ಪ್ರೀತಿ ಆಕಾಶದೆಡೆಗೆ ದ್ವೇಷ ಪಾತಾಳದ ಕಡೆಗೆ

ಚಿಂತನೆ

ProfileImg
15 Jun '24
2 min read


image

ಪ್ರೀತಿ ಆಕಾಶದೆಡೆಗೆ ದ್ವೇಷ ಪಾತಾಳದ ಕಡೆಗೆ”
******””””***********************************
  ಮನುಷ್ಯನೇಕೆ ಪರಿಶುದ್ಧನಾಗಿರಬೇಕು? ನೀತಿವಂತನಾಗಿರಬೇಕು? ಈ ಪ್ರಶ್ನೆ ಇಂದು ಯಾರಿಗೂ ಪ್ರಸ್ತುತ ಅನಿಸುತ್ತಿಲ್ಲ. ಏಕೆಂದರೆ ನಮ್ಮ ಪರಿಸರ ಹಾಗಿದೆ, ನಮ್ಮ ಶಿಕ್ಷಣದಲಿ ಅ ಬಗೆಯ ಸಾತ್ವಿಕತೆ ಮಾಯವಾಗಿದೆ. ದೈಹಿಕವಾಗಿ ಮಾನಸಿಕವಾಗಿ ಆತ್ಮಾವಲೋಕನವೆಂಬ ಪರಿಕಲ್ಪನೆಯೇ ಮಾಯವಾಗಿದೆ. “ ನಮ್ಮ ನೈಜ್ಯಸ್ಥಿತಿಯನ್ನು ವ್ಯಕ್ತಗೊಳಿಸಲು ಯಾವುದು ನಮ್ಮ ಇಚ್ಚೆಯನ್ನು ಬಲಪಡಿಸುವುದೋ ಅದೆಲ್ಲಾ ನೀತಿಯುತವಾದುದು, ಯಾವುದು ಅದಕ್ಕೆ ವಿರುದ್ಧವಾಗಿದೆಯೋ ಅದೆಲ್ಲ ಅನೀತಿ” ಅನಿಸಿಕೊಳ್ಳುತ್ತದೆ ಹಾಗಾಗಿ ಆದರ್ಶದ ಮೇಲೆ ಅಭಿಮಾನವೇ ಇಲ್ಲವಾಗಿದೆ.
  ಇಷ್ಟೆಲ್ಲ ಪೀಠಿಕೆ ಬರೆಯಲು ಕಾರಣ ಇಂದಿನ ಆತ್ಮೀಯರು ನಾಳೆಗೆ ಶತ್ರುಗಳು, ಶತ್ರುವಿನ ಶತ್ರು ಮಿತ್ರರಾಗುತ್ತಾರೆ. ರಾಜಕಾರಣಕ್ಕೆ ಈ ಮಾತು ಬಹು ಒಪ್ಪಿತ ಅರ್ಪಿತ, ಆದರೆ ಆತ್ಮೀಯ ಸ್ನೇಹಿತರು ಕಾರಣವೇ ಇಲ್ಲದೆ, ಕಾರಣ ಸಾಕಷ್ಟು ಪಟ್ಟಿ ಮಾಡುತ್ತಾ ಹತ್ತಾರು ವರ್ಷದ ಒಡನಾಡಕ್ಕೆ ತಿಲಾಂಜಲಿ ಇಡುತ್ತಾರೆ. ಹಠ ಮತ್ತು ನಾನೇ ಏಕೆ ಸೋಲಬೇಕು ಅನ್ನುವ ಅಹಂಭಾವ, ಪ್ರತಿಸಲವು ಇದೆ ಆಯ್ತು ಅನ್ನುವ ಕಿಳಿರಿಮೆಯ ಕಾರಣವಾಗಿ ಮನಸುಗಳು ದೂರವಾಗಿಬಿಡುತ್ತವೆ. ಮುಖ ನೋಡಿದರೆ ಇರಲಾರದ ಜೀವಗಳಿಂದು ಕನಿಷ್ಟ ಮುಖ ನೋಡಲೇಬಾರದೆನ್ನುವ ಮಟ್ಟಕ್ಕೆ ವಿರುದ್ದವಾಗಿರುತ್ತವೆ. 
  ಇಲ್ಲೆ ನೋಡಿ ಅವಕಾಶವಾದಿಗಳೆಂಬ ರಾಕ್ಷಸರು ಹುಟ್ಟಿಕೊಳ್ಳುವುದು ದೂರವಾದ ಮನಸುಗಳ ಎಳೆತಂದು ಒಂದುಗೂಡಿಸದೆ. ಅದರಲ್ಲೆ ತಮ್ಮ ಸಮಯಸಾಧಕತನದ ಬೇಳೆಕಾಳು ಬೇಯಿಸಿಕೊಳ್ಳುತ್ತಾರೆ. ಸೋತ ಮನಸಿಗೆ ನೊಂದ ಹೃದಯಕ್ಕೆ ಆಸರೆಯಾಗುವ ಪೊಳ್ಳು ಭರವಸೆಯ ನೆವದಲಿ ದೂರಾದ ಮನಸ್ಸುಗಳ ಹಾಲಿನ ಕೊಡದಲಿ ಸಣ್ಣಗೆ ಹುಳಿಯಾಗುವಂತ ಮಾತುಗಳ ಹೆಕ್ಕಿತಂದು ಹಾಕುತ್ತಾರೆ. ಆಗಾಗಾ ಇಲ್ಲಸಲ್ಲದ್ದು ಹೇಳಿ ಒಲ್ಲದ ಸಂಗತಿ ಸನ್ನಿವೇಶದೊಂದಿಗೆ ವಿಚಾರವನ್ನು ತಳುಕು ಹಾಕುತ್ತಾರೆ. ದೂರವಾದ ಜೀವಗಳು ಧಗಧಗಿಸುವಂತೆ ತುಪ್ಪ ಸುರಿದು ಒಳಗೊಳಗೆ ವಿಕೃತ ವಿನೋದದಲಿ ತೇಲುತ್ತಾರೆ. ಸ್ವಲ್ಪ ವಿಚಾರ ಮಾಡಿ ಕಿತ್ತಾಡಿಕೊಂಡ ಸ್ನೇಹ ಒಂದುಗೂಡಿದ, ಒಂದಾಗಿಸಿದ ಉದಾಹರಣೆ ತೀರ ಕಡಿಮೆ. ಅದೇ ದೂರಾದವರ ನಡುವೆ ತಂದಿಟ್ಟು ದ್ವೇಷ ಬಿತ್ತಿದ ಉದಾಹರಣೆ ಇತಿಹಾಸದಲಿ ಸಾಲು ಸಾಲಾಗುವಷ್ಟು ಇದೆ.
  ಏ ಹುಚ್ಚು ಮನಸುಗಳೆ ಚೂರು ವಿಚಾರ ಮಾಡಿ. ಒಂದಾಗಿದ್ದಾಗ ಹತ್ತಿರ ಬರದ, ಸಲಹೆ ಕೊಡದ, ಉಪಕಾರ ಮಾಡದ, ಹಿತವಚನವಾಡದ ಮನಸುಗಳು, ಅಕ್ಕರೆಯ ನಾಟಕದಲಿ ಮೆತ್ತನಾಡುವ ಮಾತಿಗೆ ಮರುಳಾಗಬೇಡಿ. ಒಂದಾಗಿರುವಾಗ ಇರುವ ಐಕ್ಯತೆ ದೂರಾದಾಗ ಎಲ್ಲಿ ಹೋಗುತ್ತದೆ. ಹತ್ತಿರವಿದ್ದಾಗ ಇದ್ದ ನಂಬಿಕೆ ವಿಶ್ವಾಸ ದೂರವಾದಾಗ ಯಾಕೆ ಚಿಂತನೆಯಾಗಿ ಕೆಲಸ ಮಾಡಲ್ಲ. ಖುಷಿಯಾಗಿದ್ದಾಗ ಎಲ್ಲವನ್ನು ಸ್ವಿಕರಿಸುವ ಮನಸ್ಸು ದೂರವಾದಾಗ ಎಲ್ಲವನ್ನು ಋಣಾತ್ನಕವಾಗಿ ವಿಚಾರ ಮಾಡುತ್ತದೆ ಏಕೆ? ಏಕೆಂದರೆ ಕಳೆದು ಹೋದ,  ಒಡೆದ ಮನಸುಗಳ ನಡುವೆ ಕೆದಕುವ ಕದಡುವ ಕೈಗಳ ಕೈವಾಡಕ್ಕೆ ಮನಸು ಬಲಿಯಾಗಿರುತ್ತದೆ. ಈ ಸತ್ಯ ತಿಳಿದರೆ ದೂರವಾದ ಮನಸ್ಸುಗಳ ನಡುವೆ ಆಡಿಕೊಳ್ಳುವ ಸುಪ್ಪಾಣಾಗಿತ್ತಿ ಸೋಗಲಾಡಿಗಳಿಗೆ ಉಗಿದು ಹೊರಹಾಕುತ್ತದೆ. ಆಸರೆಯ ಮರವೆಂದು ಅಪ್ಪಿಕೊಳ್ಳುವುದಲ್ಲ. ಹಾಗೆ ಒಪ್ಪಕೊಂಡರೆ ಸ್ನೇಹದ ನೆರಳಿಗೆ ದ್ವೇಷದ ಕಾವು ಸಿಕ್ಕು ಕಾಲ್ಗಿಚ್ಚು ಬದುಕನ್ನೆ ಆವರಿಸಿ ಧಹಿಸುತ್ತದೆ.
  ಪ್ರೀತಿಯ ಮನಸುಗಳು ದೂರಾಗಲಿ ಆದರೆ ಮನಸುಗಳ ನಡುವೆ ದ್ವೇಷ ಬೆಳೆಯದಿರಲಿ.ಪ್ರೀತಿ ಯಾವತ್ತು ಆಕಾಶದ ಕಡೆ ಸಾಗಲಿ ದ್ವೇಷ ಪಾತಾಳದೆಡೆ ಮುಖವಾಗಿರಲಿ. ಸ್ನೇಹ ದೂರವಾಗಿರಬಹುದು ಸ್ನೇಹದ ಒರತೆ ದೂರಾಗಬಾರದು ಎಂದರೆ ನಡುವೆ ಬರುವ ಪಾತ್ರಗಳಿಗೆ ಮನ್ನಣೆ ಸಿಗಬಾರದು. ನೋಡಿದಾಗ ಮುಖ ಮನಸ್ಸು ಅರಳದೆ ಇರಬಹುದು ಆದರೆ ಭಾವಗಳು ಸ್ನೇಹದೊಲವು ಒಳಗೊಳಗೆ ಆರಾಧಿಸುವಂತಿರಬೇಕು. ಒಮ್ಮೆ ಪ್ರಯತ್ನ ಮಾಡಿ ನೋಡಿ ಈ ಮಾತು ಸತ್ಯವಾಗಬಹುದೋ ಹೇಗೆ.
*******””””””*********
ಡಾ.ನವೀನ್ ಕುಮಾರ್ ಎ.ಜಿ
ಶಿಕ್ಷಕರು

 

Category:Education



ProfileImg

Written by Naveenkumar A G