ಮಾಟ ಮಂತ್ರ

ದೈವ ಶಕ್ತಿಯ ಬಲ.

ProfileImg
13 May '24
4 min read


image

ಮಾಟ ಮಂತ್ರ

ವಿಜ್ಞಾನವು ಎಷ್ಟೇ ನಮ್ಮ ಜೀವನ ಪ್ರವೇಶಿಸಿದ್ದರೂ, ಎಷ್ಟೇ ನಾಸ್ತಿಕನಾದರೂ, ದೇವರೇ ಇಲ್ಲವೆಂದೂ ಘೋಷಿಸಿದರೂ, ಕೊನೆಗೆ ಮಾನವ ಅದೃಷ್ಟದ ಮೊರೆ ಹೋಗುತ್ತಾನೆ. ತಿಳಿದವರು ಆ ಅದೃಷ್ಟವನ್ನೇ ದೇವರು ಅನ್ನುತ್ತಾರೆ. ದೇವರನ್ನು ನಂಬುವವರು ದೆವ್ವವನ್ನು ನಂಬುತ್ತಾರೆ ಅಂದರೆ ಜನ ಸಮಯಾಚಾರವನ್ನು ನಂಬುವ ಹಾಗೆ ವಾಮಾಚಾರವನ್ನೂ ನಂಬುತ್ತಾರೆ. ದೊಡ್ಡ ದೊಡ್ಡ ರಾಜಕಾರಣಿಗಳು ಹಣವಂತರೂ ಮಾಟ ಮಂತ್ರದ ಮೊರೆ ಹೋಗುವುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಸಮಾಜದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಮಾಟ ಮಂತ್ರದ ಭಯವನ್ನು ಹೋಗಲಾಡಿಸುವುದು ಈ ಲೇಖನದ ಉದ್ದೇಶವಾಗಿದೆ.

ಅಭಿಚಾರ ಕ್ರಿಯೆ ಎಂಬುದು ಮಾಟ ಮಾಡುವ ವ್ಯಕ್ತಿಗಳಿಗೆ ಒಂದು ಮುಖ್ಯ ಅಂಗ.ಅಭಿಚಾರ ಕ್ರಿಯೆ ಎಂದರೆ ಆರು ಕರ್ಮಗಳು ಅವು ಯಾವುದು ಎಂದರೆ ಮಾರಣ, ಮೋಹನ, ವಶೀಕರಣ, ಸ್ತಂಭನ, ಉಚ್ಚಾಟನ ಮತ್ತು ವಿದ್ವೇಷನ. ಈ ಆರು ಕರ್ಮಗಳನ್ನು ನಾವು ಅಭಿಚಾರ ಕ್ರಿಯೆ ಎಂದು ತೆಗೆದುಕೊಳ್ಳುತ್ತೇವೆ. ತಂತ್ರದ ಕರಾಳ ಭಾಗವೆಂದರೆ ಅಭಿಚಾರ ಕ್ರಿಯೆ. ಅಭಿಚಾರ ಕ್ರಿಯೆಯನ್ನು ಒಳ್ಳೆಯದಕ್ಕೆ ಬಳಸಿದರೆ ಅದು ಸರಿ. ಅದರಲ್ಲಿ ತಪ್ಪೇನಿಲ್ಲ. ಆದರೆ ಅದನ್ನು ಕೆಟ್ಟದ್ದಕ್ಕೆ ಬಳಸಿದರೆ, ಅದು ಬಹಳಷ್ಟು ಹಾನಿಯನ್ನು ಉಂಟುಮಾಡಬಹುದು. ಪರಮಾಣು ಶಕ್ತಿಯು ಕೆಟ್ಟದ್ದಲ್ಲ  ಆದರೆ ಆ ಪರಮಾಣು ಶಕ್ತಿಯಿಂದ ನಾವು ಬಾಂಬ್ ತಯಾರಿಸಬಹುದು ಅಥವಾ ವಿದ್ಯುತ್ ತರಲು ಬಳಸಬಹುದು. ಆದ್ದರಿಂದ ಯಾವುದೇ ಶಕ್ತಿಯನ್ನು ಬಳಸುವುದರ ಉದ್ದೇಶವೇನು ಎಂಬುದು ಮುಖ್ಯವಾಗುತ್ತದೆ. ಅದರ ಮೇಲೆ, ಅದನ್ನು ಒಳ್ಳೆಯದಕ್ಕೆ ಅಥವಾ ಕೆಟ್ಟದ್ದಕ್ಕೆ ಬಳಸಬೇಕೆ ಎಂದು ನಿರ್ಧರಿಸಲಾಗುತ್ತದೆ. 

ಸಾಮಾನ್ಯ ಜನ ಹೆಚ್ಚು ತಲೆ ಕೆಡಿಸಿಕೊಳ್ಳುವುದು ವಶೀಕರಣದ ಬಗ್ಗೆ. ನಮ್ಮ ಮೇಲೆ ಯಾರಾದರೂ ವಶೀಕರಣ ಮಾಡಿದ್ದಾರೆಯೇ ಎಂದು ಜನರು ಆಗಾಗ್ಗೆ ನಂಬುತ್ತಾರೆ. ನಾವು ನಮ್ಮ ಸ್ವಂತ ನಿಯಂತ್ರಣದಲ್ಲಿಲ್ಲ ಎಂದು ನಾವು ಭಾವಿಸುತ್ತೇವೆ. ನಮ್ಮನ್ನು ಬೇರೆಯವರ ಕಡೆಗೆ ಎಳೆಯಲಾಗುತ್ತಿದೆ ಎಂಬ ಭಾವನೆ ಬರುತ್ತದೆ.  ನಿಜವಾಗಿ ನಮ್ಮ ಮೇಲೆ ವಶೀಕರಣ ಮಾಡಿದ್ದರೆ, ನಮ್ಮ ಮನಸ್ಸು ನಮ್ಮ ಮಾತುಗಳನ್ನು ಕೇಳುವುದನ್ನು ನಿಲ್ಲಿಸುತ್ತದೆ. ಆದರೆ ಶೇಕಡಾ ತೊಂಭತ್ತು ಪ್ರಕರಣಗಳಲ್ಲಿ ವಶೀಕರಣವನ್ನು ಬಳಸಲಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಏಕೆಂದರೆ, ನಮ್ಮ ಮನಸ್ಸು ಸಹಜವಾಗಿ ಒಂದು ರಕ್ಷಣಾತ್ಮಕ ವ್ಯವಸ್ಥೆಯನ್ನು ನಿರ್ಮಿಸಿಕೊಂಡಿರುತ್ತದೆ. ಸುಲಭವಾಗಿ ವಶೀಕರಣ ಮಾಡಲು ಆಗುವುದಿಲ್ಲ. ನಮ್ಮ ಸುತ್ತಲೂ ಏನಾದರೂ  ಸಮಸ್ಯೆ ಇದೆ ಎಂದು ನಾವು ನಂಬಿದರೆ ಮೊದಲು ಎಲ್ಲಾ ಕೋನಗಳಿಂದಲ್ಲೂ ನಮ್ಮ ಸುತ್ತಲೂ ನಡೆಯುತ್ತಿರುವ ಅಸಹಜ ಕ್ರಿಯೆಯನ್ನು ಗಮನಿಸಬೇಕಾಗುತ್ತದೆ.  ಕೆಲವೊಮ್ಮೆ ಆ ಕ್ರಿಯೆಗಳು ನಮ್ಮ ತಪ್ಪಿನಿಂದಲೇ ನಡೆದಿರುತ್ತದೆ, ಅದನ್ನು ಒಪ್ಪಿಕೊಳ್ಳದ ನಮ್ಮ ಮನಸ್ಸು ನಮ್ಮ ವೈಫಲ್ಯವನ್ನು ಮಾಟ ಮಂತ್ರದ ಮೇಲೆ ಹೊರಿಸುತ್ತೇವೆ. ಏಕೆಂದರೆ  ಸಾಮಾನ್ಯ ವ್ಯಕ್ತಿಯ ಸಾಮರ್ಥ್ಯದಿಂದ ಮಾಟ ಮಂತ್ರ ಮಾಡಲು ಆಗುವುದಿಲ್ಲ .ಆದರೆ ಎಲ್ಲಾ ಕೋನಗಳಿಂದ ನಾವು ಪ್ರಾಮಾಣಿಕವಾಗಿ ಗಮನಿಸಿದರೂ ಇನ್ನೂ ನಮ್ಮ ಸುತ್ತಲೂ ನಕಾರಾತ್ಮಕ ಶಕ್ತಿಯೇ ತುಂಬಿ ಜೀವನದಲ್ಲಿ ವೈಫಲ್ಯವನ್ನು ಅನುಭವಿಸುತ್ತಿದ್ದರೆ, ತಕ್ಷಣವೇ ಯಾರೋ ಮಂತ್ರವಾದಿಯ ಬಳಿ ಹೋಗುವುದು ಅಥವಾ ಇನ್ನಾವುದೋ ಪೂಜೆ, ಹೋಮ ಇತ್ಯಾದಿಗಳನ್ನು ಮಾಡಿ ಇರುವ ಕಷ್ಟದಲ್ಲಿ ಅಪಾರ ಹಣವನ್ನು ಖರ್ಚು ಮಾಡಿದರೇ ಇನ್ನೂ ಹೆಚ್ಚು ನೋವಿನಲ್ಲಿ ಮುಳುಗುವುದಲ್ಲದೆ ನಮ್ಮ ಮೇಲೆ ಮಾಟ ಮಾಡಿಸಿದವರು ಗೆದ್ದಂತೆ ಆಗುತ್ತದೆ.

ದುರ್ಗಾ ಸಪ್ತಶತಿಯಲ್ಲಿ ಬಹಳ ಶಕ್ತಿಯುತವಾದ ಪ್ರಯೋಗವನ್ನು ನೀಡಲಾಗಿದೆ. ಇದನ್ನು ದುರ್ಗಾ ಕವಚ ಎಂದು ಕರೆಯಲಾಗುತ್ತದೆ. ದುರ್ಗಾ ಕವಚದಲ್ಲಿ ನವದುರ್ಗೆಯರ ಶಕ್ತಿಗಳು ನಮಗೆ ದೊರೆಯುತ್ತವೆ. ನಾವು ಇದರಿಂದ ಶಕ್ತಿಯನ್ನು ಪಡೆಯುತ್ತೇವೆ. ನಾವು ಈ ಕವಚವನ್ನು ದಿನಕ್ಕೆ 11 ಬಾರಿ, ಅಥವಾ 21 ಬಾರಿ, ಅಥವಾ 31 ಬಾರಿ ಮಾಡಿದರೆ, ಮತ್ತು ಅದು ಕೂಡ 108 ದಿನಗಳ ಕಾಲ ನಿರಂತರವಾಗಿ ಮಾಡಿದರೆ, ಆಗ ನಮ್ಮ ಮೇಲಿನ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನಾಶಪಡಿಸಲು ಸಾಧ್ಯವಿದೆ. ಅಷ್ಟೇ ಅಲ್ಲ, ನಾವು ಬಯಸಿದರೆ. ನಮಗೆ  ಕೆಟ್ಟದು ಮಾಡಿರುವವರಿಗೆ ಅವರು ಮಾಡಿದ ಕೆಟ್ಟದನ್ನು ಅವರಿಗೆ ಹಿಂತಿರುಗಿಸಬಹುದು ಮತ್ತು ಕೆಟ್ಟ ಪರಿಣಾಮವನ್ನು ನೀಡಬಹುದು. ಏಕೆಂದರೆ ಈ ಕವಚದಲ್ಲಿ ಬಹಳ ಪ್ರಭಾವಶಾಲಿ ಶ್ಲೋಕ ಬರುತ್ತದೆ. 

ಅಭಿಚಾರಣಿ ಸರ್ವಾಣಿ ಮಂತ್ರ ಯಂತ್ರಾಣಿ ಭೂತಲೇ ಭೂಚರಃ ಖೇಚರಸ್ ಚೈವ ಚಲಜಶ್ಚೋ ಪಾದೇಶಿಕಾಃ ಸಹಜಾ ಕುಲಜಾ ಮಾಲಾ ಡಾಕಿನೀ ಶಾಕಿನೀ ತಥಾ ಅಂತರಿಕ್ಷ್ಚರ ಘೋರ ಡಾಕಿನ್ಯಶ್ಚ ಮಹಾಬಲಃ ಗ್ರಹ ಭೂತ ಪಿಶಾಚಾಶ್ಚ ಯಕ್ಷ ಗನ್ಧರ್ವ ಕ್ಷರಃವತಿ ದರ್ಶನಾತಸ್ಯ ಕವಚೇ ಹೃದಿ ಸಂಸ್ಥಿತೇ ಮನೋನ್ನತಿ ಭವೇದ್ರಾಜ್ಯಂ ತೇಜೋ ವೃದ್ಧಿ ಕರಂಪರಾ.

ನೀವು ದುರ್ಗಾ ಕವಚದ ಅಂತ್ಯಕ್ಕೆ ಹೋದರೆ, ತಾಯಿಯ ಆರಾಧನೆಯೊಂದಿಗೆ ನಿಮ್ಮ ಜೀವನದಲ್ಲಿ ಭೂತ, ಪ್ರೇತ, ಪಿಶಾಚ, ಡಾಕಿನಿ, ಶಾಕಿನಿ, ಬ್ರಹ್ಮ ರಾಕ್ಷಸರಂತಹ ಯಾವುದೇ ದುಷ್ಟಶಕ್ತಿ ಇದ್ದರೆ ತಾಯಿಯೇ ನಿಮಗೆ ಕವಚ ಆಗುತ್ತಾಳೆ ಹಾಗೂ ನಿಮ್ಮ ಸುತ್ತಲೂ ರಕ್ಷಣಾ ಗುರಾಣಿಯನ್ನು ರಚಿಸುತ್ತಾಳೆ.

ಆದ್ದರಿಂದ ನಾವುಗಳು ಯಾವುದೇ ರೀತಿಯ ಮೋಸ ಅಥವಾ ಕುರುಡು ನಂಬಿಕೆಯಲ್ಲಿ ಯಾರ ಬಳಿಯೂ ಹೋಗವ ಅವಶ್ಯಕತೆ ಇಲ್ಲ ಎಂಬುದು ನನ್ನ ಸಲಹೆ. 

ಮನೆಯಲ್ಲಿ ಕುಳಿತು ನಿಮ್ಮ ಪ್ರಾರ್ಥನಾ ಕೋಣೆಯಲ್ಲಿ  ತಾಯಿಯನ್ನು ಪೂಜಿಸಿ ಇದಕ್ಕೆ ಯಾರಿಂದಲೂ ದೀಕ್ಷೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಸ್ಪಷ್ಟವಾಗಿ ಓದಲು ಹಾಗೂ ಏಕಾಗ್ರ ಚಿತ್ತದಿಂದ ಸ್ಪಷ್ಟವಾಗಿ ಉಚ್ಛಾರಿಸಲು ಬಂದರೆ ಸಾಕು ಆ ತಾಯಿ ನಿಮ್ಮ ಸುತ್ತಲಿನ ಯಾವುದೇ ನಕಾರಾತ್ಮಕ ಅಥವಾ ದುಷ್ಠ ಶಕ್ತಿಯನ್ನು ನಾಶಮಾಡುತ್ತಾಳೆ. ನೀವು ಯಾರ ಬಳಿಯೂ ಹೋಗಬೇಕಾಗಿಲ್ಲ ಅಥವಾ ಹಣವನ್ನು ಖರ್ಚು ಮಾಡಬೇಕಾಗಿಲ್ಲ ಅಥವಾ ಮೋಸಕ್ಕೆ ಸಿಲುಕಬೇಕಾಗಿಲ್ಲ.  

ಚಂದ್ರನ ಗುರುತ್ವಾಕರ್ಷಣೆಯ ಬಲದಿಂದಾಗಿ ಸಮುದ್ರದಲ್ಲಿನ ಅಲೆಗಳ ಪರಿಣಾಮವು ಚಂದ್ರನ ಚಕ್ರದಿಂದ ಉಂಟಾಗುತ್ತದೆ ಎಂದು ಇಂದಿನ ವಿಜ್ಞಾನವು ಸಾಬೀತುಪಡಿಸಿದೆ. ಆದುದರಿಂದ  ಚಂದ್ರನು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತಾನೆ. ಜ್ಯೋತಿಷ್ಯದಲ್ಲಿ ಚಂದ್ರನಿಗೆ ಬಹಳ ಮಹತ್ವವಿದೆ. ಚಂದ್ರನ ಚಕ್ರ ಕೃಷ್ಣ ಪಕ್ಷದಲ್ಲಿ  15 ದಿನಗಳು ಮತ್ತು ಶುಕ್ಲ ಪಕ್ಷದಲ್ಲಿ 15 ದಿನ ಇರುತ್ತದೆ, 

ಇಂದಿನ ವಿಜ್ಞಾನವು, ಹುಣ್ಣಿಮೆಯ ಚಂದ್ರನು ರೋಗಿಯ ಮಾನಸಿಕ ಸ್ಥಿರತೆಯನ್ನು ಅಸ್ತಿರ ಗೊಳಿಸುತ್ತದೆ  ಎಂದು ಸಾಬೀತುಪಡಿಸಿದೆ. ಏಕೆಂದರೆ ಆ ಸಮಯದಲ್ಲಿ ಮಾನಸಿಕ ಸ್ಥಿತಿ ತುಂಬಾ ತೀವ್ರವಾಗಿರುತ್ತದೆ. 

ಆದ್ದರಿಂದ ಚಂದ್ರನ ಚಕ್ರದ 15 ದಿನಗಳು ನಮ್ಮ ಜೀವನಕ್ಕೆ ಬಹಳ ಮುಖ್ಯ. ಸಾಧನಾ ದೃಷ್ಟಿಯಿಂದಲೂ ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಅನೇಕ ತಂತ್ರ ಸಾಧನಗಳು ಹುಣ್ಣಿಮೆಯಂದು ಪ್ರಾರಂಭವಾಗಬೇಕು. ನೀವು ಗಾಯತ್ರಿ ಸಾಧನವನ್ನು ಕುರಿತು ತಿಳಿದರೆ ಅರ್ಥವಾಗುತ್ತದೆ, ಇದು ಅತ್ಯಂತ ಪ್ರಮುಖವಾದ ಮಂತ್ರ ಸಾಧನವಾಗಿದೆ, ನಂತರ ಗಾಯತ್ರಿ ಸಾಧನದ ಪ್ರಾರಂಭವು ಹುಣ್ಣಿಮೆಯ ದಿನವೇ ಆಗಬೇಕು ಎಂಬ ನಿಯಮವಿದೆ. ಆದುದರಿಂದ ನಾವು ಹುಣ್ಣಿಮೆಯ ದಿನ ಯಾವುದೇ ದೇವತಾ ಸಾಧನೆಯನ್ನು ಆರಂಭಿಸಿದರೇ ಅದು ಸಿದ್ಧಿಸುತ್ತದೆ.

ನಮ್ಮ ಧರ್ಮಗ್ರಂಥಗಳಲ್ಲಿ ಮತ್ತು ಧರ್ಮದಲ್ಲಿ ಆರತಿಗೆ ಹೆಚ್ಚಿನ ಮಹತ್ವವಿದೆ. ಏಕೆಂದರೆ ಪಂಚಭೂತಗಳಲ್ಲಿ ಅತ್ಯಂತ ಶಕ್ತಿಯುತವಾದ ಅಂಶವೆಂದರೆ ಅಗ್ನಿ ಅಂಶ.  ಅಗ್ನಿ ಅಂಶದ ಸಾಕ್ಷಿಯಲ್ಲಿ, ನಾವು ಏನೇ ಮಾಡಿದರೂ, ಯಾವುದೇ ಕರ್ಮ ಕಾರ್ಯಗಳನ್ನು ಮಾಡಿದರೂ, ನಾವು ಯಾವುದೇ ಸಾಧನನೆಯನ್ನು ಮಾಡಿದರೂ, ಅದರ ಶಕ್ತಿ ಹಲವಾರು ಪಟ್ಟು ಹೆಚ್ಚಾಗುತ್ತದೆ.

ಪಂಚಭೂತಗಳೆಂದರೆ ನೀರು, ಗಾಳಿ, ಆಕಾಶ, ಬೆಂಕಿ ಮತ್ತು ಭೂಮಿ. ಈ ಐದು ಅಂಶಗಳ ಬಳಕೆಯಿಂದ, ನಮ್ಮ ದೇಹ, ನಮ್ಮ ಇಡೀ ಭೂಮಿ ತಯಾರಾಗಿದೆ. ನಾವು ಆರತಿ ಮಾಡುವಾಗ ಆರತಿಯ ಬೆಳಕಿನಲ್ಲಿ ದೇವತಾ ಮೂರ್ತಿಯನ್ನು ತದೇಕ ಚಿತ್ತದಿಂದ ನೋಡಿದಾಗ ನಮ್ಮ ಹೃದಯದಲ್ಲಿ ಒಂದು ಭಾವನೆ ಕಾಣಿಸಿಕೊಳ್ಳುತ್ತದೆ. ನಮ್ಮೊಳಗೆ ಕುಳಿತಿರುವ ಅಗ್ನಿಯ ಅಂಶವು ಜಾಗೃತಗೊಳ್ಳುತ್ತದೆ. ಮತ್ತು ಈ ಕಾರಣದಿಂದಾಗಿ, ನಾವು ಯಾವುದೇ ದೇವತೆ ಅಥವಾ ದೇವರೊಂದಿಗೆ ಬೇಗನೆ ಸಂಪರ್ಕ ಸಾಧಿಸಬಹುದು. ಮತ್ತು ಆರತಿ ಮಾಡುವುದರಿಂದ ನಮ್ಮ ಹೃದಯದಲ್ಲಿ ಕಂಡುಬರುವ ಭಕ್ತಿ ಭಾವನೆಯು ನಮ್ಮನ್ನು ದೇವರ ಹತ್ತಿರಕ್ಕೆ ಕರೆದೊಯ್ಯುತ್ತದೆ., ಯಾವುದೇ ಸಾಧನೆ  ಮಾಡುವಾಗ ನಾವು ಬಹಳ ಕಷ್ಟ ಪಟ್ಟು ಚಿತ್ತವನ್ನು ಒಂದೇ ವಿಷಯದಲ್ಲಿ ಕೇಂದ್ರಿಕರಿಸುತ್ತೇವೆ. ಕಷ್ಟಪಡದೆ ನಾವು ಆರತಿಯ ಮೂಲಕ ದೇವರನ್ನು ನೋಡಿದಾಗ ಬಹಳ ಸುಲಭವಾಗಿ ನಮ್ಮ ಮನಸ್ಸು ಏಕಾಗ್ರ ಗೊಳ್ಳುತ್ತದೆ. ಮತ್ತು ಈ ಕಾರಣದಿಂದಾಗಿ, ನಮ್ಮ ಪುರಾಣಗಳಲ್ಲಿ, ನಮ್ಮ ವೇದಗಳಲ್ಲಿ, ನಮ್ಮ ಧರ್ಮಗ್ರಂಥಗಳಲ್ಲಿ ಆರತಿ ಮತ್ತು ದೀಪವನ್ನು ಬೆಳಗಿಸುವ ಮಹತ್ವವನ್ನು ನೀಡಲಾಗಿದೆ. 

ಮುಕ್ತಾಯ:

ಒಬ್ಬ ವ್ಯಕ್ತಿ ವಾಮಾಚಾರದ ಹಾದಿ ಹಿಡಿದು ಅದರಲ್ಲಿ ಸಿದ್ಧನಾಗಬೇಕಾದರೆ ಹಲವಾರು ಕಷ್ಟ ಕೋಟಲೆಗಳನ್ನು ಎದುರಿಸಿ ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ. ದೇಹವನ್ನು ವಿಪರೀತವಾಗಿ ದಂಡಿಸಬೇಕಾಗುತ್ತದೆ. ಇಂತಹ ಸಿದ್ಧ ಪ್ರಚಂಡ ವಮಾಚಾರಿಯನ್ನು ಒಬ್ಬ ಸಣ್ಣ ದೇವರ ಗುಡಿಯ ಸಾಮಾನ್ಯ ಅರ್ಚಕ ಯಶಸ್ವಿಯಾಗಿ ನಿರ್ಭಂಧಿಸುತ್ತಾನೆ. ಅದೇ ದೈವ ಶಕ್ತಿಯ ಬಲ. 

ನಾವು ದಿನ ನಿತ್ಯ ಮಾಡುವ ದೈವ ಕಾರ್ಯಗಳು ನಮ್ಮನ್ನು ಬಹಳ ಅಪಾಯಗಳಿಂದ ಪಾರು ಮಾಡುತ್ತವೆ ಎಂಬುದು ನನ್ನ ಅಭಿಪ್ರಾಯ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ದಯವಿಟ್ಟು ತಿಳಿಸಿ.

Picture source: Microsoft bing copilot

Category:Spirituality



ProfileImg

Written by Kumaraswamy S