Do you have a passion for writing?Join Ayra as a Writertoday and start earning.

ಒಲುಮೆಯ ಗೆಳತಿಗೊಂದು ಪ್ರೇಮ ಪತ್ರ

ಒಲವಿನ ಗೆಳತಿಗೊಂದು ಪ್ರೇಮ ಪತ್ರ

ProfileImg
18 Jan '24
5 min read


image

ಎಂದೋ ಮನಸಾರೆ ಪ್ರೀತಿಸಿ, ನಂತರ ಸಣ್ಣಪುಟ್ಟ ಕಾರಣದಿಂದಾಗಿ ದೂರಾಗಿಹೋದ, ಮತ್ತು ಈಗಲೂ ಸುವಿಶಾಲ ಭೂಮಿಯ ಮೇಲೆ ಬದುಕು ಸಾಗಿಸುತ್ತಿರುವ, ಹಾಗೂ ಈಗಲೂ ಮನಸ್ಸಿನ ಒಳಕೋಣೆಯೊಂದರಲ್ಲಿ ಶಾಶ್ವತವಾಗಿ ಕುಳಿತಿರುವ ಮತ್ತು ಆಗಾಗ ನನ್ನನ್ನು ಆ ಮನಸ್ಸಿನ ಒಳಕೋಣೆಗೆ ಬರಸೆಳೆದು ಮುದ್ದಿಸಿ ನವಿರಾದ ಕಂಪನ ಹುಟ್ಟಿಸುವವಳೇ, ನಿನಗಾಗಿ ನನ್ನದೇ ನೆನಪಿನಾಳವ ಕೆದಕಿ ಕೆದಕಿ ನಮ್ಮಿಬ್ಬರ ಮೊದಲ ಭೇಟಿಯಿಂದಿಡಿದು. ನೀನು ನನ್ನ ಬಿಟ್ಟೋಗುವ ತನಕ ನಡೆದ ಎಲ್ಲಾ ಮಧುರಾತಿಮಧುರ ಘಳಿಗೆಗಳನ್ನು ಮತ್ತು ನಮ್ಮಿಬ್ಬರ ನಡುವೆ ನಡೆದ ಸಣ್ಣಸಣ್ಣ ಮುನಿಸುಗಳನ್ನು ಮೆಲುಕು ಹಾಕುತ್ತಾ ಹಾಗೆಯೇ ಇನ್ನೂ ನನ್ನಲ್ಲಿ ಒಂಚೂರೂ ಕಡಿಮೆಯಾಗದಿರುವ ಮುತುವರ್ಜಿಯಿಂದ, ಮೊದಲಿದ್ದಷ್ಟೇ ಅಕ್ಕರೆಯಿಂದ ನನ್ನದೇ ಮನದ ಭಾಷೆಯನ್ನು, ಭಾವನೆಗಳನ್ನೆಲ್ಲಾ ಎರಕ ಹುಯ್ದು ಈ ಪ್ರೇಮ ಪತ್ರ ಬರೆಯುತ್ತಿದ್ದೇನೆ. ಪತ್ರ ನಿನಗೆ ತಲುಪಿದರೆ ಸ್ವೀಕರಿಸು ಗೆಳತಿ. ಇಲ್ಲವಾದರೆ ಇನ್ನೊಂದು ಬಾರಿ ಕ್ಷಮಿಸು. ನನಗೆ ಈಗಲೂ ನೆನಪಿದೆ ಗೆಳತಿ...ಬಹುಶಃ ನೀನೂ ಮರೆತಿರುವುದಿಲ್ಲ... ಮತ್ತು ಎಂದೆಂದಿಗೂ ಮರೆಯುವಂತಹ ಹೆಣ್ಣಲ್ಲ ನೀನು...ನನಗದು ತಿಳಿದಿದೆ.

ನಾನು ಹುಟ್ಟಿದಾಗಿನಿಂದಲೂ ನಿಮ್ಮೂರಿಗೆ ಬರುತ್ತಿದ್ದೆ..ಅಮ್ಮಾ ಅಪ್ಪನ ಜೊತೆ. ಇಲ್ಲದಿದ್ದರೆ ಆಜ್ಜಿಯ ಜೊತೆಗಾದರೂ ಬರುತ್ತಿದ್ದೆ. ನಿಮ್ಮೂರು ನನಗೆ ಅಂತಹಾ ಹೇಳಿಕೊಳ್ಳುವಂತಹ ವಿಶೇಷವಲ್ಲ.. ಆದರೆ ವಿಶೇಷ ಅಂತ ಗೊತ್ತಾಗಿದ್ದು ನಿನ್ನ ಮೊದಲ ಬಾರಿ ನೋಡಿದಾಗಲೇ.. ಅಂದು ಕಣ್ಣು ಆಶ್ಚರ್ಯದಿಂದ ಚೆದುರಿ ಹೋಗಿತ್ತು. ನಿನ್ನನು.. ಪುಟ್ಟ ಹುಡುಗಿಯಿಂದಲೇ ನೋಡಿದ್ದೆ. ಮಾತಾಡಿದ್ದೆ.. ಆದರೆ ನನ್ನ ನಿನ್ನ ಮಧ್ಯೆ ಅಷ್ಟು ಸಲುಗೆಯಿರಲಿಲ್ಲ. ಏಕೆಂದರೆ ನೀನೊಂತರಾ ಜಂಭದ ಹುಡುಗಿಯೆಂದು ನಿಮ್ಮೂರಿನ ನನ್ನ ವಯಸ್ಸಿನ ಹುಡುಗರು ಹೇಳುತ್ತಿದ್ದದು ಕೇಳಿಸಿಕೊಂಡು ಸುಮ್ಮನಾಗುತ್ತಿದ್ದೆ. ಆದರೆ ನನಗೆ ನೀನು ವಿಶೇಷವಾಗಿ ಕಾಣಿಸಿದ್ದು ಮತ್ತು ನನ್ನ ಮನದಲ್ಲಿದ್ದ ಪ್ರೀತಿಹಕ್ಕಿಯನು ಗರಿಗೆದರಿಸಿದ್ದು. ನಿಮ್ಮೂರಿನ ಜಾತ್ರೆಯಲ್ಲಿ ನಿನ್ನ ನೋಡಿದಾಗಲೇ. ನೀನಂದು ಬಂಗಾರು ಬಣ್ಣದಂಚಿನ. ಇಷ್ಟಿಷ್ಟೇ ಕುಂಚಿಗಳಿದ್ದ ತಿಳಿನೀಲಿ ಲಂಗ ದಾವಣಿ ಧರಿಸಿ. ಅದಕ್ಕೊಪ್ಪುವ ಅದೇ ಬಣ್ಣದ ಕುಪ್ಪಸ ಧರಿಸಿ...ಅಷ್ಟೇನೂ ಅತಿಯೆನ್ನಿಸದ ಅಲಂಕಾರ ಮಾಡಿಕೊಂಡು, ಗೆಳತಿಯರ ಜೊತೆ ಜಿಂಕೆಮರಿಯ ತರಹ ಜಾತ್ರೆಯ ತುಂಬೆಲ್ಲಾ ಓಡಾಡುತ್ತಿದ್ದೆ. ಮತ್ತು ಆಗಾಗ ನೀನು ನನ್ನನ್ನು ನೋಡುತ್ತಾ. ಕಣ್ಣೋಟದಲ್ಲೇ ಒಂದು ಚೆಂದದ ನಗು ನನ್ನೆಡೆಗೆ ಬೀಸಾಕುತ್ತಿದ್ದೆಯಲ್ಲಾ, ನಿಜಕ್ಕೂ ನಾನು ನಿನಗೆ ಪರವಶನಾಗಿಬಿಟ್ಟಿದ್ದೆ.

ನಿಜ ಹೇಳುವೆನು ಗೆಳತಿ ಅಂದೇ ತೀರ್ಮಾನಿಸಿಬಿಟ್ಟೆ. ನಿನ್ನ ಮನಸ್ಸನು.. ಗೆಲ್ಲಲೇಬೇಕೆಂದು ಮತ್ತು ನಿನ್ನನ್ನು ನನ್ನವಳನ್ನಾಗಿ ಮಾಡಿಕೊಳ್ಳಲೇಬೇಕೆಂದು..ನಿಜಕ್ಕೂ ಎಂತಹಾ ಅದ್ಭುತ ಸೊಬಗಿನರಾಶಿಯೇ ನೀನು

ಅಷ್ಟೊಂದು ಉದ್ದವಿಲ್ಲದಿದ್ದರೂ ನಿನ್ನನ್ನು ನೋಡಿದಾಗಲೆಲ್ಲಾ ಕನ್ನಡದ ಹಳೆಯ ಸಿನಿಮಾ ನಟಿ ಮಂಜುಳಳನ್ನು ನೆನಪಿಸುತ್ತಿದ್ದೆ.

ನಿಮ್ಮೂರಿನಲ್ಲಿ ಜಾತ್ರೆಯ ಸಡಗರವೆಲ್ಲಾ ಮುಗಿದಿತ್ತು. ಜಾತ್ರೆಗೆ ಬಂದ ನೆಂಟರಿಷ್ಟರೆಲ್ಲಾ ತಮ್ಮೂರುಗಳಿಗೆ ಹಿಂದಿರುಗುತ್ತಿದ್ದರು. ಆದರೆ ನಾನು ಮಾತ್ರ ನಿನ್ನನ್ನು ಮಾತಾಡಿಸಿಯೇ ತೀರಬೇಕೆಂದು ಮತ್ತು ನಿನಗೆ ನನ್ನ ಪ್ರೇಮ ನಿವೇದನೆ ಮಾಡಲೇಬೇಕೆಂದು ತೀರ್ಮಾನಿಸಿ ಅಜ್ಜಿಯ ಮನೆಯಲ್ಲೇ ಝಾಂಡಾ ಹೂಡಿದೆ.

ಆ ದಿನವೂ ಬಂದುಬಿಟ್ಟಿತು ಜಾತ್ರೆ ಮುಗಿದ ಮಾರನೆಯ ದಿನ ಮಧ್ಯಾಹ್ನ ಮೂರು ಗಂಟೆಗೆ ನೀರಿಗೆಂದು ಬಿಂದಿಗೆಗಳೆರಡನ್ನು ಹಿಡಿದುಕೊಂಡು ಅಜ್ಜಿಯ ಮನೆಯ ವರಾಂಡಾದಲ್ಲಿ ಕುಳಿತಿದ್ದ ನನಗೆ ಕೇಳಿಸುವಂತೆ. ಅಮ್ಮಾ.. ಸಿಹಿನೀರು ತರಲು ಬಾವಿಗೆ ಹೋಗಿಬರುವೆ.. ಎಂದು ಹೇಳಿ ಹೊರಟೆಯಲ್ಲಾ.. ಆ ದಿನವಂತೂ ಕುಣಿದು ಕುಪ್ಪಳಿಸಿದ್ದೆ. ನೀನು ಸಿಹಿನೀರು ಬಾವಿಗೆ ಹೊರಟ ಹತ್ತು ನಿಮಿಷಗಳ ನಂತರ ನಿನ್ನನ್ನು ಹಿಂಬಾಲಿಸಿ ಬಾವಿ ಬಳಿಗೆ ಬರುವಷ್ಟರಲ್ಲಿ. ನೀನು ನೀರು ಸೇದಲು ಬಿಂದಿಗೆಯ ಕುತ್ತಿಗೆಗೆ ಹಗ್ಗ ಬಿಗಿಯುತ್ತಿದ್ದೆ. ನಾನು ಅಲ್ಲಿಗೆ ಬಂದವನೇ ಹಿಂದುಮುಂದು ನೋಡದೇ ನಿನ್ನ ಕಡೆಗೊಂದು ನಗೆ ಚಿಮ್ಮಿ ಹಗ್ಗ ನನ್ನ ಕೈಗಿಸಿದುಕೊಂಡು ಬಿಂದಿಗೆ ಬಾವಿಗೆ ಬಿಟ್ಟು ಎರಡೂ ಬಿಂದಿಗೆ ನೀರು ಸೇದಿಕೊಟ್ಟೆ ನಮ್ಮಿಬ್ಬರ ಅದೃಷ್ಟಕ್ಕೆ ಆ ಸಿಹಿನೀರ ಬಾವಿಯ ಪರಿಸರದಲ್ಲೆಲ್ಲೂ ಒಂದು ನರಪಿಳ್ಳೆಯಿರಲಿಲ್ಲ ತುಂಬಿದ ಎರಡೂ ಬಿಂದಿಗೆ ದಡದ ಮೇಲಿಟ್ಟವನೇ ಸ್ವಲ್ಪವೂ ತಡಬಡಿಸದೇ ನೇರವಾಗಿ ಹೇಳಿಬಿಟ್ಟೆ.." ನೋಡೇ ಹುಡುಗಿ ನೀನೆಂದರೆ ನನಗಿಷ್ಟ.ನಿನ್ನನ್ನು ನಾನು ಮನಸಾರೆ ಪ್ರೀತಿಸುತ್ತಿರುವೆ..ಜೀವನಪೂರ್ತಿ ನಿನ್ನ ಕೈಬಿಡುವುದಿಲ್ಲ.. ಅದೂ ನಿನಗಿಷ್ಟವಾದರೆ ಮಾತ್ರ.. ನೀನೂ ನನ್ನನ್ನು ಪ್ರೀತಿಸುತ್ತಿದ್ದರೆ ನಾಳೆ ಬೆಳಿಗ್ಗೆ ನಿಮ್ಮ ಮನೆಯ ಕಾಂಪೌಂಡ್ ನ ಮೂಲೆಯಲ್ಲಿರುವ ತುಳಸಿಕಟ್ಟೆಯ ಪಕ್ಕದಲ್ಲಿ ನಿಮ್ಮದೇ ಕೈತೋಟದಲ್ಲೇ ಆರಳಿರುವ ಗುಲಾಬಿಯನ್ನು ಕಿತ್ತುತಂದು ಅಲ್ಲಿಡು ಎಂದು ಮಾತು ನಿಲ್ಲಿಸಿದೆ. ಆಗ ನೀನು ಏನಂತ ಹೇಳಿದೆ ನೆನಪಿದೆಯಾ ಒಲವೇ....

ನನ್ನ ಮುದ್ದು..ಹುಡುಗಿಯೇ. ಆಗ ನೀನು..ಏನೆಂದು ಹೇಳಿದೆ ಗೊತ್ತಾ.." ನೀನು ಹೇಳಿದ್ದೆಲ್ಲವೂ ನನಗರ್ಥವಾಗಿದೆಯೋ ಹುಡುಗ, ಆದರೆ ನಾನು.. ನಿನಗಿಂತಲೂ ಮೊದಲೇ ನಿರ್ಧರಿಸಿಯಾಗಿತ್ತು. ಏನೆಂದು ಗೊತ್ತೇನೋ ತುಂಟ, ನೀನೆಂದೋ ನನ್ನ ಮನದಲ್ಲಿ ನೆಲೆಸಿರುವೆಯೆಂದೂ, ಬದುಕು ಹಂಚಿಕೊಂಡರೆ ನಿನ್ನೊಂದಿಗೆ ಮಾತ್ರವೆಂದೂ, ಮನಸ್ಸು ಆದ್ಯಾವಗಲೋ ನಿನಗೆ ಮೀಸಲಾಗಿ ಹೋಗಿದೆಯೆಂದೂ, ಎಂದೋ ಈ ಮನಸ್ಸು..ಈ ದೇಹ ನಿರ್ಧರಿಸಿಬಿಟ್ಟಿದೆ ಗೆಳೆಯಾ..ಮತ್ತು ನಿನಗೆ ಕೇಳಿಸುವಂತೆ.. ಸಿಹಿನೀರು ಬಾವಿಗೆ ಹೋಗುತ್ತೇನೆಂದು ಕೂಗಿ ಕೂಗಿ ಹೇಳಿದ್ದು..ಸಿಹಿನೀರಿನ ಬಾವಿಯ ಬಳಿಗೆ ಬರುವಂತೆ..ನಿನಗೆ ಆಹ್ವಾನವಿತ್ತದ್ದೂ...
ನಿನ್ನಲ್ಲಿ.. ನನ್ನ ಪ್ರೀತಿ ನಿವೇದನೆ ಮಾಡಲೆಂದೇ ಹುಡುಗ, ಅರ್ಥವಾಯಿತೇ..ಆದರೆ ಪರಮ ಆತುರಗಾರ ನೀನು... ಎಲ್ಲಿ ಇವಳು ಕೈತಪ್ಪಿ ಹೋದಾಳೋ ಎಂಬ ಗಾಬರಿಯಲ್ಲಿ , ನನಗಿಂತಲೂ ಮೊದಲೇ ನೀನೇ ಪ್ರೀತಿಸುವ ವಿಷಯ ಹೇಳಿಬಿಟ್ಟೆ. ಸಾಲದ್ದಕ್ಕೆ ಸಿನಿಮಾಗಳಲ್ಲಿನ ಸನ್ನಿವೇವೇಶಗಳಲ್ಲಿದ್ದಂತೆ...ನಮ್ಮದೇ ಕೈತೋಟದ ಗುಲಾಬಿಯನ್ನು ಕಿತ್ತು. ತುಳಸಿಕಟ್ಟೆಯ ಪಕ್ಕದಲ್ಲಿಡುವಂತೆ ಹೇಳುತ್ತಿದ್ದೀಯಲ್ಲಾ. ಆದರೆ  ಭಾರೀ ಪುಕ್ಕಲ ಜಾಣ ಬಿಡು ನೀನು..ಇವಳೇನಾದರೂ ಇಲ್ಲ ಅಂದುಬಿಟ್ಟರೆ ತಡೆದುಕೊಳ್ಳಲಾಗದೆಂದು  ಆ ರೀತಿ ಸಿನಿಮಾ ಶೈಲಿಯಲ್ಲಿ ಹೇಳಿದೆ ನೀನು..ಅರ್ಥಮಾಡಿಕೊಳ್ಳಬಲ್ಲೆ ಗೆಳೆಯಾ..
ಇರಲಿ ಹುಡುಗ..ನಮ್ಮ ಪ್ರೇಮದ ಪ್ರಾರಂಭೋತ್ಸವದ ಗುರುತಾಗಿ..ನೀನೇ ಹೇಳಿದ..ನಮ್ಮದೇ ಕೈದೋಟದ ಗುಲಾಬಿ ಹೂ ತಂದಿದ್ದೇನೆ..ಆ ಆಗತಾನೇ ಅರಳಿರುವ ಸುಂದರ ಗುಲಾಬಿಯನ್ನು ನನ್ನ ಹೆರಳಿನ ಮುಡಿಗೆ ಮುಡಿಸು..ಆ ಗುಲಾಬಿ ಹೂವಿನ ಸೊಬಗಿನಷ್ಟೇ ಸೊಗಸಾಗಿ ಅರಳಲಿ..ಪರಿಮಳಿಸಲಿ ನಮ್ಮಿಬ್ಬರ ಅನುಬಂಧ " ..ಎಂದವಳು..ನಿನ್ನ ದಾವಣಿಯ ಮಡಿಲಲ್ಲಿ ಬೆಚ್ಚಗಿದ್ದ..ಕೆಂಪುಗುಲಾಬಿಯನ್ನು ನನ್ನ ಅಂಗೈನೊಳಗಿಟ್ಟೆಯಲ್ಲಾ..ಒಲವೇ...ನಿಜಕ್ಕೂ ನನ್ನ ಮನಸ್ಸು ಸ್ವರ್ಗದ ಹೆಬ್ಬಾಗಿಲಲ್ಲಿ  ನಿಬ್ಬೆರಗಾಗಿ ನಿಂತಂತಿತ್ತು.
..ಕೆಂಪು ಗುಲಾಬಿಯನ್ನು ಹಾಗೇ ನಿನ್ನ ಹೆರಳಿನ ಮುಡಿಗೆ ಮುಡಿಸುವಾಗ ನನ್ನ ಕೈ ಸಣ್ಣಗೆ ನಡುಗಿದ್ದಂತೂ ಸುಳ್ಳಲ್ಲ..ಒಲವೇ
ಅನಂತರ..ನನ್ನೆಡೆಗೆ ತಿರುಗಿದ ನೀನು ನನ್ನ ಒರಟು ಕೆನ್ನೆಗೆ..ಜೀವಮಾನದಲ್ಲೆಂದೂ ಮರೆಯಲಾಗದಂತ 
ಸಿಹಿಮುತ್ತನಿತ್ತೆಯಲ್ಲ..ಒಲವೇ..ನಿಜ ಹೇಳಲೇ ಅಂದು ನಾನು ನಾನಾಗಿ ಉಳಿದಿರಲಿಲ್ಲ..ಆಗಸದಂಗಳದಲ್ಲಿ ..ಸ್ವಚ್ಛಂದ.. ಹಕ್ಕಿಯಂತೆ ಹಾರಾಡಿದಂತೆ ..ಭಾಸವಾಗುತ್ತಿತ್ತು..ಇವಳ್ಯಾವ ಜನ್ಮದ ಬಾಳಸಂಗಾತಿಯೋ ಎಂದೆನಿಸಿಬಿಟ್ಟಿತ್ತು.. ಯಾವುದೋ ಸ್ವಪ್ನಲೋಕದಲ್ಲಿ ಮುಳುಗಿದ್ದವನನ್ನು ಎಚ್ಚರಿಸಿದ್ದೇ ನೀನು...ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ..ಸೂರ್ಯ ಪಶ್ಚಿಮದ ಕಡೆ ತನ್ನ ರಥ ಓಡಿಸುತ್ತಿದ್ದ...ಸಂಜೆಯ ಎಳೆಬಿಸಿಲ ಕಿರಣಗಳು ನಿನ್ನ ಮೊಗವನ್ನು ಮುದ್ದಿಸಿ ಸುಖಿಸುತ್ತಿದ್ದವು..ಆಗ ದೂರದಲ್ಲಿ ಯಾರೋ ನಾಲ್ಕೈದು ಜನ ಹೆಂಗೆಳೆಯರು ಸಿಹಿನೀರ ಬಾವಿಯ ಕಡೆಗೆ ಬರುತ್ತಿರುವಂತೆ ಹೆಜ್ಜೆಗಳ ಸಪ್ಪಳ ಕೇಳಿಬರುತ್ತಿತ್ತು..ಆಗ ಎಚ್ಚೆತ್ತುಕೊಂಡ ನೀನು.."ನಾಳೆ ಸಿಗೋಣ ಹುಡುಗಾ..ಇದೇ ಸಮಯಕ್ಕೆ..ಇದೇ ಜಾಗದಲ್ಲಿ..ಇದೇ ಇಳಿಸಂಜೆಯ ಅಂಗಳದಲ್ಲಿ.." ಎಂದವಳು ಲಗುಬಗನೆ ಹೊರಟುಬಿಟ್ಟೆಯಲ್ಲಾ..ಒಲವೇ..
ಅಂದಿನಿಂದ ಆರಂಭವಾಗಿತ್ತು..ನಮಿಬ್ಬರ ಪ್ರೇಮೋತ್ಸವದ ಮಧುರ ಘಳಿಗೆಗಳು..ಅನಂತರ ಬೆರೆತಿದ್ದು..ಬೆಸೆದಿದ್ದು..ತೋಳ್ತಕ್ಕೆಗಳಲ್ಲಿ ಒಬ್ಬರಿಗೊಬ್ಬರು ಬಂಧಿಯಾಗಿದ್ದು..ರಸಘಳಿಗೆಗೆಳ ಸಾಮ್ರಾಜ್ಯಕ್ಕೆ ನಾವೇ ಅರಸ ಅರಸಿಯಾಗಿ ಆಳಿದ್ದು..ಸಿಹಿಮುತ್ತುಗಳ ವಿನಿಮಯ ಮಾಡಿಕೊಂಡಿದ್ದು..ನಿನ್ನ ಚೆಂದುಟಿಯ ಚುಂಬನವನು ನಾನು ಸಾಲವಾಗಿ ಪಡೆದಿದ್ದು..ಅದನ್ನು ಮತ್ತೆ ಮತ್ತೆ  ಬಡ್ಡಿ ಸಮೇತ ತೀರಿಸಿದ್ದು..ನನ್ನ ಮಡಿಲಲ್ಲಿ ತಲೆಯಿಟ್ಟು ಆಗ ತಾನೇ ನಗಲು ಹವಣಿಸುತ್ತಿರುವ ಚಂದಿರನನ್ನು ಆಣಕಿಸಿದ್ದು,..ತಾರೆಗಳನ್ನು ಎಣಿಸಿ ಗುಣಾಕಾರ ಮಾಡಿದ್ದು..ಎಷ್ಟೊಂದು ಹುಣ್ಣಿಮೆಯ ರಾತ್ರಿಗಳು ..ನೆನಪಿದೆಯಾ ಒಲವೇ..ನಿನ್ನ ವದನವನು ಮುತ್ತಿಕ್ಕುತ್ತಿದ್ದ ಸಂಜೆಯ ಸೂರ್ಯರಶ್ಮಿಗಳೊಡನೆ ನಾನು ಜಗಳಕ್ಕಿಳಿದಿದ್ದು... ಹಾಗೂ ಆಗಾಗ ನಿನ್ನ ಮುಂಗುರುಳನ್ನು ಸೋಕುತ್ತಿದ್ದ. ತಾಕುತ್ತಿದ್ದ ತಂಗಾಳಿಯೊಂದಿಗೆ ಮುನಿಸಿಕೊಂಡಿದ್ದು..ಮತ್ತು ಆ ಸಂಧ್ಯಾಕಾಲದಲಿ ಗೂಡಿಗೆ ಮರಳುತ್ತಿದ್ದ ಹಕ್ಕಿಗಳು ನಮ್ಮಿಬ್ಬರೆಡೆಗೆ ಈರ್ಷೆಯಿಂದ ನೋಡಿದ್ದು, ಕೆಲವೊಂದು ಗಂಡುಪಕ್ಷಿಗಳು ನಿನಗೆ ಕಣ್ಣು ಮಿಟುಕಿಸಿದ್ದು. ಎಷ್ಟೊಂದು ಎಳೆಬಿಸಿಲಿನ ಸಾಯಂಕಾಲಗಳು ಸರಿದವೋ ಲೆಕ್ಕ ಹಾಕಲು ..ಇಂದಿಗೂ ಸಾಧ್ಯವಾಗದು ಗೆಳತಿ,

ನಾನಂತೂ ನಿಮ್ಮೂರಿಗೆ ಮೂರುದಿನಕ್ಕೊಮ್ಮೆ. ಏನಾದರೂ ನೆಪ ಹೇಳಿ ಬರುತ್ತಿದ್ದೆ. ನಮ್ಮ ಪ್ರೀತಿಯ ಚೈತ್ರೋತ್ಸವ ನಡೆದೇ ಇತ್ತು.. ಹೀಗಿರುವಾಗ ಎಂಥಹಾ ಚೈತ್ರೋತ್ಸವಕ್ಕೂ ಒಂದು ಅಡೆತಡೆ ಇದ್ದಂತೆ. ನಮ್ಮ ಪ್ರೇಮೋತ್ಸವಕ್ಕೂ ತಡೆಯಾಗುವ ಕಾಲ..ದುರದೃಷ್ಟದಂತೆ ವಕ್ಕರಿಸಿಬಿಟ್ಟಿತ್ತು. ನನಗಾಗ ಎಕ್ಸಾಮ್ ನಡೆಯುವ ಕಾಲಕ್ಕೇ ನಿಮ್ಮ ಮನೆಯಲ್ಲಿ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆಂದು ಗೊತ್ತಾಯಿತು...ನನ್ನ ಹೃದಯ ಬಾಯಿಗೆ ಬಂದಂತಾಗಿತ್ತು. ನನ್ನ ಮನಸ್ಸು, ಖಾಲಿಖಾಲಿಯೆನಿಸಿ ತೀರದ ನೋವಿನಿಂದ ಒದ್ದಾಡಿಬಿಟ್ಟಿತ್ತು..ಯಾವುದೋ ಅವ್ಯಕ್ತ ನೋವು ನನ್ನ ಅಂತರಂಗವನು ಅಲ್ಲೋಲ ಕಲ್ಲೋಲವಾಗಿಸಿಬಿಟ್ಟಿತ್ತು.., 
ನಿಜ ಹೇಳುವೆನು ಗೆಳತಿ. ಆ ಸಮಯಕ್ಕೆ ನಾನು ನಿನ್ನಿಂದ ಆರನೂರು ಮೈಲಿಗಳ ದೂರದಲ್ಲಿದ್ದೆ. ಪರೀಕ್ಷೆ ಬರೆಯಲೆಂದು ಹೋಗಿದ್ದೆ.. ಇಲ್ಲಿಂದ ನೀನಿರುವಲ್ಲಿಗೆ ಬರಬೇಕೆಂದರೆ, ಕಡಿಮೆಯೆಂದರೂ ಅರೇಳು ದಿನಗಳಾದರೂ ಬೇಕು, ಎಕ್ಸಾಮ್ ಇರುವುದೇ ಆ ಆರನೆಯ ದಿನ. ಏನು ಮಾಡುವುದೆಂದು ತೋಚದೇ ಎಕ್ಸಾಮ್ ಬರೆದು ಮುಗಿಸಿ..ಅನ್ಯಮನಸ್ಕನಾಗಿಯೇ ನಮ್ಮೂರಿಗೂ ಹೋಗದೇ ನಿಮ್ಮೂರಿಗೆ ಬಂದೆ. ಆದರೆ ದುರದೃಷ್ಟವೆಂಬಂತೆ ನಿನಗೆ ಅದಾಗಲೇ ಮದುವೆಯಾಗಿಬಿಟ್ಟಿತ್ತು..

ಮೈಕಸುವೆಲ್ಲಾ ಒಮ್ಮೆಲೆಗೆ ಕರಗಿ ನೀರಾಗಿ ಹರಿದು ಹೋದಂತಾಗಿ..ಸುಸ್ತಾದವನಂತೆ ಬಳಲಿ ನಿಂತವನ ಕಂಗಳಲಿ ಬದುಕುವಾಸೆಯೇ ಬತ್ತಿ ಹೋಗಿ.. ನಿರಾಸೆ ಭಾವದಿಂದ…ಸೋತ ಮನಸ್ಸಿನಿಂದ..ನಿನಗಾಗಿ ಬರೆದಿಟ್ಟ ಪ್ರೇಮಪತ್ರದ ಕೆಲವು ಸಾಲುಗಳನ್ನು ಇಲ್ಲಿ ಬರೆಯುತ್ತಿದ್ದೇನೆ.. ಒಲವೇ.. 


ಹಗಲು ಬೆಳಗುವ ಕಿವಿಮಾತು ಹೇಳಿಟ್ಟಿದ್ದೇನೆ.
ಇರುಳು ಬೆಳಗುವ ಚಂದ್ರಮನಿಗೊಂದು ಕಿವಿಮಾತು ಹೇಳಿಟ್ಟಿದ್ದೇನೆ. 
ಬೀಸುವ ತಣ್ಣನೆಯ ತಂಗಾಳಿಗೊಂದು, ಹೇಳಿಟ್ಟಿದ್ದೇನೆ. 

ಹಾರುತ್ತಾ ಸಾಗುವ ಪ್ರೇಮಪಕ್ಷಿಗೊಂದು ಕಿವಿಮಾತು ಹೇಳಿಟ್ಟಿದ್ದೇನೆ. 
ಏನೆಂದು. ಗೊತ್ತಾ. ಆತ್ಮಬಂಧುವೇ..
ಸುವಿಶಾಲ ಗಗನದ ವಾರಸುದಾರರಾದ ನಿಮಗೆ... 
ಭೂರಮೆಯ ಕಡೆ ಇಣುಕಿದಾಗ ದೂರದಲ್ಲೆಲ್ಲೋ ಕಾಣುವ, ನನ್ನ ಹೃದಯದರಸಿಯ. ನನ್ನ ಪ್ರಾಣಪಕ್ಷಿಯ, 
ಉಸಿರಿಗೆ ಉಸಿರಾದವಳ, . ಪ್ರತಿದಿನವೂ.. ಪ್ರತಿಕ್ಷಣವೂ, ಒಮ್ಮೆ ಮಾತಾಡಿಸಿ ಬಾ ಎಂದು. ನನ್ನ ನೆನಪಲ್ಲೇ ಕಾಲಕಳೆಯಬೇಡವೆಂದು. ಹೇಳಿ ಬನ್ನಿ, ಎಲ್ಲೋ..ದೂರದ ಊರಿನಲ್ಲಿ ನಿನ್ನ ಹೃದಯದ ಇನಿಯನನು ಕಂಡೆ.. ನಿನ್ನದೇ ಗುಂಗಿನಲಿ.. ನೆನಪಿನಲಿ, ಧ್ಯಾನದಲಿರುವನೆಂದು..ಮರೆಯದೇ ಹೇಳಿಬನ್ನಿ 
ಸೋಕಿಯೂ ಸೋಕದಂತೆ ಹೂಮತ್ತನ್ನಿತ್ತು ಬನ್ನಿ..
ಎಂದು ಕಿವಿಮಾತು ಹೇಳಿಟ್ಟಿದ್ದೇನೆ..ಒಲವೇ
ಎಲ್ಲಿದ್ದರೂ ಚೆನ್ನಾಗಿರು..ಸುಖವಾಗಿರು. ನಿನಗೆ ಈ ಪತ್ರ ತಲುಪಿದರೆ ಸ್ವೀಕರಿಸು ಇಲ್ಲವಾದರೆ,..ಮನ್ನಿಸು ಗೆಳತಿ.

ನಿನ್ನವ..
ಜಿಂಕೆ ಮಂಜುನಾಥ್
ಕಲ್ವಮಂಜಲಿ
ಕೋಲಾರ ತಾಲ್ಲೂಕು.. ಜಿಲ್ಲೆ
 ProfileImg

Written by Jinke Manjunath