ನಮಸ್ಕಾರ, ಹಾಯ್ ಬೆಂಗಳೂರು !!ಅನ್ನೋ RJ ಕೇಳಿ ಬೆಳೆದವ್ರು ನಾವು. ಮೊನ್ನೆ ಮೆಜೆಸ್ಟಿಕ್ ಇಂದ ರಾಜಾಜಿನಗರ ಹೋಗ್ತಾ ಇದ್ದೆ. ಕಿವೀಲಿ ರೇಡಿಯೋ ಜಾಕಿ ಕೇಳ್ತಾ ಇದ್ದೆ. ಕೇಳ್ತಾ ಕೇಳ್ತಾ ಹಾಗೆ ಕಣ್ಮುಚ್ಚಿ ದೆ. ಎಲ್ಲ ಹಳೆ ನೆನಪು ವಾಪಾಸ್ ಬರ್ತಾ ಇತ್ತು. ಚಿಕ್ಕವರಿದ್ದಾಗ ರೇಡಿಯೋ ಕೇಳೋ ಆ ಖುಷಿ ಈಗಿನ spotify, jio saavan ನಲ್ಲಿ ಎಲ್ಲಿ ಸಿಗ್ಬೇಕು. ಕೀಪ್ಯಾಡ ಮೊಬೈಲ್ ನಲ್ಲಿ wired ಹೆಡ್ ಸೆಟ್ ಹಾಕ್ಕೊಂಡು 'ಬಾರೆ ನನ್ನ ಕುರುಬನ ರಾಣಿ' ಅಂತ ಹಾಡು ಕೇಳ್ತಾ ಇದ್ರೆ ಶಿವಣ್ಣನ ಜೊತೆ ಸ್ಟೆಪ್ ಹಾಕಿದಂಗೆ ಆಗೋದು. ಈಗ ಇದಾವೆ ಹಾಡುಗಳು ಅಯ್ಯೋ ಬಿಡಿ. 'ತಲೆ ಬಾಚ್ಕೊಳೋ ಪೌಡರ್ ಹಚ್ಕೋಳೋ ' ಅನ್ನೋದು ಕೂಡ ಒಂದು ಹಾಡು.
ಬಾಲ್ಯ ಎಷ್ಟು ಚೆನ್ನಾಗಿತ್ತು. ಟೆನ್ಷನ್ ಅನ್ನೋ ಪದ ಕೇವಲ ದೊಡ್ಡ ವ್ಯಕ್ತಿಗಳಿಗೆ ಮಾತ್ರ ನಮಗಲ್ಲ ಅನ್ನೋ ಹಾಗಿತ್ತು. ಇವಾಗ ನೋಡಿ, ಕುಡಿಯೋ ನೆರಿಗಿಂತ ಜಾಸ್ತಿ ಟೆನ್ಶನ್ ಆಗೋಗಿದೆ. ಗಂಟೆಗಟ್ಟಲೆ ಲ್ಯಾಪ್ಟಾಪ್ ಮುಂದೆ ಕುಳಿತು ಕೀಬೋರ್ಡ್ ಒತ್ತೋಕೆ ನಾವು ಕಾಪಿ ರೈಟಿಂಗ್ ಬರ್ದಿದ್ದ ಅನಿಸ್ತಿದೆ. ಟೆಕ್ನಾಲಜಿ ಬೆಳೆದಂತೆಲ್ಲ ಮಾನವನ ಜೀವನ ಯಾಂತ್ರಿಕವಾಗ್ತಿದೆ. ನಾಲ್ಕು ಗೋಡೆ ಆಚೆ ಬಂದ್ರೆ ಟ್ರಾಫಿಕ್, ಅದೇ ಕಾರ್ಬೊನ್ ಅನಿಲ, ಕಡ್ಡಿ ಪೊಟ್ಟಣದನ್ತ ಕಟ್ಟಡಗಳು, ಬಣ್ಣ ಬಣ್ಣದ ಶಾಪಿಂಗ್ ಮಾಲ್ ಗಳು( ಜೇಬಿಗೆ ಕತ್ತರಿ ಹಾಕೋ ಅಂಗಡಿಗಳು) ಅಬ್ಬಬ್ಬಾ, ಜೀವನ ದುಸ್ತರ.
ಹೊರಗೆ ಕಾಲು ಇಟ್ರೆ ಸಾಕು ನೆಮ್ಮದಿಯಾಗಿ ಮನೆಗೆ ವಾಪಾಸ್ ಬರ್ತೀವಿ ಅನ್ನೋ ಖಚಿತನೆ ಇರಲ್ಲ.
ಒಂದು ಕಾಲ ಇತ್ತು. ಬೆಂಗಳೂರು ಅಂದ್ರೆ ಸಾಕು ಸ್ವರ್ಗ. ಆ ತಂಪು ಹವಾಮಾನ , ಬೇಸಿಗೆಯಲ್ಲೂ ೩೦° C ಗಿಂತ ಜಾಸ್ತಿ ಹೋಗ್ತಿರ್ಲಿಲ್ಲ ಉಷ್ಣಾಂಶ. ಸಾಲು ಸಾಲು ಸಂಪಿಗೆ ಮರಗಳು, ಬ್ರಾಂಡ್ ಅಂಬಸಿದಾರ್ ಕಾರುಗಳು, ಸ್ವಂತ ಮನೆಗಳು, ನೋಡೋಕೆ ಹಬ್ಬ ಕಣ್ಣಿಗೆ. ಮಳೆಗಾಲದಲ್ಲಂತೂ ಕೇಳ್ಲೇಬೇಡಿ. ಜಿಟಿ ಜಿಟಿ ಮಳೆಗೆ ಕಾಫಿ ನಾಡಿನ ಹೆಸರಾಂತ ಫಿಲ್ಟರ್ ಕಾಫಿ ಕುಡಿತ ಇದ್ರೆ ಸ್ವರ್ಗ ರಪ್ ಅಂತ ಪಾಸ್ ಆಗತ್ತೆ.
ಬಿಡಿ ಈಗಿನವರಿಗೆ ಇದೆಲ್ಲ ಏನು ಅಂತ ಅರ್ಥನೂ ಆಗಲ್ಲ. ಸೋಶಿಯಲ್ ಮೀಡಿಯಾ ನಲ್ಲಿ ನೋಡೋದೇ ನೈಜತೆ ಅನ್ಕೊಂಡಿದರೆ. ನಾವ್ ಹಾಗಲ್ಲ. ಬೇಸಿಗೆ ರಜೆ ಬಂದ್ರೆ ಅಜ್ಜಿ ಮನೆಗೊ, ಮಾವನ ಮನೆಗೋ ಹೋಗಿ ದಿನವಿಡೀ ಸಾಕಾಗುವಷ್ಟು ಆಟ ಆಡಿ, ರಾತ್ರಿ ಮಾವ ತರ್ತಾ ಇದ್ದ ಐಸ್ ಕ್ರೀಮ್ ತಿನ್ನೋ ಮಜಾ, ಅಜ್ಜಿ ಮಾಡೋ ರುಚಿ ರುಚಿ ಅಡುಗೆ ಆಹಾ... ಅಜ್ಜಿ ಕೈರುಚಿ ಕೇಳ್ಬೇಕಾ... ಗೊಜ್ಜು ತಂಬುಳಿ ಅಂತ ಮಾಡ್ತಾ ಇದ್ರೆ ಯಾರಿಗೆ ತಾನೆ ಸೇರಲ್ಲ. ಇವಾಗ ರಜೆ ಬಿಟ್ರೆ ಅಜ್ಜಿ ಮನೆಗೆ ಹೋಗೋದು ಇರ್ಲಿ, ಮನೆ ಊಟ ಬಿಟ್ಟು ಹೊರಗೆ ಹೋಗಿ ತಿನ್ನೋ ಜಾಯಮಾನ ಆಗೋಗಿದೆ. ಹೊರಗಡೆ ಎಷ್ಟೇ ರುಚಿ ಆಗಿರೋದು ತಿಂದ್ರು ಅಜ್ಜಿ ಕೈರುಚಿ ಸಮಾನ ಆಗೋಕೆ ಸಾಧ್ಯನಾ?
ರಾತ್ರಿ ಹೊತ್ತು ಅಜ್ಜಿ ಹೇಳ್ತಾ ಇದ್ದ ಗಾಜಿನ ಕಂಬದ ಕಥೆ ಇವಾಗ ಯಾವ್ youtuber ಹೇಳ್ತಾರೆ.?ಸಾಧ್ಯನೇ ಇಲ್ಲ. ದೊಡ್ಡಮ್ಮ - ಚಿಕ್ಕಮ್ಮನ ಮಕ್ಳು ಜೊತೆ ತಲೆದಿಂಬು ಹೊದಿಕೆಗೆ ಆಗ್ತಾ ಇದ್ದ ಜಗಳ ಏನೋ ಮಜಾ. ಮಳೆ ಬಂದಾಗಾ, ಕರೆಂಟ್ ಹೋದಾಗ ಎಲ್ರೂ ಒಟ್ಟಿಗೆ ಕುಳಿತು ಹೊಡಿತ ಇದ್ದ ಹರಟೆ ಇವಾಗಿನ UPS ಕಸಿದುಕೊಂಡಿದೆ ಅಷ್ಟೇ ಅಲ್ಲ ಯಾವ ಸ್ಟ್ಯಾಂಡ್ ಅಪ್ ಕಾಮಿಡಿ ಕೂಡ ಸಮ ಆಗಲ್ಲ. ಮನೇಲಿ ನಾಯಿ ಬೆಕ್ಕುಗಳ ಜೊತೆ ಇದ್ದ ಒಡನಾಟ ಯಾವ zoo ಗೆ ವಿಸಿಟ್ ಕೊಟ್ರು ಬರಲ್ಲ. ಬಟ್ಟೆ ಹರಿದಿದ್ರು ಮನಸ್ಸು ಮೃದುವಾಗಿರೋದು. ಈಗ ಬಟ್ಟೆ ನೋಡಿ ಚೆನಾಗಿದೆ ಅಂತ ಹೇಳೋ ಆಪ್ತರೇ ಇಲ್ಲ. ಚಂದನ ವಾಹಿನಿಯಲ್ಲಿ ಬರೋ ಕನ್ನಡ ಸಿನಿಮಗಾಗಿ antena ಸರಿ ಮಾಡ್ತಾ ಬಂತಾ ಬಂತಾ ಅಂತ ಕೇಳೋದ್ರಿನ್ದ ನನ್ ಮಾತಾಡೋ ವಾಯ್ಸ್ ಕೇಳುಸ್ತಾ ಇದೇನಾ ಅಂತ ಮೀಟಿಂಗ್ ನಲ್ಲಿ ಮಾತಾಡೋ ಕಾಲದವರೆಗೆ ಬೆಳೆದಿದೀವಿ. ಆದ್ರೂ ಒಂದು ಮಾತ್ರ ಹಾಗೆ ಇದೆ. ನೆಟ್ವರ್ಕ್ ಪ್ರಾಬ್ಲಮ್. 😂
ಮಾನವೀಯತೆ ಕೂಡ ಅಂದು ಅರ್ಥೈಸಿಕೊಂಡಿತ್ತು. ಈಗ ಬಿಡಿ. ಪಕ್ಕದಲ್ಲಿರುವ ವ್ಯಕ್ತಿ ನನಗೆ ಸಂಬಂಧವೇ ಇಲ್ಲ ಎನ್ನುವ ಹಾಗೆ ಇರ್ತಾರೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ಅಂತ ಹಿರಿಯರು ಹೇಳಿದ್ದು ಕಲಿತರಾದರೂ ಮಾಡುವುದು ಮತ್ತೆ ಅದೇ ರಾಗ ಅದೇ ಹಾಡು ಆಗಿದೆ. ದಯವೇ ಧರ್ಮದ ಮೂಲ ಎಂದು ಎಲ್ಲರೂ ಶಾಲೆಯಲ್ಲಿ ಕಲಿತವರೇ. ಅದರೆ ದಯೆವೊಂದು ಬಿಟ್ಟು ಇಲ್ಲ ಮೂಲವನ್ನು ಧರ್ಮದಲ್ಲಿ ಹುಡುಕಿದ್ದಾರೆ. ಎಮರ್ಜೆನ್ಸಿ ವಾರ್ಡಿನಲ್ಲಿದ್ದಾಗ ಬಾರದ ಜಾತಿ ಧರ್ಮ ದೇವಸ್ಥಾನದಲ್ಲಿ ಯಾಕೆ ಅಂತ. ಒಂದೇ ರಕ್ತದ ಬಣ್ಣ ಹರಿದರೂ ಎಲ್ಲರೂ ಮಾನವರಲ್ಲ ನೋಡಿ. ಹೇಗಿದೆ ಪ್ರಪಂಚ ಅಂದ್ರೆ ಪಾಲೇಸ್ಟಿನ್ ನಲ್ಲಿ ಆದ ಭಯೋತ್ಪಾದಕ ಕೃತ್ಯವನ್ನು ನಾವು ಖಂಡಿಸ್ತೀವಿ ಆದ್ರೆ ಪಕ್ಕದಲ್ಲಿ ಆದವರ ನೋವು ಕಾಣಿಸೋದೇ ಇಲ್ಲ ನಮಗೆ. ಬಸ್ ನಲ್ಲಿ ವಯಸ್ಕರು ಹಿರಿಯರಿಗೆ ಕುಳಿತುಕೊಳ್ಳಲು ಜಾಗ ಕೊಡಬೇಕೆಂಬ ಸಹಜ ಜ್ಞಾನ ಕೂಡ ಇಲ್ಲ ಈಗಿನವರಿಗೆ. ಗರ್ಭಿಣಿ ಹೆಂಗಸು ಒದ್ದಾಡುವುದು ನೋಡಿದರೂ ನೋಡಿಲ್ಲದಂತೆ ಕಣ್ಮುಚ್ಚುವ ಜನಾಂಗವಿದು. ಇದೆಲ್ಲ ಹೇಳಿಕೊಡುವ ವಿಷಯವಲ್ಲ. ಇದನ್ನ ಪ್ರೌಢತೆ ಅಂತಾರೆ. ಪಿ ಹೆಚ್ ಡಿ ಓದಿದವರಿಗೆ ಸಾಮಾನ್ಯ ಜ್ಞಾನ ತುಂಬ ಕಡಿಮೆ ಅನ್ನೋದು ಈಗಿನ ಸಾಮಾನ್ಯ ವಿಷಯ ಆಗಿದೆ. ಓದಿದ್ದು ತುಂಬಾನೇ ಆದರೆ ಅರ್ಥೈಸಿಕೊಂಡಿದ್ದು ಏನು ಮತ್ತು ಎಷ್ಟು ಅನ್ನೋದು ಪ್ರಶ್ನೆ ಇಲ್ಲಿ. ಸಿನಿಮಾ ನಲ್ಲಿ ಹೀರೋ ಮಾಡೋ ಒಳ್ಳೆ ಕೆಲ್ಸಗಳಿಗೆ ಶಿಳ್ಳೆ ಹೊಡೆದು ಸಂಭ್ರಮಿಸೋ ಅಭಿಮಾನಿಗಳು ನಿಜ ಜೀವನದಲ್ಲಿ ಎಷ್ಟು ಒಳ್ಳೆ ಕೆಲಸಗಳನ್ನ ಮಾಡಿದಾರೆ?
ತಿಲಕ ಇತ್ತ ಕ್ಷಣಕೆ ಭಕ್ತಿಯಾಗುವುದೇ? ಮನದಲ್ಲಿ ನೂರೆಂಟು ಕೆಟ್ಟ ಭಾವನೆ ಇಟ್ಟುಕೊಂಡು ಮೊಗದಲ್ಲಿ ಕ್ರೌರ್ಯ ಮೆರೆಸಿ ಜಾತಿಯಧಾರದಲ್ಲಿ ಪೂಜಿಸಿದರೆ ಶಿವನೊಲಿವನೇ ? ದಾಸರು ಕಂಡ ಶ್ರೇಷ್ಠ ನಾಡು ನಮ್ಮದು. ದಾಸರ ಸಾಹಿತ್ಯ ಓದಿ ನೋಡಿ, ತಿಳಿದು ನೋಡಿ, ಬದುಕಿ ನೋಡಿ. ಜೀವನ ಸುಂದರವಾಗಿದೆ. ಸುಂದರವಾಗಿಸೋದು ಕೂಡ ನಮ್ಮ ಕೈಯಲ್ಲೇ ಇದೆ. ಅನಾವಶ್ಯಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದೆ ಮುಂದೇನು ಎಂಬ ಚಿಂತನೆ ನಡೆಸಿದರೆ ಅದುವೇ ಜೀವನ.
ಕಾಲಘಟ್ಟ ಊರುಳ್ತಾ ಇದೆ. ಆದ್ರೆ ಬಾಲ್ಯದ ನೆನಪು ಮಾರುಕಳಿಸ್ತಾನೆ ಇದೆ. ಪ್ರೀತಿ ವಾತ್ಸಲ್ಯ ಗಳಿಂದ ತುಂಬಿ ತುಳುಕುತ್ತ ಇದ್ದ ಬದುಕು ಯಾಂತ್ರಿಕ ಆಗಿ ಮಾರ್ಪಟಿದೆ. ಅದೇ ವಿಪರ್ಯಾಸ. ಒಂದು ನೆಮ್ಮದಿ ಏನಂದ್ರೆ ಆ ಕಾಲವನ್ನು ಅನುಭವಿಸಿ ಇಲ್ಲಿಗೆ ಬಂದಿದೀವಿ. ಜನ್ಮಕ್ಕಾಗುವಷ್ಟು ನೆನಪುಗಳನ್ನು ಕೂಡಿಟ್ಟು. ಸಾಕು ಸದ್ಯಕ್ಕ.
0 Followers
0 Following