ಸಂಚಾರದಲ್ಲೊಂದು ವಿಚಾರ

ProfileImg
10 Apr '24
4 min read


image

( ಈ ಲೇಖನದಲ್ಲಿ ಬರೆದ ವಿಷಯವು ಯಾರ ಭಾವನೆಗಳನ್ನು ಅಥವ ವಿಚಾರಗಳನ್ನು ಹೀಯಾಳಿಸುವುದಕ್ಕಲ್ಲ, ಯಾರೂ ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದೆಂದು ವಿನಂತಿ)

ಬಸ್ಸಿನಲ್ಲಿ ಕೂತು ಕಿಡಕಿಯಾಚೆಗೆ ಕಣ್ಣಾಡಿಸಿದಾಗ,
ಒಂದು ಪೋಸ್ಟರ್ ನೋಡಿದೆ. ಯಾರೋ ಒಬ್ಬರು ಸ್ಥಳೀಯ ಮುಖಂಡರು ತೀರಿಕೊಂಡಿದ್ದರು. ಅವರ ಅಭಿಮಾನಿ‌ ಬಳಗದವರು "ಅಣ್ಣ ಮತ್ತೆ ಇದೇ ಊರಲ್ಲಿ ಹುಟ್ಟಿ ಬಾ" ಅಂತ ಅವರ ಫೊಟೊದ ಕೆಳಗೆ ಬರದಿದ್ದರು. ನಾನು ಮತ್ತೆ ಓದಿದೆ ನಾ ಓದಿದ್ದೇನೂ ತಪ್ಪಾಗಿರಲಿಲ್ಲ. ಈಗ ಆ ಸತ್ತಿರುವ ಅಣ್ಣ ಈ ತಮ್ಮಂದಿರ ಅಭಿಮಾನದ ಬರಹವನ್ನು ಓದಲು ಬರಬೇಕಲ್ಲವೆ?  ಇದು ಸಾಧ್ಯವೇ?  ಮತ್ತೆ ಹುಟ್ಟಿ ಬಾ ಎಂದು ಅವನಿಗೇ ನೇರವಾಗಿ ಹೇಳಲಾಗಿದೆ. ಅಭಿಮಾನವನ್ನು ತೋರಿಸುವ ಭರದಲ್ಲಿ ನಾವು ಭಾಷೆಯನ್ನು ಬೇಕಾಬಿಟ್ಟಿ ಪ್ರಯೋಗ ಮಾಡಿ ಅದರ ಅರ್ಥ ಕೆಡಿಸಿಬಿಟ್ಟಿರುತ್ತೇವೆ. ನನಗೆ ಇಲ್ಲಿ ಅವರ ಅಭಿಮಾನದ ಬಗ್ಗೆ ಸಂಶಯವಿಲ್ಲ‌ ಮತ್ತು ಅವರ ಭಾವನೆಗಳ ಬಗ್ಗೆ ಗೌರವ ಇದೆ.  ಅವರು ಬರೆದದ್ದು "ಮತ್ತೆ ಇದೇ ಊರಲ್ಲಿ ಹುಟ್ಟಿ ಬರಲಿ" ಎಂದಾಗಬೇಕಾಗಿತ್ತು. ವಾಕ್ಯವು ಆಶಯವನ್ನು ವ್ಯಕ್ಯಪಡಿಸಬೇಕಾಗಿತ್ತು. ಆದರೆ ತೀರಿಕೊಂಡವರಿಗೇ ಅದನ್ನು ನೇರವಾಗಿ ಹೇಳಿ ಹಾಸ್ಯಾಸ್ಪದವಾಗುತ್ತಿದೆ.
ದಿನಪತ್ರಿಕೆಗಳಲ್ಲಿ ಕೆಲವೊಮ್ಮೆ ತೀರಿಕೊಂಡವರ ಪುಣ್ಯಸ್ಮರಣೆಯ ಬಗ್ಗೆ ಜಾಹೀರಾತು ಬಂದಿರುತ್ತದೆ. ತೀರಿಕೊಂಡವರನ್ನ ನೆನಪಿಸಿಕೊಳ್ಳಲು ಬೇರೆ ಬೇರೆ ಜನಾಂಗದಲ್ಲಿ ಅವರದೇ ಆದ ವಿಧಾನಗಳಿವೆ ಅದರ ಬಗ್ಗೆ ನನ್ನ ತಕರಾರಿಲ್ಲ. ಆದರೆ ಅದಕ್ಕೆ ಬಳಸುವ ತಪ್ಪು ವಾಕ್ಯಗಳಿಂದ ಅದು ಹಾಸ್ಯಾಸ್ಪದವಾಗುವುದರ ಬಗ್ಗೆ ವಿಷಾದವಿದೆ.  ಸತ್ತ ಸಂಬಂಧಿಕರ ಪೊಟೊ ಹಾಕಿ " ನೀವು ನಮ್ಮನಗಲಿ ಐದು/ ಹತ್ತು/ಹದಿನೈದು ವರ್ಷವಾದರೂ ನಿಮ್ಮ ಆದರ್ಶಗಳು ನಮಗೆ ದಾರಿದೀಪವಾಗಿವೆ" ಎಂಬ  ಜಾಹೀರಾತು ನೋಡಿದ ತಕ್ಷಣ  ನಗು ಬರುತ್ತದೆ. ಇದು ಕೂಡ ಸತ್ತವರಿಗೇ ನೇರವಾಗಿ ಹೇಳಿರುವ ವಾಕ್ಯ, ಅಂದರೆ ಆ ಸತ್ತವರು , ಸ್ವರ್ಗದಲ್ಲೋ ನರಕದಲ್ಲೋ ಕುಳಿತು ಇವರು ಜಾಹೀರಾತು ಕೊಟ್ಟ ಪೇಪರನ್ನೇ ತರಿಸಿ ಓದಬೇಕಾಗುತ್ತದಲ್ಲ? ಇದು ಸಾಧ್ಯವೇ? ಆದರ್ಶಗಳನ್ನು ಪಾಲಿಸುತ್ತಿರುವುದನ್ನ ಈ ತರ ಜಾಹೀರಾತು‌ ಮೂಲಕ ಜಗತ್ತಿಗೆ ತಿಳಿಸಬೇಕ? ಇದು ಇತ್ತೀಚೆಗೆ whatsapp status ಗಳಲ್ಲೂ ಸಿಗುತ್ತವೆ. " ಗೆಳೆಯ ಕಡೆಗೂ ಕಾಣದ ಲೋಕಕ್ಕೆ ಹೋಗಿಯೇ ಬಿಟ್ಟೆಯ?" (ಅಂದರೆ ಆ ಸತ್ತವನು ತನ್ನ‌ಜೊತೆ ಕಡ್ಡಾಯವಾಗಿ ಮೊಬೈಲ್ ತೆಗೆದುಕೊಂಡೇ ಹೋಗಬೇಕು. ಮತ್ತೆ ಬದುಕಿರುವ ಗೆಳೆಯ ತನ್ನ ಬಗ್ಗೆ ಹಾಕಿದ status ನೋಡಲು ಬೇಕಲ್ಲ‌ ಮೊಬೈಲ್? ) status ಹಾಕುವವನಿಗೆ ನಿಜವಾಗಿಯೂ ತನ್ನ ಗೆಳೆಯನ ಸಾವಿನ ಸುದ್ದಿಯನ್ನ ಉಳಿದ ಗೆಳೆಯರಿಗೆ ತಿಳಿಸಬೇಕಾಗಿದ್ದಲ್ಲಿ "ಇಂಥವರು ಇಂಥ ದಿನ ತೀರಿಕೊಂಡರು" ಅಂತ ಬರಕೊಂಡರೆ‌ ಸಾಕಾಗುತ್ತದೆ. ಅಷ್ಟೆಲ್ಲಾ‌ ನಾಟಕ  ಬೇಕ?
ಇನ್ನೂ ಒಂದಿಷ್ಟು "ಹೊಸ ರೀತಿಯ ಜಾಹೀರಾತ"ನ್ನು facebook ಗಳಲ್ಲಿ ನೋಡಬಹುದು. " ಹುಟ್ಟುಹಬ್ಬದ ಶುಭಾಶಯಗಳು ಮಗನೇ/ ಮಗಳೇ /ಇತ್ಯಾದಿ" ಇದನ್ನ ನೋಡಿದ ತಕ್ಷಣ ಈ ಅಪ್ಪ‌ಮಗ ಮನೆಲಿ‌ ಮಾತಾಡಿಕೊಳ್ಳುವುದಿಲ್ಲವ? ಜಗಳ ಆಗಿರಬಹುದ? ಇಲ್ಲದಿದ್ರೆ  ನೇರವಾಗಿ ಮಗನಿಗೆ ಹುಟ್ಟುಹಬ್ಬದ ಶುಭಾಶಯ ಹೇಳೊದು‌ಬಿಟ್ಟು ಈ ತರ facebook ಬಳಸಿ ಹೇಳುವದ್ಯಾಕೆ ಅಂತ .‌ ಅಂದರೆ ತಮ್ಮ ಮಗನಿಗೆ ಶುಭಾಶಯಗಳು ಹರಿದು ಬರಲಿ ಎಂಬ ಬಯಕೆ. ನಿಮ್ಮ ಮಕ್ಕಳಿಗೆ  ಶುಭಾಶಯ/ ಆಶೀರ್ವಾದ ಬೇಕಾದಲ್ಲಿ ನೇರವಾಗಿ ಇವತ್ತು ನನ್ನ ಮಗನನ್ನು‌ಹರಸಿ ಅಂತ ಕೇಳೊದಕ್ಕೆ‌ ಎನು ತೊಂದರೆ? ಸುತ್ತಿ‌ಬಳಸಿ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗಬೇಕ?
ಇವತ್ತು ಇನ್ನೊಂದು ಪೊಸ್ಟರ್ ನೋಡಿದೆ. ಅದರಲ್ಲಿ"  Miss u ನರಸಿಂಹ " ಅಂತ ಬರದಿದ್ದರು.  ನರಸಿಂಹ ಯಾರಿರಬಹುದು?  ಪೊಸ್ಟರ್ ನೋಡದಿದ್ರೆ ಊಹಿಸಲು ಕಷ್ಟ, ನರಸಿಂಹ ಒಂದು ಕೊಬ್ಬರಿ ಹೋರಿ. ( ನೇರವಾಗಿ miss u ಅಂತ ಹೋರಿಗೇ  ಹೇಳಲಾಗಿದೆಯಲ್ಲ?ಪ್ರಾಣಿಗಳೂ ಓದೊದನ್ನ ಮೊಬೈಲ್ ಬಳಸುವುದನ್ನ ಕಲಿತಿರಬೇಕು ಅಂದಾಯಿತಲ್ಲವೆ?)  ಬದುಕಿದ್ದಾಗ ಅದಕ್ಕೆ ಹೆಂಡ ಕುಡಿಸಿ, ಬಾಲ ತಿವಿದು, ನಾನಾ ರೀತಿಯ ಚಿತ್ರಹಿಂಸೆ ಕೊಟ್ಟು ಅದನ್ನು ಸ್ಪರ್ಧೆಯಲ್ಲಿ ಓಡಿಸಿ ವಿಕೃತ ಖುಷಿಪಟ್ಟವರು ಅದೇ ಹೋರಿ ಸತ್ತಾಗ miss u ಎಂದು ಊರ ತುಂಬಾ ಪೊಸ್ಟರ್ ಹಾಕುವುದನ್ನ ಕಂಡು ಇವರು miss ಮಾಡಿಕೊಂಡಿದ್ದು ಯಾರನ್ನ ಯಾವುದನ್ನ ಎಂದು ನಾನು ಹೇಳಬೇಕಾಗಿಲ್ಲ ಅಲ್ಲವೇ?
ಒಟ್ಟಿನಲ್ಲಿ ಸತ್ತವರನ್ನು ನೆನಪು ಮಾಡಿಕೊಳ್ಳುವ ಭರದಲ್ಲಿ ಕನ್ನಡವನ್ನು  ಬೇಕಾಬಿಟ್ಟಿ ಪ್ರಯೋಗ ಮಾಡಿ ಸಾಯಿಸುತ್ತಿರುವುದಂತೂ ನಿಜ.

 

 

ನಾವು ಭಾರತೀಯರಂತೂ ಬಹುಭಾಷಾ ಪ್ರವೀಣರು. ಪ್ರತಿದಿನ ಆಡುವ ಭಾಷೆಯಲ್ಲೂ ನಾವು ಪ್ರೆಂಚ್, ಲ್ಯಾಟಿನ್, ಗ್ರೀಕ್, ಈಜಿಪ್ಟ , ಇಂಗ್ಲೀಷ್ ಗಳಂತ ವಿದೇಶಿ ಭಾಷಾ ಪದಗಳನ್ನು ಧಾರಾಳವಾಗಿ  ಬಳಸುತ್ತೇವೆ. ಅಂದರೆ ನಮ್ಮ ಕನ್ನಡದಲ್ಲಿ ಅವುಗಳಿಗೆ ಸಂವೇದಿ ಶಬ್ದಗಳು ಇಲ್ಲ ಅಂತ ಅಲ್ಲ. ಆಧುನಿಕತೆ ಮತ್ತು ಅನುಕರಣೆಯ ಭರಾಟೆಯಲ್ಲಿ ಕನ್ನಡದ‌ ಶಬ್ದಗಳು ಹಳೆಯದು   ಅನಿಸಿರಬಹುದು. ತಾವು ಇಂಗ್ಲೀಷ ಮಾತಾಡಿ ಮುಂದುವರಿದ ತಲೆಮಾರಿನವರು ಎಂಬ ಭ್ರಮೆಯಲ್ಲಿರಬಹುದು. ಉದಾಹರಣೆಗೆ  ಪಪ್ಪ ಮಮ್ಮಿ , ಪಪ್ಪ ಅನ್ನುವುದು ಪಾಪ ಎನ್ನುವ ಗ್ರೀಕ್ ಶಬ್ದ, ಅದನ್ನು ಪ್ರೆಂಚರು ಹೆಚ್ಚು ಬಳಸುತ್ತಾರೆ. ಅದರ ಅರ್ಥ ಫಾದರ್ .  ಅದು ಹಿಂದಿ ಸಿನೆಮಾಗಳಿಂದ ಜನಪ್ರಿಯವಾಗಿ ಪಪ್ಪ, ಪಾಪಾ ಆಗಿದೆ. ನಮಗೆಲ್ಲಾ ಸಣ್ಣವರಿದ್ದಾಗ ಹೊಸ ಬಟ್ಟೆ , ಹೊಸ ಸರ ಅಥವ ಕಿವಿಯೋಲೆ ಹಾಕಿದಾಗ  "ಓ ಹೊಸ ಪಪ್ಪ ಚಂದಿದ್ದು "  ಎಂದು ಅಜ್ಜನೋ ಅಜ್ಜಿಯೋ ಹೇಳುತ್ತಿದ್ದರು. ಅದು ಕನ್ನಡದ ಒಪ್ಪ ( ಅಲಂಕಾರ, ಒಪ್ಪ ಓರಣ ) ಪದದ ಬಾಲಿಶ ರೂಪವಾಗಿ ಪಪ್ಪ ಎಂದು ಹೇಳಿದ್ದು ಗೊತ್ತು.  ಆದರೆ  ಯಾವಾಗ ಅಪ್ಪಂದಿರು ಮತ್ತೆ ಹಳೇ ರೂಪ ತಾಳಿ ಪಪ್ಪಂದಿರಾದರೋ ಗೊತ್ತೇ ಆಗಲಿಲ್ಲ. ಮಮ್ಮಿ ಶಬ್ದಕ್ಕೆ ಐರ್ಲ್ಯಾಂಡ್ ನಲ್ಲಿ  mammy, British English ನಲ್ಲಿ mummy, American English ನಲ್ಲಿ mommy ಅಂತ spelling ನಲ್ಲಿ ಬೇಧ ಇದೆಯಂತೆ.  ಮೂರೂ spelling ಬೇರೆ ಬೇರೆ  ಇದ್ದರೂ ಉಚ್ಚಾರ ಒಂದೇ. ನನಗಂತೂ ಈಜಿಪ್ಟಿನ ಮಮ್ಮಿಯೇ ( ಶವವನ್ನು ಕೆಡದಂತೆ ಸುತ್ತಿಡುವುದು) ನೆನಪಾಗುತ್ತದೆ. ಕೆಲವರು ಮಮ್ಮಾ (ಹಿಂದಿ ಸಿನೆಮಾಗಳ ಪ್ರಭಾವದಿಂದ) ಎಂದೂ ತಾಯಿಯನ್ನು ಕರೆಯುವುದನ್ನ ನೋಡಿದ್ದೇನೆ. ಅಮ್ಮಾ ಮತ್ತು ಮಾಮ ಎರಡನ್ನೂ ಮಿಶ್ರ ಮಾಡಿದ ಸೃಷ್ಟಿಕರ್ತರಿವರು.   ಹೊಸ ಶಬ್ದಗಳು ಸೇರ್ಪಡೆಯಾದರೆ ಮಾತ್ರ ಭಾಷೆ ಬೆಳೆಯುತ್ತದೆ, ಉಳಿಯುತ್ತದೆ ಎಂದು ಕೆಲವರು ವಾದ ಮಾಡುತ್ತಾರೆ.  ಹೊಸ ಶಬ್ದಗಳೆಂದರೆ ಕನ್ನಡದಲ್ಲಿ ಇಲ್ಲದ್ದು,  ಉದಾಹರಣೆಗೆ ಬಸ್ಸು,  ಲಾರಿ, ಕಾರು ಇತ್ಯಾದಿ. ಈಗಾಗಲೇ ಇರುವ ಶಬ್ದಗಳ ಬದಲಿಗೆ ಲ್ಯಾಟಿನ್, ಪ್ರೆಂಚ್, ಐರಿಷ್,  ಇಂಗ್ಲಿಷ್ ಉಪಯೋಗಿಸಿದರೆ ಕನ್ನಡ ಹೇಗೆ ಬೆಳೆಯುತ್ತದೆ ಎಂಬುದು ನನ್ನಂತಹವರಿಗೆ ಹೊಳೆಯಲು ಸಾಧ್ಯವಿಲ್ಲ. ಇದೆಲ್ಲವುಗಳ ನಡುವೆ  ನಮ್ಮ ಕನ್ನಡದ ಅಪ್ಪ ಅಮ್ಮ ಮಾತ್ರ ದಿನೇ ದಿನೇ ಸೊರಗುತ್ತಿದ್ದಾರೆ.  ಪಾಪ!


ಒಂದು ಪ್ರಸಿದ್ಧ ಕನ್ನಡ ದಿನಪತ್ರಿಕೆಯಲ್ಲಿ ಫೆಬ್ರುವರಿ ತಿಂಗಳಲ್ಲಿ ಬಂದ ಒಂದು ಸುದ್ದಿ :-- ತ್ರಿವಳಿ ತಲಾಖ್ನಿಂದ ಮನನೊಂದ ಹಿಂದೂ ಯುವಕರನ್ನು ಮದುವೆಯಾದ ಮುಸ್ಲಿಂ ಮಹಿಳೆಯರು. 
ಇದರಲ್ಲಿ --- ಮನನೊಂದು--  ಎಂದಾಗಬೇಕಿತ್ತು. ಮೇಲ್ನೋಟಕ್ಕೆ ಇದು  ಒಂದು ಕೊಂಬು ಕೊಡದಿರುವ ಸಣ್ಣ ದೋಷ. ಆದರೆ ಈ ಬೇಜವಾಬ್ದಾರಿತನದ  ಪರಿಣಾಮ ಮಾತ್ರ ಹಾಸ್ಯಾಸ್ಪದ. ಇವರ ಪ್ರಕಾರ ಹಿಂದೂ ಯುವಕರಿಗೆ ತ್ರಿವಳಿ ತಲಾಖ್ ಬಂದಿದ್ದೇ ನಿಜವಾದರೆ ಅದು ಖಂಡಿತವಾಗಿಯೂ ಮನ ನೋಯುವ ವಿಚಾರವೇ . ಅದರಲ್ಲಿ ಸಂಶಯವಿಲ್ಲ. 
ನಾನು ಹಿಂದೊಮ್ಮೆ ಚುನಾವಣಾ ಕರ್ತವ್ಯದಲ್ಲಿ ಪರಿಚಯರಾದ ಶಿಕ್ಷಕರ ಜೊತೆ  ಈ ರೀತಿಯ ತಪ್ಪು ವಾಕ್ಯ ಪ್ರಯೋಗಗಳ ಬಗ್ಗೆ ಮಾತಾಡಿದ್ದೆ. ವಿಭಕ್ತಿ ಪ್ರತ್ಯಯಗಳು, ಅ ಕಾರ , ಹ ಕಾರಗಳ ವಾಕ್ ಶುದ್ಧಿ, ಇಂತವುಗಳ ಸಾಮಾನ್ಯ ಜ್ಞಾನ ಇಲ್ಲದವರಿಗೆ ಕಡಿಮೆ ಅಂಕ‌ ಕೊಡಿ ( ತಪ್ಪು ತಿದ್ದಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರ) ಅವರಿಗೆ ಸರಿಯಾದ ಶಬ್ದಗಳ ಪರಿಚಯ ಮಾಡಿಸಿ ಎಂದು. ಅವರಿಂದ ಬಂದ ಉತ್ತರ ನಿಜಕ್ಕೂ ಆತಂಕಕಾರಿಯಾಗಿತ್ತು. ನಮ್ಮ ಕಡೆಗೆಲ್ಲ ಎಲ್ಲರೂ ಅದೇ ತರ ಮಾತಾಡೋದು, ಇಷ್ಟೆಲ್ಲಾ ಜನ ಮಾತಾಡ್ತಿದಾರೆ ಅಂದ ಮೇಲೆ ಅದು ತಪ್ಪು ಹೇಗಾಗುತ್ತದೆ. ನಾವು ಹಾಗೆ ತಪ್ಪು ಹುಡಕಿ ಕಡಿಮೆ ಅಂಕ ಕೊಡೊದಾದ್ರೆ  ನಮ್ಮ ಶಾಲೆಯಲ್ಲಿ ಪಾಸಾಗುವವರು ಬೆರಳೆಣಿಕೆಯಷ್ಟೇ ವಿದ್ಯಾರ್ಥಿಗಳು ಎಂದರು. 100% ಫಲಿತಾಂಶ ತರಲೇ ಬೇಕಾದ ಒತ್ತಡ ಶಿಕ್ಷಕರಿಗಿದೆ. ಈ ರೀತಿ ತಪ್ಪು ಶಬ್ದಗಳನ್ನು ವಾಕ್ಯಗಳನ್ನು ಪ್ರಯೋಗಿಸುವ ವಿದ್ಯಾರ್ಥಿಗಳು ಮುಂದೆ ಲಕ್ಷಾನುಗಟ್ಟಲೆ ಮಕ್ಕಳಿಗೆ ಶಿಕ್ಷಕರಾಗಿ ಬಂದಾಗ ಕನ್ನಡದ ಪರಿಸ್ಥಿತಿ ಏನಾಗಬಹುದು? 
ಕೊನೆಯದಾಗಿ ನಮ್ಮ ಇಂತದ್ದೇ ಒಬ್ಬ ವಿದ್ಯಾರ್ಥಿ  ಕನ್ನಡ ಸಂಘಟಕನಾಗಿ ಕನ್ನಡ ಉಳಿಸಲು ಮಾಡುವ ಭಾಷಣವನ್ನು ಕೇಳಿ ( ಸಾಧ್ಯವಾದರೆ ಆನಂದಿಸಿ)
ಕರ್ನಾಟಕದಲ್ಲಿ ಉಟ್ಟಿದ ನಾವು ಕನ್ನಡವನ್ನೇ ಮಾತಾಡಬೇಕು, ವಿದೇಶಿ ಕಂಪನಿಗಳು, ಕಂಪ್ಯೂಟರ್  ಕಂಪನಿಗಳು ಎಲ್ಲಾ ಬಂದು ನಮ್ಮ ಕನ್ನಡಿಗರಿಗೆ ಹನ್ಯಾಯ ಆಗ್ತಾ‌ಇದೆ. ಕನ್ನಡ ನಮ್ಮ ಅಕ್ಕು, ಇವತ್ತು ಕನ್ನಡದ ಉಳವಿಗಾಗಿ ನಾವು  ಓರಾಡಬೇಡು, ಈಗ ಜನಗಳು ಕನ್ನಡ ಭಾಷೆಯನ್ನು ನೂರಕ್ಕೆ ಶೇಕಡ ತ್ರೊಂಬತ್ರೊಂಬತ್ತರಷ್ಟು ಮರತೇ ಬಿಟ್ಟಿದ್ದಾರೆ. ಅದು ನಮ್ಮ ತಾಯಿ ಭಾಷೆ .  ಅದಕ್ಕಾಗಿ ಎಲ್ಲಾ ನನ್ನ ಅಣ್ಣತಮ್ಮಂದಿರಲ್ಲಿ ಅಕ್ಕತಂಗಿಯರಲ್ಲಿ ನಾನು ಕಾಲ ಮುಗದು ಕೇಳೊದು ಇಷ್ಟೇ, ಕನ್ನಡ ಮಾತಾಡಿ, ಕನ್ನಡ ಉಳಸಿ. ಜೈ ಕನ್ನಡ ಜೈಕರ್ನಾಟಕ.

Category:Personal Experience



ProfileImg

Written by Jyoti Hegde