹಾಕಿದ. ಕಾರು ವೇಗವಾಗಿ ಫ್ಯಾಂಟಮ್‌ ಕಾಡಿನತ್ತ ಸಾಗಿತು. ಏರ್‌ಪೋರ್ಟಿನಿಂದ ಅಲ್ಲಿಗೆ ಸುಮಾರು ಐವತ್ತು ಕಿಲೋಮೀಟರ್‌ ಇತ್ತು. ಆ ವ್ಯಕ್ತಿ ಕೂಡ ಫ್ಯಾಂಟಮ್‌ನಂತೆಯೇ ಸ್ನೇಹಜೀವಿ ಎಂದು ನನಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಫ್ಯಾಂಟಮ್‌ ಬಗ್ಗೆ ಅವನಿಗಿದ್ದ ಅಪಾರವಾದ ಗೌರವ ಅವನ ಪ್ರತಿ ಮಾತಿನಲ್ಲೂ ವ್ಯಕ್ತವಾಗುತ್ತಿತ್ತು. “ನನಗೆ ಸಾಮಾನ್ಯವಾಗಿ ಈ ಇಂಗ್ಲೆಂಡಿನವರೆಂದರೆ ಆಗುವುದಿಲ್ಲ. ನಮ್ಮ ದೇಶವನ್ನು ಶತಮಾನಗಳ ಕಾಲ ಲೂಟಿ ಮಾಡಿದವರೆಂಬ ಕೆಟ್ಟ ಕೋಪ. ಆದರೆ ಫ್ಯಾಂಟಮ್‌ ಸರ್‌ನ್ನು ನೋಡಿದಮೇಲೆ ಅವರಲ್ಲೂ ಒಳ್ಳೆಯವರಿದ್ದಾರೆ ಎಂದು ನನಗೆ ಗೊತ್ತಾಯಿತು” ಎಂದ. ತನ್ನ ಹೆಸರನ್ನು ತಮಾಂಗ್‌ ಎಂದು ಪರಿಚಯಿಸಿಕೊಂಡ. ಫ್ಯಾಂಟಮ್‌ ಅವನಿಗೆ ತಿಂಗಳಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಸಂಬಳ ಕೊಡುತ್ತಿದ್ದನಂತೆ. “ಈ ಭೂಮಿಯ ಮೇಲೆ ಯಾವ ಮಾಲೀಕ ತಾನೇ ತನ್ನ ಕಾರಿನ ಡ್ರೈವರಿಗೆ ಇಷ್ಟು ಹಣ ಕೊಡುತ್ತಾನೆ ಹೇಳಿ ಸಾಬ್?‌ ಇಷ್ಟಕ್ಕೂ ಅವರು ನನಗೆ ಇಷ್ಟೊಂದು ಹಣ ಕೊಡುತ್ತಿದ್ದರೂ ಈ ಕಾರನ್ನು ನಾನು ಬಿಡುವುದಕ್ಕಿಂತ ಅವರು ಬಿಡುವುದೇ ಹೆಚ್ಚು. ಇವತ್ತು ಸಹ ಅವರೇ ಬರುವವರಿದ್ದರು. ಆದರೆ ನಿಮ್ಮ ಸ್ವಾಗತಕ್ಕಾಗಿ ಏನೇನೋ ಸಿದ್ಧತೆ ಮಾಡುತ್ತಿದ್ದಾರೆ, ಹಾಗಾಗಿ ಅವರು ಬರುವ ಬದಲು ನನ್ನನ್ನು ಕಳುಹಿಸಿದ್ದಾರೆ” ಎಂದ. 

       ಫ್ಯಾಂಟಮ್‌ ವನಕ್ಕೆ ನಾವು ಸಮೀಪವಾಗುತ್ತಿದ್ದಂತೆ ಅಲ್ಲಿನ ಪರಿಸರವನ್ನು ಕಂಡು ನನ್ನ ಮನಸ್ಸು ಮುದಗೊಂಡಿತು. ಸುತ್ತೆಲ್ಲ ಹಸಿರು ಹೊದ್ದ ಕಾಡುಗಳು. ಮೇಘಾಲಯ ಎಂದರೆ ಕೇಳಬೇಕೆ? ಜಗತ್ತಿನಲ್ಲೇ ಅತ್ಯಧಿಕ ಮಳೆ ಬೀಳುವ ಚಿರಾಪುಂಜಿ ಮತ್ತು ಮಾಸಿನ್ರಮ್‌ ಪ್ರದೇಶಗಳಿರುವ ರಾಜ್ಯ. ಮಟ್ಟಸವಾದ ರಸ್ತೆ ಮತ್ತು ಹೆಚ್ಚಿನ ಟ್ರಾಫಿಕ್‌ ಇಲ್ಲವಾದ್ದರಿಂದ ಕೇವಲ ಅರ್ಧ ಗಂಟೆಯಲ್ಲೇ ನಾವು ಕಾಡನ್ನು ತಲುಪಿದೆವು. ಅಲ್ಲಿಗೆ ಹೋದಾಗ ಅದೊಂದು ಪ್ರಾಣಿ ಸಂಗ್ರಹಾಲಯವೆಂದು ಅನ್ನಿಸಲೇ ಇಲ್ಲ. ಏಕೆಂದರೆ ಪ್ರಾಣಿಗಳು ಅವುಗಳ ಸ್ವಾಭಾವಿಕ ವಾತಾವರಣದಲ್ಲಿ ಹೇಗೆ ಇರುತ್ತವೆಯೋ ಹಾಗೆಯೇ ಓಡಾಡಿಕೊಂಡಿದ್ದವು. ಆದರೆ ನಮ್ಮ ದೇಶದವಲ್ಲದ ಕೆಲವು ಪ್ರಾಣಿಗಳನ್ನು ಅಲ್ಲಿ ಬೃಹತ್‌ ಕೋಟೆಯೊಂದರೊಳಗೆ ಪ್ರತ್ಯೇಕವಾಗಿ ಸಾಕಲಾಗುತ್ತಿತ್ತು. ಅದಕ್ಕೆ ಹದಿನೈದು ಅಡಿ ಎತ್ತರದ ಗೋಡೆಯನ್ನು ಕಟ್ಟಿದ್ದರು. ಹಿಂದಿನ ಕಾಲದಲ್ಲಿ ರಾಜರು ತಮ್ಮ ರಾಜ್ಯವನ್ನು ರಕ್ಷಿಸಿಕೊಳ್ಳಲು ಕಟ್ಟುತ್ತಿದ್ದ ಮಹಾನ್‌ ಕೋಟೆಗಳಂತೆಯೇ ಇತ್ತು. “ಅಲ್ಲಿ ವಿದೇಶಗಳ ಅನೇಕ ತಳಿಯ ಪ್ರಾಣಿಗಳಿವೆ. ಅದನ್ನೆಲ್ಲ ನಿಮಗೆ ಫ್ಯಾಂಟಮ್‌ ಸರ್‌ ಅವರೇ ತೋರಿಸಲಿದ್ದಾರೆ. ನಾವೀಗ ಅವರ ಮನೆಗೆ ಹೋಗೋಣ. ನಿಮಗೆ ಊಟ ಹಾಗೂ ವಿಶ್ರಾಂತಿಯ ವ್ಯವಸ್ಥೆ ಮಾಡಿದ್ದಾರೆ. ವಿಶ್ರಾಂತಿಯ ಬಳಿಕ ಸಂಜೆ ಅವರೇ ನಿಮ್ಮನ್ನು ಕರೆದೊಯ್ಯಲಿದ್ದಾರೆ” ಎಂದು ಹೇಳಿ ತಮಾಂಗ್‌ ನನ್ನನ್ನು ಫ್ಯಾಂಟಮ್‌ ಭವನದತ್ತ ಕರೆದೊಯ್ದ. 

       ಆ ಭವನ ನಿಜಕ್ಕೂ ಒಂದು ದೊಡ್ಡ ಅರಮನೆಯೇ ಆಗಿತ್ತು. ನಾನು ಕಾರಿನಿಂದಿಳಿದು ಆ ಮನೆಯ ವೈಭವವನ್ನು ನೋಡುತ್ತ ಬೆರಗಾಗಿ ನಿಂತಿದ್ದೆ. ಅಷ್ಟರಲ್ಲಿ ಅವನೇ ಒಳಗಿನಿಂದ ಬಂದು ನನ್ನನ್ನು ಸ್ವಾಗತಿಸಿದ. ಇದುವರೆಗೂ ಅವನನ್ನು ಮುಖತಃ ಭೇಟಿಯಾಗದಿದ್ದರೂ ಟಿವಿಯಲ್ಲಿ ಹಾಗೂ ಪೇಪರಿನಲ್ಲಿ ಬೇಕಾದಷ್ಟು ಸಲ ನೋಡಿದ್ದೆ. ಹಾಗಾಗಿ ಅವನನ್ನು ಗುರುತಿಸಲು ನನಗೆ ಹೆಚ್ಚು ಸಮಯವೇನೂ ಹಿಡಿಯಲಿಲ್ಲ. ಒಳಕ್ಕೆ ಹೋದೊಡನೆ ನನ್ನನ್ನು ಸೋಫಾದ ಮೇಲೆ ಕೂರಿಸಿ ಕುಡಿಯಲಿಕ್ಕೆ ಏನು ತೆಗೆದುಕೊಳ್ಳುತ್ತೀ ಎಂದು ವಿಚಾರಿಸಿಕೊಂಡ. ನಾನು ಏನನ್ನಾದರೂ ಹೇಳುವ ಮೊದಲೇ ಗ್ರೀನ್‌ ಟೀ ಆರೋಗ್ಯಕ್ಕೆ ಒಳ್ಳೆಯದು, ಅದನ್ನೇ ತರುತ್ತೇನೆಂದು ಒಳಹೊಕ್ಕ. 

       ನಾನು ಮನೆಯ ಹಜಾರದಲ್ಲಿ ಕುಳಿತು ಸುತ್ತೆಲ್ಲ ನೋಡತೊಡಗಿದೆ.  ಹಜಾರದ ಒಂದು ಮೂಲೆಯಲ್ಲಿ ಆಳೆತ್ತರದ ಫೊಟೋದ ಕಟ್ಟೊಂದು ಕಾಣಿಸಿತು. ಆದರೆ ಅದರಲ್ಲಿ ಯಾವುದೇ ಫೋಟೋ ಇರಲಿಲ್ಲ. ಒಬ್ಬ ಪ್ರೌಢ ಮನುಷ್ಯನ ಎತ್ತರವಿದ್ದ ಆ ಫ್ರೇಮ್‌ ಯಾಕೆ ಹಾಗೆ ಖಾಲಿಯಾಗಿದೆ ಎಂದು ಯೋಚಿಸುತ್ತ ಮನೆಯನ್ನೆಲ್ಲ ಅವಲೋಕಿಸತೊಡಗಿದೆ. ಆತ ಸಾಮಾನ್ಯವಾಗಿ ಒಬ್ಬನೇ ವಾಸಿಸುತ್ತಿದ್ದ. ಎಂದಾದರೂ ಸ್ನೇಹಿತರು ಬಂದರೆ ಉಳಿದುಕೊಳ್ಳಲು ಅಚ್ಚುಕಟ್ಟಾದ ವ್ಯವಸ್ಥೆಯಿತ್ತು. 

       ಆತ ತಂದುಕೊಟ್ಟ ಗ್ರೀನ್‌ ಟೀ ಹೀರುತ್ತ ಕುಳಿತ ನನಗೆ ಯಾವುದೋ ಒಂದು ಬೇರೆಯೇ ಲೋಕಕ್ಕೆ ಹೋದ ಅನುಭವವಾಯಿತು. ಹೊರಗೆಲ್ಲ ನೂರಾರು ಹಕ್ಕಿಗಳು ಚಿಲಿಪಿಲಿಗುಟ್ಟುತ್ತ ಕಿವಿಗೆ ಹಿತವಾದ ಗದ್ದಲ ಎಬ್ಬಿಸಿದ್ದವು. ಮನೆಯಂಗಳದಲ್ಲೆಲ್ಲ ನೂರಾರು ಬಗೆಯ ಹೂಗಿಡಗಳನ್ನು ನೆಟ್ಟಿದ್ದ. ಅವುಗಳನ್ನು ಕಂಡು ನನ್ನ ಮನಸ್ಸಿಗೆ ಉಲ್ಲಾಸವಾಯಿತು. ಕೆಲಸದ ಒತ್ತಡ, ಬಾಸ್‌ನ ಕಿರಿಕಿರಿ ಎಲ್ಲವನ್ನೂ ಕ್ಷಣಾರ್ಧದಲ್ಲಿ ಮರೆತು ಯಾವುದೋ ಕಿನ್ನರ ಲೋಕವನ್ನು ಪ್ರವೇಶಿಸಿದಂತಾಯಿತು.

       “ನೀನು ವಿಶ್ರಾಂತಿ ತೆಗೆದುಕೋ. ಇನ್ನು ಸ್ವಲ್ಪ ಹೊತ್ತಲ್ಲಿ ಊಟಕ್ಕೆ ರೆಡಿಯಾಗುತ್ತದೆ. ಊಟ ಮಾಡಿ ನಮ್ಮ ಕಾಡಿನಲ್ಲಿ ಸುತ್ತಾಡೋಣ. ಈ ವಿಶಾಲವಾದ ಕಾಡಿನಲ್ಲಿ ನಿನಗೆ ಇಡೀ ವಿಶ್ವದ ದರ್ಶನ ಆಗುತ್ತದೆ” ಎಂದು ಮುಗುಳ್ನಕ್ಕ. ನಾನು ಸಮಯ ನೋಡಿಕೊಂಡೆ. ಮಧ್ಯಾಹ್ನ ಹನ್ನೆರಡೂವರೆ ಆಗಿತ್ತು. ಹೊರಗೆ ಉರಿಬಿಸಿಲು ಜೋರಾಗಿತ್ತು. ಆದರೂ ಸುತ್ತಲೂ ಇದ್ದ ಕಾಡಿನ ಕಾರಣ ಮನೆಯೊಳಗೆ ವಾತಾವರಣ ತಂಪಾಗಿ ಹಿತಕರವಾಗಿತ್ತು. ಟೀ ಕುಡಿದು ಒಂದು ಹಿತಕರವಾದ ಸ್ನಾನ ಮಾಡಲೆಂದು ಬಚ್ಚಲುಮನೆಗೆ ಹೋದೆ. 

       ಸ್ನಾನ ಮಾಡಿ ಬರುವಷ್ಟರಲ್ಲಿ ಊಟ ಸಿದ್ಧವಾಗಿತ್ತು. ಜಾದೂಗಾರ ಫ್ಯಾಂಟಮ್‌ ಟೇಬಲ್ಲಿನ ಮೇಲೆಲ್ಲ ಅಚ್ಟುಕಟ್ಟಾಗಿ ತಿನ್ನುವ ಪದಾರ್ಥಗಳನ್ನು ಜೋಡಿಸಿಟ್ಟಿದ್ದ. ಜೋಳದ ರೊಟ್ಟಿ, ಚಪಾತಿ, ಅನ್ನ, ಸಾಂಬಾರ್‌, ಪಲ್ಯ, ಮಜ್ಜಿಗೆ ಎಲ್ಲ ಇದ್ದವು. “ನೋಡು, ಇನ್ನೇನಾದರೂ ಬೇಕಾದರೆ ಹೇಳು, ಈಗಲೇ ತರಿಸುತ್ತೇನೆ” ಎಂದು ನಕ್ಕ. ಎಷ್ಟೆಂದರೂ ಜಾದೂಗಾರನಲ್ಲವೇ? ನಾನು ಅಷ್ಟೇ ಸಾಕೆನ್ನುವಂತೆ ತಲೆಯಾಡಿಸಿದೆ. 

       ಊಟ ಮಾಡುತ್ತಿದ್ದಂತೆ ನನಗೆ ಇದ್ದಕ್ಕಿದ್ದಂತೆ ನೆತ್ತಿಗೆ ಹತ್ತಿ ಕೆಮ್ಮಲಾರಂಭಿಸಿದೆ. ಅದನ್ನು ನೋಡಿ ಫ್ಯಾಂಟಮ್‌ ಕೂಡಲೇ ತಾನು ಕುಳಿತಲ್ಲಿಂದ ಎದ್ದು ನನ್ನ ಬಳಿ ಬಂದ. ನನ್ನ ಮುಖದ ಹತ್ತಿರ ತನ್ನ ಕೈ ಹಿಡಿದು ಬೆರಳುಗಳನ್ನು ಅಲ್ಲಾಡಿಸಿ ಏನೋ ಮಾಡಿದ. ಕ್ಷಣಾರ್ಧದಲ್ಲಿ ಗಾಳಿಯಲ್ಲಿ ಶೂನ್ಯದಿಂದ ಝರಿಯೊಂದು ಉದ್ಭವವಾಯಿತು. ಆ ಪುಟಾಣಿ ಝರಿಯ ಅಗಲ ಒಂದು ಚಿಕ್ಕ ಲೋಟದಷ್ಟೇ ಇತ್ತು ಎಂಬುದನ್ನು ಬಿಟ್ಟರೆ ಕಾಡಿನಲ್ಲಿ ಹರಿಯುವ ಸುಂದರವಾದ ಝರಿಯ ತದ್ರೂಪದಂತೆಯೇ ಇತ್ತು! ಸುತ್ತೆಲ್ಲ ಪುಟಾಣಿ ಗಿಡಗಂಟಿಗಳು! ಆ ಗಿಡಗಂಟಿಗಳ ಸುತ್ತೆಲ್ಲ ಹಾರಾಡುತ್ತಿದ್ದ ಪುಟಾಣಿ ಹಕ್ಕಿಗಳು‼ ಆ ಹಕ್ಕಿಗಳೋ ಕೀಟಗಳಷ್ಟೇ ಚಿಕ್ಕವು‼! ಆ ಝರಿಯಿಂದ ಹರಿಯುತ್ತಿದ್ದ ನೀರು ಕೆಳಕ್ಕೆ ಚೆಲ್ಲಬಹುದೆಂದು ನಾನು ಪಕ್ಕದಲ್ಲಿದ್ದ ಲೋಟದಲ್ಲಿ ಹಿಡಿಯಲು ಹೋದೆ. “ಲೋಟ ಬೇಡ, ನೇರವಾಗಿ ಅದು ನಿನ್ನ ಬಾಯಿಗೇ ಬೀಳುವಂತೆ ಮಾಡುತ್ತೇನೆ. ಬಾಯಿ ಕಳೆ” ಎಂದ. ಅವನು ಹೇಳಿದಂತೆ ಮಾಡಿದೆ. ಪುಟ್ಟ ಝರಿಯ ನೀರು ನೇರವಾಗಿ ನನ್ನ ಬಾಯಿಯೊಳಕ್ಕೆ ಬೀಳತೊಡಗಿತು. ಹಿಮದಷ್ಟು ತಣ್ಣಗಿದ್ದ ಆ ನೀರನ್ನು ಮನದಣಿಯೆ ಕುಡಿದೆ. ಸಾಕೆನ್ನಿಸುತ್ತಿದ್ದಂತೆ ಸಾಕು ಎಂದು ಸನ್ನೆ ಮಾಡಿದೆ. ಕ್ಷಣಾರ್ಧದಲ್ಲಿ ಆ ಪುಟಾಣಿ ಝರಿ, ಆ ಗಿಡಗಂಟೆಗಳು, ಹಕ್ಕಿಗಳು ಎಲ್ಲವೂ ಅಲ್ಲಿ ಇರಲೇ ಇಲ್ಲವೇನೋ ಎನ್ನುವಂತೆ ಅದೃಶ್ಯವಾದವು! ಫ್ಯಾಂಟಮ್‌ನ ಕೈಚಳಕವನ್ನು ಮೊದಲಬಾರಿಗೆ ಕಣ್ಣಾರೆ ಕಂಡಿದ್ದೆ‼

       ಊಟ ಮುಗಿಸಿ ಕೈತೊಳೆದುಕೊಂಡು ಬಂದೆ. ಊಟವಾದ ಬಳಿಕ ಹಣ್ಣುಗಳಿದ್ದರೆ ಒಳ್ಳೆಯದಲ್ಲವೇ ಎಂದು ಯೋಚಿಸುತ್ತಿದ್ದೆ. ಸೋಫಾದ ಮೇಲೆ ಕುಳಿತು ನನ್ನ ಇಷ್ಟದ ಹಣ್ಣುಗಳನ್ನು ನೆನಪಿಸಿಕೊಳ್ಳತೊಡಗಿದೆ. ಊಟವಾದ ಬಳಿಕ ಪಪ್ಪಾಯಿ ಹಣ್ಣನ್ನು ಸಾಮಾನ್ಯವಾಗಿ ತಿನ್ನುತ್ತಿದ್ದೆ. ಅದನ್ನು ನೆನಪಿಸಿಕೊಳ್ಳುತ್ತ ಕುಳಿತಿದ್ದಂತೆ ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ! ಏಕೆಂದರೆ ನನ್ನ ಕಣ್ಣೆದುರೇ ಶೂನ್ಯದಿಂದ ಒಂದು ಪಪ್ಪಾಯಿ ಗಿಡ ಉದ್ಭವಿಸಿತು‼ ಅದರ ತುಂಬಾ ಹಣ್ಣುಗಳು ತೂಗಾಡುತ್ತಿದ್ದವು. ಆದರೆ ಈ ಸಲ ಫ್ಯಾಂಟಮ್‌ ಹೇಳುವ ಮೊದಲೇ ನಾನು ಅದರಲ್ಲಿ ಚೆನ್ನಾಗಿ ಕಳಿತಿದ್ದ ಎರಡು ಹಣ್ಣುಗಳನ್ನು ಕಿತ್ತುಕೊಂಡೆ. ಮರ ಮಾಯವಾಯಿತು. “ಕೊಡಿಲ್ಲಿ, ಅದನ್ನು ಕತ್ತರಿಸಿಕೊಡುತ್ತೇನೆ” ಎಂದು ಫ್ಯಾಂಟಮ್‌ ತೆಗೆದುಕೊಂಡ. ಆ ಹಣ್ಣುಗಳ ರುಚಿಯಂತೂ ಅತ್ಯದ್ಭುತವಾಗಿತ್ತು. 

       ಊಟವಾದಕೂಡಲೇ ನಿದ್ರೆ ಒತ್ತರಿಸಿಕೊಂಡು ಬಂತು. ಹೊರಗೂ ಸುಡುಬಿಸಿಲಿತ್ತು. “ಒಂದೆರಡು ಗಂಟೆ ಮಲಗು. ನಾನೂ ಮಲಗುತ್ತೇನೆ. ಎದ್ದಮೇಲೆ ಹೊರಕ್ಕೆ ಹೋಗಿ ಸುತ್ತಾಡೋಣ. ವಾರವಿಡೀ ಸುತ್ತಾಡಿದರೂ ಮುಗಿಯದಷ್ಟು ವಿಸ್ಮಯಗಳಿವೆ” ಎಂದ. ನಾನು ರೂಮಿಗೆ ಹೋಗಿ ಮಲಗಿದ ಕೂಡಲೇ ಗಾಢವಾದ ನಿದ್ರೆ ಆವರಿಸಿಕೊಂಡಿತು. ಆಗ ಬಹುಶಃ ಸಮಯ ಸುಮಾರು ಒಂದೂವರೆ ಇದ್ದಿರಬೇಕು. ಎಚ್ಚರವಾದಾಗ ನೋಡುತ್ತೇನೆ, ನಾಲ್ಕು ಗಂಟೆಗೆ ಇನ್ನೈದೇ ನಿಮಿಷ ಬಾಕಿ ಇತ್ತು! ಗಡಬಡಿಸಿ ಎದ್ದು ಹೊರಕ್ಕೆ ಬಂದೆ. ಫ್ಯಾಂಟಮ್‌ ಆಗಲೇ ಎದ್ದು ಬಹಳ ಹೊತ್ತಾಗಿತ್ತೆಂದು ಕಾಣುತ್ತದೆ. ಟಿವಿ ನೋಡುತ್ತ ಕುಳಿತಿದ್ದ. “ಒಳ್ಳೆಯ ನಿದ್ರೆ ಆಯಿತಾ? ಸ್ವಲ್ಪ ಬಿಸಿಲು ಕೂಡ ಇಳಿದಿದೆ. ಬಾ ಹೋಗೋಣ. ಈಗ ಕಾಡಿನಲ್ಲಿ ಸುತ್ತಾಡುವ ಆನಂದವನ್ನು ಅನುಭವಿಸೋಣ” ಎಂದ. ತಮಾಂಗ್‌ ಹೊರಗಡೆ ಸಿದ್ಧವಾಗಿ ನಿಂತಿದ್ದ. ಫ್ಯಾಂಟಮ್‌ ಸನ್ನೆ ಮಾಡಿದ ಕೂಡಲೇ ಆತ ಲಾರಿಯ ಚಕ್ರಗಳಂಥ ಭಾರೀ ಚಕ್ರಗಳನ್ನು ಹೊಂದಿದ್ದ ಮಹೀಂದ್ರಾ ಥಾರ್‌ ಜೀಪನ್ನು ತಂದ. ಅದನ್ನೇರಿ ನಾವು ಪ್ರಯಾಣ ಹೊರಟೆವು. 

       ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ವಿಶಾಲವಾದ ಹುಲ್ಲುಬಯಲು ಎದುರಾಯ್ತು. ನನಗೆ ಅಚ್ಚರಿ! ಆಫ್ರಿಕಾದ ಸವನ್ನಾಕ್ಕೆ ಹೋದ ಅನುಭವವಾಯಿತು. ಏಕೆಂದರೆ ಆ ಹುಲ್ಲುಬಯಲಿನಲ್ಲಿ ಜೀಬ್ರಾ, ಜಿರಾಫ್‌, ವಿಲ್ಡೆಬೀಸ್ಟ್‌, ಇಂಪಾಲಾ, ಕುಡು ಮುಂತಾದ ಪ್ರಾಣಿಗಳು ಮೇಯುತ್ತಿದ್ದವು. ದೂರದಲ್ಲಿ ಆಫ್ರಿಕದ ಆನೆಗಳ ಹಿಂಡು ಕಂಡುಬಂತು. ಇನ್ನೊಂದು ಬದಿಯಲ್ಲಿ ಸಿಂಹಗಳ ಗುಂಪೊಂದು ಬೇಟೆಗಾಗಿ ಹೊಂಚುಹಾಕುತ್ತಿತ್ತು. ನಾನು ಬೆಕ್ಕಸಬೆರಗಾಗಿ ಫ್ಯಾಂಟಮ್‌ನತ್ತ ನೋಡಿದೆ. ಆತ ಸುಮ್ಮನೆ ನಗುತ್ತಿದ್ದ. “ಇದು ನನ್ನ ಪುಟ್ಟ ಪ್ರಪಂಚ. ಎರಡು ಸಾವಿರ ಎಕರೆಯ ಈ ಪ್ರದೇಶದಲ್ಲಿ ನೀನು ನೋಡಲು ಏನೇನಿದೆ ಎನ್ನುವುದಕ್ಕಿಂತ ನೋಡಲು ಏನಿಲ್ಲ ಎಂದು ಕೇಳಬೇಕು. ಜಗತ್ತಿನ ಏಳೂ ಭೂಖಂಡಗಳನ್ನು ಇಲ್ಲಿ ನೋಡಬಹುದು. ಆದರೆ ಅದಕ್ಕೆಲ್ಲ ಸಾಕಷ್ಟು ಸಮಯ ಬೇಕಾಗುತ್ತದೆ. ಹಾಗಾಗಿ ನೀನು ಒಂದು ವಾರಕ್ಕಿಂತ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯಲು ಸಾಧ್ಯವಾಗುತ್ತದಾ ನೋಡು” ಎಂದ. ನಾನು ಏನೂ ಉತ್ತರಿಸಲಿಲ್ಲ. ಹಾಗೆಯೇ ಮುಂದುವರೆದೆವು. 

       ನಮ್ಮ ಜೀಪು ಮುಂದುವರೆಯುತ್ತ ಆನೆಗಳ ಹಿಂಡಿನತ್ತ ಜಾಗರೂಕತೆಯಿಂದ ಮುಂದುವರೆಯುತ್ತಿತ್ತು. ಆಫ್ರಿಕದ ಮಹಾಗಜಗಳನ್ನು ಆವರೆಗೆ ಕೇವಲ ಟಿವಿಯಲ್ಲಿ ಮಾತ್ರ ನೋಡಿದ್ದ ನಾನು ಅವುಗಳನ್ನು ಕಣ್ಣಾರೆ ಕಂಡು ಸ್ತಂಭೀಭೂತನಾದೆ. ಆ ಹಿಂಡಿನಲ್ಲಿ ಕನಿಷ್ಠ ಇಪ್ಪತ್ತೈದು ಆನೆಗಳಾದರೂ ಇದ್ದವೆನ್ನಿಸುತ್ತದೆ. ಮೂರು ಮರಿಗಳೂ ಹಿಂಡಿನ ನಡುವೆ ಚಿನ್ನಾಟವಾಡುತ್ತಿದ್ದವು. ಅಷ್ಟರಲ್ಲಿ ಸಿಂಹಗಳ ಹಿಂಡನ್ನು ಕಂಡ ಹಿರಿಯಾನೆಗಳು ಆ ಮರಿಗಳನ್ನು ಮಧ್ಯಕ್ಕೆ ತಳ್ಳಿ ಸುತ್ತಲೂ ನಿಂತು ಅವುಗಳ ಸುತ್ತ ಅಭೇದ್ಯವಾದ ಕೋಟಯನ್ನು ಕಟ್ಟಿದವು. ಆ ಕೋಟೆಯನ್ನು ಭೇದಿಸಿಕೊಂಡು ಒಳಹೋಗಿ ಮರಿಯನ್ನು ಹಿಡಿಯುವ ತಾಕತ್ತು ಭೂಮಿಯ ಮೇಲಿನ ಯಾವ ಪ್ರಾಣಿಗೆ ತಾನೇ ಇರಲು ಸಾಧ್ಯ?

       ಅಷ್ಟರಲ್ಲಿ ಒಂದು ಎಟವಟ್ಟಾಯಿತು. ನಮ್ಮ ಜೀಪು ಆನೆಗಳನ್ನು ಅಗತ್ಯಕ್ಕಿಂತ ತುಸು ಹೆಚ್ಚೇ ಸಮೀಪಿಸಿತ್ತು. ತಮಾಂಗ್‌ ಆನೆಗಳನ್ನು ಗಮನಿಸುವಲ್ಲಿ ಎಷ್ಟು ಮಗ್ನನಾಗಿದ್ದನೆಂದರೆ ಅವನಿಗೆ ತಾನು ಅಷ್ಟೊಂದು ಸಮೀಪಕ್ಕೆ ಬಂದಿದ್ದೇನೆಂದು ಬಹುಶಃ ಅರಿವಾಗಿರಲಿಲ್ಲ. ಒಂದು ಆನೆ ನಮ್ಮತ್ತ ತಿರುಗಿತು. ಅದಕ್ಕೆ ಮೊದಲೇ ಸಿಂಹಗಳ ಮೇಲೆ ಕೋಪ ಬಂದಿತ್ತು. ನಮ್ಮನ್ನು ಕಂಡು ಇನ್ನೂ ಪಿತ್ತ ನೆತ್ತಿಗೇರಿತೆಂದು ತೋರುತ್ತದೆ. ಕಿವಿಗಳನ್ನು ಅಲ್ಲಾಡಿಸುತ್ತ ಸೊಂಡಿಲನ್ನು ಮೇಲೆತ್ತಿ ತಲೆಯನ್ನು ಕೊಡವುತ್ತ ಒಮ್ಮೆ ಭಯಾನಕವಾಗಿ ಘೀಳಿಟ್ಟಿತು. ಆ ಕ್ಷಣ ತಮಾಂಗ್‌ ಬೆಚ್ಚಿಬಿದ್ದು ಜೀಪನ್ನು ನಿಲ್ಲಿಸಿದ. ಹಿಂದಕ್ಕೆ ತಿರುಗಿಸಿ ಓಡಿಸುವಂತೆ ನಾನು ಅವನಿಗೆ ಕೂಗಿದೆ. ಆದರೆ ನಾವು ನಿಂತಿದ್ದ ದಾರಿ ಕಿರಿದಾಗಿತ್ತು. ನಮ್ಮ ಜೀಪು ಸಾಗುತ್ತಿರುವ ದಾರಿಯಲ್ಲಿ ಅಕ್ಕಪಕ್ಕ ಅರ್ಧ ಅಡಿಯಷ್ಟು ಕೂಡ ಜಾಗವಿರಲಿಲ್ಲ. ಅಲ್ಲಿ ಜೀಪನ್ನು ರಿವರ್ಸ್‌ ಗೇರಿನಲ್ಲೇ ಹಿಂತೆಗೆಯಬೇಕಿತ್ತೇ ಹೊರತು ತಿರುಗಿಸಲು ಸಾಧ್ಯವೇ ಇರಲಿಲ್ಲ. ಅವನು ಜೀಪನ್ನು ಹಿಂತೆಗೆಯುವ ಬದಲು ಅಲ್ಲೇ ನಿಲ್ಲಿಸಿಬಿಟ್ಟ. ಆನೆ ಘೀಳಿಡುತ್ತ ಮುನ್ನುಗ್ಗುತ್ತಿತ್ತು. ನಮ್ಮ ಕಥೆ ಮುಗಿಯಿತೆಂದು ನಾನು ಭಾವಿಸಿ ಗಟ್ಟಿಯಾಗಿ ಕಣ್ಮುಚ್ಚಿ ಕುಳಿತೆ. 

       ಆನೆಯ ಘೀಳಿಡುವಿಕೆಯ ಜೊತೆಗೆ ಅದು ತನ್ನ ಭಾರೀ ಪಾದಗಳನ್ನು ನೆಲಕ್ಕೆ ಅಪ್ಪಳಿಸುವ ಶಬ್ದ ಹತ್ತಿರವಾಗುತ್ತಲೇ ಇತ್ತು. ಆದರೆ ಒಂದು ಹಂತದಲ್ಲಿ ಹಠಾತ್ತಾಗಿ ಆ ಶಬ್ದ ನಿಂತಿತು. ಏನಾಯಿತೆಂದು ನಾನು ಕಣ್ತೆರೆದರೆ ಎದುರಿಗೆ ಕಂಡ ದೃಶ್ಯ ನಿಜಕ್ಕೂ ಭಯಾನಕವಾಗಿತ್ತು. ಸೊಂಡಿಲು ಬೀಸಿದರೆ ಸರಿಯಾಗಿ ತಾಗುವಷ್ಟು ಸಮೀಪದಲ್ಲೇ ಬಂದು ನಿಂತಿತ್ತು ಆನೆ! ಆದರೆ ಅದು ಮುನ್ನುಗ್ಗುವ ಬದಲು ಏನನ್ನೋ ಯೋಚಿಸುತ್ತಿದ್ದಂತೆ ಕಂಡಿತು. ಒಂದೆರಡು ಬಾರಿ ಜೋರಾಗಿ ಬಸ್‌ ಬುಸ್‌ ಎಂದು ಉಸಿರುಬಿಟ್ಟು ತನ್ನ ಅಸಹನೆಯನ್ನು ವ್ಯಕ್ತಪಡಿಸಿತು. ಆಮೇಲೆ ಅದಕ್ಕೆ ಏನನ್ನಿಸಿತೋ ಏನೋ, ಬದುಕಿಕೋ ಹೋಗು ಎನ್ನುವಂತೆ ನಿಧಾನಕ್ಕೆ ಹಿಂದಕ್ಕೆ ಹೆಜ್ಜೆಯಿಟ್ಟು ಮರಳಿತು. 

       ನನ್ನ ಅಕ್ಕಪಕ್ಕದಲ್ಲಿ ಕುಳಿತಿದ್ದ ತಮಾಂಗ್‌ ಮತ್ತು ಫ್ಯಾಂಟಮ್‌ ನನ್ನ ಫಜೀತಿಯನ್ನು ಕಂಡು ಒಳಗೊಳಗೇ ನಗುತ್ತಿದ್ದರೆಂದು ತೋರುತ್ತದೆ. ಅವರಿಗೆ ಅದು ಅಭ್ಯಾಸವಾಗಿರಬೇಕು. ಆದ್ದರಿಂದಲೇ ಆನೆ ಹಾಗೆ ಮುನ್ನುಗ್ಗಿ ಬರುತ್ತಿದ್ದರೂ ಏನೂ ಆಗಿಲ್ಲವೆಂಬಂತೆ ಕೂತಿದ್ದರು. ಆದರೆ ನಾನು ಅದೇ ಮೊದಲಬಾರಿಗೆ ಆನೆಯನ್ನು ಅಷ್ಟು ಹತ್ತಿರದಿಂದ ನೋಡುತ್ತಿದ್ದುದು. ಹಾಗಾಗಿ ಬೆವರಿನ ಮುದ್ದೆಯಾಗಿದ್ದೆ. ಫ್ಯಾಂಟಮ್‌ ನನ್ನ ಹೆಗಲಮೇಲೆ ಕೈಹಾಕಿ ಮುಗುಳ್ನಕ್ಕ. ನಾನೂ ಮುಗುಳ್ನಕ್ಕೆ. 

       ಸುಮಾರು ಮೂರು ತಾಸು ನಾವು ಆ ಸವನ್ನಾ ಹುಲ್ಲುಬಯಲಿನಲ್ಲಿ ಅಡ್ಡಾಡಿದೆವು. ಕಿರುಬಗಳು ಒಂದು ಜೀಬ್ರಾವನ್ನು ಇನ್ನೂ ಜೀವವಿದ್ದಾಗಲೇ ಕಿತ್ತು ತಿನ್ನುವ ದೃಶ್ಯವೊಂದನ್ನು ಕಂಡು ಅದನ್ನು ನೋಡಲಾರದೆ ಬೇರೆ ಕಡೆಗೆ ತಿರುಗಿದೆ. ಒಟ್ಟಿನಲ್ಲಿ ಮೂರು ತಾಸು ಕಳೆದಿದ್ದೇ ಗೊತ್ತಾಗಲಿಲ್ಲ. ಸೂರ್ಯ ಪಶ್ಚಿಮದಿಕ್ಕಿನಲ್ಲಿ ಅದೃಶ್ಯವಾಗುತ್ತಿದ್ದಂತೆ ಮನೆಗೆ ಮರಳಿದೆವು. 

       ಸಂಜೆಯಾಗುತ್ತಿದ್ದಂತೆ ಮನೆಯ ಅಂಗಳದಲ್ಲಿ ಕುಳಿತು ಸುತ್ತೆಲ್ಲ ನೋಡುತ್ತ ಮಾತನಾಡತೊಡಗಿದೆವು. ನನಗೆ ಏನಾದರೂ ಕುಡಿಯಬೇಕೆನ್ನಿಸಿತು. ಕಾಫಿ, ಚಹಾ ಬದಲು ಎಳನೀರು ಸಿಕ್ಕಿದರೆ ಚೆನ್ನಾಗಿರುತ್ತದೆ ಎಂದು ಯೋಚಿಸುತ್ತಿದ್ದೆ. ಆದರೆ ಮರುಕ್ಷಣವೇ ನನ್ನ ಯೋಚನೆಗೆ ನನಗೇ ನಗುಬಂತು. ಆ ಗೊಂಡಾರಣ್ಯದಲ್ಲಿ ಎಳನೀರು ಎಲ್ಲಿಂದ ಬರಬೇಕು ಎಂದು ಯೋಚಿಸಿ ಸುಮ್ಮನಾದೆ. ಅಷ್ಟರಲ್ಲಿ ನನ್ನತ್ತ ತಿರುಗಿದ ಫ್ಯಾಂಟಮ್‌ ಕೇಳಿದ “ಕುಡಿಯಲು ಏನಾದರೂ ಇದ್ದಿದ್ದರೆ ಒಳ್ಳೆಯದಿತ್ತಲ್ಲವೇ? ಎಳನೀರು ಆರೋಗ್ಯಕ್ಕೆ ತುಂಬ ಉತ್ತಮ. ಎಳನೀರು ತರಿಸಲೇ?” ಎಂದು ಕೇಳಿದ. ನಾನು ಅಚ್ಚರಿಯಿಂದ ತಲೆಯಾಡಿಸಿದೆ. ಆತ ಕೈ ಮುಂದೆಮಾಡಿ ಏನೇನೋ ಸನ್ನೆಗಳನ್ನು ಮಾಡಿದ. ಆ ಕ್ಷಣ ಶೂನ್ಯದಿಂದ ಉದ್ಭವಿಸಿದಂತೆ ಒಂದು ತೆಂಗಿನಮರ ಪ್ರತ್ಯಕ್ಷವಾಯಿತು. ಆದರೆ ಅದರ ಬೇರುಗಳು ನೆಲದೊಳಗಿರಲಿಲ್ಲ! ಬೊಡ್ಡೆಯ ಭಾಗ ಕೆಳಗಿಳಿದು ಗಾಳಿಯಲ್ಲಿ ಲೀನವಾಗಿದ್ದಂತೆ ಕಂಡಿತು. ಮೇಲಕ್ಕೆ ನೋಡಿದರೆ ಅದರ ತುದಿಯೇ ಕಾಣುತ್ತಿಲ್ಲ! ಎತ್ತರೆತ್ತರಕ್ಕೆ ಬೆಳೆಯುತ್ತ ಅಂತರಿಕ್ಷದಲ್ಲಿ ಲೀನವಾದಂತೆ ತೋರುತ್ತಿತ್ತು. ನಾನು ಏನೊಂದೂ ಅರ್ಥವಾಗದೇ ಅವನ ಮುಖ ನೋಡಿದೆ. ಅವನು ಕೈಬೆರಳುಗಳನ್ನು ಮೇಲಕ್ಕೆ ಹಿಡಿದು ಕೆಳಕ್ಕೆ ಕರೆಯುವಂತೆ ಸನ್ನೆ ಮಾಡಿದ. ನೋಡನೋಡುತ್ತಿದ್ದಂತೆ ಮರದ ತುದಿ ಕೆಳಗಿಳಿಯತೊಡಗಿತು. ಕೆಲವೇ ಕ್ಷಣಗಳಲ್ಲಿ ಅದರ ತುದಿ ಕಣ್ಣಿಗೆ ಬಿತ್ತು. ನಿಮಿಷ ಕಳೆಯುವಷ್ಟರಲ್ಲಿ ನಿಂತು ಕೈಚಾಚಿದರೆ ಸಿಕ್ಕುವಷ್ಟು ಕೆಳಕ್ಕೆ ಬಂತು. ಅದರ ತುಂಬಾ ಹತ್ತಾರು ಎಳನೀರುಗಳು ತೂಗಾಡುತ್ತಿದ್ದವು! “ನಿನಗೆಷ್ಟು ಬೇಕೋ ಅಷ್ಟು ತೆಗೆದುಕೋ” ಎಂದ ಫ್ಯಾಂಟಮ್.‌ ನಾಲ್ಕಾರು ಎಳನೀರುಗಳನ್ನು ಕಿತ್ತುಕೊಂಡು ಸಾಕೆಂದು ಸನ್ನೆ ಮಾಡಿದೆ. ಮರ ಹೇಗೆ ಬಂದಿತ್ತೋ ಹಾಗೇ ಅದೃಶ್ಯವಾಯಿತು. 

       ಎಳನೀರು ಕಿತ್ತದ್ದೇನೋ ಆಯಿತು. ಅದನ್ನೀಗ ಒಡೆಯಬೇಕಲ್ಲ? ಅತ್ತಿತ್ತ ನೋಡಿದೆ. “ಅದನ್ನೀಗ ನಿನ್ನ ಕೈಯಲ್ಲೇ ಒಡೆಸುತ್ತೇನೆ. ನಿನ್ನ ತೋರುಬೆರಳು ಮತ್ತು ಮಧ್ಯದ ಬೆರಳುಗಳನ್ನು ಒಟ್ಟುಮಾಡಿ ಪಿಸ್ತೂಲಿನಂತೆ ಹಿಡಿ” ಎಂದ. ಅವನು ಹೇಳಿದಂತೆಯೇ ಮಾಡಿದೆ. ನನ್ನ ಆ ಎರಡು ಬೆರಳುಗಳ ಸುತ್ತ ತನ್ನ ಕೈ ಸುತ್ತಿಸಿದ. ನನಗೇ ಗಾಬರಿಯಾಗುವಂತೆ ಆ ಎರಡು ಬೆರಳುಗಳು ತುದಿಯಲ್ಲಿ ಚೂಪಾಗಿ ಚಾಕುವಿನಂತಾಯಿತು. ಅದನ್ನು ನೋಡಿ ನಾನು ಬೆರಗಾಗುವ ಮೊದಲೇ ನನ್ನ ಕೈಹಿಡಿದು ಆ ಚಾಕುವಿನ ತುದಿಯನ್ನು ಎಳನೀರಿನ ಮೇಲಕ್ಕೆ ತಾಗುವಂತೆ ಹಿಡಿದ. ಕೂಡಲೇ ಆ ಚಾಕುವಿನ ತುದಿ ಸುದರ್ಶನ ಚಕ್ರದಂತೆ ಗರ್ರನೆ ತಿರುಗಿ ಎಳನೀರಿನ ಬುರುಡೆಯನ್ನು ಕೊರೆದು ರಂಧ್ರ ಮಾಡಿತು. ಆದರೆ ನನ್ನ ಕೈಗೆ ಏನೂ ಅನುಭವ ಆಗಲೇ ಇಲ್ಲ. ಎಳನೀರಿನಲ್ಲಿ ರಂಧ್ರ ಆಗುತ್ತಿದ್ದಂತೆ ನನ್ನ ಕೈ ಮೊದಲಿನಂತಾಯಿತು. ಆ ನೀರಂತೂ ಅತ್ಯದ್ಭುತವಾಗಿತ್ತು. ನನ್ನ ಅದುವರೆಗಿನ ಸುತ್ತಾಟದ ದಣಿವೆಲ್ಲ ಮಾಯವಾಯಿತು. 

       ಕತ್ತಲಾಗುತ್ತಿದ್ದಂತೆ ಇನ್ನೊಂದು ಕಿನ್ನರಲೋಕಕ್ಕೆ ಹೋದಂತಾಯಿತು. ಏಕೆಂದರೆ ಅಲ್ಲಿ ಸುತ್ತ ಎಲ್ಲಿಯೂ ಬೀದಿದೀಪಗಳು ಇರಲಿಲ್ಲ. ಅಂದು ನಮ್ಮ ಅದೃಷ್ಟಕ್ಕೆ ಮೋಡಗಳೂ ಇರದೆ ಆಕಾಶ ಶುಭ್ರವಾಗಿತ್ತು. ನಾನು ಹಿಂದೆಂದೂ  ಕಂಡುಕೇಳರಿಯದಷ್ಟು ನಕ್ಷತ್ರಗಳು ಆಗಸದಲ್ಲಿ ಮಿನುಗುತ್ತಿದ್ದವು. ವೃಶ್ಚಿಕರಾಶಿ ಆಗಸದಲ್ಲಿ ಕಾಣುತ್ತಿತ್ತು. ಅದನ್ನೇ ನೋಡುತ್ತ ಮೈಮರೆತು ಕುಳಿತಿದ್ದೆ.

       ಅಷ್ಟರಲ್ಲಿ ನನಗೆ ಒಮ್ಮೆ ಮೈಯೆಲ್ಲ ವಿದ್ಯುತ್‌ ಸಂಚಾರವಾದಂತಾಯಿತು. ಆಕಾಶದಲ್ಲಿ ಸುಮ್ಮನೆ ಮೈಚೆಲ್ಲಿ ಮಲಗಿದ್ದ ಆ ಬೃಹತ್‌ ಚೇಳು ತನ್ನ ಕೊಂಡಿಗಳನ್ನು ಅಲ್ಲಾಡಿಸಿದಂತಾಯಿತು. ನನಗೆಲ್ಲೋ ಭ್ರಮೆ ಎಂದುಕೊಂಡು ಕಣ್ಣುಜ್ಜಿಕೊಂಡು ಮತ್ತೊಮ್ಮೆ ನೋಡಿದೆ. ಅನುಮಾನವೇ ಇಲ್ಲ, ಮೈತುಂಬ ವಿದ್ಯುದ್ದೀಪಗಳನ್ನು ಹೊದ್ದುಕೊಂಡಂತೆ ಕಾಣುತ್ತಿದ್ದ ಆ ಕಪ್ಪನೆಯ ಚೇಳು ತನ್ನ ಕೊಂಡಿಗಳನ್ನು ಅಲುಗಿಸುತ್ತ ಸರಿಯುತ್ತಿದ್ದರೆ ಹಿನ್ನೆಲೆಯ ಆಕಾಶವೇ ಸರಿದಂತೆ ಭಾಸವಾಗುತ್ತಿತ್ತು! ಹಾಗೆ ನಿಧಾನವಾಗಿ ಮುಂದೆ ಸರಿದ ಅದು ಆ ಕ್ಷಣ ನನ್ನತ್ತ ತಿರುಗಿತು! ಅದರ ಕೆಂಡಗಣ್ಣುಗಳು ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದರೆ ನಾನು ಕುಳಿತಲ್ಲೇ ನಡುಗಿದೆ. ಮುಂದಿನ ಕ್ಷಣ ಅದು ಆಕಾಶದಿಂದ ಕೆಳಗಿಳಿದು ನನ್ನತ್ತ ಸರಿಯತೊಡಗಿತ್ತು!

       ನಾನು ಏನು ಮಾಡಬೇಕೆಂದು ತೋಚದೆ ಅತ್ತಿತ್ತ ನೋಡಿದೆ. ಅದವರೆಗೂ ನನ್ನ ಹಿಂದೆಯೇ ಇದ್ದ ಫ್ಯಾಂಟಮ್‌ನ ಮನೆ, ಪಕ್ಕದಲ್ಲೇ ಕುರ್ಚಿಯಲ್ಲಿ ಕೂತಿದ್ದ ಫ್ಯಾಂಟಮ್‌ ಮತ್ತು ತಮಾಂಗ್‌ ಎಲ್ಲರೂ ಶೂನ್ಯದಲ್ಲಿ ಕರಗಿಹೋದಂತೆ ಮಾಯವಾಗಿದ್ದರು! ನಾನು ಗೊಂಡಾರಣ್ಯದ ಮಧ್ಯದಲ್ಲಿ ಏಕಾಂಗಿಯಾಗಿ ನಿಂತು ಆ ಚೇಳನ್ನೇ ನೋಡುತ್ತಿದ್ದೆ! ನನಗೆ ಒಂದು ಕ್ಷಣ ಸಿಟ್ಟು ನೆತ್ತಿಗೇರಿತು. ಅತಿಥಿಯೆಂದು ನನ್ನನ್ನು ಮನೆಗೆ ಕರೆಸಿಕೊಂಡಿದ್ದು ಹೀಗೆ ಚೇಳೊಂದಕ್ಕೆ ಬಲಿ ನೀಡುವುದಕ್ಕಾ? ನನ್ನನ್ನು ಅದರ ಕೈಗೆ ಸಿಕ್ಕಿಸಿ ಎಲ್ಲಿ ಮಾಯವಾಗಿಹೋದ ಈ ದರಿದ್ರದವನು ಎಂದು ಮನಸ್ಸಿನಲ್ಲೇ ಬೈದುಕೊಂಡು ಮುಂದೇನು ಮಾಡುವುದೆಂದು ಯೋಚಿಸುತ್ತ ಕಾಡಿನತ್ತ ಓಡಲು ತಿರುಗಿದೆ. ಆದರೆ ಅಷ್ಟರಲ್ಲಿ ಆ ಬೃಹತ್‌ ಚೇಳಿನ ಕೊಂಡಿಗಳು ನನ್ನನ್ನು ಎರಡು ಕಡೆಗಳಿಂದ ಸುತ್ತುವರೆದು ನನ್ನನ್ನು ಎತ್ತಿಹಿಡಿದವು. ಜೀವ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ “ಅಮ್ಮಾ” ಎಂದು ಜೋರಾಗಿ ಕಿರುಚಿದೆ. ಆ ಕ್ಷಣ ನಾನು ಕನಸುಮನಸಿನಲ್ಲೂ ಊಹಿಸದ ಘಟನೆಯೊಂದು ನಡೆದುಹೋಯ್ತು!

       ನನ್ನನ್ನು ಎತ್ತಿಹಿಡಿದಿದ್ದ ಚೇಳಿನ ಕೊಂಡಿಗಳನ್ನು ಯಾರೋ ಬುಡದಿಂದ ಕತ್ತರಿಸಿದಂತೆ ಅವು ಕೆಳಕ್ಕೆ ಬಿದ್ದವು. ಅವುಗಳ ಹಿಡಿತದಲ್ಲಿದ್ದ ನಾನು ಧೊಪ್ಪನೆ ಕೆಳಕ್ಕೆ ಬಿದ್ದೆ. ಆದರೆ ನೆಲದ ಮೇಲೆ ಬೀಳದೆ ನಾನು ಮೊದಲು ಕುಳಿತಿದ್ದ ಕುರ್ಚಿಯಲ್ಲೇ ಕುಳಿತ ಭಂಗಿಯಲ್ಲೇ ಬಿದ್ದೆ. ನನ್ನ ಅಕ್ಕಪಕ್ಕದಲ್ಲಿ ಫ್ಯಾಂಟಮ್‌ ಮತ್ತು ತಮಾಂಗ್‌ ಏನೂ ಆಗಿಲ್ಲವೆಂಬಂತೆ ಕುಳಿತಿದ್ದರು. ಆ ಚೇಳು ಎಲ್ಲಿ ಹೋಯಿತೆಂದು ಅಚ್ಚರಿಯಿಂದ ಕತ್ತೆತ್ತಿ ನೋಡಿದರೆ ಆದು ಆಗಸದ ಹಿನ್ನೆಲೆಯಲ್ಲಿ ಲೀನವಾಗುತ್ತಿರುವುದು ಕಣ್ಣಿಗೆ ಬಿತ್ತು. ಅಲ್ಲದೆ ಕತ್ತರಿಸಿ ನೆಲಕ್ಕೆ ಬಿದ್ದಿದ್ದ ಅದರ ಕೊಂಡಿಗಳೂ ಅದೃಶ್ಯ ಕೈಗಳಿಂದ ಮೇಲಕ್ಕೆತ್ತಲ್ಪಟ್ಟಂತೆ ತಮ್ಮ ಜಾಗದಲ್ಲಿ ಕೂಡಿಕೊಂಡಿದ್ದವು. ನಾನು ಮತ್ತೊಮ್ಮೆ ಕಣ್ಣುಜ್ಜಿಕೊಂಡು ನೋಡುವಷ್ಟರಲ್ಲಿ ಅದುವರೆಗೆ ನಡೆದಿದ್ದೆಲ್ಲ ಸುಳ್ಳೇನೋ ಎನ್ನುವಂತೆ ವೃಶ್ಚಿಕ ಆಕಾಶದಲ್ಲಿ ತಣ್ಣಗೆ ಕುಳಿತಿತ್ತು!

       ಯಾರೋ ಭುಜದ ಮೇಲೆ ಕೈಯಿಟ್ಟಂತಾಗಿ ಪಕ್ಕಕ್ಕೆ ತಿರುಗಿದೆ. ಫ್ಯಾಂಟಮ್‌ ಕೇಳುತ್ತಿದ್ದ “ಏನಾಯಿತು, ಏಕೆ ಹಾಗೆ ಕೂಗಿಕೊಂಡೆ? ಕುಳಿತಲ್ಲೇ ನಿದ್ರೆ ಬಂದು ಏನಾದರೂ ಕೆಟ್ಟ ಕನಸು ಕಂಡೆಯಾ?” ಎಂದ. ನನಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ನನಗೆ ಆಗಿದ್ದು ಭ್ರಾಂತಿಯೋ ಅಥವಾ ನಿದ್ರೆ ಬಂದು ಕನಸು ಕಂಡಿದ್ದೆನೋ ಎಂಬುದು ನನಗೇ ಸರಿಯಾಗಿ ಅರ್ಥವಾಗಿರಲಿಲ್ಲ. ಅದೇನೇ ಇದ್ದರೂ ಆಕಾಶದಿಂದ ಚೇಳೊಂದು ಬಂದು ನನ್ನನ್ನು ಹಿಡಿಯಿತು ಎಂದರೆ ಇಬ್ಬರೂ ಹೊಟ್ಟೆ ಹಿಡಿದುಕೊಂಡು ನಗಲಿಕ್ಕಿಲ್ಲವೇ? ಜೊತೆಗೆ ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸಿದರೂ ಸೇರಿಸಬಹುದು ಎನ್ನಿಸಿತು! ಹಾಗಾಗಿ ಸುಮ್ಮನೆ ಏನಿಲ್ಲವೆಂದು ತಲೆಯಾಡಿಸಿ ಆಕಾಶದತ್ತ ದೃಷ್ಟಿನೆಟ್ಟು ಸುಮ್ಮನೆ ಕುಳಿತೆ. 

       ಹಾಗೇ ಆಕಾಶವನ್ನು ನೋಡುತ್ತ ಎಷ್ಟು ಹೊತ್ತು ಕುಳಿತಿದ್ದೆನೋ ಗೊತ್ತಿಲ್ಲ, ನಿದ್ರೆ ಒತ್ತರಿಸಿಕೊಂಡು ಬಂದಂತಾಯಿತು. ಫ್ಯಾಂಟಮ್‌ನತ್ತ ತಿರುಗಿ ನನಗೆ ನಿದ್ರೆ ಬರುತ್ತಿದೆ, ಮಲಗುತ್ತೇನೆಂದು ಹೇಳಿದೆ. ಅವನು ನನ್ನನ್ನು ಕರೆದೊಯ್ದು ಕೋಣೆಗೆ ಬಿಟ್ಟ. 

       ನನಗೆ ಸುತ್ತಾಡಿ ದಣಿವಾಗಿದ್ದರಿಂದ ಕೂಡಲೇ ನಿದ್ರೆ ಹತ್ತಿತು. ಆದರೆ ಮಧ್ಯರಾತ್ರಿಯಲ್ಲಿ ಏಕೋ ಏನೋ ಹಠಾತ್ತಾಗಿ ಎಚ್ಚರವಾಯಿತು. ನಿಜ ಹೇಳಬೇಕೆಂದರೆ ನನಗೆ ಯಾವ ಸದ್ದೂ ಕೇಳಿಸಿರಲಿಲ್ಲ ಅಥವಾ ಹಾಗೆ ಹಠಾತ್ತಾಗಿ ಏಳುವಂಥದ್ದು ಏನೂ ಆಗಿರಲಿಲ್ಲ. ಆದರೂ ನಾನೇಕೆ ಎದ್ದೆ ಎಂಬ ಪ್ರಶ್ನೆಯನ್ನು ನನಗೇ ಕೇಳಿಕೊಂಡೆ. ನನ್ನ ಪಕ್ಕದಲ್ಲೇ ಇದ್ದ ಕಿಟಕಿಯಿಂದ ಹೊರಕ್ಕೆ ನೋಡಿದೊಡನೆ ಬೆಚ್ಚಿಬಿದ್ದೆ. ನನಗೇಕೆ ಹಾಗೆ ಎಚ್ಚರವಾಯ್ತೆಂಬ ಪ್ರಶ್ನೆಗೆ ಅಲ್ಲೇ ಉತ್ತರವಿತ್ತು. ಕಿಟಕಿಯಿಂದ ಹೆಚ್ಚೆಂದರೆ ಹತ್ತಡಿ ದೂರದಲ್ಲಿ ಚಂದ್ರನ ಬೆಳಕಿನಲ್ಲಿ ಬೃಹದಾಕಾರದ ಕರಿಯ ಪರ್ವತದಂತೆ ಒಂದು ಆನೆ ನಿಂತಿತ್ತು! ಅದು ನನ್ನತ್ತಲೇ ಮುಖಮಾಡಿ ನೋಡುತ್ತಿತ್ತು! ಅದರ ಖಡ್ಗದಂಥ ಬೃಹತ್‌ ದಂತಗಳನ್ನು ನೋಡಿ ಮೂಕವಿಸ್ಮಿತನಾದೆ. ಅದು ನಿಂತಲ್ಲಿಂದಲೇ ತನ್ನ ಸೊಂಡಿಲನ್ನು ಚಾಚಿದ್ದರೂ ಸಾಕಿತ್ತು, ನನ್ನ ಕಿಟಕಿಗೆ ಸುಲಭವಾಗಿ ತಗಲುವಂತಿತ್ತು. ಇನ್ನು ಆನೆಯ ಭೀಮಬಲದ ಎದುರು ಕಿಟಕಿಯ ಸರಳುಗಳು ಯಾವ ಲೆಕ್ಕ? ಆದರೆ ನನಗಿದ್ದ ಒಂದೇ ಭರವಸೆಯೆಂದರೆ ಆನೆಗಳ ದೃಷ್ಟಿಶಕ್ತಿ ಅಷ್ಟೊಂದು ತೀಕ್ಷ್ಣವಾದುದಲ್ಲವಾದ್ದರಿಂದ ಕೋಣೆಯೊಳಗೆ ಕತ್ತಲಿನಲ್ಲಿದ್ದ ನಾನು ಅದರ ಕಣ್ಣಿಗೆ ಬಿದ್ದಿರಲಿಕ್ಕಿಲ್ಲ ಎಂಬುದು. ಏನಾದರಾಗಲಿ ಎಂದುಕೊಂಡು ಒಂದಿಷ್ಟೂ ಅಲುಗಾಡದೇ ಹಾಗೇ ಅದನ್ನೇ ನೋಡುತ್ತ ಹಾಸಿಗೆಯಲ್ಲಿ ಉರುಳಿಕೊಂಡೇ ಇದ್ದೆ. ಫ್ಯಾಂಟಮ್‌ ಅಥವಾ ತಮಾಂಗ್‌ನನ್ನು ಜೋರಾಗಿ ಕೂಗಿ ಕರೆಯಬೇಕೆನ್ನಿಸಿದರೂ ಆ ಕೂಗು ಆನೆಗೆ ನನ್ನ ಅಸ್ತಿತ್ವವನ್ನು ತೋರಿಸಿಕೊಡಬಹುದೆಂಬ ಭಯದಿಂದ ಹಾಗೇ ನೋಡುತ್ತಿದ್ದೆ. 

       ಕೆಲವು ಕ್ಷಣ ನನ್ನ ದಿಕ್ಕಿನಲ್ಲೇ ನೋಡುತ್ತಿದ್ದ ಆನೆ ಒಂದೆರಡು ಬಾರಿ ತನ್ನ ಸೊಂಡಿಲನ್ನು ನೀಳವಾಗಿ ಚಾಚಿ ವಾಸನೆ ಎಳೆದುಕೊಂಡಿತು. ಆನೆಗಳಿಗೆ ವಾಸನಾಗ್ರಹಣ ಶಕ್ತಿ ಬಹಳ ತೀಕ್ಷ್ಣವಾಗಿರುತ್ತದೆ. ಹಾಗಾಗಿ ಅದಕ್ಕೆ ನನ್ನ ವಾಸನೆಯೇನಾದರೂ ಗೊತ್ತಾದರೆ ಮುಂದೆ ಬರುವುದು ಖಚಿತ ಎಂದು ಯೋಚಿಸುತ್ತಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಅಷ್ಟರಲ್ಲಿ  ನಮ್ಮ ಮನೆಯ ಎಡಗಡೆ ಕಾಡಿನಿಂದ ಹುಲಿಯೊಂದು ಗುರುಗುಟ್ಟುವುದು ಕೇಳಿಸಿತು. ಅದನ್ನು ಕೇಳಿದ್ದೇ ಆನೆ ಗಕ್ಕನೆ ಅತ್ತ ತಿರುಗಿ ಸೊಂಡಿಲು ಚಾಚತೊಡಗಿತು. ಆನೆ ಅತ್ತ ತಿರುಗಿದೊಡನೆಯೇ ಹುಲಿಯ ಘರ್ಜನೆ ಜೋರಾಯಿತು. ಆನೆ ಇದರಿಂದ ವಿಚಲಿತವಾಯಿತೆಂದು ತೋರುತ್ತದೆ. ಇದರ ಸಹವಾಸವೇ ಬೇಡವೆಂದು ಅದರ ವಿರುದ್ಧ ದಿಕ್ಕಿಗೆ ತಿರುಗಿ ಸೊಂಡಿಲೆತ್ತಿ ಒಮ್ಮೆ ಜೋರಾಗಿ ಘೀಳಿಟ್ಟು ಕಾಡಿನೊಳಗೆ ತೂರಿ ಮಾಯವಾಯಿತು. ಆಮೇಲೆ ನನ್ನ ನಿದ್ರೆಗೆ ಯಾವ ಭಂಗವೂ ಬರಲಿಲ್ಲ. 

       ಬೆಳಗಾಗುತ್ತಿದ್ದಂತೆ ಕಣ್ಣುಜ್ಜಿಕೊಳ್ಳುತ್ತ ನನ್ನ ಕೋಣೆಯಿಂದ ಹೊರಬಂದೆ. ಹೊರಗೆ ಬರುತ್ತಿದ್ದಂತೆ ನನಗೊಂದು ಅಚ್ಚರಿ ಕಾದಿತ್ತು. ಫ್ಯಾಂಟಮ್‌ ಹೆಗಲಿಗೊಂದು ದೊಡ್ಡ ಬ್ಯಾಗ್‌ ನೇತುಹಾಕಿಕೊಂಡು ಬಾಗಿಲು ತೆಗೆದು ಒಳಬರುತ್ತಿದ್ದ. ಬಾಗಿಲು ತೆರೆದು ತಮಾಂಗ್‌ ಅವನನ್ನು ಸ್ವಾಗತಿಸುತ್ತಿದ್ದ. “ಪ್ರಯಾಣ ಹೇಗಿತ್ತು?” ಎಂದು ಆತ ಕೇಳುತ್ತಿದ್ದುದು ನನಗೆ ಸ್ಪಷ್ಟವಾಗಿ ಕೇಳಿಸಿತು! ಹಾಗಾದರೆ ಹಿಂದಿನ ರಾತ್ರಿ ನಾನು ಮಲಗಿದಮೇಲೆ ಆತ ಪ್ರಯಾಣ ಹೋಗಿಬಂದನೇ? ಅಷ್ಟು ಬೇಗ ಯಾವ ದೇಶಕ್ಕೆ ಹೋಗಿಬಂದ? ಇದನ್ನೆಲ್ಲ ಯೋಚಿಸುತ್ತ ಸ್ತಂಭೀಭೂತನಾಗಿ ನಿಂತಿದ್ದೆ. 

       ಅಷ್ಟರಲ್ಲಿ ಫ್ಯಾಂಟಮ್‌ ನನ್ನತ್ತ ತಿರುಗಿದ. ನನ್ನ ಮುಖದಲ್ಲಿದ್ದ ಪ್ರಶ್ನಾರ್ಥಕ ಚಿಹ್ನೆ ಅವನಿಗೆ ಅರ್ಥವಾಯಿತು. ಏನನ್ನೂ ಹೇಳದೆ ಸುಮ್ಮನೆ ನಕ್ಕ. ಅಷ್ಟರಲ್ಲಿ ನನ್ನ ಗಮನ ಹಜಾರದ ಮೂಲೆಯತ್ತ ಹೋಯಿತು. ಅಲ್ಲಿ ನಾನು ಹಿಂದಿನ ದಿನ ನೋಡಿದ್ದ ಫೋಟೋ ಫ್ರೇಮ್‌ ಹಾಗೆಯೇ ನಿಂತಿತ್ತು. ಆದರೆ ವ್ಯತ್ಯಾಸವೆಂದರೆ ಅದರಲ್ಲಿ ಬೆನ್‌ ಫ್ಯಾಂಟಮ್‌ನ ಚಿತ್ರ ಯಥಾವತ್ತಾಗಿ ಅಚ್ಚೊತ್ತಿದಂತೆ ಇತ್ತು! ಹಿಂದಿನ ದಿನ ರಾತ್ರಿ ಅದನ್ನು ನೋಡಿದಾಗ ಅದಿನ್ನೂ ಖಾಲಿಯಾಗಿಯೇ ಇದ್ದಿದ್ದು ನನಗೆ ಚೆನ್ನಾಗಿ ನೆನಪಿತ್ತು. ನನಗೇನಾದರೂ ಬುದ್ಧಿಭ್ರಮಣೆಯಾಗಿದೆಯೇ ಎಂದು ಅನುಮಾನ ಬಂದು ಹಾಗೇ ಸೋಫಾದ ಮೇಲೆ ಕುಸಿದು ಕುಳಿತೆ. 

       ತಮಾಂಗ್‌ ನನ್ನ ಫಜೀತಿಯನ್ನು ನೋಡಿ ಹೊರಗಿನಿಂದ ಕರೆದ. “ಬನ್ನಿ, ಒಂದು ಸುತ್ತು ಬೆಳಗಿನ ವಾಯುವಿಹಾರ ಮಾಡಿಕೊಂಡು ಬರೋಣ. ಮನಸ್ಸು ಫ್ರೆಶ್‌ ಆಗುತ್ತದೆ. ಆಮೇಲೆ ನಿಮ್ಮ ಮನಸ್ಸಿನ ಗೊಂದಲಗಳಿಗೆಲ್ಲ ಪರಿಹಾರ ಸಿಗುತ್ತದೆ. ಸಾಹೇಬರು ಈಗಷ್ಟೇ ಆಫ್ರಿಕಾದಿಂದ ಮರಳಿಬಂದಿದ್ದಾರೆ. ಪ್ರಯಾಣದ ಆಯಾಸದಲ್ಲಿದ್ದಾರೆ. ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳಲಿ” ಎಂದ. ನನಗೂ ಅದೇ ಬೇಕಾಗಿತ್ತು. ಕೂಡಲೇ ಎದ್ದು ಹೊರಟೆ. 

       ಅಂಗಳಕ್ಕಿಳಿದು ಚಪ್ಪಲಿ ಕಾಲಿಗೇರಿಸಿಕೊಳ್ಳುತ್ತಿದ್ದಂತೆ ಒಳಗಿನಿಂದ ಏನೋ ಮಾತನಾಡುವ, ನಗುವ ಧ್ವನಿ ಕೇಳಿ ಹಿಂತಿರುಗಿ ನೋಡಿದೆ. ಫ್ಯಾಂಟಮ್‌ ಆ ಫೋಟೋಫ್ರೇಮಿನ ಎದುರು ನಿಂತಿದ್ದ. ಅದರೊಳಗಿನಿಂದ ಒಂದು ಕೈ ಹೊರಬಂದಿತ್ತು. ಅದರ ಕೈಕುಲುಕುತ್ತಿದ್ದ ಫ್ಯಾಂಟಮ್‌ ಹೇಳಿದ ಮಾತುಗಳು ನನಗೆ ಸ್ಪಷ್ಟವಾಗಿ ಕೇಳಿಸಿದವು. “ಗೆಳೆಯ, ಧನ್ಯವಾದಗಳು. ನನ್ನ ಆತ್ಮೀಯ ಮಿತ್ರ ಬರುವಾಗಲೇ ನಾನು ಅವಸರದ ಕೆಲಸದ ಮೇಲೆ ಹೊರಹೋಗಬೇಕಾಗಿ ಬಂದಾಗ ಬೇಸರವಾಗಿತ್ತು. ಆದರೆ ನನ್ನ ಅನುಪಸ್ಥಿತಿ ಅವನಿಗೆ ಕಾಡದಂತೆ ನೋಡಿಕೊಂಡಿದ್ದಲ್ಲದೆ ಅವನು ಆನೆಯಿಂದ ಅಪಾಯಕ್ಕೀಡಾದಾಗ ಹುಲಿಯಂತೆ ಘರ್ಜಿಸಿ ಅವನನ್ನು ಕಾಪಾಡಿದ್ದೀಯಾ. ನಿನ್ನ ಸಹಾಯವನ್ನು ಈ ಜನ್ಮದಲ್ಲಿ ಮರೆಯುವುದಿಲ್ಲ”…

Category:Stories



ProfileImg

Written by Srinivasa Murthy

Verified