#ಒಂಟಿ
ಆ ಊರಲ್ಲಿ ನಾಗಿ ಯಾರಿಗೆ ಗೊತ್ತಿಲ್ಲ, ಆಕೆಯ ಪೂರ್ಣಹೆಸರು ನಾಗವೇಣಿಯಂತೆ, ಆದರೆ ಬಹುಪಾಲು ಜನರಿಗೆ ಅದು ಗೊತ್ತಿಲ್ಲ,ನಾಗವೇಣಿ ಅಂದರೆ ಯಾರತಲೆಯೊಳಗೂ ಆ ಆಕಾರ ಮೂಡದಷ್ಟು ಮರೆತು ನಾಗಿಯಾಗಿದೆ.
ಒಂದು ಕಾಲದ ಹೆರಿಗೆ ಡಾಕ್ಟರ್ ಆಕೆ, ಐವತ್ತು ಮನೆಗಳಿರುವ ಊರಲ್ಲಿ ಒಂದಲ್ಲಾ ಒಂದು ಮನೆಯಲ್ಲಿ ಬಸಿರು ಬಾಳಂತನ, ಆಸ್ಪತ್ರೆಗಳೆಲ್ಲ ಗಾವುದ ದೂರವಿದ್ದ ಕಾಲ,ಹಾಗಂತ ತೀರಾ ಹಿಂದೇನಲ್ಲ ನಲವತ್ತು ವರ್ಷ ಆಗಿರಬಹುದಷ್ಟೆ. ಊರಲ್ಲಿ ಪಾರ್ಟಿಪಂಗಡ ಆಸ್ತಿಕರು ನಾಸ್ತಿಕರು ದೇವಸ್ಥಾನಕ್ಕೆ ವರಾಡ ಕೊಡುವವರು ಕೊಡದಿರುವವರು ಹೀಗೆ ಹತ್ತು ಹಲವು ಜನರಿದ್ದರೂ ನಾಗಿಗೆ ಮಾತ್ರಾ ಅದು ಯಾವುದೂ ಬಾಧಿಸುತ್ತಿರಲಿಲ್ಲ,ಎಲ್ಲರಿಗೂ ಒಂದಲ್ಲ ಒಂದು ಕಾರಣಕ್ಕೆ ಬೇಕಾಗುವ ನಾಗಿ ಊರಿನ ಎಲ್ಲರಮನೆಗಳಿಗೂ ಅಕ್ಕು ಮತ್ತಚ್ಚುಮೆಚ್ಚು.
ನಾಗಿ ಅಂಡು ತೊಳಸಿದ ಕುಡಿಗಳು ಈಗ ಬೆಂಗಳೂರಿಂದ ಹಿಡಿದು ಅಮೆರಿಕಾ ಜರ್ಮನಿ ಫ್ರಾನ್ಸನವರೆಗೂ ವ್ಯಾಪಿಸಿ ತಮ್ಮ ಜೀವನಕಂಡು ಕೊಂಡಿದ್ದಾವೆ. ಆದರೆ ನಾಗಿ ಮಾತ್ರಾ ವಯಸ್ಸು ಎಪ್ಪತ್ತಾದರೂ ಇನ್ನೂ ಊರ ತುಂಬಾ ಓಡಾಡಿಕೊಂಡಿದ್ದಾಳೆ. ಕೈ ನೆರಿಗೆಯಾಗಿದೆ ಆದರೆ ಮುಖದ ಹೊಳಪು ಹಾಗೆಯೇ ಇದೆ. ದೇಹ ಲಕಲಕ ಅನ್ನುತ್ತಲಿದೆ, ದೂರದಲ್ಲಿದ್ದ ಊರಿಗೆ ಬಂದ ಊರಿನಮಕ್ಕಳೆಲ್ಲ ನಾಗಿ ಕಂಡ ತಕ್ಷಣ ಮಾತಾಡಿಸಿಯೇ ಹೋಗುತ್ತಾರೆ. ಹಾಗಾಗಿ ಒಂಟಿ ಜೀವನ ಸಾಗಿಸುತ್ತಿರುವ ನಾಗಿಗೆ ಯಾವತ್ತೂ ತಾನು ಒಂಟಿ ಅನಿಸಿಲ್ಲ,
########
ಆ ಊರಲ್ಲಿ ರುಕ್ಮಿಣಿಯಮ್ಮ ಎಲ್ಲರಿಗೂ ಗೊತ್ತಿಲ್ಲ, ರುಕ್ಕಮ್ಮ ರುಕ್ಕಜ್ಜಿ ಅಂತೆಲ್ಲಾ ಮನೆಯವರು ಕರೆಯುತ್ತರಾದರೂ ಊರಿನವರಿಗೆ ಆಕೆ ಅಷ್ಟೊಂದು ಆಪ್ತಳಲ್ಲ, ಆರಂಕಣದ ಮನೆ ಆಳುಕಾಳು ಮೈ ತುಂಬಾ ಬಂಗಾರ ಎಲ್ಲವೂ ಆ ಭಗವಂತ ಕೊಟ್ಟಿದ್ದ ನೆಮ್ಮದಿಯೊಂದರ ಹೊರತಾಗಿ.
ಒಂದು ಕಾಲದ ಹೆಗ್ಗಡತಿ ಆಕೆ, ಮನೆಯಲ್ಲಿ ಯಜಮಾನ ಎಂಬತಕ್ಕಂತ ಮನುಷ್ಯ ಪ್ರಾಣಿಯಾಗಿದ್ದ, ಹಾಗಾಗಿ ಮನೆ ಕೀ ಗೊಂಚಲು ರುಕ್ಮಿಣಮ್ಮನ ಸೊಂಟದಲ್ಲಿ ತೊನೆದಾಡುತ್ತಿತ್ತು. ಊರಲ್ಲಿ ಪಾರ್ಟಿ ಪಂಗಡಗಳಿದ್ದಾಗ ಒಂದು ಕಡೆ ರುಕ್ಮಿಣಮ್ಮನೂ ಸೇರಿದ್ದಳು.
ರುಕ್ಕಜ್ಜಿ ಎತ್ತಿ ಆಡಿಸಿದ ಕುಟುಂಬದ ಕುಡಿಗಳೆಲ್ಲ ಯಥಾಪ್ರಕಾರ ಬಾಂಬೆ ಜರ್ಮನಿ ನೆದರ್ ಲ್ಯಾಂಡ್ ಮುಂತಾದಕಡೆ ಹರಡಿಹೋಗಿದ್ದವು. ವಯಸ್ಸು ಎಪ್ಪತ್ತಾದ ಕಾರಣ ಬಿಪಿ ಷುಗರ್ ಎಲ್ಲವೂ ಆಪ್ತವಾಗಿದ್ದವು, ಮಗಳು ಡಾಕ್ಟರಾಗಿದ್ದರೂ ಖಾಯಿಲೆಯ ಭಯ ನಿತ್ಯ ಕಾಡುತ್ತಿತ್ತು. ಬಂಗಾರ ಬೆಳ್ಳಿ ವಜ್ರ ವೈಢೂರ್ಯ ಎಲ್ಲ ಬ್ಯಾಂಕಿನ ಸೇಫ್ ಲಾಕರಲ್ಲಿ ಸೇರಿತ್ತು. ಊರಿನವರೂ ಊರಿಗೆ ಬಂದವರೂ ರುಕ್ಮಿಣಮ್ಮನ ಮಾತನಾಡಿಸಲು ಬರುತ್ತಲೇ ಇರಲಿಲ್ಲ, ಹಾಗಾಗಿ ಮನೆತುಂಬಾ ಆಳುಕಾಳು ಎಲ್ಲವೂ ಇದ್ದರೂ ಬಳಗ ಸನಿಹವಿಲ್ಲದ ಒಂಟಿತನ ರುಕ್ಕಜ್ಜಿಗೆ ಕಾಡುತ್ತಿತ್ತು.ಮತ್ತು ಅದು ಜೀವ ಹಾಗೂ ಜೀವನವನ್ನು ಹೈರಾಣು ಮಾಡಿತ್ತು.
######