ಪ್ರೀತಿ, ಮದುವೆ ಇತ್ಯಾದಿ

ಪ್ರೇಮಿಗಳ ದಿನಕ್ಕೊಂದು ಆತ್ಮವಿಮರ್ಶೆ

ProfileImg
16 Feb '24
3 min read


image

ಪ್ರತಿ ಬಾರಿಯೂ 'ಪ್ರೇಮಿಗಳ ದಿನಕ್ಕೆ ಒಂದಿಷ್ಟು ಪರ ವಿರೋಧ ಚರ್ಚೆಗಳು ಭರಪೂರ ನಡೆಯುತ್ತಲೇ ಇರುತ್ತವೆ. 'ಪ್ರೇಮಕ್ಕೂ ಒಂದು ದಿನ ಬೇಕೆ?' , ' ಅದು ನಮ್ಮ ಸಂಸ್ಕೃತಿಯಲ್ಲ ಪಾಶ್ಚಾತ್ಯರದ್ದು!' ಹೀಗೆ ಇನ್ನೂ ಇತ್ಯಾದಿ ಹಲವರ ವಾದಗಳಿಗೇನಿದ್ದರೂ 'ಪ್ರೇಮಿಗಳ ದಿನದ ಆಚರಣೆಗೆ ನನ್ನದೇನು ಅಭ್ಯಂತರವಿಲ್ಲ. ವರ್ಷದ 365 ದಿನವೂ ಬದುಕುತ್ತಿವಾದರೂ ನಾವು ಹುಟ್ಟಿದ ದಿನವನ್ನು ಆಚರಿಸುವುದು ಒಂದೇ ದಿನ, ಹುಟ್ಟಿದ್ದೇವೆ ಅಲ್ವಾ ಎಂದು ಪ್ರತಿದಿನವೂ ಸಂಭ್ರಮಿಸುವ ಬದಲು ಯಾಕೆ ಅದೊಂದೇ‌ ದಿನಕ್ಕೆ ಸೀಮಿತಗೊಳಿಸುತ್ತೇವೆಯೇ? ಇಲ್ಲವಲ್ಲ, ಹಾಗಾಗಿ ವರುಷವಿಡೀ ಪ್ರೇಮಿಸಿದರೂ ಪ್ರೇಮವನ್ನು 'ಆಚರಿಸು'ವುದಕ್ಕೆ ಒಂದು ದಿನವನ್ನು ಮೀಸಲಿಡುವುದು ತಪ್ಪಲ್ಲ ಅಲ್ವೇ?
ನನಗಂತೂ ಈ ದಿನವನ್ನು ಆಚರಿಸುವುದಕ್ಕೆ ಪ್ರೇಮಿಯಿಲ್ಲ ಆದರೆ ಪ್ರೇಮದ ಬಗ್ಗೆ ಬರೆದಾದರೂ ಆಚರಿಸಬಹುದಲ್ಲವೇ? 

ಪ್ರೇಮವೆಂದರೆ? ❤
ಇದೊಂದು ಪ್ರಶ್ನೆಗೆ ಸುಲಭದಲ್ಲಿ ಉತ್ತರಿಸುವುದು ನಿಜಕ್ಕೂ ಕಷ್ಟ . ಪ್ರೀತಿಯೆಂದರೆ ಇದು-ಅದು, ಪ್ರೇಮವೆಂದರೆ ಹಾಗೆ-ಹೀಗೆ ಎಂದೆಲ್ಲಾ ಒಂದಿಷ್ಟು ಉಪಮೇಯಗಳನ್ನು ಕೊಟ್ಟು ಉದಾಹರಣೆಗಳೊಂದಿಗೆ ಅದನ್ನು ವಿವರಿಸಬಹುದೇ ಹೊರತು ಅದು ಇದೇ ಎಂದು ಒಂದು ವಾಕ್ಯದಲ್ಲಿ ಉತ್ತರಿಸುವುದು ಹೇಗೆ ಸಾಧ್ಯ???
ಅಸಲಿಗೆ ಪ್ರೀತಿಸಲ್ಪಡದೇ ಇದ್ದವಳಿಗೆ ಪ್ರೀತಿ ಎಂದರೆ ಹೀಗೆಯೇ ಎಂದು ಉತ್ತರ ಹೊಳೆಯುವುದಾದರು ಹೇಗೆ ಹೇಳಿ? ಇರಲಿ.

ನನ್ನ ಪ್ರಕಾರ ಜಗತ್ತಿನಲ್ಲಿ ಅತಿ ನಿಷ್ಕಲ್ಮಶ ಸಂಬಂಧವಿದ್ದರೆ‌ ಅದು 'ಪ್ರೇಮ'❤. ಅದು ಬದುಕಿನುದ್ದಕ್ಕೂ ನಮ್ಮೊಂದಿಗೇ ಹರಿಯುತ್ತದೆ, ಕೆಲವು ಪ್ರೀತಿ ಸಾವಿನ ನಂತರವೂ ಜೊತೆಗುಳಿಯುತ್ತವೆ, ಎಂದೂ ಬತ್ತದ ನಿರಂತರ ಭರವಸೆಯ ಚಿಲುಮೆ‌ಯಂತೆ. ಎಷ್ಟೋ ಬಾರಿ ಸತ್ತುಹೋದವರನ್ನ ಅಥವಾ ಬಿಟ್ಟುಹೋದವರನ್ನ ನೆನಪಿಸಿಕೊಂಡು ಕಳೆದುಕೊಂಡೆವಲ್ಲ ಎಂದು ದುಃಖಿಸುತ್ತೇವೆ, ಬದುಕು ಅವರೊಂದಿಗೆ ಮುಗಿದೇಹೋಯಿತೆಂದು ಹಲುಬುತ್ತೇವೆ. ಆದರೆ ನಿರ್ಮಲ ಸಂಬಂಧಗಳು ಸಾವಿನಾಚೆಗೂ ನಮ್ಮ ಜೊತೆಗುಳಿಯುತ್ತವೆ. ಸೋತಾಗ ಎದೆತಟ್ಟಿ ಸಂತೈಸಿ, ಕೈಹಿಡಿದೆತ್ತಿ ಬದುಕಿನೆಡೆಗೆ ದೂಡುತ್ತವೆ.

ಹೀಗೆಲ್ಲ ಗಂಟೆಗಟ್ಟಲೆ ಪ್ರೇಮದ ಬಗ್ಗೆ ಪುರಾಣ ಹೊಡೆಯಬಹುದು ಆದರೆ ತೀರಾ ಪ್ರಾಯೋಗಿಕವಾಗಿ (Practical) ಪ್ರೀತಿಯನ್ನು ವ್ಯಾಖ್ಯಾನಿಸುವುದು ಕಷ್ಟ ಸಾಧ್ಯ.

ಆದರೂ ಪ್ರೀತಿಯ ಬಗ್ಗೆ , ಮದುವೆ ಬಗ್ಗೆ ನನಗೆ ಒಂದಿಷ್ಟು ನನ್ನದೇ ಆದ ಕಲ್ಪನೆಗಳಿವೆ.
'ನಿನಗೆಂತಹ ಹುಡುಗ ಅಥವಾ ಜೀವನ ಸಂಗಾತಿ ಬೇಕು?' ಎಂದು ಹಾಸ್ಟೆಲಿನ ಚರ್ಚೆಯಲ್ಲಿ ಮಾತಿಗಿಳಿದಾಗ ನಾನು ನೀಡುತ್ತಿದ್ದ  ಪಟ್ಟಿಯನ್ನು ಕೇಳಿಯೇ ನನ್ನ ಸ್ನೇಹಿತೆಯರೆಲ್ಲಾ 'ಅಂತಹ ಹುಡುಗನ್ನ ನಾವೇ ಸೃಷ್ಟಿಸಬೇಕಷ್ಟೆ ! ಎಂದು ಗೇಲಿ ಮಾಡಿ ನಗುತ್ತಿದ್ದರು . ವಿಶೇಷವಲ್ಲದಿದ್ದರೂ ಒಂದಿಷ್ಟು unique ಗುಣಗಳ ,  ನನ್ನಂತಹದೇ ಹುಚ್ಚು ಆಲೋಚನೆಗಳುಳ್ಳ ಹುಡುಗನನ್ನಷ್ಟೇ ನನ್ನ ಬದುಕಿನೊಳಗೆ ಬಿಟ್ಟುಕೊಳ್ಳಬಲ್ಲೆ ಎನ್ನುವ ಹಠವೂ ನನ್ನೊಳಗಿತ್ತು. ಹಾಗೆಂದು ಪ್ರೀತಿ ಮದುವೆಯ ಬಗ್ಗೆ ನಾನೆಂದು ಗಂಭೀರವಾಗಿ ಚಿಂತಿಸಿದವಳಲ್ಲ.

ಆದರೆ ಇತ್ತೀಚೆಗಿನ ಒಂದು ಘಟನೆಯ ನಂತರ ಪ್ರೀತಿ, ಸಂಬಂಧಗಳ ಬಗೆಗಿನ ನನ್ನ ಅಭಿಪ್ರಾಯ, ನಿರ್ಧಾರಗಳು ಇನ್ನಷ್ಟು ಪಕ್ವಗೊಂಡಿವೆ ಎನ್ನಬಹುದೇನೋ.  

ಇದೇ ಕಾರಣಗಳಿಗಾಗಿ ಇಂತಹದೇ ಅರ್ಹತೆಗಳನ್ನು ಹುಡುಕಾಡಿ ಯಾರನ್ನೂ ಪ್ರೀತಿಸಲಾಗುವುದಿಲ್ಲ ! ಅಸಲಿಗೆ ಪ್ರೀತಿ 'ಇದೇ ಕಾರಣಕ್ಕೆ' ಎಂದು ಒಂದು ನಿರ್ದಿಷ್ಟ ಕಾರಣಕ್ಕೆ ಹುಟ್ಟುವುದು ಅಲ್ಲವೇ ಅಲ್ಲ. ಪ್ರೀತಿ ಎಂತಹ ವಿರೋಧಭಾಸದಲ್ಲೂ ಜೀವ ತಳೆಯಬಹುದು‌! ಅದಕ್ಕೆ ಬರೀ ಒಬ್ಬರನೊಬ್ಬರು ಮೆಚ್ಚುವ ಮನಸ್ಸಿರಬೇಕಾದದಿಲ್ಲ, ಇಬ್ಬರೂ ತಮ್ಮ ತಮ್ಮ ತಪ್ಪು-ಒಪ್ಪುಗಳೊಡನೆ‌ ಅನುಸರಿಸಿ ಜೊತೆ ನಡೆಯುವ ಮನಸ್ಥಿತಿ ಇರಬೇಕಾದದ್ದು. ಒಂದಿಷ್ಟು ಕಿತ್ತಾಟ, ಒದ್ದಾಟ ಮುದ್ದಾಟಗಳ ಒಟ್ಟು ಮಿಶ್ರಣವೇ ಪ್ರೇಮವಲ್ಲವೇ?

'ಇಂತವರ ಜೊತೆ ಬದುಕಬಲ್ಲೆ' ಎನ್ನುವುದಕ್ಕೂ 'ಇವರಿಲ್ಲದೆ ಬದುಕಲಾರೆ' ಎನ್ನುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಒಂದು ಸಂಬಂಧ ಬೆಳೆದು ನಿಲ್ಲುವುದು, ನಿಂತು ಗಟ್ಟಿಯಾಗುವುದು ಅಲ್ಲೇ. ಹಾಗೆ ನೋಡಿದರೆ 'ಇವರಿಲ್ಲದೆ‌ ಇರಲಾರೆ' ಎನ್ನುವಲ್ಲಿಯೇ ಪ್ರೀತಿ ಹುಟ್ಟುವುದು.

ಇಂತಹ‌ ಸಂಬಂಧಗಳನ್ನು ಮಾತ್ರ ಮದುವೆಯವರೆಗೆ ಕೊಂಡೊಯ್ಯಬಹುದು ಹೊರತು 'ಇವರು' ನನಗೆ ಸರಿಹೊಂದುವವರು ಎಂದೋ, ನನ್ನಂತಹದೇ ಆಲೋಚನೆಗಳುಳ್ಳವರು ಎಂದೋ, ಬಹುಶಃ ನಾವಿಬ್ಬರು ಒಳ್ಳೆಯ ಜೋಡಿಯಾಗಬಹುದೆಂದೋ ಮತ್ತೆಂತಹದೋ ಸಾವಿರ ಕಾರಣಗಳನಿಟ್ಟು ಯಾರನ್ನೂ ಬದುಕಿಗೆ ಜೊತೆಯಾಗಿಸುವುದಕ್ಕೆ ಸಾಧ್ಯವಿಲ್ಲ. ಅಸಲಿಗೆ ಮದುವೆಯೆಂದರೆ ಇಂತಹ ಒಂದಿಷ್ಟು ಹೊಂದಾಣಿಕೆಗಳ  (matching ಗಳ) ವ್ಯಾಪಾರವಲ್ಲ. ನನ್ನ ಪ್ರಕಾರ ಮದುವೆಗೆ ಬೇರೆಯದೆ ಅರ್ಥವಿದೆ ಅಥವಾ ನಾನು ಮದುವೆಯನ್ನು ಅರ್ಥೈಸಿಕೊಂಡಿರುವುದು ಹೀಗಲ್ಲ. 
 

ಮದುವೆ ಒಂದು ಸಂಬಂಧವನ್ನು ನೈತಿಕವಾಗಿಸುವುದಕ್ಕೆ ಸಮಾಜ ಕಟ್ಟಿಕೊಂಡ ಒಂದು ಕಟ್ಟುಪಾಡು ಅಷ್ಟೇ. ಹಾಗೆ ನೋಡಿದರೆ ಯಾವ ಸಂಬಂಧದಲ್ಲಿ ಪ್ರಾಮಾಣಿಕತೆ, ನಂಬಿಕೆ ಇರುತ್ತವೆಯೊ ಅದೆಲ್ಲವೂ ನೈತಿಕವೇ ಮತ್ತು ಸಮಾಜ ಹೇಳುವ 'ಮದುವೆ' ಯಲ್ಲಿ ಪ್ರಾಮಾಣಿಕತೆ ನಂಬಿಕೆ ಇಲ್ಲದೆ ಹೋದರೆ ಅದು ಅನೈತಿಕವೇ. ಹೀಗೆಲ್ಲಾ ನಾನು ಹೇಳುವುದನ್ನು ಕೇಳಿದರೆ ಯಾರಾದರು ನಕ್ಕಾರು. ಆದರೆ ನನ್ನ ಮಟ್ಟಿಗೆ ಒಂದು ಸಂಬಂಧವನ್ನ ಹೊರಗಿನ ಎಲ್ಲ‌ ಒತ್ತಡಗಳಿಂದ ಬಿಡುಗಡೆಗೊಳಿಸಿ ಗಟ್ಟಿಯಾಗಿಸುವುದಕ್ಕೆ ಮದುವೆಯ ರೂಪ ನೀಡಬೇಕಾಗುತ್ತದೆ, ಹೆಚ್ಚಿನ ಬಾರಿ ನಮ್ಮವರಿಗೊಂದು(ತಾಯಿ/ತಂದೆ) ನೆಮ್ಮದಿ ನೀಡುವುದಕ್ಕೆ. ಅದರ ಹೊರತು ಪ್ರೀತಿಯೇ ಇಲ್ಲದ ಒಂದು ಚಿಕ್ಕ ಪರಿಚಯಕ್ಕೆ ಮದುವೆಯ ರೂಪ ಕೊಡುವುದು ತೀರ ಬಾಲಿಶತನ. ಹಾಗಾಗಿ Arranged marriage- ಗುರು ಹಿರಿಯರು ನೋಡಿ ಆರಿಸಿ ನಿಶ್ಚಯಿಸಿ ಆಗುವ ಮದುವೆ ಅನ್ನುವುದು ನನಗೆ ಮೂರ್ಖತನವಾಗಿ ಕಾಣಿಸುತ್ತದೆ.
ನನಗಂತೂ ನನ್ನನ್ನು ನಾನಾಗಿ ಪ್ರೀತಿಸುವವರು ಬೇಕೇ ಹೊರತು ನನ್ನ ಅರ್ಹತೆಗಳನ್ನ(!) ನೋಡಿ ಬೆಳೆಯುವ ಒಂದು ಬಾಲಿಶ 'ಇಷ್ಟ' ಎನ್ನುವ ಪರಿಧಿಯೊಳಗೆ ಆಲೋಚಿಸುವರು ಬೇಡವೇ ಬೇಡ.

ಪ್ರೀತಿ ಎಂದರೆ ಒಂದು ದೀರ್ಘ ತಪಸ್ಸಿದಂತೆ ಅದು ಪ್ರತಿದಿನವೂ ಪರೀಕ್ಷೆಗೆ ಒಳಪಡುತ್ತಲೇ ಗಟ್ಟಿಯಾಗುತ್ತಾ ಸಾಗಬೇಕು. ನನಗಾಗಿ ನೀನು - ನಿನಗಾಗಿ ನಾನು ಅನ್ನುವುದರಿಂದೆಲ್ಲಾ ಹೊರಬಂದು , ಬದುಕಿನಲ್ಲಿ ಸೋತುಬಂದು ಅಮ್ಮನ ಮಡಿಲಲ್ಲಿ ತಲೆಯಿಟ್ಟು ಅಳುವಾಗ ಸಿಗುವ ಆ ಬೆಚ್ಚನೆಯ ಭರವಸೆಯಂತಿರಬೇಕು ಪ್ರೀತಿ. ಅದು ಬದುಕಿನ ಕೊನೆಯ ಕ್ಷಣದವರೆಗೂ ಜೊತೆಗಿರಬೇಕು.
ಮುಂಜಾನೆ ಅರಳಿ, ಸಂಜೆಗೆ ಬಾಡಿ, ರಾತ್ರಿಯಷ್ಟರಲ್ಲಿ ಸತ್ತು ಹೋಗುವ ಹೂವಿನಂತಲ್ಲ ಪ್ರೀತಿ. ಅದು ಸಮುದ್ರ ಮಂಥನವಿದ್ದಂತೆ! ಪ್ರತಿಬಾರಿ ಮಂಥಿಸುವಾಗಲೂ ಒಂದೊಂದು ಹೊಸತು ಉದ್ಭವವಾದಂತೆ ! ಅದು ಹಾಲಾದರೂ ಹಾಲಾಹಲವಾದರೂ ನುಂಗಿ ಮತ್ತೆ ಮತ್ತೆ ಮಂಥಿಸುವಂತಹದು. ಭರವಸೆಯ ಅಮೃತಕ್ಕಾಗಿ ನಿರಂತರವಾಗಿ ಕಾಯುವಂತಹದು.

ನಿರ್ಮಲ ಪ್ರೀತಿಯ ಅನುಭವದ ಮಧುರತೆಗಾಗಿ ಜೀವನವಿಡೀ  ನಾನು ಕಾಯುವವಳು ಹೊರತು ಪ್ರೀತಿಯೇ ಇಲ್ಲದ ಸಂಬಂಧವಲ್ಲದ ಸಂಬಂಧವೊಂದನ್ನು ಸಮಾಜದ ಬಾಯಿಮುಚ್ಚಿಸುವುದಕ್ಕೆ 'ಮದುವೆ' ಎಂಬ ಕಟ್ಟುಪಾಡಿಗೆ ಒಳಗಾಗಿ ಬದುಕಿಗೆ ಸ್ವೀಕರಿಸಲು ನಾನೆಂದೂ ತಯಾರಿಲ್ಲ.

ಕೊನೆಯದಾಗಿ ಪ್ರೇಮದ ಕುರಿತ ರೂಮಿಯ ಸಾಲುಗಳು.

ಲೋಭಿ ಮನಸು ಪ್ರೇಮದಿಂದ ಪ್ರೇಮಕೆ ಜಿಗಿದೀತು ❤
ನೆನಪಿಡು, ಉದಾತ್ತ ಪ್ರೇಮವೆ ಕೊನೆಗದರ ಸೆಳೆವುದು ❤

ಪ್ರೇಮವನೆಂತಾದರೂ ವಿವರಿಸು, ವ್ಯಾಖ್ಯಾನಿಸು ❤
ಶಬ್ದ ತನ್ನಷ್ಟಕ್ಕೆ ತಾನೇ ಲಜ್ಜೆಗೊಳುವುದು ❤

ನಾಲಿಗೆ ಕೆಲವನಷ್ಟೇ ವ್ಯಾಖ್ಯಾನಿಸಬಲ್ಲದು
ವ್ಯಾಖ್ಯಾನಗಳಿರದ ಪ್ರೇಮ ಸ್ಪಷ್ಟಗೊಳುವುದು ❤

- ರೂಮಿ

ಯಾರ ಬದುಕಿಗೂ ಮಿತಿ ನೀಡದ, ಮಿತಿಮೀರದ ನಿಷ್ಕಲ್ಮಶ ಪ್ರೀತಿ ಎಲ್ಲರಿಗೂ ದಕ್ಕುವಂತಾಗಲಿ.💞
ಪ್ರೇಮಿಗಳ‌ ದಿನದ ಶುಭಾಶಯಗಳು ❤

ನನ್ನೊಳಗೆ ಭರವಸೆಯ ಹರಿಸುವ 
ಜೀವ ನದಿಯು ನೀನು !
ನಿನ್ನೆಡೆಯಿಂದ ಹರಿವ
ಅದೆಷ್ಟೋ ಅಮೃತಧಾರೆಗಳ ಸೆಳೆವ 
ಆಳ ಕಡಲು ನಾನು !
ನಾನು- ನೀನು ಬೆರೆತು-ಬದುಕಲು
ನಮ್ಮೊಳಗೆ ಪ್ರಹರಿಸುವ
ಅನಂತ ಪ್ರೇಮವೇ ಸಾಕು !
ನಮ್ಮ ಬದುಕಿಗದೇ ಬೆಳಕು!!

ಯಾರ ಬದುಕಿಗೂ ಮಿತಿ ನೀಡದ, ಮಿತಿಮೀರದ ನಿಷ್ಕಲ್ಮಶ ಪ್ರೀತಿ ಎಲ್ಲರಿಗೂ ದಕ್ಕುವಂತಾಗಲಿ.💞
ಪ್ರೇಮಿಗಳ‌ ದಿನದ ಶುಭಾಶಯಗಳು ❤

  

: ಬರಹ - ಅಮೃತ ಪುತ್ತೂರು

 

 

 

 

Category:Relationships



ProfileImg

Written by Amritha

ಕನ್ನಡತಿ