ಪ್ರೀತಿಯ ನಗು..!

ಮನುಷತ್ವದ ಮಹತ್ವ ಸಾರುವ ಅರ್ಥಗರ್ಭೀತ ಕವನ

ProfileImg
26 May '24
1 min read


image

ನನ್ನದು
ಕೆಂಪು ರಕ್ತ
ಅವನದು
ಕೆಂಪು ರಕ್ತ
ಈ 
ಭುವಿಯಲ್ಲಿದೆ
ಹಸಿರಿನ ಸ್ವರ್ಗ..!

ಸುಂದರ ಜಗದಲ್ಲಿ
ನೀನಾಗಬೇಡ
ಮನುಜ 'ಕೆಡುಕ'

ನಮ್ಮ ಮನೆಗೆ
ಅವ್ರು ಬರ್ತಾರೆ
ಅವ್ರ ಮನೆಗೆ
ನಾವು ಹೋಗ್ತೇವೆ
ನಮಗೆ ಎಂದೂ
ಅಡ್ಡಿಯಾಗಿಲ್ಲ
ಜಾತಿ ಎಂಬ ಗೋಡೆ..!
*
ಜತೆಯಾಗಿ ಕೂತು
ತಿಂದು ಹರಟುತ್ತೇವೆ
ಇದೇ ಅಲ್ಲವೇ
ಸೌಹಾರ್ದ, ಭಾತೃತ್ವ..?

ಹರಿದ ಚಡ್ಡಿ ಹಾಕ್ಕೊಂಡು
ನಾನು, ಅವ್ನು
ಸ್ಕೂಲಲ್ಲಿ ನಲಿದಾಡಿದ
ಆ ದಿನಗಳು
ವಾಹ್...
ಎಷ್ಟೊಂದು ಸುಂದರವಿತ್ತು..!
ಆ ದಿನಗಳು
ನನ್ನ ಪಾಲಿನ
ಹಬ್ಬದ ದಿನಗಳು..!
ನಮ್ಮೊಳಗಿನ
ಪ್ರೀತಿ, ಸೌಹಾರ್ದ ನೋಡಿ
ಕಾಲಕ್ಕೆ
ಮತ್ಸರವಾಯಿತೇ..?
ಅಥವಾ
ಇತರರಿಗೆ
ಮತ್ಸರವಾಯಿತೇ..?
ನನಗಂತೂ 
ಗೊತ್ತಿಲ್ಲ
ಅದರೇನಂತೆ,
ನಮ್ಮ ಊರಿನ ಸೌಹಾರ್ದ‌ತೆಗೆ
ಊರಿನ ಗದ್ದೆಯೇ 
ಪಚ್ಚ ಹಸುರಿನ
ನಗೆ ಬೀರಿತ್ತು..!

ನಾನು, ಸಚಿನ್, ಕುಶಾಲಪ್ಪ
ಜತೆಯಾಗಿ
ಸೈಕಲಲ್ಲಿ ಹೋಗುತ್ತಿದ್ದೇವು ಸ್ಕೂಲ್ ಗೆ
ವಾಹ್...
ಆ ದಿನಗಳು
ಮಗದೊಮ್ಮೆ
ಬರಬೇಕೆನಿಸುತ್ತಿದೆ...
ಮರಳಿ ಬರಬಹುದೇ..?

ಮರೆಯಲಾಗದ
ಆ ನೆಮ್ಮದಿಯ 
ದಿನಗಳು
ಮತ್ತೆ ಬರಬಹುದೇ..?
ನೀವು ಹೇಳುವೀರಾ..?


ಬೆಳಕು ಕೊಡೋ
ಸೂರ್ಯನಿಗೆ ಇಲ್ವಂತೆ
ಅಹಂಕಾರ, ದ್ವೇಷ..
ಮತ್ತ್ಯಾಕೆ
ಮನುಜ ನಿನಗೆ 
ಆ 
ಅಹಂಕಾರ, ದ್ವೇಷ..?

ಎದುರು ಪರಸ್ಪರ ಸಿಕ್ಕಾಗ
ನಗುವೇ ಸ್ವಾಗತಿಸಲಿ
ಜಾತಿ, ಧರ್ಮದಲ್ಲಿ 
ಅಳೆಯಬೇಡ ಓ‌ ಮನುಜ...
ಮೊದಲು ನೀನಾಗು 'ಮಾನವ'
ಮೊದಲು ನೀನಾಗು 'ಮನುಷ್ಯ'

ನೀನು ನಕ್ಕು, ನಲಿದಾಡು 
ಉಳಿದವರು ನಕ್ಕು ನಲಿದಾಡಲಿ
ಹುಟ್ಟು - ಸಾವಿನ‌ ಮಧ್ಯೆ
ಅದ್ಯಾಕೆ
'ಧರ್ಮ ರಾಜಕೀಯ..?'

ನೆಮ್ಮದಿಯ ನಾಳೆಗಾಗಿ
ಬೇಕಾಗಿರೋದು 
ಕೋಪ, ತಾಪ, ಹೊಡೆದಾಟವಲ್ಲ
ಬೇಕಾಗಿರುವುದು
ಪ್ರೀತಿ, ಸೌಹಾರ್ದ, ಮನುಷ್ಯತ್ವ..!

- ಶಂಶೀರ್ ಬುಡೋಳಿ

Category:PoetryProfileImg

Written by Shamsheer Budoli

Verified

Author, Journalist, Poet, Anchor, PhD Scholar