ಪ್ರೇಮ ಶಾಸನ

ProfileImg
26 Jun '24
1 min read


image

ಪ್ರೇಮ ಶಾಸನ!  

ಕಾಲೇಜು ಜೀವನ ಎಂದ ಕೂಡಲೇ ನೆನಪಾಗುವುದೇ ಕ್ಲಾಸ್ ರೂಮ್. ಅದು ಕೇವಲ ಕ್ಲಾಸ್ ರೂಮ್ ಅಲ್ಲ, ನಾಲ್ಕು ಗೋಡೆಯ ಮಧ್ಯೆ ಇದ್ದರೂ ಕೂಡ ನಮ್ಮ ಸಮನ್ವಯ  ಬಾಂಧವ್ಯದ ಬೆಸೆಯುವ ಸಂದಿಸುವ ಜಾಗವಾಗಿರುತ್ತದೆ. ಇಲ್ಲಿ ಕಳೆದಿರುವ ಪ್ರತಿಕ್ಷಣವೂ ಕೂಡ ನೆನಪಿನ ಅಂಗಳದಲ್ಲಿ ಸದಾ ಬಚ್ಚಿಟ್ಟುಕೊಂಡಿರುತ್ತದೆ.

ಕ್ಲಾಸ್ ರೂಮ್  ಎಂದ ಕೂಡಲೇ ಬೆಂಚು ಡೆಸ್ಕು ಸಾಮಾನ್ಯ. ಈ ಬೆಂಚು, ಡೆಸ್ಕ್ ಗಳು ನಮ್ಮ ಸೀನಿಯರ್ ಗಳನ್ನು ನೆನಪಿಸುತ್ತವೆ. ಡೆಸ್ಕ್ ನಲ್ಲಿ  ಶಾಸನದಂತೆ ಕೆತ್ತಿರುವ ಬರಹ ನೋಡಿ ಅವರ ಅಪಾರ ಪ್ರತಿಭೆ ಕಣ್ಣ ಮುಂದೆ ಬರುತ್ತದೆ! ಅಂದು ರಾಜ ತನ್ನ ಆಜ್ಞೆಯನ್ನು ಪಸರಿಸಲು ಶಾಸನ ಕೆತ್ತಿಸಿದನಂತೆ, ಈ ಪ್ರತಿಭೆಗಳು ಇಲ್ಲಿ ತಮ್ಮ ಮನದ ಒಲವನ್ನು ಮನದಾಕೆಗೆ/ಮನದ ಇನಿಯನಿಗೆ ತಣಿಸಲು ಪ್ರೇಮ ಬರಹದ ಬರವಣಿಗೆಯ ಚಿತ್ತಾರ ಬಿಡಿಸಿದ್ದಾರೆ. "ಹೃದಯದ ನನ್ನ ಒಲವೇ, ನನ್ನ ಗೆಲುವೇ ನಿನಗಾಗಿ ಕಾಯುವೆ ನಾನೆಂದು ಮುಂದೆ" ಎಂಬ ಬರಹ, ಜೊತೆಗೆ ಹೃದಯದ ಚಿಹ್ನೆ ಬೇರೆ! ಅದರಲ್ಲಿ ತನ್ನ ಹೆಸರಿನ ಮೊದಲ ಅಕ್ಷರದ ಜೊತೆಗೆ ಪ್ರೀತಿಸುವ ಹೃದಯದ ಅಕ್ಷರವನ್ನೂ ಕೆತ್ತಲಾಗಿದೆ!

ಹೃದಯ ತುಂಬಿ ರಚಿಸಿದ ಈ ಕೆತ್ತನೆಗಳು ನಿಜಕ್ಕೂ ಪ್ರೇಮಿಗಳ ಹೃದಯದ ಮಾತುಗಳು, ಮನದ ಹಾಡುಗಳು. ಈ ಡೆಸ್ಕ್ ನಲ್ಲಿರುವ  ಪ್ರೇಮ ಬರಹಗಳು ಒಂದೆರಡಲ್ಲ! ಅದನ್ನು ಯಾರು ಬರೆದರೋ, ಅವರೀಗ ಎಲ್ಲಿರುವರೋ, ಅವರ ಮನದ ಅಭಿಲಾಷೆ ಈಡೇರಿದೆಯೋ… ಹೀಗೆ ಸಾಲು ಸಾಲು ಪ್ರಶ್ನೆಗಳು ಮನದಲ್ಲಿ ಸುಳಿದುಹೋಗುತ್ತವೆ. ನನಗೊಬ್ಬಳು ಸ್ನೇಹಿತೆ ಇದ್ದಿದ್ದರೆ ನನ್ನ ಪ್ರೇಮ ಶಾಸನವೊಂದನ್ನು ಇಲ್ಲೇ ಬರೆಯಬಹುದಿತ್ತಲ್ಲವೇ ಎನ್ನುವ ಆಸೆ ಮನಸ್ಸಲ್ಲಿ! ಆದರೆ ನಾನೋ ಈ ವಿಚಾರದಲ್ಲಿ ತುಂಬಾನೇ ಹಿಂದೆ. ಇಲ್ಲಿರುವ ಪ್ರೇಮದ ಸಾಲುಗಳನ್ನು ನೋಡುವಾಗ ಏನೋ ಒಂಥರಾ ಖುಷಿ, ಕಚಗುಳಿ.

ಗಿರೀಶ್ ಪಿ. ಎಂ
ದ್ವಿತೀಯ ಎಂ.ಎ, ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

Category:EntertainmentProfileImg

Written by Gireesh Pm