ಪ್ರೀತಿ ಮಾಡು ತಪ್ಪೇನಿಲ್ಲ... ಅಂತ ಎಲ್ರೂ ಹೇಳ್ತಾರಲ್ಲ... ಅಂದುಕೊಂಡ ಹಾಗೇನೂ ಇಲ್ಲ....!

ಪ್ರೀತಿ ಮಾಯೆ ಹುಷಾರು...!

ProfileImg
23 May '24
4 min read


image

ಪ್ರೀತಿ ಮಾಡು ತಪ್ಪೇನಿಲ್ಲ...ಅಂತ ಎಲ್ರೂ ಹೇಳ್ತಾರಲ್ಲ....ಅಂದುಕೊಂಡ ಹಾಗೇನೂ ಇಲ್ಲ...

ಯವ್ವ ಬೇ...ಮಗಳ...ನಿನ್ ಕಾಲ್ ಬೀಳ್ ಅಂದ್ರು ಬೀಳತೆನಿ ಆಗಿದ್ ಆಗಿ ಹೋತು ಮನಿಗಿ ಬಾರ...ಸಿರಿ ನೀ ನನ್ನ ಮಗಳಲ್ಲ ಈಟ ಇದ್ದಾಗಿಂದ ಆಡಿಸಿ ಬೆಳೆಸಿದ ನಿಮ್ಮಪ್ಪನ ಮಾರೀ ನೋಡಬೆ...ನೀ ಹೋದಾಗಿಂದ ಊಟಾ ಬಿಟ್ಟಾನು...

ಊಂ ಹೂಂ....ಅನ್ನುವ ಮಗಳನ್ನ ತಬ್ಬಿಕೊಂಡು ತಲೆ ನೇವರಿಸಲು ಮುಂದಾದ ಅವ್ವ ಮತ್ತು ನಾ ವಲ್ಲಿ ನನಗ ಇವ್ನ ಬೇಕು ಅನ್ನುತ್ತಿರುವ ಮಗಳು...

ಏ ತಮ್ಮ ನಿನ್ನ ಕಾಲಿಗಿ ಬೀಳತೆನೊ ನಮ್ ಕಳ್ಳ ಮರಗಸ್ ಬ್ಯಾಡ ಇರಕಿ ಒಬ್ಬಕಿ ಮಗಳ ಅದಾಳೋ ಯಪ್ಪಾ ಮನಿಗಿ ಹೋಗ ಅಂತ ಹೇಳು...ಅಂತ ಗ್ಯಾರೇಜು ಬಟ್ಟೆಯಲ್ಲೇ ಠಾಣೆಗೆ ಬಂದಿರುವ ಹುಡುಗನ ಕಾಲು ಹಿಡಿಯಲು ಹೋಗುತ್ತಿರುವ ತಂದೆ...

ಏ ತಂಗಿ ನೋಡವಾ ವಿಚಾರ ಮಾಡು ಚಂದ ಹಂಗಿ ಸಾಲಿ ಕಲ್ತು ಮುಂದ ಬೇಕಿದ್ರ ಇವನ ಜೋಡಿನ ಮದ್ವಿ ಮಾಡ್ತಾರು ಈಗ ನಿಮ್ಮ ಅವ್ವ ಅಪ್ಪನ ಮಾತು ಕೇಳು ಅನ್ನುತ್ತಿರುವ ಮಹಿಳಾ ಪೋಲಿಸ್ ಪೇದೆ..

ನೋಡಮ್ಮ ನಿನಗೆ ಇನ್ನೂ ಹದಿನೆಂಟು ವರ್ಷ ಆಗಿಲ್ಲ..... ಮೆಡಿಕಲ್ ಟೆಸ್ಟು, ಅದು-ಇದು ಅಂತೆಲ್ಲ ಲೀಗಲ್ ಪ್ರೊಸೀಜರ್ ಮಾಡ್ತಾರೆ, ಹುಡುಗನ ಮೇಲೆ ಪೋಕ್ಸೋ ಕೆಸ್ ಆಗುತ್ತೆ ನೀನು ಸಾಂತ್ವನ ಕೇಂದ್ರಕ್ಕೆ ಹೋಗಬೇಕಾಗುತ್ತೆ ಅನ್ನುತ್ತಿರುವ ಈಗಷ್ಟೇ ಎಲ್ ಎಲ್ ಬಿ ಮುಗಿಸಿ ಬಂದ ಹೊಸ ಲಾಯರ್ರು..

ಜಪ್ಪಯ್ಯ ಅಂದರೂ ತುಟಿ ಬಿಚ್ಚದೆ ಕಣ್ಣೀರು ಸುರಿಸುತ್ತಿರುವ ಹುಡುಗಿ,ಮೌನವಾಗಿ ಠಾಣೆಯ ನೆಲದ ಮೇಲೆ ಕುಕ್ಕರು ಕಾಲಿನಲ್ಲಿ ಕಣ್ಣುಗಳಲ್ಲಿ ಭಯ ಹೊತ್ತು ಕುಳಿತಿರುವ ಹುಡುಗ...

“ಏ ಸರ್ ಬರೆ ಇದಾ ಆಗೇತ್ರಿ ಅವನವ್ವನ..ಎರಡ ತಿಂಗಳ ಒಳಗ ಇದು ಎಂಟನೆ ಕೆಸ್ ನೋಡ್ರಿ....
ಸೂ..ಮಕ್ಳು ಸಾಲಿ ಕಲಿಯೂ ವಯಸ್ನ್ಯಾಗ ಹಾಲ್ ಕುಡದ್ ಸಾಲಿ ಕಲಿ ಅಂದ್ರ ಹೇಸಿಗಿ ತಿಂದ ಬಾಳೆ ಮಾಡ್ತಾವ್ರೀ...

ಐದ್ ಹತ್ ಸಾವಿರದ  ಮೊಬೈಲ್ ನಾದಿಗಿ ಬಿದ್ ನಾಕ್ ರೀಲ್ಸ ಮಾಡ್ತಾರು...
ಯಾಂವರೆ ಒಬ್ಬ ಡಿಯರ್,ಚಿನ್ನು,ಗುಬ್ಬಿ,ಬಂಗಾರ, ಅಂದ್ರ ಸಾಕು ಹುಟ್ಟಿಸಿದ್ ಅವ್ವ ಅಪ್ಪನ ಖಬರು ಇರುದಿಲ್ಲ ಸೂ...ಮಕ್ಕಳಿಗೆ ಎನ್ ಹೇಳೂದ್ರಿ ಹಿಂತವರಿಗೆ.......ಬಂಗಾರದಂತ ಬಾಳೆಕ್ ಬೆಂಕಿ ಹಚಗೋತಾರ್ ಬೋ...ಮಕ್ಳು”
ಅಂತ ಎಲೆ ಅಡಿಕೆ  ಉಗಿದು ಬುದ್ದಿ ಹೇಳುವ ಪ್ರಯತ್ನ ಮಾಡುತ್ತಿರುವ ಹೆಡ್ ಕಾನ್ಸಟೇಬಲ್...

ಹೀಗೆ ಕರುಳ ಬಳ್ಳಿಯೇ ಭಾವಶೂನ್ಯವಾಗಿ ಎದುರು ನಿಂತ ಮೇಲೆ ಉಸಿರು ಕೂಡ ಭಾರವಾಗುತ್ತಿರುವ ತಂದೆ ತಾಯಿಗಳ ಪರಿಸ್ಥಿತಿ ನೋಡಿದರೆ ಕಣ್ಣು ಹನಿಗೂಡುತ್ತವೆ.ಆತ್ ಬಿಡು ಇವತ್ತಿಂದ್ ಸತ್ತಿ ನಮ್ ಪಾಲಿಗಿ ಅಂತ ರಾಜಿ ಪಂಚಾಯತಿ ಮುರಿದು ಬಿದ್ದ ಮೇಲೆ ಎದ್ದು ಹೊರಡುವ ಅಣ್ಣ, ಎನ್ ನೋಡಿದಿ ಅವನ್ ಒಳಗ್...ಬಿದರ್ ಕಟಗಿ ಗೊಂಬಿ ಆಗ್ಯಾನ ಮಗಾ ಹೇಳಿದ್ದಿವ್ ಇಲ್ಲೋ ಹನ್ನೆರಡನೆತೆ ಮುಗಿಲಿ ಸ್ವಾದರ್ ಮಾವನ ಜೋಡಿ ಅಕ್ಕಿ ಕಾಳ ಒಗೀತಿವ್ ಅಂತ ಗದ್ಗದಿತ ಧ್ವನಿಯಲ್ಲಿ ಮರ್ಯಾದೆಗೆ ಅಳುಕುತ್ತಲೆ ಸಿಟ್ಟಿಗೆ ಬರುತ್ತಿರುವ ಅಜ್ಜಿ...

ಊಂ ಹೂಂ...ಈಗಿನ ಮಕ್ಕಳಿಗೆ ಇದ್ಯಾವುದರ ಪರಿವೆಯೂ ಇಲ್ಲ.ಕಾಲೇಜ್ ಕ್ಯಾಂಪಸ್ಸಿನಲ್ಲಿ,ಡ್ಯೂಕ್,ಅಥವಾ ಪಲ್ಸರ್,ಇಲ್ಲವೆ ಮತ್ಯಾವದೋ ಕಂಪನಿಯ ಗುಟುರು ಹಾಕುವ ಬೈಕು ತರುವ ಮತ್ತು ಅಪ್ಪ ಅಮ್ಮನ ದುಡ್ಡಿನಲ್ಲೆ ಶೋಕಿ ಮಾಡುವ ಹುಡುಗರಿಂದ ಹಿಡಿದು,ಗಂಟೆಗೊಂದು ಬೈಕ್ ತರುವ ಮೆಕ್ಯಾನಿಕ್ ಅನ್ನೋ,ಕೋಲ್ಡ್ರಿಂಕ್ ಸ್ಟಾಲ್ ಇಟ್ಟುಕೊಂಡ ಅಥವಾ ಹೊಟ್ಟೆಪಾಡಿಗೆ ಆಟೋ ಓಡಿಸುವ ಹುಡುಗನನ್ನೋ ಮೆಚ್ಚಿಕೊಳ್ಳುವ ಹುಡುಗಿಯರು ಮುಂದಿನ ಭವಿಷ್ಯದ ಬಗ್ಗೆ ಯೋಚಿಸದೆ ಇರುವದನ್ನ ನೋಡಿದಾಗೆಲ್ಲ ನನಗೆ ಅಯ್ಯೋ ಅನ್ನಿಸಿಬಿಡುತ್ತದೆ.

ಹಾಗಂತ ಪ್ರೀತಿ ಮಾಡಬಾರದು ಅಂತಲೋ ಅಥವಾ ಮೆಕ್ಯಾನಿಕ್ಕು,ಕೋಲ್ಡ್ರಿಂಕ್ಸ ಅಂಗಡಿಯ ಹುಡುಗ,ಅಥವಾ ಆಟೋ ಡ್ರೈವರ್ ಗಳು ಸರಿ ಇಲ್ಲ ಅಂತಲೋ ನಾನು ಹೇಳುತ್ತಿಲ್ಲ.ಅಂತಹದ್ದೆ ಒಬ್ಬ ಮೆಕ್ಯಾನಿಕ್ ಅಥವಾ ಆಟೋ ಡ್ರೈವರ್,ಇಲ್ಲವೇ ಯಾವುದೋ ಒಂದು ಸಣ್ಣ ಪುಟ್ಟ ಕೆಲಸ ಮಾಡುವ ಅಪ್ಪನ ಮಗಳು ಕೂಡ ಹೀಗೆಲ್ಲ ಮಾಡಿದಾಗ ನನಗೆ ಇರುವದು ಇದೇ ಕಕ್ಕುಲಾತಿ...

ಒನ್ಸ ಅಗೇನ್ ಯಾವ ತಂದೆ ತಾಯಿ ಆದರೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅದೆಷ್ಟೋ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ, ಅದರಲ್ಲೂ ಕೆಲವು ಜನರಂತೂ ಸಮಾಜದ ಕಟ್ಟು ಪಾಡುಗಳಿಗೆ ಹೆದರುತ್ತ ಮಕ್ಕಳು ಹಾದಿ ತಪ್ಪಬಾರದು ಅಂತ ಕಣ್ಣು ಬಿಟ್ಟುಕೊಂಡು ಜತನದಿಂದ ಕಾಯುತ್ತ ಕುಳಿತಾಗಲೂ ಅದೇ ಬಿಗ್ ಬಿಗಿ ಪ್ಯಾಂಟು,ರೌಂಡ್ ನೆಕ್ ಟೀ ಶರ್ಟು,ಒಂದು ಕಿವಿಯಲ್ಲಿ ಓಲೆ ಕೈಯ್ಯಲ್ಲೊಂದು ಮೊಬೈಲು,ಮತ್ತು ತಲೆಯ ಗುಂಗುರು ಕೂದಲಿನ ತುದಿಗೆ ಕೆಂಬಣ್ಣ ಬಡೆದುಕೊಂಡು ಶುದ್ದಾನು ಶುದ್ದ ಪೋಲಿ ಅಲೆಯುವ ಹುಡುಗನಿಗೆ ಮಗಳು ಮನಸ್ಸು ಕೊಟ್ಟು ಬಿಟ್ಟಿರುತ್ತಾಳೆ ಅಂದರೆ ಯಾವ ತಂದೆ ತಾಯಿ ತಾನೆ ಸಹಿಸಿಕೊಳ್ಳಲು ಸಾಧ್ಯ ಅಲ್ಲವಾ??

ಯೋಚಿಸಿ ನೋಡಿದರೆ ಹಗಲು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತ ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹೋಗಲು ಕೆಲವೊಮ್ಮೆ ಉಪವಾಸ ಉಳಿದು ಹಣ ಹೊಂದಿಸುತ್ತಿರುವ,ಹಬ್ಬ ಹರಿದಿನಕ್ಕೆ ತಾನು ಹಳೆಯ ಬಟ್ಟೆಗಳನ್ನೆ ಹಾಕಿಕೊಂಡು ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುವ,ತಮ್ಮ ಹುಟ್ಟುಹಬ್ಬ,ಅಥವಾ ಮ್ಯಾರೇಜ್ ಯಾನಿವರ್ಸರಿಯನ್ನೇ ನೆನಪಿಸಿಕೊಳ್ಳದೆ ಮಕ್ಕಳ ಪ್ರತಿ ಹುಟ್ಟುಹಬ್ಬಕ್ಕೂ ಕೇಕು ತಂದು ಕತ್ತರಿಸುವ ಅದೆಷ್ಟೋ ಅಪ್ಪ ಅಮ್ಮಂದಿರ ಕನಸುಗಳು ಹೀಗೆ ನುಚ್ಚು ನೂರಾದಾಗ ಎಂಥವರಿಗೂ ಕರುಳು ಕಿವುಚಿದಂತಾಗುತ್ತದೆ.

ಹರೆಯದ ಸೆಳೆತಕ್ಕೆ ಸಿಕ್ಕು ಭವಿಷ್ಯದ ಯೋಚನೆಯೆ ಇಲ್ಲದೆ ಅಥವಾ ಈಗ ಚಾಕೋ ಬಾರ್ ಕೊಡಿಸುವ,ದೊಡ್ಡದೊಂದು ಡೈರಿ ಮಿಲ್ಕ್ ಕೊಡಿಸುವ ಹುಡುಗ ಮುಂದೆಯೂ ಹೀಗೆಯೇ ನೋಡಿಕೊಳ್ಳಲು ಶಕ್ತನಾ ಅಂತಲೇ ಯೋಚಿಸದ ಮಕ್ಕಳಿಗೆ ಸಣ್ಣದೊಂದು ಕಿವಿಮಾತು ಅಷ್ಟೇ.

ಜಾತಿ ಧರ್ಮದ ಕಟ್ಟು ಪಾಡುಗಳು ಒಂದು‌ ಕಡೆ ಆದರೆ, ಹೀಗೆ ಓಡಿ ಹೋಗಿಯೋ,ರಜಿಸ್ಟರ್ ಮದುವೆ ಆಗಿಯೋ ಬಂದ ಅದೆಷ್ಟೋ ಅಸಂಖ್ಯ ಹುಡುಗ ಹುಡುಗಿಯರು ತಿಂಗಳು ಮುಗಿಯುವಷ್ಟರ ಒಳಗೆ ಬ್ರೇಕ್ ಅಪ್ ಅಂತ ಬಂದು ನಿಂತಿರುತ್ತಾರೆ.

ಏ ಸಂತ್ಯಾ ಇಕಿ ಸರಿತಾ ಅಲ್ಲ ಕಾಳ್ಯಾ ಮುರುಗ್ಯಾನ ಜೋಡಿ ಓಡಿ ಹೋಗಿದ್ಲು ಅಂತ ಕಿಲ್ಲನೆ ನಗುವ ಜನರ ನಡುವೆ ಅನ್ಯೋನ್ಯತೆ ಇಂದ ಬದುಕುವ ಜೋಡಿಗಳು ಬೆರಳ ಎಣಿಕೆಯಷ್ಟೇ ಸಿಗಬಹುದು.

ಕದ್ದು ಮಾಡಿದ ಮೆಸೇಜು,ವಿಡಿಯೋ ಕಾಲ್ ಅಥವಾ ಅಪ್ಪ ಅಮ್ಮನಿಗೆ ಗೊತ್ತಾಗದ ಹಾಗೆ ಟೆರೆಸ್ ಮೇಲೆ ಗಂಟೆಗಟ್ಟಲೆ ಪೋನು ಹಿಡಿದು ನಿಲ್ಲುವ ಇವತ್ತು ಎಕ್ಸಟ್ರಾ ಕ್ಲಾಸ್ ಇದೆ ಅಮ್ಮ ಅಂತ ಸುಳ್ಳು ಹೇಳಿಯೋ,ಕಂಬೈಂಡ್ ಸ್ಟಡಿ ಅಂತಲೋ ನೆಪ ಹೇಳಿ ಪಾರ್ಕು,ಸಿನೆಮಾ ಥಿಯೇಟರ್ ಅಲೆಯುವ ಮತ್ತು ಅಪ್ಪ ಅಮ್ಮ ಇರೋದು ಹಳ್ಳಿಯಲ್ಲಿ ಅಲ್ಲವಾ ಅಂತ ಹಾಸ್ಟೇಲ್ ವಾರ್ಡನ್ನಿಗೆ ಡೌಟ್ ಕೂಡ ಬರದಂತೆ ಮ್ಯಾನೇಜ್ ಮಾಡುವ ಹುಡುಗಿಯರೇ ಹುಷಾರು...ನೀವು ಪ್ರೀತಿಸುವ ಹುಡುಗ ಪುಕ್ಕಲನೋ,ಕಾಮ ಪೀಪಾಸುವೋ,ಅಥವಾ ಪ್ಲರ್ಟ್ ಮಾಡುವವನೋ ಇಲ್ಲವೇ ಬ್ರೇಕ್ ಅಪ್ ಅಂದ ತಕ್ಷಣಕ್ಕೆ ರಾಕ್ಷಸ ಗುಣ ತೋರಿಸುವ ಚೂರಿಯಿಂದ ಇರಿಯುವ,ಯಾಸಿಡ್ಡು ಎರಚುವ ಕ್ರೂರಿಯೋ ಏನೋ ಒಂದು ಆಗಿರಬಹುದು ಅಲ್ಲವಾ??

ಇಷ್ಟಕ್ಕೂ ಓದಿಕೊಂಡ ಮೇಲೆ,ನಿಮ್ಮ ಕಾಲಮೇಲೆ ನೀವು ನಿಂತು ನಿಮ್ಮದು ಅಂತ ಒಂದು ಸ್ವಂತದ ದುಡಿಮೆ ಆರಂಭವಾದ ಮೇಲೆ ಬೇಕಿದ್ದರೆ ಪ್ರೀತಿ,ಪ್ರೇಮ,ಪ್ರಣಯ ಅಂತ ಶುರುವಿಟ್ಟುಕೊಳ್ಳಿ.

ಆದರೆ ನಿಮ್ಮನ್ನು ತನ್ನ ಎದೆ ಗಾಣಿಸಿಕೊಂಡು ಚುಕ್ಕು ತಟ್ಟಿದ, ಚಲಿಸುವ ಬಸ್ಸಿನಲ್ಲಿ ಕಾಲು ಜೋಮು ಹಿಡಿದರೂ ತೊಡೆಯ ಮೇಲೆ ಕೂಡಿಸಿಕೊಂಡ ಮತ್ತು
ಹೆಗಲ ಮೇಲೆ ಹೊತ್ತು ಜಾತ್ರೆ,ಸಂತೆ-ಪೇಟೆ ತೋರಿಸಿದ,ಬೆನ್ನ ಮೇಲೆ ಕೂಡಿಸಿಕೊಂಡು ಆನೆ ಬಂತ ಒಂದಾನೆ ಅಂತಲೋ ನೀವು ಆಗಷ್ಟೇ ಸೈಕಲ್ ಕಲಿಯುವಾಗ ಹಿಂದೆ ಕ್ಯಾರಿಯರ್ ಹಿಡಿದು ಬೀಳದಂತೆ ಬ್ಯಾಲನ್ಸು ಮಾಡಿದ ಅಪ್ಪ ಮತ್ತು ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ,ಜೀವವೇ ಹೋದಂತಾಗುವ ಹೆರಿಗೆಯ ನೋವು ಉಂಡು,ನಿಮ್ಮ ವಾಂತಿ,ಭೇದಿ ಅಂಥವುಗಳನ್ನೆಲ್ಲ ಸಹಿಸಿಕೊಳ್ಳುತ್ತ ಎದೆಯ ಹಾಲುಡಿಸಿ ಬರಿ ಗೈಯ್ಯಲ್ಲೆ ನಿಮ್ಮ ಸುಂಬಳ ತೆಗೆದು ತನ್ನ ಸೀರೆಯ ಸೆರಗಿನಿಂದ ನಿಮ್ಮ ಮುಖ ಒರೆಸಿ ಚಂದ ಮಾಮನ ತೋರಿಸಿ ಊಟ ಮಾಡಿಸಿದ,ಹಾಗೂ ಲಾಲಿ ಅಥವಾ ಜೋಗುಳ ಹಾಡಿ ತನ್ನ ಸೀರೆಯ ಜೋಳಿಗೆಯಲ್ಲೋ,ತವರು ಮನೆಯವರು ಕೊಟ್ಟ ತೊಟ್ಟಿಲಲ್ಲೋ ಮುದ್ದು ಮಾಡಿ ಮಲಗಿಸಿ ಯಾರ ಕಣ್ಣೂ ನಾಟದಿರಲಿ ಅಂತ ದೃಷ್ಟಿ ತೆಗೆದು ಲಟಿಗೆ ಮುರಿದ,ಅಮ್ಮನ ಕಣ್ಣೀರು ಜಾರಿಸುವ ಮುನ್ನ ಯಾವುದಕ್ಕೂ ಒಮ್ಮೆ ಯೋಚಿಸಿ ನೋಡಿ..

ನಿಮ್ಮ ಪ್ರೀತಿ ಎಷ್ಟೇ ಗಟ್ಟಿಯಾಗಿ‌ ಇರಲಿ ಪ್ರೀತಿ ಅಮರ ತ್ಯಾಗ ಮಧುರ ಅನ್ನುವ ಹಂತಕ್ಕೂ ಸಿದ್ಧವಾಗುವ ಮನಸ್ಥಿತಿ ನಿಮ್ಮ ಇಬ್ಬರದ್ದೂ ಆಗಿದ್ದರೆ,ಈ ಹುಡುಗಿ ಅಥವಾ ಹುಡುಗನನ್ನ ನಮ್ಮ ಅಪ್ಪ ಅಮ್ಮ ಖಂಡಿತ ಒಪ್ಪುತ್ತಾರೆ ಅನ್ನುವ ನಂಬಿಕೆ ನಿಮ್ಮ ಒಳಗಿದ್ದರೆ,ಜಸ್ಟ್ ಗೋ ಅಹೇಡ್...

ಕೊನೆಯ ಮಾತು ಇಷ್ಟೇ ಯಾವ ಕ್ಷಣಕ್ಕೂ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಬಣ್ಣದ ಕನಸು ಕಾಣುತ್ತ ಸ್ವಾರ್ಥಿಗಳಾಗಬೇಡಿ,ಮತ್ತೊಬ್ಬರ ನಗು ಅಥವಾ ನೆಮ್ಮದಿಯನ್ನ ಎಂದಿಗೂ ಕಸಿಯಬೇಡಿ...ಟೇಕ್ ಕೇರ್ ಬೈ...
ProfileImg

Written by Manju Gadiwaddar