Do you have a passion for writing?Join Ayra as a Writertoday and start earning.

ಮಾಧವಿ

ProfileImg
27 Feb '24
7 min read


image

ಅಂದು ಪ್ರತಿಷ್ಟಾನ ಪುರದಲ್ಲಿ ಸಂಭ್ರಮವೋ ಸಂಭ್ರಮ.ಇಡೀ ನಗರವೇ ಸಂಭ್ರಮದಲ್ಲಿ ಮಿಂದೆದ್ದಿತ್ತು.

ರಾಜಕುಮಾರಿಯ ಸ್ವಯವರ ಎಂದ ಮೇಲೇ ಕೇಳಬೇಕೇ…... ಎಲ್ಲೆಡೆ ತಳಿರು ತೋರಣ, ಬಣ್ಣ ಬಣ್ಣದ ರಂಗೋಲಿಗಳಿಂದ ಅಲಂಕೃತಗೊಂಡ ಬೀದಿಗಳು, ಸಿಂಗರಿಸಿಕೊಂಡು ಓಡಾಡುವ ಜನರು. ಇದನ್ನೆಲ್ಲಾ ನೋಡುತ್ತಿದ್ದ ನನ್ನ ಮನದಲ್ಲಿ ಅದರೇಕೋ ಇವೆಲ್ಲವೂ ಇದ್ಯಾವುದೂ ಇಷ್ಟವಾಗುತ್ತಲೇ ಇಲ್ಲಾ.

ನಾಲ್ಕು ಮಕ್ಕಳ ತಾಯಿಗೆ ಸ್ವಯಂವರವೇ?. ಇದರಲ್ಲಿ ನನ್ನ ಪಾತ್ರವೇನೆಂದೇ ತಿಳಿಯುತ್ತಿಲ್ಲ. ನಾಲ್ಕು ಮಂದಿ ಗಂಡಂದಿರೊಂದಿಗೆ ಬಾಳಿದಂತೆ ಐದನೇಯವನೊಂದಿಗೂ ಬಾಳಬೇಕು ಎಂಬುದೇ ಅರ್ಥವಲ್ಲವೇ?

ದೇಹದಿಂದ ನಾನು ಅಕ್ಷತ ಕನ್ಯೆಯೇ ಇರಬಹುದು. ನಾನು ಇನ್ನು ಕುಮಾರಿಯಾಗಿಯೇ ಇದ್ದಿರಬಹುದು ಆದರೆ ಈ ಎದೆಯಲ್ಲಿ ಹುದುಗಿರುವ ನೆನಪುಗಳು, ಅದೆಲ್ಲವನ್ನು ಅನುಭವಿಸಿದ  ಮನಸೊoದಿದೆಯಲ್ಲಾ ಅದನ್ನೆoತು ಸಂತೈಸಲಿ.?

ಕೇವಲ ದೇಹವನ್ನೊಪ್ಪಿಸುವುದಷ್ಟೇ ಕೆಲಸವೇ ಹೆಣ್ಣಿಗೆ? ಅವಳಿಗೂ ಮನಸೇಂಬುದು ಇರುತ್ತದೆಯಲ್ಲವೇ? ಆದರೆ ಈ ಪುರುಷ ಸಮಾಜದಲ್ಲಿ ಇದಕೆಲ್ಲ ಬೆಲೆಯೇ ಇಲ್ಲಾ. ಹೆಣ್ಣೆಂದರೆ ಒಂದು ಭೋಗ ವಸ್ತುವೆಂದೆ ತಿಳಿದಿದ್ದಾರೆ ಎಲ್ಲಾ.

ಏಕೇ ಈ ತಾರತಮ್ಯ.? ಅರ್ಥವೇ ಆಗುವುದಿಲ್ಲ…..

ತಾಯಿ ನನಗಾಗಿ ಆರಿಸಿರುವ ವಜ್ರಭಾರಣಗಳನ್ನು ಪೀತಾಂಬರ, ದೂಕುಲಗಳತ್ತಾ ನೋಡಲು ಮನಸ್ಸಾಗುತ್ತಿಲ್ಲ..

ಮನಸು ಬೇಡವೆಂದುಕೊಂಡರೂ ಹಿಂದಕ್ಕೆ ಓಡುತ್ತದೆ.ಗತಕಾಲದ ಆ ನೆನಪುಗಳನ್ನು ಎಳೆದು ತಂದು ನಿಲ್ಲಿಸುತ್ತದೆ.

ನಾನು ನನ್ನ ತಂದೆ ಯಯಾತಿಯ ಮುದ್ದಿನ ಮಗಳು ರಾಜಕುಮಾರಿ. ಕಾಲ ಕಿರುಬೆರಳಿನಿಂದ ತೋರಿದ್ದನ್ನು ತಂದು ಮುಂದಿಟ್ಟು ಓಲೈಸುವ ಸಖಿಯರು. ಮನರಂಜನೆಗೆಂದೇ ಸಿದ್ದರಾಗಿ ನಿಂತ ಯಾವ್ಯಾವುದೋ ದೇಶದಿಂದ ಬಂದಿದ್ದ ಕಲಾವಿದರು, ನನ್ನ ದೇಹವೋ ಆಗಷ್ಟೇ ಹರೆಯಕ್ಕೆ ಬಂದು ಆಗತಾನೆ ಅರಳಿದ ಹೂವಿನಂತೆ ಕಂಗೊಳಿಸುವ  ನನ್ನ ಈ ತನುವಿಗೆ ಶೋಡಶೋಪಚಾರಗಳು ನಡೆದಿತ್ತು. ಅರಶಿಣ,.ಗಂಧ, ಕಸ್ತೂರಿ,ಕೇಸರಿ ಗುಲಾಬಿ ಜಲದಲ್ಲಿ ಮಿಂದು ಮೈ ತುಂಬಾ ಹೊಮ್ಮವ ಸುಗಂಧದಲ್ಲಿ ಮೈಯಿಂದ ಸುಸುವ ಪರಿಮಳ.ಸಾಮ್ರಾಣಿಯ ಹೊಗೆಯಲ್ಲಿ ಒಣಗಿ ನೆಲ ಮುಟ್ಟುವ ಕೇಶರಾಶಿ ಗಗನದ ಚಂದ್ರಮನೆ ಧರೆಗಿಳಿದಂತೆ ನೀವು ರಾಜಕುಮಾರಿ ಎಂದು ಸಖಿಯರು ಹೋಗಳುವಾಗ ನಾನು ಮೈಮರೆತು ಕನ್ನಡಿಯ ಮುಂದೆ ಗಂಟೆ ಗಟ್ಟಲೇ ಕೂರುತ್ತಿದ್ದೆ ನನ್ನ ಈ ಅಂದ ಚಂದವನ್ನು ಓಲೈಸಿ ಈ ಸೌಂದರ್ಯವನ್ನು ಹೊಗಳಿ ಹಾಡುವ ಆ ರಾಜಕುಮಾರನಿಗಾಗಿ ಕಾಯುತ್ತಿದ್ದೆ. ಒಮ್ಮೊಮ್ಮೆಯಂತೂ ತಂಪಾದ ಬೆಳದಿಂಗಳು ಸಹಾ ಸುಡುವಂತಹ ಏನೋ ಯಾರಲ್ಲೂ ಹೇಳಲಾಗದ ತಲ್ಲಣ ಇದೇ ಹರೆಯದ ಬಯಕೆಯೋ ಮನದಾಳದಲ್ಲಿ ಹುದುಗಿರುವ ಕಾಮನೆಯೋ ಅರಿಯಲಾಗದೆ ನನಗೇ ನಾನೇ ರೋಮಾಂಚನಗೊಳ್ಳುತ್ತಿದ್ದೆ.

ಹದಿ ಹರೆಯದ ನನ್ನ ಈ ಮನಸಿನಲ್ಲಿ ನೂರೆಂಟು ಕನಸುಗಳು ದಾoಗುಡಿಯಿಟ್ಟು ನನ್ನ ಮೈಯ್ಯಲ್ಲಿ ಮಿಂಚಿನ ಪುಳಕ ತರಿಸುತ್ತಿತ್ತು. ಆಗಷ್ಟೇ ಮನದಲ್ಲಿ ಹೊಸ ಕಲ್ಪನೆಗಳು ಮೂಡುತ್ತಿದ್ದವು.

ನನ್ನ ಮುಖಾರವಿಂದ ಕೊಂಚ ನಲುಗಿದರೂ ಸಹಿಸದ ತಂದೆತಾಯಿಯರು ಅದರಲ್ಲೂ ನನ್ನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ತಂದೆ ಅದು ಹೇಗೆ ನಿರ್ಧರಿಸಿಬಿಟ್ಟರೋ ಅದೆಷ್ಟು ಸುಲಭವಾಗಿ ನನ್ನನ್ನು  ಆ ಗಾಲವನೊಂದಿಗೆ ಕಳಿಸಿಬಿಟ್ಟರು. ಅವರಿಗೆ ಒಮ್ಮೆಯಾದರೂ ನನ್ನನ್ನು ಕೇಳಬೇಕು ಎಂದೆನಿಸಲೇ ಇಲ್ಲವೇ?

ಈಗಲೂ ನನ್ನ ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ಅಂದು ಹಾಗೆಯೇ ಸಖಿಯರೊಂದಿಗೆ ಸೇರಿ ಉಯ್ಯಾಲೆ ಆಡುವಾಗ ಕೊಂಚದಿನದ ಹಿಂದಷ್ಟೇ ಮದುವೆಯಾಗಿದ್ದ ನನ್ನ ಪ್ರಿಯ ಸಖಿ ವೇದಿಕ ತನ್ನ ಮೊದಲ ದಿನದ ಅನುಭವ ಹೇಳುತ್ತಾ ಇದ್ದುದನ್ನು ನಾನು ಮಿಕ್ಕ ಸಖಿಯರು ಕೇಳುತ್ತಾ ಕುಳಿತಿದ್ದೆವು. ಆಗ ಸೇವಕನೊಬ್ಬ ಬಂದು ನಿಂತಾಗ ಹಿರಿಯಳಾದ ದಾಸಿ ಚಂದ್ರಿಕೆ ಏನೆಂದು ಕೇಳಿದಾಗ ಮಹಾರಾಜರು ನನ್ನನ್ನು ಈಗಿಂದೀಗಲೇ ಓಲಗಕ್ಕೆ ಬರಹೇಳಿದ್ದಾರೆ…ಎಂದು ನಿವೇದಿಸಿದ್ದ.

ಶೃಂಗಾರ ಭಾವನೆಯಲ್ಲಿ ಮಧುರಾನಂದದ ಅನುಭುತಿಯಲ್ಲಿ ವಿಹರಿಸುತ್ತಿದ್ದ  ನಾನು ಒಲ್ಲದ ಮನಸಿನಿಂದಲೇ ಹೊರಟಿದ್ದೆ.

ವಿಶ್ವಾಮಿತ್ರರ ಶಿಷ್ಯನಾದ ಗಾಲವನೊಂದಿಗೆ ನಾನು ನಿಂತ ನಿಲುವಿನಲ್ಲೇ ಹೊರಡಬೇಕು ಎಂದಾಗ. ನಾನು ಅಪ್ರತಿಭಾಳಾಗಿದ್ದೆ.ಏಕೆ ಏನು ಎಂದು ಕೇಳುವ ಅಧಿಕಾರ ನಮಗೆಲ್ಲಿಯದು ರಾಜಕನ್ಯೆ ಎಂದರೆ ರಾಜಕಾರ್ಯಕ್ಕಾಗಿಯೇ ಹುಟ್ಟಿದವಳು ಎಂದರ್ಥವೆಂದು ತಿಳಿದಿತ್ತಲ್ಲ.

ತುಂಬಿದ ಸಭೆಯಲ್ಲಿ, ಅದರಲ್ಲೂ ಮಹಾರಾಜನಿಗೆ ಪ್ರಶ್ನಿಸಲುoಟೆ? ಕ್ಷತ್ರಿಯ ವಂಶದಲ್ಲಿ ರಾಜಕುಮಾರಿಯರು ರಾಜಕಾರ್ಯಗಳಿಗಾಗಿಯೇ, ರಾಜತಂತ್ರಗಳಿಗಾಗಿಯೇ ಸಮರ್ಪಿತರು ಎಂದೆಲ್ಲಾ ಹಿಂದಿನವರಿಂದ ಕೇಳಿ ತಿಳಿಯುತ್ತಲೇ ಬೆಳೆದಿರುತ್ತೇವಲ್ಲವೇ ನಾವು. 

ನಾನು ಹಾಗೆಯೇ ತಂದೆಯವರನ್ನು ಏಕೇ? ಏನು? ಎಂದೇನೂ ವಿಚಾರಿಸದೆ. ಅವರ ಅಣತಿಯಂತೆ ತಲೆ ಬಗ್ಗಿಸಿ ನಿಂತ ಕಾಲಲ್ಲಿಯೇ ಗಾಲವನ ಹಿಂದೆ ನಡೆದಿದ್ದೇ.

ನನಗೇ ಗಾಲವನ ಮೇಲೇ ಅಸಾಧ್ಯ ಕೋಪ ಬಂದಿತ್ತು. ಇವನು ತನಗಾಗಿ ನನ್ನನ್ನು ಬೇಡಿದ್ದರೆ ಸರಿ ಎಂದುಕೊಳ್ಳಬಹುದಿತ್ತು. ಸುಕುಮಾರನಲ್ಲದಿದ್ದರೂ ಚಿಗುರು ಮಿಸೆಯ ತರುಣ ಒಪ್ಪಿಕೊಳ್ಳಲು ಅಡ್ಡಿ ಇರಲಿಲ್ಲ. ಆದರೇ ಅವನು ಮಾಡಿದ್ದೇನು..

ಅವನಿಗೆ ತನ್ನನ್ನು ಹನ್ನೆರಡು ವರ್ಷಗಳ ಕಾಲ ಕಲಿಸಿ ಸ್ನಾತಕ ವಿದ್ಯಾರ್ಥಿಯನ್ನಾಗಿ ಮಾಡಿದ್ದ ಗುರುಗಳಿಗೆ ಏನಾದರೂ ಕಾಣಿಕೆ ಕೊಡಲೇಬೇಕು ಎನಿಸಿತ್ತಂತೆ.

ಅದಕ್ಕಾಗಿ ಗುರುಗಳಲ್ಲಿ ತನ್ನ ಆಶಯವನ್ನು ನಿವೇದಿಸಿಕೊಂಡಾಗ ಅವರು, "ಅಯ್ಯ ಗಾಲವನೆ….ಈಗ ತಾನೇ ಇಶಾವಾಸ್ಯದ ಮಂತ್ರವನ್ನು ಉಚ್ಚರಿಸಿದೆಯಲ್ಲ……." ಕಸ್ಯಸ್ವಿದ್ಧನo " ಎಂದು ಈ ವಿಶ್ವದಲ್ಲಿರುವ ಸಂಪತ್ತು ಯಾರದ್ದೂ? ಯಾರಿಗೆ ಯಾರೂ ದಕ್ಷಿಣೆ ನೀಡಬಲ್ಲರು ಹೇಳು….? ಎಂದರೂ ಕೇಳದೇ

"ಗುರುಗಳೇ ಶಿಷ್ಯನಾಗಿ ನನ್ನ ಕರ್ತವ್ಯ. ನೀವು ಗುರು ದಕ್ಷಿಣೆ ಕೇಳಲೇ ಬೇಕು ಅದನ್ನು ನೀಡಿ ನಾನು ಕೃತರ್ಥನಾಗಲೇಬೇಕು."

"ಬೇಡ ನಾನು ನಿನ್ನ ಅಧ್ಯಯನದಿಂದ ಪ್ರಸನ್ನನ್ನಾಗಿದ್ದೇನೆಂದರು"

ಆದರೂ  ಬೆನ್ನು ಬಿಡದೆ ಅವರನ್ನು ಪೀಡಿಸಿದಾಗ ಅದೆಷ್ಟು ಬಾರಿ ಹೇಳಿದರೂ ಕೇಳದ ಗಾಲವನ ಮೇಲೇ ವಿಪರೀತ ಕ್ರೋಧ ಉಂಟಾಗಿ 

“ಗಾಲವಾ… ನಿನಗೆ ಸಾಧ್ಯವಾದರೆ ಎಂಟುನೂರು ಕುದುರೆಗಳನ್ನು ತಂದುಕೊಡು.”  “ಅಗತ್ಯವಾಗಿ ಗುರುದೇವ ನಿಶ್ಚಯವಾಗಿ ನಿಮ್ಮ ಆಜ್ಞೆಯನ್ನು ಪಾಲಿಸುತ್ತೇನೆ” ಎಂದು ಉತ್ಸುಕನಾಗಿ ಹೇಳಿದಾಗ, ಆತುರ ಬೇಡ ಗಾಲವಾ ನಮ್ಮ ಮಾತನ್ನು ಸರಿಯಾಗಿ ಆಲಿಸಿ ನಿರ್ಧರಿಸು  ನಾವು ಹೇಳಿರುವ ಎಂಟುನೂರು ಕುದುರೆಗಳು ಸಾಮಾನ್ಯ ಅಶ್ವಗಳಲ್ಲ  ಅವು ಸಾಮಾನ್ಯ ಕುದುರೆಗಳಾಗಿರದೆ ಮೈಯಲ್ಲಾ ಬೀಳುಪಾಗಿ ಒಂದು ಕಿವಿ ಮಾತ್ರ ಕಪ್ಪಾಗಿರುವ ಶ್ವೇತ ಕೃಷ್ಣ ಕುದುರೆಗಳಾಗಿರಬೇಕು?" ಎಂದು ಕೇಳಿದಾಗ ಕೊಂಚವೂ ಯೋಚಿಸದೆ ಹಾಯಾರ್ಥಿ ಯಾಗಿ ದೇಶ ದೇಶ ಸುತ್ತುತ್ತಾ ಗುರುಗಳು ಹೇಳಿದಂತ ಕುದುರೆಗಳು ಸಿಗದೇ ಚಂದ್ರವಂಶದ ಚಕ್ರವರ್ತಿ ಯಾಯತಿಯ  ಬಳಿ ಸಿಗಬಹುದೆಂದು  ಬಂದಿದ್ದನಂತೆ.

ಅದರಂತೆ ಯಾಯತಿ ಮಹಾರಾಜನ ಅಸ್ಥಾನಕ್ಕೆ ಬಂದವನು  ಮಹಾರಾಜನಿಗೆ ಶುಭ ಹಾರೈಸಿ

"ನಾನು ವಿಶ್ವಾಮಿತ್ರರ ಶಿಷ್ಯ ಗಾಲವಾ ಯಾಚನಾರ್ಥಿಯಾಗಿ ಬಂದಿರುವೆ"! ಎಂದು ತಾನು ಗುರು ದಕ್ಷಿಣೆಯರೂಪದಲ್ಲಿ ಎಂಟು ನೂರು ಶ್ವೇತ ಕೃಷ್ಣ ಅಶ್ವಗಳನ್ನು ಬೇಡುತ್ತಿದ್ದೇನೆ ಎಂದಾಗ, 

ಯಾಯತಿಯು

" ಋಷಿವರ್ಯ ನನ್ನಲ್ಲಿ ನೀನು ಹೇಳಿದಂತ ಅಶ್ವಗಳಿಲ್ಲಾ. ಬದಲಾಗಿ ನವಮೋಹನಾoಗಿಯಾದ ಮಾಧವಿ ಎಂಬ ಮಗಳಿದ್ದಾಳೆ ಆಕೆಯನ್ನು ನಿನಗೆ ನೀಡುತ್ತೇನೆ. ನೀನು ಬೇರೆ ರಾಜರುಗಳಿಗೆ ಅವಳನ್ನ ಒಪ್ಪಿಸಿ ಅಶ್ವಗಳನ್ನು ಪಡೆದುಕೊ"!

ಎಂದು ಆಶ್ವಾಸನೆ ಕೊಟ್ಟ ಮೇಲೆ ಇನ್ನೇನಿದೆ?

ಎಂದು ತನ್ನ ಪ್ರೀತಿಯ ಮಗಳು ಮಾಧವಿಯನ್ನು ಗಾಲವನಿಗೆ ಒಪ್ಪಿಸಿಯೇ ಬಿಟ್ಟರೆ ನಾನು ಮಾಡುವುದೇನು?. ಬೇರೆ ಮಾರ್ಗವೇನಿತ್ತು ನನ್ನ ಬಳಿ?ಸುಮ್ಮನೆ ಗಾಲವನ ಹಿಂದೆ ನಡೆದಿದ್ದೇ.ಅವನೊಂದಿಗೆ ಸುತ್ತುತ್ತಾ ನಾನು ಸುಕೋಮಲೆ,ರಾಜಕುಮಾರಿ ಎಂಬುದನ್ನೇ ಮರೆತು  ಓರ್ವ ಸಾಮಾನ್ಯ ಋಷಿಕನ್ಯೆಯಂತೆ ಅವನ ಹಿಂದೆ ನಡೆದಿದ್ದಾಗಿತು.

ಗಾಲವಾ ಈಗ ಸೂರ್ಯವಂಶದ ರಾಜನಲ್ಲಿ ಅಶ್ವಗಳನ್ನು ಯಾಚಿಸಲು ಅಯೋಧ್ಯೆಗೆ ಬಂದಿದ್ದ. ಅಯೋದ್ಯೆಯ ಅರಸ ಹರ್ಯಶ್ವ ರಾಜನಲ್ಲಿ ತನ್ನ ಸಂಕಟ ಹೇಳಿಕೊಂಡಿದ್ದ.

ಅದು ಹೇಗೇ ಗೊತ್ತೇ

“ಮಹಾರಾಜಾ, ಈ ಮಾಧವಿಯನ್ನು ಒಂದು ವರ್ಷದಕಾಲ ಇಟ್ಟುಕೊಂಡು ನನಗೇ ಎಂಟು ನೂರು ಶ್ವೇತಾಶ್ವಗಳನ್ನು ಕರುಣಿಸಬೇಕು"!

ಎಂದಿದ್ದ.

ಆ ಮಾತುಗಳನ್ನು ಕೇಳಿ ನನಗೇ ಮೈ ತುಂಬಾ ಮುಳ್ಳು ಸವರಿದ್ದ ಹಾಗಾಗಿತ್ತು.

ಹರ್ಯಶ್ವ ರಾಜಾನಲ್ಲಿ ಗಾಲವಾ ಸೂಚಿಸಿದ್ದ ಕುದುರೆಗಳೆನೋ ಇತ್ತು. ಆದರೆ

ಪೂರ್ತಿಯಾಗಿ ಇರಲಿಲ್ಲ. ಅವನಲ್ಲಿ ಇನ್ನೂರು ಕುದುರೆಗಳು ಮಾತ್ರವಿದ್ದವು.

ಗಾಲವನಿಗೊ ಅಷ್ಟನ್ನು ಪಡೆಯುವುದೇ ಸೂಕ್ತ ವೆನಿಸಿತ್ತೇನೋ ಇನ್ನೂರು ಕುದುರೆಗಳ ಬದಲಾಗಿ ನನ್ನನ್ನು ಒಪ್ಪಿಸಿ ಹೊರಟೇ ಹೋದಾಗ ನಾನು ಕೇಳುವುದಾರನ್ನು?ಹೇಳಿ ಅಲವತ್ತುಕೊಳ್ಳುವುದಾದರು ಯಾರಲ್ಲಿ?

ಸರಿ ನಾನು ಹರ್ಯಶ್ವ ಮಹಾರಾಜನ ಅಂತಃಪುರಕ್ಕೆ ಸೇರಿದೆ.  ಅಂತಃಪುರ ಸೇರಿದ ಎರಡನೇ ದಿನವೇ ರಾಜನಾ ಆಗಮನದ ಸೂಚನೆಯನ್ನೂ  ಅರುಹಿದ್ದರು ಸಖಿಯರು.ಮತ್ತೆ ನನ್ನ ಶೃಂಗಾರ ನಡೆದಿತ್ತು 

ಅದರಂತೆ ನನ್ನ ಶೋಡಶೋಪಚಾರ ಶುರುವಾಗಿತ್ತು ಪನ್ನೀರಿನ ಸ್ನಾನ ಮಾಡಿಸಿ ನವ ವಸ್ತ್ರಗಳನ್ನುಡಿಸಿ ರಾಜ ಕಳುಹಿಸಿದ್ದ ಆಭರಣಗಳನ್ನು ತೊಡಿಸಿ ಅಲಂಕರಿಸಿದ್ದರು.

ಮದುವೆ ಎಂಬ ಆಡoಬರವೇನೂ ಇಲ್ಲದೆ  ಪಲ್ಲಂಗವನ್ನೆರಿದ್ದಾಗಿತ್ತು.ರಾಜನಿಗೆ ನನ್ನ ಬಗ್ಗೆಯಾಗಲಿ, ನನ್ನ ಮನಸ್ಸನ್ನಾಗಲಿ ತಿಳಿಯುವ ವ್ಯವಧಾನ ವಿರಲಿಲ್ಲ. ಬದಲಾಗಿ ಕೂಡುವ ಸುಖ ಹೊಂದುವ ವಾಂಛೇ ಮಾತ್ರವಿತ್ತು.

ಎಲ್ಲಾ ವೈಭೋಗವಿದ್ದರೂ ನನ್ನ ಮನಸ್ಸನ್ನು ಅರಿಯುವ ಹೃದಯವಿರಲಿಲ್ಲ. ಮಿಥುನದಾಲಿಂಗನವೂ ಮನ ತಣಿಸಲಿಲ್ಲ. ಜೀವನ ನೀರಸವೆನಿಸಿತ್ತು.

ವರುಷ ಕಳೆಯುವಾಗ ನಾನು ಗರ್ಭವತಿಯಾಗಿ ವಸುಮಾನನೆoಬ ಮಗನಿಗೆ ಜನ್ಮವಿತ್ತೆ. ಹುಟ್ಟಿದ ಮಗುವನ್ನು ಮುದ್ದಿಸುವ ಆಸೆಯೂ ಆಗಲಿಲ್ಲ. ವರ್ಷ ಕಳೆಯುತ್ತಿದ್ದಂತೆ ಗಾಲವನಾಗಮನವಾಗಿತ್ತು.

ಮಾತಿನಂತೆ ನಾನು ಗಾಲವನೊಂದಿಗೆ ಹೊರಡಬೇಕಾಯಿತು.

ಮತ್ತೇ ಅರುನೂರು ಕುದುರೆಗಳು ಬೇಕಿತ್ತಲ್ಲ,

ಅದರ ಅನ್ವೇಷಣೆಯೇ ಅವನಿಗೆ ಮುಖ್ಯವಾಗಿತ್ತು. ಅವನು ಕೊಡಬೇಕಿದ್ದ ಗುರುದಕ್ಷಿಣೆಯೇ ಅವನಿಗೆ ಮುಖ್ಯವಾಗಿತ್ತೇ ವಿನಃ ನನ್ನ ಪರಿಸ್ಥಿತಿಯನ್ನು ಅರಿಯುವಷ್ಟು ವ್ಯವಧಾನವಿರಲಿಲ್ಲ  ಅವನಲ್ಲಿ. ಅವನನ್ನು ಅಂದೇನು ಪ್ರಯೋಜನ. ಹೆತ್ತ ತಂದೆಯೇ ನನ್ನನ್ನು ಅವನಿಗೆ ಒಪ್ಪಿಸಿರುವಾಗ.

ಕಾಶಿ ದೇಶಕ್ಕೆ ನನ್ನ ಪಯಣ ಸಾಗಿತ್ತು. ಕಾಶಿರಾಜನು ಗಾಲವನ ಮಾತಿಗೆ ಒಪ್ಪಿದನಾದರೂ ಅವನ ಬಳಿಯಲ್ಲಿ ಸಹಾ ಇದ್ದದ್ದು ಇನ್ನೂರು ಅಶ್ವಗಳೇ. ಅವುಗಳನ್ನು ಗಾಲವನಿಗೊಪ್ಪಿಸಿ ನನ್ನನ್ನು ತನ್ನ ಅಂತಃಪುರಕ್ಕೆ ಸೇರಿಸಿಕೊಂಡ.

ಮತ್ತೇ ಎಲ್ಲಾ ಅದೇ ಪುನರಾವರ್ತನೆ. ರಾಜ ಹೇಳಿಕಳುಹಿಸಿದಾಗ ನನ್ನನ್ನು ದಾಸಿಯರು ಸುಂದರವಾಗಿ ಅಲಂಕರಿಸಿದರು.

ಕಾಶಿರಾಜಾನದರೋ ಏನೂ ವಿಚಾರಿಸದೆ ಸೌಂದರ್ಯವನ್ನು ಸವಿಯುವುದೇ ರಾಜಾನಾದವನ ಕರ್ತವ್ಯ ಎಂದುಕೊಂಡಿದ್ದನೇನೋ ಅಲ್ಲಿಯೂ ನಾನು ಭೋಗದ ವಸ್ತುವಾದೆ. ಅವನಿಂದಾಗಿ ನಾನು ಗರ್ಭಧರಿಸಿ ಪ್ರತರ್ದನನಿಗೆ ತಾಯಿಯಾದೆ. ಗಾಲವನೊಂದಿಗೆ ಮತ್ತಷ್ಟು ದೇಶಗಳನ್ನು ಸಂಚರಿಸಿ ಕೊನೆಗೆ ಭೋಜದೇಶದ ರಾಜನಾದ ಉಶಿನರನಲ್ಲಿ ಅಂತಹ ಕುದುರೆಗಳಿವೆ ಎಂಬ ಸುದ್ದಿ ಸಿಕ್ಕಿತ್ತು.

ಹಾಗಾಗಿ ಭೋಜನಗರಿಗೆ ಬಂದು ಭೋಜರಾಜನಿಗೆ ನನ್ನನ್ನು ಒಪ್ಪಿಸಿದ್ದ. ಆದರೆ ಅವನ ಬಳಿಯಲ್ಲಿಯೂ ಇದ್ದದ್ದು ಇನ್ನೂರು ಕುದುರೆಗಳಷ್ಟೇ ಇದ್ದದ್ದು.

ಗಾಲವಾ ಅವನ್ನು ಬಿಟ್ಟಾನೆಯೇ? ಹಾಗಾಗಿ ನಾನು ಉಶೀನರ. ಭೂಪತಿಯೊಂದಿಗೂ ಒಂದು ವರ್ಷ ಕಳೆಯಬೇಕಾಯಿತು. ಎಲ್ಲವೂ ಮೊದಲಿನಂತದ್ದೇ ಪುನರಾವರ್ತನೆ ನಡೆದು ನಾನು ಉಶೀನರ ರಾಜನ ಪಲ್ಲಂಗ ವೇರಿದ್ದೆ.

ಪರಿಣಾಮ ಅವನಿಂದ ನನಗೇ ಶಿಬಿ ಎಂಬ ಮಗ ಹುಟ್ಟಿದ್ದ. ವರ್ಷ ಮುಗಿದಿತ್ತು.ಈಗ ಗಾಲವನ ಬಳಿ ಆರುನೂರು ಶ್ವೇತ ಕೃಷ್ಣ ಕುದುರೆಗಳು ಸೇರಿದ್ದವು. ಯಥಾ ಪ್ರಕಾರ ಹೊಟ್ಟೆಯಲ್ಲಿ ಹುಟ್ಟಿದ್ದ ಪಿಂಡವನ್ನು ಬಿಟ್ಟು ಗಾಲವನ ಹಿಂದೆ ನಡೆದಾದ್ದಾಗಿತ್ತು.

ದೇಶದದ್ಯಾoತ ಸಂಚರಿಸಿದ ಗಾಲವನಿಗೆ ಈ ಪ್ರಕಾರದ  ಕುದುರೆಗಳು ಇನ್ನೆಲ್ಲೂ ಇಲ್ಲವೆಂದು ತಿಳಿದು ಬಂದಿತ್ತು.

ಹಾಗಾಗಿ ಗಾಲವನಿಗಿದ್ದಿದ್ದು ಒಂದೇ ದಾರಿ. ಅದೇನೆಂದರೆ ಅರುನೂರು ಶ್ವೇತ ಕೃಷ್ಣ ಅಶ್ವಗಳನ್ನು ವಿಶ್ವಾಮಿತ್ರರಿಗೆ ಒಪ್ಪಿಸಿ ಉಳಿದ ಇನ್ನೂರು ಕುದುರೆಗಳ ಬದಲಾಗಿ ಮಾಧವಿಯನ್ನು ಒಪ್ಪಿಸುವುದು ಅಂದರೇ ನನ್ನನ್ನು ಒಂದು ವರ್ಷದ ವರೆಗೆ ಅವರಲ್ಲಿ ಬಿಟ್ಟು ಕೈ ಮುಗಿಯುವುದು.

ಅವನ ಆ ಅಚಲ ನಿರ್ಧಾರವನ್ನು ನಾನು ಬದಲಿಸಲು ಸಾಧ್ಯವೇ?  ವಿಶ್ವಾಮಿತ್ರರಂಥ ಆಚಾರ್ಯರನ್ನೇ ಗುರುದಕ್ಷಿಣೆ ಸ್ವೀಕರಿಸಿ ಎಂದು ಪಿಡಿಸಿದವನು ನನ್ನ ಮಾತನ್ನು ಕೇಳುವನೇ .?

ಅದಲ್ಲದೆ ಕುದುರೆಗಳ ಬದಲಾಗಿ ನನ್ನನ್ನು ಕೊಟ್ಟು ಕುದುರೆಗಳನ್ನು ಪಡೆದುಕೊ ಎಂದು ನನ್ನ ಪಿತಾಶ್ರೀಯವರೇ ಹೇಳಿರುವಾಗ. ನಾನು ಅವನನ್ನು ಹಿಂಬಾಲಿಸಲೇಬೇಕಿತ್ತು.

ರಾಜ ಮಹಾರಾಜರ ಅರಮನೆಯ ವಾತಾವರಣ ರಾಜಭೋಗ ಬಿಟ್ಟು ಆಶ್ರಮಕ್ಕೆ ಬಂದಿದ್ದೇ. ದೊಡ್ಡ ಗುರುಕುಲವದು. ಕಾಡಿನ ನಡುವೆ ಅದೆಷ್ಟೋ ವಿಶಾಲ ವಾದ ಜಾಗದಲ್ಲಿ ಕಟ್ಟಿದ್ದ ಪರ್ಣ ಕುಟೀರಗಳು,. ಯಜ್ಞ ಶಾಲೆಗಳು,. ಗುರು ಮಂದಿರ, ಶಿಷ್ಯರಿಗಾಗಿ ಕಟ್ಟಿದ್ದ ದೊಡ್ಡ ದೊಡ್ಡ ಛಾತ್ರಾಲಯ, ಗೋಶಾಲೆ, ವಾದ ಸಂವಾದಕ್ಕಾಗಿಯೇ ಇದ್ದ ವೇದಿಕೆಗಳು, ವಿಶಾಲವಾದ ಪಾಕಶಾಲೆ ಅದಕ್ಕೂ ದೊಡ್ಡ ಭೋಜನ ಶಾಲೆ, ದರ್ಬೆ ಸಮೀತ್ತುಗಳನ್ನಿಡುವ ಫಲ, ಕಂದ ಮೂಲಗಳನ್ನೀಡುವ ಗೋದಾಮು.

ಅದರಲ್ಲೂ ವಿಶ್ವಾಮಿತ್ರರ ಗುರುಕುಲವೆಂದರೆ ಕೇಳಬೇಕೇ.,?ಎಲ್ಲೆಲ್ಲಿ ನೋಡಿದರೂ ಲತಾಕುಂಜಗಳು. ಹೂಗಳು ತುಂಬಿ ಬಾಗಿರುವ ಹೂಬಳ್ಳಿಗಳು ಬಾಳೇಗಿಡ, ಮಾವು, ಹಲಸು, ಅಂಜುರ, ಪೇರಲೇ ಮರಗಳು.

ಅಲ್ಲಲ್ಲಿಯೇ ವಿಹರಿಸುವ ಜಿಂಕೆ, ನವಿಲು, ಮೊಲಗಳು ಈ ವನ ಸೌಂದರ್ಯ ನನ್ನ ಮನಸ್ಸನ್ನು ಆಕರ್ಷಿಸಿತ್ತೇನೋ . ಏಕೋ ಕಾಣೆ ನಾನು ಸುಪ್ರಸನ್ನಳಾಗಿದ್ದೆ.

ಗಾಲವಾ ವಿಶ್ವಾಮಿತ್ರರಿಗೆ

"ಗುರುಭ್ಯೋನಮಃ…! ಎಂದು ವಂದಿಸಿ

"ಗುರುವರ್ಯ ನಾನು ಬಹಳ ಪರಿಶ್ರಮದಿಂದ ಈ ಆರೂನೂರು ಶ್ವೇತ ಕೃಷ್ಣಾಶ್ವಗಳನ್ನು ಸಂಪಾದಿಸಿರುವೆ.

ಉಳಿದ ಇನ್ನೂರು ಅಶ್ವಗಳಿಗೆ ಬದಲಾಗಿ ಯಾಯತಿ ಮಹಾರಾಜರ ಮಗಳಾದ ಮಾಧವಿಯನ್ನು ನಿಮಗೆ ಒಪ್ಪಿಸುತ್ತಿರುವೆ. ತಾವು ಇದನ್ನು ಸ್ವೀಕರಿಸಿ ಗುರುದಕ್ಷಿಣೆ ಪುರಾಣವಾಯಿತೇoದು ತಾವು ಆಶೀರ್ವದಿಸಿದರೆ ಅದೇ ನನ್ನ ಪರಮ ಭಾಗ್ಯವೆಂದುಕೊಳ್ಳುವೆ"!.

ಎಂದು ಬಹು ವಿನೀತನಾಗಿ ಪ್ರಾರ್ಥಿಸಿಕೊಂಡಾಗ

ವಿಶ್ವಾಮಿತ್ರರು

"ಶಿಷ್ಯ ಗಾಲವನೆ, ನಿನ್ನ ಪರಿಶ್ರಮ ಮೆಚ್ಛತಕ್ಕದ್ದೆ ಆಗಿದೆ. ಕುದುರೆಗಳೊಂದಿಗೆ ಚದುರೆಯನ್ನೂ ಅರ್ಪಿಸಿರುವೆ".

"ಹೌದು ಗುರುದೇವ ನೀವು ಸ್ವೀಕರಿಸಬೇಕು"!.

"ನೀನು ನೀಡಿದ ಗುರು ದಕ್ಷಿಣೆಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ.. ನಿನಗೆ ಸನ್ಮoಗಳವಾಗಲಿ."!

ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದವರು

"ಈ ಮಾಧವಿಯನ್ನು ಯಾಯಾತಿ ಮಹಾರಾಜಾ ವಿಕ್ರಯ ವಸ್ತುವನ್ನಾಗಿ ಮಾತ್ರ ನೀಡಿದ್ದಾನೆ. ಇನ್ನೂರು ಕುದುರೆಗಳ ಮೌಲ್ಯಕ್ಕೆ ಒಂದು ವರ್ಷ ಮಾತ್ರ ಇವಳೊಂದಿಗೆ ಸುಖಿಸಬಹುದು. ಈ ನಿಯಮದoತೆಯೇ ಇಕ್ಷ್ಯಶ್ವಾಕು, ಕಾಶಿ, ಭೋಜ ದೇಶಾಧಿಪತಿಗಳು ಇವಳೊಂದಿಗೆ ಒಂದೊಂದು ವರ್ಷ ಸುಖಿಸಿದ್ದಾರೆ. ಹಾಗಿರುವಾಗ ಅಕ್ಷತ ಕನ್ಯೆಯಾದ ಈ ಮಾಧವಿ ಒಂದು ವರ್ಷ ಮಾತ್ರ ನನ್ನೊಂದಿಗಿರುತ್ತಾಳೆ ಒಂದು ವರ್ಷದ  ಬಳಿಕ ನನ್ನಿಂದ ಇವಳನ್ನು ಪಡೆದು ಪುನಃ ಯಯಾತಿ ಮಹಾರಾಜನಿಗೆ ಒಪ್ಪಿಸು"!. ಎಂದಾಗ ಗಾಲವಾ ಆಗಲೆಂದು ಒಪ್ಪಿ ಹೊರಟು ಹೋಗಿದ್ದ. ವಿಶ್ವಾಮಿತ್ರರೊಂದಿಗೆ ಒಂದು ವರ್ಷ ಅದು ಹೇಗೋ ಕಳೆದದ್ದಾಗಿತು.ಅವರಿಂದಲೂ ಗರ್ಭ ಧರಿಸಿ ಅಷ್ಟಕ ನನ್ನು ಹೆತ್ತಿದ್ದಾಯಿತು. ಅವನನ್ನು ಮಡಿಲಿನಲ್ಲಿಟ್ಟುಕೊಂಡು ಹಾಲುಣಿಸಿದೆನಷ್ಟೇ ಅವನು ಮಡಿಲಲ್ಲಿಯೇ ನಿದ್ದೇ ಮಾಡಿದ್ದ.

ಆ ಸಮಯದಲ್ಲಿ ವಿಶ್ವಾಮಿತ್ರರು ಗಾಲವನನ್ನು ಕರೆದು ಹೇಳಿದ್ದರು 

" ಗಾಲವಾ, ಒಂದು ವರ್ಷ ಪೂರ್ಣವಾಗಿದೆ ಇನ್ನು ಮಾಧವಿಯನ್ನು ನೀನು ಕರೆದೋಯ್ಯಬಹುದು"!. ಎಂದಾಗ ನಾನು ಅಲ್ಲಿರಲಾಗುವುದೇ?. ಗಾಲವನ ಹಿಂದೆ ಮತ್ತೆ ಹೆಜ್ಜೆ ಹಾಕುತ್ತ ನಡೆದಿದ್ದೇ.

ಯಾಕೋ ನನ್ನ ಹೃದಯ ತುಂಬಿ ಬಂದಿತ್ತು ನಾಲ್ಕು ಮಕ್ಕಳು ಹಡೆದರೂ ಆ ಮಕ್ಕಳನ್ನು ಮುದ್ದಾಡುವ ಮನೋಸ್ಥಿತಿ ನನ್ನದಾಗಿರಲಿಲ್ಲ.  ಕುಡಿಯೋಡೆದ ಕಂದ ನೆಂಬ ಮಮಕಾರವು ನನ್ನಲ್ಲಿ ಕಿಂಚಿತ್ತೂ ಉಳಿದಿರಲಿಲ್ಲ ನಾಲ್ಕು ಮಂದಿ  

ಪುತ್ರರನ್ನು ಹೆತ್ತೆನೆoಬ ಅಭಿಮಾನವೂ ಇರಲಿಲ್ಲ.

ಮರಳಿ ನನ್ನ ಮನೆಗೆ ಹಿಂತಿರುಗಿ ಬಂದಿದ್ದೇ. ಅದೆಲ್ಲಿಯ ನನ್ನ ಮನೆ. ಯಾರಾದರೂ ಒಬ್ಬನನ್ನು ಮದುವೆಯಾಗಿದ್ದರೆ ಅದು ನನ್ನ ಮನೆಯಾಗಿರುತ್ತಿತ್ತು ಎನಿಸಿತ್ತು.

ಮತ್ತೇ ಯಯಾತಿ ಮಹಾರಾಜನಿಗೆ ನಾನುಹೆಣ್ಣು ಎಂಬ ಕಾರಣಕ್ಕೆ ತಲೆನೋವಾಗಿ ಪರಿಣಾಮಿಸಿದ್ದೀರಬಹುದು. ಚಿಂತಿತನಾದವನಿಗೆ ತಾಯಿ ನಾನು ಅಕ್ಷತಕನ್ಯೆ ಎಂಬುದನ್ನು ನೆನಪಿಸಿದ್ದೀರಬಹುದು.

ನನ್ನನ್ನು ಸಾಗಿಸುವ ಪ್ರಯತ್ನ ಮಾಡಿ ಸ್ವಯಂವರವನ್ನೇರ್ಪಡಿಸಿಯೇ ಬಿಟ್ಟಿದ್ದ. ಅದಕ್ಕಾಗಿ ಈ ಸಂಭ್ರಮ

"ರಾಜಕುಮಾರಿ.. ಬನ್ನಿ ಮಂಗಳ ಸ್ನಾನವಾಗಲಿ"!.  

ಸಖಿಯ ಕರೆಗೆ ನನ್ನ ಮನಸ್ಸು ವಾಸ್ತವಕ್ಕೆ ಹಿಂದಿರುಗಿತ್ತು.ಅವರು ಹೇಳಿದಂತೇ ಕೇಳದೇ ಬೇರೆ ದಾರಿಯೇ ಇರಲಿಲ್ಲ.ಅವರು ಮಾಡಿದ ಎಲ್ಲಾ ಕಾರ್ಯಗಳಿಗೂ ಸಹಕರಿಸಿ ಅವರು ಸಿಂಗರಿಸಿದಂತೆ ಸಿಂಗರಿಸಿಕೊಂಡು ನಿಂತ ನನ್ನನ್ನು ನೋಡಿ ಎಲ್ಲಾ ಹೊಗಳುವರೇ.

"ಚಂದನದ ಗೊಂಬೆಯಂತೆ ಕಾಣುತ್ತಿರುವಿರಿ ರಾಜಕುಮಾರಿ "!

ಎಂದು ಹಿರಿಯ ದಾಸಿ ನನ್ನ ದೃಷ್ಟಿ ತೆಗೆದು ಸಂತೋಷಪಟ್ಟಿದ್ದಳು.

ಆದರೆ ಈಗ ನನ್ನ ಮನಸಿನಲ್ಲಿ ಇವೆಲ್ಲ ಭ್ರಮೆ ಯಾವಾಗಲೋ ಅಳಿಸಿಹೋಗಿತ್ತು.

ನನಗೇ ಈ ರಾಜಭೋಗ,ವೈಭೋಗ, ಸಂಪತ್ತು, ಸುಖ ಯಾವುದೂ ಬೇಡವಾಗಿತ್ತು. ಇದೆಲ್ಲಾದ್ದರಿಂದ ಮನಸು ವ್ಯಘ್ರಗೊಂಡಿತ್ತು. ನನಗೀಗ ಬೇಕಾದದ್ದು ಶಾಂತಿ, ಸಂತೋಷ. ನೆಮ್ಮದಿ. ಈಗ ನಾನೇ ಅದನ್ನು ಹುಡುಕಿ ಕೊಳ್ಳಬೇಕಾಗಿದೆ. ಎಂದುಕೊಂಡೇ.

ತಾಯಿ ಬಳಿ ಬಂದು ನನ್ನ ಮುಂದಲೇ ನೇವರಿಸಿ ಮುತ್ತನಿತ್ತವಳು. ನನ್ನ ಕೈಗೆ ಮಲ್ಲಿಗೆಯ ಹೂ ಮಾಲೇ ಕೊಟ್ಟು.

"ಮಗಳೇ,ಇoದು ನಿನ್ನಾ ಸ್ವಯಂವರ ನಿನಗೆ ಬೇಕಾದವರನ್ನು ಅರಿಸಿಕೊಳ್ಳುವ ಸುಯೋಗ. ಆಗಮಿಸಿದ ರಾಜ ಮಹಾರಾಜರೆಲ್ಲರೂ ಮಹಾ ಪ್ರತಾಪಿಗಳು, ಸುಂದರ, ಸಧೃಢ ಶರೀರದ ವೀರಾಧಿವೀರರು. ನೀನು ಯಾರನ್ನೇ ಆರಿಸಿ ಅವರಿಗೇ ಮಾಲೆ ಹಾಕಿದರೂ ನಮ್ಮ ಸಮ್ಮತಿಯಿದೆ."!

ಎಂದು ಹೇಳಿ ನಡೆದಾಗ ನಾನು ಬರಿ ತಲೆ ಆಡಿಸಿದ್ದೆನಷ್ಟೇ.

ಸಖಿಯರೊಂದಿಗೆ ನಾನು ಸ್ವಯಂವರ ಮಂಟಪಕ್ಕೆ ಬಂದಾಗ ಎಲ್ಲಾ ರಾಜರೂ ನನ್ನತ್ತ ಮೋಹದ ನೋಟ ಬೀರಿ ನನ್ನನ್ನೇ ನೋಡುತ್ತಿದ್ದರು.

ಅವರ ಪ್ರೇಮ ಕಟಾಕ್ಷ ನನಗೇ ಹೇಸಿಗೆ ತರಿಸಿತ್ತು. ನಾನು ಒಮ್ಮೆಮನದಲ್ಲಿ ನಿರ್ಧಾರ ಮಾಡಿದವಳು ಮಲ್ಲಿಗೆಯ ಮಾಲೇ ಹಿಡಿದು ರಾಜರುಗಳ ನಡುವಿನಿಂದ ನೇರವಾಗಿ ನಡೆದು ಬಂದು ಉದ್ಯಾನದಲ್ಲಿದ್ದ ಮರಕ್ಕೆ ಮಲ್ಲಿಗೆಯ ಮಾಲೇ ಹಾಕಿಬಿಟ್ಟಿದ್ದೆ.

ನನ್ನ ದಾರಿ ನಾನು ಆರಿಸಿಕೊಂಡೆನೆಂದು ಎಲ್ಲರಿಗೂ ತಿಳಿದಿತ್ತು. ಮುಂದೆ ಪ್ರಕೃತಿಯ ಮಡಿಲು, ಗಿಡ,ಮರ, ಬಳ್ಳಿ ಇವುಗಳೇ ಜೀವನ ಸಂಗಾತಿಗಳು ಎಂದು ಮೌನವಾಗಿ ನಡೆದಿದ್ದೇ.

ಸ್ವಯoವರಕ್ಕೆ ಆಗಮಿಸಿ ಕಾದಿದ್ದ ರಾಜ ಮಹಾರಾಜರಿಗೆ ಬಹು ದೊಡ್ಡ ನಿರಾಸೆಯಾಗಿತ್ತು. ತಂದೆ ತಾಯಿ ನನ್ನ ಆಯ್ಕೆ ಸರಿಯೋ ತಪ್ಪೋ ಎಂದು ತಿಳಿಯಲಾರದೆ ಭ್ರಮೆಗೊಳಗಾದವರಂತೆ ನಿಂತೇ ಇದ್ದರು.

ಆದರೆ ನನ್ನ ಮನಸು ಇದೆಲ್ಲಾದಕ್ಕೆ ತಯಾರಾಗೀರಲೇ ಇಲ್ಲಾ. ಮತ್ತದೇ ಭೋಗದ ವಸ್ತುವಾಗಿರಲು ಮನ ಒಪ್ಪದೇ ಇದೆಲ್ಲಾ ನನಗೇ ಬೇಡವೆನಿಸಿತ್ತು. ನಾನು ಅರಿಸಿಕೊಂಡ ದಾರಿಯಲ್ಲಿ ಹಿಂತಿರುಗಿ ನೋಡದೆ ನಡೆದಿದ್ದೆ.

Category : Stories


ProfileImg

Written by Sujala J