ಯಾವುದೋ ವಿಷಯಕ್ಕೆ, ಯಾವುದೋ ನೋವಿಗೆ ಅಥವಾ ಸಮಸ್ಯೆಯ ಬಗ್ಗೆ ನೀವು ಒಂದೆರಡು ಕ್ಷಣ ಚಿಂತೆಗೀಡಾದರೆ
ಅದರಿಂದ ಆಗುವಷ್ಟು ಆಯಾಸ ಅಥವಾ ದಣಿವು ನೀವು ತಿಂಗಳುಗಟ್ಟಲೆ ದುಡಿದರೂ ಆಗುವುದಿಲ್ಲ. ಚಿಂತೆಯಿಂದ ಮೆದುಳು ಮತ್ತು ಮನಸ್ಸಿನ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತದೆ.
ದೈಹಿಕ ಕೆಲಸ ಮಾಡುವುದರಿಂದ ದೇಹಕ್ಕೆ ಆಯಾಸವಾಗುತ್ತದೆಯಷ್ಟೆ. ಅದು ಕೆಲ ಕಾಲ ವಿಶ್ರಾಂತಿ ಪಡೆದರೆ ಸರಿಹೋಗುತ್ತದೆ. ಆದರೆ ಚಿಂತೆ ಮಾಡುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದು ಅತ್ಯಂತ ಮಾರಕ. ಒಂದು ವಿಷಯದ ಬಗ್ಗೆ ಚಿಂತೆ ಮಾಡಲು ಹೊರಟರೆ ಇನ್ನಿಲ್ಲದ ದುರಾಲೋಚನೆಗಳು ಹುಟ್ಟುತ್ತಾ ಹೋಗುತ್ತವೆ. ಅದೊಂದು ನವೆ ಇದ್ದ ಹಾಗೆ ಕೆಣಕಿದಷ್ಟೂ ಹೆಚ್ಚಾಗುತ್ತದೆ.
ಪ್ರತಿಯೊಂದು ಸಮಸ್ಯೆಗೂ ಎರಡು ಪರಿಹಾರಗಳಿರುತ್ತವೆ.
1 - ಸಮಸ್ಯೆಯನ್ನು ನೇರವಾಗಿ ಎದುರಿಸುವುದು.
2 - ಮರೆತು ಬಿಡುವುದು ಅಥವಾ ಬಿಟ್ಟು ಬಿಡುವುದು. ಇವೆರಡನ್ನೂ ಬಿಟ್ಟು ತಲೆ ಮೇಲೆ ಕೈಇಟ್ಟು ಚಿಂತಿಸಿದರೆ ಸಮಸ್ಯೆ ದುಪ್ಪಟ್ಟಾಗುವುದೇ ಹೊರತು ಕಡಿಮೆಯಾಗುವುದಿಲ್ಲ.
ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಬದುಕುವ ಹಕ್ಕು ಮತ್ತು ಬಾಧ್ಯತೆ ಇದ್ದೇ ಇರುತ್ತದೆ. ಜೀವನದಲ್ಲಿ ಕಷ್ಟ ಸುಖಗಳು ನೆಂಟರಿದ್ದಂತೆ. ಬರುತ್ತವೆ ಹೋಗುತ್ತವೆ. ಎಲ್ಲವೂ ತಾತ್ಕಾಲಿಕ. ಹಾಗಾಗಿ ಎರಡನ್ನೂ ಸ್ವೀಕರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯ. ಜನರು ತಮಗೆ ಸುಖ ಬಂದಾಗ ಅದನ್ನು ಆ ಕ್ಷಣ ಮಾತ್ರ ಅನುಭವಿಸಿ ನಂತರ ಮರೆತು ಬಿಡುತ್ತಾರೆ. ಆದರೆ ಕಷ್ಟ ಬಂದಾಗ ಅದರ ಬಗ್ಗೆ ನಿರಂತರವಾಗಿ ಚಿಂತೆ ಮಾಡುತ್ತಾ ಬಹಳ ದಿನಗಳವರೆಗೆ ಎಳೆದುಕೊಂಡು ಹೋಗುವುದೇಕೆ ?
ಸುಖದ ಆನಂದವನ್ನು ಆ ಕ್ಷಣಕ್ಕೆ ಮಾತ್ರ ಸೀಮಿತಗೊಳಿಸಿದಂತೆ ಕಷ್ಟ, ದುಃಖ ಮತ್ತು ಚಿಂತೆಗಳನ್ನೂ ಸಹ ಬೇಗ ಮರೆತು ಮುಂದಿನ ಜೀವನದ ಕಡೆ ಗಮನ ಕೊಡಬೇಕಲ್ಲವೇ ? ಇದು ಎಲ್ಲ ಆಯಾಮಗಳಿಂದಲೂ ಒಳಿತು.
ಚಿಂತೆಯು ಮನದೊಳಗಿನ ಆತಂಕವನ್ನು ಹೆಚ್ಚಿಸುತ್ತದೆ. ಕಲ್ಪನೆ ಮಾಡಿಕೊಂಡ ಅಥವಾ ಹಿಂದೆ ನಡೆದಿರುವ ಅಥವಾ ಮುಂದೆ ನಡೆಯಲಿದೆ ಎಂದುಕೊಳ್ಳುವ ಘಟನೆಗಳ ಕುರಿತು ಕೊರಗುವ ಪ್ರಕ್ರಿಯೆ ಈ ಚಿಂತೆ ಎಂಬುದನ್ನು ಹುಟ್ಟು ಹಾಕುತ್ತದೆ. ಯಾವುದೋ ಕಾರಣಕ್ಕೆ ಚಿಂತೆ ಮಾಡಲು ಪ್ರಾರಂಭಿಸಿದರೆ ಮಾನಸಿಕ ಆರೋಗ್ಯ ಹದಗೆಡುತ್ತದೆ. ನಂತರ ಅದು ದೈಹಿಕವಾಗಿಯೂ ಹಬ್ಬುತ್ತದೆ.
ಹಣದ ಸಮಸ್ಯೆ, ಸಂಸಾರದ ಸಮಸ್ಯೆ, ಆಸ್ತಿಯ ಸಮಸ್ಯೆ, ಹೊರಗಿನವರ ಸಮಸ್ಯೆ ಇನ್ನಿತರ ಯಾವುದೇ ಸಮಸ್ಯೆಯಾಗಲಿ ಪ್ರತಿಯೊಬ್ಬರ ಜೀವನದಲ್ಲೂ ಎದುರಾಗುವುದು ಸಹಜ. ಚಿಂತೆ ಇಲ್ಲದ ಮಾನವನಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಸದಾ ಯಾವುದಾದರೂ ಪ್ರಕ್ರಿಯೆಯಲ್ಲಿ ನಿರತರಾಗಿರಲು ಪ್ರಯತ್ನಿಸಿ ಸಾಧ್ಯವಾದಷ್ಟು ಒಬ್ಬಂಟಿಯಾಗಿರದೆ ಜೊತೆಯಲ್ಲಿರುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಇದು ಚಿಂತೆಯಿಂದ ಮುಕ್ತಿ ಪಡೆಯಲು ಸಹಕಾರಿಯಾಗುತ್ತದೆ.
ನೆನಪಿನಲ್ಲಿಡಿ ಯಾವುದೇ ಸಮಸ್ಯೆ ಚಿಂತಿಸುವುದರಿಂದ ಅಥವಾ ಕೊರಗುವುದರಿಂದ ಪರಿಹಾರವಾಗುವುದಿಲ್ಲ. ಚಿಂತೆ ಚಿತೆಗೆ ಸಮ ಎಂದು ದೊಡ್ಡವರು ಹೇಳಿದ್ದಾರೆ. ಹೀಗಾಗಿ ಪ್ರಸ್ತುತ ಕ್ಷಣಗಳನ್ನು ಅನುಭವಿಸುತ್ತಾ ಎಂಥದ್ದೇ ಕಷ್ಟ ಎದುರಾದ ಸಂದರ್ಭದಲ್ಲೂ ಮುಖದ ಮೇಲೆ ಒಂದು ಸಣ್ಣ ನಗು ತರಲು ಪ್ರಯತ್ನಿಸಿ. ಇದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚುತ್ತದೆ, ಇದು ಕ್ಷಣಾರ್ಧದಲ್ಲೇ ನಿಮ್ಮ ಅರ್ಧದಷ್ಟು ಸಮಸ್ಯೆಯನ್ನು ದೂರ ಮಾಡಿ ಬಿಡುತ್ತದೆ.
ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ