ಹೋಗಿದ್ದೆ ಮೊನ್ನೆ ಮತ್ತೊಮ್ಮೆ
ಅದೇ ನಮ್ಮೂರಿನ ದೇವಸ್ಥಾನ!
ಅಲ್ಲೆ, ಅಜ್ಜ ಅಜ್ಜಿಯ ಮೆಚ್ಚಿದ್ದು,
ಅಮ್ಮ ಅಪ್ಪಗೆ ಸೋತಿದ್ದು;
ಮಂಜುನಾಥ ಭವಿಷ್ಯವ ಹರಸಿದ್ದು…
ನಾನು, ಕಳೆದ ಬಾರಿಯ ಅದೇ
ನಸು ಹಳದಿ ಚೂಡಿದಾರ ತೊಟ್ಟಿದ್ದೆ.
ಅಮ್ಮ ಗುರ್ರೆಂದಳು: "ಹೆಣ್ಣೆಂದರೆ ಸೀರೆ!
ಸೀರೆಯುಟ್ಟ ಹೆಣ್ಣಿಗೆ ಗಂಡು ಸೋಲನೇನೆ?"
ಹಾಗಾಗಿ, ಕೊಂಚ ಭಿನ್ನವಾಗಿತ್ತು ಅಲಂಕಾರ.
ಆಗಲೂ ಕಣ್ಣಿನಲ್ಲಿ ಗಾಢ ಕಾಡಿಗೆಯಿತ್ತು,
ಆದರೆ ಹಿಂದಿನ ಕಾತರಗಳಿಲ್ಲ.
ತುಟಿಗೆ ಒಪ್ಪುವ ಗುಲಾಬಿ ಬಣ್ಣವಿತ್ತು,
ಆದರೆ ಕೆನ್ನೆ ಕೆಂಪೇರುವ ನಗುವಿರಲಿಲ್ಲ.
ಮತ್ತದೇ ಹೊಸದೆನುವ ನೀರಸ ಅನುಭವವಲ್ಲವೇ?
ಹಿಂದಿನಂತೆಯೇ ಇತ್ತು ಈ ಭೇಟಿ;
ಅಪ್ಪ-ಅಮ್ಮ, ಅಕ್ಕ-ಭಾವ, ತಂಗಿ ಇತ್ಯಾದಿ.
ಅವರೆಲ್ಲರೊಳಗೆ ಕತ್ತು ಅತ್ತಿತ್ತ ತಿರುಗಿಸುತ್ತಾ,
ಆಗೊಮ್ಮೆ ಈಗೊಮ್ಮೆ, ಫೋನು ಸ್ಕ್ರೀನು
ಉಜ್ಜುತ್ತಾ, ನಿಂತಿತ್ತು ಗಂಡು ಜೀವ. ಪಾಪ!
ಕಿರುಕಣ್ಣೋಟ,ಮಾತು, ಗೊಂದಲ, ಪ್ರಾರ್ಥನೆ;
ಹೆಂಗಳೆಯರ ಅಲ್ಲಿಲ್ಲಿಯ ಹಾಳು ಹರಟೆ,
ಎರಡು ಕುಟುಂಬಗಳ ಹಿನ್ನೆಲೆ-ಮುನ್ನೆಲೆ.
ಹೀಗೆ ಬಿಚ್ಚಿ, ಅಳೆಯುತ್ತಾ ಮುಗಿಯಿತು
ಹೆಣ್ಣ ಕಾ(ಡು)ಣುವ ಸಂಪ್ರದಾಯ, ಸಂಭ್ರಮ.
ಇನ್ನೆರಡು ದಿನ ಬರೀ ನಿರೀಕ್ಷೆ!
ದೇವರೆದುರು ಅಮ್ಮನ ಮೊರೆತ,
ಈ ಬಾರಿ 'ಪಕ್ಕಾ' ಎನುವ ಅಪ್ಪನ ನಿಲುವು!
ಸಂಜೆಯೇ ಬಂತು ನೋಡಿ ಪೋನು,
'ನಿರಾಕರಣೆ'ಯ ಸುದ್ದಿ ಕಿವಿಗಿಳಿಸಿದ ಹರಿಕೇನು!
ಅಯ್ಯೋ, ಮುಖಾಮುಖಿ ಸಿಕ್ಕಾಗ ಮೆಚ್ಚಿದವಗೆ,
ಈಗೇನಾಯಿತೆಂದು ಅಪ್ಪನದ್ದು ಉರಿ ಮುಖ.
ಜಾತಕ ಕೂಡಲಿಲ್ಲ ಎಂದು ಚಿಂತಾಕ್ರಾಂತ, ಅಮ್ಮ!
ಜಾತಕದ ದೋಷಗಳಿಗೆ, ಶಾಂತಿ ಹೋಮ
ಪೂಜೆಗಳ ಪಟ್ಟಿಯೇರಿಸುವ ಸಂಬಂಧಿಕರು!!
ಇದೇನು ಹೊಸದಲ್ಲವಲ್ಲ ಎಂದಿತು ಮನ;
ಅಲ್ಯಾವನಿಗೋ ಹುಡುಗಿ ದಪ್ಪವಾದಳಂತೆ,
ಮತ್ತೊಬ್ಬ ಹೈಟು ಸಾಲೊಲ್ಲ ಎಂದಿದ್ದ.
ಇನ್ನೊಬ್ಬ ಮೀಟಿದ್ದು, 'ಓದಿದ್ದು ಹೆಚ್ಚಾಯಿತು'
ಎಂಬ ಬುದ್ಧಿಹೀನ ತಕರಾರಿನ ರಾಗ.
ನಾನಂತು ಸುಮ್ಮನಿದ್ದೆ, ಮತ್ತೆ ನಕ್ಕಿದ್ದೆ;
ಕೃಷ್ಣ ಎಲ್ಲದಕ್ಕೂ ನೀನೇ ಹೊಣೆಯೆನುತ
ನಿರುಮ್ಮಳಾಗಿ, ಅರೆಕವಿತೆಯ ಮುಂದುವರಿಸಿದೆ.
ಬಾಗಿಲ ಬಳಿ ಹಕ್ಕಿಯೊಂದರ ಕೂಗು;
'ಹೆಣ್ಣೇ ನೀ ಇನ್ನೂ ಸ್ವತಂತ್ರವೆನುತ್ತಿತ್ತೋ' ಏನೋ...
ನಿವೀ✒
ವೃತ್ತಿಯಲ್ಲಿ ನಾನು ಶಿಕ್ಷಕಿ ಕನ್ನಡದಲ್ಲಿ ಲೇಖನಗಳನ್ನು, ಕವಿತೆಗಳನ್ನು ಬರೆಯುವುದು ನನ್ನ ಅಚ್ಚುಮೆಚ್ಚಿನ ಹವ್ಯಾಸ.
0 Followers
0 Following